ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಪುರಂದರ ದಾಸರ ಈ ಪದವನ್ನು ಸಂಧ್ಯಾರಾಗ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಚಿತ್ರದಲ್ಲಿ ಬಳಸಿಕೊಂಡಿರುವ ವಿಚಾರದಲ್ಲಿ ಹಲವಾರು ಅದ್ಭುತವಾದ ವಿಚಾರಗಳೂ ಅಡಗಿದೆ ಎಂಬುದೇ ವಿಶೇಷ. ಆರಂಭದಲ್ಲಿ ಹಿಂದೂಸ್ತಾನಿ ಶೈಲಿಯಲ್ಲಿ ಆರಂಭಿಸಿ ಆ ನಂತರ ಕರ್ನಾಟಕ ಸಂಗೀತದ ಶೈಲಿಯಲ್ಲಿ ಹಾಡಲಾಗಿದೆ. ಆಯಾ ಶೈಲಿಯ ಗಾಯನದಲ್ಲಿ ಉತ್ತುಂಗ ಸಂಗೀತಗಾರರಾದ ಪಂಡಿತ್ ಭೀಮಸೇನ ಜೋಶಿಯವರೂ ಮತ್ತು ಡಾ. ಬಾಲಮುರಳೀಕೃಷ್ಣ ಅವರ ಗಾಯನ ಸುಧೆ ಈ ಹಾಡಿಗೆ ಇದೆ. ಗೋಪಾಲನಿಗಿರುವ ಸೊಬಗನ್ನು ಎರಡು ವಿಧದ ಸಂಗೀತದ ಹಾರಗಳಿಂದ ಅಲಂಕರಿಸಿರುವುದು ಕೇಳುವುದೇ ಚೆನ್ನ.

ಇಂದಿನ ಈ ಬರಹದ ವಿಶೇಷವೂ ಈ ಪರಿಯ ಬಗ್ಗೆಯೇ. ಈಗ ದಾಸರ ಪದದ ಈ ಸಾಲನ್ನು ಮತ್ತೊಮ್ಮೆ ನೋಡೋಣ ಬನ್ನಿ... ಈ "ಪರಿ"ಯ ಸೊಬಗು ಇನ್ನಾವ ದೇವರಲ್ಲಿ ಕಾಣೆ. ಅರ್ಥಾತ್ ಈ "ಪರಿ" ಎಂಬ ಪದದಲ್ಲಿರುವ ಸೊಬಗನ್ನು ಬೇರಾವ ದೇವರಲ್ಲಿ ಕಾಣೆ ಅಂತ. ಏನಿದೆ ವಿಶೇಷ ಈ "ಪರಿ" ಪದದಲ್ಲಿ ಅಂತ ನೋಡೋಣ ಬನ್ನಿ.

ಶ್ರೀನಾಥ್ ಭಲ್ಲೆ ಅಂಕಣ; ಮಂಡಿಯೂರುವಿಕೆ ನಗಣ್ಯ ಅಲ್ಲಶ್ರೀನಾಥ್ ಭಲ್ಲೆ ಅಂಕಣ; ಮಂಡಿಯೂರುವಿಕೆ ನಗಣ್ಯ ಅಲ್ಲ

ಮೊದಲಿಗೆ ಪರಿ ಎಂದರೇನು? ಪರಿ ಎಂದರೆ ರೀತಿ ಅಥವಾ ಕ್ರಮ. ಯಾವುದಾದರೂ ಒಂದಷ್ಟನ್ನು ವಿವಿಧ ಭಾಗಗಳಾಗಿ ವಿಂಗಡಿಸಬೇಕು ಎಂದಾಗ ಒಂದು ಕ್ರಮ ಅಂತ ಪಾಲಿಸಿದರೆ ಇದಾವ 'ಪರಿ'ಯ ವಿಭಾಗ ಅಂತ ಅರ್ಥವಾಗುವಂತೆ ಇರಬೇಕು. ಕೆಲವು ಸಾರಿ ಈ ಪರಿ ಹೊರಗಣ್ಣಿಗೂ ವೇದ್ಯ ಆದರೆ ಹಲವು ಬಾರಿ ಅರ್ಥವೇ ಆಗೋದಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಪಾಲಿಸಿದಾಗ 'ಇದಾವ ಪರಿ ನ್ಯಾಯ ಅಂತೀನಿ? ಅವರಿಗಾದರೆ ಹೀಗೆ, ನಮಗಾದರೆ ಹೀಗೋ?' ಎಂಬ ಅರಣ್ಯರೋದನ.

The Usage Of Kannada Pari Word In Different Sense

ಕೊರೊನಾದಿಂದಾಗಿ ವಿದ್ಯಾರ್ಥಿಗಳು ಮನೆಯಲ್ಲೇ ಉಳಿಯುವಂತಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಮನೆಯಿಂದಲೇ ಕೆಲಸ ಮಾಡಿ ಅಂತ ಹಲವಾರು ಮಂದಿಗೂ ಹೇಳಲಾಯ್ತು. ಕೆಲವರಿಗೆ ಮನೆಯಿಂದ ಕೆಲಸ ಮಾಡುವ 'ಪರಿ' ಸರಿಹೋಗಲಿಲ್ಲ ಕಾರಣ ಅವರ ಕೆಲಸಗಳಲ್ಲಿ ಸಾಥ್ ನೀಡುವ ಪರಿಕರಗಳು ಅವರಲ್ಲಿರಲಿಲ್ಲ. ಆಗ ವಿಧಿಯಿಲ್ಲದೇ ಕೆಲಸಕ್ಕೆ ಹೋಗುವಂತಾಯ್ತು. ಅದಕ್ಕೂ ಅವಕಾಶವಿಲ್ಲದೆ ಇದ್ದವರು ಮನೆಯಲ್ಲಿ ಕೆಲಸವಿಲ್ಲದೇ ಕೂರುವಂತಾಯ್ತು. ಯಾವುದೇ ಒಂದು ಕೆಲಸ ಸಮರ್ಪಕವಾಗಿ ಮಾಡಲು ಪರಿಕರಗಳು ಅತ್ಯಗತ್ಯ. ಒಂದು ಸಣ್ಣ ಗಿಡ ನೆಡಲಾಗಲಿ, ಚಿಕ್ಕಪುಟ್ಟ ಕುಸುರಿ ಕೆಲಸಗಳನ್ನೇ ಮಾಡುವುದಾಗಲಿ, ಕಾರಿನ ರಿಪೇರಿ ಮಾಡುವುದಾಗಲಿ, ಮನೆ ಕಟ್ಟುವುದಾಗಲಿ ಪರಿಕರಗಳು ಬೇಕೇ ಬೇಕು. ಪರಿಕರಗಳನ್ನು ಸಲಕರಣೆಗಳು ಅಥವಾ ಉಪಕರಣಗಳು ಎಂದೂ ಕರೆಯುತ್ತಾರೆ.

ಸ್ವಚ್ಛತೆಯನ್ನು 'ಪರಿ'ಗಣಿಸದೇ ಇದ್ದವರೂ ಇಂದು, ಈ ವೈರಾಣುವಿನಿಂದ ದೂರವಿರಲು ಕೈ ತೊಳೆಯೋದೂ, ಮಾಸ್ಕ್‌ ಧರಿಸೋದು ಎಲ್ಲವನ್ನೂ ಪಾಲಿಸುತ್ತಿದ್ದಾರೆ. ಆ ದೇಶ, ಈ ದೇಶ ಎಂಬ ಭೇದಭಾವವಿಲ್ಲದೇ ಎಲ್ಲರೂ ಮುಖಮುಚ್ಚಿಕೊಳ್ಳುವಂತಾಗಿದೆ. ಎಂಥಾ 'ಪರಿ' ಎಂದರೆ ಹಲವಾರು ವರುಷಗಳಿಂದ 'ಪರಿ'ಚಯವಿರುವ ಮುಖಗಳನ್ನೇ ಗುರುತಿಸಲಾಗದೇ ಹೋಗುವಂತಾಗಿದೆ. ಪರಿಚಿತ ಮುಖಗಳದ್ದೇ ಹೀಗಾದರೆ ಇನ್ನು ಅಪರಿಚಿತ ಮುಖಗಳ ಬಗ್ಗೆ ಹೇಳೋದೇ ಬೇಡಾ ಎನಿಸುತ್ತದೆ. ಹೀಗೇಕೆ ಹೇಳಿದೆ ಅಂತೀರಾ? ಕೊಂಚ ದೂರದಲ್ಲಿ ಎದುರಿಗೆ ಒಂದು ಅಪರಿಚಿತ ಮುಖ ಬರುತ್ತಿದೆ ಎಂದರೆ ಸಾಕು ದೆವ್ವ ಕಂಡವರಂತೆ ದೂರ ಸರಿಯುತ್ತಿದ್ದಾರೆ ಇಂದಿನ ಜನ.

ಶ್ರೀನಾಥ್ ಭಲ್ಲೆ ಅಂಕಣ; ಮನಸ್ಸು, ಹೃದಯಕ್ಕೂ ಶೋಧಕಶ್ರೀನಾಥ್ ಭಲ್ಲೆ ಅಂಕಣ; ಮನಸ್ಸು, ಹೃದಯಕ್ಕೂ ಶೋಧಕ

ಯಾವುದರಿಂದ ಈ ರೋಗಾಣು ಹರಡುತ್ತೆ, ಯಾವುದರಿಂದ ಇಲ್ಲ ಎಂಬ 'ಪರಿ'ಜ್ಞಾನ ಕೆಲವರಿಗೆ ಇಲ್ಲವೇ ಇಲ್ಲ. ಆದರೆ ವಾಟ್ಸಾಪ್ ದೆಸೆಯಿಂದ ಕೆಲವರಿಗೆ ತಮಗೆ ವಿಪರೀತ ಜ್ಞಾನವಿದೆ ಅಂತ ಅಂದುಕೊಂಡಿರುತ್ತಾರೆ. ಅತೀ 'ಪರಿ'ಣತಿ ಪಡೆವರಂತೆ ಆಡುವ 'ಪರಿ'ಣತರು ಮತ್ತೊಬ್ಬರಿಗೂ ಉಪದೇಶ ಮಾಡಿ ಅವರಲ್ಲಿ 'ಪರಿ'ಜ್ಞಾನ ಮೂಡಿಸುವ 'ಪರಿ'ಪಾಟ ಬೆಳೆಸಿಕೊಂಡಿರುತ್ತಾರೆ.

ಒಬ್ಬರ ಸಂಪರ್ಕ ನಮಗೆ ಬೇಡ, ಮತ್ತೊಬ್ಬರು ತಮ್ಮ ಮನೆಗೆ ಬರಬಾರದು, ತಾವು ಮತ್ತೊಬ್ಬರ ಮನೆಗೆ ಹೋಗಬಾರದು ಎಂಬೆಲ್ಲಾ ನೀತಿಯನ್ನು ಪಾಲಿಸುವ ದಿಶೆಯಲ್ಲಿ ಮನೆಯ ಕೆಲಸಕ್ಕೆ ಬರುವ "ಪರಿಚಾರಕ/ಪರಿಚಾರಿಕೆಯರು" ದೂರವೇ ಉಳಿಯಲು, ಮನೆಮಂದಿಯೆಲ್ಲವೂ ತಮ್ಮ ಮನೆಯ ಕೆಲಸಗಳಲ್ಲಿ ಭಾಗಿಯಾಗಲೇಬೇಕಾಯ್ತು ಅನ್ನಿ.

ಮತ್ತೊಂದು ದಾಸರಪದವನ್ನು ನೆನೆಯೋಣ... "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವ" ಇಲ್ಲಿ ತೊರೆ ಎಂದರೆ 'ಬಿಡು' ಎಂಬ ಅರ್ಥ. ಅದನ್ನೇ "ಪರಿತ್ಯಜಿಸು" ಎಂದೂ ಕರೆಯುತ್ತಾರೆ. ಪರಿತ್ಯಕ್ತರಿಗೆ ಪರಮಾತ್ಮನೇ ದಿಕ್ಕು ಎಂಬರ್ಥದಲ್ಲಿ ಪರಿಪಾಲಿಸುವವನನ್ನು ನೀನೇ ಪರಿಪೂರ್ಣ ಎಂದು ಆರಾಧಿಸುವ ಈ ದಾಸರಪದ ಬಹಳ ಅರ್ಥಪೂರ್ಣ.

change is constant ಅನ್ನೋದು ನಿಮಗೆಲ್ಲಾ ಗೊತ್ತು. ಏನಿದರ ಅರ್ಥ? ನೆನ್ನೆ ಇದ್ದುದು ಇಂದಿಲ್ಲ, ಇಂದು ಇರುವುದು ನಾಳೆಗೆ ಚಾಲ್ತಿ ಇಲ್ಲದೆ ಹೋಗಬಹುದು. ಬದಲಾವಣೆ ಅಂಬೋದು ನಮ್ಮೆಲ್ಲರ ಜೀವನದ ಬಹು ಸಾಮಾನ್ಯ ಅಂಶ. ನೆನ್ನೆಯವರೆಗೆ ಆರಾಮಾವಾಗಿ ಶಾಲೆಗೆ ತೆರಳುತ್ತಿದ್ದ ಮಕ್ಕಳು ಇಂದು ಶಾಲೆಯ ಒಳಗೆ ಹೋಗಲೇ ಹಿಂದುಮುಂದು ನೋಡುವಂತೆ ಆಗಿದೆ. ಇದೂ ಒಂದು ಬದಲಾವಣೆ. ಪರಿಷ್ಕೃತ ಪದ್ಧತಿಯಲ್ಲಿ online coaching ಎಂಬುದು ಚಾಲ್ತಿಗೆ ಬಂದರೆ ಅದೊಂದು ದೊಡ್ಡ ಬದಲಾವಣೆ.

ವೈರಾಣು ಎಲ್ಲೆಲ್ಲೂ ತಾಂಡವವಾಡುತ್ತಿರುವ ಪರಿಣಾಮ ಇದು. ಪರಿಮಿತಿಯೇ ಇಲ್ಲದೆ ಎಲ್ಲೆಲ್ಲೂ ಹರಡಿರುವ ಈ ವೈರಾಣು, ಜಗತ್ತಿನ ಜನಜೀವನವನ್ನೇ ಪರಿವರ್ತನೆ ಮಾಡಿದೆ ಎಂದರೆ ಸುಳ್ಳಲ್ಲ. ಎಲ್ಲೆಡೆ lockdown ಅಂತಾದಾಗ ವಾಯುಮಾಲಿನ್ಯ ಕಡಿಮೆಯಾಗಿ ಪರಿಶುದ್ಧ ಗಾಳಿಯ ಪರಿಮಳ ಎಲ್ಲೆಲ್ಲೂ ಹರಡಿತ್ತು ಎನ್ನಬಹುದು. ಪರಿಸರ ಎಂದರೇನು ಎಂಬ ಅರಿವು ಮೂಡಿತ್ತು. lockdown ಕಳೆದ ಮೇಲೂ ಬುದ್ಧಿ ಕಲಿತು, ಒಳ್ಳೆಯ ಅಭ್ಯಾಸಗಳನ್ನು ಪರಿಪಾಲನೆ ಮಾಡುತ್ತೇವೆಯೇ? ಅಥವಾ ಹುಚ್ಚು ಕುದುರೆಗಳಂತೆ ಮತ್ತೊಮ್ಮೆ ನಮ್ಮದೇ ಅಭ್ಯಾಸಗಳಿಗೆ ಮತ್ತೊಮ್ಮೆ ಚಾಲನೆ ನೀಡಿ ಕಲಿಕೆಗಳಿಗೆ ಪರಿಸಮಾಪ್ತಿ ಹಾಡುತ್ತೇವೆಯೋ ನೋಡೋಣ.

ವಾರದಿಂದ ವಾರಕ್ಕೆ ಪರಿವಾರದೊಂದಿಗೆ ದಿನ ಕಳೆದವರದ್ದು ಪರಿಪರಿಯಾದ ಅನುಭವಗಳು. ಒಂದೊಂದೂ ಅನುಭವಗಳನ್ನು ಪರಿಶೀಲನೆ ಮಾಡಿ ನೋಡಿ ದಾಖಲಿಸಿದರೆ, ಮನೆ ಮನೆ ಕಥೆಗಳೇ ಒಂದು ಕಾದಂಬರಿಯಾಗಬಹುದು. ಪರಿತಪಿಸುವ ಪರಿವಾರಗಳನ್ನು ಪರಿಗಣಿಸಿದ ಪರಿಹಾರ ಕೇಂದ್ರಗಳು ಅವರ ಸೇವೆಗೆ ಟೊಂಕಕಟ್ಟಿ ನಿಂತವು. ಅವರುಗಳ ಪರಿಶ್ರಮಕ್ಕೆ ಈ ಬರಹದ ಮೂಲಕ ಅಕ್ಷರ ನಮನ ಸಲ್ಲಿಸಲೇಬೇಕು.

ಈ ಪರಿ ಭಾಷೆ ಬಳಸಿಕೊಂಡು ಸಂದರ್ಭವನ್ನು ಪರಿಹಾಸ ಮಾಡುತ್ತಿಲ್ಲ ಎಂಬುದು ಅರಿವಿರಲಿ. ಇಂದು ಕಲಿತಿದ್ದನ್ನು ರೂಢಿಸಿಕೊಳ್ಳೋಣ. ಪರಿಶೋಧನೆಗಳು ಬೇಗನೆ ಯಶಸ್ವಿಯಾಗಲಿ ಎಂಬ ನಂಬಿಕೆ ಉಳಿಸಿಕೊಳ್ಳೋಣ. ಪರಿಷತ್ತುಗಳನ್ನು ಮಾಡಿಕೊಂಡು, ಪರಿಷೆಗಳಲ್ಲಿ ಭಾಗವಹಿಸಿ ನಮ್ಮದೇ ಆರೋಗ್ಯವನ್ನು ಒತ್ತೆ ಇಟ್ಟೋ ಅಥವಾ ಮತ್ತೊಬ್ಬರ ನೆಮ್ಮದಿಯನ್ನು ಪರಿಗಣಿಸದೇ 'ನಾವಿರೋದೇ ಹೀಗೆ' ಎಂಬ ನಡವಳಿಕೆ ಬೇಡ.

ಪರಿಪಕ್ವವಾಗೋದು ಸುಲಭವಲ್ಲ. ಪರಿಪೂರ್ಣತೆಯೂ ಕೈಗೆಟುವ ಮಾತಲ್ಲ. ನಮ್ಮ ಸುತ್ತಲೂ ಒಂದು ಪರಿಧಿ ಹಾಕಿಕೊಂಡು ಜೀವನ ಸಾಗಿಸೋಣ. ಯಾವ ಸಮಸ್ಯೆಯೂ ನಿರಂತರವಲ್ಲ. ಮುಂದೊಮ್ಮೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲಿಯವರೆಗೆ ತಾಳ್ಮೆ ಇರಲಿ ಅಷ್ಟೇ.

ಕೊನೆಯ ಹನಿ: ಈ ಲೇಖನದಲ್ಲಿ ಎಷ್ಟು ಬಾರಿ "ಪರಿ" ಅಂತ ಬಳಸಲಾಗಿದೆ ಹೇಳುವಿರಾ? ತುಂಬಾ ಸಿಂಪಲ್ ಪ್ರಶ್ನೆ ಎನಿಸಿದರೆ "ಪರಿ" ಯನ್ನು ಹೊಂದಿರುವ ಎಷ್ಟು ಪದಗಳಿವೆ ಹೇಳ್ತೀರಾ?

English summary
Here is an examples of usage of "pari" kannada word in different sense
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X