ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಅವಶ್ಯಕತೆಯೇ ಆವಿಷ್ಕಾರಗಳ ಮೂಲ

|
Google Oneindia Kannada News

ಅವಶ್ಯಕತೆಯೇ ಆವಿಷ್ಕಾರಗಳ ಮೂಲ ಎಂಬುದು ಬಹಳ ಹಿಂದಿನಿಂದಲೂ ಬಂದಿರುವ ಮಾತು. ಇಂಥದ್ದೊಂದು ಇದ್ದಿದ್ರೆ ಎಂಬ ಮಾತುಗಳೇ ಅವಶ್ಯಕತೆ. ಇಂಥದ್ದೊಂದು ಇದ್ದರೆ ತನ್ನ ಕೆಲಸ ಸಲೀಸು, ಇಂಥದ್ದಿಲ್ಲದಿದ್ದರೆ ಜೀವನವೇ ನಡೆಯೋದಿಲ್ಲ ಎಂಬುದೆಲ್ಲಾ ಅವಶ್ಯಕತೆಗಳೇ ನಿಜ.

ಇಂಥವರು ತೀರಿಕೊಂಡರು ಅಂತ ಒಂದು ಸುದ್ದಿಯನ್ನು ದೂತನ ಮೂಲಕ ಕಳುಹಿಸಿದಾಗ, ನೂರಕ್ಕೆ ನೂರು ಬಾರಿ ಸುರಕ್ಷಿತವಾಗಿ ಸುದ್ದಿ ತಲುಪದೇ ಹೋಗುತ್ತಿತ್ತು. ಪಾರಿವಾಳದ ಕಾಲಿಗೆ ಸಂದೇಶ ಕಟ್ಟಿ ಹಾರಿ ಬಿಡಲಾಗುತ್ತಿತ್ತು. ಸರಿ ಆದರೆ ಈ ಸೌಲಭ್ಯ ಎಲ್ಲರಿಗೂ ಇರಲಿಲ್ಲ ಅಲ್ಲವೇ? ಸೌಲಭ್ಯ ಇದ್ದರೂ ಆ ಪಾರಿವಾಳಕ್ಕೆ ಗಿಡುಗನ ಕಾಟ, ಬೇಟೆಗಾರರ ಕಾಟ ಇದ್ದೇ ಇತ್ತು. ಆಗ ಬಹುಶಃ ಯಾರೋ ಅಂದುಕೊಂಡಿರಬಹುದು, ಕೂತಲ್ಲೇ ನಾನು ಸಂದೇಶ ಕಳುಹಿಸಿದರೆ ಆ ಕಡೆಯವರಿಗೆ ತಲುಪುವಂತೆ ಇರಬೇಕಿತ್ತು ಅಂತ. ಒಂದು ದನಿ ನೂರಾಗಿರಬಹುದು, ನೂರು ಸಾವಿರವಾಗಿರಬಹುದು. ಇಂಥ ಎಷ್ಟೋ ಸಾವಿರ ಬೇಡಿಕೆಗಳು ಕಾಲಕ್ರಮೇಣದಲ್ಲಿ ಟೆಲಿಗ್ರಾಫ್ ಬಂದಿರಬಹುದು.

ದೂರಾತಿದೂರಗಳ ವಿಷಯದಲ್ಲಿ ಟೆಲಿಗ್ರಾಫ್ ಇರುವಂತೆ ಚಿಕ್ಕಪುಟ್ಟ ದೂರಗಳ ವಿಷಯಕ್ಕೆ ಬಂದಾಗ ಬಾವುಟದ ಬಳಕೆ ಮಾಡಲಾಗುತ್ತಿತ್ತಂತೆ. ಇಂದಿಗೂ ಹಲವಾರು ರೈಲ್ವೆ ಆವರಣದಲ್ಲಿ ಮತ್ತು ಏರ್ಪೋರ್ಟ್‌ಗಳಲ್ಲಿ ಇಂಥಾ ಬಾವುಟದ ಬಳಕೆ ಇದ್ದೇ ಇದೆ. ಆದರೆ ಇವು ದೊಡ್ಡವರ ವಿಷಯ, ಸಾಮಾನ್ಯ ಜೀವನದ ದೈನಂದಿನ ವಿಷಯವಲ್ಲ. ಮುಂದಾನೊಂದು ದಿನ ಈ ಟೆಲಿಗ್ರಾಫ್ ಕಳೆದು ಟೆಲಿಗ್ರಾಂ ಬಂತು.

 Srinath Bhalle Column: Necessity is the source of the Invention

ಪರಿಸ್ಥಿತಿ ಸಾಕಷ್ಟು ಸುಧಾರಿಸಿತು ಎನ್ನಬಹುದು, ಆದರೆ ಪೂರ್ಣ ಪ್ರಮಾಣದಲ್ಲಿ ಅಲ್ಲ. ಯಾಕೆ ಎಂದರೆ ಈ ಟೆಲಿಗ್ರಾಂನ ಪ್ರತೀ ಪದಕ್ಕೂ ದುಡ್ಡು ತೆರಬೇಕು ಮತ್ತಿತರ ಸಮಸ್ಯೆಗಳಿಂದಾಗಿ ಸಂಕ್ಷಿಪ್ತವಾಗಿಯೇ ತಿಳಿಸಬೇಕಿತ್ತು. 'Baby born' ಅಥವಾ 'Baby Arrived' ಎಂದು ಕಳುಹಿಸಿದರು ಅನ್ನಿ. ವಿಷಯವೇನೋ ತಿಳೀತು ಆದರೆ ಮರುಪ್ರಶ್ನೆ ಗಂಡೋ? ಹೆಣ್ಣೋ? ಇದಕ್ಕೆ ಉತ್ತರ ಕೊಡುವವರಾರು? ಆ ಕಡೆಯಿಂದ ಪತ್ರ ಬರುವವರೆಗೂ ಕಾಯಬೇಕು.

ಮತ್ತೆ ಅಳಲು ಆರಂಭ. ತ್ವರಿತವಾಗಿ ಮತ್ತೊಂದು ಸಾಧನ ಬೇಕಿತ್ತು. ಸಾಕಷ್ಟು ಮಾತಿನ ವಿನಿಮಯ ಆಗಬೇಕಿತ್ತು. ಒಂದು ಅಳಲು ನೂರಾಯ್ತು. ನೂರು ಸಾವಿರವಾಯ್ತು. ಅದು ಯಾರಿಗೋ ಕೇಳಿಸಿತು. ಮತ್ತೊಂದು ಆವಿಷ್ಕಾರದ ರೂಪವಾಗಿ ಬಂದಿದ್ದೇ ಟೆಲಿಫೋನ್. ಎಂಥಾ ಅದ್ಭುತವಾದ ಆವಿಷ್ಕಾರ ಎಂದರೆ ನಗರ, ದೇಶಗಳಲ್ಲೇ ಅಲ್ಲದೇ ವಿದೇಶದಲ್ಲಿ ಇರುವವರೊಂದಿಗೂ ಮಾತನಾಡುವಷ್ಟು. ಇಂದು ಟೆಲಿಫೋನ್ ಬುಕ್ ಮಾಡಿದರೆ ಅದೆಂದು ಮನೆಯನ್ನು ಅಲಂಕರಿಸುವುದೋ ಗೊತ್ತಿಲ್ಲ. ಎಲ್ಲಾ ಅವಿಷ್ಕಾರಗಳಂತೆ ಇದೂ ಕೂಡ ಆರಂಭದಲ್ಲಿ ಸಿರಿವಂತರ ಮನೆ ಸ್ವತ್ತು ಆಗಿತ್ತು. ಒಂದು ಮನೆಯಲ್ಲಿ ಅದಕ್ಕೊಂದು ವಿಶೇಷ ಆಸನ, ಅದಕ್ಕೊಂದು ರತ್ನಗಂಬಳಿ, ದಿನವೂ ಧೂಳು ಹೊಡೆಸಿಕೊಳ್ಳುವ ಸೌಭಾಗ್ಯವೂ ಇತ್ತು ಈ ಸಾಧನಕ್ಕೆ. ಸುಮ್ ಸುಮ್ನೆ ಯಾರೂ ಮುಟ್ಟುವ ಹಾಗಿಲ್ಲ. ಮನೆಯ ಜನರೇ ಖುಷಿಯಲ್ಲಿ ಆ ಮೊದಲ ತಿಂಗಳು ಫೋನ್ ಇರುವ ಮನೆಯವರಿಗೆ ಕರೆ ಮಾಡಿ ಫೋನ್ ನಂಬರ್ ಕೊಟ್ಟಿದ್ದೂ ಕೊಟ್ಟಿದ್ದೆ.

ಪಕ್ಕದ ಮನೆಯವರು ಈ ಮನೆಯವರ ನಂಬರನ್ನು ಬೇರೆಯವರಿಗೆ ಕೊಡುವುದೂ ಇತ್ತು. ಅಷ್ಟೇ ಅಲ್ಲದೇ, ಈ ಪಕ್ಕದ ಮನೆಯವರೇ ಜಯನಗರದಿಂದ ಇವರ ಮನೆಗೆ ಕರೆ ಮಾಡಿ, "ಈಗ ಹೊರಟಿದ್ದೇವೆ, ನನ್ನ ಹೆಂಡತಿಗೆ ಅನ್ನಕ್ಕೆ ಮಾಡಕ್ಕೆ ಹೇಳ್ತೀರಾ?' ಎಂದೂ ಆ ಫೋನ್ ಬಳಸಿಕೊಂಡವರು ಇದ್ದಾರೆ. ಮೊದಲ ತಿಂಗಳ ನಂತರ ಮನೆಗೆ ಬಿಲ್ ಬಂದಾಗ, ಯಜಮಾನನ ಕಟ್ಟುನಿಟ್ಟಾದ ಆಜ್ಞೆ ಬಂದ ಮೇಲೆ ಫೋನ್ ಬಳಕೆಯ ಮೇಲೆ ಹಿಡಿತ ಬರುತ್ತದೆ.

ಇಲ್ಲೂ ಎಲ್ಲಾ ಸಮಸ್ಯೆಗಳು ಬಗೆ ಹರಿಯಲಿಲ್ಲ. ಇಂಥಾ ಕಡೆ ಬನ್ನಿ ಭೇಟಿಯಾಗುತ್ತೇನೆ ಎಂಬ ಮಾತುಕತೆಯಾಗಿರುತ್ತದೆ ಎಂದುಕೊಳ್ಳಿ. ನೀವೂ ತಯಾರಾಗಿ ಬೆಳ್ ಬೆಳಿಗ್ಗೆ ಬಸ್ ಹಿಡಿದು ನಾಲ್ಕು ಘಂಟೆ ಪಯಣ ಮಾಡಿ ಅಲ್ಲಿಗೆ ಹೋದರೆ ಆಸಾಮಿಯೇ ಪತ್ತೆ ಇಲ್ಲ. ಆಗ ಆ ಮನೆಯವರು, ನಿಮಗೆ ಬೆಳಿಗ್ಗೆ ಕರೆ ಮಾಡಿದ್ದರು ಆದರೆ ನೀವು ಆಗಲೇ ಹೊರಟೇ ಬಿಟ್ಟಿದ್ರಿ ಅಂತ ಅನ್ನಬಹುದು. ಛೇ! ನಾನೆಲ್ಲೇ ಇದ್ದರೂ ಕರೆ ಸ್ವೀಕರಿಸುವ ಹಾಗೆ ಇರಬೇಕಿತ್ತು ಅಂತ ಅನ್ನಿಸಬಹುದು.

ಇಂಥಾ ಅನಿಸಿಕೆಗಳು ಮತ್ತೊಮ್ಮೆ ನೂರು ಜನರಲ್ಲಿ ಬಂದಿರಬಹುದು. ಆಮೇಲೆ ಸಾವಿರ ಮಂದಿಯ ಮನದಲ್ಲಿ ಬಂದಿದ್ದು ಯಾರಿಗೋ ಕೇಳಿಸಿತು. ಅಲ್ಲೊಂದು ಆವಿಷ್ಕಾರ ಹುಟ್ಟಿಕೊಂಡಿತು. ಅಲ್ಲೊಂದು ನಡೆದಾಡುವ ಫೋನ್ ಅವತರಿಸಿತು. ಅದುವೇ ಮೊಬೈಲ್! ಎಂಥಾ ಆವಿಷ್ಕಾರ ಅಂತೀರಿ? ಒಂದೇ, ಎರಡೇ, ಹತ್ತಾರು ಬಗೆಯ ಫೋನ್‌ಗಳು ಎಲ್ಲರ ಅಂಗೈಗಳನ್ನು ಅಲಂಕರಿಸಿತ್ತು.

ಇದಕ್ಕೂ ಬಹಳ ಮುಂಚೆ, ಕಾಲ ಬದಲಾಯ್ತು. ನಂಬಿಕೆಗಳು ಟೊಳ್ಳಾಗಲು ಆರಂಭವಾಗಿತ್ತು. ಕೊಟ್ಟ ಮಾತಿನ ಮೇಲೆ ನಂಬಿಕೆಗಳು ಕಡಿಮೆಯಾಯ್ತು. Documentation ಅಥವಾ ದಾಖಲೆಗಳಿಗಾಗಿ ಕಾಗದಪತ್ರಗಳು ಬೇಕೇ ಬೇಕು ಎಂಬಷ್ಟು. ಸಮಸ್ಯೆಗಳು ಉದ್ಭವವಾಗಿ, ಕಾರ್ಬನ್ ಇಟ್ಟು ಬರೆಯುವುದು ಅವಿಷ್ಕಾರವಾಯ್ತು. ಇದೂ ಒಂದಷ್ಟು ಕಾಲ ನಡೆಯಿತು. ಕಾರ್ಬನ್ ಕಾಪಿಗಳ ಕಾಗದಗಳ ಜೀವಾವಧಿ ಕಡಿಮೆ ಆದರೆ ಸಮಸ್ಯೆಗಳ ಸಂಖ್ಯೆ ಮಾತ್ರ ದಿನ ದಿನಕ್ಕೂ ಹೆಚ್ಚುತ್ತಲೇ ಸಾಗಿತ್ತು. ಮತ್ತೊಮ್ಮೆ ಅಳಲು ಆರಂಭವಾಯ್ತು.

ನೂರು ಇನ್ನೂರಾಯ್ತು ಮುಂದೆ ಸಾವಿರಾರು ಆಯ್ತು ಎಂದುಕೊಳ್ಳೋಣ. ಆಗ ಅವತರಿಸಿದ್ದೇ, Copier ಯಂತ್ರ. ಒಂದು ಕಾಗದವನ್ನು ದಬ್ಬಿ ಅದರಂತೆಯೇ ನಕಲು ತೆಗೆದಾಗ ಅದೊಂದು ಮಹತ್ ಅವಿಷ್ಕಾರವೇ ಆಗಿತ್ತು. ಕಾಲೇಜುಗಳಿಗೆ ಅಪ್ಲಿಕೇಶನ್ ಹಾಕುವ ಸಂದರ್ಭದಲ್ಲಿ ಮಾರ್ಕ್ಸ್ ಕಾರ್ಡ್ ಅನ್ನು ಕಾಪಿ ಮಾಡಿಸಿಕೊಂಡು ಕೊಡುವುದು ನಡೆದಿತ್ತು. ಈ ಮುನ್ನ ಹೇಗೆ ನಡೆದಿತ್ತೋ ನನಗೆ ಅರಿವಿಲ್ಲ. ಅಂದ ಹಾಗೆ, ಸಮಸ್ಯೆಗಳು ಬಗೆ ಹರಿಯಿತೇ?

ಮಾರ್ಕ್ಸ್ ಕಾರ್ಡ್ ಮತ್ತಿತರ ಅತೀ ಮುಖ್ಯ ಕಾಗದಪತ್ರಗಳನ್ನು ನಕಲು ಮಾಡುವಾಗ ಮೂಲಪ್ರತಿಯ ಮೇಲೆ ಪೆನ್ಸಿಲ್‌ನಿಂದ ಸಂಖ್ಯೆಯನ್ನು ತಿದ್ದಿ, ನಕಲು ತೆಗೆದು ಮತ್ತೆ ಮೂಲಪ್ರತಿಯನ್ನು ಸರಿಪಡಿಸಿ ಮೋಸ ಮಾಡುವ ಪ್ರಕ್ರಿಯೆ ಆರಂಭವಾಯ್ತು. ಈ ಮೋಸವನ್ನು ತಡೆಯಲು ಕಾಪಿ ಕೊಟ್ಟರೂ ಮೂಲಪ್ರತಿಯೊಂದಿಗೆ ಹೋಲಿಸಿ ನೋಡುವ manual process ನ ಆವಿಷ್ಕಾರ ಆರಂಭವಾಯ್ತು. ಹೊಸ ಆವಿಷ್ಕಾರಗಳಿಂದ ಕೆಲಸವೂ ಹೆಚ್ಚಿತೇ?

ಮತ್ತೊಂದು ಸಮಸ್ಯೆಯೂ ಉದ್ಭವವಾಯ್ತು. ಬಣ್ಣದ ಕಾಗದವನ್ನು ಒಳಗೆ ಬಿಟ್ಟು ನಕಲು ತೆರೆದರೆ ಥೇಟ್ ಕಪ್ಪು ಕಾಗದವೇ ಹೊರಬರುವುದೇ? ಮತ್ತೊಂದು ಅವಿಷ್ಕಾರವೇ ಕಲರ್ ಕಾಪಿಯರ್. ಒಂದರ್ಥದಲ್ಲಿ ಸಮಸ್ಯೆಗಳು ಬಗೆಹರಿಯಿತು ಆದರೆ ಬೇರೊಂದು ಕಥೆ ಶುರುವಾಯ್ತು. ಕಾಗದದ ಮೂಲವೇ ಮರ. ಕಾಗದದ ಬಳಕೆ ಹೆಚ್ಚಿತು ಎಂದರೆ ಮರಗಳನ್ನು ಕಡಿಯುವುದು ಹೆಚ್ಚಾಯಿತು. ನಂಬಿಕೆಗಳು ಉರುಳಿತು ಎಂದಾಗ ಆವಿಷ್ಕಾರ ಬಂದು ಮಾನವ ಸಂಪನ್ಮೂಲಕ್ಕೆ ಪೆಟ್ಟು ಬಿದ್ದು ಉರುಳಲು ಶುರುವಾಯಿತೇ?

ಯಾವುದೋ ಊರಿನಲ್ಲಿ ಅಥವಾ ದೇಶದಲ್ಲಿ ಇರುವ ಸಂಸ್ಥೆಗೆ ಯಾವುದೋ ಕಾಗದ ಪತ್ರ ಕಳುಹಿಸಬೇಕು ಎಂದುಕೊಳ್ಳಿ, ಅದೂ ತಕ್ಷಣವೇ ಆಗಬೇಕು ಎಂದುಕೊಳ್ಳಿ. ಹೋಗಿ ಬರಲಾದೀತೇ? ಇಂದು ಕಾಗದದ ನಕಲನ್ನು ಕೆಂಪು ಡಬ್ಬಕ್ಕೆ ಹಾಕಿದರೆ ಅಲ್ಲಿಗೆ ತಲುಪುವುದೆಂದೋ? ಒಂದೆಡೆಯಿಂದ ಇನ್ನೊಂದೆಡೆಗೆ ಬೇಗ ತಲುಪುವ ಸಾಧನ ಬೇಕು ಎಂಬ ಅಳಲು ಆರಂಭವಾಯ್ತು. ನೂರು, ಇನ್ನೂರು, ಸಾವಿರವಾದಾಗ ಯಾರಿಗೋ ಹೊಳೆಯಿತು. ಬಂತು ನೋಡಿ Fax Machine. ಹೆಚ್ಚಿನ ಸಮಸ್ಯೆಗಳು ಬಗೆಹರಿಯಿತು ಆದರೆ ಎಲ್ಲವೂ ಅಲ್ಲ ಬಿಡಿ. ತುರ್ತು ಅಂತೇನೋ ಕಳುಹಿಸುತ್ತೇವೆ ಆದರೆ ನೆಟ್ವರ್ಕ್ ಇರಬೇಕಲ್ಲಾ? ಅದಕ್ಕೂ ಮುನ್ನ ವಿದ್ಯುತ್ ಇರಬೇಕಲ್ಲವೇ? ಇಂದು ಸಮಸ್ಯೆಗಳು ಬಗೆ ಹರಿದಿವೆ. ಮನೆಗಳಲ್ಲೂ ಫ್ಯಾಕ್ಸ್ ಮಷಿನ್ ಇರುತ್ತದೆ. ಆದರೆ ಸಂಬಂಧಿ ಸಮಸ್ಯೆಗಳು ಹೆಚ್ಚಿವೆ.

ಇರಲಿ ಬಿಡಿ, Necessity is the mother of invention ಅಲ್ಲವೇ? ಅವಶ್ಯಕತೆಗೆ ತಕ್ಕಂತೆ ಆವಿಷ್ಕಾರಗಳು ಆಗುತ್ತಲೇ ಇರುತ್ತದೆ. ಅದರಿಂದ ಎಲ್ಲರಿಗೂ ಒಳಿತೇ ಆಗಬೇಕಿಲ್ಲ. ಅರ್ಥಾತ್ ಬಳಸಿಕೊಳ್ಳುವ ಜ್ಞಾನ ಇದ್ದರೆ ಅದರ ಉಪಯೋಗವೂ ಆಗುತ್ತದೆ. ಹಾಗಿಲ್ಲದೆ ಇದ್ದಾಗ, ಪವಿತ್ರ ಗ್ರಂಥಗಳೂ ತಲೆದಿಂಬು ಮಾತ್ರ ಆಗಬಲ್ಲದು. ಅವಶ್ಯಕತೆಗೆ ತಕ್ಕಂತೆ ಆವಿಷ್ಕಾರಗಳು 'ಸಂಭವಾಮಿ ಯುಗೇ ಯುಗೇ'.

English summary
Srinath Bhalle Column: Necessity is the source of the Invention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X