• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇಲ್ಲೊಂದು ಸೂಕ್ಷ್ಮಅಡಗಿದೆ ನೋಡಿ. ತ್ರಿಮೂರ್ತಿಗಳಲ್ಲಿ 'ಹರಿ'ಯನ್ನೇ ಕೂಗಿ ಕರೆದಿರುವುದೇಕೆ? ಇದೇನು ಪ್ರಶ್ನೆ? ಕನಕರನ್ನು ಕಟ್ಟಿ ಹಾಕಿ ಹೊಡೆದದ್ದೇ ಶ್ರೀಕೃಷ್ಣನ ಸನ್ನಿಧಾನದಲ್ಲಿ. ಕೃಷ್ಣನನ್ನು ಕರೆಯದೇ ಇನ್ಯಾರನ್ನು ಕರೆಯೋದು? ಪಕ್ಕದಲ್ಲೇ ಇರುವ ಕೃಷ್ಣನನ್ನು 'ಕಾಪಾಡಯ್ಯ ಹರಿಯೇ' ಅಂತ ಕರೆಯೋದು ಬಿಟ್ಟು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಿಕ್ಕಾಪಟ್ಟೆ ಬ್ಯುಸಿ ಇರುವ ಬ್ರಹ್ಮನನ್ನು ಕರೆಯಲಾದೀತೇ? ಅಥವಾ ಕೊರೆವ ಚಳಿಯಲ್ಲಿ ಕೂತಿರುವ ಈಶನನ್ನು ಕರೆಯಲಾದೀತೇ?

ಮೇಲಿನ ಲಾಜಿಕ್ ಎಲ್ಲವೂ ಸರಿಯೇ. ಆದರೆ 'ಬಾಗಿಲನು ತೆರೆದು' ಎಂಬ ಪ್ರಯೋಗ ಯಾಕಿರಬಹುದು? ತ್ರಿಮೂರ್ತಿ ಮೂವರಲ್ಲಿ ಯಾರ ಮನೆಗೆ ಬಾಗಿಲಿದೆ? ನಾವೆಲ್ಲರೂ ಕೇಳಿ ಅರಿತಿರುವಂತೆ ಮಹಾವಿಷ್ಣುವಿನ ಮನೆಗೆ ಬಾಗಿಲು ಇರುವುದು ಒಂದೇ? ಎರಡೇ? ಅಲ್ಲಾ, ಒಟ್ಟು ಏಳು ಬಾಗಿಲುಗಳು. ಸಪ್ತದ್ವಾರಗಳನ್ನು ದಾಟಿದ ಮೇಲೆಯೇ ಲಕ್ಷ್ಮೀ ಸಹಿತ ಮಹಾವಿಷ್ಣುವಿನ ದರುಶನವಾಗೋದು. 'ಬಾಗಿಲನು ತೆರೆದು' ಎಂಬ ವಿಚಾರವನ್ನು ಆ ಉಡುಪಿಯ ಕೃಷ್ಣನ ದೇವಸ್ಥಾನದ ಬಾಗಿಲನ್ನು ತೆರೆದು ಸೇವೆ ಮಾಡಲು ಅವಕಾಶ ನೀಡಯ್ಯಾ ಹರಿಯೇ ಎಂದು ಕೇಳಿರಬಹುದು ಸರಿ. ಅದರಂತೆಯೇ ಆ ವೈಕುಂಠದ ದ್ವಾರವನ್ನು ತೆರೆದು ನನಗೆ ಸೇವೆಯನ್ನು ಮಾಡಲು ಅವಕಾಶ ನೀಡಯ್ಯಾ ಎಂದು ಕೇಳಿರಬಹುದಲ್ಲವೇ? ಇತ್ತಂಡ ವಾದ ಅಲ್ಲ, ಆಯ್ತಾ?

ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ ಎಲ್ಲೆಲ್ಲೂ ಈ ಹಿಂದು ಮುಂದುಗಳದ್ದೇ ಸಂತೆ ಅಲ್ಲವೇ?

ವೈಕುಂಠ ಏಕಾದಶಿಯ ಪುಣ್ಯ ದಿನದಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎಂಬುದು ಒಂದು ನಂಬಿಕೆ. ಆ ದಿನದಂದು ಶ್ರೀನಿವಾಸನ ದರ್ಶನ ಮಾಡಿದವರಿಗೆ ಪುಣ್ಯ ಎಂದೂ ನಂಬಿಕೆ ಇದೆ. ನಮ್ಮ ದೇವಸ್ಥಾನಗಳಲ್ಲಿ ಚಿನ್ನ ದ್ವಾರದಂತೆ ಕಾಣುವ ಅಲಂಕೃತ ದ್ವಾರವನ್ನು ಕಟ್ಟಿ, ದೈವ ದರ್ಶನಕ್ಕೆ ಬರುವವರು ಆ ದ್ವಾರದ ಮೂಲಕ ಬರುವಂತೆ ಏರ್ಪಾಡು ಮಾಡಿರುತ್ತಾರೆ.

ಈ ಮೇಲಿನ ಎರಡೂ ವಿಚಾರಗಳಲ್ಲಿನ ಸಾಮಾನ್ಯ ಅಂಶವೇನು? ಇಷ್ಟೆಲ್ಲಾ ಮಾತುಗಳು ಯಾವುದರ ಬಗ್ಗೆ ಎಂದರೆ, ಬಾಗಿಲಿನ ಬಗ್ಗೆ. ಬಾಗಿಲು ಎಂದ ತಕ್ಷಣ ಏನೇನೆಲ್ಲಾ ವಿಚಾರಗಳು ಮನಸ್ಸಿಗೆ ಬರುತ್ತದೆ ಅಲ್ಲವೇ? ಅದರಲ್ಲೊಂದು ಎಂದರೆ ಡಾ.ರಾಜ್ ಅವರ ನೂರನೇ ಚಿತ್ರವಾದ 'ಭಾಗ್ಯದ ಬಾಗಿಲು' ಕೂಡ ಒಂದು. ಒಬ್ಬರ ಭಾಗ್ಯದ ಬಾಗಿಲು ತೆರೆಯಿತು ಎಂದರೆ ಅವರ ಅದೃಷ್ಟ ಖುಲಾಯಿಸಿತು ಅಂತರ್ಥ. ನಿಮಗೆ ಇಂಥ ಬಾಗಿಲು ಎಂದು ತೆರೆಯಿತು ಅಂತ ಹೇಳಿ ಆಯ್ತಾ!

ಶ್ರೀನಾಥ್ ಭಲ್ಲೆ ಅಂಕಣ; ಹಳೆ, ಹೊಸ ವಿಚಾರಗಳ ಬೆಸೆದು ನೋಡೋಣ...

ಈ ಬಾಗಿಲು ಎಂದರೆ ಆರಂಭ ಅಥವಾ ಮೊದಲು ಎಂದುಕೊಳ್ಳಬಹುದು. ಮದುವೆಯಾದ ಹೆಣ್ಣು ಅತ್ತೆಯ ಮನೆಗೆ ಕಾಲಿಡುವ ಮುನ್ನ ಆ ಮನೆಯ ಬಾಗಿಲಿನ ಹೊಸ್ತಿಲ ಮೇಲಿಟ್ಟ ಅಕ್ಕಿಯ ಪಾವನ್ನು ಒದ್ದು ಒಳಗೆ ಬರುತ್ತಾಳೆ. ಅವಳ ಜೀವನದ 'ಆರಂಭ' ಆ ಅತ್ತೆಯ ಮನೆಗೆ ಭಾಗ್ಯವನ್ನೇ ತರಲಿ ಎಂಬುದರ ಸಂಕೇತ ಎನ್ನೋಣ. ಅಂತೆಯೇ ಯಾವುದಾದರೂ ಒಂದು 'ಆರಂಭ' ಅಂತಾದಾಗ ಆ ದ್ವಾರಕ್ಕೆ ಎಂಟ್ರಿ ಕೊಡುವ ಮುನ್ನ ಅದಕ್ಕೊಂದು ಪೂಜೆಯನ್ನೇ ನಡೆಸುತ್ತಾರೆ. ಉದಾಹರಣೆಗೆ ಒಂದು ಅಂಗಡಿ/ ವ್ಯವಹಾರ ಎಂದಾಗ ಅಲ್ಲೊಂದು ಪೂಜೆಯಾಗಿ ಒಳಗೆ ಬರುತ್ತಾರೆ. ಒಂದು ಗೃಹಪ್ರವೇಶ ಅಂತಾದಾಗಲೂ ಈ ವೈಭವವನ್ನು ನೋಡಬಹುದು. ವ್ಯಾವಹಾರಿಕವಾಗಿ ಟೇಪ್ ಕಟಿಂಗ್ ಅಂತ ಮಾಡಿದರೂ, ಅಲ್ಲೊಂದು ಆರಂಭ ಎಂಬುದಕ್ಕೆ ಪ್ರಾಮುಖ್ಯ ನೀಡಿರುತ್ತಾರೆ. ಇಷ್ಟು ಪ್ರಮುಖವಾದದ್ದು ಈ ಬಾಗಿಲು...

ಹಳ್ಳಿಮನೆಗಳ ಈ ಮುಂಬಾಗಿಲಿಗೆ ಕೊಂಚ ಹೆಚ್ಚೇ ವಿಶೇಷವಿದೆ ಎನ್ನಬಹುದು. ಕಡಿಮೆ ಎತ್ತರ ಹೊಂದಿರುವ ಈ ಬಾಗಿಲನ್ನು ದಾಟುವವರು ತಲೆ ಬಾಗಿಸಿ ಬರಬೇಕು ಎಂಬ ನೀತಿ ಹೊಂದಿರುತ್ತದೆ. ಇಲ್ದಿದ್ರೆ ಹಣೆಗೆ ಪೆಟ್ಟು ಬೀಳೋದು ಗ್ಯಾರಂಟಿ. ಸಿರಿವಂತರ ಮನೆಗಳ ಬಾಗಿಲುಗಳು ಎತ್ತರಕ್ಕೆ ಇರುತ್ತದೆ ಎಂದರೆ ಅವರು ತಲೆಬಾಗಿಸುವವರಲ್ಲ ಎಂದರ್ಥವೇ?

ನಿಮ್ಮ ಆಗಮನಕ್ಕೆ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದರೆ 24 ಗಂಟೆಗಳೂ ತೆಗೆದೇ ಇಟ್ಟಿರುತ್ತೇವೆ ಅಂತಲ್ಲ. ಬದಲಿಗೆ ತಾವು ಯಾವಾಗ ಬಂದರೂ ನಿಮಗೆ ಸ್ವಾಗತ ಇದೆ ಅಂತಷ್ಟೇ. ಮನೆಗಳಲ್ಲಿ ಕದನವಾಗೋದನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. "ಇನ್ನು ನಿನಗೆ ಈ ಮನೆಯ ಬಾಗಿಲು ಶಾಶ್ವತವಾಗಿ ಮುಚ್ಚಲಾಗುತ್ತದೆ... ತೊಲಗಾಚೆ" ಎಂಬ ಆವೇಶಭರಿತ ಡೈಲಾಗ್ ಅಲ್ಲಿರುತ್ತದೆ. ಅರ್ಥಾತ್ ಈ ಮನೆಗೆ ಮತ್ತೆ ಕಾಲಿಡಬೇಡ ಅಂತ ಬಾಗಿಲ ಮುಖಾಂತರ ಹೇಳೋದು.

ಇನ್ನು ಕೋಟೆಯ ಬಾಗಿಲ ಬಗ್ಗೆ ಒಂದೆರಡು ಮಾತುಗಳು. "ಊರೆಲ್ಲಾ ಕೊಳ್ಳೆಹೊಡೆದ ಮೇಲೆ ಕೋಟೆಯ ಬಾಗಿಲು ಹಾಕಿದರಂತೆ" ಅಂತ ಒಂದು ಗಾದೆಯ ಮಾತಿದೆ. ಇದರ ಒಳಾರ್ಥ ಗೊತ್ತಿರಬಹುದು. ಎಲ್ಲೆಡೆ ವೈರಾಣು ಹರಡಿದ ಮೇಲೆ ಲಾಕ್ ಡೌನ್ ಮಾಡಿದರಂತೆ ಅಂತ ಅರ್ಥೈಸಿಕೊಳ್ಳಿ ಸಾಕು. ಒಂದು ಕೋಟೆಯ ಬಾಗಿಲು ಅನ್ನೋದು ಹೊರಜಗತ್ತಿನ ಏಕಮೇವ ಎಂಟ್ರಿ ಪಾಯಿಂಟ್. ಯಾರೋ ಒಬ್ಬರು ಕೋಟೆಗೆ ದಾಳಿ ಇಡುತ್ತಿದ್ದಾರೆ ಎಂದರೆ ರಕ್ಷಣಾಸೂತ್ರವಾಗಿ ಮೊದಲು ಕೋಟೆಯ ಬಾಗಿಲನ್ನೇ ಹಾಕೋದು. ಆಗ ಹೊರಜಗತ್ತಿನ ಸಂಪರ್ಕವೇ ಏಕ್ದಂ ಬಂದ್ ಆಗುತ್ತದೆ.

ಒಂದು ಅವಕಾಶ ತಪ್ಪಿದರೇನು, ಮತ್ತೊಂದು ಅವಕಾಶದ ಬಾಗಿಲು ತೆರೆಯಬಹುದು ಎಂಬುದು ಉತ್ತೇಜನ ನೀಡುವ ಮಾತುಗಳು. ಆದರೆ ಇದನ್ನೇ ಎಚ್ಚರಿಕೆಯ ರೂಪದಲ್ಲಿ ಹೇಳುವುದಾದರೆ 'ಅವಕಾಶಗಳು ಆಗಾಗ ಬಂದೂ ಬಂದೂ ಬಾಗಿಲು ತಟ್ಟುವುದಿಲ್ಲ, ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು' ಅಂಬೋದು. interview ಪಾಸ್ ಆಗಿ ಕೆಲಸವೂ ದೊರೆಯಿತು ಎಂದಾಗ, ಇದಕ್ಕಿಂತಲೂ ಹೆಚ್ಚಿನ ಸಂಬಳ ಕೆಲಸಕ್ಕೆ ಆಹ್ವಾನ ಬರಬಹುದು ಅಂತ ಕಾಯುವವರಿಗೆ ಈ ಮಾತು ಹೇಳಬಹುದೇನೋ. ಈ ಎರಡೂ ವಿಚಾರಗಳಲ್ಲಿ ಬಾಗಿಲು ಅನ್ನೋದು ಒಂದು ಪ್ರತೀಕ.

ದಾಸರು ಬಾಗಿಲಿಂದ ಬಾಗಿಲಿಗೆ ಯಾಚಿಸುತ್ತಾ ಸಾಗುವಾಗ ಎಲ್ಲರೂ ಕೈಯೆತ್ತಿ ನೀಡುವವರೇ ಇರುತ್ತಿರಲಿಲ್ಲ. "ಇಕ್ಕಲಾರೆ ಕೈ ಎಂಜಲು" ಎಂಬ ಸಬೂಬು ಹೇಳುವವರೂ ಇದ್ದರು. ಮುಖದ ಮೇಲೆಯೇ ಬಾಗಿಲು ಬಡಿಯುವವರೂ ಇರುತ್ತಿದ್ದರು. ಈ ಎರಡನೆಯ ವರ್ಗದವರಿಗೆ ದಾಸರು ಹೇಳುತ್ತಿದ್ದುದು "ಕದವ ಮುಚ್ಚಿದಳು ಗಯ್ಯಾಳಿ ಮೂಳಿ... ಮನೆಯೊಳಗಿನ ಪಾಪ ಹೊರಗೆ ಹೋಗದಿರಲೆಂದು" ಅಂತ. ಇಲ್ಲಿ ಪಾಪ ಎಂಬುದಕ್ಕೆ ಎರಡರ್ಥವಿದೆ ಅನ್ನುವುದನ್ನು ಗಮನಿಸಬೇಕು.

ಇನ್ನು ಹಿಂಬಾಗಿಲು... ಒಂದು ಕಾಲದಲ್ಲಿ ಹಿಂಬಾಗಿಲಿನಿಂದ ಒಳ ಬಂದವರನ್ನು ಕಳ್ಳ ಎನ್ನುತ್ತಿದ್ದರು. ಹಿಂಬಾಗಿಲಿನಿಂದ ಒಳಬಂದ ಕಳ್ಳಬೆಕ್ಕು ಹಾಲನು ಕುಡಿದು ಓಡಿ ಹೋಯಿತು ಎಂದಾಗಬಹುದು. ಮುಂಬಾಗಿಲನ್ನು ಯಾರೋ ತಟ್ಟಿದಾಗ ಹಿಂಬಾಗಿಲಿನಿಂದ ಓಡಿ ಹೋದನಲ್ಲ... ಮತ್ತೊಂದು ವಿಷಯ ಎಂದರೆ, ಹಿಂಬಾಗಿಲಿನಿಂದ ಒಳ ಬರುವವರನ್ನು ಶತ್ರುಗಳು ಎಂದೂ ಕರೆಯುತ್ತಾರೆ. ಜರಾಸಂಧನ ಅರಮನೆಗೆ ಕೃಷ್ಣಾರ್ಜುನ ಭೀಮರು ಹಿಂಬಾಗಿಲಿನಿಂದ ಒಳ ಬಂದರ೦ತೆ...

ಇತ್ತಲಾಗೆ ಮುಚ್ಚಿಯೂ ಇಲ್ಲದ, ಪೂರ್ಣವಾಗಿ ತೆರೆದೂ ಇಲ್ಲದ ಬಾಗಿಲಿನ ಬಗ್ಗೆ ನಿಮ್ಮ ಅನಿಸಿಕೆ ಹೇಗೆ? ಬಾಗಿಲು ಅರ್ಧ ತೆರೆದಿದೆ ಎನ್ನುವವ ಆಶಾವಾದಿ, ಬಾಗಿಲು ಅರ್ಧ ಮುಚ್ಚಿದೆ ಎನ್ನುವವ ನಿರಾಶಾವಾದಿ... ಯಾವುದಕ್ಕೆ ಆ ಬಾಗಿಲನ್ನು ಮುಚ್ಚಬೇಕು, ಯಾವುದಕ್ಕೆ ತೆರೆಯಬೇಕು ಎನ್ನುವವ ವಾಸ್ತವಿಕ ಮನಸ್ಥಿತಿಯನ್ನು ಹೊಂದಿರುವವ.

ಬಾಗಿಲಿನ ಬಗ್ಗೆ ಕೆಲವೇ ಮಾತುಗಳನ್ನಾಡಿದ್ದೇನೆ. ಲಾಕ್ ಡೌನ್, ಸೀಲ್ ಡೌನ್, ಲಾಕ್ ಅಪ್ ಇತ್ಯಾದಿ ಯಾವುದೇ ಆದರೂ ಅಲ್ಲೊಂದು ಬಾಗಿಲು ಎಂಬ ಪರೋಕ್ಷ ಉಲ್ಲೇಖ ಇದ್ದೇ ಇದೆ. ಅಪರಿಚಿತರಿಗೆ ಬಾಗಿಲು ತೆರೆಯದಿರಿ, ಶುಕ್ರವಾರ ಸಂಜೆಯ ವೇಳೆ ಬಾಗಿಲು ಹಾಕದಿರಿ, ಹಬ್ಬದ ದಿನ ಬಾಗಿಲ ಬೀಗ ಹಾಕದಿರಿ ಎಂಬೆಲ್ಲಾ ಎಚ್ಚರಿಕೆಯ ಮಾತುಗಳನ್ನು ಆಡುವಂತೆ 'ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮಾ ಮಗಳೇ' ಎಂಬ ಬುದ್ಧಿ ಮಾತನ್ನೂ ಹೇಳುತ್ತಾರೆ.

'ಒಂಬತ್ತು ಬಾಗಿಲ ಮನೆಯೊಳಗೆ ತುಂಬಿದಾ ಜನ ಸಂದಣಿಯಿರಲು, ಕಂಬ ಮುರಿದು ಡಿ೦ಬ ಬಿದ್ದು ಅಂಬರಕ್ಕೆ' ಹಕ್ಕಿ ಹಾರುವ ಮುನ್ನ ದಿನನಿತ್ಯದಲ್ಲಿ ಕೊಂಚ ಕಲಿಯೋಣ...

ಏನಂತೀರಾ?

English summary
The term Door symbolises so many things. Here is a small article on that...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X