• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧನಾತ್ಮಕ ವಿಚಾರಗಳ ಚಿಂತನೆಗಳ ದೂತರಾಗೋಣ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

Facebook Messenger ನಲ್ಲಿ ನೆಚ್ಚಿನ ಸ್ನೇಹಿತೆಯ ಸಹೋದರಿಯು ಸ್ನೇಹಿತೆಯ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳುವಾಗ "i am just a messenger" ಅಂತ ಅಂದಿದ್ದೇ ಈ ಬರಹಕ್ಕೆ ಮೂಲ. Messenger ಅಂದರೆ ದೂತ.

ಇಂದಿನ ಮಾತು ದೂತರ ಬಗ್ಗೆ... ದೂತ ಅಂದರೆ ಏನು? ಯಾರು? ದೂತರು ಎಂದರೆ ಸಂದೇಶವಾಹಕ ಅಂತ ಅರ್ಥ. ಯಾರು ಸಂದೇಶವನ್ನು ಹೊತ್ತು ತರುತ್ತಾರೋ ಅವರು ದೂತರು. ಒಂದು ಪುಟ್ಟ ಉದಾಹರಣೆ ಎಂದರೆ ನಿಮ್ಮ ಮನೆಯ ಕೆಲಸದಾಕೆಯ ಮಗ ನಿಮ್ಮಲ್ಲಿ ಬಂದು "ನಮ್ಮಮ್ಮ೦ಗೆ ಮೈಉಸಾರಿಲ್ಲ, ಕೆಲ್ಸಕ್ ಬರಾಕಿಲ್ಲ ಅಂತ ಹೇಳಕ್ ಹೇಳವ್ರೆ" ಅಂತ ಸಂದೇಶ ಹೊತ್ತು ತರುವವ ದೂತ. "ಸರಿ ಆಯ್ತು, ನಾಳೆ ಬೇಗ ಬರಬೇಕಂತೆ ಅಂತ ಮರೀದೇ ಹೇಳು" ಅಂತ ನೀವು ಹೇಳಿಕಳಿಸಿದ್ದನ್ನ ಆ ದೂತ ತನ್ನ ಅಮ್ಮನಿಗೆ ತಿಳಿಸಿದಾಗ ಆ ದೂತನ ಕೆಲಸ ಮುಗಿಯುತ್ತೆ. ಸಾಮಾನ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಸಂದೇಶ ಒಯ್ಯೋದು ಈ ದೂತರ ಕೆಲಸ. ಅವರು ವಾಪಸ್ಸಾಗುವಾಗ ಸಂದೇಶವನ್ನು ಹೊತ್ತೊಯ್ಯಬೇಕು/ಹೊತ್ತೊಯ್ಯುತ್ತಾರೆ ಅಂತೇನೂ ನಿಗದಿತವಾಗಿ ಇಲ್ಲ.

ಪ್ರಶ್ನೆಗಳನ್ನು ಯಾವಾಗ ಕೇಳಬೇಕು ಯಾವಾಗ ಕೇಳಬಾರದು?

ಸಂದೇಶ ಹೊತ್ತು ತರುವ ದೂತರು ತಮ್ಮ ಯಾವುದೇ ಭಾವನೆಯನ್ನು ಬೆರೆಸಿ ಸುದ್ದಿ ಹೇಳುವುದಿಲ್ಲ. ಹಾಗೆಯೇ ವಾಪಸ್ಸಾಗಿ ಸುದ್ದಿ ತಿಳಿಸುವಾಗಲೂ ಅಷ್ಟೇ.

ಕೊಂಚ ಗಂಭೀರವಾದ ಉದಾಹರಣೆ ಎಂದರೆ ದಾಸರು ಹೇಳಿರುವ "ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ". ಇಲ್ಲಿನ ದೂತರ ಕೆಲಸವೇ ಭಿನ್ನ ಬಿಡಿ. ಜವರಾಯನ ದೂತರು ಬರೋದೇ ಪ್ರಾಣವನ್ನು ಸೆಳೆದೊಯ್ಯಲು. ಅವರಿಗೆ ದಯೆ ಇರೋದಿಲ್ಲ. ಆ ಜೀವವನ್ನು ಜವರಾಯನಿಗೆ ಒಪ್ಪಿಸುವಾಗಲೂ ಅಷ್ಟೇ. ಅಲ್ಲಿಗೆ ಅವರ ಒಂದು ಟ್ರಿಪ್ ಮುಗಿದು ಮತ್ತೊಂದು ಕಡೆಗೆ ಹೊರಡುತ್ತಾರೆ. ಹೇಗಿದ್ರೂ ಬಂದಿದ್ದೀವಲ್ಲ ಅಂತ ಹತ್ತಾರು ಪ್ರಾಣ ಒಯ್ಯುತ್ತಾರೋ ಅಂತ ಒಂದು ಟ್ರಿಪ್ ಗೆ ಒಂದೇ ಪ್ರಾಣವೋ ನನಗೆ ಗೊತ್ತಿಲ್ಲ. ಇಲ್ಲಿ ದೂತರ ಕೆಲಸ ಹೇಳಿದೆ ಅಷ್ಟೇ.

'ತುಂಬ'ದ ಬಗ್ಗೆ ಸ್ವಲ್ಪ ಮಾತಾಡೋಣ

ದೂತರು ಎಂಬ ವಿಚಾರ ಇಂದು ನೆನ್ನೆಯದಲ್ಲ. ಯುಗಯುಗಗಳ ಇತಿಹಾಸವಿದೆ ಈ ವಿಚಾರಕ್ಕೆ. ಪಾರಿವಾಳಗಳ ಕಾಲುಗಳಿಗೆ ಸಂದೇಶವನ್ನು ಕಟ್ಟಿ ಹಾರಿಬಿಡಲಾಗಿ ಅವು ತಲುಪಬೇಕಾದ ಜಾಗ ತಲುಪಿ ಅಲ್ಲಿಂದ ವಾಪಸ್ ಬರುವಾಗ ಸಂದೇಶ ಹೊತ್ತು ತರುತ್ತಿತ್ತು. ಹಿಂದಿ ಸಿನಿಮಾದಲ್ಲೂ ಇದನ್ನು ಬಳಸಿಕೊಂಡಿದ್ದರು ಗೊತ್ತಲ್ಲ!

ನಳ-ದಮಯಂತಿ ಚರಿತ್ರೆ. ದಮಯಂತಿಯನ್ನು ಕಾಡಿನಲ್ಲಿ ಬಿಟ್ಟು ಹೊರಡುತ್ತಾನೆ ನಳ ಮಹಾರಾಜ. ಅಲ್ಲಿಂದ ಋತುಪರ್ಣನಲ್ಲಿ ಸೇರುವ ಮುಂಚೆ ಅವನಿಗೆ ಹಾವು ಕಡಿದು ಸ್ವರೂಪವೇ ಬದಲಾಗುತ್ತದೆ. ಅವನೇ ನಳ ಎಂಬ ಅನುಮಾನ ದಮಯಂತಿಗೆ ಇದ್ದು ಅದನ್ನು ಸಾಬೀತು ಮಾಡಲು 'ದಮಯಂತಿ ಸ್ವಯಂವರ' ಎಂದು 'ದೂತ'ನ ಕೈಲಿ ಋತುಪರ್ಣನಿಗೆ ಸಂದೇಶ ತಲುಪುತ್ತದೆ. ಆದರೆ ಸ್ವಯಂವರ ಇದ್ದುದು ಮರುದಿನವೇ!! ಎರಡೂ ರಾಜ್ಯಗಳ ನಡುವೆ ಬಹಳ ಅಂತರವಿದ್ದು, ಅದನ್ನು ಸಾಧಿಸಬಲ್ಲವರು ಯಾರಾದರೂ ಇದ್ದರೆ ಅದು ನಳ ಮಾತ್ರ ಅಂತ ದಮಯಂತಿಗೆ ಗೊತ್ತಿತ್ತು. ಋತುಪರ್ಣನಿಗೆ ಅಲ್ಲಿಗೆ ತಲುಪಲು ಸಹಾಯ ಮಾಡಿದ್ದು ನಳ. ಆಮೇಲೆ ಅಲ್ಲಿ ನಡೆದದ್ದು ಬೇರೆಯೇ ವಿಷಯ ಬಿಡಿ. ಅಶ್ವಹೃದಯ ವಿದ್ಯೆ ಬಲ್ಲ ನಳ ಆ ವಿದ್ಯೆಯನ್ನು ಋತುಪರ್ಣನಿಗೆ ಕಲಿಸುತ್ತಾನೆ. ಋತುಪರ್ಣನು ಜೂಜು ವಿದ್ಯೆಯ ರಹಸ್ಯಗಳನ್ನು ನಳನಿಗೆ ಕಲಿಸುತ್ತಾನೆ. ದಮಯಂತಿಗೆ ನಳ ದೊರೆಯುತ್ತಾನೆ. ನಳನಿಗೆ ರಾಜ್ಯ ದೊರೆಯುತ್ತದೆ. ಋತುಪರ್ಣನಿಗೆ ವಿದ್ಯಾಲಾಭವಾಗುತ್ತದೆ. ಇಷ್ಟೆಲ್ಲಾ ಕಥೆಯ ಹಿಂದಿರುವ ದೂತನಿಗೆ ನಮನ ಹೇಳೋಣವೇ?

ತ್ರೇತಾಯುಗದಲ್ಲಿ ಕಂಡು ಬರುವ ದೂತ ಯಾರಿಗೆ ತಾನೇ ಗೊತ್ತಿಲ್ಲ "ರಾಮದೂತ ಅತುಲಿತ ಬಲಧಾಮಾ| ಅಂಜನಿ ಪುತ್ರ ಪವನಸುತ ನಾಮಾ" ಎಂಬ ಸಾಲುಗಳನ್ನು ಹೊತ್ತ ತುಳಸೀದಾಸರ ಹನುಮಾನ್ ಚಾಲೀಸಾ, ಈ ದೂತನ ಸಾಹಸ ಹಾಡಿ ಹೊಗಳುತ್ತದೆ. ಒಂದೆಡೆಯಿಂದ ಮತ್ತೊಂದೆಡೆಗೆ ನಡಿಗೆ, ಕುದುರೆ, ಆನೆ, ರಥ ಹೀಗೆ ಯಾವುದೋ ಮಾರ್ಗದಿಂದ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗುವವರು ಇರುತ್ತಾರೆ. ಆದರೆ ಹಾರಿ ಹೋಗಿ ಬಂದವನು ಎಂದರೆ ವೀರಾಂಜನೇಯ. ರಾಮನ ದೂತನಾಗಿ ಹೋಗಿ ಸೀತೆಯನ್ನು ಭೇಟಿ ಮಾಡಿ ರಾಮನ ವಿಷಯ ಅರುಹಿ, ಆ ತಾಯಿಯಿಂದ ಚೂಡಾಮಣಿಯನ್ನು ಪಡೆದುಕೊಳ್ಳುತ್ತಾನೆ. ಆ ನಂತರ ಬಂದಿಸಲ್ಪಟ್ಟವನಾಗಿ ರಾವಣನ ಸಭೆಯಲ್ಲೂ ತನ್ನ ಧೀಮಂತಿ ಶಕ್ತಿಯನ್ನು ಪರಿಚಯಿಸುತ್ತಾನೆ. ಬಾಲಕ್ಕೆ ಬೆಂಕಿ ಹಚ್ಚಿಸಿಕೊಂಡು ಆ ಬೆಂಕಿಯಿಂದ ಲಂಕೆಯಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿ ಕ್ಷೇಮದಿಂದ ಹಿಂದಿರುಗುತ್ತಾನೆ.

ಎಲ್ಲಾ Junk ದೂರವಿರಿಸಿ ಸ್ವಸ್ಥ ಬದುಕನ್ನು ಬಾಳೋಣ

ಇನ್ನು ದ್ವಾಪರದ ಕಥೆ. ಭಾಸ ವಿರಚಿತ ಏಕಾಂಕ ನಾಟಕ "ದೂತ ಘಟೋತ್ಕಚ", ಒಂದು ಕಾಲ್ಪನಿಕ ನಾಟಕ. ಸೂರ್ಯ ಮುಳುಗುವುದರೊಳಗೆ ಜಯದ್ರಥನನ್ನು ಕೊಲ್ಲುತ್ತೇನೆ ಎಂದು ಶಪಥಗೈದಿದ್ದಾನೆ ಅರ್ಜುನ. ಆದರೆ ಜಯದ್ರಥನ ಅಡಗುತಾಣ ಅರಿಯದೆ ಹೋಗಿದ್ದಾನೆ. ಆ ಸಮಯದಲ್ಲಿ ಶಾಂತಿಯತ್ನದ ಕೊನೆಯ ದಾಳವಾಗಿ ಘಟೋತ್ಕಚನನ್ನು ದುರ್ಯೋಧನನ ಸಭೆಗೆ ಕಳಿಸುತ್ತಾನೆ ಶ್ರೀಕೃಷ್ಣ. ಅರ್ಜುನನ ಅಂತ್ಯ ಹತ್ತಿರವಾಯ್ತು ಎಂದು ದುರ್ಯೋಧನನು ಸಂತೋಷದಲ್ಲಿ ತೇಲಾಡುತ್ತಿದ್ದರೂ ಧೃತರಾಷ್ಟ್ರನಿಗೆ ಒಳಗೊಳಗೇ ಭಯ. ಯುದ್ಧವನ್ನು ನಿಲ್ಲಿಸದೇ ಹೋದರೆ ನಿನ್ನ ನೂರು ಮಕ್ಕಳನ್ನು ಕಳೆದುಕೊಳ್ಳುವೆ ಎಂದು ಎಚ್ಚರಿಸಿ ಹೋಗುತ್ತಾನೆ ಘಟೋತ್ಕಚ.

ಭಾಸನ ಬಗ್ಗೆ ಹೇಳಿದ ಮೇಲೆ ಕಾಳಿದಾಸ ಬಗ್ಗೆ ಹೇಳದೆ ಹೋದರೆ ಹೇಗೆ? ಕಾಳಿದಾಸನ ಮಹತ್ತರ ಕೃತಿಗಳಲ್ಲಿ 'ಮೇಘದೂತ'ವೂ ಒಂದು. ಬಹಿಷ್ಕೃತನಾದ ಯಕ್ಷನೋರ್ವನು ತನ್ನ ಪ್ರೇಯಸಿಗೆ ತನ್ನ ವೇದನೆಯನ್ನು ಮೇಘಗಳ ಮೂಲಕ ಸಂದೇಶವನ್ನು ತಲುಪಿಸುತ್ತಾನೆ. ಜೀವವಿಲ್ಲದ ಮೇಘಗಳನ್ನು 'ಜೀವದೂತ'ರನ್ನಾಗಿ ಕಲ್ಪಿಸಿಕೊಂಡು ಅವಕ್ಕೆ ಜೀವ ತುಂಬಿದ್ದಾನೆ. ಹಿಮಾಲಯದ ಅಲಕಾ/ಅಲಕಾಪುರಿಯಲ್ಲಿ ನಡೆದ ಸನ್ನಿವೇಶ ಚಿತ್ರಿಸಿದ್ದಾನೆ ಮಹಾಕವಿ ಕಾಳಿದಾಸ.

ದೂತ ಪದಕ್ಕೆ ಆಂಗ್ಲದಲ್ಲಿ Messenger ಅಲ್ಲದೇ ಬಹಳಷ್ಟು ರೀತಿಯ ಪದಬಳಕೆ ಇದೆ. Envoy, Ambassador, ಇತ್ಯಾದಿ. ಈಗ Ambassador ಬಗ್ಗೆ ಒಂದೆರಡು ವಿಚಾರಗಳನ್ನು ನೋಡೋಣ.

ವಾಣಿಜ್ಯ ದೂತ ಎಂದರೆ Financial Ambassador ಅಂತರ್ಥ. ಮತ್ತೊಂದು ದೇಶದಲ್ಲಿರುವ ತಮ್ಮ ದೇಶದ ಜನರಿಗೆ ವಾಣಿಜ್ಯದ ವಿಷಯದಲ್ಲಿ ಸಹಾಯ ಹಸ್ತವಾಗಿರುವ, ಸರಕಾರ ನೇಮಕಾತಿ ಮಾಡಿರುವ ಡಿಪ್ಲೊಮ್ಯಾಟ್. ಯುಗಯುಗಗಳಿಂದಲೂ ಚಾಲ್ತಿಗೆ ಬಂದಿರುವ ಒಂದು ವಿಶೇಷ ಪದ್ಧತಿ ಎಂದರೆ ಆಯಾ ದೇಶದಲ್ಲಿರುವ ಪರದೇಶದಲ್ಲಿರುವ ಇಂಥ ವಿಶೇಷ ದೂತರ ಜವಾಬ್ದಾರಿ. ತಾವು ಕಳಿಸಿರುವ ದೂತನ ಜವಾಬ್ದಾರಿ ಈ ದೇಶದ್ದು, ಮತ್ತು ಪರದೇಶದಲ್ಲಿ ಅವರಿಗೆ ಯಾವುದೇ ರೀತಿ ಜೀವಕ್ಕೆ ಅಪಾಯವಾಗದಂತೆ ಕಾಪಾಡುವುದು ವಿದೇಶೀ ಸರಕಾರದ ಜವಾಬ್ದಾರಿ ಕೂಡ.

'ಬ್ರಾಂಡ್ ambassador - ಪ್ರಮುಖವಾಗಿ ಕ್ರೀಡಾಪಟುಗಳು ಮತ್ತು ಸಿನಿಮಾ ನಟರು 'ಬ್ರಾಂಡ್ ambassador'ಗಳಾಗಿ ಈಚೆಗೆ ಬಹಳ ಹೆಸರು ಮತ್ತು ಹಣ ಮಾಡುತ್ತಿದ್ದಾರೆ ಎನ್ನಬಹುದು. ಉತ್ಪನ್ನಕ್ಕೂ ಮತ್ತು ಗ್ರಾಹಕರಿಗೂ ಮಧ್ಯೆ ಇರುವ 'ದೂತ' ಈ ಅಂಬಾಸಡರ್. ಈ ದೂತ ಆಯಾ ಉತ್ಪನ್ನದ representative ಎನ್ನಬಹುದು. ಉತ್ಪನ್ನ ಹೇಗಿದೆ ಅನ್ನೋಕ್ಕಿಂತ ಅದನ್ನು ಬಳಸುವ ambassador ಮುಖ ನೋಡಿ ಕೊಳ್ಳುವವರೇ ಅನೇಕ.

ಹಲವೊಮ್ಮೆ ಅವರ ಎಡವಟ್ಟಾದ ನಡುವಳಿಕೆಯಿಂದ ಕುಖ್ಯಾತಿ ಪಡೆದರೆ, ಆಯಾ ಉತ್ಪನ್ನದ ಮಾಲೀಕರು ಇವರನ್ನು ambassador ಹುದ್ದೆಯಿಂದ ವಜಾ ಮಾಡುತ್ತಾರೆ. ದೂತರು ಕೇವಲ ಒಂದೆಡೆಯಿಂದ ಮತ್ತೊಂದೆಡೆ ಸಂದೇಶ ತಲುಪಿಸುವವರು ಅನ್ನೋದಷ್ಟೇ ಅಲ್ಲ, ವೈಯಕ್ತಿಕವಾಗಿಯೂ ತಮ್ಮತನ ಕಾಪಾಡಿಕೊಳ್ಳಬೇಕು.

ಇಷ್ಟೆಲ್ಲಾ ದೂತರ ನಡುವೆ ನಾವೆಲ್ಲರೂ ಒಂದು ರೀತಿ ದೂತರೇ ಎಂದರೆ ಅದು ನಿಜ. ಒಂದೆಡೆ ಸಂದೇಶ ಹೊತ್ತು ತರುವವರು ಅಲ್ಲಿಯೇ ಠಿಕಾಣಿ ಹೂಡದೆ ವಾಪಸ್ ಆಗುತ್ತಾರೆ ಅಲ್ಲವೇ? ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ನೆಲೆಸಿರುವ ಮಂದಿ ಆ ದೇಶದ ಒಳಿತುಗಳ ಸಂದೇಶ ವಾಹಕರಾಗಬೇಕು. ನಮ್ಮ ದೇಶ ಹಾಗೆ ಹೀಗೆ ಎಂಬ ನ್ಯೂನತೆಗಳನ್ನು ಎತ್ತಿ ತೋರಿಸುವ ದೂತರಾಗಬಾರದು.

ದಿನನಿತ್ಯದಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಸಾಗುತ್ತಾ ಮತ್ತೆ ಮನೆಗೆ ಹಿಂದಿರುಗುವ ನಾವು ಧನಾತ್ಮಕ ವಿಚಾರಗಳ ಚಿಂತನೆಗಳ ದೂತರಾಗೋಣ. ಋಣಾತ್ಮಕ ವಿಚಾರಗಳನ್ನು ತಲುಪಿಸಿ ಸಮಾಜವನ್ನು ಹಾಳುಗೆಡವೋದು ಬೇಡ.

"ಅಲ್ಲಿದೇ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ" ಎಂಬುದನ್ನು ದಿನನಿತ್ಯದಲ್ಲಿ ತಲೆಯಲ್ಲಿ ಇರಿಸಿಕೊಂಡು, ಅಲ್ಲಿಂದ ಇಲ್ಲಿಗೆ ದೂತರಾಗಿ ಬಂದಿರುವ ನಾವು ವಾಪಸ್ಸಾಗುವ ಮುನ್ನ ಒಳಿತನ್ನೇ ಮಾಡಿ ಹಿಂದಿರುಗುವ. ಏನಂತೀರಿ?

English summary
The medium of messages are changing as per time. Here is a small story on how message medium changed as per time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more