ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಜೀವನದಲ್ಲಿ ದೃಷ್ಟಿ ಇದ್ದರೆ ಸಾಲದು ದೂರದೃಷ್ಟಿ ಇರಬೇಕು

By ಶ್ರೀನಾಥ್ ಭಲ್ಲೆ
|
Google Oneindia Kannada News

ಮೊದಲಿಗೆ ಈ ದೃಷ್ಟಿ ಎಂದರೆ ಏನು ಅಂತ ನೋಡೋಣ, ಆಮೇಲೆ ಮಿಕ್ಕೆಲ್ಲಾ ವೈವಿಧ್ಯತೆಗಳನ್ನು ನೋಡೋಣ. ದೃಷ್ಟಿ ಎಂದರೆ ಆಂಗ್ಲದಲ್ಲಿ sight ಅಂತಲೂ ಅರ್ಥವಿದೆ. ಕಣ್ಣಿನ ದೃಷ್ಟಿ. ನಮಗೆ ನೋಡುವುದಕ್ಕೆ ಇರುವ ಸಾಮರ್ಥ್ಯವನ್ನು ದೃಷ್ಟಿ ಎನ್ನಬಹುದು. ಈ ದೃಷ್ಟಿಯಲ್ಲೂ ಕುಂದುಕೊರತೆಗಳು ಇದ್ದೇ ಇರುತ್ತದೆ ಎಂಬುದು ನಮಗೆಲ್ಲಾ ಅರಿವಿದೆ. ಇದುವೇ ದೃಷ್ಟಿದೋಷ.

ದೃಷ್ಟಿ ದೋಷ ಇಲ್ಲದೇ ಇರುವುದನ್ನು 20/20 vision ಎನ್ನುತ್ತಾರೆ ಅರ್ಥಾತ್ ದೃಷ್ಟಿ ದೋಷ ಇಲ್ಲದೆ ಇರುವವರು 20 ಅಡಿ ದೂರದಲ್ಲಿರುವುದನ್ನು ಎಷ್ಟು ಸ್ಪಷ್ಟವಾಗಿ ಕಾಣಬಲ್ಲರೋ ಅದನ್ನೇ ಕಣ್ಣಿನ ಪರೀಕ್ಷೆ ನಡೆಸಿಕೊಳ್ಳುತ್ತಿರುವ ವ್ಯಕ್ತಿಯೂ ಕಾಣಬಲ್ಲರು ಅಂತರ್ಥ. ಈಗ 20/40 ಅಂದರೇನು ಎಂದು ನೋಡೋಣ. ದೃಷ್ಟಿ ದೋಷ ಇಲ್ಲದೆ ಇರುವವರು 40 ಅಡಿ ದೂರದಲ್ಲಿರುವುದನ್ನು ಎಷ್ಟು ಸ್ಪಷ್ಟವಾಗಿ ಕಾಣಬಲ್ಲರೋ ಅದನ್ನು ಕಣ್ಣಿನ ಪರೀಕ್ಷೆ ನಡೆಸಿಕೊಳ್ಳುತ್ತಿರುವ ವ್ಯಕ್ತಿಯು 20 ಅಡಿ ದೂರದಿಂದ ಕಾಣಬಲ್ಲರು ಅಂತರ್ಥ. ಅಂದರೆ ತೊಂದರೆ ಇದೆ ಅಂತರ್ಥ ಅಲ್ಲವೇ?

ಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾ

short sightedness ಎಂದರೆ ಹತ್ತಿರದಲ್ಲಿ ಇರುವುದನ್ನು ಸ್ಪಷ್ಟವಾಗಿ ನೋಡಬಲ್ಲಿರಿ ಆದರೆ ದೂರದಲ್ಲಿ ಇರುವುದನ್ನಲ್ಲ. ಮೊದಲನೆಯ ಬೆಂಚಿನಲ್ಲಿ ಕೂತರೆ ಬೋರ್ಡ್ ಮೇಲೆ ಬರೆದಿದ್ದುದನ್ನು ಸ್ಪಷ್ಟವಾಗಿ ಕಾಣಬಲ್ಲಿರಿ. ಬಹುಶ: ನಾಲ್ಕನೆಯ ಬೆಂಚಿನಲ್ಲಿ ಕೂತರೆ ಎಲ್ಲವೂ ಅಸ್ಪಷ್ಟ. ಇನ್ನು far sightedness ಎಂದರೆ ಮೇಲೆ ಹೇಳಿದ್ದರ ವಿರುದ್ಧ ಸನ್ನಿವೇಶ. ಪಕ್ಕದಲ್ಲಿ ಇರೋದೇ ಕಾಣೋಲ್ಲ ಆದರೆ ಇನ್ನೆಲ್ಲೋ ಇರುವುದು ಕಾಣುತ್ತದೆ. ಆಂಗ್ಲದಲ್ಲಿ ಅರ್ಥೈಸಿಕೊಳ್ಳುವಾಗಲೂ, ಕನ್ನಡದಲ್ಲಿ ಅರ್ಥೈಸಿಕೊಳ್ಳುವಾಗಲೂ ಕೊಂಚ ಎಚ್ಚರಿಕೆವಹಿಸಬೇಕು ಅಷ್ಟೇ. ಕನ್ನಡದಲ್ಲಿ ಹೇಳುವಾಗ ಸಮೀಪದೃಷ್ಟಿ ಮತ್ತು ದೀರ್ಘದೃಷ್ಟಿ ಎಂದರೂ ಅದಕ್ಕೆ ದೋಷ ಎಂದು ಕೊನೆಯಲ್ಲಿ ತಗಲಿಸಿದಾಗ ಅರ್ಥ ಭಿನ್ನವಾಗುತ್ತದೆ.

Srinath Bhalle Column: If There Is A Vision In Life, There Should Be A Long Vision

ದೃಷ್ಟಿ ಸರಿಯಾಗಿರುವುದು ಎಂಬುದು ಒಂದು ತುದಿಯಲ್ಲಿದ್ದು, ದೃಷ್ಟಿಹೀನತೆ ಎಂಬುದು ಮತ್ತೊಂದು ತುದಿಯಾದರೆ ಮಿಕ್ಕೆಲ್ಲಾ ರೀತಿಯ ದೋಷಗಳು ಈ ಎರಡು ಮಹಾಸಾಗರದ ತುದಿಗಳ ನಡುವೆ ಸಿಲುಕಿರುವುದೇ ಆಗಿದೆ. ದೃಷ್ಟಿದೋಷ ಅಂತ ರಿಪೋರ್ಟ್ ಆಗಿಲ್ಲದೇ ಇರುವುದರಿಂದ ಮಹಾಭಾರತದ ಹೆಚ್ಚಿನವರಿಗೆ ದೃಷ್ಟಿ ಚೆನ್ನಾಗಿತ್ತು ಅಂತಲೇ ಅಂದುಕೊಳ್ಳೋಣ. ಆ ಮತ್ತೊಂದು ತುದಿಯಲ್ಲಿರುವುದೇ ಧೃತರಾಷ್ಟ್ರ.

ತನ್ನದಲ್ಲದ ತಪ್ಪಿಗೆ ತಾನು ಸಿಂಹಾಸನ ವಂಚಿತನಾಗಿದ್ದೇನೆ ಎಂಬ ಅಳಲು ಧೃತರಾಷ್ಟ್ರನಲ್ಲಿ ಬೇರೂರಿತ್ತು. ತನಗೆ ಅನ್ಯಾಯವಾಗಿದೆ ಎಂದೇ ತಮ್ಮನಾದ ವಿದುರನ ಬಗ್ಗೆ ಕ್ರೋಧ ತಳೆದಿದ್ದ. ವಿದುರ ನಿರ್ಗಮನಿಸಿದ ಮೇಲೆ ಅಂಧತ್ವದ ಜೊತೆಗೆ ಮೋಹದಿಂದಲೂ ಅಂಧತ್ವ ಹೊಂದಿದವನಿಗೆ ಯಾವ ಚಿಕಿತ್ಸೆಯೂ ಫಲ ನೀಡಲಿಲ್ಲ. ಆ ಪುತ್ರಮೋಹವು ಪುತ್ರ ತೀರಿದ ಮೇಲೂ ಇತ್ತು. ಈ ಧೃತರಾಷ್ಟ್ರನನ್ನು ಕೊಂಚ ಇಲ್ಲಿಯೇ ಹಿಡಿದಿಟ್ಟುಕೊಂಡು ಸೀದಾ ನ್ಯಾಯಾಲಯಕ್ಕೆ ಹೋಗೋಣ ಬನ್ನಿ.

ನ್ಯಾಯದೇವತೆಯ ಕಂಗಳು ಕಟ್ಟಲಾಗಿದೆ. ಅರ್ಥಾತ್ ನ್ಯಾಯದೇವತೆಯ ಕಣ್ಣಲ್ಲಿ ಬಡವ-ಬಲ್ಲಿದ ಎಂಬ ಭೇದವಿಲ್ಲ. ಕಣ್ಣಿಗೆ ಕಾಣದೆ ಹೋಗುವುದರಿಂದ ಬರೀ ಆಲಿಸುವಿಕೆಯಿಂದ ಮಾತ್ರ ವಿಷಯವನ್ನು ಅರ್ಥೈಸಿಕೊಂಡು ನ್ಯಾಯ ಒದಗಿಸಬೇಕು. ಇದಿಷ್ಟು ವಸ್ತುಸ್ಥಿತಿಯಾಗಿದ್ದರೂ ಧೃತರಾಷ್ಟ್ರನ ವಿಷಯದಲ್ಲಿ ಹೀಗೆ ಆಗಲೇ ಇಲ್ಲ. ಗಂಡ-ಹೆಂಡತಿಯರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದರೂ ಅವರ ಕಣ್ಣುಗಳಾಗಿ ಅಲ್ಲಿ ಸಂಜಯ ಇರಲಿಲ್ಲ ಬದಲಿಗೆ ಶಕುನಿ ಇದ್ದ.

ನೋಡುವುದು ಕಣ್ಣುಗಳ ಧರ್ಮವೇ ಆದರೂ ಈ ಕಣ್ಣುಗಳನ್ನು ನಿಯಂತ್ರಿಸುವುದು ಮೆದುಳು. ಸಾಮಾನ್ಯ ಜ್ಞಾನದಂತೆಯೇ ನುಡಿದರೆ ಮೆದುಳು ನಿಷ್ಕ್ರಿಯವಾದರೆ ಮಿಕ್ಕ ಯಾವ ಅಂಗವೂ ಕೆಲಸ ಮಾಡುವುದಿಲ್ಲ ಬಿಡಿ. ಕಣ್ಣುಗಳು ನೋಡುವುದು ಒಂದೇ ಆದರೂ ಅದರ ಹಿಂದಿನ ದೃಷ್ಟಿ ಭಿನ್ನವೇ ಸದಾ. ಒಂದು ಬಸ್ ನಿಲ್ದಾಣದಲ್ಲಿ ಒಬ್ಬ ಹೆಣ್ಣು ನಿಂತಿದ್ದಾಳೆ ಎಂದುಕೊಳ್ಳಿ.

ಕೇವಲ ಹತ್ತು ಭಿನ್ನ ವಯಸ್ಸಿನವರನ್ನು ಅಲ್ಲಿರಿಸಿ ಅವರು ಆಕೆಯನ್ನು ನೋಡುವ ದೃಷ್ಟಿಯನ್ನು, ಅಂಥದ್ದೇನಾದರೂ ಮಾಪಕ ಅಂತಿದ್ದು, ತೂಗಿ ನೋಡಿದರೆ ಅಲ್ಲಿ ಹತ್ತಲ್ಲಾ ನೂರಾರು ದೃಷ್ಟಿಯ ರಿಪೋರ್ಟ್ ಬಂದೀತು. ಕೇವಲ ಹತ್ತು ಜೊತೆಯ ಕಣ್ಣುಗಳಿಗೇ ಇಷ್ಟೆಲ್ಲಾ ಕಾಣುತ್ತದೆ ಎಂದರೆ ಈ ದೃಷ್ಟಿಯ ತಾಕತ್ ಎನ್ನಿಷ್ಟಿರಬಹುದು. ಈ ಹತ್ತು ಅಥವಾ ನೂರಾರು ದೃಷ್ಟಿ ಹೀಗಲ್ಲಾ ಇರಬಹುದು ಎಂಬುದನ್ನು ನಿಮ್ಮ ಕಲ್ಪನೆಗೆ ಬಿಟ್ಟಿರುತ್ತೇನೆ. ನಿಮ್ಮ ಕಲ್ಪನೆಯನ್ನು ನಾನು ಊಹಿಸಲಾರೆ.

ಈ ದೃಷ್ಟಿಯನ್ನು ಹಲವಾರು ರೀತಿ ಬಣ್ಣಿಸಬಹುದು. ದೇವನೊಬ್ಬ ನಾಮ ಹಲವು ಎಂದು ಹೇಳಬಹುದು. ಒಂದೇ ವಿಚಾರವನ್ನು ಹಲವಾರು ಕಿಟಕಿಗಳಿಂದ ನೋಡುವಂತೆ ಎಂದೂ ಹೇಳಬಹುದು. ದೃಷ್ಟಿಯನ್ನು ವಿಮರ್ಶೆ ಎಂದೂ ಹೇಳಬಹುದು. ಒಬ್ಬ ಕವಿಯ ಮೂಲ ಉದ್ದೇಶವನ್ನು ಹೇಗೆ ವಿಮರ್ಶಕರು ತಮ್ಮ ಅನಿಸಿಕೆಯಿಂದ ತೂಗುತ್ತಾರೋ ಹಾಗೆ ಈ ದೃಷ್ಟಿಯನ್ನೂ ಸಹ.

ಒಂದು ಚಿಕ್ಕ ಉದಾಹರಣೆಯನ್ನೇ ಹೇಳುವುದಾದರೆ ಒಂದು ಬಸ್'ನಲ್ಲಿ ಒಬ್ಬಾತ ಕೊಂಚ ದೂರದಲ್ಲಿ ನಿಂತಿದ್ದ ಆಕೆಯ ಕುತ್ತಿಗೆಯತ್ತಲೇ ದಿಟ್ಟಿಸಿ ನೋಡುತ್ತಿದ್ದ. ಆಕೆ ಅವನನ್ನು ನೋಡಿದಾಗ ದೃಷ್ಟಿಯನ್ನು ಬೇರತ್ತ ತಿರುಗಿಸಿದರೂ, ಕಣ್ಣಿನ ತುದಿಯಿಂದ ಗಮನಿಸಿದಾಗ ಆತ ಈಕೆಯತ್ತಲೇ ನೋಡುತ್ತಿದ್ದುದು ಅರಿವಾಯ್ತು. ತನ್ನ ಸೆರಗನ್ನು ಮುಚ್ಚಿ ನಿಂತರೂ ಆ ದೃಷ್ಟಿಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಕೊನೆಗೆ ಆಕೆ ಗಲಾಟೆ ಎಬ್ಬಿಸಿದ ಮೇಲೆ, ಅಲ್ಲಿದ್ದ ಜನರು ತಮ್ಮ ಪೌರುಷ ತೋರಿದ ಮೇಲೆ ಆತ ಆಕೆಯತ್ತ ನೋಡಿ ಹೇಳುತ್ತಾನೆ "ನಿಮ್ಮ ನಾಲ್ಕೆಳೆ ಬಂಗಾರದ ಸರ ಕಡಿದಿದೆ. ಯಾವ ಕ್ಷಣದಲ್ಲೂ ಕೆಳಕ್ಕೆ ಬೀಳಬಹುದು. ಮರ್ಯಾದೆ ಮೀರದೆ ಅದನ್ನು ನಿಮಗೆ ಹೇಗೆ ಹೇಳುವುದು ಎಂದೇ ಆಲೋಚಿಸುತ್ತಾ ಇದ್ದೆ. ಒಂದು ವೇಳೆ ಜಾರಿ ಕೆಳಕ್ಕೆ ಬಿದ್ದರೆ ತೆಗೆದುಕೊಡೋಣ ಅಂತ ನಿಮ್ಮ ಮೇಲೆ ಒಂದು ಕಣ್ಣಿಟ್ಟಿದ್ದೆ'. ದೃಷ್ಟಿ ಎಂದರೆ ಇಷ್ಟೇ! ನೋಟವು ಅದರ ಹಿನ್ನೆಲೆಯನ್ನು ಸದಾ ಸೂಚಿಸುತ್ತದೆ ಎಂಬ ಗ್ಯಾರಂಟಿ ಇಲ್ಲ.

ಈ ದೃಷ್ಟಿಯ ಅರ್ಥಾತ್ visionನ ಮತ್ತೊಂದು ಮಜಲು ಎಂದರೆ ದೂರದೃಷ್ಟಿ. ದೀರ್ಘ ದೃಷ್ಟಿಯೇ ಬೇರೆ, ದೂರದೃಷ್ಟಿಯೇ ಬೇರೆ. ಒಂದು ಸಂಸ್ಥೆಯ vision statement ಎಂದರೆ ಆ ಕಂಪನಿಯು ಹಂತ ಹಂತವಾಗಿ ಏನನ್ನು ಸಾಧಿಸಲು ಇಚ್ಚಿಸಿದೆ ಅಂತ. ಯಾವುದೇ ಒಂದು ವ್ಯಾಪಾರ ಅಥವಾ ವ್ಯವಹಾರಕ್ಕೆ ಕೈ ಹಾಕಿದಾಗ ಈ ದೂರದೃಷ್ಟಿ ಎಂಬುದು ಬಹಳ ಮುಖ್ಯವಾಗುತ್ತದೆ. ಏನನ್ನು ಸಾಧಿಸಲಿದ್ದೇವೆ ಎಂಬುದೇ ನಮಗೆ ಗೊತ್ತಿಲ್ಲ ಎಂದವರು ವ್ಯಾಪಾರಕ್ಕೆ ಕೈಹಾಕಲೇಬಾರದು ಎನ್ನುತ್ತಾರೆ ಹಿರಿಯರು.

ದೂರದೃಷ್ಟಿ ಉಳ್ಳ ಜನರು ನಾಯಕರಾಗಲು ಯೋಗ್ಯರಾಗಿರುತ್ತಾರೆ ಎನ್ನಬಹುದು. ಹೀಗೆ ಹೇಳುವ ಬದಲು, ನಾಯಕರಿಗೆ ದೂರದೃಷ್ಟಿ ಇರಬೇಕಾದುದು ಅತ್ಯಾವಶ್ಯಕ ಎನ್ನಬಹುದು. ದೂರದೃಷ್ಟಿ ಉಳ್ಳವರು ತೆಗೆದುಕೊಂಡ ನಿರ್ಧಾರಗಳೆಲ್ಲವೂ ಅವರೆಂದುಕೊಂಡ ರೀತಿಯೇ ಆಗಬೇಕು ಅಂತೇನಿಲ್ಲ. ಕೆಲವೊಮ್ಮೆ ತೆಗೆದುಕೊಂಡ ನಿರ್ಧಾರ ಆದಾಯ ತರಬಹುದು, ಕೆಲವೊಮ್ಮೆ ಆ ನಿರ್ಧಾರ ಕೈಕೊಟ್ಟರೆ ಇವರು ಆ ಕೆಲಸಕ್ಕೆ ವಿದಾಯ ಹೇಳಬೇಕಾಗಲೂಬಹುದು.

Vision without Execution is Hallucination ಎಂಬ ನುಡಿ ಇದೆ. ಮೊದಲಿಗೆ ನಮ್ಮ ದೃಷ್ಟಿ ಸರಿ ಇರಬೇಕು. ಆ ನಂತರ ದೂರದೃಷ್ಟಿ ಹೊಂದಬೇಕು. ಎಂಥದ್ದೋ ಒಂದು ದೂರದೃಷ್ಟಿ ಇಟ್ಟುಕೊಂಡು ಆ ದಿಶೆಯಲ್ಲಿ ಕೆಲಸವನ್ನೇ ಮಾಡದೇ ಹೋದರೆ ಬರೀ ಭ್ರಮೆಯಲ್ಲಿ ಕೊನೆಗೊಳ್ಳುತ್ತದೆ. ತಿರುಕ ಕಂಡ ಕನಸಿನಂತೆ ಕೈಲಿರುವುದೂ ಕೈಜಾರಿದಂತೆ.

ಒಂದು ಹೊರದೃಷ್ಟಿಯನ್ನು ಅರ್ಥೈಸಿಕೊಳ್ಳಲು ಮೊದಲಿಗೆ ವ್ಯವಧಾನ ಇರಬೇಕು. ಕೊಂಚ ಒಳಹೊಕ್ಕು ನೋಡಬೇಕು ಎಂದರೆ ನಮ್ಮ ಒಳ ದೃಷ್ಟಿ ಸರಿಯಿರಬೇಕು. ಏನಂತೀರಿ?

English summary
Vision is the ability to see us. We all know that there are drawbacks in this view as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X