• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ಗೆರೆಗಳ ಮಾತು ಮಧುರ

By ಶ್ರೀನಾಥ್ ಭಲ್ಲೆ
|
Google Oneindia Kannada News

ಇಂದಿನ ಮಾತುಗಳು ಗೆರೆಗಳ ಬಗ್ಗೆ ಹಾಗಾಗಿ ವಿಷಯದ ಹೆಸರು ಗೆರೆಗಳ ಮಾತು ಮಧುರ. ರೇಖೆ ಅನ್ನೋದನ್ನು ಗೆರೆ, ಗೀಟು, ಗೀರು ಅಂತ ಹೇಗೆ ಬೇಕಾದರೂ ಕರೆಯಿರಿ ಎಲ್ಲವೂ ಒಂದರ್ಥದಲ್ಲಿ ಒಂದೇ. ಒಂದು ರೇಖೆಗೆ ಕೊನೆ ಮೊದಲಿಲ್ಲ. ಒಂದು ರೇಖೆಯ ಒಂದು ಭಾಗವನ್ನು ರೇಖಾಖಂಡ ಎನ್ನುತ್ತಾರೆ. ಈಗ ರೇಖಾಗಣಿತದಲ್ಲಿ ರೇಖೆಯ ಬಗ್ಗೆ ಹೇಳುವಾಗ ಐದು ಸೆಂ.ಮೀ ರೇಖೆ ಬರೆಯಿರಿ ಎಂದು ಹೇಳುವರೇ ಹೊರತು ಒಂದು ರೇಖೆ ಬರೆಯಿರಿ ಅಂತ ಹೇಳೋದಿಲ್ಲ ಅಲ್ಲವೇ? ಸದ್ಯಕ್ಕಂತೂ ರೇಖಾಖಂಡವನ್ನು ರೇಖೆ ಎಂದೇ ಕರೆಯೋಣ. ರೇಖೆಯು ಎರಡು ಬಿಂದುಗಳನ್ನು ಸೇರಿಸುವ ಒಂದು ಗೀಟು.

ಎರಡು ತುದಿಗಳ ನಡುವಿನ ಅಂತರದ ಆಧಾರವೇ ಹತ್ತಿರ ಅಥವಾ ದೂರದ ಮಾಪನ. ಆದರೆ ಎರಡು ಬಿಂದುಗಳ ಅಂತರದ ಅಳತೆಯು ಎಲ್ಲ ಸಮಯದಲ್ಲೂ ಒಂದೇ ರೀತಿ ಅಲ್ಲ. ಐದು ಸೆಂ.ಮೀ ಎಂಬುದು ಅಳತೆಯಲ್ಲಿ ಚಿಕ್ಕದೇ ಇರಬಹುದು ಆದರೆ ಒಂದು ಇರುವೆ ಐದು ಸೆಂ. ಮೀ ಇದೆ ಅಂತ ಯಾರಾದರೂ ಹೇಳಿದರೆ ಅವರಿಗೆ ಏನಾಗಿದೆ ಎಂದೇ ನೋಡುವಿರಿ. ಒಂದು ಕಿಲೋಮೀಟರ್ ಎಂಬುದು ಅಳತೆಯಲ್ಲಿ ದೊಡ್ಡದೇ ಆಗಿರಬಹುದು ಆದರೆ ಒಂದು ರಾಜ್ಯ ಒಂದು ಕಿಲೋಮೀಟರ್ ಉದ್ದ, ಒಂದು ಕಿಲೋಮೀಟರ್ ಅಗಲವಿದೆ ಎಂದು ಯಾರೂ ಹೇಳಲಾರರು.

ಮತ್ತೊಬ್ಬರಿಗಿಂತ ಹೆಚ್ಚು ಎತ್ತರ ಬೆಳೆಯಬೇಕು

ಎರಡು ರೇಖೆಗಳು ಎಂಬ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಅದರ ವಿವರಣೆಯನ್ನೇ ಬರೆದರೆ, ಎರಡು ಸರಳ ರೇಖೆಗಳನ್ನು ಲಂಬವಾಗಿ ಒಂದೇ ಎತ್ತರದಲ್ಲಿ ಇರುವಂತೆ ಬರೆದಾಗ, ಒಂದು ರೇಖೆ ಮತ್ತೊಂದು ರೇಖೆಗಿಂತ ಎತ್ತರ ಇರಬೇಕು ಎಂದರೆ ಒಂದು ರೇಖೆಯ ಎತ್ತರವನ್ನು ಅಳಿಸಿ ಹಾಕಿ ಕಡಿಮೆ ಮಾಡುವುದು ಒಂದು ಬಗೆ, ಆದರೆ ಒಂದು ರೇಖೆಯ ಎತ್ತರವನ್ನು ಹೆಚ್ಚಿಸುವುದು ಇನ್ನೊಂದು ಬಗೆ. ನಾವು ಒಬ್ಬರಿಗಿಂತಾ ಎತ್ತರ ಇರಬೇಕು ಎಂದರೆ ಮತ್ತೊಬ್ಬರನ್ನು ಕೆಳಕ್ಕೆ ಎಳೆಯುವುದಲ್ಲಾ ಬದಲಿಗೆ ಆ ಮತ್ತೊಬ್ಬರಿಗಿಂತ ಹೆಚ್ಚು ಎತ್ತರ ಬೆಳೆಯಬೇಕು. ದೈಹಿಕವಾಗಿ ಎತ್ತರ ಬೆಳೆಯಲಾಗದು ನಿಜ, ಆದರೆ ಬುದ್ಧಿಮಟ್ಟದಲ್ಲಿ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು, ಗುಣಮಟ್ಟದಲ್ಲಿ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು.

ಎರಡೂ ಬದಿಯಲ್ಲಿ ರೇಖಾಬಿಂದು

ಒಂದು ರೇಖೆಯನ್ನು ಹೇಗೆ ಬೇಕಾದರೂ ಬರೆಯಬಹುದು. ನೇರವಾಗಿ ಬೇಕಾದರೂ ಬರೆಯಬಹುದು, ವಕ್ರವಾಗಿಯೂ ಬರೆಯಬಹುದು. Straight Line ಅಂದ್ರೆ ನೇರ, Curved Line ಅಂದ್ರೆ ವಕ್ರ. ಆದರೂ ಎರಡೂ ರೇಖೆಗಳೇ. ಅದೊಂದು ರೇಖೆಯಾಗಿದ್ದರೆ ಆ ರೇಖೆಗೆ ಎರಡೂ ಬದಿಯಲ್ಲಿ ರೇಖಾಬಿಂದುಗಳಿರುತ್ತದೆ. ಒಂದನ್ನು ಆರಂಭ ಎಂದುಕೊಂಡರೆ ಮತ್ತೊಂದು ಅಂತ್ಯ. ಎಡದಿಂದ ಬಲಕ್ಕೆ ರೇಖೆಯನ್ನು ಬರೆದರೆ ಎಡಕ್ಕಿರುವ ರೇಖಾಬಿಂದು ಆರಂಭ, ಬಲಕ್ಕಿರುವುದು ಅಂತ್ಯ ಬಿಂದು. ಬಲದಿಂದ ಎಡಕ್ಕೆ ಬಲಕ್ಕಿರುವುದು ಆರಂಭ, ಎಡಕ್ಕಿರುವುದು ಅಂತ್ಯಬಿಂದು. ಇದು ಗೆರೆಯನ್ನು ಅಡ್ಡಕ್ಕೆ ಬರೆಯುವ ಸನ್ನಿವೇಶ. ಇದನ್ನೇ ಲಂಬವಾಗಿ ಬರೆದರೆ, ಆರಂಭ ಅಂತ್ಯಗಳು ಮೇಲೆ ಅಥವಾ ಕೆಳಗೆ ಇರುತ್ತದೆ. ಇಂಥಾ ಆರಂಭ ಅಂತ್ಯದಲ್ಲಿ ಒಂದೇ ಕಡೆ ಸೇರಿದರೆ ಏನಾಗುತ್ತದೆ ಎಂಬುದು ಈ ಬರಹದ ವ್ಯಾಪ್ತಿಯಲ್ಲಿಲ್ಲ.

ಜಾಸ್ತಿ ಟೆನ್ಷನ್ ಮಾಡ್ಕೋಬೇಡಿ

ರೇಖಾಗಣಿತ ಅಂದ್ರೆ Geometr ಅಂತ. ಸುರೇಖಾ ಗಣಿತ ಅಂದ್ರೆ ಗೊತ್ತಾ? ಸುರೇಖಾ ಹೆಸರಿನ ಹೆಣ್ಣು ಗಣಿತ ಮಾಡಿದರೆ ಅದು ಸುರೇಖಾ ಗಣಿತ. ಅಷ್ಟೇ! ಜಾಸ್ತಿ ಟೆನ್ಷನ್ ಮಾಡ್ಕೋಬೇಡಿ. BP ರೇಖೆ ಏರೀತು! ರೇಖೆಗಳು ಎಲ್ಲಿರಬಹುದು ಎಂಬ ಆಲೋಚನೆ ಬಂದರೆ ಯಾವುದೇ ಘನರೂಪವನ್ನು ನೋಡಿದರೆ ಸಾಕು. ಒಂದು ಕಿಟಕಿಯನ್ನು ನೋಡಿ, ಒಂದು ಬಾಗಿಲನ್ನು ನೋಡಿ, ಒಂದು ಟೇಬಲ್ ಹೀಗೇ ಏನಾದರೂ ಸರಿ ಎಲ್ಲೆಡೆ ಸರಳ ರೇಖೆಯನ್ನು ಕಾಣುವಿರಿ.

ಆರಂಭ ಮತ್ತು ಅಂತ್ಯ ಇರಲೇಬೇಕಲ್ಲವೇ

ಹಣೆಬರಹದ ರೇಖೆಗಳು ಅಡ್ಡವೋ? ಲಂಬವೋ? ಇದು ಹೀಗೆಯೇ ಆಗುತ್ತದೆ ಎಂಬುದು ಹಣೆಬರಹವಾಗಿದ್ದರೆ ಅವು ಅಕ್ಷರಗಳಾಗಿರಬೇಕು, ಗೆರೆ ಹೇಗಾದೀತು? ಐನಾತಿ ಪ್ರಶ್ನೆ ಅಲ್ಲವೇ ಎಂದುಕೊಳ್ಳದಿರಿ, ಯಾವುದೇ ಒಂದು ಅಕ್ಷರ ಬರೆದಾಗಲೂ ಅದಕ್ಕೊಂದು ಆರಂಭ ಮತ್ತು ಅಂತ್ಯ ಇರಲೇಬೇಕಲ್ಲವೇ? ಒಂದು ಅ ಕಾರ ಬರೆಯಿರಿ ಆಗ ಖಾತ್ರಿಯಾಗುತ್ತದೆ. ಇದರಂತೆಯೇ ಮಿಕ್ಕೆಲ್ಲಾ ಅಕ್ಷರಗಳೂ ಸಹ. ಹಾಗಾಗಿ ಹಣೆಬರಹ ಗೆರೆ ಅಂತ ಅನ್ನಿಸಿಕೊಳ್ಳುತ್ತದೆ. ಅಕ್ಷರಗಳಲ್ಲಿ ಅಡ್ಡವೂ ಇದೆ, ಲಂಬವೂ ಇದೆ. ಹಣೆಬರಹ ಪಕ್ಕಕ್ಕೆ ಇಟ್ಟು, ಹಣೆಯ ಮೇಲಿನ ಗೆರೆಗಳನ್ನೇ ನೋಡುವಾಗ, ಅವು ನಮ್ಮ ಮನಸ್ಥಿತಿಯ ಮೇಲೆ ಅವಲಂಬಿತ. ಹಸನ್ಮುಖಿಯಾದರೆ ಒಂದು ರೀತಿ, ಸಿಡುಕಿದಾಗ ಮತ್ತೊಂದು ರೀತಿ ಹೀಗೆ. ಕೆಲವರ ಈ ಹಣೆಬರಹದ ರೇಖೆಗಳು ಪರ್ಮನೆಂಟ್ ಆಗಿ ಅಲೆಗಳಂತೆ ನೆರಿಗೆಗಳಾಗಿ ಪ್ರಿಂಟ್ ಆದ ಹಾಗೆ ಇರುತ್ತದೆ. ಕೆಲವರಿಗೆ ನಕ್ಕಾಗ ಅಥವಾ ಅತ್ತಾಗ ಮಾತ್ರ ಈ ನೆರಿಗೆ ಮೂಡುತ್ತದೆ. ಎರಡೂ ಭಾವನೆಗಳು ಇರದಿರುವಾಗ ಇಸ್ತ್ರಿ ಮಾಡಿದಂತೆ ಇರುವುದು ಈ ಹಣೆ. ಅಂದ ಹಾಗೆ ಗಂಜಿ ಹಾಕಿ ಇಸ್ತ್ರಿ ಮಾಡಿದ ಬಟ್ಟೆಯ ಮೇಲೆ ಮೂಡುವ ಗೆರೆಯನ್ನು ನೋಡುವುದೇ ಅಂದ ಅಲ್ಲವೇ?

ಕೂಡಲೇ ನೆನಪಾಗುವುದೇ ಲಕ್ಷ್ಮಣ ರೇಖೆ

ಇನ್ನು ಅಂಗೈರೇಖೆಗಳು ಭೂತ, ಭವಿಷ್ಯ ಸೂಚಕ. ಪ್ರತೀ ಬೆರಳಿನ ಜಾಯಿಂಟ್‌ನಲ್ಲಿನ ರೇಖೆಗಳು ಅಡ್ಡ. ಅಂಗೈ ಮೇಲಿನ ರೇಖೆಗಳಂತೂ ಶೇ.90 ನೇರವಾದ ರೇಖೆಯಾಗಿರುವುದಿಲ್ಲ. ಕೆಲವರು ಜೀವನದಲ್ಲಿ ವಿಪರೀತ ಪಾತ್ರೆ ತೊಳೆದು, ಬಟ್ಟೆಯನ್ನು ಒಗೆಯುವುದು ಮಾಡುವುದರಿಂದ ರೇಖೆಗಳೇ ಸವೆದು ಹೋಗಿರುತ್ತದೆ ಎನ್ನುತ್ತಾರೆ. ಇದು ನಿಜವೋ, ಅಲ್ಲವೋ ನೀವೇ ಹೇಳಿ ಆಯ್ತಾ?

ರೇಖೆ ಎಂಬ ಮಾತು ಬಂದ ಕೂಡಲೇ ನೆನಪಾಗುವುದೇ ಲಕ್ಷ್ಮಣ ರೇಖೆ. ಕೆಲವೆಡೆ ಉಲ್ಲೇಖಿಸಿರುವಂತೆ ಕುಟೀರದ ಮುಂದೆ ಲಕ್ಷ್ಮಣನು ಬಾಣದಿಂದ ಗೆರೆ ಎಳೆದ ಎನ್ನಲಾಗಿದೆ. ಕೆಲವೆಡೆ ಈ ರೇಖೆಯು ಮಾತಿನ ರೇಖೆ ಎನ್ನಲಾಗಿದೆ. ಯಾವುದು ಏನೇ ಇರಲಿ ಲಕ್ಷ್ಮಣನು ಹಾಕಿದ ಗೆರೆಯನ್ನು ಸೀತೆ ದಾಟಬಾರದಿತ್ತು ಎಂಬುದು ಮುಖ್ಯ. ದೊಡ್ಡವರು ಹೇಳಿದ ಮಾತನ್ನು ಚಿಕ್ಕವರು ಪಾಲಿಸಿದರೆ "ಹಾಕಿದ ಗೆರೆ ದಾಟೋದಿಲ್ಲ' ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಹಿರಿಯರು. ಕಿಡಿಗೇಡಿಗಳು "ಹಾಗಿದ್ರೆ ಸೈಡ್‌ನಿಂದ ಹೋಗ್ತಾರಾ' ಎಂದು ಕೇಳಬಹುದು ಬಿಡಿ.

ಯಾವ ಕವಿಯು ಬರೆಯಲಾರ

ಈಗ ಕೊಂಚ ಸೌಂದರ್ಯದ ಬಗ್ಗೆ ಮಾತನಾಡೋಣ ಬನ್ನಿ. ಕಣ್ಣಿಗೆ ಕೃತಕ ರೆಪ್ಪೆಯನ್ನು ಜೋಡಿಸಿಕೊಳ್ಳುವುದು ಒಂದು ಫ್ಯಾಷನ್. ಆ ಒಂದೊಂದೂ ಕೃತಕ ಕೂದಲು ಎಷ್ಟು ಚೂಪಾಗಿ ಸಾಲಾಗಿ ಜೋಡಿಸಿರುತ್ತಾರೆ ಎಂದರೆ ತೀರಾ ಹತ್ತಿರಕ್ಕೆ ಹೋದರೆ ಈಟಿಯಂತೆ ನಮ್ಮನ್ನೇ ಚುಚ್ಚಿಬಿಡುತ್ತದೇನೋ ಎಂಬಂತೆ. ಲೈನ್ ಎಂದರೆ ಸಾಲು ಎಂಬರ್ಥವಿದೆ. ಈ ಕೃತಕ ಕೂದಲುಗಳು ಸಾಲಾಗಿ ಜೋಡಿಸಿರುವ ರೇಖೆಗಳಂತೆ ಕಾಣುತ್ತದೆ. ಇದರ ಜೋಡಿ ಮತ್ತೊಂದು ಅಲಂಕಾರವೇ Eyeliner. ಕಣ್ಣಿನ ರೆಪ್ಪೆಯ ಕೂದಲ ಅಡಿಯ ಪ್ರದೇಶವನ್ನು ಎದ್ದುಕಾಣುವಂತೆ ಮಾಡಿಕೊಳ್ಳುವುದೇ ಅಲ್ಲದೇ ಕೊಂಚ ಈಚೆಯೂ ಆಚೆಯೂ ಸಣ್ಣದಾಗಿ ಸರಳರೇಖೆ ಎಳೆದುಕೊಂಡು ಮೀನಾಕಾರದ ಕಣ್ಣಿನಂತೆ ಮಾಡಿಕೊಳ್ಳುವುದು ಒಂದು ಫ್ಯಾಷನ್. "ಯಾವ ಕವಿಯು ಬರೆಯಲಾರ' ಹಾಡಿನಲ್ಲಿರುವ ಮಾಧವಿ eyeliner ಹಾಕಿಕೊಂಡಾಗ ಮೀನಾಕಾರವನ್ನು ಭೂಭಾಗಕ್ಕೆ ಮಾಡಿಕೊಂಡಿದ್ದಾರೆ. ಆಮ್ರಪಾಲಿಯ ವೈಜಯಂತಿಮಾಲ ಕಣ್ಣಿನ ಆಚೆ ಗೀಟು ಹಾಕಿಕೊಂಡಿರುತ್ತಾರೆ.

ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರ ಬೆರಳಚ್ಚು ಇಲ್ಲ

ಸದ್ಯಕ್ಕೆ ಈ ಬರಹದಲ್ಲಿ ಬಡತನ ರೇಖೆಯ ಬಗ್ಗೆ ಮಾತನಾಡೋದು ಬೇಡ. ಸಂಕಷ್ಟಗಳು ಕೊನೆಯಾಗುವ ಸೂಚಕವಾಗಿ ಅಲ್ಲೆಲ್ಲೋ ಒಂದೆಡೆ silver line ಮೂಡಲಿದೆ ಎಂಬ ಧನಾತ್ಮಕ ಆಲೋಚನೆ ನಮ್ಮಲ್ಲಿರಲಿ. ಜೊತೆಗೆ ಲೈಟಾಗಿ ನಮ್ಮ ಮೇಲೆ ಒಂದು ಕಡೆ ಅದೃಷ್ಟರೇಖೆ ಗೀರಿಬಿಡು ಭಗವಂತ ಅಂತ ಕೇಳಿಕೊಳ್ಳಿ.

ಜೀವನದಲ್ಲಿ ಒಬ್ಬ ವ್ಯಕ್ತಿ ಇನ್ನೆಷ್ಟೇ ವಿದ್ಯಾವಂತನಾದರೂ, ಅವನನ್ನು ಅದ್ವಿತೀಯ ಎಂದು ಗುರುತಿಸಬಲ್ಲದ್ದು ಎಂದರೆ ಬೆರಳಚ್ಚು. ಇಡೀ ಮನುಕುಲದಲ್ಲಿ ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರ ಬೆರಳಚ್ಚು ಇರುವುದಿಲ್ಲ ಎಂದರೆ ಈ ಗೆರೆಯ ವೈಶಿಷ್ಟ್ಯತೆ ಎಷ್ಟಿರಬೇಡಾ? ಬೆರಳಚ್ಚಿನಲ್ಲಿ ಒಂದು ರೇಖೆಯೂ ನೇರವಾಗಿಲ್ಲದೇ ಇದ್ದರೂ ಜೀವನದಲ್ಲಿ ಕೊಂಚ ಅಡ್ಡಾದಿಡ್ಡಿಯಾದರೆ ಅದೇನೋ ಆದವರ ಹಾಗೆ ಆಡ್ತೀವಿ ಅಲ್ಲವೇ? ಜೀವನ ಏರುಪೇರಿಲ್ಲದೇ ಸಾಗಬೇಕು ಎಂದು ಬಯಸುವ ನಾವು ECG Monitor ಮೇಲೆ ಮಾತ್ರ ರೇಖೆ ಒಂದೇ ಸಮನಾಗಿರಬೇಕು ಅಂತ ಬಯಸೋದಿಲ್ಲ ನೋಡಿ. ಈ monitor ಮೇಲಿನ ಗೆರೆ ಮೇಲೆ ಕೆಳಗೆ ಇದ್ದರೇನೇ ಜೀವನ. ಬರಹದ ಬಗ್ಗೆ ಏನಾದರೂ ಒಂದೆರಡು ಸಾಲುಗಳನ್ನು ಹೇಳುವಿರಾ?

English summary
Srinath Bhalle Column: The distance between two ends is a measure of proximity or distance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X