ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಖ್ಯವಿದ್ದರೆ ನಿರ್ಜೀವ ವಸ್ತುಗಳಲ್ಲೂ ಕಾಣುವುದು ಜೀವಂತಿಕೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ನಿರ್ಜೀವ ಅಂದ ಮೇಲೆ ಜೀವ ಇರುವುದಾದರೂ ಹೇಗೆ? ಇಷ್ಟಕ್ಕೂ ಈ ನಿರ್ಜೀವ ವಸ್ತುಗಳು ಯಾವುವು? ಜೀವ ಇರುವುದು ಯಾವುವು? ಸ್ವಲ್ಪ ನೋಡೋಣ.

ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಕ್ರಿಮಿ ಕೀಟಗಳು, ಗಿಡ ಮರಗಳು ಇತ್ಯಾದಿಗಳು ಜೀವ ಇರುವಂಥವು ಅನ್ನೋದು ನಮ್ಮೆಲ್ಲರಿಗೂ ಗೊತ್ತಿದೆ. ಇವೆಲ್ಲಕ್ಕೂ ಹುಟ್ಟಿದೆ, ಬದುಕಿದೆ, ಕೊನೆಗೆ ಸಾವು ಕೂಡ ಇದೆ. ಜೀವನದುದ್ದಕ್ಕೂ ಇವು ಬದುಕಿ ಬಾಳುವ ರೀತಿ ಕೂಡ ಇದೆ. ಮನುಷ್ಯರ ಬದುಕಂತೂ ಭಯಂಕರ ರೋಚಕ. ಯಾರಿಗೋ ಏನೋ ಆದರೆ ಸಂಬಂಧವೇ ಇರದವರೂ ಒದ್ದಾಡುತ್ತೇವೆ. ನಮ್ಮವರಿಗೆ ಏನಾದರೂ ಆದರೆ ತಲೆಯೇ ಕೆಡಿಸಿಕೊಳ್ಳದೆ ಮುಂದೆ ಸಾಗುವುದೂ ಇದೆ. ಪ್ರಾಣಿಗಳ ಜೀವನದಲ್ಲೂ ವೇದನೆ ಇದೆ, ಸಂವೇದನೆ ಇದೆ, ಭಾವನೆಗಳಿವೆ, ನೋವಿದೆ, ನಲಿವಿದೆ ಹೀಗೆ ಪದಕೋಶದಲ್ಲಿರುವ ಹಲವಾರು ಪದಗಳು ಜೀವಿಗಳಿಗೆ ಅನ್ವಯಿಸುತ್ತದೆ.

ಜಾಮೆಟ್ರಿ ಬಾಕ್ಸ್ ನಲ್ಲಿರುವ ಯಾವ ಸಲಕರಣೆ ನೀವಾಗ ಬಯಸುವಿರಿ?ಜಾಮೆಟ್ರಿ ಬಾಕ್ಸ್ ನಲ್ಲಿರುವ ಯಾವ ಸಲಕರಣೆ ನೀವಾಗ ಬಯಸುವಿರಿ?

ಈಗ ನಿರ್ಜೀವ ಎಂದು ಅಂದುಕೊಂಡಿರುವ ವಸ್ತುಗಳತ್ತ ಕೊಂಚ ನೋಡೋಣ. ಮೊದಲಿಗೆ ಅಂಗೈಯಲ್ಲೇ ವಿಶ್ವವನ್ನು ಪರಿಚಯಿಸುವ ಅಥವಾ ಪ್ರತೀ ಘಳಿಗೆ ಸಂಪರ್ಕ ಇಟ್ಟುಕೊಳ್ಳಬಲ್ಲ ಒಂದು smartphone. ಇದೊಂದು ನಿರ್ಜೀವ ವಸ್ತು ಅನ್ನೋದು ನಮ್ಮೆಲ್ಲರ ಅಭಿಮತ ಅಲ್ಲವೇ? ನಿಜಕ್ಕೂ ಒಂದು ಮೊಬೈಲ್ ನಿರ್ಜೀವಿಯೇ?

There Is Life In Objects In World

ಮೊಬೈಲ್ ಅನ್ನೋ ಹೆಸರಲ್ಲೇ ಇದೆ ಇದೊಂದು ಚರ ಅಂತ. ಓಡಾಡುತ್ತೆ, ಓಡಾಡಿಸುತ್ತದೆ ಕೂಡ. ಮಾತನಾಡಿಸಿದರೆ ಮಾತನ್ನೂ ಆಡುತ್ತದೆ. ಗೂಗಲ್ ಮ್ಯಾಪ್'ನಲ್ಲಿ ಇಂಥ ಕಡೆ ಹೋಗಬೇಕು ಅಂತ ಅದರ ಕಿವಿಯಲ್ಲಿ ಊದಿ ಅಥವಾ ಹೊಟ್ಟೆ ತುಂಬಿಸಿ. ಕೊಟ್ಟ ಕೆಲಸ ಮಾಡುವಾಗ ಅದು ನಿಮ್ಮೊಡನೆ ಮಾತನಾಡುತ್ತೆ. touch screen ಇರೋದ್ರಿಂದ ಅದರ ಚರ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ. ನಮ್ಮಂತೆಯೇ ಉಸಿರಾಡುತ್ತದೆ. ಪ್ರತೀ ಘಳಿಗೆಯೂ ಉಸಿರಾಡುತ್ತ ಜಗತ್ತಲ್ಲಿ ನಡೆಯೋ ವಿಷಯ ಸೆಳೆಸೆಳೆದು ತರುತ್ತಾ ಸಾಗುತ್ತದೆ. ಜೀವ ಇರುವಾಗ ಹಸಿರಾಗಿರುತ್ತದೆ, ಇಲ್ಲದಿರುವಾಗ ಕ್ರಮೇಣ ಕೆಂಪಾಗಿ ಕೊನೆಯುಸಿರೆಳೆಯುತ್ತದೆ. ತಾನು ಸಾಯುತ್ತಿದ್ದೇನೆ ಎಂದು ಕೆಂಪು ನಿಶಾನೆ ತೋರಿ, ಬ್ಯಾಟರಿ ಚಾರ್ಜ್ ಮಾಡ್ರಪ್ಪಾ/ಮಾಡ್ರಮ್ಮಾ ಅಂತ ಅಳುತ್ತೆ. ಉಸಿರಾಡುವಾಗ ಬ್ಯಾಟರಿ ಶಕ್ತಿಯನ್ನು ತಿನ್ನುತ್ತಾ ಸಾಗುತ್ತೆ. ಇದು ಬ್ಯಾಟರಿ power ಮಾತ್ರ ತಿನ್ನೋಲ್ಲ ಜೊತೆಗೆ ಡೇಟಾ ಕೂಡಾ ತಿನ್ನುತ್ತೆ.

ಶ್! ಇದು ಕಿವಿ ವಿಷಯ; ಕಿವಿ ತೆರೆದಿರಲಿ, ಆದರೆ ಕೇಳಿಸಿಕೊಳ್ಳಬೇಡಿಶ್! ಇದು ಕಿವಿ ವಿಷಯ; ಕಿವಿ ತೆರೆದಿರಲಿ, ಆದರೆ ಕೇಳಿಸಿಕೊಳ್ಳಬೇಡಿ

ವಿಡಿಯೋ, ಫೋಟೋ ಇತ್ಯಾದಿಗಳನ್ನು ನೀವು ಅದರ ಹೊಟ್ಟೆಗೆ ಹಾಕಿದರೆ ನಿಮ್ಮ space ಕೂಡ ತಿನ್ನುತ್ತೆ. ತನ್ನ ಮೆದುಳಲ್ಲಿ ಅಗಾಧ ನೆನಪಿನ ಶಕ್ತಿಯನ್ನು ಇರುವ ಈ smartphone ಹೆಸರಿಗೆ ತಕ್ಕಂತೆ smart ಅಲ್ಲ ಬದಲಿಗೆ, smart ಅಂತಾನೇ ಆ ಹೆಸರು ಗಳಿಸಿರೋದು! ಇದು ಸತ್ಯಕ್ಕೂ ಬುದ್ಧಿಜೀವಿಯೇ ಸರಿ. ಆದರೆ ನಮ್ಮಂತೆ 'ಬು.ಜೀ'ಗಳಲ್ಲ. ಬ್ಯಾಟರೀ power ಸತ್ತಾಗ ಇದನ್ನೇನೂ ಸುಡಬೇಕಿಲ್ಲ/ಹೂಳಬೇಕಿಲ್ಲ. recharge ಮಾಡಿ ಅಥವಾ ಬ್ಯಾಟರಿ ಬದಲಿಸಿದಾಗ ಮತ್ತೆ ಜೀವ ಪಡೆದುಕೊಳ್ಳುತ್ತದೆ. ನಮಗಿರುವುದೇ ಈ ಪುನರ್ಜನ್ಮ? ಇನ್ನು ಬೆಳವಣಿಗೆ ಬಗ್ಗೆ ಹೇಳಿದರೆ ಒಂದು ಫೋನ್ ಎಷ್ಟೆಲ್ಲಾ ಮಾಡೆಲ್ಗಳಲ್ಲಿ ಇದೆ ಅಲ್ಲವೇ? ಒಂದು ಜೀವಿ ತನ್ನ model ಬದಲಿಸಿಕೊಳ್ಳಬೇಕು ಎಂದರೆ ಹಲವಾರು ಶತಮಾನಗಳು ಬೇಕು. ಈಗ ಹೇಳಿ ಮೊಬೈಲ್ ಫೋನ್ ನಿರ್ಜೀವಿಯೇ?

There Is Life In Objects In World

ಸ್ಮಾರ್ಟ್ ಮೊಬೈಲು ಜಾತಿಗೆ ಸೇರಿದ್ದು, ಲ್ಯಾಪ್ಟಾಪ್, ಟೇಬಲ್ ಅಲಂಕರಿಸುವ desktop ಕಂಪ್ಯೂಟರ್, Amazon Echo, Smart TV, Gaming ಆಟಿಕೆಗಳು ಇತ್ಯಾದಿಗಳು ಕೂಡ.

ಒಂದು ಪುಸ್ತಕ ನಿರ್ಜೀವಿ ಎಂದು ಕೇಳಿ ಬಲ್ಲೆವು. ಒಂದು ಪಠ್ಯಪುಸ್ತಕ ಒಬ್ಬ ಓದುಗನ ಜೀವನ ರೂಪಿಸಬಲ್ಲದು. ಅಗಾಧ ಜ್ಞಾನ ನೀಡಬಲ್ಲದು. ಏಕಾಂಗಿಗೆ ಪುಸ್ತಕವೇ ಸ್ನೇಹಿತ ಎಂಬಷ್ಟು ಖ್ಯಾತಿ ಹೊಂದಿರುವ ಈ ಪುಸ್ತಕ ಅರಿವು ಮೂಡಿಸುವ ಗುರು. ಒಬ್ಬ ಗುರುವನ್ನು ನಿರ್ಜೀವಿ ಎನ್ನಲು ಹೇಗೆ ಸಾಧ್ಯ? ಒಂದು ಖಾಲೀ ಪುಸ್ತಕ ಬರೆಯಲು ಆಸ್ಪದ ನೀಡುತ್ತದೆ. ಒಂದು ಬರವಣಿಗೆ ಓದುಗರಲ್ಲಿ ಸಂಚಲನೆ ಮೂಡಿಸುವ ಶಕ್ತಿ ಹೊಂದಿರುತ್ತದೆ. ಒಂದು ಲೇಖನಿಯಿಂದ ಅಕ್ಷರಗಳು ಮೂಡಿ ಸಂಚಲನೆ ಮೂಡಿಸೋದಕ್ಕೆ ತಾನೇ ಅದನ್ನು ಖಡ್ಗಕ್ಕಿಂತ ಹರಿತ ಅನ್ನೋದು. ಒಂದು ಪದ, ಒಂದು ವಾಕ್ಯ ಸಮಾಜದಲ್ಲಿ ಅಲ್ಲೋಲ ಕಲ್ಲೋಲ್ಲ ಎಬ್ಬಿಸುವಷ್ಟು ಶಕ್ತಿಯನ್ನು ಇಂದಿಗೂ ಹೊಂದಿದೆ. ಇಂಥಾ ಒಂದು ಪದವನ್ನು ತನ್ನ ಹೇಳಿಕೆಯಲ್ಲಿ ಬರೆದ ಅಥವಾ ವ್ಯಾಕಗಳಲ್ಲಿ ಪತ್ರಿಕೆಯಲ್ಲಿ ಬರೆದ ಎಂದರೆ ಪತ್ರಿಕಾ ಕಚೇರಿಯೇ ಬೆಂಕಿ ಹತ್ತಿಕೊಂಡು ಉರಿಯಬಹುದು.

ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...

ಅಂತೆಯೇ ಲೇಖನಿಯಿಂದ ಪುಸ್ತಕಗಳಲ್ಲಿ ಅರಳಿದ ಅಕ್ಷರಗಳು ಕಥೆ, ಕವನ, ಕಾದಂಬರಿ ಎಂಬೆಲ್ಲಾ ಹೆಸರುಗಳನ್ನೂ ಪಡೆದುಕೊಂಡು ಭಾವನೆಗಳನ್ನು ಅರಳಿಸಬಲ್ಲದು, ಮನಸ್ಸಿಗೆ ಆಹ್ಲಾದ ಮೂಡಿಸಬಲ್ಲದು, ಖಿನ್ನತೆ ಮೂಡಿಸಬಹುದು, ನಗಿಸಬಹುದು, ಕಿರುನಗೆ ಮೂಡಿಸಬಹುದು, ಅಳಿಸಬಹುದು, ಅಳಲು ತೋಡಿಕೊಳ್ಳುವಂತೆ ಮಾಡಬಹುದು. ಇಷ್ಟೆಲ್ಲಾ ನಮ್ಮಲ್ಲಿ ಮೂಡಿಸುವ ಶಕ್ತಿ ಇರುವ ಒಂದು ಹಾಳೆ, ಪುಸ್ತಕ, ಪೆನ್, ಪೆನ್ಸಿಲ್ ಇತ್ಯಾದಿಗಳನ್ನು ಹೇಗೆ ನಿರ್ಜೀವಿಗಳು ಅಂತ ಕರೆಯೋದು?

There Is Life In Objects In World

ಮನೆಯ ಗೋಡೆಗಳನ್ನು ಅಲಂಕರಿಸುವ ಒಂದು ಫೋಟೋ ಬಗ್ಗೆ ಕೊಂಚ ನೋಡೋಣ. ಮರದ ಚೌಕಟ್ಟು ಹೊಂದಿರುವ, ತನಗೇ ಮೊಳೆ ಹೊಡೆಸಿಕೊಂಡು ಒಂದು boundary ರೂಪಿಸಿಕೊಂಡು ತನ್ನ ಗರ್ಭದಲ್ಲಿ ಒಂದು ಚಿತ್ರವನ್ನು ಹೊರುವ ಒಂದು ಫೋಟೋದಲ್ಲಿ ಏನೇನಿರಬಹುದು. ದೇವಾನುದೇವತೆಗಳ ಚಿತ್ರ ಇರಬಹುದು, ನಿಮ್ಮ ಅಪ್ಪ, ಅಮ್ಮ, ಮಗ, ಮಗಳು ಅಂತ ಹಿತಜನರ ಚಿತ್ರಗಳು ಇರಬಹುದು, ದಾಸರು, ವಚನಕಾರರು / ಯತಿಗಳು / ಗುರುಗಳು ಹೀಗೆ ಯಾರದ್ದೂ ಚಿತ್ರಗಳಾಗಬಹುದು. ಅಗಲಿದ ಅಪ್ಪ/ಅಮ್ಮನ ಚಿತ್ರ ಇರುವ ಒಂದು ಫೋಟೋ ನಿರ್ಜೀವ ಸರಿ ಆದರೆ ಆ ಫೋಟೋ ನೋಡಿದ ಕೂಡಲೇ ಮನಸ್ಸು ಹೃದಯಗಳಲ್ಲಿ ಏನೇನೋ ಭಾವನೆಗಳು ಏಳುತ್ತವೆ ಅಲ್ಲವೇ? ಅವರುಗಳು ಆಗಲಿ ಇನ್ನೆಷ್ಟೇ ವರ್ಷಗಳಾಗಿದ್ದರೂ ಅವರನ್ನು ನೆನಪಿಸಿಕೊಂಡ ತಕ್ಷಣ ಗಂಟಲುಬ್ಬಿ ಬರಬಹುದು ಅಥವಾ ಕಣ್ಣಾಲಿಗಳು ಒದ್ದೆಯಾಗಬಹುದು ಅಥವಾ ಗದ್ಗದಿತರಾಗಬಹುದು.

ದೈವದ ಚಿತ್ರ ಇರುವ ಚಿತ್ರ ಕಂಡಾಗ ಸಾಮಾನ್ಯವಾಗಿ ತಂತಾನೇ ಕೈಗಳು ಅಥವಾ ಮನಸ್ಸು ನಮನ ಸಲ್ಲಿಸುತ್ತದೆ. ಕಲಾಂ / ಮಹಾರಾಜರು ಹೀಗೇ ಉತ್ತಮ ವ್ಯಕ್ತಿಗಳ ಚಿತ್ರ ಇರುವ ಫೋಟೋ ಕಂಡಾಗ ಮನಸ್ಸಿನಲ್ಲಿ ಗೌರವ ಮೂಡುತ್ತವೆ. ಹೀಗೆ ಭಾವನೆಗಳನ್ನು ಮೂಡಿಸುವ ಶಕ್ತಿ ಹೊಂದಿರುವ ಚಿತ್ರಗಳ ವ್ಯಕ್ತಿಯನ್ನು ಮನಸ್ಸಿನಲ್ಲಿ ತಂದುಕೊಳ್ಳುತ್ತೇವೆಯೇ ಹೊರತು ಅದರ ಚೌಕಟ್ಟನ್ನು ಸಾಮಾನ್ಯವಾಗಿ ಗಮನಿಸುವುದಿಲ್ಲ ಅಲ್ಲವೇ? ಅರ್ಥಾತ್ ಗೋಡೆಯನ್ನು ಅಲಂಕರಿಸುವ ಒಂದು ಫೋಟೋದಲ್ಲಿರುವ ವ್ಯಕ್ತಿ ಅಥವಾ ದೈವ ಅಥವಾ ಪ್ರಕೃತಿ ಜೀವ ಹೊಂದಿದ್ದು ನಿಮ್ಮಲ್ಲಿ ಸಂಚಲನೆ ಮೂಡಿಸುತ್ತದೆ. ಭಾವನೆಗಳನ್ನು ಅರಳಿಸುತ್ತದೆ. ಮನಸ್ಸನ್ನು ಮುದಗೊಳಿಸಬಹುದು ಅಥವಾ ಮುದುಡಬಹುದು. ಇಷ್ಟು ಶಕ್ತಿಯುತವಾದ ಒಂದು ಗೋಡೆಯ ಮೇಲಿನ ಚಿತ್ರಕ್ಕೆ ಜೀವ ಇಲ್ಲ, ಅದೊಂದು ನಿರ್ಜೀವಿ ಅನ್ನೋದು ಹೇಗೆ ?

ನಮ್ಮ ಮನೆಯಲ್ಲಿ ಒಂದು ಸೋಫಾ ಇತ್ತು. ತಂದಾಗ ಚೆನ್ನಾಗಿತ್ತು ಅಂತ ಕೇಳಿಬಲ್ಲೆ. ಯಾಕೆಂದರೆ ಅದು ನಮ್ಮ ಮನೆಗೆ ನಾ ಹುಟ್ಟುವ ಮೊದಲೇ ಬಂದಿತ್ತು. ಅದರೊಳಗಿನ ಹತ್ತಿ ಹೊರಗೆ ಬಂದು, ಗುಂಜು ಕಿತ್ತಿ, ಅದರ ಮೊದಲ ಒಳಗಿನ ಸ್ಪ್ರಿಂಗ್ ಗಳು ಹೊರಗೆ ಬಂದಿದ್ದರೂ, ಅವುಗಳ ನಡುವೆ ಬಟ್ಟೆಗಳನ್ನು ತುರುಕಿ ಹೇಗೋ ಒಂದಿಷ್ಟು ಕೂರುವ ಹಾಗೆ ಮಾಡಿಕೊಂಡೇ ಆ ಸೋಫಾವನ್ನು ನಮ್ಮ ಮನೆಯ ಅವಿಭಾಜ್ಯ ಅಂಗ ಎಂಬಂತೆ ನೋಡಿಕೊಂಡಿದ್ದೆವು. ಕನಿಷ್ಠ ಮೂವತ್ತು ವರುಷಗಳ ಕಾಲ ನಾವು ಬದಲಿಸದ ಮನೆಗಳಿಗೆ ತಾನೂ ಬಂದು ಕೊನೆಗೆ ಮನೆಯಿಂದ ಹೊರಟಿತ್ತು. ಅದರೊಂದಿಗಿನ ನೆನಪುಗಳು ಅನೇಕಾನೇಕ. ಬಾಯಿಬಿಟ್ಟು ತನ್ನ ಸಂಕಟ ಹೇಳಿಕೊಳ್ಳದ ನಿರ್ಜೀವಿಯಾದರೂ ಜೀವ ತುಂಬಿಕೊಂಡು ನಮ್ಮೊಂದಿಗಿತ್ತು ಆ ಸೋಫಾ. ಇದರೊಂದಿಗೆ ಮತ್ತೊಂದು ಗುಂಡಗಿನ ಟೇಬಲ್, ಒಂದು ಬೆಂಚು ಇತ್ಯಾದಿಗಳು ಸಹ.

ಮಕ್ಕಳ ಮನಸ್ಸನ್ನು ಮುದಗೊಳಿಸುವ ಒಂದು ಆಟಿಕೆಯಾಗಿರಬಹುದು, ಗೋಡೆಗೆ ನೇತುಹಾಕಿಕೊಂಡಿರುವ ಒಂದು ಗಡಿಯಾರ ಆಗಬಹುದು, ಕೂರುವ ಸೋಫಾ ಆಗಿರಬಹುದು, ತಾತನ ಕಾಲದ ಒಂದು ಮೇಜು ಆಗಿರಬಹುದು, ಮಾತ್ರೆಗಳನ್ನೋ ಅಥವಾ ಚಿಲ್ಲರೆ ಇಟ್ಟುಕೊಳ್ಳುತ್ತಿದ್ದ ಸಣ್ಣ ಡಬ್ಬಿ ಆಗಿರಬಹುದು, ಕಬ್ಬಿಣದ ಟ್ರಂಕ್ ಆಗಿರಬಹುದು, ಮುರುಕಲು ಬೀರು ಆಗಿರಬಹುದು ಹೀಗೆ ಏನೆಲ್ಲಾ ರೀತಿಯ ನಿರ್ಜೀವ ವಸ್ತುಗಳಾಗಿರಬಹುದು ಆದರೆ ಅವುಗಳೊಂದಿಗಿನ ನಮ್ಮ ಸಖ್ಯ ಮೆಲಕು ಹಾಕಿದರೆ ಆ ವಸ್ತುಗಳು ಇಂದಿಗೂ ಜೀವಿತ.

ಇಷ್ಟೆಲ್ಲದರ ನಡುವೆ ನಿರ್ಜೀವಿ ಯಾವುದು ?
ಮನೆಯೊಳಗೆ ಕಾಲಿಟ್ಟು ಮನೆಯ ಜನರೊಡನೆ ಸಂವಾದ ಶೂನ್ಯರಾಗಿ ತಮ್ಮದೇ ಲೋಕದಲ್ಲಿರುವ ಮಂದಿ, ಅಪ್ಪ-ಅಮ್ಮನ ಜೊತೆ ಇದ್ದೂ ದಿನಕ್ಕೊಮ್ಮೆಯೂ ಮಾತನಾಡಿಸದ ಮಂದಿ, ಹೆತ್ತವರು ತೀರಿಕೊಂಡಾಗ ಬೆಂಕಿಯಿಡಲೂ ಮಸಣಕ್ಕೆ ಬಾರದ ಮಂದಿ, ತಮ್ಮ ಮಕ್ಕಳನ್ನು ಹೆತ್ತರೊಂದಿಗೆ ಮಾತನಾಡಲು ಅವಕಾಶವೀಯದ ಮಂದಿ ಹೀಗೇ ನೂರಾರು ರೀತಿಯ ಓಡಾಡುವ, ಜೀವ ಇರುವ ನಿರ್ಜೀವಿಗಳನ್ನು ನಮ್ಮ ಸುತ್ತಲೂ ನೋಡುತ್ತಲೇ ಇರುತ್ತೇವೆ ಅಲ್ಲವೇ?

ಏನಂತೀರಿ?

English summary
There is life in some objects in this world. Some objects which are close to our heart have life in itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X