• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಂತೆ ಬೇಡ ಚಿಂತನೆ ಇರಲಿ ಅನ್ನೋ ಮಾತು ಬುರುಡೆ ಅಲ್ಲ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇಂದಿನ ಮಾತೆಲ್ಲಾ ಬರೀ ಬುರುಡೆ ಬಗ್ಗೆ...

   ಕಾಮಿಡಿ ಸಿನಿಮಾ ನೋಡಿ ಕಣ್ಣೀರು ಹಾಕಿದ್ರು ವೀಕ್ಷಕರು | Filmibeat Kannada

   ಕನ್ನಡದ ತಲೆಬುರುಡೆಯನ್ನು ಆಂಗ್ಲದಲ್ಲಿ skull ಅಂತಾರೆ ಅಲ್ಲವೇ? ಈ ತಲೆಬುರುಡೆಯನ್ನು ಎಲ್ಲಿ ನೋಡಿರ್ತೀರಿ? ನಮ್ಮದೇ ತಲೆಬುರುಡೆಯನ್ನು ನಾವು ನೋಡಿಕೊಳ್ಳೋ ಭಾಗ್ಯ ಇಲ್ಲ ಬಿಡಿ... ವೈದ್ಯ, ಅದರಲ್ಲೂ ದಂತ ವೈದ್ಯರ ಕಚೇರಿಯಲ್ಲಿ ಬುರುಡೆಯನ್ನು ಕಾಣಬಹುದು. ಲೈಟ್ ಕಂಬದ ಮೇಲೆ 'ಒಂದು ಬುಲ್ಡೇ ಎಳ್ಡು ಮೂಳೆ'ಯ ಚಿತ್ರ ನೋಡಬಹುದು, ಯಾವುದೇ ದುರ್ವ್ಯಸನದ ಜಾಹೀರಾತಿನಲ್ಲಿ ನೋಡಬಹುದು, ಕಾಪಾಲಿಗಳ ಕೈಯಲ್ಲಿ ನೋಡಬಹುದು, ಮಹಾಕಾಳಿಯ ಚಿತ್ರದಲ್ಲಿ, ಫ್ಯಾಂಟಮ್ ಉಂಗುರದಲ್ಲಿ ಹೀಗೆ ನಮ್ಮ ಸುತ್ತಲೂ ಎಲ್ಲೆಲ್ಲೂ ಬುರುಡೆಗಳಿವೆ.

   ದೇಹಕ್ಕೆಲ್ಲಾ ಇರೋದೊಂದೇ ಬುರುಡೆ, ಅದೂ ತಲೆಯಲ್ಲಿ ಮಾತ್ರ ಅಂದ ಮೇಲೆ ತಲೆಬುರುಡೆಯನ್ನು ಪೂರ್ಣವಾಗಿ 'ತಲೆಬುರುಡೆ' ಹೇಳೋ ಬದಲು 'ಬುರುಡೆ' ಅಂದ್ರಾಯ್ತು. ಏನಂತೀರಿ?

   ಹೊಸತು ಅಂದ ಮಾತ್ರಕ್ಕೆ ಎಲ್ಲವೂ ಒಳಿತಲ್ಲ, ಹಾಗೆಯೇ ಕೆಟ್ಟದ್ದಲ್ಲ

   ಸಾಮಾನ್ಯವಾಗಿ ಬುರುಡೆ ಮೇಲೆಯೇ ಇರುತ್ತೆ ಅಲ್ವೇ? ಇದೆಂತಹ ಹುಚ್ ಪಶ್ನೆ ಅಂದ್ರಾ? ಈಗ ಆಲೋಚನೆ, ನಿಂತ ದೇಹ ಆದರೆ ತಲೆ ಖಂಡಿತ ಮೇಲಿರುತ್ತೆ ಅರ್ಥಾತ್ ಮನುಷ್ಯರು, ಮಂಗಗಳ ಜಾತಿಯವು ಇತ್ಯಾದಿ ಜೀವಿಗಳು ನಿಂತ ದೇಹದ, ಅಂದರೆ ಲಂಬಜೀವಿಗಳು ಎಂದರೆ, ಹುಲಿ, ಸಿಂಹ ಅಡ್ಡಜೀವಿಗಳು ಎನ್ನಬಹುದೇ? ಅಂದರೆ ಅವುಗಳ ಬುರುಡೆ ಎಡಕ್ಕೋ ಬಲಕ್ಕೋ ಇರಬೇಕಲ್ಲವೇ? ಆಲೋಚಿಸಿ...

   ಈ ಬುರುಡೆ ವಿಚಾರದಲ್ಲಿ ರಾಮಾಚಾರಿ ಚಿತ್ರದಲ್ಲಿ ಒಂದು ಹಾಡಿದೆ...

   "ಬುರುಡೆ ಬುರುಡೆ ಎಲ್ಲಾರ ಬುರುಡೇಲಿ ಒಂದೇ ಮೆದುಳಂತೆ

   ಬುದ್ದಿ ಒಂದಿಲ್ಲ ಬುದ್ದಿ ಒಂದಿಲ್ಲ ಇದ್ದರು ಪರರಿಗೆ ಹೊಂದಲ್ಲ"

   ಸಿನಿಮಾದಲ್ಲಿ ಬಿಟ್ಟರೆ ಒಂದು ಮೆದುಳನ್ನು ಮತ್ತೊಬ್ಬರ ಬುರುಡೆಯಲ್ಲಿ ಇಟ್ಟು rewiring ಅಥವಾ soldering ಮಾಡಿರುವ ನಿಜ ಉದಾಹರಣೆ ಇಲ್ಲ. ಹಾಗಾಗಿ ಒಬ್ಬರ ಮೆದುಳು ಇನ್ನೊಬ್ಬರ ಬುರುಡೆಯಲ್ಲಿ ಕೂರೋಲ್ಲ ಅಂತಾಯ್ತು... ಮೆದುಳಲ್ಲಿ ಬುದ್ಧಿ ಇರೋಲ್ಲ ಎಂದರೆ ಬಹುಶಃ ಒಂದು ಬುರುಡೆಯಿಂದ ಹೊರತೆಗೆದ ಮೆದುಳು ಹೆಚ್ಚು ಕಾಲ ಬುದ್ಧಿಯನ್ನು ಹಿಡಿದಿಟ್ಟುಕೊಂಡಿರಲಾಗುವುದಿಕ್ಕೆ ಆಗುವುದಿಲ್ಲ ಎಂದು ಅಂದುಕೊಳ್ಳೋಣ. ಹಾಗೂ ಒಂದು ವೇಳೆ ಆ ಮೆದುಳಲ್ಲಿ ಇದ್ದ ಬುದ್ಧಿ ಉಳಿದುಕೊಂಡರೂ ಅದು ಇನ್ನೊಬ್ಬರ ಬುರುಡೆಯಲ್ಲಿ fit ಆಗೋಲ್ಲ ಅಂತ ಈ ಹಾಡಿನ ಒಳಾರ್ಥ. ಇದು ನನ್ನ ವ್ಯಾಖ್ಯಾನ ಆಯ್ತಾ?

   ಹುಲ್ಲಿನ ಎತ್ತರಕ್ಕೂ ನಿಲ್ಲದ ನಾವ್ ಹುಲು ಮಾನವರು

   ಸುಳ್ಳು ಹೇಳೋದು ಅಥವಾ ರೀಲ್ ಬಿಡೋದು ಅನ್ನೋದನ್ನ 'ಬುರುಡೆ' ಬಿಡೋದೂ ಎಂದು ಹೇಳೋದು ನಿಮಗೂ ಗೊತ್ತೇ ಇದೆ. ಎಷ್ಟೋ ಸಾರಿ ಯಾವುದೋ ಒಂದು ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಬುರುಡೆ ಬಿಡೋದು ಉಂಟು. ಕೆಲವೊಮ್ಮೆ ಪುಟ್ಟ ಬುರುಡೆಗಳು ಅಲ್ಲಿ ಹುಟ್ಟಿ ಆಮೇಲೆ ಸಾಯುವುದು ಇದೆ. "ಬೆಳಿಗ್ಗೆಯಿಂದ ಜ್ವರ, ಕೆಲಸಕ್ಕೆ ಬರೋದಿಲ್ಲ" ಅಂತ ಮ್ಯಾನೇಜರ್ ಗೆ ಬುರುಡೆ ಬಿಟ್ಟು ಪ್ರೇಯಸಿಯ ಜೊತೆ ಸಿನಿಮಾಕ್ಕೆ ಹೋದ್ರೆ, ತನ್ನ ಮ್ಯಾನೇಜರ್ ಗೆ ಬುರುಡೆ ಬಿಟ್ಟು ತನ್ನ ಹೆಂಡತಿ ಜೊತೆ ಆ ಮ್ಯಾನೇಜರ್ ಸಿನಿಮಾಕೆ ಬಂದರೆ ಏನಾಗಬಹುದು ಹೇಳಿ? ಅರ್ಥಾತ್ ಇವೆಲ್ಲಾ ಚಿಕ್ಕಾಪುಟ್ಟ ಬುರುಡೆಗಳು.

   ಮೀಸೆ ಇರುವವನು ತಾನಲ್ಲಾ, ನನ್ನ ತಮ್ಮ ಎಂದು ಬುರುಡೆ ಬಿಟ್ಟು ಆ ಸಮಯಕ್ಕೆ ತಪ್ಪಿಸಿಕೊಳ್ಳಲು ಬಯಸುತ್ತಾನೆ "ಆಸೆಗೊಬ್ಬ ಮೀಸೆಗೊಬ್ಬ"ದ ನಾಯಕ. ಮೂಲ ಸಿನಿಮಾ 'ಗೋಲ್ ಮಾಲ್' ಅಂತ ನಿಮಗೂ ಗೊತ್ತು. ಚಿಕ್ಕದಾಗಿ ಬುರುಡೆ ಬಿಟ್ಟಿದ್ದು ಕೊನೆಗೆ ಎಲ್ಲೆಲ್ಲೂ ತಲುಪುತ್ತೆ ಅನ್ನೋದು ಬೇರೆ ವಿಷಯ. ಇದೇ ಚಿತ್ರದ ಹಾಡಿನಲ್ಲಿ ಹೀಗಿದೆ...

   "ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ,

   ಸಂಸಾರಿಯಾದರೇನು, ಸನ್ಯಾಸಿಯಾದರೇನು

   ಅಧಿಕಾರಿಯಾದರೇನು ಅಲೆಮಾರಿಯಾದರೇನು

   ಸಮಯಕ್ಕೆ ತಕ್ಕ ಹಾಗೆ ಬಿಡ್ತಾರೆ ಎಲ್ರೂ ಬುರುಡೆ

   ನಗುವೆಂಬ ಈ ವಕ್ರರೇಖೆಯಲ್ಲಿ ಏನೆಲ್ಲಾ ಅಡಗಿದೆಯಲ್ಲ...

   ಸಂಸಾರಿಗಳು ಬುರುಡೆ ಹೊಡೆಯೋದು ಸಕತ್ ಕಾಮನ್ ಅಲ್ವೇ? "ಇನ್ನೈದು ನಿಮಿಷಕ್ಕೆ ಆಫೀಸ್ ನಿಂದ ಹೊರಡ್ತಾ ಇದ್ದೀನಿ" ಎನ್ನುವ ಗಂಡ, "ಒಂದು ನಿಮಿಷದಲ್ಲಿ ರೆಡಿ ಆಗಿ ಬರ್ತೀನಿ" ಎಂದು ಉಲಿವ ಹೆಂಡತಿ, ಇವು ದಿನನಿತ್ಯದ show ಅಲ್ವೇ? ಇನ್ನು ಇಂಥಾ ದಂಪತಿಗಳ ಇತರ ಪೀಳಿಗೆ ಸಾಮಾನ್ಯವೇ? ಶಾಲೆಗೆ ಕಳಿಸಲು ಎಬ್ಬಿಸಿದಾಗ "just 5 ಮಿನಿಟ್ಸ್ ಮಲ್ಕೋತೀನಿ" ಎನ್ನುವ ಕೂಸು, "ಕಂಬೈನ್ಡ್ ಸ್ಟಡಿ" ಮಾಡ್ತಿದ್ವಿ ಎನ್ನುವ ಹದಿಹರೆಯದವರು, "ನಾನು ಚಾಕಲೇಟ್ ತಿನ್ನೋದಿಲ್ಲ" ಎನ್ನುವ ಸಕ್ಕರೆದೇಹಿ ತಾತ, "ಈ ನಡುವೆ ನಿದ್ದೇನೇ ಬರೋಲ್ಲ" ಎನ್ನುತ್ತ ಕೂತಲ್ಲೇ ತೂಕಡಿಸೋ ಅಜ್ಜಿ...

   ಇವೆಲ್ಲಾ ಬುರುಡೆಗಳಿಗೆ ಮುಕುಟಪ್ರಾಯವಾದ ಬುರುಡೆಗಳು ಎಂದರೆ ಅಮ್ಮ ಹೇಳೋದು !! "ನನಗೆ ಹಸಿವಿಲ್ಲ", "ನನಗೇನೂ ಆಯಾಸವಾಗಿಲ್ಲ", "ಸಣ್ಣ ಜ್ವರ ಅಷ್ಟೇ, ಮನೆಗೆ ಫ್ರೆಂಡ್ಸ್ ಬರಲಿ ಬಿಡಿ ಅಡುಗೆ ಮಾಡ್ತೀನಿ" ಇತ್ಯಾದಿಗಳು.

   ಡೋಂಗಿ ಸನ್ಯಾಸಿಗಳು (?) ಆಡುವ ಸುಳ್ಳುಗಳು ದಿನನಿತ್ಯದಲ್ಲಿ ಕೇಳ್ತೀವಿ... ಮೊದಲ ಬುರುಡೆ ಎಂದರೆ ಅವರುಗಳು ತಮ್ಮನ್ನು 'ಸನ್ಯಾಸಿ' ಅಂತ ಕರೆದುಕೊಳ್ಳೋದು. ಬುರುಡೆ ಬಿಡೋ ಬುರುಡೆ ಒಂದಾದರೆ ಅಂಥವರನ್ನು ಅನುಸರಿಸೋ ಬುರುಡೆಗಳು ಹಲವಾರು ! ಹೊಟ್ಟೆಪಾಡು ಎಂದ ಮೇಲೆ ಅಧಿಕಾರಿಯೂ ಬುರುಡೆ ಬಿಡ್ತಾನೆ, ಅಲೆಮಾರಿಯೂ ಬುರುಡೆ ಬಿಡ್ತಾನೆ... ಇಂಥ ಬುರುಡೆಗಳು ನೀರಿನಂತೆ. ಸಮಯ ಎಂಬ ದಾರಕ್ಕೆ ತಕ್ಕಂತೆ ಅವೂ ಹೊಂದಿಕೊಂಡು ಸಾಗುತ್ತದೆ.

   ಇವೆಲ್ಲಾ ಬುರುಡೆಗಳು ಒಂದು ವಿಧವಾದರೆ, ಸಿದ್ದಾಪುರ-ಕುಮಟಾ ಹಾದಿಯ ಸಿರ್ಸಿ ತಾಲೂಕಿನ "ಬುರುಡೆ" ಬಗ್ಗೆ ಗೊತ್ತೇ? ಒಂದು ಉತ್ತಮ ಪ್ರೇಕ್ಷಣೀಯ ಸ್ಥಳ ಎಂದೇ ಹೆಸರಾದ "ಬುರುಡೆ ಫಾಲ್ಸ್". ಗೂಗಲ್ ನಲ್ಲಿ ನೋಡಿದರೆ ಅಲ್ಲಿ ಹೇಳ್ತಾರೆ "ಸೆಲ್ಫಿ ತೆಗೆದುಕೊಳ್ಲಲು ಒಂದು ಉತ್ತಮ ಸ್ಥಳ" ಅಂತ. ಆದರೆ ಅಲ್ಲೇ ಮತ್ತೊಂದು ಕಡೆ ಹೇಳ್ತಾರೆ "ಇದೊಂದು ಅಪಾಯಕಾರಿ ಸ್ಥಳ ಎಚ್ಚರಿಕೆವಹಿಸುವುದು ಕ್ಷೇಮ". ಈ ಎರಡೂ ವಿಷಯ ಓದಿದ ಮೇಲೆ ಸೆಲ್ಫಿ ಹೇಗೆ ತೆಗೆದುಕೊಳ್ತೀರಾ ಅನ್ನೋದರ ಬಗ್ಗೆ ಗಮನವಿರಲಿ.

   ಈಗ ಬುರುಡೆಯ ಅಸಲಿ ವಿಷಯಕ್ಕೆ ಬರ್ತೀನಿ. ಅಂದ್ರೆ ಇಷ್ಟೆಲ್ಲಾ ವಿಷಯ ಬರೆಯೋದಕ್ಕೆ ಮೂಲ ಕಾರಣ ಏನಪ್ಪಾ ಅಂದ್ರೆ, ಬೀದಿ ಬದಿಯ ಮಾತುಗಳು "ಮುಂಡಾ ಮೋಚಿತು", "ನಿನ್ ತಲಕಾಯ್ ಬುಲ್ಡೇ ಕಾಯಿಸಿಬಿಡ್ತೀನಿ ಉಸಾರ್ (ಹುಷಾರ್)"

   "ಮುಂಡಾ ಮೋಚಿತು" ಪದಪುಂಜದ ಅರ್ಥವೇನು? ಮೋಚಿಯು ಚಪ್ಪಲಿ ಅಥವಾ ಶೂ ಗಳನ್ನು ತಯಾರು ಮಾಡುವಾಗ ಚರ್ಮವನ್ನು ಕಲಾತ್ಮಕವಾಗಿ ಜೀವುತ್ತಾನೆ (ಹೆರೆಯುತ್ತಾನೆ). ಬುರುಡೆಯ ಮೇಲಿನ ಕೂದಲನ್ನು ಮೋಚಿಯಂತೆ ಜೀವಿದರೆ ತಲೆ ಬೋಳು ಆಗುತ್ತದೆ ಅಲ್ಲವೇ? ನಷ್ಟವಾದಾಗ ಹೇಳೋ ಮಾತು 'ಮುಂಡಾ ಮೋಚಿತು' ಅಂತ.

   ತಲೆತುಂಬಾ ಕೂದಲು ಇದ್ದಾಗ ಬಿಸಿಲಿನ ಹೊಡೆತ ನೇರವಾಗಿ ನೆತ್ತಿಯ ಮೇಲೆ ಬಡಿಯೋದಿಲ್ಲ. ಅದೇ ತಲೆಯನ್ನು ಬೋಳಿಸಿಬಿಟ್ರೆ? ಒತ್ತಡ ಒಲ್ಲದೆಯೇ ತಲೆ ಬಿಸಿಯಾಗುತ್ತೆ. ಬೋಳುತಲೆ ಬಿಸಿಯಾಗೋದನ್ನ ಬುಲ್ಡೇ (ಬುರುಡೆ) ಬಿಸಿಯಾಗೋದು ಅಂತ ಅರ್ಥೈಸಿಕೊಳ್ಳಬಹುದೇ ?

   ಒಟ್ಟಾರೆ "ತಲಕಾಯ್ ಬುಲ್ಡೇ ಕಾಯಿಸಿಬಿಡ್ತೀನಿ" ಅಂದ್ರೆ ತಲೆಬೋಳಿಸಿಬಿಡ್ತೀನಿ ಅಂತ ಗುಡುಗೋದು ಅಂತ ನನ್ನ ವ್ಯಾಖ್ಯಾನ ಅಷ್ಟೇ !! ನಿಮ್ಮ ಅನಿಸಿಕೆ ಏನು?

   "ಬುರುಡೆ" ನಮ್ಮ ಮೆದುಳಿನ ರಕ್ಷಕ ಮತ್ತು ತಲೆಗೂದಲಿನ ಪೀಠದ ಬಗ್ಗೆ. ತಲೆಗೂದಲು ತಕ್ಕಮಟ್ಟಿಗೆ ಈ ಪೀಠವನ್ನು ಕಾಪಾಡುತ್ತದೆ. ಎರಡು ಚಕ್ರದ ವಾಹನದಲ್ಲಿ ಓಡಾಡುವಾಗ ಈ ಬುರುಡೆಯನ್ನು ಹೆಲ್ಮೆಟ್ ಧರಿಸಿ ಕಾಪಾಡಿಕೊಳ್ಳಿ. ಯಶಸ್ಸು ತಲೆಗೇರಿ ಇನ್ನೊಬ್ಬರನ್ನು ಕೀಳಾಗಿ ಕಾಣದಂತೆ ಬುರುಡೆಯಿಂದ ಅಹಂ ಅನ್ನು ಅದುಮಿಡಿ. ಬೇಡದ ವಿಷಯಗಳನ್ನು ಬುರುಡೆಯಿಂದ ದೂರವಿಡಿ. ಚಿಂತೆಗಳು ಬುರುಡೆಯನ್ನು ಹಾಳು ಮಾಡುತ್ತದೆ, ಚಿಂತನೆಗಳು ಬುರುಡೆಯನ್ನು ಜೀವಂತವಾಗಿರಿಸುತ್ತದೆ.

   English summary
   Here is a Srinath Bhalle Humor Article On Cleverness
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X