ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಎಲ್ಲಾ ವಿಷಯಕ್ಕೂ ಅದರದ್ದೇ ಆಳ, ಅಳತೆ ಇದೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊದಲಿಗೆ ಈ ಬರಹದ ಆಳ, ಅಳತೆ ಏನು ಅಂತ ಅರ್ಥೈಸಿಕೊಳ್ಳೋದಕ್ಕೆ ಒಂದಷ್ಟು ಉದಾಹರಣೆಗಳನ್ನು ನೋಡೋಣ. ಹಾಗಿದ್ರೆ ಈ ಬರಹಕ್ಕೆ ಆಳ ಹೆಚ್ಚೇ? ಎನ್ನದಿರಿ. ಖಂಡಿತ ಹೌದು. ಏಕೆಂದರೆ ಈ ಮಾತು ಎಲ್ಲಾ ವಿಷಯಕ್ಕೂ ಅನ್ವಯಿಸುತ್ತದೆ. ಹಲವೊಮ್ಮೆ ವಿಷಯಗಳ ಮೇಲ್ಮೈ ಮಾತ್ರ ಗಮನಿಸುತ್ತೇವೆ. ಕೆಲವೊಮ್ಮೆ ಮಾತ್ರ ಕೊಂಚ ಆಳಕ್ಕೆ ಹೊಕ್ಕು ನೋಡ್ತೀವಿ.

Recommended Video

Covid update : almost 17000 cases in the last 24 hours in India | Oneindia Kannada

ಚಿಕ್ಕ ಉದಾಹರಣೆಯೊಂದಿಗೆ ನೋಡೋಣ. ಪಕ್ಕದ ಬೀದಿಯಲ್ಲೇ ಇರೋದು ಅವರ ಮನೆ, ನಡ್ಕೊಂಡೇ ಹೋಗೋಣ ನಡೆಯಿರಿ ಅಂತ ಹಿರಿಯರನ್ನು ಒಂದು ವಾಕ್ ಅಂತ ನಡೆಸಿಕೊಂಡು ಹೋಗುತ್ತೀರಿ ಅಂದುಕೊಳ್ಳಿ. ನಿಮ್ಮ ಮನಸ್ಸಲ್ಲಿ , 'ಅವರಿಗೊಂದು ವ್ಯಾಯಾಮ ಆಯ್ತು' ಎಂಬ ಸಮಾಧಾನ. ಒಂದರ್ಧ ಕಿಲೋಮೀಟರು ಏನು ಮಹಾ ಎಂಬ ಉಡಾಫೆ. ಆದರೆ ನಿಮ್ಮೊಂದಿಗೆ ನಡೆಯುವವರಿಗೆ ನಾಲ್ಕು ಹೆಜ್ಜೆ ಇಟ್ಟಾಗಲೂ ಜಾಯಿಂಟ್ಸ್ ನಲ್ಲಿ ಭಯಂಕರ ನೋವು ಕಾಣಿಸುತ್ತದೆ ಎಂದಾಗ ಅರ್ಧ ಕಿಲೋ ಮೀಟರು ಅನ್ನೋದು ಪರ್ವತ ಏರಿದಷ್ಟೇ ಕಷ್ಟವಾಗಬಹುದು ಅಲ್ಲವೇ? ನಮ್ಮ ದೃಷ್ಟಿಯಿಂದ ನಾವು ಒಂದು ವಿಚಾರದ ಆಳ, ಅಳತೆ ನೋಡಿದಾಗ ಅದು ಮತ್ತೊಬ್ಬರಿಗೂ ಅಷ್ಟೇ ಇರಬೇಕು ಅಂತೇನಲ್ಲಾ ಅಲ್ಲವೇ? ಅರ್ಧ ಕಿಲೋ ಮೀಟರು ಅನ್ನೋದು ಅಳತೆಯ ಮಾಪನದ ದೃಷ್ಟಿಯಲ್ಲಿ ಇಬ್ಬರಿಗೂ ಒಂದೇ. ಆದರೆ ಆಳದ ವಿಷಯದಲ್ಲಿ ತೀವ್ರತೆ ಬೇರೆ ಬೇರೆ.

ಶ್ರೀನಾಥ್ ಭಲ್ಲೆ ಅಂಕಣ; Laptop ಎಂದರೆ ತೊಡೆಯೇರಿ ಕೂರೋದು ಅಂತಶ್ರೀನಾಥ್ ಭಲ್ಲೆ ಅಂಕಣ; Laptop ಎಂದರೆ ತೊಡೆಯೇರಿ ಕೂರೋದು ಅಂತ

ಒಂದು ಪುಟ್ಟ ಮೀನಿಗೆ ನಾಲ್ಕಾರು ಕಾಳುಗಳಷ್ಟು ಊಟ ಸಾಕು. ಒಂದು ಪುಟ್ಟ ನಾಯಿಮರಿಗೆ ದಿನಕ್ಕೆ ಎರಡು ಹೊತ್ತಿನ ಊಟ ಸಾಕು. ಅದರಂತೆಯೇ ಕೆಲವು ಹಿರಿಯರಿಗೆ ಒಂದು ಚಪಾತಿ ತಿಂದರೆ ಸಾಕು ಎನಿಸಬಹುದು. ಎರಡು ಇಡ್ಲಿಗೆ ಸುಸ್ತು ಎನ್ನಬಹುದು. ತಿಂದುಂಡುಕೊಂಡು ಆರಾಮವಾಗಿ ಇರಲಿ ಎಂಬ ಇಚ್ಛೆಯಿಂದ ನಾಲ್ಕಾರು ಚಪಾತಿ, ಐದಾರು ಇಡ್ಲಿ ಮಾಡಿಟ್ರೆ ಅವರು ತಿನ್ನಲಿಲ್ಲ ಅಂತ ಬೇಸರವಾಗೋದು ಸಹಜ. ಸಂಖ್ಯೆಯ ದೃಷ್ಟಿಯಲ್ಲಿ ನೋಡುವಾಗ ಎಲ್ಲರ ಕಣ್ಣಲ್ಲೂ ಅದೇ ಒಂದರಿಂದ ಹತ್ತು ಅಂತಾದರೂ ಅರಗಿಸಿಕೊಳ್ಳುವ ದೃಷ್ಟಿಯಲ್ಲಿ ಈ ಸಂಖ್ಯೆಯ ಆಳವೇ ಬೇರೆ.

There Is Deep Meaning In Every Matter And Everything We Feel

ಕೆಲವರಿಗೆ ಸಿಂಪಲ್ ವಿಷಯಗಳೂ ಅರ್ಥವಾಗದೇ ಇರಬಹುದು. ಆದರೆ ಈ ಸಿಂಪಲ್ ಅಂದ್ರೇನು? ನನಗೆ ಸಾಮಾನ್ಯ ಎನ್ನಿಸುವ ವಿಷಯ ಮತ್ತೊಬ್ಬರಿಗೂ ಸಾಮಾನ್ಯವೇ ಆಗಿರಬೇಕು ಎಂಬ ನಿಗದಿ ಇಲ್ಲಾ ತಾನೇ? ಒಬ್ಬೊಬ್ಬರ ಬುದ್ಧಿಮತ್ತೆ ಒಂದೊಂದು ರೀತಿ. ಒಬ್ಬೊಬ್ಬರ capacity ಒಂದೊಂದು ರೀತಿ. ಐದು ನಿಮಿಷ ಸ್ಟೇಜಿನ ಮೇಲೆ ನಿಂತು ಮಾತನಾಡಬೇಕು ಎಂಬುದು ಒಂದು ಟಾಸ್ಕ್ ಎಂದುಕೊಳ್ಳೋಣ. ಈ ಕೆಲಸವನ್ನು ಒಬ್ಬ ಭಾಷಣಕಾರನಿಗೆ ನೀಡಿದರೆ 'ಐದೇ ನಿಮಿಷವೇ?' ಎಂದು ಉದ್ಗಾರ ತೆಗೆಯಬಹುದು. ಯಾರ ಜೊತೆಗಾದರೂ ಒಂದು ನಿಮಿಷ ಮಾತನಾಡುವುದಕ್ಕೇ ಹಿಂದೆ ಮುಂದೆ ನೋಡುವ, ಮೂವತ್ತು ಸೆಕಂಡ್ ಗಳ ಕಾಲ ಮಾತನಾಡುವುದೇ ದುಸ್ತರ ಎನಿಸುವ ವ್ಯಕ್ತಿ ಕೂಡ ಉದ್ಗಾರ ತೆಗೆಯಬಹುದು. ಆದರೆ ಮಾತು ಮಾತ್ರ "ಐದು ನಿಮಿಷವಾ?". ಒಂದು ವಿಷಯದ ಆಳ ಅಳತೆಯ ಅರಿವಾಗೋದು ಇಲ್ಲಿಯೇ. ಒಬ್ಬರಿಗೆ ಸಲೀಸು ಅನ್ನೋದು ಮತ್ತೊಬ್ಬರಿಗೆ ಬೆವರು ಇಳಿಸುವಂಥಾ ಕೆಲಸ ಆಗಿರುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ...ಶ್ರೀನಾಥ್ ಭಲ್ಲೆ ಅಂಕಣ; ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ...

ದೈನಂದಿನ ವ್ಯಾಯಾಮವೂ ಇದೇ ಸಾಲಿಗೆ ಬರುತ್ತದೆ. ಒಬ್ಬನಿಗೆ ದಿನವೊಂದರಲ್ಲಿ ಐದು ಮೈಲಿ ಓಟ ಇಲ್ಲದೆ ಹೋದರೆ ತಿಂದನ್ನ ಅರಗದೇ ಹೋಗಬಹುದು. ಕೆಲವರಿಗೆ ನಡಿಗೆಯೇ ದೊಡ್ಡದು ಎಂದಿರುವಾಗ, ಇನ್ನು ಓಟವೆಲ್ಲಿಂದ ಬಂತು. ಕೆಲವರಿಗೆ ನಟನೆ ಲೀಲಾಜಾಲ ಆದರೆ ಕೆಲವರಿಗೆ ಅದು ಅವರ ಕಪ್ಪಿನ ಚಹಾ ಅಲ್ಲ.

ನಟನೆ ಎಂದಾಗ ಇತ್ತೀಚೆಗಿನ ಘಟನೆಯ ಬಗ್ಗೆ ಮಾತನಾಡದಿದ್ದರೆ ಹೇಗೆ? ಅಷ್ಟೆಲ್ಲಾ ಸಿನಿಮಾ ಮಾಡ್ತಿದ್ದಾ? ಇನ್ನೂ ದೊಡ್ಡ ಭವಿಷ್ಯ ಅವನ ಮುಂದೆ ಇತ್ತು. ಮೂವತ್ತು ಚಿಲ್ಲರೆ ವಯಸ್ಸು. ತನ್ನ ಜೀವನ ಅಂತ್ಯ ಮಾಡಿಕೊಳ್ಳಬೇಕಿತ್ತಾ? ಅನ್ನೋದು 'ಮೇಲ್ಮೈ' ಮಾತ್ರ. ಒಬ್ಬರ ಜೀವನದ ಆಳ ಅಳತೆ ನಮಗೇನ್ ಗೊತ್ತು?

There Is Deep Meaning In Every Matter And Everything We Feel

'ಮೇಲ್ಮೈ' ಎಂದಾಗ ಒಂದು ವಿಷಯ ಹೇಳಬೇಕು. ಸತ್ಯನಾರಾಯಣ ಪೂಜೆಯ ಕಥೆಗಳಲ್ಲಿ ಒಂದು ಭಾಗದಲ್ಲಿ ಹೀಗಿದೆ "ಕಾಶಿಯಲ್ಲಿ ಒಬ್ಬ ದಟ್ಟದರಿದ್ರ ಬ್ರಾಹ್ಮಣ ಇದ್ದ" ಅಂತ. ಕಥೆಯನ್ನು ಸುಮ್ಮನೆ ಕೇಳಿದಾಗ ಏನೂ ಅನ್ನಿಸದೇ ಹೋಗಬಹುದು. ಆದರೆ ಅಂದಿನ ಕಾಲದಲ್ಲಿ ಒಬ್ಬ ಬ್ರಾಹ್ಮಣ, ಅದರಲ್ಲೂ ಕಾಶಿ ನಗರದಲ್ಲಿದ್ದುಕೊಂಡು ದಟ್ಟದರಿದ್ರನಾಗಿದ್ದನೆಂದರೆ ಕಾರಣವೇನು ಎಂದು ಕಥೆಯ ಆಳಕ್ಕೆ ಇಳಿದಾಗಲೇ ಅರ್ಥವಾಗೋದು ಅವನೊಬ್ಬ ಅವಿದ್ಯಾವಂತ ಅಂತ.

Tip of the Iceberg ಎನ್ನುತ್ತಾರಲ್ಲ ಅದು ಇಲ್ಲಿಯ 'ಮೇಲ್ಮೈ' ಸನ್ನಿವೇಶಕ್ಕೆ ಹೋಲುತ್ತದೆ. ಒಂದು ದೊಡ್ಡ ಮಂಜುಗಡ್ಡೆ ಸಮುದ್ರದ ಮೇಲೆ ಕೂತಿರುತ್ತದೆ. ಆ ಗುಡ್ಡದಂತಹ ಮಂಜುಗಡ್ಡೆ ಒಮ್ಮೆಲೇ ಅಲ್ಲಿಗೆ ಬಂದು ಕೂರಲಿಲ್ಲ. ಜೊತೆಗೆ ಅಂಥ ಮಂಜುಗಡ್ಡೆ ಅಲುಗದೆ, ಮುಂದೋಡದೇ ಅಲ್ಲಿಯೇ ಕುಳಿತಿರಬೇಕು ಎಂದರೆ ಅದಕ್ಕೆ ಕಾರಣ ಮೇಲ್ನೋಟಕ್ಕೆ ಕಾಣದ ಗಡ್ಡೆಯ ಇರುವ ಆ ಗಡ್ಡೆಯ ಕೆಳಗಿನ ಆ ಬೆಟ್ಟ. ಅರ್ಥ ಇಷ್ಟೇ. ನಮ್ಮ ಕಣ್ಣಿಗೆ ಕಾಣೋದು ಗುಡ್ಡ ಅಷ್ಟೇ ಆದರೆ ಕಾಣದೆ ಇರುವ ಅಥವಾ ಅರ್ಥವಾಗದೇ ಇರುವ ಅಂಶಗಳು ಪರ್ವತದಷ್ಟು.

ನಾವು ಆ ಗುಡ್ಡವನ್ನು ಮಾತ್ರ ನೋಡಿ, ಹೆಚ್ಚು ಅವಲೋಕಿಸದೇ, ತೊಂದರೆ ಇಷ್ಟೇ ತಾನೇ ಇರೋದು ಅಂತ ಹೇಳಿ ಅದಕ್ಕೆ ಪರಿಹಾರ ಸೂಚಿಸಲು ಮುಂದಾಗುತ್ತೇವೆ. ಮುಳ್ಳು ಚುಚ್ಚಿರುವಾಗ ಮೇಲೆ ಕಾಣುವ ಮುಳ್ಳನ್ನು ಮಾತ್ರ ಕತ್ತರಿಸಿ ಒಗೆಯೋದು ಪರಿಹಾರ ನೀಡಿದಂತೆ ಅಲ್ಲ. ಬುಡದಿಂದ ಕಿತ್ತೊಗೆದಾಗ ಮಾತ್ರ ಅದು ಪರಿಹಾರ. ಮುಳ್ಳಿನ ವಿಷಯಕ್ಕೆ ಬುಡದಿಂದ ಕಿತ್ತೊಗೆಯೋದು ಸುಲಭದ ಕೆಲಸ. ಆದರೆ ಮನುಷ್ಯನ ಜೀವನದಲ್ಲಿ ಇದು ಹೇಳಿದಷ್ಟು ಸುಲಭವಲ್ಲ. ಮನುಷ್ಯನ ಜೀವನ ಸಂಬಂಧಗಳ ಸಂಕೋಲೆ. ಅದೊಂದು ಕಗ್ಗಂಟು. ಒಂದು ಬಿಡಿಸಲು ಹೋದರೆ ಮತ್ತೊಂದು ಕಡೆ ಗಂಟಾಗಬಹುದು ಅಥವಾ ಮುರಿಯಲೂಬಹುದು.

ಹೃದಯದಲ್ಲಾಗುವ ವೇದನೆಗಳು ಬೆಟ್ಟದಷ್ಟು ಆದರೆ ಕೆಲವು ಹನಿಗಳನ್ನು ಮಾತ್ರ ಆ ಹೃದಯ ಕಣ್ಣುಗಳಿಗೆ ಕಳುಹಿಸಿಕೊಡುತ್ತದೆ.

ಈಗ ಒಂದಷ್ಟು ಉದಾಹರಣೆಗಳನ್ನು ನೋಡಿದ ಮೇಲೆ ಈ ವಿಷಯದ ಬಗ್ಗೆ ಕೊಂಚ ಆಳಕ್ಕೆ ಇಳಿಯೋಣ. ಮನುಷ್ಯನ ಗುಣ ಅರ್ಥೈಸಿಕೊಳ್ಳೋದು ಅಷ್ಟು ಸುಲಭವಲ್ಲ ಅಂತ ಎಲ್ಲರಿಗೂ ಗೊತ್ತೇ ಇದೆ. ನಯವಂಚಕರು ಎಲ್ಲೆಲ್ಲೂ ಇದ್ದಾರೆ. ನಯವಾಗಿ ಮಾತನಾಡುತ್ತಾ ನಿಮ್ಮ ಸ್ನೇಹ ಬೆಳೆಸುವುದೋ ಅಥವಾ ಸಹಾಯ ಮಾಡುವುದೋ ಮಾಡಿದಾಗ ಆ ವ್ಯಕ್ತಿಯ ಗುಣದ ಆಳ ನೋಡಲು ಹೋಗುವುದಿಲ್ಲ ಅಲ್ಲವೇ? ಯಾವಾಗ ವ್ಯಕ್ತಿಯ ಅಥವಾ ವಿಷಯದ ಆಳಕ್ಕೆ ಇಳಿಯದೇ ಹೋಗಿ ಇದ್ದುದನ್ನು ಇದ್ದ ಹಾಗೆಯೇ ಸ್ವೀಕರಿಸುತ್ತೇವೆಯೋ ಆಗ ಅವುಗಳಿಂದ ಆಗಬಹುದಾದ ಕೆಡುಕಗಳ ಬಲಿಪಶುವಾಗಬೇಕಾದೀತು.

ಹಾಗಿದ್ದರೆ ಪ್ರತೀಬಾರಿಯೂ ಒಂದು ವಿಷಯವನ್ನು ಆಳವಾಗಿ ನೋಡಲೇಬೇಕೆ? ಒಬ್ಬ ವ್ಯಕ್ತಿಯನ್ನು ಅನುಮಾನಾಸ್ಪದವಾಗಿಯೇ ಕಾಣಬೇಕೇ? ಪ್ರತಿಯೊಂದೂ ವಿಷಯವನ್ನು ಆಳ ಹೊಕ್ಕು ನೋಡಬೇಕು ಎಂದಾಗ ಒಂದೊಂದೂ ವಿಷಯವನ್ನು ಒಂದು ವಾರದ ಕಾಲ ಪರಿಶೀಲನೆ ಮಾಡಬೇಕು ಅಂತಲ್ಲ. ಕೆಲವೊಮ್ಮೆ ಆಯಾ ಸಂದರ್ಭಗಳ ಮೇಲೆ ಅವಲಂಬಿತ ಎನ್ನುತ್ತೇನೆ. ಕೆಲವನ್ನು ಇರುವಂತೆಯೇ ಸ್ವೀಕರಿಸಬಹುದು. ಆದರೆ ಎಚ್ಚರಿಕೆಯಿಂದ ಇದ್ದಲ್ಲಿ ತಪ್ಪೇನಿಲ್ಲ.

ವಿಷಯ ಇಷ್ಟೇ, ಜೀವನದ ಆಳ, ಅಳತೆ ನಾವೆಂದುಕೊಳ್ಳುವಷ್ಟು ಚಿಕ್ಕದು ಅಥವಾ ಅದಕ್ಕಿಂತ ದೊಡ್ಡದು ಅಂತಲ್ಲಾ ಬದಲಿಗೆ ಇದನ್ನು ಅಳೆಯುವ ಮಾಪನವೇ ಇಲ್ಲ ಅಂತ.

English summary
There is deep meaning in every matter we think. But we only take things in simple way
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X