ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ವರ್ಷದಾರಂಭದಲ್ಲಿ ವರ್ಷಾಂತ್ಯ ಪ್ರವಾಸದ ನೆನಪು

|
Google Oneindia Kannada News

ಏನ್ ಸಮಾಚಾರ? ಎಲ್ಲಿಗೆ ಹೋಗಿದ್ರಿ? ಕಾರು ಪಯಣವೋ? ವಿಮಾನವೋ? ಅಂದೆಲ್ಲಾ ಕೇಳಲಿದ್ದೀರಿ ಅಂತ ಗೊತ್ತು. ನಮ್ಮ ಪಯಣದಲ್ಲಿ ಕಾರು, ಬಸ್ಸು, ಟ್ರಾಮ್, ಟ್ಯಾಕ್ಸಿ, ವಿಮಾನ ಜೊತೆಗೆ ಬೇಕಾದಷ್ಟು ನಡಿಗೆಯೂ ಇತ್ತು. ದೋಣಿ ಇರಬೇಕಿತ್ತು ಆದರೆ ಆಗಲಿಲ್ಲ ಅಷ್ಟೇ, ಆದರೆ ನೋಡಿದೆವು ಬಿಡಿ. ಇರಲಿ ಈಗ ಹೋಗಿದ್ದಾದರೂ ಎಲ್ಲಿ? ಕೆಲವು ಹೆಸರಲ್ಲಿ ಒಂದಾದ "Sin City' ಎಂದು ಹೆಸರಿರುವ, ಅಮೆರಿಕದ ಪಶ್ಚಿಮ ಭಾಗದಲ್ಲಿರುವ ನೆವಾಡಾ ರಾಜ್ಯದ ಲಾಸ್ ವೇಗಸ್ ನಗರಕ್ಕೆ ಹೋಗಿದ್ದೆವು.

ಲಾಸ್ ವೇಗಸ್ ನಗರವು ನೆವಾಡಾ ರಾಜ್ಯದ ಆಗ್ನೇಯ ದಿಕ್ಕಿನಲ್ಲಿದೆ. ಈ ಭಾಗದ ರಾಜ್ಯವು ಒಂದೆಡೆ ಕ್ಯಾಲಿಫೋರ್ನಿಯಾ ತಟ್ಟಿದರೆ, ಮತ್ತೊಂದು ಕಡೆ ಅರಿಜೋನಾ ಮುಟ್ಟುತ್ತದೆ. ಒಂಥರಾ ನಮ್ಮ ಕರ್ನಾಟಕದ ರಾಜ್ಯದಂತೆ. ಕೊಂಚ ವ್ಯತ್ಯಾಸ ಎಂದರೆ ಇಡೀ ನೆವಾಡಾ ರಾಜ್ಯಕ್ಕೆ ಬೆನ್ನಾಗಿ ನಿಂತಿದೆ ಕ್ಯಾಲಿಫೋರ್ನಿಯಾ. ಆದರೆ ಗಾತ್ರದಲ್ಲಿ ಏಳನೆಯ ಸ್ಥಾನದಲ್ಲಿ ನೆವಾಡಾ ಇದ್ದರೆ ಮೂರನೆಯ ಸ್ಥಾನದಲ್ಲಿ ಕ್ಯಾಲಿಫೋರ್ನಿಯಾ ಇದೆ ಮತ್ತು ಅರಿಜೋನಾ ಆರನೆಯ ಸ್ಥಾನದಲ್ಲಿದೆ. ನೆವಾಡಾ ರಾಜ್ಯವು ಮಧ್ಯೆ ಕೂತಿದ್ದರೆ ಅದರ ಸುತ್ತಲೂ ಐದು ರಾಜ್ಯಗಳಿವೆ. ಶಿರದಲ್ಲಿ ಒರೆಗಾನ್ ಮತ್ತು ಐಡಾಹೋ ರಾಜ್ಯಗಳಿವೆ. ಮಿಕ್ಕವು ಕ್ಯಾಲಿಫೋರ್ನಿಯಾ, ಅರಿಜೋನಾ ಮತ್ತು ಯೂಟಾಹ್. ಇವೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದ್ರಾ? ಮುಂದೆ ಹೇಳ್ತೀನಿ ಆಯ್ತಾ?

ಒಂದೊಂದೂ ಫ್ಲೋರ್‌ನಲ್ಲಿ ಕೇವಲ ನೂರು ರೂಮ್‌ಗಳು
ವೇಗಸ್ ನಗರದ ಮುಖ್ಯ ಆಕರ್ಷಣೆಯಲ್ಲಿ ಮೊದಲು ಎಂದರೆ ವೇಗಸ್ strip ಎಂಬ ಮಹಾ ಬೀದಿ. ಈ ಬೀದಿಯಲ್ಲಿನ ಹೋಟೆಲ್‌ಗಳೆಲ್ಲಾ ಒಂದೊಂದೂ ಅತೀ ದೊಡ್ಡದು. ನಾವಿದ್ದ ಹೋಟೆಲ್ ಹೆಸರು ಬೆಲ್ಲಾಜಿಯೊ ಅಂತ. ಇದರ ವೈಶಾಲ್ಯತೆಯ ಬಗ್ಗೆ ಹೇಳೋದಾದ್ರೆ, ಇದು ಕೇವಲ ಮೂವತ್ತಾರು ಫ್ಲೋರ್ ಹೊಂದಿದ್ದು ಒಂದೊಂದೂ ಫ್ಲೋರ್‌ನಲ್ಲಿ ಕೇವಲ ನೂರು ರೂಮ್‌ಗಳು ಇದೆ ಅಷ್ಟೇ! ಏರ್‌ಪೋರ್ಟ್‌ನಿಂದ ನಾವಿದ್ದ ಈ ವೈಭವೋಪೇತ ಹೋಟೆಲ್ ಕೇವಲ ಮೂರೂವರೆ ಮೈಲು ದೂರ ಅಷ್ಟೇ. ಹೋಟೆಲ್ ಸೇರಿದ ಹತ್ತೇ ನಿಮಿಷದಲ್ಲಿ ರಿಜಿಸ್ಟ್ರೇಷನ್ ಕೂಡ ಮುಗಿದು ರೂಮನ್ನು ಸೇರಿ, ಫ್ರೆಶ್ ಆಗಿ ಗ್ರೌಂಡ್ ಫ್ಲೋರ್ ದರ್ಶನ ಮಾಡಿದೆವು ಅನ್ನಿ.

Srinath Bhalle Column: Memory of the Year-end Tour at the Beginning of the Year

ಎಲ್ಲೆಲ್ಲೂ ದೀಪವೋ ದೀಪ. ನೂರಾರು ಕಸಿನೋ ಮಷೀನ್‌ಗಳು ಮತ್ತು ಟೇಬಲ್‌ಗಳು. ಕಸಿನೋ ಮೆಷೀನ್‌ಗೆ ಒಬ್ಬರು ಇರುವುದಾದರೆ, ಟೇಬಲ್ ಕೊಂಚ ಭಿನ್ನ. ಬ್ಲಾಕ್ ಜ್ಯಾಕ್, ಪೋಕರ್, ರೌಲೆಟ್ ಇತ್ಯಾದಿಗಳು ಆಟಕ್ಕೆ ತಕ್ಕಂತೆ ಮಂದಿಯೂ ಸಹ. ಅದೆಷ್ಟು ನೂರು ಮಂದಿ ಇದ್ದರೋ ಲೆಕ್ಕ ಇಡಲಿಲ್ಲ ಬಿಡಿ. ಕೆಲವರು ವಿನೋದಕ್ಕೆ ಆಡುತ್ತಿದ್ದರೆ, ಹಲವರು ಭಯಂಕರ ಸೀರಿಯಸ್ ಆಗಿ ಆಡುತ್ತಿದ್ದರು. ಸೀರಿಯಸ್ ಅಂತೇಕೆ ಹೇಳಿದೆ ಎಂದರೆ, ಪ್ರತೀ ಬಾರಿ ಸೋತಾಗ ಅವರ ಮೊಗದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು. ಕಸಿನೋ ಮೆಶೀನಿನ ಬಳಿ ನಾ ಕಂಡ ಒಬ್ಬಾಕೆಯ ವಯಸ್ಸು ಬಹುಶಃ ಎಪ್ಪತ್ತೈದು ಚಿಲ್ಲರೆ. ನಾವು ಕಂಡ ಇನ್ನೊಂದು ವಿಶೇಷ ಎಂದರೆ, ಒಬ್ಬಾಕೆ ಪ್ರತೀ ಬಾರಿ ನೂರು ಡಾಲರ್ ಮೆಷೀನ್‌ನೊಳಗೆ ಹಾಕಿ ಆಡಿ ಸೋತಷ್ಟೂ ಬಾರಿ ಮತ್ತೊಂದು ಮಗದೊಂದು ಅಂತ ನೂರರ ನೋಟನ್ನು ತುರುಕಿ ತುರುಕಿ ಆಡಿದ್ದೇ ಆಡಿದ್ದು! ನಮಗೇ ಟೆನ್ಷನ್ ಆಗಿ ಜಾಗ ಖಾಲಿ ಮಾಡಿದೆವು!
Srinath Bhalle Column: Memory of the Year-end Tour at the Beginning of the Year

ಜೋರಾಗಿ ಸುರಿಯದ ಮತ್ತು ನಿಲ್ಲದ ಮಳೆ
ಅಂದಿನ ಸಂಜೆಗೆ city tour ಬುಕ್ ಮಾಡಿದ್ದೆವು. ಬಿಗ್ ಬಸ್ ಎಂಬ ಹೆಸರಿನ ಈ ಬಸ್ open ಟಾಪ್ ಬಸ್. ಅಂದಿನ ಹವಾಮಾನ ಬಹಳ ವಿಶೇಷವಾಗಿತ್ತು. ಸುಮ್ಮನೆ ಮಳೆ ಬರ್ತಾನೇ ಇತ್ತು. ಜೋರಾಗಿ ಸುರಿಯದ ಮತ್ತು ನಿಲ್ಲದ ಮಳೆ. ಬಸ್ ಕಂಪನಿಗೆ ಕರೆ ಮಾಡಿ ಹಿಂಗಿದೆಯಲ್ಲಾ ಹವಾಮಾನ? ಪ್ರೋಗ್ರಾಮ್ ಕ್ಯಾನ್ಸಲ್ ಮಾಡ್ತಿದ್ದೀರಾ ಅಂತ ಕೇಳಿದ್ದಕ್ಕೆ, ಇಂಥವೆಲ್ಲಾ ಸರ್ವೇ ಸಾಮಾನ್ಯ. ಯೋಚನೆ ಬೇಡ ಬನ್ನಿ ಅಂದ್ರು. ಸರಿ ಅಂತ ಒಂದು walk ಹೊರಟೇ ಬಿಟ್ಟೆವು. ಸ್ವಲ್ಪ ಆ ಕಡೆ ಈ ಕಡೆ ಓಡಾಡಿದ ಮೇಲೆ, ಅಲ್ಲೊಂದು ಕಡೆ ಬಸ್ ನಿಲ್ದಾಣ ಕಂಡಿತು. ಅಲ್ಲೊಂದಿಷ್ಟು ಮಂದಿ ಸಾಲಿನಲ್ಲಿ ನಿಂತಿದ್ದರು. ಪ್ರತೀ ಒಬ್ಬರ ಬಾಯಿ-ಮೂಗು ಮುಚ್ಚಿತ್ತು. ಜೊತೆಗೆ ಬಸ್ ಡ್ರೈವರ್ ಕಡೆಯಿಂದ ಸುಗ್ರೀವಾಜ್ಞೆ ಹೊರಟಿತ್ತು. ಮೂಗು- ಬಾಯಿ ಮುಚ್ಚದ ದೇಹಗಳಿಗೆ ಬಸ್ ಒಳಗೆ ಪ್ರವೇಶವಿಲ್ಲ ಅಂತ. ಓಪನ್ ಟಾಪ್ ಅರ್ಥಾತ್ ತಲೆಯಿಲ್ಲದ ಬಸ್ಸಿನ ಒಳ ಹೊಕ್ಕು ಮೆಟ್ಟಿಲೇರಿ ಸೀಟೊಂದು ಹಿಡಿದು ಕುಳಿತೆವು. ಬಸ್ ಹೊರಟಿತು. ಯಪ್ಪೋ! ತಣ್ಣನೆಯ ಗಾಳಿ, ತುಂತುರು ಮಳೆಯೊಂದಿಗೆ ಚಳಿಯೂ ಕೊಂಚ ಜಾಸ್ತಿಯೇ ಇತ್ತು. ನಗರ ಪ್ರದಕ್ಷಿಣೆ ಬಲು ಸೊಗಸಾಗಿತ್ತು.

Grand Canyon ಮತ್ತು ವಿಖ್ಯಾತ Hoover Dam
ಮರುದಿನದ ಮತ್ತೊಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಲು ಆಗಲೇ ಟಿಕೆಟ್ ಬುಕ್ ಆಗಿತ್ತು. ಆದರೆ ಈಗ ಮನಸ್ಸು ಸಿದ್ಧವಾಗಿತ್ತು. ಮರುದಿನ ಬೆಳಿಗ್ಗೆ ಹೋಟೆಲ್‌ನ ಶಟಲ್ ಬರುವ ಸ್ಥಳಕ್ಕೆ ಹೋದಾಗ ಬಸ್ ಆಗಲೇ ಬಂದು ನಿಂತಿತ್ತು. ಏಳೂವರೆಗೆ ಹೊರಡುವ ಬಸ್‌ನಲ್ಲಿ ಏಳೂಕಾಲಿಗೆ ಕುಳಿತಿದ್ದೆವು. ವಿಶಾಲವಾದ ಬಸ್ ತುಂಬಿತ್ತು. ಡ್ರೈವರ್ ಸಹಿತ ನಮ್ಮಿಬ್ಬರನ್ನೂ ಒಳಗೊಂಡು ನಾಲ್ಕು ಜನರಿಂದ ಬಸ್ ಹತ್ತಿದ ಕೂಡಲೇ ಸಿದ್ಧವಾಗಿತ್ತು ನಮ್ಮ ಹಗಲಿನ ಉಪಹಾರ. ಅದನ್ನು ಎತ್ತಿಕೊಂಡು ಸೀಟೊಂದನ್ನು ಅಲಂಕರಿಸಲು, ಸರಿಯಾಗಿ ಏಳೂವರೆಗೆ ಹೊರಟಿತ್ತು ಬಸ್. ಅಲ್ಲಿಂದ ಆಚೆ stripನ ಮೂರ್ನಾಲ್ಕು ಹೋಟೆಲ್‌ಗಳಿಂದ ಹಲವಾರು ಮಂದಿಯನ್ನು ಹತ್ತಿಸಿಕೊಂಡು ಹೊರಟಿದ್ದು, "Grand Canyon ಮತ್ತು ವಿಖ್ಯಾತ Hoover Dam' ಕಡೆ.

ಅರಿಜೋನಾ ಮತ್ತು ಕ್ಯಾಲಿಫೋರ್ನಿಯಾಗೆ ವಿದ್ಯುತ್ ಪೂರೈಕೆ
U ಆಕಾರದ ಹೂವರ್ ಅಣೆಕಟ್ಟು ಬಿಲಿಯನ್‌ನಷ್ಟು ಹೈಡ್ರೊ ಎಲೆಕ್ಟ್ರಿಕ್ ಶಕ್ತಿಯನ್ನು ಉತ್ಪಾದಿಸುವುದೇ ಅಲ್ಲದೇ ಮೂರು ರಾಜ್ಯಗಳಿಗೆ ಅರ್ಥಾತ್ ನೆವಾಡಾ, ಅರಿಜೋನಾ ಮತ್ತು ಕ್ಯಾಲಿಫೋರ್ನಿಯಾಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಲೇಖನ ಆರಂಭದಲ್ಲಿ ಹೇಳಿರುವಂತೆ ಈ ಮೂರು ರಾಜ್ಯಗಳು ಅಮೆರಿಕದ ದೊಡ್ಡ ರಾಜ್ಯಗಳಲ್ಲಿ ಮೊದಲ ಏಳರಲ್ಲಿವೆ. ಗಾತ್ರದಲ್ಲಿ ಏಳನೆಯ ಸ್ಥಾನದಲ್ಲಿ ನೆವಾಡಾ ಇದ್ದರೆ, ಅರಿಜೋನಾ ಆರನೆಯ ಸ್ಥಾನದಲ್ಲಿದೆ ಮತ್ತು ಮೂರನೆಯ ಸ್ಥಾನದಲ್ಲಿ ಕ್ಯಾಲಿಫೋರ್ನಿಯಾ ಇದೆ. ಇಂದಿಗೂ ಹೂವರ್ Dam ದೇಶದ ಅತ್ಯುನ್ನತ ಅಣೆಕಟ್ಟು ಎಂಬುದೇ ಹೆಗ್ಗಳಿಕೆ.

ಹತ್ತು ಸಾವಿರ ಕೆಲಸಗಾರರ ಪರಿಶ್ರಮ
ಏಳನೂರು ಇಪ್ಪತ್ತೈದು ಅಡಿ ಎತ್ತರದ, ಸಾವಿರದ ಇನ್ನೂರು ಅಡಿ ಉದ್ದ ಮತ್ತು ನಲವತ್ತೈದು ಅಡಿ ಅಗಲದ ಆಣೆಕಟ್ಟು ಆರಂಭವಾಗಿದ್ದು 1931ರಲ್ಲಿ. ಇದೇ ಸಮಯದಲ್ಲೇ ಅಮೆರಿಕ ಇತಿಹಾಸದಲ್ಲಿನ great depression ಕೂಡ ನಡೆದಿತ್ತು. 1931ರಲ್ಲಿ ಆರಂಭವಾಗಿ 1936ಕ್ಕೆ ಮುಗಿದಿತ್ತು ಎಂಬುದರ ಹಿಂದಿನ ಹೆಗ್ಗಳಿಕೆ ಏನಪ್ಪಾ ಎಂದರೆ ಅಂದುಕೊಂಡಿದ್ದಕ್ಕಿಂತಾ ಎರಡು ವರ್ಷ ಮುಂಚೆಯೇ ಇಡೀ ಪ್ರಾಜೆಕ್ಟ್ ಮುಗಿದಿತ್ತು. ಗೈಡ್ ರೂಪಿ ಡ್ರೈವರ್ ಹೇಳಿದ್ದು ಏನೆಂದರೆ ಐದು ಸಾವಿರ ಕೆಲಸಗಾರರು ಕೆಲಸ ಮಾಡುವ ಕಡೆ ಒಮ್ಮೆ ಸವಲತ್ತುಗಳ ಬೇಡಿಕೆ ಮಂಡಿಸಲು ಒಂದು ಯೂನಿಯನ್ ಆರಂಭಿಸಲು ಹೊರಟಾಗ, ಅಷ್ಟೂ ಮಂದಿಯನ್ನು ವಜಾಗೊಳಿಸಿ, ಮತ್ತೊಂದು ಐದು ಸಾವಿರ ಮಂದಿಯನ್ನು ಹೊಸತಾಗಿ ತೆಗೆದುಕೊಂಡು ಕೆಲಸ ಮುಗಿಸಿದರಂತೆ. ಒಟ್ಟಾರೆ ಹತ್ತು ಸಾವಿರ ಕೆಲಸಗಾರರ ಪರಿಶ್ರಮವೇ ಈ ಹೂವರ್ ಆಣೆಕಟ್ಟು.

ಒಂದೊಂದು ವೃತ್ತ ಮರದ ಆಯುಷ್ಯ ತಿಳಿಯುತ್ತದೆ
ಅಂದಿನ ಅಧ್ಯಕ್ಷರಾದ ಹರ್ಬರ್ಟ್ ಹೂವರ್ (Hurbert Hoover) ಹೆಸರಿನಲ್ಲಿ ಹೂವರ್ ಡ್ಯಾಮ್ ಎಂದು ಹೆಸರಿಸಿದ್ದರೂ ಹಲವಾರು ಕಾಲ ಮಂದಿ ಬೌಲ್ಡರ್ ಡ್ಯಾಮ್ ಎಂದೇ ಕರೆಯುತ್ತಿದ್ದರು. ನಮ್ಮ ಪಯಣ ಅಲ್ಲಿಂದ ಮುಂದೆ Grand Canyon ಕಡೆ ಹೊರಟಿತ್ತು. ಹಾದಿಯುದ್ದಕ್ಕೂ ಹತ್ತಾರು ಮೈಲುಗಳ ಕಾಲ ನಿರ್ಜನ ಪ್ರದೇಶವೇ ಆಗಿದೆ. ಮಾರ್ಗ ಮಧ್ಯೆ ಒಂದೆಡೆ ಒಂದು ವಿಶೇಷ ಸಸ್ಯ ಕಂಡೆವು. ಹಿರಿದಾದಾಗ ಉದ್ದನೆ ಚಿಕ್ಕ ಮರದಂತೆ ನಿಲ್ಲುವ ಈ ಸಸ್ಯವು ಮರದ ಜಾತಿಗೆ ಸೇರಿಲ್ಲ. ಮರದ ಆಯುಷ್ಯ ತಿಳಿದುಕೊಳ್ಳಬೇಕಾದರೆ ಮರದ ಅಡ್ಡಕ್ಕೆ ಕತ್ತರಿಸಿದಾಗ ಅಲ್ಲಿ ಕಂಡು ಬರುವ ವೃತ್ತಗಳನ್ನು ಎಣಿಸಬೇಕಂತೆ. ಪ್ರತೀ ವರ್ಷವೂ ಒಂದೊಂದು ವೃತ್ತ ಏರಿಸಿಕೊಳ್ಳುವ ಮರವು ತನ್ನ ಆಯುಷ್ಯನ್ನು ತಿಳಿಸುತ್ತದೆ.

ಜಾಲಿಯ ಮರಕ್ಕೆ ಹತ್ತಿರವಾದ ಸಸ್ಯ
ಈಗ ಹೇಳುತ್ತಿರುವ ಸಸ್ಯದ ಹೆಸರು ಜಾಷುವಾ ಎಂದು. ಈ ಗಿಡವನ್ನು ಅಡ್ಡಕ್ಕೆ ಕತ್ತರಿಸಿದರೆ ಅಲ್ಲಿ ಯಾವ ವೃತ್ತವೂ ಕಾಣುವುದಿಲ್ಲ. ಬದಲಿಗೆ, ಒಂದು ಗಿಡದಲ್ಲಿ ಎಷ್ಟು ಕೊಂಬೆಗಳು ಇವೆ ಎಂದು ಲೆಕ್ಕ ಹಾಕಿದರೆ ಆ ಗಿಡದ ಆಯುಷ್ಯ ತಿಳಿಯುತ್ತದೆ. ಕೇವಲ ಮುಳ್ಳನ್ನೇ ಹೊಂದಿರುವ ಈ ಸಸ್ಯ Cactus ಜಾತಿಗೆ ಸೇರಿದ್ದು. ಬಹುಶಃ ಇದು ಜಾಲಿಯ ಮರಕ್ಕೆ ಹತ್ತಿರವಾದ ಸಸ್ಯ ಅಂತ ನನ್ನ ಅನಿಸಿಕೆ. ಕಾರಣವೇನೆಂದರೆ, ಈ ಸಸ್ಯದಿಂದ ಏನೂ ಉಪಯೋಗವಿಲ್ಲ. ನೆರಳಿಲ್ಲ, ಪಕ್ಷಿಗಳಿಗೆ ಆಶ್ರಯವಿಲ್ಲ, ಹಣ್ಣಿಲ್ಲ, ಹೂವಿಲ್ಲ ಏನೂ ಇಲ್ಲ. ಮೈಲುಗಟ್ಟಲೆ ಇರುವ ಈ ಸಸ್ಯಗಳು ಅಮೆರಿಕ ಸರಕಾರದ ಸಂರಕ್ಷಿತ ಸಸ್ಯ. ಅಲ್ಲೆಲ್ಲಾದರೂ ನಿಮ್ಮದೊಂದು ಸೈಟ್ ಇದ್ದು, ಅಲ್ಲೊಂದು ಈ ಸಸ್ಯವಿದ್ದು ಅದನ್ನು ತೆಗೆಯಬೇಕು ಎಂದರೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿ, ಗಿಡವನ್ನು ತೆಗೆಸಿದಾಗ ಅವರು ಆ ಗಿಡವನ್ನು ಮತ್ತೊಂದು ಕಡೆ ನೆಡುತ್ತಾರೆ. ಈ ಪದ್ಧತಿಯನ್ನು ಅನುಸರಿಸದೇ ಹೋದರೆ ಅವರು ಶಿಕ್ಷಾರ್ಹರು. ವನ್ಯಸಂರಕ್ಷಣೆ ನೀತಿ ನಿಯಮ ಎಲ್ಲೆಡೆ ಒಂದೇ ರೀತಿ ತಾನೇ?

ರಮಣೀಯ ದೃಶ್ಯವನ್ನು ನೋಡುವುದೇ ಒಂದು ಅನುಭವ
ಮಾರ್ಗ ಮಧ್ಯೆ pistachio ಮತ್ತು almond ತೋಟವನ್ನೂ ನೋಡಿಕೊಂಡೇ Grand Canyon ಸೇರಿದೆವು. ಗ್ರಾಂಡ್ ಕ್ಯಾನ್ಯನ್ ಎಂಬುದು 270 ಚಿಲ್ಲರೆ ಮೈಲಿ ಉದ್ದ, ಹದಿನೆಂಟು ಮೈಲಿ ಅಗಲ ಇರುವ ಒಂದು ಭಾಗ ಮಾತ್ರ ನಾವು ನೋಡಿದ್ದು. ಒಂದು ನದಿಯು ಈ ಪರಿಯಲ್ಲಿ ಪ್ರದೇಶವನ್ನು ಕೊರೆಯಬಲ್ಲದು ಎಂದರೆ ಅದೊಂದು ವಿಸ್ಮಯವೇ ಸರಿ. Skywalk ಮೇಲೆ ಓಡಾಡುತ್ತಾ ರುದ್ರರಮಣೀಯ ದೃಶ್ಯವನ್ನು ನೋಡುವುದೇ ಒಂದು ಅನುಭವ. ಗ್ರಾಂಡ್ ಕ್ಯಾನ್ಯನ್ ಪ್ರದೇಶವು ಅಮೆರಿಕದ ನ್ಯಾಷನಲ್ ಪಾರ್ಕ್ ಆಗುವ ಮುನ್ನ Hualapai (ಹುಲಪಾಯ್) ಎಂಬ ನೇಟಿವ್ ಅಮೆರಿಕನ್ ಟ್ರೈಬ್‌ನವರ ಅಸ್ತಿತ್ವದಲ್ಲಿತ್ತು. ಹುಲಪಾಯ್ ಎಂಬುದೊಂದೇ ಬುಡಕಟ್ಟು ಜನಾಂಗ ಮಾತ್ರ ಇಂದಿಗೂ ಅಮೆರಿಕದಲ್ಲಿ ಉಳಿದುಕೊಂಡಿರುವುದು. ಈ ಪ್ರದೇಶದಲ್ಲಿ ಅಂದು ಹುಲಪಾಯ್ ಜೊತೆ ಮಿಕ್ಕೆರಡು ಬುಡಕಟ್ಟು ಜನಾಂಗಗಳೂ ಇದ್ದು, ಅವರಲ್ಲೇ ಹಲವಾರು ಜಗಳ ಕದನಗಳೂ ಆಗಿದ್ದವು ಎನ್ನಲಾಗಿದೆ.

ಒಂದು ವೈರಾಣುವಿಗೆ ಮಂಡಿಯೂರಿದ ಮಾನವ
ಅಂದಿನ ಟೂರ್ ಮುಗಿಸಿಕೊಂಡು ಬಂದ ಮರುದಿನ ಒಂದಷ್ಟು ಸ್ಥಳೀಯ ಆಕರ್ಷಣೆಗಳಲ್ಲಿ ಒಂದಾದ ಗೊಂಡೋಲಾ ನೋಡಿದೆವು. ವೆನಿಸ್ ನಗರದ ಖ್ಯಾತ ಗೊಂಡೊಲಾವನ್ನು ಹೋಲುವ ಒಂದು ಥೀಮ್ ಹತ್ತಿರದಲ್ಲೇ ಇದ್ದ Venetian ಹೋಟೆಲ್‌ನಲ್ಲಿದೆ. ಅಂದಿನ ಬೋಟ್ ರೈಡ್ ಎಲ್ಲವೂ ಬುಕ್ ಆಗಿದ್ದರಿಂದ ನಮಗೆ ದೋಣಿ ಏರಲಾಗಲಿಲ್ಲ.

ಮೂರ್ನಾಲ್ಕು ದಿನಗಳ ಕಾಲ, ರೂಮ್‌ನಿಂದ ಹೊರಗಿರುವ ಸಮಯವೆಲ್ಲಾ ಮಾಸ್ಕ್ ಧರಿಸಿಯೇ ಓಡಾಡಿದ್ದು ಒಂದು ವಿಭಿನ್ನ ಅನುಭವ. ಹೊರಗೆ ಅಡಿಯಿಟ್ಟಾಗ ಮಾಸ್ಕ್ ಧರಿಸದ ಮುಖವನ್ನೇ ಕಾಣದೇ ಇದ್ದುದೂ ಅಚ್ಚರಿಯೇ ಆಯ್ತು. ಏನೆಲ್ಲಾ ಸಾಧನೆಗಳನ್ನು ಮಾಡಿರುವ ಮಾನವ ಕಣ್ಣಿಗೆ ಕಾಣದ ಒಂದು ವೈರಾಣುವಿಗೆ ಹೇಗೆ ಮಂಡಿಯೂರಿದ್ದಾನೆ ಎಂಬುದನ್ನು ಮತ್ತೆ ಅನುಭವಿಸಿದ್ದೆ. ಹೊಸ ವರುಷದಲ್ಲಿ ಈ ವೈರಾಣುವಿನ ಆರ್ಭಟ ಕಡಿಮೆಯಾಗಲಿ ಮತ್ತು ಹಂತ ಹಂತವಾಗಿ ಕ್ರಮೇಣ ನಮ್ಮಿಂದ ದೂರಾಗಲಿ ಎಂದು ಆಶಿಸುತ್ತೇನೆ.

English summary
Srinath Bhalle Column: Memory of the Las Vegas City tour at the Beginning of the year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X