• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್! ಇದು ಕಿವಿ ವಿಷಯ; ಕಿವಿ ತೆರೆದಿರಲಿ, ಆದರೆ ಕೇಳಿಸಿಕೊಳ್ಳಬೇಡಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಭಾದ್ರಪದ ಚತುರ್ಥಿಯ ಗಣೇಶನ ಹಬ್ಬ ಮುಗೀತು ನಿಜ... ವಾಟ್ಸಪ್ಪ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ತಾಣಗಳಲ್ಲೂ ಸದ್ಯಕ್ಕೆ ಗಣೇಶ ಬೈ ಬೈ ಹೇಳಿದ್ದಾನೆ. ಆದರೆ ಹಬ್ಬ ಮುಗಿದಿದ್ದು ಮನೆಮನೆಗಳಲ್ಲಿ ಮಾತ್ರ. ಬೀದಿಬೀದಿಗಳ ಗಣಪನ ಭರಾಟೆ, ಸಂಗೀತದ ಅಬ್ಬರ, ಕಿವಿಗಚ್ಚಿಡೋ ಸದ್ದು ಇತ್ಯಾದಿಗಳು ಶುರುವಾಗೋದೇ ಈಗ. ಇಂದಿನ ವಿಷಯ ಈ ಕಿವಿ...

ನೋಡೋದು ಬೇಡಾ ಅನ್ನಿಸಿದರೆ ಕಣ್ಣುಗಳನ್ನು ಮುಚ್ಚಬಹುದು ಆದರೆ ಕೆಟ್ಟವಾಸನೆ ಇದ್ದಾಗ ಮೂಗನ್ನು ತಂತಾನೇ ಲಾಕ್ ಮಾಡಿಕೊಳ್ಳಲಾದೀತೇ? ಅದರಂತೆಯೇ ಕಿವಿಗೆ ಬೀಳೋ ವಿಷಯ ಕೇಳಿಸಿಕೊಳ್ಳಬಾರದು ಅಂತಾದಾಗ ತಂತಾನೇ ಕಿವಿ ಮುಚ್ಚಿಕೊಳ್ಳಲಾದೀತೇ? ಮನುಷ್ಯನಿಗಂತೂ ಈ ಎರಡೂ ಕ್ರಿಯೆಗಳಿಗೆ ಕೈಗಳ ಸಹಾಯ ಬೇಕೇಬೇಕು. ತಂತಾನೇ ಮುಚ್ಚಿಕೊಳ್ಳುವ ಹಾಗೆ ಇದ್ದಿದ್ರೆ ಚೆನ್ನಾಗಿರುತ್ತಿತ್ತೋ? ಇಲ್ಲವೋ?

Reactive ಆಗಿರುವುದಕ್ಕಿಂತ Proactive ಆಗಿರಿ, ಬಾಯಾರಿಕೆ ಆದಾಗ ಬಾವಿ ತೋಡೋ ಕೆಲಸ ಮಾಡದಿರಿ

ರಾಮಾಯಣದಲ್ಲಿ, ಶೂರ್ಪನಖಿಯ ಮೂಗು ಮತ್ತು ಕಿವಿಯನ್ನು ಲಕ್ಷ್ಮಣನು ಕತ್ತರಿಸಿ ಹಾಕಿದ ಎಂಬ ವಿಷಯ ಇದೆ, ಗೊತ್ತಲ್ಲಾ? ಕೆಲವೆಡೆ ಕಿವಿಗಳು ಎಂಬ ಉಲ್ಲೇಖ ಇದೆ. ಹಲವೆಡೆ ಕೇವಲ ಎಡ ಕಿವಿ ಮಾತ್ರ ಎಂದು ಹೇಳಲಾಗಿದೆ. ಒಂದೇ ಕಿವಿಯಾಗಿದ್ದರೆ ಅದು ಎಡಗಿವಿಯೇ ಯಾಕೆ ಅಂತ ಗೊತ್ತೇ?

ಈ ಕಿವಿಯ ವೈಶಿಷ್ಟ್ಯ ಏನಪ್ಪಾ ಅಂದ್ರೆ ತಲೆಯ ಎರಡೂ ಬದಿಯಲ್ಲಿರೋದು ಶೃಂಗಾರಕ್ಕೆ ಮಾತ್ರ. ಅಸಲಿ ತಮಟೆ ಇರೋದೇ ಒಳಗೆಲ್ಲೋ. ಹೊರಗಿನ ಕಿವಿಯ ಮಹತ್ವ ಏನು? ಈ ಕಿವಿ ಇರದಿದ್ರೆ ಇಲ್ಲದಿದ್ರೆ ಕನ್ನಡಕ ಹಾಕೋಕ್ಕೆ ಆಗ್ತಿರಲಿಲ್ಲ ಅನ್ನೋದು ಹಳೆಯ ಜೋಕು. ಕಿವಿ ಮೊದಲೋ? ಕನ್ನಡಕ ಮೊದಲೋ? ಕಿವಿ ತಾನೇ? ಅಂದ್ರೆ ಕನ್ನಡಕದ ಬದಿಯ ಕಡ್ಡಿಗಳು ಕಿವಿಗಳಿವೆ ಅಂತ ಆವಿಷ್ಕಾರವಾಗಿದ್ದು ಅಷ್ಟೇ. ಹೊರಗಿನ ಕಿವಿಯ ಕೆಲಸ ಏನಪ್ಪಾ ಅಂದ್ರೆ funnel ಹೇಗೆ ಕೆಲಸ ಮಾಡುತ್ತೋ ಅದೇ. ಸುತ್ತಲಿರೋ ಸದ್ದನ್ನು ಕಿವಿಯ ಒಳಗೆ ಬಿಡುತ್ತೆ. ಒಳಗೆ ಬಂದ ಸದ್ದನ್ನು ಏನು ಮಾಡಬೇಕು ಎಂಬೋದು ಒಳಗೆ ಕೂತಿರೋ ಮಿಕ್ಕವರ ಕೆಲಸ.

ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...

ಕಿವಿಯ ಹಾಳೆಗಳ ಒಳಮೈ ವಿನ್ಯಾಸಗಳಿಂದ ಕೂಡಿರುತ್ತದೆ. ಅವುಗಳ ಮೇಲೆ ಬಿದ್ದ ತರಂಗಗಳನ್ನು ಮನುಷ್ಯನ ದನಿಯ ಪಿಚ್ ಗೆ ತಕ್ಕಂತೆ ನೂರ್ಮಡಿಸಿ ಕಿವಿಯ ಒಳಗೆ ತಲುಪಿಸುತ್ತದೆ. ಹೀಗಾಗಿ ಸಾಮಾನ್ಯವಾಗಿ ಹಲವಾರು ಚಿಕ್ಕಚಿಕ್ಕ ಸದ್ದುಗಳು ನಮಗೆ ಕೇಳಿಸುವುದೇ ಇಲ್ಲ. ಶಬ್ದ ತರಂಗಗಳನ್ನು ಡೆಸಿಬೆಲ್ಸ್ ನಲ್ಲಿ ಅಳೆಯುತ್ತಾರೆ. ಸೂಕ್ಷ್ಮ ಕಿವಿಗಳು ಸೊನ್ನೆ ಯಿಂದ -15 ಡೆಸಿಬೆಲ್ ಗಳವರೆಗೂ ಕೇಳಿಸಿಕೊಳ್ಳಬಲ್ಲದು. ಸಾಮಾನ್ಯವಾಗಿ ಸಂಭಾಷಣೆಗಳು 60 ಡೆಸಿಬೆಲ್ಸ್ ವರೆಗೂ ಇರುತ್ತವೆ. ಚಪ್ಪರಗಳಲ್ಲಿ loudspeakerಗಳಲ್ಲಿ ಮೂಡಿ ಬರುವ ಸದ್ದು, ಸಿಡಿಲಿನ ಸದ್ದು, ಅತೀ ಹೆಚ್ಚು ವಾಲ್ಯೂಮ್ ನೊಂದಿಗಿನ earphone ಇತ್ಯಾದಿಗಳು ಹೆಚ್ಚು ಡೆಸಿಬೆಲ್ಸ್ ಹೊಂದಿದ್ದು ನಿರಂತರವಾಗಿ ಇಂಥ ವಾತಾವರಣದಲ್ಲಿ ಇರುವ ಕಿವಿಗಳು ಕಿವುಡಾಗುವುದಕ್ಕೆ ಹೆಚ್ಚು ಸಮಯ ಬೇಕಾಗಿರುವುದಿಲ್ಲ.

ಮನುಷ್ಯರ ಕಿವಿಗಳ ಆಕಾರ, ಅಳತೆಗಳಲ್ಲಿ ಬಹಳಷ್ಟು ವಿಧಗಳಿವೆ. ಅಂಥದ್ದರಲ್ಲಿ ಒಂದು ಎಂದರೆ ದೊಡ್ಡ ಕಿವಿ. ಅವು ಬರೀ ದೊಡ್ಡ ಕಿವಿ ಮಾತ್ರ ಆಗಿರದೇ ಕೊಂಚ ಬಾಗಿದ್ದರೆ ಅವಕ್ಕೆ ಆನೆ ಕಿವಿ ಅಂತಾರೆ. ಆನೆಗಳಿಗೆ ದೊಡ್ಡ ಕಿವಿಗಳು ಇರುತ್ತದೆ ಅಂತ ನಿಮಗೂ ಗೊತ್ತು. ದೊಡ್ಡ ಗಾತ್ರದ ಬಾಗಿದ ಕಿವಿ ಇರುವವರಿಗೆ ಬುದ್ಧಿ ಹೆಚ್ಚು ಅಂತ ಹೇಳಿದ್ದನ್ನು ಕೇಳಿದ್ದೆ. ನನ್ನ ಸ್ನೇಹಿತನಿಗೇ ಈ ರೀತಿ ದೊಡ್ಡ ಬಾಗಿದ ಕಿವಿಗಳಿದ್ದು ಅವನು ಅಗಾಧ ಬುದ್ಧಿವಂತ ಆಗಿದ್ದರಿಂದ ನಾನು ನಂಬಿದ್ದೆ. ಅಂದ ಹಾಗೆ, ನನ್ನದು ಚಿಕ್ಕ ಕಿವಿ.

ಈಚೆಗೆ ಒಂದು ಕಡೆ ಓದಿದಂತೆ ವಿಷಯ ಹೀಗಿದೆ. ಹೊರಗಿನ ಕಿವಿ funnelನಂತೆ ಅಂತ ಆಗಲೇ ಹೇಳಿದೆ. ದೊಡ್ಡ ಕಿವಿಯಾದರೆ ದೊಡ್ಡ funnel ಎಂದುಕೊಳ್ಳಿ. ಇವು ಹೆಚ್ಚು ಶಬ್ದ ತರಂಗಗಳನ್ನು antenna ರೀತಿ ಹಿಡಿಯಬಹುದು. ಆದರೆ ಅಷ್ಟೂ ತರಂಗಗಳನ್ನು ಕಿವಿಯ ರಂಧ್ರದ ಒಳಗೆ ಕಳಿಸುತ್ತದೆ ಎಂಬುದು ನಿಶ್ಚಿತವಲ್ಲ. ಹೆಚ್ಚು ತರಂಗಗಳು ಒಳಗೆ ಸಾಗುವಾಗ ತರಂಗಗಳು fade ಆಗಬಹುದು. ಆನೆಗಳಿಗೆ ಈ ರೀತಿ ದೊಡ್ಡ ಕಿವಿಗಳಿರುವುದು ಅದರ ದೇಹದ ಉಷ್ಣದ ಅಂಶವನ್ನು ಕಡಿಮೆ ಮಾಡಲು ಮತ್ತು ಇತರ ಕೆಲಸಗಳಿಗೆ. ಆದರೆ ಅದರಿಂದ ಸೂಕ್ಷ್ಮವಾಗಿ ಅಥವಾ ಹೆಚ್ಚುವರಿಯಾಗಿ ಕೇಳಿಸುತ್ತದೆ ಎಂಬುದಕ್ಕೆ ಪುರಾವೆ ಇಲ್ಲ. ಅರ್ಥಾತ್ ದೊಡ್ಡಕಿ ವಿಗಳು ಇರುವವರೆಲ್ಲಾ by default ಬುದ್ಧಿವಂತರಲ್ಲ ಅಂತಾಯ್ತು.

ಹೊರಗಿನ ಕಿವಿಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು? ಮುಖ್ಯವಾಗಿ ಶಾಲೆಗಳಲ್ಲಿ ನಮ್ಮ ಮೇಷ್ಟ್ರುಗಳು ಈ ಹೊರಕಿವಿಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಈಗಲೂ ನೆನಪಿಸಿಕೊಂಡರೆ ಕಿವಿ ಕೆಂಪಾಗುತ್ತದೆ. ಅಂದ ಹಾಗೆ ಹೆಣ್ಣು ನಾಚಿದರೆ ಕೆನ್ನೆ ಕೆಂಪಾಗುತ್ತೆ. ಗಂಡು ನಾಚಿದರೆ ಕಿವಿ ಕೆಂಪಾಗುತ್ತೆ. ಇಲ್ಲ ಎನ್ನದಿರಿ, ನಮಗೂ ನಾಚಿಕೆ ಅಂತ ಆಗುತ್ತೆ.

ಮನುಷ್ಯನ ಕಿವಿಗಳು ಹಲವಾರು ಆಕಾರಗಳಲ್ಲಿರುತ್ತವೆ. ಅಗಲ ಕಿವಿ, ಪುಟ್ಟ ಕಿವಿ, ಚೂಪಾದ ಕಿವಿಯ ಅಂಚು, ಕಿವಿಯ ಕೆಳಗಿನ ಭಾಗ (lobe) ಗದ್ದಕ್ಕೆ ಅಂಟಿಕೊಂಡಿರುವ ರೀತಿ, ಕಿವಿಯ ಕೆಳಗಿನ ಭಾಗ ಗದ್ದದಿಂದ ಬಿಡಿಸಿಕೊಂಡಿರುವ ರೀತಿ, ಹೀಗೆ ಹತ್ತು ಹಲವು ವಿಧಗಳು. ನಿಮ್ಮ ಕಿವಿಯ ಆಕಾರ ಹೇಗಿದೆ ನೋಡಿಕೊಂಡಿದ್ದೀರಾ?

ಅತೀ ಮಕ್ಕಳಿಗೆ ಕಿವಿಯನ್ನು (lobe) ಚುಚ್ಚುವ ಸಂಪ್ರದಾಯ ಇದೆ. ಹಾಗೆ ಚುಚ್ಚಿದ ಮೇಲೆ ಗಾಯ ಒಣಗುವ ತನಕ ಆ ತೂತು ಹಾಗೆ ಇರಲಿ ಅಂತ ಕಡ್ಡಿಯನ್ನು ಚುಚ್ಚಿ ಇಡುತ್ತಾರೆ. ಕೆಲವೊಮ್ಮೆ ರಿಂಗ್ ಅಥವಾ ಝಂಕಿ ಹೀಗೆ ಆಭರಣಗಳನ್ನು ಹಾಕುವವರೂ ಇದ್ದಾರೆ. ನನ್ನದು ಪುಟಾಣಿ ಕಿವಿ ಇದ್ದು, ಎಲ್ಲಿ ನೋವಾಗುತ್ತದೋ ಅಂತ ಅಂದು ಕಿವಿಯನ್ನೇ ಚುಚ್ಚಲಿಲ್ಲ !

ಗುಡ್ಡಗಾಡಿನ ಹೆಂಗಸರು ಚುಚ್ಚಿದ ಕಿವಿಗೆ ಹಾಕುವ ಆಭರಣಗಳು ಅವರ ಕಿವಿಯನ್ನು ಹರಿದಿರುತ್ತದೆ ಅಥವಾ ಉದ್ದನೆಯ ದೊಡ್ಡ ರಂಧ್ರವನ್ನೇ ಮಾಡಿರುತ್ತದೆ.

ಈಗ ಕಿವಿ ಎಂಬ ಪದಬಳಕೆಯ ಇತರ ವಿಚಾರಗಳನ್ನು ತಿಳಿಯೋಣ.

ಕಿವಿ ಕಚ್ಚೋದು ಅಂದ್ರೆ ಪಕ್ಕದಲ್ಲೇ ಇದ್ದುಗೊಂಡು ಏನೇನೋ ಹೇಳುತ್ತಲೇ ಇರೋದು. ಶಾಲೆಯಲ್ಲಿ ಪಕ್ಕದಲ್ಲೇ ಕೂಡುವ ಸಹ ವಿದ್ಯಾರ್ಥಿ ಆಗಿರಬಹುದು, ಕಚೇರಿಯಲ್ಲಿ ಪಕ್ಕದಲ್ಲಿ ಕೂಡುವ ಸಹ ಕೆಲಸಗಾರ ಇರಬಹುದು ಅಥವಾ ಬಸ್ಸು/ ಟ್ರೈನ್/ ಏರೋಪ್ಲೇನ್ ಪಯಣದಲ್ಲಿ ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕನೇ ಆಗಿರಬಹುದು. ಒಟ್ಟಿನಲ್ಲಿ ತಲೆ ಚಿಟ್ಟು ಹಿಡಿಸುವಂಥ ವ್ಯಕ್ತಿಗಳು.

ಕಿವಿಗೆ ಚುಚ್ಚಿಕೊಡೋದು ಅಂದ್ರೆ ಮತ್ತೊಬ್ಬರ ವಿಷಯವನ್ನು ಇವರ ಕಿವಿಗೆ ಹಾಕಿ, ಇವರಲ್ಲಿ ಕಿಚ್ಚೆಬ್ಬಿಸೋದು. ವಿನಾಕಾರಣ ಇಬ್ಬರ ನಡುವೆ ಜಗಳ ತಂದುಹಾಕುವ ಬುದ್ಧಿ ಇರುವ ಮಂದಿ ಇಂಥ ಕೆಲಸಕ್ಕೆ ಕೈ ಹಚ್ಚುತ್ತಾರೆ. ಕಿವಿಗೆ ಬೀಳುವ ಶಾಕಿಂಗ್ ಸುದ್ದಿಯನ್ನು ಕಿವಿಗೆ ಕಾದ ಸೀಸ ಎಣ್ಣೆ ಸುರಿದಂತಾಯ್ತು ಎಂದು ವರ್ಣಿಸುತ್ತಾರೆ.

ಕೆಲವರಿಗೆ ಜಾಣ ಕಿವುಡು. ಏನಾದರೂ ಕೆಲಸ ಹೇಳಿದರೆ ಅಥವಾ ದೂರು ಇತ್ತರೆ ಕೇಳಿಸಿದರೂ ಕೇಳಿಸದಂತೆಯೇ ಇರುತ್ತಾರೆ.

ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಡುವವರು ನಿಮಗೆ ಗೊತ್ತೇ ?

ನಮ್ಮ ಗುರುಗಳು ಹೇಳುತ್ತಾರೆ "ಸಂಗೀತ ಕಲಿಯುವ ಮುನ್ನ ಆ ಸಂಗೀತವನ್ನು ಕಿವಿಗೆ ಉಣಬಡಿಸಬೇಕು". ಕಿವಿಗಳಿಗೆ ಮೊದಲು ಸಂಗೀತವನ್ನು ಕೇಳುವುದನ್ನು ಅಭ್ಯಾಸ ಮಾಡಿಸಿದಾಗ ಸಂಗೀತವು ತಂತಾನೇ ದೇಹದಲ್ಲಿ ಸಂಚರಿಸಲು ಆರಂಭಿಸುತ್ತದೆ. ಆ ನಂತರ ಸಂಗೀತ ಕಲಿಯುವುದರಲ್ಲಿ ಅರ್ಥವಿದೆ ಅಂತ. listening spurs music ಎನ್ನುತ್ತಾರೆ.

ಸಿನಿಮಾಗಳಲ್ಲಿ ಈ ಕಿವಿ ಸಂಬಂಧೀ ಹಾಡುಗಳು ಅನೇಕ "ಕರೆದರೂ ಕೇಳದೆ...", "ಕೇಳದೆ ನಿಮಗೀಗ ದೂರದಲ್ಲಿ..." "ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ..." ನಿಮಗೇನಾದರೂ ಬೇರೆ ಹಾಡುಗಳು ಕೇಳಿಸಿದ್ದರೆ ಹೇಳಿ...

ಹೊಸ ಹೊಸ ವಿಷಯಗಳನ್ನು ಕೇಳಿಸಿಕೊಳ್ಳಲು ಕಿವಿಗಳು ತೆರೆದಿರಲಿ... ನೊಂದ ಹೃದಯದ ನುಡಿಗಳನ್ನು ಆಲಿಸಲು ಕಿವಿಗಳು ತೆರೆದಿರಲಿ... ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ... ತೆರೆದ ಕಿವಿಗಳು ಬಟಾಬಯಲಿನಂತೆ. ಕೇಳಿಸಿಕೊಳ್ಳಲು ಸಾಧ್ಯವಾಗುವಂಥ ಎಲ್ಲವೂ ಕಿವಿಯೊಳಗೆ ಹೋಗುವುದು ಸಹಜ. ಬುದ್ಧಿಗೆ, ಹೃದಯಕ್ಕೆ ಇರುವ ಮುಖ್ಯದ್ವಾರ ಈ ಕಿವಿಗಳು. ಕೇಳಿಸಿಕೊಂಡಿದ್ದನ್ನ ಹೇಗೆ ಬಳಸಿಕೊಳ್ಳಬೇಕು ಎನ್ನುವುದು ನಮ್ಮ ಕೈಲಿದೆ, ಅಲ್ಲಲ್ಲ ಬುದ್ಧಿಯಲ್ಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ganesha Chaturthi is over... But in streets, ganesha festival just started with the music. It is very hard to listen hard sound. So today's topic is Ears.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more