• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಟಕ ಮುಗಿದ ಮೇಲೆ ಕಳಚಿ ಇಡುವ ಪರಿ; ಎಲ್ಲದರಲ್ಲೂ ಶಿಸ್ತಿರಲಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಒಂದು ರಂಗಸಜ್ಜಿಕೆ ಅಲಿಯಾಸ್ ಸ್ಟೇಜ್. ಒಂದು ನಾಟಕ ಆ ರಂಗದ ಮೇಲೆ ಆಡಬೇಕು ಎಂದಿರುವಾಗ ರಂಗ ಸಿದ್ಧವಾಗಬೇಕು. ನಾಟಕ ಮುಗಿದ ಮೇಲೆ ಆ ರಂಗದ ಮೇಲಿನ ರಂಗಪರಿಕರಗಳನ್ನು ಇಳಿಸಲೇಬೇಕು. ಇದ್ದ ಹಾಗೇ ಬಿಟ್ಟು ಹೊರಡಲಾಗದು. ರಂಗದ ವೇಷ ಕಳಚಲೇಬೇಕು.

ಈಗ ಒಂದು ಯಕ್ಷಗಾನದ ಆಟವನ್ನೇ ತೆಗೆದುಕೊಂಡರೆ, ಪಾತ್ರಧಾರಿಗಳು ಆಯಾ ದಿನದ ವೇಷವನ್ನು ಕಳಚಿ ಮುಂದಿನ ಆಟಕ್ಕೆ ಮತ್ತೆ ವೇಷ ಹಾಕಿಕೊಳ್ಳಬೇಕು.

ನಿಮಗೆ ಬಕೆಟ್ ಬಗ್ಗೆ ಗೊತ್ತಾ?, ಜೀವನದಲ್ಲಿ ಕೊಡದಂತಿರಬೇಕೆ? ಬಕೀಟಿನಂತಿರಬೇಕೆ?

ಇದರಂತೆಯೇ ಸಿನಿಮಾದ ಪಾತ್ರಕ್ಕೆ ವೇಷ ಧರಿಸಿದವರೂ ಅಂದಂದಿನ ವೇಷವನ್ನು ಕಳಚಿ ಮರು ಶೂಟಿಂಗ್ ಗೆ ಮತ್ತೆ ವೇಷ ಧರಿಸುತ್ತಾರೆ. ಒಂದೇ ದಿನದಲ್ಲಿ ಬೇರೆ ಬೇರೆ ಬಗೆಯ costume ಹಾಕಬೇಕು ಎಂದಾಗ ಅವಶ್ಯಕತೆಗೆ ತಕ್ಕಂತೆ ವೇಷಗಳನ್ನು ಕಳಚುವುದು, ಹಾಕುವುದು ನಡೆಯುತ್ತದೆ.

ಮೇಲಿನ ವೇಷಗಳ ಸನ್ನಿವೇಶಗಳು ಎಲ್ಲರಿಗೂ ಸಲ್ಲೋದಿಲ್ಲ ಎನ್ನೋಣ. ರಂಗವನ್ನೇ ಹತ್ತದವರು, ಆಟಗಳನ್ನು ನೋಡುವುದಕ್ಕೆ ಆ ಸಮಯಕ್ಕೆ ತೆರಳುತ್ತಾರೆ, ಮುಗಿದ ಮೇಲೆ ವಾಪಸ್ಸಾಗುತ್ತಾರೆ ಅಷ್ಟೇ. ರಂಗದ ಮೇಲಿನ ಅಥವಾ ತೆರೆಯ ಹಿಂದಿನ ವಿಚಾರಗಳ ಮುಂಚಿನ ಹಾಗೂ ಮುಂದಿನ ಅಂಶಗಳ ಬಗ್ಗೆ ಅವರುಗಳು ತಲೆಯನ್ನೇ ಕೆಡಿಸಿಕೊಳ್ಳದೇ ಇರಬಹುದು. ಹೀಗೆಂದ ಮಾತ್ರಕ್ಕೆ ಇವರುಗಳು ವೇಷ ಧರಿಸುವುದೇ ಇಲ್ಲ ಎನ್ನುವಿರಾ?

ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಲಿರುವಾಗ ಒಬ್ಬ ಹೆಣ್ಣು ಸರ್ವಾಲಂಕಾರ ಭೂಷಿತಳಾಗಿ ಹೋಗುತ್ತಾಳೆ ಎಂದುಕೊಳ್ಳಿ. ಅಲ್ಲಿಂದ ಬಂದ ಮೇಲೆ ಆಕೆ ಆ ವೇಷ ಕಳಚಲೇಬೇಕಲ್ಲವೇ? ಕನಿಷ್ಠ ಎಂದರೂ ಆಕೆಯ ಮರುದಿನದ ಅಲಂಕಾರಕ್ಕೆಂದಾದರೂ ಹಿಂದಿನ ವೇಷ ಕಳಚಲೇಬೇಕು ಎನ್ನೋಣ.

ಹುಬ್ಬುಗಳ ಬಗ್ಗೆ ತಿಳಿಯುತ್ತ ಹುಬ್ಬುಗಳಿಂದಲೇ ಕಲಿಯೋಣ...

ಆಫೀಸಿಗೆ ತೆರಳುವ ಒಬ್ಬ ಗಂಡು ಠಾಕುಠೀಕಾಗಿ ಇಸ್ತ್ರಿ ಮಾಡಿರುವ ಪ್ಯಾಂಟು ಷರಟು, ಬಹುಶಃ ಒಂದು ಕೋಟು ಮತ್ತು ಟೈ ಧರಿಸಿ ಹೋದವರು, ಮನೆಗೆ ಬಂದ ಮೇಲೆ ದಿರಿಸು ಬದಲಿಸುವರು ಅಲ್ಲವೇ? ವೇಷ ಧರಿಸಲು ರಂಗ ಇರಲೇಬೇಕು ಅಂತೇನಿಲ್ಲ. ದೊಡ್ಡವರು ಹೇಳಿರುವಂತೆ ಈ ಜಗವೇ ಒಂದು ನಾಟಕರಂಗ, ನಾವೆಲ್ಲಾ ನಟ ನಟಿಯರುಗಳು ಅಂತ. ಹಾಗಾಗಿ ವೇಷ ಧರಿಸುತ್ತೇವೆ, ವೇಷ ಕಳಚುತ್ತೇವೆ.

ಹಾಕಿದ ವೇಷವನ್ನು ಕಳಚಿಡುವುದೂ ಒಂದು ಕಲೆ.

ಮೇಲಿನ ಸನ್ನಿವೇಶಗಳನ್ನು ಪರಿಶೀಲಿಸಿದರೆ ಹಲವೊಂದು ಸಾಮಾನ್ಯ ಅಂಶಗಳು ಕಂಡುಬರುತ್ತವೆ. ಯಾವುದು ಮರುಬಳಕೆಯಾಗಬಹುದೋ ಅಂಥವು ಸಂರಕ್ಷಿಸಲ್ಪಡುತ್ತದೆ. ಯಾವುದೋ ಬೇಕಿಲ್ಲವೋ ಅವನ್ನು ತ್ಯಾಜ್ಯ ಎಂದು ಪರಿಗಣಿಸಿ ಬಿಸಾಡುತ್ತೇವೆ ಇಲ್ಲವೆಂದರೆ ತೊಡೆದು ಕೈ ತೊಳೆಯುತ್ತೇವೆ. ಮುಖಕ್ಕೆ ಬಳಿದುಕೊಂಡ ಬಣ್ಣ ಮರು ಉಪಯೋಗವಾಗಲಾರದು ಅಂತ ತೊಳೆದು ಶುಚಿಯಾಗುತ್ತೇವೆ. ಧರಿಸಿದ್ದ ಬಟ್ಟೆಯನ್ನು ಒಗೆದು ಶುಚಿ ಮಾಡಿ ಧರಿಸುತ್ತೇವೆ ಅಥವಾ ಮಡಚಿ ಎತ್ತಿಡುತ್ತೇವೆ.

ಈ ಮಾತು ಎದ್ದ ಹಾಸಿಗೆ ಬಟ್ಟೆಯ ಬಗ್ಗೆ ಆಗಬಹುದು, ಉಟ್ಟ ಮಡಿಯಾಗಬಹುದು, ತೊಟ್ಟ ಸೀರೆಯಾಗಬಹುದು, ಕಟ್ಟಿದ ಪಂಚೆಯಾಗಬಹುದು ಅಥವಾ ಏನೇನೆಲ್ಲಾ ದೈನಂದಿನ ಬಳಕೆಯ ಪದಾರ್ಥಗಳಾಗಿರಬಹುದು. ಕಳಚಿಟ್ಟ ವಸ್ತುಗಳು ಏನೇ ಆದರೂ ಅದನ್ನು ಮರುಬಳಕೆಗೆ ಎತ್ತಿಡಲು ಒಂದು ರೀತಿ ನೀತಿ ನಿಯಮ ಅಂತ ಇರುತ್ತೋ ಇಲ್ಲವೋ, ಆದರೆ ನಿಯಮ ಹಾಕಿಕೊಂಡು ಪಾಲಿಸಿದರೆ ಒಳಿತು. ಹಾಗೆ ಎತ್ತಿಡಲು ಸೋತಾಗ ಮರುದಿನ ಬೆಳಿಗ್ಗೆ 'ನನ್ನ ಪರ್ಸ್ ಎಲ್ಲಿ? ನನ್ನ ವಾಚ್ ಎಲ್ಲಿ? ಸಾಕ್ಸ್ ಎಲ್ಲಿ? ಅದೆಲ್ಲಿ ಇದೆಲ್ಲಿ ಅನ್ನೋದು ಸಾಮಾನ್ಯ ನೋಟ.

ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಕಳಚಿಟ್ಟ ಬಂಗಾರದ ಬಳೆ, ಸರ ಇನ್ಯಾವುದೇ ಬೆಲೆಬಾಳುವ ವಸ್ತುಗಳು ಇಟ್ಟ ಜಾಗದಲ್ಲಿ ಕಾಣದೆ ಹೋದಾಗ ಆಗುವ ಅವಘಢಗಳು, ಸಂಬಂಧಗಳೇ ಹಾಳಾಗುವ ತನಕ ಬೆಳೆಯಬಹುದು. ಆ ನಂತರ ಎಲ್ಲಿಟ್ಟೆ ಎಂಬುದನ್ನು ನೆನಪಿಸಿಕೊಂಡು ಮತ್ತು ಅವು ದೊರಕಿದಾಗ ಬಹುಶ: ಸಂಬಂಧಗಳಲ್ಲಿ ಬಿರುಕು ಹೆಚ್ಚಾಗಿಯೇ ಮೂಡಿದ್ದು ಸರಿಪಡಿಸಲಾಗದಂತೆ ಆಗಿರಬಹುದು. ಇಂಥವಕ್ಕೆ ಅವಕಾಶ ನೀಡಬೇಕೆ?

ಒಂದು ಮನೆಯ ಚಿತ್ರಣ ತೆಗೆದುಕೊಂಡರೆ ಪ್ರತಿಯೊಂದು ವಸ್ತುವಿಗೂ ಆಯಾ ಜಾಗ ಅಂತ ಇದ್ದರೆ ಅದನ್ನು ಸರಿಯಾಗಿ ಬಳಸಿಕೊಂಡು ಕಳಚಿಟ್ಟ ವಸ್ತುಗಳನ್ನು ಆಯಾ ಜಾಗಕ್ಕೆ ಸೇರಿಸಿದರೆ ಒಂದೋ ನಮ್ಮಲ್ಲಿ ಶಿಸ್ತು ಮೂಡುತ್ತದೆ ಮತ್ತೊಂದು ಎಂದರೆ ಸಮಯ ಉಳಿತಾಯವಾಗುತ್ತದೆ, ಕಿರಿಕಿರಿ ಕಡಿಮೆಯಾಗುತ್ತದೆ, ಬಿಪಿ ಏರೋದು ಕಡಿಮೆಯಾಗುತ್ತದೆ, ಮನೆಯ ವಾತಾವರಣದಲ್ಲಿ ಅಶಾಂತಿ ಕಡಿಮೆಯಾಗುತ್ತದೆ. ಹೀಗೇ ಹತ್ತು ಹಲವಾರು ಧನಾತ್ಮಕ ಅಂಶಗಳು ನೆಮ್ಮದಿಯ ಜೀವನಕ್ಕೆ ನಾಂದಿ ಹಾಡುತ್ತದೆ ಎಂಬುದೇ ಕಲಿಕೆ.

ಸಖ್ಯವಿದ್ದರೆ ನಿರ್ಜೀವ ವಸ್ತುಗಳಲ್ಲೂ ಕಾಣುವುದು ಜೀವಂತಿಕೆ

ಉಟ್ಟಬಟ್ಟೆಯನ್ನು ಇದ್ದಲ್ಲೇ ಬಿಸುಟು ಮುನ್ನೆಡೆಯುವ ಪರಿ ಎಂದರೂ ಒಂದೇ, ಇದ್ದಲ್ಲೇ ಪೊರೆಬಿಟ್ಟು ತೆರಳುವ ಹಾವು ಎಂದರೂ ಒಂದೇ. ನಮ್ಮ ಕೆಲಸವನ್ನು ಮತ್ಯಾರೋ ಏಕೆ ಪೂರೈಸಬೇಕು? ಅವಕ್ಕೆ ಒಂದೈದು ನಿಮಿಷ ವ್ಯಯಿಸಿದರೆ ನಮಗೂ ಒಳಿತು. ಇದರಿಂದ ಒಳಿತು ಇರುವುದರಿಂದ 'ವ್ಯಯ' ಎನ್ನದೆ 'ಗಳಿಕೆ' ಎನ್ನುವುದೇ ಚೆನ್ನ.

ಈ ದಿನಗಳಲ್ಲಿನ ಮುಂದಿನ ಕೆಲಸ ಎಂದರೆ ಬೊಂಬೆ ಹಬ್ಬಕ್ಕೆ ಅಲಂಕೃತವಾದ ಮನೆಯ ಒಂದು ಭಾಗ. ಚಿಕ್ಕ ಮನೆ, ದೊಡ್ಡ ಮನೆ ಎಂಬುದರ ಹೊರತಾಗಿಯೂ ಬೊಂಬೆಗಳನ್ನು ಕೂರಿಸಿದಾಗ ಜೋಡಿಸಿದಾಗ ಆ ಸ್ಥಳವು ಬೇರಾವುದಕ್ಕೂ ಬಳಸಲಾಗದಂತೆ ಲಾಕ್ ಆಯ್ತು ಅಲ್ಲವೇ? ವಿಜಯದಶಮಿ ಮುಗಿಯಿತು, ಸಾಲು ರಜೆಗಳೂ ಮುಗಿಯಿತು ಎಂದಾದ ಮೇಲೆ ಮತ್ತೆ ಕಚೇರಿಗಳಿಗೆ ಮನಸ್ಸಿಲ್ಲದ ಮನಸ್ಸಿನಿಂದ ಹೋಗಲೇಬೇಕು. ಒಂದೆರಡು ದಿನಗಳು ಈ ಅಲಂಕಾರಗಳು ಹೀಗೇ ಇರಲಿ ಅಂತ ವಾರಾಂತ್ಯದವರೆಗೂ ಎಳೆದು ಕೊನೆಗೆ ಬೊಂಬೆಗಳನ್ನು ಮತ್ತೆ ಪ್ಯಾಕ್ ಮಾಡಿ ಪೆಟ್ಟಿಗೆಗೆ ಸೇರಿಸಿ ಎತ್ತಿಡುವುದು ನಡೆಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬೊಂಬೆಗಳನ್ನು ಪ್ಯಾಕ್ ಮಾಡಿ ಎತ್ತಿಡುವ ಪರಿ. ಕೆಲಸವಾಯ್ತು ಅಂತ ಕಸದಂತೆ ಎಲ್ಲೂ ತುಂಬಿ ಇಡುವುದಿಲ್ಲ ಅಲ್ಲವೇ? ಇದೇ ಶ್ರದ್ಧೆ ಮಿಕ್ಕ ಕಡೆಗೂ ಸಲ್ಲಲಿ.

ದಸರಾ ಹಬ್ಬ ಮುಗಿದು ಅಡ್ಡಾಡಿ, ಓಡಾಡಿ, ಉಂಡಾಡಿ, ಚೆಲ್ಲಾಡಿ ನಗರವನ್ನು ಗಲೀಜು ಮಾಡಿ ಕಚೇರಿಗೆ ಅದೇ ಹಾದಿಯಲ್ಲಿ ತೆರಳುವ ಮುನ್ನ ಈ ಕಸದಲ್ಲಿ ನಮ್ಮ ಪಾಲೆಷ್ಟು ಎಂದು ಒಮ್ಮೆ ಆಲೋಚಿಸೋದು ಒಳ್ಳೆಯದು. ಸಂಭ್ರಮಿಸದಿರಿ ಎನ್ನುವುದು ಸರಿಯಲ್ಲ ಆದರೆ ಆ ನಂತರದ ಕೆಲಸದಲ್ಲೂ ಕೊಂಚ ಕೈ ಹಾಕಿದರೆ ಕೆಲಸ ಬೇಗ ಮುಗಿಯುತ್ತೆ ಅಂತಷ್ಟೇ. ಮಾಡಬೇಕಾದ್ದು ಇಷ್ಟೇ, ನಮ್ಮ ಕಸವನ್ನು ನಿಂತಲ್ಲೇ ಎಸೆಯದೇ ಕಸದ ಬುಟ್ಟಿಗೆ ಹಾಕಿದರೂ ಸಾಕು, ಅದೆಷ್ಟೋ ಕಸ ಕಡಿಮೆಯಾಗುತ್ತದೆ.

ಈ ಮಾತುಗಳನ್ನು ಹೇಳುವಾಗ ಕಳೆದ ತಿಂಗಳಲ್ಲಿ ಕೊನೆಗೊಂಡ ಸಂಭ್ರಮ ನೆನಪಿಸಿಕೊಳ್ಳದೆ ಇದ್ದರೆ ಹೇಗೆ? ಗಣಪನನ್ನು ಕೊಂಡು ತರುವಾಗ ಇದ್ದ ಸಂಭ್ರಮ, ಪೂಜಿಸುವಾಗ ಇದ್ದ ಭಕ್ತಿ, ಮನೆಯಲ್ಲೋ, ಪೆಂಡಾಲಿನಲ್ಲೋ ಇರುವ ತನಕ ಇದ್ದ ಸಂಭ್ರಮಗಳು ವಿಸರ್ಜನೆಯ ಹೊತ್ತಿಗೆ ಎಲ್ಲಿ ಹೋಯ್ತು. ತಮಗೆ ಬೇಡ ಎಂದಾದ ತ್ಯಾಜ್ಯವನ್ನು ಸೂಕ್ತ ರೀತಿ ಕಳಚಿಟ್ಟು ಸರಿಯಾಗಿ ಮಾಡಿರಬಹುದಿತ್ತು. ಬದಲಿಗೆ ಬೀದಿಬದಿಯಲ್ಲಿ ದೈವಕ್ಕೆ ಅನಾಥ ಮನೋಭಾವ ಮೂಡಿಸುವಂಥ ಕ್ರಿಯೆಯ ಅವಶ್ಯಕತೆ ಏನಿತ್ತು?

ಮುಚ್ಚಿದ್ದ ಬಾಗಿಲನ್ನು ತೆರೆದ ಮೇಲೆ ಮತ್ತೆ ಸರಿಯಾಗಿ ಮುಚ್ಚದೆ ಹೋಗುವುದು, ಟೇಬಲ್ ಗೆ ಹಾಕಿದ ಕುರ್ಚಿಯನ್ನು ತೆಗೆದಾಗ ಮತ್ತೆ ವಾಪಸ್ ಸೇರಿಸದೇ ಹೋಗುವುದು, ಇತ್ಯಾದಿಗಳು ಅರೆ ಕೆಲಸವನ್ನು ಸೂಚಿಸುತ್ತದೆ. ಇಂಥ ಚಿಕ್ಕಪುಟ್ಟ ಕೆಲಸಗಳತ್ತ ಗಮನಕೊಡುತ್ತಾ ಅವನ್ನು ಪೂರ್ಣಗೊಳಿಸುತ್ತಾ ಸಾಗಿದಾಗ ಅವು ಅಭ್ಯಾಸವಾಗುತ್ತದೆ.

ಕಳಚಿಡುವುದು ಎಂಬುದನ್ನು ಬೇರ್ಪಡಿಸುವುದು ಎಂದೂ ಅರ್ಥೈಸಿಕೊಂಡರೆ ಆ ಬೇರ್ಪಡುವಿಕೆಗೂ ಒಂದು ರೀತಿ ನೀತಿ ನಿಯಮ ಅಂತ ಹಾಕಿಕೊಳ್ಳಿ. ಇದು ಸಲ್ಲದ ಸಾಮಾಜಿಕ ತಾಣವೇ ಆಗಿರಲಿ, ಬಿರುಕು ಮೂಡಿದ ಸಂಬಂಧವೇ ಆಗಲಿ, ಅವಧಿ ಮುಗಿಸಿದ ಜವಾಬ್ದಾರಿಯೇ ಆಗಲಿ ಯಾವುದೇ ಸರಿ exit policy ಸೂಕ್ತವಾಗಿರಲಿ. ಈ ಮಾತು ಇಹ ಲೋಕವನ್ನೇ ತ್ಯಜಿಸಿ ಸಾಗುವುದಕ್ಕೂ ಹೊಂದುತ್ತದೆ. ಇದೂ ಒಂದು ಆಟವೇ ತಾನೇ? ಆದರೆ ಆಟ ಮುಗಿದ ಮೇಲೆ ವೇಷ ಕಳಚಿ ಇಡೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ಒಂದು ಹಂತದ ನಂತರ ಭವಬಂಧನಗಳನ್ನು ಕ್ರಮೇಣ ಕಳಚಿಡುತ್ತಾ ಸಾಗಬೇಕು. ಇಲ್ಲವಾದರೆ ಕಿರಿಯರು ನಮ್ಮ ಕಡೆಗಣಿಸುತ್ತಿದ್ದಾರೆ ಎಂಬ ನೋವು ಅನವಶ್ಯಕವಾಗಿ ಕಾಡುತ್ತ, ಮನೆಯಲ್ಲಿ ಶಾಂತಿ ಕೆಡುತ್ತದೆ.

ಸದ್ಯಕ್ಕೆ ಬರಲೇ?

English summary
Practicing to adopt discipline in every on small tasks in life will lead to maintain daily life easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X