ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತನಾಡೋದು ಒಂದು ಕಲೆ, ಆದರೆ ಕೆಲವರಿಗೆ ಅದೇ ಕಪ್ಪುಕಲೆ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ನಮ್ಮ ದೇಹದ overhead ಟ್ಯಾಂಕ್ ಖಾಲಿಯಾದಾಗ ವಿಷಯಗಳು ಕೆಳಗೆ ಹರಿಯದೇ, ನಾಲಿಗೆ ಮರುಭೂಮಿಯಾಗಿ ಒಂದೇ ಮಾತನ್ನು ಹಲವು ಸಾರಿ ಹೇಳಬೇಕಾಗಿ ಬರುತ್ತದೆ. ಇವು ಹೆದರಿಕೆಗೆ ಆಗಬಹುದು, ತಲೆಗೆ ಏನೂ ಯೋಚನೆಯೇ ಬಾರದೆ ಹೀಗಾಗಬಹುದು, ಹಲವಾರು ವಿಷಯ ಒಮ್ಮೆಗೆ ತಲೆಗೆ ನುಗ್ಗಿ prioritize ಮಾಡಲು ಒದ್ದಾಡುವಾಗ ಹೀಗಾಗಬಹುದು ಅಥವಾ ಅಭ್ಯಾಸಬಲವೂ ಆಗಬಹುದು.

ಹಲವು ಉದಾಹರಣೆಗಳನ್ನು ನೋಡೋಣ.

ಇಂಟರ್ವ್ಯೂ ಎಂಬ ಯುದ್ಧದಲ್ಲಿ ಗೆಲುವು ಸಾಧಿಸುವುದು ಹೇಗೆ?ಇಂಟರ್ವ್ಯೂ ಎಂಬ ಯುದ್ಧದಲ್ಲಿ ಗೆಲುವು ಸಾಧಿಸುವುದು ಹೇಗೆ?

ಕಚೇರಿಗಳಲ್ಲಿ ಸರ್ವೇ ಸಾಮಾನ್ಯವಾಗಿ ಯಾರೋ ಒಬ್ಬರು ಒಂದು ವಿಷಯದ ಬಗ್ಗೆ ಅರಿವಿರದೆ ಅರಿವಿರುವ ಒಬ್ಬರನ್ನು ಪ್ರಶ್ನೆ ಕೇಳುತ್ತಾರೆ. ಉತ್ತರ ಗೊತ್ತಿರುವ ಅವರು "you know" ಅಂತ ಶುರು ಮಾಡಿ ಉತ್ತರ ನೀಡಲು ಆರಂಭ ಮಾಡುತ್ತಾರೆ. ಆದರೆ ಪ್ರಶ್ನೆ ಕೇಳಿರುವವರು "you know" ಎಂದ ಕೂಡಲೇ ತಬ್ಬಿಬ್ಬಾಗುತ್ತಾರೆ. ನನಗೆ ಗೊತ್ತಿದ್ರೆ ನಿನಗ್ಯಾಕೆ ಕೇಳ್ತಿದ್ದೆ ಅಂತ. ಇದು ದುರಭ್ಯಾಸ ಅಂತೇನೂ ಅಲ್ಲ. ಪ್ರಶ್ನೆ ಕೇಳಿದವರಿಗೆ ಒಂದು ವಿಷಯದ ಬಗ್ಗೆ ಅರಿವಿದ್ದು ಅದನ್ನು ಆಧಾರವಾಗಿಟ್ಟುಕೊಂಡು, ಉತ್ತರ ಹೇಳುವವರು, ಮೊದಲಿಂದಲೂ ಹೇಳಬೇಕಾದ ಅವಶ್ಯಕತೆ ಕಾಣದೆ ಅವರಿಗೆ ಅರಿವಿರುವ ವಿಷಯದಿಂದ ಆರಂಭ ಮಾಡುತ್ತಾರೆ.

The art of speaking well

ನಮ್ಮ ಟೀಮಿನ ಟೆಕ್ನಿಕಲ್ ದೊರೆಯೊಬ್ಬ ನುಡಿಗೆ ನೂರು ಸಾರಿ actually ಅಂತಾನೆ. "Actually today I wanted to let you all know one thing actually that actually there is no issue and actually this is a feature that actually is not documented actually". ಇದು ತಕ್ಕಮಟ್ಟಿಗೆ ದುರಭ್ಯಾಸವೇ ಸರಿ. ಒಂದೋ ಆಂಗ್ಲಭಾಷೆಯ ಮೇಲೆ ಹಿಡಿತ ಇಲ್ಲದಿರಬಹುದು ಅಥವಾ ವಿಷಯವನ್ನು ಆಲೋಚಿಸುತ್ತಾ ಹೇಳುವಾಗ ಮಧ್ಯೆ ಮಧ್ಯೆ ಒಂದೇ ಪದವನ್ನು ಹೇಳುತ್ತಾ ಗ್ಯಾಪ್ ತುಂಬುವ ಕ್ರಿಯೆ.

ಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿ

ನಮ್ಮ ಕಾಲೇಜಿನಲ್ಲಿ ಒಬ್ಬರು ಫಿಸಿಕ್ಸ್ lecturer ಇದ್ದರು. ಮಾತು ಮಾತಿಗೂ ಅದೇನೋ "even a" ಅಂತ ಬಳಸುತ್ತಿದ್ದರು. ಅರ್ಥವೇ ಇಲ್ಲದೆ ಅದು ಬಳಕೆಯಾಗುತ್ತಿತ್ತು. ಒಮ್ಮೆ ಅವರು "The credit of this invention goes to Isaac even a Newton" ಅಂದರು. ಮೊದಲೇ ಅವರ ಪಾಠ ಅಷ್ಟರಲ್ಲೇ ಇತ್ತು. ಜೊತೆಗೆ ಇಂಥಾ "even a" ಬಳಕೆ. ಇಡೀ ಕ್ಲಾಸ್ ಘೊಳ್ಳನೆ ನಕ್ಕಿತು. ಆದರೇನು ಮಾಡೋಕ್ಕಾಗುತ್ತೆ, ಅವರ ಈ ಅಭ್ಯಾಸ ನಿಲ್ಲಲೇ ಇಲ್ಲ. ಹೀಗೇ ಒಮ್ಮೆ, ಕ್ಲಾಸಿನ ಆರಂಭದಿಂದ ಇವರ "even a" count ಮಾಡುತ್ತಿದ್ದ ಭೂಪನೊಬ್ಬ ಅರ್ಧ ಕ್ಲಾಸ್ ಮುಗಿದಾಗ ಸೆಂಚುರಿ ಅಂದ... ಅದು ಲೆಕ್ಚರರ್'ಗೂ ಅರ್ಥವಾಗಿ ಅವನನ್ನು ಕ್ಲಾಸಿನಿಂದ ಹೊರಗಟ್ಟಿದರು. ಇಲ್ಲಿ ತೊಂದರೆ ಏನೆಂದರೆ, ತಾನೊಬ್ಬ ಲೆಕ್ಚರರ್, ತನಗಿನ್ನೇನೂ ಕಲಿಯೋ ಅವಶ್ಯಕತೆ ಇಲ್ಲ ಎಂಬ ಹುಂಬತನ.

ಕೆಲವರು ಕೆಲವೊಂದು ಪದಗಳನ್ನು ಅಥವಾ ಪದಪುಂಜವನ್ನು slang ಆಗಿ ಬಳಸುತ್ತಾರೆ. ಸ್ಲ್ಯಾಂಗ್ ಎಂದಾಗ ಅದಕ್ಕೆ ಸ್ಪೆಷಲ್ ಅರ್ಥ ಇರಬೇಕು ಅಂತೇನಿಲ್ಲ, ಆದರೆ ಅದನ್ನು ಬಳಸೋ ಮಂದಿ ಅವಕ್ಕೆ ಒಗ್ಗಿಹೋಗಿರುತ್ತಾರೆ.

The art of speaking well

ಯಾವುದೋ ಒಂದು ಸಿನಿಮಾದಲ್ಲಿ ಸಿಹಿಕಹಿ ಚಂದ್ರು 'ಅಯ್ಯ ನಿನ್ನಜ್ಜಿ ಅಂದಳಿನ' ಅಂತೇನೋ ಅಂತಾರೆ. ನನಗಂತೂ ಅದರರ್ಥ ಈವರೆಗೂ ಆಗಿಲ್ಲ. ಹಾಗೆಯೇ ಮತ್ತೊಂದು ಚಿತ್ರದಲ್ಲಿ ಅಂಬರೀಷ್ "ಹಿಟ್ ಮೇಲ್ ಅವರೆಕಾಳ್" ಅಂತಾರೆ. ಅವೆಲ್ಲಾ ಸಿನಿಮಾ ಬಿಡಿ ಅಂತಂದ್ರೆ ನಮ್ಮ ಕಂಪೆನಿಯಲ್ಲೊಬ್ಬ ಹರಿ ಅಂತ ಒಬ್ಬನಿದ್ದ. ಆತ, ತಾನು ಹುಟ್ಟಿರೋದೇ ಅಮೇರಿಕಾದಲ್ಲಿ ಇರೋದಕ್ಕೆ ಎಂಬಂತೆ ಮೊದಲಿಂದಲೂ ನಡೆ, ನುಡಿ, ಭಾಷೆ ಎಲ್ಲಾ ಆಂಗ್ಲದವರಂತೆ. ಅಮೇರಿಕನ್ styleನಲ್ಲೇ ಕೋರಮಂಗಲದಲ್ಲಿ ಜೀವನ. ಅವನಿಗೆ ಅತೀ ಆನಂದವಾದಾಗ, ಅತೀ ಇರುಸುಮುರುಸಾದಾಗ ಅಥವಾ ಬೇರೇನೂ ಕೆಲಸವಿಲ್ಲದೇ ಇದ್ದಾಗ "beat the shit out of it man" ಅಂತಿದ್ದ. ಯಾಕೆ ಅಂಥದ್ದು ಅನ್ನಬೇಡಿ, ಅವನನ್ನೇ ಕೇಳಬೇಕು.

ಆಗಾಗ ಪದ / ಪದಗಳನ್ನು ರಿಪೀಟ್ ಮಾಡುವ ಈ ಕ್ರಿಯೆ ನ್ಯೂನತೆ ಅಥವಾ ದುರಭ್ಯಾಸ ಎನಿಸಿದರೆ, ಹಲವಾರು ಧಾರಾವಾಹಿಗಳಲ್ಲಿ ಇದು ಹಾಸ್ಯ ಹುಟ್ಟಿಸುವ ಒಂದು ಕಲೆಯಾಗಿದೆ ಎಂಬುದು ಕೆಲವೊಮ್ಮೆ ಶೋಚನೀಯ ಎನಿಸುತ್ತದೆ.

ಉಗ್ಗುವಿಕೆ (stammering / stuttering) 'ಗೋಲ್ಮಾಲ್' ಸರಣಿಯ ಹಿಂದಿ ಚಿತ್ರದಲ್ಲಿ ದೊಡ್ಡ ಹಾಸ್ಯವಾಗಿತ್ತು. ಸುಪ್ರಭಾತ ಚಿತ್ರದಲ್ಲಿ ಗಂಭೀರವಾಗಿ ಕಾಣುತ್ತದೆ. 'ಸುಂದರ ಸ್ವಪ್ನಗಳು' ಚಿತ್ರದಲ್ಲಿ ಮದುವೆ ತಪ್ಪಿಹೋಗುವಷ್ಟು ಗಂಭೀರತೆಯನ್ನೂ ತೋರಿಸುತ್ತದೆ.

The art of speaking well

ಕೆಲವರು ಪದ / ಪದಗಳನ್ನು ಒಂದು ವಾಕ್ಯದಲ್ಲಿ ಹಲವು ಬಾರಿ ಬಳಸುವಂತೆ, ಮತ್ತೂ ಕೆಲವರಲ್ಲಿ ಬೇರೊಂದು ಅಭ್ಯಾಸವಿರುತ್ತದೆ. ತಾವು ಜೋರಾಗಿ ಹೇಳಿದ ಮಾತನ್ನು ಮತ್ತೊಮ್ಮೆ ತಮ್ಮಲ್ಲೇ ಆಡಿಕೊಳ್ಳುತ್ತಾರೆ. ಆದರೆ ಅದು ಅವರಿಗೆ ಅರಿವಿಲ್ಲದೆ ಹೊರಬರುತ್ತೆ. ಕೆಲವರು ಮಾತನ್ನು ತಮ್ಮಲ್ಲೇ ಆಡಿಕೊಳ್ಳುವುದೇ ಅಲ್ಲದೆ 'ಸರಿಯಾಗಿದೆ' ಎಂಬಂತೆ ತಲೆಯಾಡಿಸುತ್ತಾರೆ ಕೂಡ. ಒಂದು ರೀತಿ ಇದು ಅವರು ಮನನ ಮಾಡಿಕೊಳ್ಳುವ ರೀತಿ ಎಂದರೆ ತಪ್ಪಲ್ಲ. ಅಂದ ಹಾಗೆ, ಇದು ಖಾಯಿಲೆಯಲ್ಲಾ.

ಕೆಲವರಲ್ಲಿ ಇನ್ನೊಂದು ಸಮಸ್ಯೆ ಇದೆ. ಬಹಳಷ್ಟು ಸಾರಿ ನನಗೆ ಇಂಥಾ ಜನರು ಮೀಟಿಂಗ್'ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಏನೋ ಒಂದು ವಿಷಯದಲ್ಲಿ ಪ್ರಶ್ನೆ ಕೇಳುತ್ತಾರೆ. ಯಾರಾದರೂ ಪ್ರಶ್ನೆ ಅರ್ಥವಾಗಿ ಉತ್ತರ ಹೇಳಲು ಮಧ್ಯೆ ಬಾಯಿ ತೆರೆದರೂ, ಅದನ್ನು ಲೆಕ್ಕಿಸದೆ ಮತ್ತೊಮ್ಮೆ ಮಗದೊಮ್ಮೆ ಹೇಳುತ್ತಾರೆ. ಪ್ರಶ್ನೆ ಕೇಳಿ ಮುಗಿಸಿ ಮತ್ತೊಮ್ಮೆ ಅಷ್ಟನ್ನೂ ರಿಪೀಟ್ ಮಾಡುತ್ತಾರೆ. ಕೇಳುಗರಿಗೆ ಹೇಗಿರುತ್ತೆ ಎಂದರೆ, 'ಸರಿಯಪ್ಪಾ ಅರ್ಥವಾಯ್ತು, ನನಗೆ ಉತ್ತರ ಹೇಳೋಕ್ಕೆ ಅವಕಾಶ ಕೊಡು' ಅಂತ ಕೇಳಬೇಕು ಎನ್ನಿಸುತ್ತದೆ.

ಕೆಲವರ ಮಾತಿನಲ್ಲಿ ಇಂಥಾ ರಿಪೀಟೆಡ್ ಪದಗಳು ಓಡದೇ ಇದ್ದರೂ "ಆ, ಊ, ಹ್ಮ್" ಎಂಬ ಪದಗಳೇ ಹೆಚ್ಚಿದ್ದು ಒಂದು ವಾಕ್ಯವನ್ನೇ ಐದು ನಿಮಿಷ ಹೇಳುತ್ತಾರೆ. ಈ "ಆ, ಊ, ಹ್ಮ್" ಗಳನ್ನೂ fillers ಎಂದು ಕರೆಯುತ್ತಾರೆ.

"Toastmasters club" ಅಂತ ಒಂದಿದೆ. ಇದರ ಉದ್ದೇಶವೇ ಸಂವಹನ (ಕಮ್ಯುನಿಕೇಷನ್), ಸಾರ್ವಜನಿಕ ಸಭೆಯಲ್ಲಿ ಮಾತನಾಡುವುದು ಹೇಗೆ, ಮತ್ತು ನಾಯಕತ್ವದ ಸೂಕ್ಷ್ಮಗಳನ್ನು ತಿಳಿಸಿಕೊಡುವುದು. ಪ್ರತೀ ಮೀಟಿಂಗ್'ಗೆ ಒಂದು ವಿಷಯ ಅಂತ ಆಯ್ಕೆ ಮಾಡಿ ಮಾತನಾಡಲು ಒಂದಷ್ಟು ಮಂದಿ ಸಿದ್ಧವಿರುತ್ತಾರೆ. ಪುಸ್ತಕ ಅಥವಾ ಪೇಪರ್ ಹಿಡಿಯದೇ ಮಾತನಾಡಬೇಕು. ಮಾತುಗಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ಅವರ ಕಮ್ಯುನಿಕೇಷನ್ ಅನ್ನು evaluate ಮಾಡಲೇ ಒಂದಷ್ಟು ಮಂದಿ ಇರುತ್ತಾರೆ. ಇಂತಿಷ್ಟು ಸಮಯದಲ್ಲಿ ಹೇಳಿ ಮುಗಿಸಬೇಕು, ಆದರೆ ಮುಗಿಸಬೇಕು ಎಂಬ ಆತುರದಲ್ಲಿ ಬಡಬಡ ಮಾತನಾಡದೆ ವಿಷಯವನ್ನು ಸರಿಯಾಗಿ ತಲುಪಿಸಬೇಕು. ಅರ್ಥಾತ್ ಟೈಮ್ ಮ್ಯಾನೇಜ್ಮೆಂಟ್ ಕಲಿಯಬೇಕು ಅಂತ. ಫಿಲ್ಲರ್ಸ್ ಅತೀ ಕಡಿಮೆ ಇರಬೇಕು (ಇರಬಾರದು ಎಂಬುದು ಗೋಲ್) ಹೀಗೆ. ಇದೇ ಉದ್ದೇಶ ಹೊಂದಿರುವ 'ವಾಕ್ಪಥ' ಎಂಬ ಗುಂಪನ್ನು 'ಸಂಪದ' ಗುಂಪಿನ ಸಮಾನ ಮನಸ್ಕರು ಆರಂಭಿಸಿದ್ದನ್ನು ಇಲ್ಲಿ ನೆನೆಯಬಹುದು.

ಒಮ್ಮೆ ಎಲ್ಲರೂ ಮಾತು ಮುಗಿಸಿದ ಮೇಲೆ, evaluation report ಹಂಚಿಕೊಳ್ಳುತ್ತಾರೆ. ಇದು ಗೌಪ್ಯವಾಗಲ್ಲದೆ ಎಲ್ಲರೂ ಇರುವಾಗಲೇ ಆಗುವುದರಿಂದ, ಕಲಿಕೆಯ ಉದ್ದೇಶದಿಂದ ಕಾಮೆಂಟ್ಸ್ ಅನ್ನು ಸ್ವೀಕರಿಸಿ ಮುಂದಿನ ಭಾಷಣಕ್ಕೆ ತಿದ್ದುಕೊಳ್ಳುವಂತೆ ಆಗಬೇಕು.

ಮಾತು ಅನ್ನೋದು ಒಂದು ಕಲೆ ನಿಜ. ಆದರೆ ಹಾಗಂತ ಎಲ್ಲರೂ ವಾಗ್ಮಿಗಳಲ್ಲ. ಸ್ನೇಹಿತರ ಮಧ್ಯೆ ಸರಾಗವಾಗಿ ಮಾತನಾಡುವುದೇ ಬೇರೆ, ಸ್ಟೇಜಿನ ಮೇಲೆ ನಿಂತು ಮಾತನಾಡುವುದೇ ಬೇರೆ. ದಿನನಿತ್ಯದಲ್ಲಿ ಮಾತನಾಡುವುದಕ್ಕೂ ಫೋನಿನಲ್ಲಿ ಮಾತನಾಡುವುದಕ್ಕೂ ವ್ಯತ್ಯಾಸವಿದೆ. ಪುಟ್ಟ ಸನ್ನಿವೇಶ ಕೊಡುತ್ತೇನೆ, ನೀವೇ ನಿಮ್ಮನ್ನು ತುಲನೆ ಮಾಡಿಕೊಳ್ಳಿ. ಮೂವತ್ತು ಸೆಕೆಂಡ್'ಗಳ ಕಾಲ ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಿ. ಅದನ್ನು ವಿಡಿಯೋ / ಆಡಿಯೋ ರೆಕಾರ್ಡ್ ಮಾಡಿಕೊಂಡು ಕೇಳಿ. ಎಷ್ಟು ಬಾರಿ ಟೇಕ್ ಆಗಬಹುದು ಅಂತ ನೋಡಿ.

ನ್ಯೂನತೆ ಎಲ್ಲರಲ್ಲೂ ಒಂದಲ್ಲಾ ಒಂದು ರೀತಿ ಇದ್ದೇ ಇರುತ್ತದೆ. ಮನುಜನಲ್ಲಿನ ಅದ್ಭುತಗಳಲ್ಲಿ ಮಾತೂ ಒಂದು. ಇದರ ವಿಷಯದಲ್ಲೇ ನ್ಯೂನತೆ ಉಂಟಾದರೆ ಖಿನ್ನತೆ ಉಂಟಾಗೋದು ಸಹಜ. ಏನಾದರೂ ಮಾತನಾಡಿದರೆ ಇನ್ನೊಬ್ಬರಿಗೆ ಹಿಂಸೆಯಾಗಬಹುದು ಎಂಬ ಅಳುಕು ಅಥವಾ ಮತ್ತೊಬ್ಬರು ನಗಬಹುದು ಎಂಬ ಭೀತಿ ಆವರಿಸಿ ಬಾಯಿ ತೆರೆಯಲೇ ಹಿಂದೇಟು ಹಾಕಬಹುದು.

ಮಾತನಾಡುವುದು ಹೇಗೆ ಎಂಬುದರ ಬಗ್ಗೆ ಅಂತರ್ಜಾಲದಲ್ಲಿ ಹಲವಾರು ಮಾಹಿತಿಗಳಿವೆ. ಕಚೇರಿಗಳಲ್ಲಿ ಟ್ರೈನಿಂಗ್ ಕೂಡ ಇರುತ್ತದೆ. ಇವೆರಡರ ಹೊರತಾಗಿ ಕಲಿಕೆಯ ತರಗತಿಗಳೂ ಇರುತ್ತವೆ. ಸಮಸ್ಯೆ ಗಂಭೀರವಾಗಿದ್ದಲ್ಲಿ speech therapy'ಗಳೂ ಇವೆ. ತೊಂದರೆ ಇರುವವರು ಸಮಸ್ಯೆಯನ್ನು ಹತ್ತಿಕ್ಕಲು ಹಲವು ವಿಧಾನ ಅನುಸರಿಸಬಹುದು. ಅದರಂತೆಯೇ ಸಮಸ್ಯೆ ಇರುವವರ ಕುರಿತು ಅಪಹಾಸ್ಯ ಮಾಡದೆ, ಅಸಡ್ಡೆ ತೋರದೆ ಅವರ ಬಗ್ಗೆ ಕಾಳಜಿ ತೋರುವುದು ಎಲ್ಲರ ಕರ್ತವ್ಯವಾಗಿರುತ್ತದೆ.

ಏನೇನಂತೀರಿ?

English summary
The art of speaking well. The success of your presentation will be judged not by the knowledge you send but by what the listener receives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X