ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಒಂದಷ್ಟು ಹಳತು, ಒಂದಷ್ಟು ಹೊಸತು, ಎಲ್ಲಾ ಚೌಚೌ

|
Google Oneindia Kannada News

ಮೊದಲಿಗೆ, ಚೌಚೌ ಎಂದರೆ ಆಂಗ್ಲದಲ್ಲಿ mixture ಅಂತಾರೆ. ನನ್ನ ಅನಿಸಿಕೆ ಪ್ರಕಾರ mixture ಅನ್ನುವುದನ್ನು ಕನ್ನಡದಲ್ಲಿ ಕಲಸುಮೇಲೋಗರ ಎನ್ನಬಹುದು. ಆದರೆ ಚೌಚೌ ಅಂತ ಕರೆಯೋದ್ಯಾಕೆ? ಸುಮ್ನೆ ಇರಲಿ ಅಂತ ಹೇಳಿರ್ತೀನಿ, ಚೌಚೌ ಅನ್ನುವುದು chao chao ಅಂತಾನೂ ಕೇಳಿಸುತ್ತೆ ಅಂತಾದರೆ chao chao ಅನ್ನುದು ನಾಯಿಯ ಒಂದು ತಳಿಯ ಹೆಸರು. ಇರಲಿ, 'ಚ' ಮತ್ತು 'ಬ' ಅಕ್ಷರಗಳಿಗೆ ವ್ಯತ್ಯಾಸ ಗೊತ್ತಿಲ್ಲದವರು ಚೌಚೌ ಅನ್ನೋದನ್ನು ಬೌಬೌ ಅಂತ ಕರೆದರೆ ಅದೆಷ್ಟು ಆಭಾಸ ಅಲ್ಲವೇ?

ಇಂದಿನ ವಿಷಯ ಇಂಥದ್ದು ಅಂತೇನಲ್ಲ ಬದಲಿಗೆ, ಹಲವಾರು ವಿಷಯಗಳ ಸಂತೆ ಈ ಇಂದಿನ ಕಂತೆ. ಹೀಗೇಕೆ? ತುಂಬಾ ಸಿಂಪಲ್ ನಿಮ್ಮ ಅಂದ್ರೆ ನಮ್ಮ ಒಂದು ದಿನದ ಜೀವನದಲ್ಲಿ ಒಂದೇ ರೀತಿ ವಿಷಯಗಳು ನಡೆಯುತ್ತದಾ? ಇಲ್ಲಾ ತಾನೇ? ಬೆಳಿಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಉಪ್ಪಿಟ್ಟು, ಸಂಜೆಗೆ ಉಪ್ಪಿಟ್ಟು ಮತ್ತು ರಾತ್ರಿ ಉಪ್ಪಿಟ್ಟು ತಿನ್ನುವಿರಾ? ಇಲ್ಲಾ ತಾನೇ? ಹಾಗೆಯೇ ಇದೂ. ಜೀವನ ರಂಗುರಂಗಾಗಿ ಇರಬೇಕು ನೋಡಿ. ನವರಸಗಳಿರಬೇಕು, ಬರೀ 'ಶ್ರುತಿ ಅಮ್ಮ'ನ ಹಾಗೆ ಅಳುವುದಕ್ಕೆ ಆಗುತ್ತೇ?

ಈವರೆಗೆ ನೀವು ಕಂಡಂತೆ ಏನೇನು ಬದಲಾವಣೆಗಳಾಗಿವೆ
ಒಮ್ಮೆ ಒಬ್ಬರು ನನ್ನನ್ನು ಸಂದರ್ಶನ ರೂಪದಲ್ಲಿ ಪ್ರಶ್ನೆ ಕೇಳಿದರು, "ನಿಮ್ಮ ಜೀವನದಲ್ಲಿ ಈವರೆಗೆ ನೀವು ಕಂಡಂತೆ ಏನೇನು ಬದಲಾವಣೆಗಳಾಗಿವೆ?". ಕೋವಿಡ್ ಸಮಯದಲ್ಲಿ ಒಬ್ಬೊಬ್ಬರ ಜೀವನದಲ್ಲೂ ಏನೇನೋ ಬದಲಾವಣೆ ಆಯ್ತು ಅಲ್ಲವೇ? ಇದೇ ದಿಶೆಯಲ್ಲಿ ಆಲೋಚಿಸುತ್ತಾ, ಈ ಪ್ರಶ್ನೆ ಕೇಳಿರಬಹುದು ಅಂತ ಅಂದುಕೊಂಡರೂ, "ಜೀವನದಲ್ಲಿ' ಅಂತ ಕೇಳಿದ್ದು ಸ್ವಲ್ಪ ದೊಡ್ಡ ವ್ಯಾಪ್ತಿ ಪ್ರಶ್ನೆ ಅನ್ನಿಸಿತು. ಹುಟ್ಟಿದ ಮೇಲೆ ಹೊರಳಿದ್ದೇ, ಆಮೇಲೆ ನಿಂತೇ ಅಂತ ಶುರು ಮಾಡಿದರೆ ಹೇಗೆ ಅಂತ ಆಲೋಚನೆ ಬಂದಿದ್ದು ಸುಳ್ಳಲ್ಲ.

Srinath Bhalle Column: Some Old, Some New and All Mixture

ಹಾಗಾಗಿ, ಕೊಂಚ ಆಲೋಚನೆ ಮಾಡಿ ಹೇಳಿದೆ, "ನಾನು ಸೇದೋದು ಬಿಟ್ಟೆ, ಕುಡಿಯೋದು ಕಲಿತೆ, ಬರೆಯೋದು ಕಡಿಮೆ ಮಾಡಿದೆ". ಕೆಟ್ಟದಾಗಿ ನೋಡಿ ಜಾಗ ಖಾಲಿ ಮಾಡಿದರು. ನಾನು ಕೇಳುವುದು ಇಷ್ಟೇ, ಕೊಂಚ ಆಳವಾಗಿ ಆಲೋಚಿಸಿದರೆ, ಅಲ್ಲೊಂದು ಬೇರೆ ಅರ್ಥವಿದೆ ಅಂತ ಜನ ಏಕೆ ಅಂದುಕೊಳ್ಳೋದಿಲ್ಲ? ಒಂದು ಮಾತು ಕೇಳಿಸಿಕೊಂಡು ಏನೆಲ್ಲ ಅರ್ಥೈಸಿಕೊಂಡು ಅದರ ಬಗ್ಗೆ ಸುದ್ದಿ ಮಾಡಿ ಕೊನೆಗೆ ಗುಲ್ಲೆಬ್ಬಿಸಿ ಮನಃಶಾಂತಿ ಹಾಳು ಮಾಡುವುದೇ ಇಂದಿನ ರೀತಿ ಅಲ್ಲವೇ?

ನಾನು ಸೇದೋದು ಬಿಟ್ಟೆ, ಕುಡಿಯೋದು ಕಲಿತೆ
ಇಷ್ಟಕ್ಕೂ ನಾನು ಹೇಳಿದ್ದೇನು? "ನಾನು ಸೇದೋದು ಬಿಟ್ಟೆ, ಕುಡಿಯೋದು ಕಲಿತೆ, ಬರೆಯೋದು ಕಡಿಮೆ ಮಾಡಿದೆ". ಭಿನ್ನವಾಗಿ ನಾನು ಹೇಳಿದ್ದೇನಪ್ಪ ಅಂದ್ರೆ, "ಎಲ್ಲೆಡೆ ಬೋರ್ವೆಲ್ ಬಂದು ನಮ್ಮ ಮನೆ ಬಾವಿ ಒಣಗಿದ ಮೇಲೆ, ನೀರು "ಸೇದೋದು ಬಿಟ್ಟೆ'! ಕೂಲ್ಸ್ ಡ್ರಿಂಕ್ಸ್ ಕುಡೀತಿದ್ದ ನಾನು, ಅದರಿಂದ ಆದ ತೊಂದರೆ ಅರಿತು, ಮುಂಚಿನ ಹಾಗೆ ನೀರನ್ನು 'ಕುಡಿಯೋದು ಕಲಿತೆ'. ಕಂಪ್ಯೂಟರ್ ಬಂದ ಮೇಲೆ ಕೀಲಿಮನೆ ಕುಟ್ಟೋ ಸಂಭ್ರಮದಲ್ಲಿ ಕೈ 'ಬರವಣಿಗೆ ಕಡಿಮೆ ಮಾಡಿದೆ' ಅಂತ ಅಷ್ಟೇ!

ಪರೀಕ್ಷೆಗಳು ಅನ್ನೋದು ಒಂದು ತರ್ಕಕ್ಕೆ ಸಿಗದ ಭಯವನ್ನು ಸೃಷ್ಟಿ ಮಾಡಿಬಿಡುತ್ತದೆ. ಇದನ್ನು ನಿಯಂತ್ರಿಸಬಲ್ಲ ಶಕ್ತಿ ಇರುವುದು ಬುದ್ದಿ ಮತ್ತು ಹೃದಯಕ್ಕೆ ಮಾತ್ರ. ಇದನ್ನು ಆಂಗ್ಲದಲ್ಲಿ ಹೀಗೆ ಹೇಳಿದ್ದಾರೆ 'Tests give one an irrational fear which can only be controlled by the power of the heart and the brain'. ಪರೀಕ್ಷೆ ಎಂದರೆ ಕೇವಲ ಮೂರು ಗಂಟೆಗಳ ಕಾಲ ಒಂದೆಡೆ ಕೂತು ಆವರೆಗೆ ಅರ್ಥೈಸಿಕೊಳ್ಳದೆ ಓದಿದ್ದನ್ನು ವ್ಯಾಕ್ ಅನ್ನೋದಲ್ಲ. ಇದಕ್ಕೆ ಹಲವಾರು ಸ್ವರೂಪಗಳು.

Recommended Video

Deepak Chahar ಟೆಸ್ಟ್ ಪಂದ್ಯ ಆಗದಿದ್ದರೂ ಅಭ್ಯಾಸದಲ್ಲಿ ತೊಡಗಿದ್ದು ಹೀಗೆ | Oneindia Kannada

ಆ ಭಗವಂತ ಐದೂ ಕೊಟ್ಟಿದ್ರೆ ಚೆನ್ನಾಗಿ ಕಾಪಾಡಿಕೊಳ್ಳಿ
ಮುಂದಿನ ತಿಂಗಳ ಮಗಳ ಮದುವೆಗೆ ಐದು ಲಕ್ಷ ಹೇಗೆ ಹೊಂದಿಸಬೇಕು ಎಂಬುದು ಒಂದು ಪರೀಕ್ಷೆಯೇ ಸರಿ. ಸೀತಾಮಾತೆ ರಾಮನನ್ನು ಸೇರಬೇಕು ಎಂದು ಬಂದಾಗ ಶ್ರೀರಾಮ ಒಡ್ಡಿದ್ದು ಅಗ್ನಿಪರೀಕ್ಷೆ. ಕೆಲಸಕ್ಕೆ ಅರ್ಜಿ ಹಾಕಿ ನಂತರ ಸಂದರ್ಶನ ಎದುರಿಸುವುದು ಒಂದು ಪರೀಕ್ಷೆಯೇ ಸರಿ. ಮದುವೆಯ ಸಂದರ್ಭದ ವರ ಪರೀಕ್ಷೆ ಅಥವಾ ವಧು ಪರೀಕ್ಷೆಯೂ ಒಂದು ಪರೀಕ್ಷೆ. ಜೀವನದಲ್ಲಿ ಹಲವಾರು ಬಾರಿ ಸಹನೆಯ ಪರೀಕ್ಷೆ ಎದುರಾಗುತ್ತಲೇ ಇರುತ್ತದೆ.

ಜೀವನದಲ್ಲಿ sense ಅನ್ನೋದು ಇರಬೇಕು. Sense ಅಂದ್ರೆ ಪಂಚೇಂದ್ರಿಯಗಳು ಅಂತೆಲ್ಲಾ ಹೇಳ್ತೀರಿ ಅಂತ ಗೊತ್ತು. ಇರಲಿ, ಆ ಭಗವಂತ ಐದೂ ಕೊಟ್ಟಿದ್ರೆ ಚೆನ್ನಾಗಿ ಕಾಪಾಡಿಕೊಳ್ಳಿ. ಆದರೆ ಇದಕ್ಕೂ ಮೇಲೆ ಇನ್ನೂ ಮೂರು senseಗಳೂ ಇವೆ. ಮೊದಲಿಗೆ Nonsense. ಎಲ್ಲರಲ್ಲೂ ಈ sense ಅನ್ನೋದು ಸುಪ್ತವಾಗಿ ಇರುತ್ತದೆ. ಬುದ್ದಿವಂತರು ತೋರಿಸಿಕೊಳ್ಳುವುದಿಲ್ಲ. ಮಿಕ್ಕವರಿಗೆ ಅದು ಒಲೆಯ ಮೇಲೆ ಇಟ್ಟ ಹಾಲಿನಂತೆ ಬೇಡದಿರುವ ಸಮಯದಲ್ಲೂ ಉಕ್ಕಿ ಏಳುತ್ತದೆ. ಎರಡನೆಯದು ಎಂದರೆ sixth sense ಅರ್ಥಾತ್ ಆರನೆಯ ಇಂದ್ರಿಯ. ಸಿನಿಮಾಗಳಲ್ಲಿ ತಾಯಿ ಪಾತ್ರಧಾರಿಗೆ ಈ sense ಅತ್ಯಧಿಕವಾಗಿ ಇರುತ್ತದೆ. ಲಂಡನ್‌ನಲ್ಲಿ ಈಕೆಯ ಇಬ್ಬರು ಮಕ್ಕಳು ಅಪ್ಪಿಕೊಂಡರೆ, ಉತ್ತರ ಭಾರತದಲ್ಲಿ ಇರುವ ಈ ತಾಯಿಗೆ ಅರಿವಾಗುತ್ತದೆ. ಮೂರನೆಯ ಅತ್ಯಂತ ಮುಖ್ಯವಾದ Sense ಎಲ್ಲರಲ್ಲೂ ಇರಲಿ ಎಂದೇ ನಾನು ಬಯಸುವೆ. ಅದುವೇ Sense of Humor.

ವಾಕ್ಯೂಮ್ ಮಾಡಿ ಕಸದ ಸಮೇತ ಕೊಟ್ರಾ?
Sense of humor ಇದ್ದಾಗ ಜೀವನದ ಏರಿಳಿತಗಳಲ್ಲಿ ಸುಲಭವಾಗಿ ಯಾನ ಮಾಡಬಹುದು. ಹೀಗೊಂದು ಕಾಲ್ಪನಿಕ ಸನ್ನಿವೇಶ.
"ನಮ್ಮನೆ ವಾಕ್ಯೂಮ್ ಕ್ಲೀನರ್ ಕೆಲಸ ಮಾಡ್ತಿಲ್ಲ. ನಿಮ್ಮದು ಕೊಡ್ತೀರಾ? ಅರ್ಧ ಗಂಟೆಗೆ ವಾಪಸ್ ಕೊಡ್ತೀನಿ"
"ಈ ರೀತಿ ಯಾರೂ ಕೇಳಿರಲಿಲ್ಲ. ಹೋಗ್ಲಿ ತೊಗೊಳ್ಳಿ" ಅಂತಂದ ಅವರು ಕೊಟ್ಟ ಮೇಲೆ, ಹೇಳಿದಂತೆ ಅರ್ಧ ಗಂಟೆಗೇ ವಾಪಸ್ ಕೊಟ್ಟೆ.
ಒಮ್ಮೆ ಚೆಕ್ ಮಾಡಿದ ಅವರು ಸಿಡುಕಿದರು, "ವಾಕ್ಯೂಮ್ ಮಾಡಿ ಕಸದ ಸಮೇತ ಕೊಟ್ರಾ? ಕ್ಲೀನ್ ಮಾಡಿ ಕೊಡೋದಲ್ವೇ?"

ನಾನು "ಛೇ ಛೇ, ನಾನು ಹಾಗೆಲ್ಲ ಮಾಡ್ತೀನ? ನೀವು ಕೊಟ್ಟ ಕ್ಲೀನರ್‌ನಿಂದ ಕಸವನ್ನು ಒಂದು ಕಡೆ ತೆಗೆದಿಟ್ಟು, ನನ್ನ ಕೆಲಸ ಮುಗಿಸಿ, ಕ್ಲೀನ್ ಮಾಡಿ, ನಿಮ್ಮ ಕಸ ಮತ್ತೆ ತುಂಬಿಸಿ, ನೀವು ಕೊಟ್ಟ ಹಾಗೇ ವಾಪಸ್ ಕೊಟ್ಟಿದ್ದೀನಿ. ನೀವು ಹೆಂಗೆ ಕೊಟ್ರೋ ಹಂಗೆ ಕೊಟ್ಟಿದ್ದೀನಿ. ತಪ್ಪಾ?"

ಪರಿಸ್ಥಿತಿ ವೈಪರೀತ್ಯ ಎದುರಿಸಲು ಧೀರನಾಗಿ ನಿಲ್ಲಬಹುದು
ಸಾಮಾನ್ಯವಾಗಿ ಮನುಷ್ಯ ನೀರಿನಂತೆ. ಆಯಾ ಸಂದರ್ಭಕ್ಕೆ ತಕ್ಕಂತೆ ಒಗ್ಗಿಕೊಳ್ಳುತ್ತಾನೆ. ಕೂದಲ ಕತ್ತರಿಸುವ ಕ್ಷೌರಿಕನ ಮುಂದೆಯೂ ತಲೆ ಬಾಗದವ ಮದುವೆಯಾದ ಮೇಲೆ ಹೆಂಡತಿ ಹೇಳಿದ್ದಕ್ಕೆಲ್ಲಾ ತಲೆ ಬಾಗಿಸುವವನಾಗುತ್ತಾನೆ. ಹುಟ್ಟಿದ ಮನೆಯಲ್ಲಿ ತಾನೇ ರಾಜಕುಮಾರಿ ಅಂತ ಮೆರೆದವಳು ಅತ್ತೆಯ ಮನೆ ಸೇರಿದ ಮೇಲೆ ಸಕಲ ಚಾಕರಿ ಮಾಡುವವಳೂ ಆಗಬಹುದು. ಬಹಳ ಸಾಧು ಸ್ವಭಾವದವ ಪರಿಸ್ಥಿತಿ ವೈಪರೀತ್ಯ ಎದುರಿಸಲು ಧೀರನಾಗಿ ನಿಲ್ಲಬಹುದು. ಹಲವೊಮ್ಮೆ ಮನುಷ್ಯ ಪಾತ್ರೆಯಂತೆ. ಫ್ರಿಡ್ಜ್ ಒಳಗೆ ಇಟ್ಟರೆ ತಣ್ಣಗಿರುವಂತೆ, ಒಲೆಯ ಮೇಲಿಟ್ಟರೆ ಬಿಸಿಯಾಗುವಂತೆ, ತನ್ನ ಹೊಟ್ಟೆಯಲ್ಲಿ ಅತೀ ಬಿಸಿ ಪದಾರ್ಥವನ್ನೇ ಇಟ್ಟುಕೊಂಡರೂ ಏನೂ ಆಗದಂತೆ, ಬುಡಕ್ಕೆ ಬೆಂಕಿ ಹೊತ್ತಿದ್ದರೂ ಸೀಟಿ ಹೊಡೆದು ಆನಂದಿಸುವ ಕುಕ್ಕರಿನಂತೆ ನಾನಾ ರೂಪಧಾರಿ ಈ ಮಾನವ.

ಈ ಪಾತ್ರೆಗೂ ಮಾನವನಿಗೂ ಒಂದೇ ವ್ಯತ್ಯಾಸ. 'ಪಾತ್ರೆಯ ಒಳಭಾಗ ತೊಳೆದಷ್ಟು, ಹೊರ ಭಾಗ ತೊಳೆಯಬೇಕಿಲ್ಲ. ಸಾಂದರ್ಭಿಕ ಅಷ್ಟೇ! ಪಾತ್ರೆಯ ಒಳ ಭಾಗ ಥಳ ಥಳ ಅಂತಿದ್ದರೇ ಶೋಭೆ. ಮನುಷ್ಯನ ಒಳ ಭಾಗ ಇನ್ನೆಷ್ಟೇ ಥಳಗುಟ್ಟಿದರೂ, ಹೊರ ಭಾಗ ಥಳಗುಟ್ಟುವಂತೆ ಇರದಿದ್ದರೆ ಬೆಲೆಯೇ ಇಲ್ಲ'.

ತಪ್ಪನ್ನು ತಿದ್ದಿಕೊಂಡು ಮುಂದೆ ಸಾಗಲು ಅಡ್ಡಗಾಲು
ಹೀಗೊಂದು ನುಡಿಮುತ್ತು. 'Sorrow looks back, Worry looks around, Faith looks ahead' ಅಂತ. ಕೊರಗು ಅಥವಾ ದುಃಖವು ಸದಾ ಹಿಂದೆ ನೋಡುವುದು ಯಾಕೆ? ಅಯ್ಯೋ ನನ್ನ ಸ್ಥಿತಿ ಹೀಗಾಯ್ತಲ್ಲಾ, ಅವನನ್ನು ನಂಬಿ ನಾನು ದುಡ್ಡು ಹಾಕಬಾರದಿತ್ತು. ಹಾಗೆ ಮಾಡದೇ ಇದ್ದಿದ್ದರೆ ಚೆನ್ನಿತ್ತು, ಇಂದು ಈ ಸ್ಥಿತಿಗೆ ಬರುತ್ತಿರಲಿಲ್ಲ ಎಂಬುದು ಒಂದು ಉದಾಹರಣೆ. ಅಯ್ಯೋ ನನ್ನಿಂದ ಇವರು ದೂರವಾಗಬಾರದಿತ್ತು ಎಂದು ಇಲ್ಲದವರನ್ನೇ ನೆನೆಸಿಕೊಂಡು ಕೊರಗುತ್ತಲೇ ಇರುವುದು. ತಮ್ಮ ತಪ್ಪನ್ನು ತಿದ್ದಿಕೊಂಡು ಮುಂದೆ ಸಾಗಲು ಅಡ್ಡಗಾಲು ಹಾಕುವುದು ಈ ವ್ಯಸನಕ್ಕೆ ಕೆಲಸ. ಪದೇ ಪದೇ ಹಿಂದೆ ನಡೆದಿದ್ದನ್ನು ನೆನಪಿಸಿ ಮುಂದೆ ಅಡಿಯಿಡಲು ತಡೆಯುತ್ತದೆ. ವ್ಯಸನವು ಚಿಂತೆಗೆ ದಾರಿ ಮಾಡಿಕೊಡುತ್ತದೆ.

ಹೀಗೆ ಮಾಡಿದರೆ ಏನಾದರೂ ಆದರೆ ಗತಿ ಏನು? ಹೀಗೆ ಮಾಡದಿದ್ದರೆ ಏನಾಗುವುದೋ ಏನೋ? ಬಹುಶಃ ಹೀಗೆ ಹೆಜ್ಜೆ ಇಡಬಹುದೇನೋ, ಅಥವಾ ಈ ಮಾರ್ಗ ಹಿಡಿದರೆ ರಿಸ್ಕ್ ಕಡಿಮೆ ಇರಬಹುದೇ? ಇಲ್ಲ, ಈ ಹಾದಿಯೇ ಸರಿ ಅಂತೆಲ್ಲಾ 360 ಡಿಗ್ರಿ ಆಲೋಚನೆ ಮಾಡೀ ಮಾಡೀ ಮನ ಬಸವಳಿದು ಸತ್ತೇ ಹೋಗುತ್ತದೆ. ಕೊನೆಗೆ ಒಂದು ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ ಕಾಲ ಮಿಂಚಿ ಹೋಗಿರಬಹುದು ಅಥವಾ ನಿರ್ಧಾರ ಹಳತೇ ಆಗಿ ಹೋಗಬಹುದು.

ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು
ನಂಬಿಕೆ ಎಂಬುದೊಂದೇ ನಮ್ಮ ನಿತ್ಯಜೀವನದ ಮೂಲಮಂತ್ರವಾಗಬೇಕು. ನಂಬಿಕೆ ಎಂದರೆ ಯಾರೋ ಒಬ್ಬರನ್ನು ನಂಬಬೇಕು ಅಂತಲ್ಲ. ಯಾರೋ ಒಬ್ಬರ ಮೇಲೆ ವಿಶ್ವಾಸ ಇಟ್ಟು ಮುಂದುವರೆಯಬೇಕು ಅಂತಲ್ಲ, ಬಾಳಿಗೆ ನಮ್ಮ ಮೇಲೆ ನಮಗೆ ಮೊದಲು ನಂಬಿಕೆ ಇರಬೇಕು. ಒಂದು ಹೆಜ್ಜೆ ಮುಂದೆ ಇಡಬೇಕೆಂದರೆ, ನಾನು ನಡೆಯುತ್ತಿರುವ ಹಾದಿ ಸರಿ ಇದೆ, ಏನೇ ಆಗಲಿ ಅಥವಾ ಏನೇ ಬರಲಿ ಎದುರಿಸಿ ಮುನ್ನುಗ್ಗುತ್ತೇನೆ ಎಂಬ ದಿಟ್ಟ ನಂಬಿಕೆ ಇದ್ದರೆ ಮಿಕ್ಕೆಲ್ಲವೂ ಬಾಲ ಮುದುರಿಕೊಂಡು ಹಿಂದೆ ಬೀಳುತ್ತದೆ. ಆ ನಂಬಿಕೆ ಬೆಳೆಯಲು ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು. ಹಾಗಾಗಲು ನಮ್ಮ ಸಾಮರ್ಥ್ಯವನ್ನು ನಾವೇ ಗುರುತಿಸಿಕೊಳ್ಳಬೇಕು. ಏನಂತೀರಿ?

English summary
Srinath Bhalle Column: Do the same things happen in our day to day lives?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X