ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ...

By ಶ್ರೀನಾಥ್ ಭಲ್ಲೆ
|
Google Oneindia Kannada News

ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ

ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ

ಕವಿರತ್ನ ಕಾಳಿದಾಸ ಚಲನಚಿತ್ರದಲ್ಲಿನ ದಿಂಡಿಮ ಕವಿ ಯಾರಿಗೆ ತಾನೇ ನೆನಪಿಲ್ಲಾ? ಸಾಲೊಂದನು ಹೇಳಿ ಪೂರ್ಣಗೊಳಿಸುವಂತೆ ಸವಾಲೊಡ್ಡುವಾಗ ಢಮ ಢಮ ಅಂತ ತನ್ನ ಢಮರು ಬಾರಿಸುತ್ತಾನೆ. ಕೊಟ್ಟ ಸಮಯ ಹತ್ತಿರ ಬಂದಾಗ ಮತ್ತೊಮ್ಮೆ ಢಮರು ಬಾರಿಸುತ್ತಾ ಬಂದು "ಕೊಟ್ಟಿದ್ದ ಘಳಿಗೆ ಮುಗಿದು ಇಟ್ಟಿದ್ದ ಘಳಿಗೆ ಬಂದಾಯ್ತು, ಇನ್ನೂ ಬಾಯಿ ಬಿಡಲಿಲ್ಲವೇ ನಿನ್ನ ಭಟ್ಟಂಗಿಗಳು' ಎನ್ನುವ ಡೈಲಾಗ್ ಬಹುಶಃ ಕನಸಿನಲ್ಲಿ ಕೇಳಿದರೂ, ಪೂರ್ಣಗೊಳಿಸುವಷ್ಟು ಸೊಗಸಾಗಿ ಮೂಡಿಬಂದಿತ್ತು. ಇಂದಿನ ವಿಷಯವೇ ಈ ಕಮಲೇ ಕಮಲೋತ್ಪತ್ತಿ.

ಶ್ಲೋಕದ ಸಾರ ಸಿಂಪಲ್ ಆಗಿ ಹೇಳುವುದು ಎಂದರೆ ಕಮಲದಲ್ಲಿ ಕಮಲ ಅರ್ಥಾತ್ ಮುಖ ಕಮಲದಲ್ಲಿ ಕಣ್ಣು ಎಂಬ ಕಮಲ. ಸರಿಯಾಗಿ ಹೇಳಿದರೆ ಕಣ್ಣುಗಳೆಂಬ ಕಮಲಗಳು. ಮೊದಲ ಸಾಲು ಕೇಳಿದ ಕವಿವರೇಣ್ಯರಿಗೆ ಅರ್ಥವಾಗದೆ ತಲೆಕೆಡಿಸಿಕೊಳ್ಳುವಂತೆ ಆಗುವುದೇ "ಕಮಲದಲ್ಲಿ ಕಮಲ' ಹೇಗಾಗುತ್ತದೆ ಅಂತ. ಈ ಸನ್ನಿವೇಶದ ಮೂಲ ಉದ್ದೇಶ ಎಂದರೆ think outside the box ಎಂಬುದು. ಈ ಬರಹದಲ್ಲಿ ನಾವೂ ಸಿಕ್ಕಾಪಟ್ಟೆ ಡಬ್ಬದಾಚೆ ನಿಂತೇ ಈ ಸಾಲನ್ನು ಅರ್ಥೈಸಿಕೊಳ್ಳೋಣ.

ಶ್ರೀನಾಥ್ ಭಲ್ಲೆ ಅಂಕಣ: ಇದ್ದರೂ ಇರದಂತೆ ಇರುವುದೇ blind spotಶ್ರೀನಾಥ್ ಭಲ್ಲೆ ಅಂಕಣ: ಇದ್ದರೂ ಇರದಂತೆ ಇರುವುದೇ blind spot

ಡಬ್ಬದಾಚೆ ನಿಂತು ಆಲೋಚಿಸುವುದು ಹೇಗೆ ಅಂತ ಒಂದು ಪುಟ್ಟ ಉದಾಹರಣೆಯೊಂದಿಗೆ ಶುರು ಮಾಡೋಣ. ಕಮಲೇ ಕಮಲೋತ್ಪತ್ತಿಃ ಎಂಬುದು ಕಣ್ಣಾರೆ ಎಲ್ಲಿ ಕಾಣಬಹುದು. ತುಂಬಾ ಸಿಂಪಲ್. ತಾಯಿ ಕಾಂಗರೂ ಪ್ರಾಣಿಯು ತನ್ನ ಹೊಟ್ಟೆಯ ಮೇಲಿರುವ ಚೀಲದಲ್ಲಿ ತನ್ನ ಪುಟ್ಟ ಮರಿಯನ್ನು ಕೂರಿಸಿಕೊಂಡು ಓಡಾಡುವುದನ್ನು ಕಂಡಾಗ ಕಾಂಗರೂನಲ್ಲಿ ಕಾಂಗರೂ ಅಂತ ಅನ್ನಿಸಿದರೆ ಅದೇ ಕಮಲೇ ಕಮಲೋತ್ಪತ್ತಿಃ. ಹುಲಿ ಹೊಟ್ಟೆಯಲ್ಲಿ ಹುಲಿ ಹುಟ್ಟದೇ ನರಿ ಹುಟ್ಟುತ್ತದೆಯೇ? ಎನ್ನುತ್ತಾರಲ್ಲ ಅದೂ ಕೂಡ ಕಮಲೇ ಕಮಲೋತ್ಪತ್ತಿಃ. ಕಮಲದಲ್ಲಿ ಮಲ್ಲಿಗೆ ಅರಳೋದಿಲ್ಲ ನೋಡಿ.

ಈಗ ಬಹುಶಃ ಒಂದು ಐಡಿಯಾ ಬಂದಿರಬಹುದು ಮುಂದಿನ ವಿಚಾರಗಳು ಹೇಗೆ ಸಾಗಬಹುದು ಅಂತ. ಹೌದು, ಕಮಲಾ ಎಂಬ ಹೆಣ್ಣು ಗರ್ಭ ಧರಿಸಿರುವುದನ್ನು ವರ್ಣಿಸುವ ಬಗೆ ಹೇಗೆ? ಗರ್ಭ ಧರಿಸಿದ್ದಾಳೆ, Carrying, Pregnant ಇತ್ಯಾದಿ ಅದಾವ ಬಗೆಯಾದರೂ ಸರಿಯೇ ಆದರೆ ಒಟ್ಟಾರೆ ಇದರರ್ಥ ಇಷ್ಟೇ, "ಕಮಲೇ ಕಮಲೋತ್ಪತ್ತಿಃ'.

Srinath Bhalle Column: The Face In The Lotus

ಕೆಲವೊಮ್ಮೆ ವಿಡಿಯೋಗಳನ್ನು ನೋಡಿರ್ತೀರಿ. ತಮ್ಮ ಮಕ್ಕಳು ಟಿವಿಯಲ್ಲಿ ನೋಡುವಾಗ ಅವರ ಮುಖದಲ್ಲಿ ಆಗುವ ಭಾವನೆಗಳನ್ನು ಸೆರೆ ಹಿಡಿದು ಹಂಚಿಕೊಂಡಿರುತ್ತಾರೆ. ಉದಾಹರಣೆಗೆ ಟಾಮ್ ಅಂಡ್ ಜೆರ್ರಿ ಎಪಿಸೋಡಿನಲ್ಲಿ ನಡೆಯುವ ಬೆಕ್ಕು-ಇಲಿ ಕೀಟಲೆಯ ಕಾಳಗ ನೋಡುತ್ತಾ ಯಾರದ್ದೇ ಮೊಗದಲ್ಲಿ ಆ ಹಾಸ್ಯ ಅರಳುತ್ತದೆ. ಅವರಲ್ಲಾದ ಭಾವನೆಗಳನ್ನು ನೋಡುವಾಗ ನಮಗೂ ಖುಷಿಯಾಗುತ್ತದೆ. ನಾವೂ ಮೊಗ ಅರಳಿಸುತ್ತೇವೆ. ಇದೂ ಒಂದು ರೀತಿ ಕಮಲೇ ಕಮಲೋತ್ಪತ್ತಿಃ ಅಲ್ಲವೇ? ಒಂದು ಮೊಗವೆಂಬ ಕಮಲದಲ್ಲಿ ಮತ್ತೊಂದು ಕಮಲ ಅರಳುತ್ತಿಲ್ಲ ಆದರೆ ಒಂದು ಕಮಲದಿಂದ ಮತ್ತೊಂದು ಕಮಲ ಅರಳುತ್ತಿದೆ.

ದಿನ ಬೆಳಗಾದರೆ ವಾಟ್ಸಾಪ್ ತುಂಬಾ ಬರೀ ಗುಡ್ ಮಾರ್ನಿಂಗ್ ಅಂತ ಮೆಸೇಜ್ ನೋಡಿ ನೋಡಿ ತಲೆ ಕೆಡುತ್ತದೆ ಎನ್ನುವುದು ಸಾಮಾನ್ಯ. ಒಂದೆರಡು ಆಯಾಮದಲ್ಲಿ ಇದನ್ನು ಅರ್ಥೈಸಿಕೊಳ್ಳೋಣ. ಬೇರಾವುದೇ ರೀತಿ ಒಳಿತು-ಕೆಡುಕುಗಳಿಗೆ ಸ್ಪಂದಿಸದೇ ಬರೀ ಗುಡ್ ಮಾರ್ನಿಂಗ್'ಗೆ ಸೀಮಿತವಾದವರ ಬಗ್ಗೆ ಬೇಸರದಿಂದ ಆ ಮೆಸೇಜ್ ಬಗ್ಗೆಯೂ ಬೇಸರ ಮೂಡಿಸಿಕೊಳ್ಳುವುದರ ಹಿಂದೆ ಆ ಮೆಸೇಜ್ ಬಗ್ಗೆ ಬೇಸರವಿಲ್ಲದೇ ಆ ವ್ಯಕ್ತಿಯ ಬಗೆಗಿನ ಬೇಸರದಿಂದ ಉಂಟಾದ indirect ಬೇಸರವದು.

ಈ ದಿನಗಳಲ್ಲಿ, ಒಂದು ರೂಮಿನಲ್ಲಿರುವವರನ್ನೇ ಮತ್ತೊಂದು ರೂಮಿನಲ್ಲಿರುವವರು ಭೇಟಿಯಾಗದ ಈ ದಿನಗಳಲ್ಲಿ, ಕನಿಷ್ಠ ಗುಡ್ ಮಾರ್ನಿಂಗ್ ಮೆಸೇಜ್ ನೋಡುವಾಗ "ಓ! ಇವರಿನ್ನೂ ಜೀವಂತವಾಗಿದ್ದಾರೆ ಅಂತ ಅರ್ಥವಾಗುತ್ತದೆ ಅಲ್ಲವೇ? ಒಳಿತೇ ಆಯಿತು ತಾನೇ?'

ಇನ್ನೊಂದು ಆಯಾಮದಲ್ಲಿ ನೋಡುವುದೇ, ಕಮಲೇ ಕಮಲೋತ್ಪತ್ತಿಃ. ಒಂದು ಗುಡ್ ಮಾರ್ನಿಂಗ್ ಮೆಸೇಜ್ ನಿಮ್ಮ ಮನಸ್ಸಿನಲ್ಲಿ ಒಂದು ಆನಂದ ಮೂಡಿಸಿ ನೀವೂ ಅದಕ್ಕೆ ಉತ್ತರಿಸುವ ಯತ್ನ ಮಾಡಿದಾಗ ಅಲ್ಲೊಂದು ಸ್ನೇಹ ಮುಂದುವರೆಯುತ್ತದೆ. ನಾವೆಲ್ಲರೂ ಕ್ಷೇಮ, ನಿಮ್ಮ ಕ್ಷೇಮಕ್ಕೆ ಕಾಗದ ಬರೆಯಿರಿ ಎಂಬ ಸಾಲುಗಳು ಅಂದು ಇದ್ದವು. ಇಂದು ಎಲ್ಲವೂ ಹೃಸ್ವವಾಗಿದೆ. ಈ ಗುಡ್ ಮಾರ್ನಿಂಗ್ ಎಂಬೆರಡು ಪದಗಳು ಅಷ್ಟೂ ಅರ್ಥ ಕೊಡುತ್ತಿದೆ ಎಂದುಕೊಂಡಾಗ ಅವರ ಕಮಲವದನದಿಂದ ನಮ್ಮ ಕಮಲವದನವೂ ಅರಳಿದಂತಾಯ್ತು.

ಒಂದು ಸಂಗೀತ ಸಂಜೆಯಲ್ಲಿ ಪಾಲ್ಗೊಂಡಿದ್ದೀರಿ ಅಂದುಕೊಳ್ಳಿ. ಸಾಮಾನ್ಯವಾಗಿ ಇಲ್ಲಿನ ಸನ್ನಿವೇಶ ಹೇಗೆ ಎಂದರೆ, ಸ್ಟೇಜಿನ ಮೇಲಿರುವವರಿಗೆ ಪ್ರೇಕ್ಷಕರೂ ತಮ್ಮೊಂದಿಗೆ ದನಿಗೂಡಿಸುವುದೋ ಅಥವಾ ನರ್ತನವನ್ನೋ ಮಾಡಿದಾಗ ಹುಮ್ಮಸ್ಸು ಏರುತ್ತದೆ. ನಾ ಹಾಡಲು ನೀವೂ ಹಾಡಬೇಕು ಎಂದೇ ಅವರು ಬಯಸೋದು. ಅರ್ಥಾತ್ ಇದೂ ಒಂದು ರೀತಿ ಕಮಲೇ ಕಮಲೋತ್ಪತ್ತಿಃ. ಕೆಲವೊಮ್ಮೆ ಒಂದು ಸಾಲು ಹೇಳಿದ ಹಾಡುಗಾರ ಆ ಮುಂದಿನ ಸಾಲಿಗೆ ತನ್ನ ಮೈಕನ್ನು ಪ್ರೇಕ್ಷಕರ ಕಡೆ ತಿರುಗಿಸುತ್ತಾರೆ. ಇದೇ ಪಾಲ್ಗೊಳ್ಳುವಿಕೆ.

ಒಂದು ಕಮಲವದನದಿಂದ ಮತ್ತೊಂದು ಕಮಲವದನವೂ ಅರಳುತ್ತದೆ. ಆದರೆ ಇದನ್ನೇ ಒಂದು ಸಂಗೀತ ಕಚೇರಿಯಲ್ಲಿ ಯಾರೂ ಬಯಸುವುದಿಲ್ಲ. ಸ್ಟೇಜಿನ ಮೇಲಿರುವವರು ಬಯಸೋದೇ ಗಲಭೆ ಮಾಡದ ಪ್ರೇಕ್ಷಕರು. ಕಣ್ಮುಚ್ಚಿ ಆಲಿಸಿ, ಮೆಲ್ಲಗೆ ನಿಮ್ಮದೇ ತೊಡೆಯ ಮೇಲೆ ತಾಳ ಹಾಕಿ, ಅಥವಾ ಆಲಿಸುತ್ತಾ ತಲೆದೂಗಿ ಅಷ್ಟೇ. ಹಾಡು ಮುಗಿದಾಗ ಜೋರಾದ ಚಪ್ಪಾಳೆ. ನಿಮ್ಮ ಈ ಪ್ರತಿಕ್ರಿಯೆಗಳೇ ಕಮಲೇ ಕಮಲೋತ್ಪತ್ತಿಃ. ಅವರೊಂದಿಗೆ ನೀವೂ ಹಾಡಿದರೆ ಅಥವಾ ಆ ಮೈಕ್ ನಿಮ್ಮ ಕಡೆ ತಿರುಗಲಿ ಅಂತ ಬಯಸಿದರೆ ಗೆಟ್ ಪಾಸ್ ಖಚಿತ.

ಮಕ್ಕಳ ಪ್ರಪಂಚವೇ ಒಂಥರಾ ಮಜಾ. ಒಂದು ನರ್ಸರಿ ಶಾಲೆಯನ್ನೇ ಉದಾಹರಣೆ ತೆಗೆದುಕೊಂಡು ಅಲ್ಲೊಂದು ಕೂಸು ಅದ್ಯಾಕೋ ಅಳುತ್ತದೆ. ಅದನ್ನು ನೋಡಿಕೊಂಡು ಮತ್ತೊಂದು ಕೂಸು ಅಳುತ್ತದೆ. ಒಂದು ಕೂಸು ಟಾಯ್ಲೆಟ್ ಮಾಡಬೇಕು ಅಂತ ಪರ್ಮಿಷನ್ ಕೇಳುತ್ತದೆ ಅದನ್ನು ಕೇಳಿದ ಕೂಡಲೇ ಮತ್ತೊಂದು ಕೂಸಿಗೂ ತನಗೂ ಟಾಯ್ಲೆಟ್'ಗೆ ಹೋಗಬೇಕು ಅನ್ನಿಸುತ್ತದೆ. ಒಬ್ಬರಿಗೆ ಒಂದು ಆಟಿಕೆ ಬೇಕು ಎಂದಾಗ ಮತ್ತೊಂದು ಕೂಸಿಗೂ ಅದೇ ಆಟಿಕೆ ಬೇಕಾಗುತ್ತದೆ. ಹೀಗೆ ಒಬ್ಬರು ಮಾಡುವ ಒಂದು ಕ್ರಿಯೆ ಮತ್ತೊಬ್ಬರಲ್ಲೂ ಅದೇ ಕ್ರಿಯೆಯ ಬಗೆಗಿನ ಬಯಕೆಯನ್ನು ಹುಟ್ಟುಹಾಕಿದರೆ ಅದೂ ಒಂದು ರೀತಿ ಕಮಲೇ ಕಮಲೋತ್ಪತ್ತಿಃ.

ಕಮಲೇ ಕಮಲೋತ್ಪತ್ತಿಃ ಎಂಬುದು ಒಂದರಿಂದ ಆರಂಭವಾಗಿದ್ದು ಮತ್ತೊಬ್ಬರಲ್ಲೂ ಅದೇ ಭಾವನೆ ಉಂಟಾಗುವುದು ಅಂತ. ಇಲ್ಲಿ ಹುಟ್ಟು ಎಂಬುದು ಮೂಲ, ಅದರಾಚೆಗೆ ಇರುವುದು ಒಂದೇ ಬಗೆಯ ಆಶಯ. ಸಾಮೂಹಿಕ ಸನ್ನಿಯಲ್ಲೇ ಕಾಣುವುದೇ ಈ ಕಮಲೇ ಕಮಲೋತ್ಪತ್ತಿಃ. ಒಬ್ಬರು ನೃತ್ಯ ಮಾಡಿದಾಗ ನಮಗೂ ಮಾಡಬೇಕು ಅನ್ನಿಸೋದು, ಒಬ್ಬರು ಹಾಡಿದರು ಎಂದಾಗ ದನಿಗೂಡಿಸಬೇಕು ಅನ್ನಿಸೋದು ಹೀಗೆ.

ದಿನನಿತ್ಯದಲ್ಲಿ ನಾವು ಪಾಲಿಸಲೇಬೇಕಾದ ಕಮಲೇ ಕಮಲೋತ್ಪತ್ತಿಃ ಯಾವುದು? ಏನೇನೂ ಕಷ್ಟವಿಲ್ಲ ಆದರೆ ಮಾಸ್ಕ್ ಧರಿಸಿರುವ ಈ ಕಾಲದಲ್ಲಿ ಕೊಂಚ ಭಿನ್ನವಾಗಿ ಯತ್ನಿಸಿ ಹಾಗೂ ಹಂಚಿಕೊಳ್ಳಿ. ಮಾಸ್ಕ್ ಇಲ್ಲದೇ ಮಾಡಿರಬಹುದಾದ ಈ ಕೆಲಸ ಯಾವುದು? ನಿಮ್ಮದೇ ಮುಖವೆಂಬ ಕಮಲದಿಂದ ಹೂನಗೆಯನ್ನು ಅರಳಿಸಿ. ಆ ಕಡೆಯವರು ನಿಮ್ಮ ಮುಖವನ್ನು ನೋಡಿದಾಗ ತಂತಾನೇ ನಗೆ ಅರಳಿಸುತ್ತಾರೆ. ಒಂದು ಕಮಲವದನದಿಂದ ಮತ್ತೊಂದು ಕಮಲವದನದಲ್ಲಿ ನಗೆ ಅರಳಿಸುವುದು. ಬನ್ನಿ ಇಂದಿನಿಂದಲೇ ಆರಂಭಿಸೋಣ.

English summary
The lotus in the lotus means the face in the lotus. The eyes Are the lotus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X