ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಯಾರಿಗೆ ಬೇಕು ಈ ಲೆಕ್ಕ ಹೇಏಏಏಏಮ, ಹೇಮಾಆಆಆ

|
Google Oneindia Kannada News

ಬಹಳ ಸಿಂಪಲ್ ಆದ ಒಂದು ಲೆಕ್ಕದಿಂದಲೇ ಶುರು ಮಾಡುವಾ ಏನಂತೀರಾ? ಈಗ ಶುಭಮಂಗಳ ಸಿನಿಮಾದ ಇದೇ ಹಾಡನ್ನೇ ತೆಗೆದುಕೊಳ್ಳಿ. 'ಸ್ನೇಹದ ಕಡಲಲ್ಲೀ..' ಅಂತ ಹಾಡುವಾಗ, ಕಡಲಲ್ಲೀ ಎಂಬ ಪದವನ್ನು ಎಳೆಯಲಾಗಿದೆ. ಇಲ್ಲಿ ಈ ಎಂಬ ಸ್ವರವನ್ನು ಎಷ್ಟು ಬಾರಿ ಎಳೆಯಲಾಗಿದೆ ಅಂತ ಗೊತ್ತೇ? ಹಾಗೆಯೇ ಕೊಂಚ ಮುಂದೆ ಸಾಗಿ 'ಹೇಮಾ' ಎಂಬ ಹೆಸರನ್ನು ಹಾಡುವಾಗ ಏ ಮತ್ತು ಆ ಎಂಬುದನ್ನು ಎಷ್ಟು ಬಾರಿ ಎಳೆಯಲಾಗಿದೆ? ಟೈಮಿದ್ದಾಗ ಹಾಡನ್ನು ಕೇಳಿ, ಎಣಿಸಿ ನೋಡಿ.

ಸಮಸ್ಯೆಗೆ ಒಂದೇ ಉತ್ತರವಿದ್ದರೂ ಮಾರ್ಗ ಹಲವು
ಜಾಸ್ತಿ ಟೆನ್ಷನ್ ಮಾಡಿಕೊಳ್ಳದಿರಿ, ತಾಳ ಹಾಕಿ ಗೊತ್ತಾಗಿಬಿಡುತ್ತದೆ. ಜೀವನದಲ್ಲಿ ಲೆಕ್ಕಗಳಲ್ಲಾ ಹೆಚ್ಚು ಕಡಿಮೆ ಹೀಗೆಯೇ ಅನ್ನಿ. ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂಬಂತೆ ಅಲ್ಲೇ ಸಮಸ್ಯೆ, ಅಲ್ಲೇ ಪರಿಹಾರವೂ ಇರುತ್ತದೆ. ಕೊಂಚ ವಿಭಿನ್ನವಾಗಿ ಆಲೋಚಿಸಬೇಕು ಅಷ್ಟೇ. ಕೆಲವೊಮ್ಮೆ ಒಂದು ಸಮಸ್ಯೆಗೆ ಒಂದೇ ಉತ್ತರ ಇರುತ್ತದೆ. ಆದರೆ ಹಲವೊಮ್ಮೆ ಒಂದು ಸಮಸ್ಯೆಗೆ ಒಂದೇ ಉತ್ತರವಿದ್ದರೂ ಮಾರ್ಗ ಹಲವು. ಇದರಂತೆಯೇ, ಹಲವು ಬಾರಿ ಮಾರ್ಗಗಳೂ ಹಲವು, ಉತ್ತರಗಳೂ ಹಲವು. ಹೀಗೆಂದರೆ ಏನು ಅಂತ ಅರ್ಥವೇ ಆಗುತ್ತಿಲ್ಲವಲ್ಲಾ ಅಂದ್ರಾ? ಒಂದಷ್ಟು ಉದಾಹರಣೆಗಳನ್ನು ನೋಡೋಣ ಬನ್ನಿ.

ಎರಡೂ ಕಾಯಿಗಳ ಅಂಕುಡೊಂಕು ಕೂಡ ಸಮವಲ್ಲ
ಒಂದು ಮೆಣಸಿನಕಾಯಿ ಇದೆ ಅಂದುಕೊಳ್ಳಿ. ಅದಕ್ಕೆ ಮತ್ತೊಂದು ಮೆಣಸಿನಕಾಯಿಯನ್ನು ಸೇರಿಸಿದರೆ ಎರಡು ಮೆಣಸಿನಕಾಯಿ ಆಗುತ್ತದೆ ನಿಜ ಆದರೆ ಎರಡೂ ಮೆಣಸಿನಕಾಯಿಗಳ ಒಡಲಲ್ಲಿನ ಬೀಜಗಳೂ ಸಮವೇ? ಎರಡೂ ಮೆಣಸಿನಕಾಯಿಗಳ ಸೈಜ್ ಒಂದೇನೆ? ಇದು ಬಜ್ಜಿ ಮೆಣಸಿನಕಾಯಿ ಆದರಂತೂ ಎರಡೂ ಕಾಯಿಗಳ ಅಂಕುಡೊಂಕು ಕೂಡ ಸಮವಲ್ಲ. ಒಂದು ಮತ್ತು ಒಂದು ಎರಡು ಆಗಬೇಕು ಎಂದರೆ ಆ ಎರಡು ಒಂದುಗಳು ಸಮವೇ ಆಗಿರಬೇಕು ಅಲ್ಲವೇ? ಹೀಗಾಗಿ ಸಂಖ್ಯೆಯ ವಿಚಾರವನ್ನು ಹೊರತುಪಡಿಸಿದರೆ ಒಂದು ಮತ್ತು ಒಂದು ಎರಡು ಆಗುವುದಿಲ್ಲ ಎನ್ನಬಹುದೇ?

 Srinath Bhalle Column: Who Needs This Hema And Hemaa Calculation?

ಎಲ್ಲ ಬೆಂಡೇಕಾಯಿಗಳೂ ಒಂದೇ ತೂಕ ಇರಲ್ಲ
ಒಂದು ವೇಳೆ ಒಂದು ಬೆಂಡೆಕಾಯಿಯ ತೂಕ ೨೫ ಗ್ರಾಂ ಇರುತ್ತದೆ ಅಂದುಕೊಳ್ಳಿ. ಎಲ್ಲ ಬೆಂಡೇಕಾಯಿಗಳೂ ಒಂದೇ ತೂಕ ಇರುವುದಾದರೆ ಇಪ್ಪತ್ತು ಬೆಂಡೇಕಾಯಿಗಳನ್ನು ತೆಗೆದುಕೊಂಡರೆ ಅರ್ಧ ಕೆಜಿ ಆಗುತ್ತದೆ ಅಲ್ಲವೇ? ತೂಕ ಮಾಡುವ ಅವಶ್ಯಕತೆಯೇ ಇರುವುದಿಲ್ಲ ಅಲ್ಲವೇ? ಆದರೆ ಲೆಕ್ಕಗಳೆಲ್ಲಾ ಬೆಂಡೆಕಾಯಿಯಷ್ಟು ಸುಲಭವಲ್ಲ ಅಲ್ಲವೇ? ಅಷ್ಟೆಲ್ಲಾ ತರಕಾರಿ ಇರುವಾಗ ಬೆಂಡೇಕಾಯಿ ವಿಷಯವನ್ನೇ ಏಕೆ ತೆಗೆದುಕೊಂಡೆ? ಆಂಗ್ಲದಲ್ಲಿ ಬೆಂಡೆಕಾಯಿಯನ್ನು lady's finger ಎನ್ನುತ್ತಾರೆ. Okra ಎಂದೂ ಹೇಳುತ್ತಾರೆ ಬಿಡಿ. lady's finger ಎಂದಾಗ ಒಂದು ಕೈಯಲ್ಲಿನ ಐದು ಬೆರಳುಗಳೇ ಸಮ ಇಲ್ಲಾ ಎಂದ ಮೇಲೆ, ಒಂದೇ ಗಿಡದ ಕಾಯಿಗಳೂ ಸಮ ಅಲ್ಲಾ ಅಂತಾಯ್ತು. ಹಾಗೆಯೇ ಎರಡು ಗಿಡಗಳ ಕಾಯಿಗಳೂ ಸಮ ಇರುವುದಿಲ್ಲಾ ಅಲ್ಲವೇ? ಈಗ ಅನ್ನಿಸುತ್ತದೆ ಅಲ್ಲವೇ? ಯಾರಿಗೆ ಬೇಕು ಈ ಲೆಕ್ಕ?

ಅದಕ್ಕೆ ತಕ್ಕಂತೆ ವೇಗವಾಗಿ ಆಲೋಚಿಸಬೇಕು
ಮೊನ್ನೆ ಒಂದು ಲೇಖನದಲ್ಲಿ ಒಂದು ಲೆಕ್ಕ ಕೇಳಿದ್ದೆ. 'ಒಂದು ಬಟ್ಟೆ ಒಣಗಲು ಐದು ನಿಮಿಷ ಬೇಕಾದರೆ, 10 ಬಟ್ಟೆಗಳು ಒಣಗಲು ಎಷ್ಟು ಸಮಯ ಬೇಕಾಗುತ್ತದೆ?' ಅಂತ. ಒಂದು ಸಮಸ್ಯೆಗೆ ಪರಿಹಾರ ಸೂಚಿಸುವ ಮೊದಲು ಮುಖ್ಯವಾದ ಒಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಪರಿಹಾರ ಕಂಡು ಹಿಡಿಯಲು ಎಷ್ಟು ಸಮಯವಿದೆ ಅಂತ. ಅದಕ್ಕೆ ತಕ್ಕಂತೆ ಮನಸ್ಸನ್ನು ಸಿದ್ಧ ಮಾಡಿಕೊಳ್ಳಬೇಕು. ಉದಾಹರಣೆಗೆ ಒಂದು ಪ್ರಶ್ನೆಗೆ ಉತ್ತರಿಸಲು ೩೦ ಸೆಕೆಂಡ್ಸ್ ಮಾತ್ರ ಸಮಯವಿದೆ ಎಂದರೆ ಅದಕ್ಕೆ ತಕ್ಕಂತೆ ವೇಗವಾಗಿ ಆಲೋಚಿಸಬೇಕು. ಸದ್ಯಕ್ಕೆ ನಾನು ಕೇಳಿದ ಲೆಕ್ಕಕ್ಕೆ ಯಾವುದೇ ಸಮಯ ಮಿತಿ ಹೇಳಿರಲಿಲ್ಲ. ಹಾಗಾಗಿ ಕೊಂಚ ಆಲೋಚನೆ ಮಾಡೋಣ ಬನ್ನಿ.

ಎರಡನೆಯ ವಸ್ತ್ರವೂ ಕರವಸ್ತ್ರ ಅಂತಲೇ ಹೇಳಿದವರಾರು?
ಒಂದು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಮುನ್ನ ಪ್ರಶ್ನೆಗಳನ್ನು ಹಾಕಬೇಕು. ಒಂದು ಬಟ್ಟೆ ಒಣಗಲು ಐದು ನಿಮಿಷ ಬೇಕಾಗುತ್ತದೆ ಸರಿ. ಹತ್ತೂ ಬಟ್ಟೆಗಳು ಒಂದರ ಪಕ್ಕದಲ್ಲಿ ಒಂದು ನೇತು ಹಾಕಲಾಗಿದೆಯೇ? ಎಂಬುದು ಮುಂದಿನ ಪ್ರಶ್ನೆ. ಇಲ್ಲಾ ಎಂದರೆ ಒಂದರ ನಂತರ ಒಂದು ಅಂತಾದರೆ ಬಹುಶಃ 50 ನಿಮಿಷಗಳು ಅಂತಾಗಬಹುದು. ಇದು ಒಂದು ಉತ್ತರ ಅಷ್ಟೇ, ಆದರೆ ಪ್ರಶ್ನೆಗಳು ಅಲ್ಲಿಗೆ ನಿಲ್ಲಬಾರದು. ಮೊದಲ ಬಟ್ಟೆ ಒಂದು ಕರವಸ್ತ್ರ ಇರಬಹುದು ಆದರೆ ಎರಡನೆಯ ವಸ್ತ್ರವೂ ಕರವಸ್ತ್ರ ಅಂತಲೇ ಹೇಳಿದವರಾರು? ಒಂದು ದಪ್ಪನೆಯ ಬೆಡ್ ಶೀಟ್ ಕೂಡಾ ಆಗಿರಬಹುದು ಅಲ್ಲವೇ? ಹೀಗಾಗಿ ಮುಂದಿನ ಪ್ರಶ್ನೆ ಎಲ್ಲಾ ಹತ್ತೂ ಬಟ್ಟೆಗಳು ಒಂದೇ ಸಮನಾಗಿದೆಯೇ? ಇಲ್ಲ, ಹತ್ತೂ ಬಟ್ಟೆಗಳು ಭಿನ್ನ ಎಂದರೆ ಒಂದೊಂದೂ ಬಟ್ಟೆ ಒಂದೊಂದು ಸಮಯಕ್ಕೆ ಒಣಗುತ್ತದೆ ಅಂತಾಯ್ತು. ಹಾಗಾಗಿ ಈ ಜನ್ಮದಲ್ಲಿ ಒಂದು ಸೂತ್ರ ಹಿಡಿದು ಈ ಉತ್ತರ ಕಂಡು ಹಿಡಿಯಲು ಆಗೋದಿಲ್ಲ ಅಂತ ಅಂದುಕೊಳ್ಳದಿರಿ.

ಯಾವ ಬಟ್ಟೆಯೂ ನೆಟ್ಟಗೆ ಒಣಗೋದಿಲ್ಲ
ಒಂದು ಬಟ್ಟೆ ಒಣಗಲು ಐದು ನಿಮಿಷ ಬೇಕಾಗುತ್ತದೆ ಸರಿ. ಅದು ಒಂದು dryerನಲ್ಲೂ ಒಣಗಬಹುದಲ್ಲವೇ? ಹಾಗಿದ್ದರೆ ಹತ್ತೂ ಬಟ್ಟೆಗಳು ಒಂದೇ dryer ನಲ್ಲಿ ಇದ್ದರೆ ಬಹುಶಃ ಐದೇ ನಿಮಿಷದಲ್ಲಿ ಒಣಗಬಹುದು. ಒಂದಾದ ಮೇಲೆ ಒಂದು ಹಾಕಿದರೆ ಐವತ್ತು ನಿಮಿಷದಲ್ಲೂ ಆಗಬಹುದು. ಅಥವಾ ಡ್ರ್ಯೆರ್ ಮೇಲೆ ಯಾವ option ಒತ್ತುತ್ತೇವೆಯೋ ಅದೂ ಆಗಬಹುದು. ಆದರೆ ಇದು ಲೆಕ್ಕವಲ್ಲ. ಯಾಕೆ ಅಂದ್ರೆ ಒಂಬತ್ತು ಚಿಕ್ಕ ಬಟ್ಟೆ ಹಾಕಿ ಒಂದು ದೊಡ್ಡ ಬೆಡ್ ಶೀಟ್ ಹಾಕಿದರೆ, dryer ಸುತ್ತುವಾಗ ಈ ಎಲ್ಲಾ ಚಿಕ್ಕ ಬಟ್ಟೆಗಳೂ ಆ ಬೆಡ್ ಶೀಟ್‌ನಲ್ಲಿ ಸಿಕ್ಕಿಕೊಂಡು ಯಾವ ಬಟ್ಟೆಯೂ ನೆಟ್ಟಗೆ ಒಣಗೋದಿಲ್ಲ.

ಯಾರಿಗೆ ಬೇಕು ಈ ಲೆಕ್ಕ?
ಕೊನೆಯದಾಗಿ ಇನ್ನೊಂದು ಮಾತು, ಒಂದು dryer ಶೇ.100ರಷ್ಟು ಒಣಗಿಸುವಂಥದ್ದೋ ಅಥವಾ ಕೇವಲ ಶೇ.80ರಷ್ಟು ಒಣಗಿಸುವಂಥದ್ದೋ? ನಮ್ಮಲ್ಲಿರುವ 100% ಒಣಗಿಸುವ dryer ನಲ್ಲಿ ವಿವಿಧ ಸೈಜಿನ, ವಿವಿಧ ಮೆಟೀರಿಯಲ್‌ನ ಬಟ್ಟೆಗಳೂ ಒಮ್ಮೆಗೆ ಒಣಗುತ್ತದೆ ಐವತ್ತು ನಿಮಿಷದಲ್ಲಿ. ಶೇ.80ರಷ್ಟು ಮಾತ್ರ ಒಣಗಿಸುವ dryer ಆದರೆ ಅಲ್ಲಿಗೆ ಲೆಕ್ಕ ಬಂದ್. ಈ ಸುಸಂದರ್ಭದಲ್ಲೇ ಕೇಳಬೇಕಿರೋದು "ಯಾರಿಗೆ ಬೇಕು ಈ ಲೆಕ್ಕ?' ಅಂತ.
ಬಟ್ಟೆ ಒಣಗಿಸುವ ಒಂದು ಪುಟ್ಟ ಲೆಕ್ಕದಲ್ಲಿ ಉತ್ತರ ಸಿಗಲಿಲ್ಲ ಅಂತ ನಾ ಬಲ್ಲೆ, ಒಂದು ಸಮಸ್ಯೆಗೆ ಪರಿಹಾರ ಹುಡುಕುವ ಹಾದಿಯಲ್ಲಿ, ಯಾವ ರೀತಿ ಪ್ರಶ್ನೆಗಳನ್ನು ಕೇಳಬೇಕು ಅಂತ ಅರ್ಥವಾಯ್ತು. ಒಂದು ಸಮಸ್ಯೆ ಎದುರಾದಾಗ ಧುತ್ತನೆ ಉತ್ತರ ಕಂಡುಹಿಡಿಯುವ ಮುನ್ನ ಪ್ರಶ್ನೆಗಳನ್ನು ಹಾಕಬೇಕು ಅಥವಾ ಹಾಕಿಕೊಳ್ಳಬೇಕು. ಸಮಸ್ಯೆಯನ್ನು ತಂದವರಲ್ಲಿ ಸೂಕ್ತ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಪರಿಹಾರ ಕಂಡುಹಿಡಿಯಬೇಕು. ಸುಮ್ ಸುಮ್ನೆ ಪ್ರಶ್ನೆಗಳನ್ನು ಕೇಳಿ, ಸಮಸ್ಯೆ ತಂದವರನ್ನು ಓಡಿಸಿಬಿಡಬಾರದು.

ಟಿವಿಯನ್ನು plug in ಮಾಡಿದ್ದೀರಾ?
ಸೂಕ್ತವಾಗಿ ಪ್ರಶ್ನೆಗಳನ್ನು ಕೇಳೋದು ಅಂದ್ರೆ ಏನು? ವೈದ್ಯರ ಬಳಿ ಹೋದಾಗ, ಏನಾಗಿದೆ ಎಂಬುದು ಅವರ ಮೊದಲ ಪ್ರಶ್ನೆ. ಎಷ್ಟು ದಿನದಿಂದ ಹೀಗೆ ಎಂಬುದು ಮುಂದಿನ ಪ್ರಶ್ನೆ. ಹೀಗೆಯೇ ಸಾಗುತ್ತದೆ ಪ್ರಶ್ನೆಗಳು. ಒಂದು ಹಂತದಲ್ಲಿ ವೈದ್ಯರಿಗೆ ಏನಾಗಿದೆ ಎಂಬ ಅರಿವು ಮೂಡಿರುತ್ತದೆ. ಟಿವಿ ಕೆಲಸ ಮಾಡುತ್ತಿಲ್ಲ ಎಂದಾಗ ಮೊದಲ ಪ್ರಶ್ನೆ ಎಂದರೆ ಮನೆಯಲ್ಲಿ ಕರೆಂಟ್ ಇದೆಯೇ? ಇದ್ದರೆ ಟಿವಿಯನ್ನು plug in ಮಾಡಿದ್ದೀರಾ? ಹೀಗೆಯೇ ಸಾಗುತ್ತದೆ ಮೂಲ ಕಾರಣ ಕಂಡುಹಿಡಿಯುವ ಬಗ್ಗೆ. ಒಂದು ಐರನ್ ಬಾಕ್ಸ್ ಕೆಲಸ ಮಾಡುತ್ತಿಲ್ಲಾ ಎಂದರೆ wiring ಪರಿಶೀಲನೆ ಮಾಡಬೇಕು. ಅದರ ಬದಲಿಗೆ ಕಳೆದ ಬಾರಿ ಐರನ್ ಮಾಡಿದ್ದು ಯಾವಾಗ? ಎಷ್ಟು ಬಟ್ಟೆಗಳನ್ನು ಮಾಡಿದ್ದು? ಅಂದು ಯಾವ ವಾರ? ಇತ್ಯಾದಿಗಳ ಮಾಹಿತಿಗಳನ್ನು ಕಲೆ ಹಾಕಿದರೆ ಬಹುಶಃ ಅದರಿಂದ ಯಾವ ಪ್ರಯೋಜನವೂ ಆಗಲಾರದು.

ನಗೆಗಳಲ್ಲಿ ಹಲವಾರು ಬಗೆ ಇದೆ
ಈಗ ಪ್ರಶ್ನೆಗಳನ್ನು ಕೇಳಿ ಉತ್ತರದತ್ತ ಸಾಗಬೇಕು ಎಂದಿದ್ದು ಸರಿ. ಇದನ್ನು ಪರೀಕ್ಷೆ ಮಾಡಬೇಕು ಎಂದರೆ ಹೊರಡುವ ಮುನ್ನ ಮತ್ತೊಂದು ಪ್ರಶ್ನೆಯೇ ಆಗಲಿ. ಸ್ವಲ್ಪ ಪ್ರಾಕ್ಟೀಸ್ ಮಾಡುವುದು ಒಳ್ಳೆಯದು. ನಗೆಗಳಲ್ಲಿ ಹಲವಾರು ಬಗೆ ಇದೆ ಅಂತಾರೆ. ಹೂನಗೆ, ಕಿರುನಗೆ, ಮುಗುಳ್ನಗೆ, ಗಹಗಹಿಸುವ ನಗೆ ಹೀಗೆ. ನಗೆ ಚೆಲ್ಲುವಾಗ ತುಟಿಗಳು ಅಗಲವಾಗುತ್ತದೆ ಅಥವಾ ತುಟಿಗಳು ತೆರೆದುಕೊಳ್ಳುತ್ತದೆ. ಯಾವ ಬಗೆಯ ನಗುವಿಗೆ ಎರಡು ತುಟಿಗಳ ಅಂಚುಗಳ ನಡುವಿನ ದೂರ ಎಷ್ಟಿರುತ್ತದೆ? ಯಾವ ಬಗೆಯ ನಗುವಿಗೆ ಎರಡು ತುಟಿಗಳು ಎಷ್ಟು ತೆರೆದುಕೊಳ್ಳುತ್ತದೆ? ಹೋಗಲಿ ಬಿಡಿ ನಗುವಾಗ ನಗಬೇಕು ಅದನ್ನು ಅಳೆಯುವುದು ಬೇಡ ಎಂದಿರಾ?

ತಲೆಗೂದಲು ಒಂದೊಂದೆಡೆ ಖಾಲಿಯಾಗುತ್ತಾ ಸಾಗುತ್ತದೆ
ಹಾಗಿದ್ದರೆ ಈ ಲೆಕ್ಕ ಹೇಳಿ. ಒಬ್ಬೊಬ್ಬರ ತಲೆಗೂದಲು ಒಂದೊಂದೆಡೆ ಖಾಲಿಯಾಗುತ್ತಾ ಸಾಗುತ್ತದೆ. ಕೆಲವರಿಗೆ ಹಣೆಯ ಮೇಲ್ಭಾಗ, ಕೆಲವರಿಗೆ ನೆತ್ತಿ ಮತ್ತು ಕೆಲವರಿಗೆ ಶಿಖೆ ಖಾಲಿಯಾಗುತ್ತದೆ. ಹೀಗೆ ಖಾಲಿಯಾಗುವ ತಲೆಗೂದಲು ದಿನಕ್ಕೆ ಎಷ್ಟು ಉದುರುತ್ತದೆ? ಥತ್! ಯಾರಿಗೆ ಬೇಕು ಈ ಲೆಕ್ಕ ಎಂದರೆ ಕೊನೆಯ ಪ್ರಶ್ನೆ ಹೀಗಿದೆ. ಬೆಳ್ಳಗಾಗುವ ತಲೆಗೂದಲು ದಿನಕ್ಕೆ ಎಷ್ಟು ಮಿಲಿಮೀಟರ್ ಅಥವಾ ಮೈಕ್ರೊಮೀಟರ್ ಬೆಳ್ಳಗಾಗುತ್ತದೆ. ಯಾರಿಗೆ ಬೇಕು ಈ ಲೆಕ್ಕ ಅಂದ್ರಾ? ಹಾಗಿದ್ರೆ ಕಟ್ಟಕಡೆಯ ಪ್ರಶ್ನೆ. ನಿಜಕ್ಕೂ ಲಾಸ್ಟ್ ಆಯ್ತಾ? ಇಂಥವು ತಲೆಗೆ ಹುಳ ಅನ್ನಿಸಿದರೆ ಯಾವ ಹುಳ ಅಂತ ಗೊತ್ತೇ?

English summary
Srinath Bhalle Column: who needs this difference between Hema And Hemaa calculation?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X