ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಅಸಂಬದ್ಧ ಬರಹ ಅಂತ ಇದ್ದರೆ; ಹಾಗೆಂದರೆ ಏನು ಅಂತೀನಿ?

By ಶ್ರೀನಾಥ್ ಭಲ್ಲೆ
|
Google Oneindia Kannada News

ಮೊದಲಿಗೆ ಅಸಂಬದ್ಧ ಬರಹ ಎಂದರೆ ಬೇಕಾದಷ್ಟು ರೀತಿಯಲ್ಲಿ ಹೇಳಬಹುದು ಅಥವಾ ಅರ್ಥೈಸಿಕೊಳ್ಳಬಹುದು. ವಿಷಯಗಳು ಅಲ್ಲಿ ಇಲ್ಲಿ ಅಂತ ಚೆಲ್ಲಾಪಿಲ್ಲಿ ಆದ ಬರಹವನ್ನು ಅಸಂಬದ್ಧ ಎನ್ನಬಹುದು. ಉದಾಹರಣೆಗೆ ಕೆಲವು ಸಿನಿಮಾಗಳಲ್ಲಿ ಹೇಗಪ್ಪಾ ಅಂದರೆ, ನೀವು ಸದ್ಯದ ಸನ್ನಿವೇಶ ನೋಡುತ್ತಿದ್ದೀರೋ ಅಥವಾ ಫ್ಲಾಶ್‌ಬ್ಯಾಕ್ ನೋಡುತ್ತಿದ್ದೀರೋ ಅನ್ನುವುದು ಅರ್ಥವೇ ಆಗೋದಿಲ್ಲ.

ಕಾಲ ಒಂದಿತ್ತು. ಅಂದಿನ ಸಿನಿಮಾಗಳಲ್ಲಿ ಫ್ಲಾಶ್‌ಬ್ಯಾಕ್ ಎಂದರೆ ಆ ಪಾತ್ರದ ಮೇಲೆ ಈ tortoise mosquito coil ನಂತಹ ಒಂದು ವಿಡಿಯೋ ಸುತ್ತಿಸಿ ಬಿಟ್ಟಾಗ, ಓಹೋ ಈಗ ಹಿಂದೆ ನಡೆದ ವಿಷಯಕ್ಕೆ ಹೋಗುತ್ತಿದ್ದೇವೆ ಅಂತ ಅರ್ಥವಾಗಿ ಹೋಗುತ್ತಿತ್ತು. ಆನಂತರದ ಚಿತ್ರಗಳಲ್ಲಿ, ಪಾತ್ರದ ಮೇಲೆ ಸಂಪೂರ್ಣ ಫೋಕಸ್ ಮಾಡಿ ಒಳನುಗ್ಗೋದು. ಅವರು ಯಾವ ಭಂಗಿಯಲ್ಲಿ ನಿಂತಿದ್ದರೋ ಅದೇ ಭಂಗಿಯನ್ನು ಮತ್ತೆ ತೋರಿಸಿದಾಗ ಅವರು ಅಲ್ಲಿಂದ ವಾಪಸ್ ಬಂದರೂ ಅಂತರ್ಥ. ಆಮೇಲಿನ ಚಿತ್ರಗಳ ಸಕತ್ ಕಾಂಪ್ಲಿಕೇಟ್ ಆಯ್ತು ಬಿಡಿ.

ಬುದ್ದಿವಂತರಿಗೆ ಮಾತ್ರ

ಕಾಂಪ್ಲಿಕೇಟ್ ಆಯ್ತು ಅಂದ ಮಾತ್ರಕ್ಕೆ ಅದು ಅಸಂಬದ್ಧ ಅಂತ ಅಲ್ಲ, ನಿಮಗೆ ಅರ್ಥಮಾಡಿಕೊಳ್ಳಲು ಗೊತ್ತಿಲ್ಲ ಅಂತ ಹೇಳಬಹುದೇನೋ ಆ ನಿರ್ದೇಶಕರು. ಅದು ಹೇಗಪ್ಪಾ ಅಂದ್ರೆ ಚಿತ್ರದ ಟೈಟಲ್ ಕೆಳಗೆ "ಬುದ್ದಿವಂತರಿಗೆ ಮಾತ್ರ' ಅಂತ ಹಾಕಿಬಿಡೋದು. ಪೋಸ್ಟರ್‌ನಲ್ಲೇ ಎದ್ದು ಕಾಣೋದ್ರಿಂದ, ಮರ್ಯಾದೆ ಉಳಿಸಿಕೊಳ್ಳಬೇಕು ಎಂದರೆ ಮೊದಲಿಗೆ ಥಿಯೇಟರ್ ಒಳಗೆ ಅಡಿಯಿಡಬಾರದು ಅಥವಾ ಸಿನಿಮಾ ನೋಡಿಕೊಂಡು ಬಂದ ಮೇಲೆ ಸಕತ್ತಾಗಿದೆ ಅಂತ ಹೇಳಲೇ ಬೇಕಾಗಿರೋದು. ಸಿನಿಮಾ ನೋಡಿ, ಏನೂ ಅರ್ಥವಾಗಲಿಲ್ಲಪ್ಪಾ ಅಂದರೆ ದಿಗಂಬರನಾಗಿ ಬೀದಿ ಅಲೆದ ರಾಜನ ಕಥೆಯಂತೆ ಆಗುತ್ತದೆ.

Srinath Bhalle Column: If There Is Nonsense Writing; What Is That?

ಸರಿ, ಈಗ ಅಸಂಬದ್ಧ ಎಂದರೆ. ನಮ್ಮ ತೆನಾಲಿ ರಾಮಕೃಷ್ಣನ ಕಥೆಯನ್ನೇ ತೆಗೆದುಕೊಳ್ಳೋಣ. ಒಂದಂತೂ ನಿಜ, ಈ ಕಥೆಗಳು ಕೆಲವೊಮ್ಮೆ ರಾಮಕೃಷ್ಣನ ಹೆಸರಲ್ಲಿ ಬರೆಯಲಾಗಿರುತ್ತದೆ. ಕೆಲವೊಮ್ಮೆ ಬೀರ್‌ಬಲ್ ಹೆಸರಿನಲ್ಲಿ ಬರೆಯಲಾಗಿರುತ್ತದೆ. ನನಗೆ ತಿಳಿದಿರುವಂತೆ ಇವುಗಳು ನಿಜಕ್ಕೂ ನಡೆದಿಲ್ಲದೇ ಇರುವ ಸ೦ಭವನೀಯತೆ ಹೆಚ್ಚು. ಬಿಡಿ, ಇಲ್ಲಿನ ವಿಷಯ ಅದಲ್ಲಾ. ಈಗ ಕಥೆಗೆ ಹೋಗೋಣ ಬನ್ನಿ.

ಇಟ್ಟಿದ್ದ ಘಳಿಗೆ ಮುಗಿದು, ಕೊಟ್ಟಿದ್ದ ಘಳಿಗೆ ಬಂದಾಯ್ತು

ರಾಜನಿಗೆ ಕುದುರೆಗಳ ಮೇಲೆ ಅತೀ ವ್ಯಾಮೋಹ ಇತ್ತಂತೆ. ಅವನಿಗೊಮ್ಮೆ ಹಸಿರು ಕುದುರೆ ಬೇಕು ಅಂತ ಅನ್ನಿಸಿತಂತೆ. ಸಭೆಯನ್ನು ಕರೆದು ಆಜ್ಞೆ ಹೊರಡಿಸಿಯೇಬಿಟ್ಟನಂತೆ. ಇದೊಂದು ಅಸಂಬದ್ಧವಾದ ಆಲೋಚನೆ, ಕೆಲಸವಾಗದೆ ಇದ್ದರೆ ರಾಜನ ಕೋಪಕ್ಕೆ ಗುರಿಯಾಗಬೇಕಾದೀತು ಎಂದು ಹೆದರಿ ರಾಮಕೃಷ್ಣನ ಕಡೆ ನೋಡಿದರಂತೆ. ಅವನ ಅಭಯ ನೀಡುವಂತೆ ಅವರನ್ನು ನೋಡಿ ನಂತರ ರಾಜನನ್ನು ಏಳುದಿನಗಳ ಕಾಲ ಸಮಯ ಕೇಳಿದನಂತೆ. ಇದೊಂದು ರೀತಿ ಬೀಸೋ ದೊಣ್ಣೆಯನ್ನು ತಪ್ಪಿಸಿಕೊಳ್ಳುವಂತಹ ಆಲೋಚನೆ.

"ಇಟ್ಟಿದ್ದ ಘಳಿಗೆ ಮುಗಿದು, ಕೊಟ್ಟಿದ್ದ ಘಳಿಗೆ ಬಂದಾಯ್ತು' ಎಂಬಂತೆ ಏಳನೆಯ ದಿನ ಬಂದೇ ಬಿಟ್ಟಿತು. ಸಭೆಯಲ್ಲಿ ರಾಜನು ಕಾತುರದಿಂದ ಕಾದಿರಲು, ಸಭೆಯ ಮಂದಿ ಭೀತಿಯಿಂದ ಕಾದಿರಲು, ರಾಮಕೃಷ್ಣನು ಆಗಮಿಸುತ್ತಾನೆ. ಕುದುರೆ ಎಲ್ಲಿ ಎಂದು ಕೇಳಿದಾಗ, ಕುದುರೆಯೇನೋ ಸಿದ್ಧವಿದೆ. ಆದರೆ ಅದನ್ನು ನಿಮ್ಮ ಮುಂದೆ ತಂದು ನಿಲ್ಲಿಸಲು ಒಂದೊಳ್ಳೆ ಘಳಿಗೆಗೆ ಕಾಯುತ್ತಿದ್ದೇನೆ ಎನ್ನುತ್ತಾನೆ. ರಾಜನಿಗೆ ಕುತೂಹಲ ತಡೆಯದೇ ಅದಾವ ಘಳಿಗೆ ಬೇಕು ಹೇಳು ಎನ್ನಲು, "ವಾರದ ಏಳು ದಿನವಲ್ಲದ ಒಂದು ದಿನವೇ ಆ ಶುಭದಿನ ಎನ್ನುತ್ತಾನೆ'. ರಾಜನೇ ನಿನ್ನ ಕೋರಿಕೆ ಅಸಂಬದ್ಧ ಎಂದು ಬೇರೊಂದು ರೀತಿಯಲ್ಲಿ ಹೇಳಿದ ರಾಮಕೃಷ್ಣ ಎಂಬುದೇ ಇಲ್ಲಿನ ಕಲಿಕೆ.

ಬರಹಗಳು ಅಸಂಬದ್ಧ ಎನಿಸುವಂತೆ ಮಾಡುತ್ತದೆ

ಕೆಲವೊಂದು ಬರಹಗಳು ಅನುಕ್ರಮದಲ್ಲಿ ಗಡಿಬಿಡಿ ಮಾಡಿಕೊಂಡಿಲ್ಲದೇ ಇದ್ದರೂ, ಲೋಪದೋಷಭರಿತವಾಗಿ ಅಸಂಬದ್ಧ ಎನಿಸೋದು ಸರ್ವೇಸಾಮಾನ್ಯ. ಕೆಲವರಿಗೆ ಸುಮ್‌ಸುಮ್ನೆ ಸೀಳುವ ಅಭ್ಯಾಸ. ಅದೇನೋ ಗೊತ್ತಿಲ್ಲ, ತಾವೇನೋ ಸೌದೆ ಅಂಗಡಿ ಇಟ್ಟವರಂತೆ. ಕಂಡ ಕಂಡ ಕಡೆ ಅಕ್ಷರ ಕೆಳಗೆ ಗೀಟು ಎಳೆದೇ ಬಿಡೋದು. ಇರಲಿ ಬೇಕಾಗುತ್ತೆ ಅಂತ. ಇನ್ನು ಕೆಲವರಿಗೆ ಅಕ್ಷರಗಳು ದೈವ ಸಮಾನ. ಇರಬೇಕಾದದ್ದೇ ನಿಜ, ಆದರೆ ಸೀಳಿದರೆ ಅಕ್ಷರಕ್ಕೆಲ್ಲಿ ನೋವಾಗುತ್ತದೋ, ತಾವೆಲ್ಲಿ ಶಾಪಕ್ಕೆ ಗುರಿಯಾಗುತ್ತೇವೆಯೋ ಅಂತ ಸೀಳುವ ಗೋಜಿಗೆ ಹೋಗುವುದಿಲ್ಲ. ಈ ಎರಡೂ ಸನ್ನಿವೇಶಗಳು ಹಲವೊಮ್ಮೆ ಬರಹಗಳು ಅಸಂಬದ್ಧ ಎನಿಸುವಂತೆ ಮಾಡುತ್ತದೆ. ಒಂದೆರಡು ಉದಾಹರಣೆ ನೋಡೋಣ ಬನ್ನಿ.

ಹಸ್ತಿನಾಪುರದ ಅಧಿಪತಿ ಯಾರಾಗಬೇಕು

"ಪಾಂಡು ಮಹಾರಾಜನು ಗತಿಸಿದ ಮೇಲೆ ಹಸ್ತಿನಾಪುರದ ಅಧಿಪತಿ ಯಾರಾಗಬೇಕು ಎಂಬುದು ಒಂದು ಜಿಜ್ಞಾಸೆಯ ವಿಷಯವಾಯ್ತು. ಬೀಷ್ಮರು ಸಿಂಹಾಸನವನ್ನು ತ್ಯಜಿಸಿದ್ದಾಗಿತ್ತು. ವಿಧುರನು ದಾಸಿಯ ಮಗನಾದ್ದರಿಂದ ಅವನು ರಾಜನಾಗಲಾಗದು. ದೃಷ್ಟಿಹೀನನೇ ಆದರೂ ಧೃತರಾಷ್ಟ್ರರನೇ ಸಿಂಹಾಸನ ಏರಿದನು'. ಸಾಕು ಬಿಡಿ, ಇನ್ನು ಮುಂದುವರೆಸಿದರೆ ನನಗೆ ಗೊತ್ತಿರುವ ಸ್ವಲ್ಪವೇ ಜ್ಞಾನವೂ ಮರೆತು ಹೋಗುತ್ತದೆ. ಧೃತರಾಷ್ಟ್ರನು ದೃಷ್ಟಿಹೀನ ಎಂಬುದೇ ದೊಡ್ಡ ಕಾರಣ ಇಟ್ಟುಕೊಂಡು ಅವನನ್ನು ದೃತರಾಷ್ಟ್ರ ಅನ್ನುವುದು ತರವಲ್ಲ. ಇನ್ನು ವಿದುರನು ವಿಧುರನಲ್ಲ.

ವ್ಯಾಕರಣದ ವಿಷಯವಾಗಿ ಜಿದ್ದಾಜಿದ್ದಿ

"ಅಕ್ಕಿಯ ಪಾವು/ ಸೇರನ್ನು ಮೆಲ್ಲನೆ ಒದ್ದು ಮನೆಯ ಪ್ರವೇಶ ಮಾಡಲು ಸೊಸೆಯು ಹರ್ಷದಿಂದ ಬರುವ ವಿಷಯ ಅವಳ ಗಂಡನಿಗೆ ಗೊತ್ತೇ ಇಲ್ಲ. ಮುಂದೊಮ್ಮೆ ಅದೇ ಗಂಡನು ತನ್ನನ್ನು ಮದುವೆಯಾಗುವೆಯಾ ಎಂದು ಅವಳ ಕೈ ಬೆರಳಿಗೆ ಉಂಗುರ ತೊಡಿಸುವ ಸನ್ನಿವೇಶ, ಅವಳ ಮಗನ ಮುಂದೆಯೇ ನಡೆಯುತ್ತದೆ'. ಹೀಗೊಂದು ಕಥೆಯನ್ನು ಬರೆದಾಗ ಅಸಂಬದ್ಧ ಎನಿಸುವುದು ಸಹಜ, ಆದರೆ ಅಭಿಜ್ಞಾನ ಶಾಕುಂತಲ ಕಥೆಯನ್ನು ಓದಿರಬಾರದು ಅಷ್ಟೇ!

ಕೆಲವೊಮ್ಮೆ ವ್ಯಾಕರಣದ ವಿಷಯವಾಗಿ ಜಿದ್ದಾಜಿದ್ದಿ ನಡೆಯುತ್ತದೆ. ಇದು "ಸುವರ್ಣ ದೀರ್ಘ ಸಂಧಿ' ಅಂತ ಒಬ್ಬರು, ಅಲ್ಲಾ "ಸರವಣ ದೀರ್ಘ ಸಂಧಿ' ಅಂತ ಮತ್ತೊಬ್ಬರು. ಇವರ ನಡುವೆ "ಸವರ್ಣ ದೀರ್ಘ ಸಂಧಿ' ಎಂದು ತಿಳಿದೂ ಹೇಳಲಾಗದೇ ಇರುವವರ ಮೊಗ ವರ್ಣ ಕಳೆದುಕೊಂಡಿರುತ್ತದೆ. ಭಗವಂತ ಇವರನ್ನು ಕ್ಷಮಿಸಿ ಬಿಡು ಎಂದು ದೀರ್ಘ ಶ್ವಾಸ ತೆಗೆದುಕೊಂಡು ಸುಮ್ಮನಾದರೂ ಅಚ್ಚರಿಯಿಲ್ಲ.

ದಿಣ್ಣೆಯ ರಸ್ತೆಯನ್ನು ಏರಲಾರದ ಟೆಂಪೋ

ಕೆಲವರಿಗೆ ಹೈಟೆಕ್ ಕನ್ನಡ ಮಾತನಾಡುವ ಆಸೆ ಬೆಟ್ಟದಷ್ಟಿರುತ್ತದೆ. ಕೃಷ್ಣೇಗೌಡರ ಮಾತುಗಳ ವಿಡಿಯೋ ನೋಡಿ ಅವರಂತೆ ತಾವೂ ವಾಗ್ಮಿ ಎಂದುಕೊಂಡು ಶುರು ಮಾಡಿ ದಿಣ್ಣೆಯ ರಸ್ತೆಯನ್ನು ಏರಲಾರದ ಟೆಂಪೋನಂತೆ ಅಲ್ಲೆಲ್ಲೋ ನಿಂತು ಬಿಡುತ್ತಾರೆ. ಆಸೆ ಇದ್ದರೆ ಅದಕ್ಕೆ ಕೊಂಚ ಶ್ರಮ ಹಾಕಿ ಸಿದ್ದಿ ಮಾಡಿಕೊಳ್ಳುವುದು ಕ್ಷೇಮ.

ಇದೆಲ್ಲದಕ್ಕಿಂತ ಒಂದು ತೂಕ ಹೆಚ್ಚು ಎಂದರೆ ಕಾಗುಣಿತ ಅಥವಾ spelling mistakes. ಕಾಗುಣಿತ ದೋಷಗಳು ಹೇಗಪ್ಪಾ ಎಂದರೆ ಶಾವಿಗೆ ಪಾಯಸದಲ್ಲಿ ಕಡ್ಡಿ ಸಿಕ್ಕ ಹಾಗೆ. ಕಾಗುಣಿತದ ದೋಷಗಳ ಒಂದು ಭಾಗ ಈಗಾಗಲೇ ಹೇಳಿರುವ ಈ ಹೊಟ್ಟೆ ಸೀಳುವಿಕೆ. ಇತರೆ ವರ್ಗದಲ್ಲಿ "ಅ'ಕಾರ "ಹ'ಕಾರಗಳು ಒಂದು. ಆರೈಕೆ ಬೇರೆ, ಹಾರೈಕೆ ಬೇರೆ. ಪುಣ್ಯಕ್ಕೆ ಎರಡೂ ಒಂದೊಳ್ಳೆಯ ಅರ್ಥವನ್ನೇ ಹೊಂದಿವೆ, ಆದರ ಮತ್ತು ಹಾದರದಂತೆ ಅಲ್ಲ.

ಕಣ್ಣಾಲಿಗಳಲ್ಲಿ ತುಂಬಿರುವ ನೀರು

noun ಅಥವಾ ನಾಮಪದಗಳನ್ನು ತಪ್ಪಾಗಿ ಹೇಳೋದು ಧರ್ಮವಲ್ಲ. ಅದು ಒಬ್ಬರ ಹೆಸರೇ ಆಗಿರಬಹುದು, ಸಂಸ್ಥೆಯ ಹೆಸರೇ ಆಗಿರಬಹುದು ಅಥವಾ ಒಂದು ಗುಂಪಿನ ಹೆಸರೂ ಆಗಿರಬಹುದು. ಹಲವು ಬಾರಿ ಹೇಳಿರುವಂತೆ ಬೇಂದ್ರೆ ಅಜ್ಜರು ಹೇಳಿರೋದು "ಎವೆ ಬಡಿಸಿ ಕೆಡವಿಬಿಡು" ಎಂದು ಕಣ್ಣಾಲಿಗಳಲ್ಲಿ ತುಂಬಿರುವ ನೀರಿನ ಬಗ್ಗೆ ಹೇಳಿದ್ದಾರೆ. ತಮ್ಮ ಅನುಕೂಲಕ್ಕೆಂದು "ಎದೆ ಬಿರಿದು ಕೆಡವಿಬಿಡು' ಎಂದು ಒಂದೆಡೆ ಹೇಳಿರೋದು ಮತ್ತೊಂದು ಬಗೆಯ ದೋಷ. ಇದಕ್ಕಾವ ಹೆಸರು ಕೊಡಬೇಕೋ ಗೊತ್ತಿಲ್ಲ. ಆದರೆ ಜ್ಞಾನದೋಷ ಎನ್ನಬಹುದೇನೋ? ಕೆಲವೊಮ್ಮೆ ಹೇಳಲಾಗದ್ದು, ಹೇಳದೇ ಇರಲಾಗದು. ಹೇಗಾದರೂ ಹೇಳಲೇಬೇಕು ಈ ಸರಿಪಡಿಸಲಾರದ ಸಾಹಿತಿಗಳಿಗೆ. ನಿಮಗೆ ಗೊತ್ತೇ?

ಕೊನೆ ಹನಿ: ಈ ಬರಹದಲ್ಲಿ ಕಣ್ತಪ್ಪಿ ದೋಷ ನುಸುಳಿರಬಹುದು. ಕ್ಷಮೆ ಇರಲಿ. ಕಣ್ತಪ್ಪಿ ನುಸುಳಿದರೂ ಅದು ತಪ್ಪೇ, ಆದರೆ ತಪ್ಪುಗಳೇ ಕಣ್ ತುಂಬಿಸದಿರಲಿ.

English summary
Nonsense writing means words error, grammar mistake, writing and interpreting as needed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X