ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಯಾಕೀ ಸಿಂಪಲ್ ವಿಷಯಗಳೂ ಇಷ್ಟು ಕಾಂಪ್ಲಿಕೇಟೆಡ್ ಅಂತೀನಿ

By ಶ್ರೀನಾಥ್ ಭಲ್ಲೆ
|
Google Oneindia Kannada News

ಮೊದಲಿಗೆ ಏನು ಅರ್ಥವೇ ಆಗುವುದಿಲ್ಲ ಅಂದ್ರೆ ವಿಷಯಗಳು ಸಿಂಪಲ್ ಆಗಿದ್ದು, ನಾವೇ ಕಾಂಪ್ಲಿಕೇಟೆಡ್ ಮಾಡ್ತೀವೋ? ಅಥವಾ ಈ ಜಗತ್ತಿನಲ್ಲಿ ಯಾವ ವಿಷಯವೂ ಸಿಂಪಲ್ ಅಲ್ಲವೇ ಅಲ್ಲಾ ಅಂತೀರಾ? ಕಾಂಪ್ಲಿಕೇಟೆಡ್ ವಿಷಯಗಳನ್ನು ಕಾಂಪ್ಲಿಕೇಟೆಡ್ ಆಗಿಯೇ ಬಿಡಬೇಕೆ? ಅಥವಾ ಕಾಂಪ್ಲಿಕೇಟೆಡ್ ವಿಷಯಗಳನ್ನು ಸಿಂಪಲ್ ಆಗಿ ಅರ್ಥೈಸಿಕೊಳ್ಳುವ ಯತ್ನದಲ್ಲಿ ಅದರ ಗಂಭೀರತೆಯನ್ನು ತಿಳಿಯಾಗಿಸಬೇಕೇ? ಇದಾವುದೂ ಬ್ಯಾಡಪ್ಪಾ, ಸಿಂಪಲ್ ಇರೋದು ಸಿಂಪಲ್ ಆಗಿರಲಿ, ಕಾಂಪ್ಲಿಕೇಟೆಡ್ ಆಗಿರೋದು ಕಾಂಪ್ಲಿಕೇಟೆಡ್ ಆಗಿಯೇ ಇರಲಿ. ನಮಗೇಕೆ ಅದರ ಉಸಾಬರಿ, ನಮ್ಮಷ್ಟಕ್ಕೆ ನಾವು ಕೋಸಂಬರಿ ತಿಂದುಕೊಂಡು ಇರೋಣ ಅಂದ್ರಾ?

ಮೊದಲಲ್ಲಿ ಸಿಂಪಲ್ ಅಂದ್ರೆ ಸರಳ ಅಂತ. ಸಿಂಪಲ್ ಅಂದ್ರೆ ಇದು. ಸರಳ ಎಂಬುದರಲ್ಲಿ ಕೇವಲ ಮೂರೇ ಅಕ್ಷರಗಳು ಅಲ್ಲದೇ ಒಂದೊಂದೂ ಅಕ್ಷರಗಳು ಅವರ್ಗೀಯ ವ್ಯಂಜನಗಳು. ಅಷ್ಟೇ ಅಲ್ಲದೇ ಒಂದೂ ಅಕ್ಷರಕ್ಕೆ ಒತ್ತಿಲ್ಲಾ, ದೀರ್ಘವೂ ಇಲ್ಲ. ಸರಳ ಎಂಬ ಪದದ ಅಕ್ಷರಗಳು ಸರಳವೋ ಅಥವಾ ವರ್ಗೀಯ ಮತ್ತು ಅವರ್ಗೀಯ ಎಂದು ಹೇಳುತ್ತಾ ವಿಷಯ ಕಾಂಪ್ಲಿಕೇಟೆಡ್ ಮಾಡಿದೆನಾ?

ತಲೆಗೂದಲು ಕಿತ್ತಿಕೊಳ್ಳೋದು ಸಾಮಾನ್ಯ ಅಲ್ಲವೇ?
ಇಲ್ಲ ಬಿಡಿ, ಸಿಂಪಲ್ ವಿಷಯಕ್ಕೆ ವಾಪಸ್ ಬರೋಣ. ಸುಮ್ನೆ ಕಾಂಪ್ಲಿಕೇಟೆಡ್ ಅರ್ಥಾತ್ ಕ್ಲಿಷ್ಟವಾದ ವಿಷಯದ ಬಗ್ಗೆ ಯಾಕೆ ಮಾತನಾಡುವುದು ಈಗಲೇ? ಸಿಂಪಲ್ ಎಂದರೆ ಸರಳ ಎನ್ನುವಾಗ ಎಷ್ಟು ಸರಳವಾಗಿದೆಯೋ, ಅಷ್ಟೇ ಕಾಂಪ್ಲಿಕೇಟೆಡ್ ಕ್ಲಿಷ್ಟ ಎಂಬ ಪದ ಕೂಡ ಅಲ್ಲವೇ? ಕ್ಲಿಷ್ಟದ ವಿಷಯ ಬೇಡ ಬಿಡಿ. ಸುಮ್ಮನೆ ಯಾಕೆ ತಲೆಗೂದಲು ಕಿತ್ತಿಕೊಳ್ಳುವಂತೆ ಮಾಡಿಕೊಂಡು ಒದ್ದಾಡೋದು? ಹೀಗೊಂದು ಆಲೋಚನೆ ಮಾಡಿ, ಕ್ಲಿಷ್ಟ ಎಂದ ಕೂಡಲೇ ಉಗುರು ಕಚ್ಚಿಕೊಳ್ಳೋದು, ತಲೆಗೂದಲು ಕಿತ್ತಿಕೊಳ್ಳೋದು ಸಾಮಾನ್ಯ ಅಲ್ಲವೇ? ಮತ್ತೆ ತರಲೆಯಾಯ್ತು ನೋಡಿ. ತಲೆಗೂದಲಿಗೆ ಜೀವ ಇಲ್ಲ, ಉಗುರಿಗೂ ಜೀವ ಇಲ್ಲ ಅಂದುಕೊಂಡಿರುತ್ತೇವೆ. ಏಕೆಂದರೆ ಕತ್ತರಿಸಿದರೆ ನೋವು ಆಗುವುದಿಲ್ಲ. ಆದರೆ ಇವು ಬೆಳೆಯುತ್ತದೆ ಎಂದಾಗ ಮತ್ತೆ ಅನುಮಾನ ಶುರು. ಜೀವ ಇಲ್ಲದ್ದು ಬೆಳೆಯುವುದು ಎಂದರೆ ಸರಳವಾದ ವಿಷಯ ಮತ್ತೆ ಕ್ಲಿಷ್ಟವಾಯ್ತು.

Srinath Bhalle Column: Why Simple Things Are Such Complicated

ಹೋಗ್ಲಿ ಬಿಡಿ, ಉಗುರು ಮತ್ತು ಕೂದಲಿನ ವಿಷಯವನ್ನು ತೀರಾ ಕ್ಲಿಷ್ಟ ಮಾಡದೇ ಸರಳವಾಗಿಯೇ ಮುಗಿಸಿಬಿಡೋಣ. ಇವು ಜೀವಿಯ ಒಂದು ಭಾಗ ಹಾಗಾಗಿ ಜೀವ ಇರುತ್ತದೆ. ಜೀವ ಇರುವುದರಿಂದಲೇ ಇವನ್ನು ಒಪ್ಪಓರಣವಾಗಿ ನೋಡಿಕೊಳ್ಳಬೇಕು. ಇವುಗಳನ್ನು ಕತ್ತರಿಸುವುದರಿಂದ ನೋವಾಗದಿದ್ದರೂ ದೇಹದಲ್ಲಿನ ಅನಾರೋಗ್ಯವನ್ನು ಬಿಂಬಿಸಬಲ್ಲದ್ದು. deficiency ಅರ್ಥಾತ್ ಕೊರತೆಗಳನ್ನು ಎತ್ತಿ ಹಿಡಿಯಬಲ್ಲದು. ಇದರಂತೆಯೇ ಕೂದಲೂ ಸಹ. ನೋಡಲು ಸಿಂಪಲ್ ಆಗಿರುವ ಈ ಉಗುರು ಮತ್ತು ಕೂದಲುಗಳು ಇಷ್ಟೆಲ್ಲಾ ಕ್ಲಿಷ್ಟವೇ?

ಮನಸ್ಸಿನಲ್ಲಿ ಚಿಂತೆ ಹೆಚ್ಚಾದಾಗ ಹಣೆಯಲ್ಲಿ ವಕ್ರರೇಖೆ
ಈಗ ನಿಜಕ್ಕೂ ಸರಳವಾದ ವಿಷಯದ ಬಗ್ಗೆಯೇ ಹೇಳೋಣ. ಸರಳ ರೇಖೆ ಎಂದರೆ ಏನಪ್ಪಾ? ಸುಮ್ಕೆ ಉದ್ದೂಟಾಗಿ ರೇಖೆ ಎಳೆಯೋದು. ಇದಕ್ಕಿಂತಾ ಸರಳ ಏನಿದೆ? ಸರಳ ಎಂದರೆ 180 ಡಿಗ್ರಿ ಅಂತ ರೇಖಾಗಣಿತದಲ್ಲಿ ಓದಿದ್ದೇವೆ. ಆದರೆ ಈ ಸರಳ ರೇಖೆ ಎಳೆದಾಗ ಅದೇಕೆ 180 ಡಿಗ್ರಿ ಮೂಡುವುದೇ ಇಲ್ಲ? ಎಷ್ಟೋ ಸಾರಿ ನೂರಕ್ಕೆ ನೂರು ಬಾರಿ ವಕ್ರವೇ ಮೂಡುವುದು. ಕೆಲವೊಮ್ಮೆ ಕೈ ನಡುಗಬಹುದು. ಕೆಲವೊಮ್ಮೆ ಮಣಿಕಟ್ಟು ನೋಯಬಹುದು. ರೇಖೆಯು ಸರಳ ರೇಖೆಯೇ ಆದರೂ ಕೊಂಚ ವಕ್ರವಾಗಿ ಹಣೆಯ ಮೇಲೆ ಮೂಡುವುದೇ ಮನಸ್ಸಿನಲ್ಲಿ ಚಿಂತೆ ಹೆಚ್ಚಾದಾಗ. ಹೆಚ್ಚಿನ ಚಿಂತೆ ಅಂದ್ರೆ ಕ್ಲಿಷ್ಟ ಸಮಸ್ಯೆಗಳು ಕಾಡುತ್ತಿದೆ ಅಂತಾಯ್ತು. ಈ ಸಮಸ್ಯೆಗಳು ಕೇವಲ ಎರಡು ರೀತಿ ಆಗಬಹುದು ಅಷ್ಟೇ. ಒಂದು ದೇಹದ ಒಳಗೆ, ಎರಡು ದೇಹದ ಹೊರಗೆ ಅಷ್ಟೇ. ವಿಷಯ ಎಷ್ಟು ಸರಳ ಅಲ್ಲವೇ? ಆದರೆ ಅಲ್ಲ, ಏಕೆಂದರೆ ಈ ಜಗತ್ತಿನಲ್ಲಿ ಇರುವುದೇ ಈ ಎರಡೇ ರೀತಿ. ಒಂದು ಅಂತರಂಗ ಮತ್ತೊಂದು ಬಹಿರಂಗ. ಒಟ್ಟಿನಲ್ಲಿ ಈ ಸರಳರೇಖೆ ಅನ್ನೋದು ಸರಳವಲ್ಲ.

ಆಸ್ಪತ್ರೆಗಳಲ್ಲಿ ಕೆಲವು ಬಗೆಯ ರೋಗಿಗಳ ಬದಿಯಲ್ಲಿ EKG ಮಷೀನ್ ಅನ್ನು ಅಳವಡಿಸಿರುತ್ತಾರೆ. ಜೀವ ಇದ್ದು ಹೃದಯ ಕೆಲಸ ಮಾಡುವಾಗ ಆ ರೇಖೆಗಳು ಮೇಲೆ ಕೆಳಗೆ ಅಂತ ತೋರಿಸುತ್ತಾ ಸಾಗುತ್ತದೆ. ಹೃದಯವು ಒಂದು ಅತೀ ಕ್ಲಿಷ್ಟ ರಚನೆ. ಈ ಹೃದಯ ಕೆಲಸ ಮಾಡೋದು ನಿಲ್ಲಿಸಿತು ಎಂದರೆ ಆ ಮೆಷೀನಿನಲ್ಲಿ ಮೂಡುವ ರೇಖೆಗಳ ಸರಳವಾಗುತ್ತದೆ. ಅಲ್ಲಿಗೆ ಕ್ಲಿಷ್ಟತೆಯು ನಿವಾರಣೆಯಾಯಿತು ಅಂತ. ಇದರರ್ಥ ಏನು? ಬದುಕಿನಲ್ಲಿ ಕ್ಲಿಷ್ಟತೆಯೇ ಜೀವನ. ಸರಳವಾದಾಗ ಅವರ ಜೀವನ ಸರಳವಾಗಬಹುದು ಆದರೆ ಎಷ್ಟೋ ಸಂದರ್ಭಗಳಲ್ಲಿ ಅವಲಂಬಿತರ ಜೀವನದಲ್ಲಿ ಕ್ಲಿಷ್ಟತೆ ಮೂಡಿಸುತ್ತದೆ. ಕೆಲವರ ಸ್ಥಿತಿ ಹೇಗಿರುತ್ತದೆ ಎಂದರೆ ಅವರಿಗೂ ತೊಂದರೆ, ಇತರರಿಗೂ ಕಷ್ಟವಾಗುತ್ತಿದೆ ನೋಡಿಕೊಳ್ಳಲು ಎಂದಾಗ EKG ಮೆಷೀನಿನಲ್ಲಿ ಮೂಡುವ ಸರಳರೇಖೆ ಎಲ್ಲರ ಜೀವನದ ಸರಳರೇಖೆಯಾಗುತ್ತದೆ.

ಮಗಳನ್ನು ಪ್ರೀತಿಸಿ ಮದುವೆಯಾಗುವ ಸಂದರ್ಭ
ಕ್ಲಿಷ್ಟತೆಯ ಬಗ್ಗೆ ಒಂದೆರಡು ಮಾತುಗಳನ್ನಾಡೋಣ ಬನ್ನಿ. ಒಂದು ಸರಳ ಉದಾಹರಣೆಯೊಂದಿಗೆ ಕ್ಲಿಷ್ಟತೆ ಎಂದರೆ ಏನು ಎಂದು ನೋಡೋಣ. ಇದೊಂದು ತಮಿಳು ಸಿನಿಮಾ ಆದರೆ ಹೆಸರು ಗೊತ್ತಿಲ್ಲ. ಕಮಲ್ ಹಾಸನ್ ನಟಿಸಿದ್ದ ಚಿತ್ರ ಇರಬಹುದು. ಅದೆಲ್ಲಾ ಬಿಡಿ, ವಿಷಯ ಇರೋದು ಕಥೆಯಲ್ಲಿ. ಒಂದು ಜೊತೆ ಅಪ್ಪ- ಮಗ ಒಂದು ಕಡೆ. ಮತ್ತೊಂದು ಜೊತೆ ತಾಯಿ- ಮಗಳು ಮತ್ತೊಂದು ಕಡೆ. ಈ ಕಡೆ ಅಪ್ಪ, ಆ ಕಡೆಯ ಮಗಳನ್ನು ಪ್ರೀತಿಸಿ ಮದುವೆಯಾಗುವ ಸಂದರ್ಭ. ವಯಸ್ಸಿನ ಅಂತರ ಬಹಳ. ಈ ಕಡೆಯ ಮಗ, ಆ ಕಡೆಯ ಅಮ್ಮನಲ್ಲಿ ಅನುರಕ್ತ. ಇಲ್ಲೂ ವಯಸ್ಸಿನಲ್ಲಿ ತುಂಬಾ ವ್ಯತ್ಯಾಸ. ಮದುವೆಯೂ ಆಗಿ ಆಶೀರ್ವಾದ ಪಡೆಯಲು ಬಂದಾಗ, ಯಾರು ಯಾರ ಕಾಲಿಗೆ ನಮಸ್ಕರಿಸಬೇಕು ಎಂಬುದು ಕ್ಲಿಷ್ಟತೆಯ ಸನ್ನಿವೇಶವಾಗಿ ಮಾರ್ಪಾಡಾಗುತ್ತದೆ. ಇಂಥಾ ಸನ್ನಿವೇಶದಲ್ಲಿ handshake ಮಾಡುವುದೇ ಉತ್ತಮ ಎಂಬುದು ಸರಳವಾದ ಉತ್ತರ.

ಈಗ ಫುಟ್‌ಬಾಲ್ ಆಟ ಎಂಬ ಸರಳವಾದ ಕ್ಲಿಷ್ಟತೆಯನ್ನೇ ನೋಡಿ. ಎಷ್ಟೆಲ್ಲಾ ದುಡ್ಡು ಸುರಿದು ಕಟ್ಟಿರುವ ಸ್ಟೇಡಿಯಂನಲ್ಲಿ, ಸಿಕ್ಕಾಪಟ್ಟೆ ದುಡ್ಡು ದುಡಿಯುವ ಆಟಗಾರರು ಮತ್ತು ಅವರಿಗೆ sponsor ಮಾಡುವ ಹೂಡಿಕೆದಾರರು ಇರುತ್ತಾರೆ. ಇಷ್ಟೆಲ್ಲಾ ಇದ್ದೂ ಅಷ್ಟೂ ಜನ ಒಂದು ಚೆಂಡಿಗಾಗಿ ಕಾದಾಡುತ್ತಾರೆ. ಇದು ನಾನು ಹೇಳುವ ಮಾತಲ್ಲ. ಆದರೆ ಆಟದ ಬಗ್ಗೆ ಒಂದಿನಿತೂ ಅರಿವಿರದವರಿಗೆ ಆಗುವ ಗೊಂದಲವಿದು. ಅತ್ಲಾಗೆ ಒಬ್ಬೊಬ್ಬರಿಗೂ ಒಂದೊಂದು ಬಾಲ್ ಕೊಡಬಾರದೇ ಅಂತ ಸಿಡಿಗುಟ್ಟುವುದು ಬಹಳ ಹಳೆಯ ಜೋಕ್.

ಸರಳವಾದ ಕ್ರಿಕೆಟ್ ಕೊಂಚ ಕ್ಲಿಷ್ಟತೆ ಹೆಚ್ಚಿಸಿಕೊಂಡಿತು
ಇನ್ನು ಕ್ರಿಕೆಟ್ ಆಟ. ಒಂದಾನೊಂದು ಕಾಲದಲ್ಲಿ ಇದು ಆರು ದಿನಗಳ ಪಂದ್ಯ. ಇದರಲ್ಲಿ ಒಂದು ದಿನ ರೆಸ್ಟ್ ಡೇ ಅಂತ ಇರುತ್ತಿತ್ತು. ಬೌಲರ್ ಪಾಪ ಅದೇನೋ ಧಾವಂತದಲ್ಲಿ ಎದ್ದುಬಿದ್ದು ಓಡಿ ಬಂದು ಚೆಂಡು ಎಸೆದರೆ, ಈ ಕಡೆ ಇರುವ ಬ್ಯಾಟ್ಸ್‌ಮನ್ ಸುಮ್ಮನೆ ಬ್ಯಾಟ್ ಅಡ್ಡ ಇಟ್ಟು ಓಡದೇ ಅಲ್ಲೇ ನಿಲ್ಲುತ್ತಾನೆ. ಇಂಥಾ ಅಂದಿನ ಆಟದಲ್ಲಿ ಒಬ್ಬ ಬೌಲರ್ ಬೇಸರವೇ ಇಲ್ಲದೆ ಒಂದು ತುದಿಯಿಂದ ಇಪ್ಪತ್ತು, ಮೂವತ್ತು ಓವರುಗಳನ್ನು ಬೌಲ್ ಮಾಡುತ್ತಿದ್ದರು. ಸರಳವಾದ ಕ್ರಿಕೆಟ್ ಇದು ಒಂದು ಕ್ಲಿಷ್ಟತೆಯಿದ್ದುದು ಎಂದರೆ ಎರಡೂ ಕಡೆಯವರದ್ದು ಒಂದೇ ರೀತಿಯ ಬಿಳೀ ಬಟ್ಟೆ. ಆದರೆ ದಾಂಡಿಗರ ಕೈಲಿ ಬ್ಯಾಟ್ ಇರುವುದರಿಂದ ವಾಲೀ- ಸುಗ್ರೀವ ಕೇಸ್ ಆಗುತ್ತಿರಲಿಲ್ಲ.

ಕಾಲ ಬದಲಾಯ್ತು, ಒಂದು ದಿನದ ಪಂದ್ಯಗಳು ಬಂದವು. ಸರಳವಾದ ಕ್ರಿಕೆಟ್ ಕೊಂಚ ಕ್ಲಿಷ್ಟತೆ ಹೆಚ್ಚಿಸಿಕೊಂಡಿತು. ಕಾರಣ, ಐದು ದಿನದ ಪಂದ್ಯ ಆಡುವವರಿಗೆ ಒಂದು ದಿನದ ಪಂದ್ಯ ಆಡಲು ಕಷ್ಟವಾಗುತ್ತದೆ ಎಂಬ ಮೂಗು ಮುರಿತ. ಕ್ಲಿಷ್ಟತೆ ಹೆಚ್ಚಿದ್ದು ಎಂದರೆ ಕೆಲವು ಆಟಗಾರರು ಕೇವಲ ಒಂದು ದಿನದ ಪಂದ್ಯ ಮಾತ್ರ ಆಡುವಂತೆ ಆಗಿದ್ದು. ಆ ನಂತರ ಅಂದರೆ ಈಗ ಬಿಡಿ ಐಪಿಎಲ್ ಎಂದು ಬಂದ ಮೇಲೆ ಅತೀ ಕ್ಲಿಷ್ಟತೆ ಆಗಿದೆ. ಇದೊಂದು ಮಹಾಭಾರತವೇ ಆಗಿದೆ. ಒಂದು ವಂಶದವರು (ದೇಶದವರು) ಒಂದು ಕಡೆಯೂ ಇರುತ್ತಾರೆ, ಎದುರಾಳಿ ತಂಡದಲ್ಲೂ ಇರುತ್ತಾರೆ. ಸರಳತೆ ಏನಪ್ಪಾ ಎಂದರೆ ಬಣ್ಣ ಬಣ್ಣದ ದಿರಿಸು. ಆದರೆ ಇಂಥವರು ಯಾವ ತಂಡದವರು ಅಂತ ನನ್ನನ್ನು ಕೇಳಿದರೆ ಬಹುಶಃ ಉತ್ತರ ಸಿಗುವ ಸಂಭವನೀಯತೆ ಕಡಿಮೆ.

ಜೀವನ ಸಖತ್ ಕಾಂಪ್ಲಿಕೇಟೆಡ್ ಅನ್ನುವವರು ಎಷ್ಟು ಜನ?
ಈ ಜೀವನ ಸಖತ್ ಸಿಂಪಲ್ ಎನ್ನುವವರು ಎಷ್ಟು ಜನ? ಜೀವನ ಸಖತ್ ಕಾಂಪ್ಲಿಕೇಟೆಡ್ ಅನ್ನುವವರು ಎಷ್ಟು ಜನ? ಜೀವನ ಎಂಬ ಪದದಲ್ಲಿ ಜೀವ ಇದೆ, ವನ ಇದೆ, ಹಿಂದಿನಿಂದ ನೋಡಿದರೆ ನವ ಇದೆ ಕೂಡ. ಪ್ರತೀ ದಿನವನ್ನು ಹೊಸತಾಗಿ ಕಂಡರೆ ಅದು ನವಜೀವನ ಅಂತ. ಈ ನವಜೀವನ ಅನ್ನುವುದು ವಿಕಟಕವಿ ರೀತಿ palindrome ಅಲ್ಲವೇ? ಏನಿದು ನವಜೀವನ? ಸಿಂಪಲ್ ಆಗಿ ನೋಡಿದರೆ ಒಬ್ಬರಿಗೆ ಹಗಲಾದರೆ ಮತ್ತೊಬ್ಬರಿಗೆ ಇರುಳು. ಒಬ್ಬರಿಗೆ ಇರುಳಾದರೆ ಮತ್ತೊಬ್ಬರಿಗೆ ಹಗಲು. ಇದನ್ನೇ ಸಿಂಪ್ಲಿಕೇಟೆಡ್ ಆಗಿ ನೋಡಿದರೆ, ಒಬ್ಬರಿಗೆ ಉದಯ ಮತ್ತೊಬ್ಬರಿಗೆ ಅಸ್ತ. ಒಬ್ಬರಿಗೆ ಅಸ್ತವಾದರೆ ಮತ್ತೊಬ್ಬರಿಗೆ ಉದಯ. ಕಾಂಪ್ಲಿಕೇಟೆಡ್ ಆಗಿ ಆಲೋಚಿಸಿದರೆ ನವಜೀವನ ಅನ್ನುವುದು ನೆನ್ನೆ- ಇಂದು- ನಾಳೆ ಸಂಕೇತ. ನವಜೀವನ ಪದವನ್ನೇ ಸೂಕ್ಷ್ಮವಾಗಿ ಗಮನಿಸಿದರೆ ನವ ಎಂಬುದು ಮುಂದಿನ ಪೀಳಿಗೆ, ವನ ಎಂಬುದು ಹಿಂದಿನ ಪೀಳಿಗೆ, ಇವರಿಬ್ಬರ ಮಧ್ಯೆ 'ಜೀ ಹುಜೂರ್' ಅಂತ ಇರುವವರು ಯಾರು ಗೊತ್ತಲ್ಲವೇ?

English summary
Srinath Bhalle Column; Learn why simple things become so complicated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X