ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಮನಸ್ಸಿನಿಂದ ಮರೆಯಾಗದ ಸಂಖ್ಯೆಗಳು

|
Google Oneindia Kannada News

ಇಂದಿನ ಬರಹದ ವಿಷಯ ಮನಸ್ಸಿನಿಂದ ಮರೆಯಾಗದ ಸಂಖ್ಯೆಗಳು. ಮತ್ತೊಮ್ಮೆ ಲೆಕ್ಕದ ಬಗ್ಗೆಯಾದರೆ ನಾನು ಓದುವುದೇ ಇಲ್ಲ ಆಯ್ತಾ? ಎನ್ನದಿರಿ. ಇದು ಲೆಕ್ಕವಲ್ಲ. ಲೆಕ್ಕದಲ್ಲಿ ಸಂಖ್ಯೆ ಇದೆ ಆದರೆ ಸಂಖ್ಯೆಯಲ್ಲೇ ಲೆಕ್ಕವಿಲ್ಲ. ಒಂದಂತೂ ನಿಜ, ನಿಮಗೂ ಗೊತ್ತಿರುವಂತೆ ಲೆಕ್ಕವಿಲ್ಲದಷ್ಟು ಸಂಖ್ಯೆಗಳಿವೆ.

ಮೊದಲಿಗೆ ಗಣಪನೊಂದಿಗೆ ಶುರು ಮಾಡೋಣ. ಗಣೇಶ ಎಂದ ಕೂಡಲೇ ಮನಸ್ಸಿಗೆ ಬರುವ ಹಲವಾರು ಶ್ಲೋಕಗಳಲ್ಲಿ 'ವಕ್ರತುಂಡ ಮಹಾಕಾಯ' ಎಂಬುದೂ ಒಂದು. ಒಮ್ಮೆ ಈ ಶ್ಲೋಕದ ಬಗ್ಗೆ ಏನೋ ಮಾತು ಬಂದಾಗ, ಒಬ್ಬರು ನನ್ನ ಬಳಿ ಬಂದು ನೀವು ಯಾವ ಕಡೆಯವರು ಅಂತ ಕೇಳಿದ್ದರು. ಕೋಟಿ ಸೂರ್ಯ ಸಮಪ್ರಭೆಯ ಬಗ್ಗೆ ವಿವರಿಸಿದ ನನ್ನ ಮನ ಶೂನ್ಯವಾಗಿತ್ತು. ಯಾಕೆಂದರೆ, ನನಗೆ ಪ್ರಶ್ನೆಯೇ ಅರ್ಥವಾಗಲಿಲ್ಲ. ಅವರು ಹೇಳಿದ್ದು ಬೇರೇನೂ ಅಲ್ಲ ಬದಲಿಗೆ, ನಮ್ಮಲ್ಲಿ 'ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ' ಎನ್ನುತ್ತೇವೆ ಎಂದಿದ್ದರು. ನನಗೆ ಹೇಳಿಕೊಟ್ಟಿರುವುದು 'ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ' ಅಂತ. ನಾಲ್ಕನ್ನು ಮೂರರಿಂದ ಗುಣಿಸಿದರೂ, ಮೂರನ್ನು ನಾಲ್ಕರಿಂದ ಗುಣಿಸಿದರೂ ಉತ್ತರ ಹನ್ನೆರಡೇ ಅಲ್ಲವೇ?

ಶ್ರೀನಾಥ್ ಭಲ್ಲೆ ಅಂಕಣ: ಬುದ್ದಿ ಮರುಬಳಕೆ ಮಾಡಿ ಒಂದಷ್ಟು ಚಿಂತನೆ ಮಾಡುವಶ್ರೀನಾಥ್ ಭಲ್ಲೆ ಅಂಕಣ: ಬುದ್ದಿ ಮರುಬಳಕೆ ಮಾಡಿ ಒಂದಷ್ಟು ಚಿಂತನೆ ಮಾಡುವ

ಹದಿನಾರು ವರ್ಷದ ಹುಡುಗಿಯನ್ನು ಹುಡುಕಿಕೊಂಡು ಬಾ
ಕೋಟಿ ಸೂರ್ಯರ ಪ್ರಭೆಯ ಗಣಪನ ವಿಷಯದಲ್ಲಿ ಈ ವಿಷಯ ಸರಿ ಅನ್ನಿಸಿದರೂ, ಎಲ್ಲ ಕಡೆ ಈ ಮೂರು, ನಾಲ್ಕು, ಹನ್ನೆರಡು ಎಂಬುದು ಕೆಲಸಕ್ಕೆ ಬರುವುದಿಲ್ಲ. ಒಂದು ಹಳೆಯ ಜೋಕ್ ಹೇಳಬೇಕು ಎಂದರೆ ಅದು ಹೀಗಿದೆ. ಸಿರಿವಂತನೊಬ್ಬ "ಮಗನಿಗೆ ಮದುವೆ ಮಾಡಬೇಕು. ಮದುವೆಗೆ ಯೋಗ್ಯಳಾದ ಹದಿನಾರು ವರ್ಷದ ಹುಡುಗಿಯನ್ನು ಹುಡುಕಿಕೊಂಡು ಬಾ' ಎಂದು ಒಬ್ಬಾತನಿಗೆ ಕೆಲಸ ವಹಿಸುತ್ತಾನೆ. ಲೆಕ್ಕದ ವಿಷಯದಲ್ಲಿ ಬಹಳ ಆಸಕ್ತಿ ಇರುವ ಈ ಮನುಷ್ಯ ಕೇಳುತ್ತಾನೆ "ಹದಿನಾರು ವರ್ಷದ ಹುಡುಗಿ ಸಿಗದಿದ್ದರೆ ಎಂಟು ವರ್ಷ ಇಬ್ಬರನ್ನು ಕರೆದು ತರಲೇ ಧಣೀ? ಅಂತ'. ಇದನ್ನೇ ಹೇಳಿದ್ದು, ಒಂದು ಹದಿನಾರು ಎಂಬುದು ಎರಡು ಎಂಟುಗಳು ಅಲ್ಲ. ಎಂಟು ವರ್ಷದ ಇಬ್ಬರ ಬದಲಿಗೆ, ಎರಡು ವರ್ಷ ವಯಸ್ಸಿನ ಎಂಟು ಹೆಣ್ಣು ಕೂಸುಗಳನ್ನು ಕರೆದು ತಂದಿದ್ದರೇ? ಹದಿನಾರನ್ನು ಅಲ್ಲಿಗೇ ಬಿಡಿ, ನಾಲ್ಕು ವರ್ಷದ ನಾಲ್ವರನ್ನು ಕರೆದು ತರಬೇಡಿ.

Srinath Bhalle Column: Numbers That Are Not Hidden From The Mind

ಕೆಲವೊಂದು ಸಂಖ್ಯೆಗಳು ಮನಸ್ಸಿನಿಂದ ಹೋಗೋದೇ ಇಲ್ಲಾ ಅಲ್ಲವೇ? ಈ ಹದಿನಾಲ್ಕು ಎಂದ ಕೂಡಲೇ ಥಟ್ಟನೆ ನೆನಪಾಗೋದೇ "ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ'. ಹಾಡು ನೆನಪಾಗುವುದು ಒಂದೆಡೆ ಜೊತೆಗೆ ಶ್ರೀರಾಮನ ವನವಾಸವು ಹದಿನಾಲ್ಕು ವರ್ಷಗಳ ಕಾಲ ಎಂಬುದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಕೂತಿದೆ. ಎಷ್ಟರ ಮಟ್ಟಿಗೆ ಎಂದರೆ, ನಮ್ಮಲ್ಲಿ ಒಬ್ಬರು ಹದಿನಾಲ್ಕು ವರ್ಷಗಳ ಅಮೆರಿಕ ವಾಸದ ನಂತರ ಭಾರತಕ್ಕೆ ವಾಪಸ್ ಹೊರಟರು. ಅವರನ್ನು ಬೀಳ್ಕೊಡಲು ಬಂದವರು ಹೇಳಿದ್ದೇ "ವನವಾಸ ಮುಗಿಸಿ ವಾಪಾಸ್ ಹೊರಟಿರಿ, ಅಲ್ಲವೇ?' ಅಂತ.

ಶ್ರೀನಾಥ್ ಭಲ್ಲೆ ಅಂಕಣ: ಕೋಟಿನ ಬಗ್ಗೆ ಕೋಟ್ಸ್ ಹಾಕಿ ಒಂದೆರಡು ವಿಷಯ ಕೋಟ್ ಮಾಡೋಣಶ್ರೀನಾಥ್ ಭಲ್ಲೆ ಅಂಕಣ: ಕೋಟಿನ ಬಗ್ಗೆ ಕೋಟ್ಸ್ ಹಾಕಿ ಒಂದೆರಡು ವಿಷಯ ಕೋಟ್ ಮಾಡೋಣ

ಧರ್ಮರಾಯ ಮತ್ತು ದ್ರೌಪದಿ ಏಕಾಂತದಲ್ಲಿ
ಇನ್ನು ಮಹಾಭಾರತದ ಪಾಂಡವರ ಸನ್ನಿವೇಶವನ್ನೇ ತೆಗೆದುಕೊಂಡರೆ ಹನ್ನೆರಡು ಎಂಬ ಸಂಖ್ಯೆಯೂ ಮರೆಯಲಾಗುವುದೇ ಇಲ್ಲ. ಜೂಜಿನ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ ಪಾಂಡವರು. ಈ ಹನ್ನೆರಡು ಎಂಬ ಸಂಖ್ಯೆ ಅರ್ಜುನನ ವಿಷಯದಲ್ಲಿ ಮತ್ತೊಮ್ಮೆ ಮರುಕಳಿಸುತ್ತದೆ. ಬಬ್ರುವಾಹನ ಸಿನಿಮಾ ನೋಡಿದವರಿಗೆ ಈ ಹನ್ನೆರಡು ಎಂಬುದು ಯಾವುದು ಎಂಬ ಅರಿವಾಗಿರುತ್ತದೆ. ಧರ್ಮರಾಯ ಮತ್ತು ದ್ರೌಪದಿ ಏಕಾಂತದಲ್ಲಿ ಇರುವಾಗ, ವಿಧಿಯಿಲ್ಲದೇ ಅಲ್ಲಿಗೆ ತೆರಳಿದ ಅರ್ಜುನನು, ಈ ಮುಂಚೆಯೇ ಹಾಕಿಕೊಂಡಿದ್ದ ನಿಯಮದ ಪ್ರಕಾರ ಹನ್ನೆರಡು ವರ್ಷ ವನವಾಸಕ್ಕೆ ತೆರಳಲೇಬೇಕಾಗುತ್ತದೆ. ಆದರೆ ಈ ಹನ್ನೆರಡು ಹೆಚ್ಚಿನ ಸ್ಮೃತಿಪಟಲದಲ್ಲಿ ಇರುವುದಿಲ್ಲ ಬಿಡಿ.

ಮೂಲೆಮನೆ ರೋಜಿಯ ಹುಟ್ಟಿದ ಹಬ್ಬ ನೆನಪಿರುತ್ತದೆ
ಹಲವರಿಗೆ ಒಂದು ವಿಶೇಷ ಗುಣ ಇರುತ್ತದೆ. ಅದುವೇ memory power. ಈ ವಿಶೇಷ ಗುಣ ಹೆಂಗಳದ್ದು ಅಂತ ಹೇಳಲೇಬೇಕೇ? ಐದು ವರ್ಷದ ಹಿಂದೆ ಅದ್ಯಾವುದೋ ಸಂದರ್ಭದಲ್ಲಿ ಇಂಥವರು ಇಂಥಾ ಸೀರೆ ಉಟ್ಟಿದ್ದರು, ಅಂಥಾ ಒಡವೆ ಧರಿಸಿದ್ದರು ಎಂಬೆಲ್ಲಾ ನೆನಪಿರುವಂತೆ, ಅವರ ಖಂಡನ್‌ನಲ್ಲಿರುವ ಎಷ್ಟೋ ಮಂದಿಯ ಹುಟ್ಟಿದ ಹಬ್ಬ ಮತ್ತು ಮದುವೆಯ ದಿನಗಳನ್ನೂ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ದಿನಾಂಕಗಳೂ ಸಂಖ್ಯೆಗಳೇ ಅಲ್ಲವೇ? ಕೆಲವು ಗಂಡುಗಲಿ ಮೂಲೆ ಮನೆ ರೋಜಿಯ ಹುಟ್ಟಿದ ಹಬ್ಬ ನೆನಪಿರುತ್ತದೆ ಆದರೆ ಮಡದಿಯ ಹುಟ್ಟಿದ ಹಬ್ಬ ನೆನಪೇ ಇರುವುದಿಲ್ಲ. ಅದೂ ಬಿಡಿ, ಮದುವೆಯ ದಿನವೇ ನೆನಪಿರುವುದಿಲ್ಲ. ಮದುವೆಯ ದಿನವನ್ನೇ ಏಕೆ ಹೇಳಿದ್ದು ಎಂದರೆ, ಆ ಸುದಿನದಲ್ಲಿ ಇಬ್ಬರೂ ಸಮಭಾಗಿಗಳೇ ಅಲ್ಲವೇ? ರೋಜಿಯ ಹುಟ್ಟಿದ ಹಬ್ಬದ ಜನವರಿ ಒಂದು ಹಾಗಾಗಿ ನೆನಪಿನಲ್ಲಿ ಇರಬಹುದು ನಿಜ, ಆದರೆ ವರ್ಷದ ಮೂಲೆಯಲ್ಲೆಲ್ಲೋ ನೆನಪಿರದ ಒಂದು ದಿನ ಹುಟ್ಟಿಬಿಟ್ಟರೆ ಹೇಗ್ರೀ ನೆನಪಿನಲ್ಲಿ ಇಟ್ಟುಕೊಳ್ಳೋದು ಅಂತ ಹೇಳುವುದು ಮಾತ್ರ ಅಕ್ಷಮ್ಯ ಅಪರಾಧ. ನೀವು ಇಂಥಾ ಅಪರಾಧ ಮಾಡಿದ್ದರೆ, ಸಂಖ್ಯೆಗಳ ಬಗ್ಗೆ ನಿಗಾವಹಿಸುವುದು ಒಳ್ಳೆಯದು.

ಶಾಂತ ಕೂಡ ದಶರಥನ ಮಗಳು ಆದರೆ ಸಾಕುಮಗಳು
ಯಾವ ತಿಂಗಳಲ್ಲಿ ಎಷ್ಟು ದಿನಗಳು ಇರುತ್ತವೆ ಎಂಬ ಸಂಖ್ಯೆ ನೆನಪಿನಲ್ಲಿ ಇರಿಸಿಕೊಳ್ಳಲು ಹಲವು ವಿಧಗಳು ಇರುತ್ತವೆ. ಆದರೆ ಡಿಸೆಂಬರ್ ತಿಂಗಳಲ್ಲಿ ಮೂವತ್ತೊಂದು ದಿನಗಳಿವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಯಾವ ಸಾಧನವೂ ಬೇಕಿಲ್ಲ. ಮರೆಯಲು ಅಸಾಧ್ಯ ಎಂಬುದರ ಪಟ್ಟಿಯಲ್ಲಿ ಡಿಸೆಂಬರ್‌ನಲ್ಲಿ ಮೂವತ್ತೊಂದು ದಿನಗಳು ಎಂಬುದು ಅಚ್ಚಳಿಯದ ಸಂಖ್ಯೆ. ದಶರಥನಿಗೆ ಮೂವರು ಹೆಂಡಿರು, ದಶರಥನಿಗೆ ನಾಲ್ವರು ಮಕ್ಕಳು, ಪಾಂಡವರು ಐವರು, ಕೌರವರು ನೂರು ಎಂಬುದೆಲ್ಲಾ ಅಚ್ಚಳಿಯದ ಸಂಖ್ಯೆಗಳು. ಕೊಂಚ ಆಳಕ್ಕೆ ಇಳಿದಾಗ ರಾಮನ ಸಹೋದರಿಯಾದ ಋಷ್ಯಶೃಂಗರ ಪತ್ನಿ ಶಾಂತ ಕೂಡ ದಶರಥನ ಮಗಳು ಆದರೆ ಸಾಕುಮಗಳು ಎಂಬುದು ಹೆಚ್ಚಾಗಿ ತಲೆ ಬಾರದ ವಿಷಯ. ಇದರಂತೆಯೇ ಕರ್ಣನೂ ಒಬ್ಬ ಪಾಂಡವ ಎಂಬುದೂ ಮುಂದಿನ ಹಂತದಲ್ಲಿ ಆಲೋಚನೆಗೆ ಸಿಲುಕುವ ವಿಷಯ.

ಈಗ ನಿಮ್ಮ ನೆನಪಿನ ಸಂಖ್ಯೆಗಳನ್ನು ಒಂದಿಷ್ಟು ಕೆದಕುವ ಸಮಯ. ರಾಜಾ ವಿಕ್ರಮನು ಬೇತಾಳನು ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಹೇಳದೇ ಹೋದರೆ ಅವನ ತಲೆಯು ಸಿಡಿದು ಎಷ್ಟು ಹೋಳಾಗುತ್ತಿತ್ತು? ಬೇತಾಳವು ರಾಜನಿಗೆ ಎಷ್ಟು ಕಥೆಗಳನ್ನು ಹೇಳಿತು? ಇದೆಲ್ಲಾ ಸಲೀಸು ಅಂದ್ರಾ? ಪಂಚತಂತ್ರದಲ್ಲಿ ಎಷ್ಟು ತಂತ್ರಗಳಿವೆ? ಕೆಟ್ಟದಾಗಿ ನಗಬೇಡಿ, ಹಲವು ಬಾರಿ ಇದನ್ನೂ ಗೊಂದಲ ಮಾಡಿಕೊಳ್ಳುವವರು ಇದ್ದಾರೆ. ಅದರಲ್ಲೂ ಎದುರಿನ ಕುರ್ಚಿಯಲ್ಲಿ ಕೂತು ಪ್ರಶ್ನೆ ಕೇಳುತ್ತಿರುವವರು ಅಮಿತಾಭ್ ಬಚ್ಚನ್ ಅಥವಾ ನಾ.ಸೋಮೇಶ್ವರ ಅವರಾದರೆ ಗೊಂದಲ ಖಂಡಿತ ಆಗುತ್ತದೆ.

ದಶಾವತಾರ ಎಂದರೆ ಹತ್ತು ಅವತಾರಗಳು
ಮೇಲಿನ ಪ್ರಶ್ನೆಗಳನ್ನೇ ಮುಂದುವರೆಸಿದರೆ ಅರಿಷಡ್ವರ್ಗಗಳು ಎಂದರೆ ಎಷ್ಟು? ಸಪ್ತರ್ಷಿಗಳು ಎಷ್ಟು ಮಂದಿ? ಎಂದೆಲ್ಲಾ ಕೇಳಬಹುದು. ಒಂದು, ಎರಡು, ಮೂರು ನಾಲ್ಕು, ಐದು, ಆರು, ಏಳು ಆಮೇಲೆ ಏನು? ಅಷ್ಟಾವಧಾನ ಎಂದರೆ ಒಮ್ಮೆಗೆ ಎಂಟು ವಿಷಯಗಳ ಬಗ್ಗೆ ಗಮನ ಹರಿಸಬಲ್ಲವರು. ನವಗ್ರಹಗಳು ಒಂಬತ್ತು. ದಶಾವತಾರ ಎಂದರೆ ಹತ್ತು ಅವತಾರಗಳು. ಕೌರವ ಗಂಡುಗಳು ನೂರು ಆದರೆ ದುಶ್ಶಲೆ ಸೇರಿದರೆ ನೂರಾ ಒಂದು ಎಂಬುದೂ ಮುಂದಿನ ಹಂತವೇ ಸರಿ.

ಆದರೆ ಈ ಎಲ್ಲಾ ಪ್ರಶ್ನೆಗಳಿಗೂ ಮಹತ್ತರವಾದ ಅರ್ಥವಿದೆ ಎಂಬುದು ನೆನಪಿನಲ್ಲಿ ಇರಬೇಕು. ಉದಾಹರಣೆಗೆ ಭಾರತದ ಹೊರಗೆ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿರುತ್ತದೆ ಎಂಬುದು ಖಾತ್ರಿ ಇಲ್ಲ. ಭಾರತದಲ್ಲಿನ ಶಾಲಾಮಕ್ಕಳಿಗೇ ಎಷ್ಟೋ ಸಾರಿ ಈ ಪ್ರಶ್ನೆಗೆ ಉತ್ತರ ಗೊತ್ತಿರುತ್ತದೆ ಎಂಬುದೂ ಖಾತ್ರಿ ಇಲ್ಲ. ಏನ ಹೇಳ ಹೊರಟೆ ಎಂದರೆ, ಹಲವೊಮ್ಮೆ ಸಮಸ್ಯೆಯಲ್ಲೇ ಉತ್ತರವಿದ್ದರೂ ಗೋಚರಿಸದೇ ಹೋಗುತ್ತದೆ ಎಂಬುದಕ್ಕೆ ಇದು ನಿದರ್ಶನ. ಗುರುತಿಸಲು ಸೋಲುವುದಕ್ಕೆ ವಯಸ್ಸೇ ಇಲ್ಲಾ ಅಲ್ಲವೇ? ನೀವೇನಂತೀರಾ?

English summary
Srinath Bhalle Column: The subject of today’s writing is numbers that are not hidden from the mind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X