ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಚಪ್ಪಾಳೆ ತಟ್ಟೋಣ ಬನ್ನಿರೋ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಚಪ್ಪಾಳೆಯನ್ನು ತಟ್ಟುವ ಕ್ರಿಯೆ ಬಾಲಕರಿಂದ ಹಿಡಿದು ವೃದ್ಧರವರೆಗೂ ಕಂಡುಬರುವ ಒಂದು ಚಟುವಟಿಕೆ ಎಂದರೆ ತಪ್ಪಾಗಲಾರದು. ಈ ಚಪ್ಪಾಳೆ ಎಂದರೆ ಏನು? ಒಂದು ಹಸ್ತವನ್ನು ಮತ್ತೊಂದು ಹಸ್ತಕ್ಕೆ ಬಡಿದಾಗ ಅರ್ಥಾತ್ ತಟ್ಟುವ ಕ್ರಿಯೆ. ಚಪ್ಪಾಳೆ ಹೊಡೆದಾಗ ಹೊರಹೊಮ್ಮುವ ಸದ್ದು "ಚಪ್ಪಾಳೆ ಸದ್ದು'. ಈ ಚಪ್ಪಾಳೆಯ ಸದ್ದು ಒಬ್ಬ ವ್ಯಕ್ತಿಯನ್ನು ಹಿಗ್ಗಿಸಲೂಬಹುದು, ಕುಗ್ಗಿಸಲೂ ಬಹುದು ಎಂದರೆ ಅಚ್ಚರಿಯಾಗುತ್ತದೆ.

"ತಟ್ಟು ಚಪ್ಪಾಳೆ ಪುಟ್ಟ ಮಗು ಇಕ್ಕೋ ಕೈ ತಕ್ಕೋ ಕೈ' ಎಂಬುದು ಒಂದು ಸರಳವಾದ ಮತ್ತು ಸೊಗಸಾದ ಶಿಶುಗೀತೆ. ಇದನ್ನು ರಚಿಸಿದವರು 'ಹೊಯಿಸಳ' ಕಾವ್ಯನಾಮ ಹೊತ್ತ ಅರಗಂ ಲಕ್ಷ್ಮಣ ರಾವ್. ತಟ್ಟು ಚಪ್ಪಾಳೆ ಪುಟ್ಟ ಮಗು ಪದ್ಯದಲ್ಲಿ "ಇಕ್ಕೋ ಕೈ ತಕ್ಕೋ ಕೈ' ಎಂಬ ಸಾಲನ್ನೇ ತೆಗೆದುಕೊಂಡರೆ, ಚಪ್ಪಾಳೆ ಮೂಡಲು ಒಬ್ಬರದ್ದೇ ಕೈಗಳಾಗಬೇಕಿಲ್ಲ ಎಂಬುದರ ಅರಿವು ಮೂಡುತ್ತದೆ. ಮಗು ತನ್ನೆದೆಯೇ ಹಸ್ತಗಳನ್ನು ತಟ್ಟುತ್ತ ಬೊಚ್ಚು ಬಾಯಿ ತೆರೆದು ನಕ್ಕಾಗ ಅಲ್ಲಿ ಕಾಣ್ವ ಪ್ರಪಂಚವೇ ಬೇರೆ. ಅದೊಂದು ಬೆಲೆ ಕಟ್ಟಲಾಗದ ಸನ್ನಿವೇಶ.

ಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾ

ಪುಟ್ಟ ಮಕ್ಕಳೊಡನೆ ಆಡುವಾಗ ಹೈಫೈ ಎಂದು ಹೇಳುತ್ತಾ ನಮ್ಮ ಹಸ್ತವನ್ನು ಮೇಲೆ ಹಿಡಿದಾಗ ಆ ಕೂಸು ತನ್ನ ಹಸ್ತದಿಂದ ನಮ್ಮ ಹಸ್ತಕ್ಕೆ ಹೊಡೆಯುತ್ತದೆ. ಹೈಫೈ ಎಂದರೆ Hi-5 ಅಥವಾ High Five ಅಂತರ್ಥ. ಇದೊಂದು ಸ್ನೇಹದ ಸಂಕೇತ. ಈ ಸಂಕೇತ ಬರಿಯ ಮಕ್ಕಳೇ ಅಲ್ಲದೆ ದೊಡ್ಡವರೂ ಬಳಸುತ್ತಾರೆ.

ಅಂದ ಹಾಗೆ ಹೈಫೈ ಎಂದಾಗ ಹಸ್ತವನ್ನು ಮೇಲಕ್ಕೆ ಎತ್ತುವುದು ಎಂದಾಗ ಆ ಕೈಯನ್ನು ನೋಡುವಾಗ ತಲೆ ಎತ್ತಿ ನೋಡಬೇಕು ಅಲ್ಲವೇ? ಸಿರಿವಂತರನ್ನೂ ತಲೆ ಎತ್ತಿಯೇ ನೋಡೋದು ಅಂತ ನಿಮಗೂ ಗೊತ್ತಲ್ಲವೇ? ಅದಕ್ಕೆ ನೋಡಿ ಅಂಥವರನ್ನು ಹೈಫೈ ಜನ ಅನ್ನೋದು. ಸುಮ್ಮನೆ ಇರಲಿ, ಅಂತ ಒಂದು ಪುಟ್ಟ ವಿಷಯ ಹೇಳಿದೆ ಅಷ್ಟೇ.

Srinath Bhalle Column: Come On, Lets Clap

ಚಪ್ಪಾಳೆ ತಟ್ಟಲು ಎರಡು ಹಸ್ತಗಳು ಬೇಕು, ಚಿಟಿಕೆ ಹೊಡೆಯಲು ಒಂದೇ ಹಸ್ತ ಸಾಕು ಎಂಬ ಡೈಲಾಗ್ ನಮ್ಮ ರಮೇಶ್'ರ ಬಾಯಿಂದ "ನಮ್ಮೂರು ಮಂದಾರ ಹೂವೇ' ಚಿತ್ರದಲ್ಲಿ ಕೇಳಿದ್ದೆವು, ನೆನಪಿದೆಯೇ? ಆದರೆ ಇಲ್ಲೊಂದು ಸೂಕ್ಷ್ಮವೂ ಇದೆ. ಎರಡು ಹಸ್ತದಿಂದ ಆದರೆ ಚಪ್ಪಾಳೆ ಸರಿ, ಆದರೆ ಎರಡು ಬೆರಳಿನಿಂದ ಆಗೋದು ಚಿಟಿಕೆ. ಚಪ್ಪಾಳೆಯಾಗಲಿ, ಚಿಟಿಕೆಯಾಗಲಿ ಒಂದು ಸದ್ದು ಅನ್ನೋದು ನಿಜ.

ಚಿಟಿಕೆ ಎಂದಾಗ ಬೆರಳಿನ ತುದಿಯಿಂದ ಮೂಡುತ್ತದೆ, ಚಪ್ಪಾಳೆ ಎಂದರೆ ಹಸ್ತದಿಂದ ಮೂಡುತ್ತದೆ. ಬೆರಳು ಮತ್ತು ಹಸ್ತದ surface area ಹೋಲಿಸಿದಾಗ ಚಪ್ಪಾಳೆ ದೊಡ್ಡ ಸದ್ದು ಮೂಡಿಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ವಿಷಯ ಇಷ್ಟೇ, ಚಪ್ಪಾಳೆಯಾಗಲಿ, ಚಿಟಿಕೆಯಾಗಲಿ ಮೂಡಬೇಕು ಎಂದರೆ ಒಂದರಿಂದ ಸಾಧ್ಯವಿಲ್ಲ ಬದಲಿಗೆ ಎರಡು ಹಸ್ತವೋ ಅಥವಾ ಬೆರಳೋ ಬೇಕೇ ಬೇಕು. ಮೂಲ ವ್ಯತ್ಯಾಸ ಇಷ್ಟೇ, ಚಪ್ಪಾಳೆ ಒಬ್ಬರಿಂದಲೂ ಆಗಬಹುದು, ಇಬ್ಬರಿಂದಲೂ ಆಗಬಹುದು. ಆದರೆ ಚಿಟಿಕೆ ಮಾತ್ರ ಒಬ್ಬರಿಂದಲೇ ಆಗಬೇಕು.

ಹಗಲಿನಲ್ಲಿ ಇಪ್ಪತ್ತರಿಂದ ಮೂವತ್ತು ಬಾರಿ ಚಪ್ಪಾಳೆ ತಟ್ಟುವುದರಿಂದ ರಕ್ತ ಸಂಚಾರಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಚಪ್ಪಾಳೆ ತಟ್ಟುವುದು ಕೇವಲ ಹಸ್ತದಿಂದ ಮಾತ್ರವಲ್ಲದೆ ಕೈಬೆರಳುಗಳೂ ಒಂದಕ್ಕೊಂದು ತಾಗಲೇಬೇಕು. ರಕ್ತದ ಒತ್ತಡ ಕಡಿಮೆ ಇರುವವರಿಗೆ ಇದು ಬಹು ಉಪಯೋಗಿ. ಇದನ್ನು accupressure therapy ಎನ್ನುತ್ತಾರೆ ಎಂದು ಕೇಳಿಬಲ್ಲೆ. ರಕ್ತದೊತ್ತಡ ಮತ್ತು ಹೃದಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೇ, ಹಾಗಿದ್ರೆ ಬನ್ನಿ ಚಪ್ಪಾಳೆ ತಟ್ಟೋಣ.

ವಾರಾಂತ್ಯದಲ್ಲಿ ಈ ಚಪ್ಪಾಳೆ ಎಲ್ಲಿ ನೋಡುತ್ತೇವೆ? ಟಿವಿಯ ಮುಂದೆ ಕೂತು ಯಾವುದೇ ರಿಯಲ್ ಅಲ್ಲದ ರಿಯಾಲಿಟಿ ಷೋ ನೋಡುತ್ತಿದ್ದರೆ ಸಾಕು. ಅಲ್ಲಿ ಕಾಣುವಷ್ಟು ಚಪ್ಪಾಳೆಗಳನ್ನು ಇನ್ನೆಲ್ಲಿಯೂ ಕಾಣಸಿಗದು. ಮುಂದಿನ ಬಾರಿ ನೋಡುವಾಗ ಅವರೊಂದಿಗೆ ನೀವೂ ಚಪ್ಪಾಳೆ ತಟ್ಟಿ ಆಯ್ತಾ? ಬರೀ ಚಪ್ಪಾಳೆ ತಟ್ಟಬೇಡಿ, ಬದಲಿಗೆ ಎಷ್ಟು ಬಾರಿ ಚಪ್ಪಾಳೆ ತಟ್ಟಿದಿರಿ ಅಂತ ಎಣಿಸಿ ಕೂಡ. ಬರೀ ನೋಡುವುದು ಬೇಸರವಾಗಿ ಭಾಗವಹಿಸುವುದೂ ಆಗಿ ಆರೋಗ್ಯ ಸುಧಾರಣೆಯಾದರೆ, ಈ ಭಾಗ್ಯ ಯಾರಿಗುಂಟು ಯಾರಿಗಿಲ್ಲ?

ದಿನನಿತ್ಯದಲ್ಲಿ ಚಪ್ಪಾಳೆ ಎಲ್ಲಿ ಕಾಣುತ್ತೇವೆ ನೋಡೋಣ. ಚಿತ್ರಮಂದಿರಗಳಲ್ಲಿ ಸಿನಿಮಾ ಮುಗಿದ ಕೂಡಲೇ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಸುವುದು ಒಂದು ಸಂಪ್ರಾದಯ ಎಂಬಂತೆ ನೋಡಿದ್ದೇನೆ. ಸಾಮಾನ್ಯವಾಗಿ ಒಂದು ನಾಟಕ, ನೃತ್ಯ ಹೀಗೆ ಯಾವುದೇ ಕಲಾಪ್ರಕಾರಕ್ಕೂ ಈ ಚಪ್ಪಾಳೆ ಅನ್ನೋದು ಒಂದು ಮೆಚ್ಚುಗೆ ಸೂಸುವ ಒಂದು ಸಂಸ್ಕೃತಿಯೆ ಆಗಿದೆ.

ರಂಗದ ಮೇಲೆ ಮುಖ್ಯ ಅತಿಥಿಗಳನ್ನು ಸ್ವಾಗತಿಸುವಾಗ, ಅವರಾಡುವ ನುಡಿಗಳಿಗೆ ಮೆಚ್ಚುಗೆ ಸೂಸುತ್ತಾ, ಅವರ ಭಾಷಣ ಮುಗಿದಾ ಮೇಲೂ ಎದ್ದು ನಿಂತು ಚಪ್ಪಾಳೆ ತಟ್ಟುವುದೂ ಒಂದು ಗೌರವ ಸೂಚಕವೇ ಆಗಿದೆ. ಎದ್ದು ನಿಂತು ಚಪ್ಪಾಳೆಯನ್ನು ತಟ್ಟುವುದು ಅರ್ಥಾತ್ ಈ standing ovation ಅನ್ನು ರಿಯಾಲಿಟಿ ಶೋಗಳಲ್ಲೂ ನೋಡಿರುತ್ತೇವೆ. ಯಾರದ್ದೋ ಒಂದು ಪ್ರದರ್ಶನ ಅತ್ಯುತ್ತಮವಾಗಿತ್ತು ಎಂದರೆ ಎದ್ದು ನಿಂತು ಮೆಚ್ಚುಗೆ ಸೂಸುವುದೂ ಒಂದು ಕ್ರಿಯೆ.

Srinath Bhalle Column: Come On, Lets Clap

ಈಗ ಈ ಚಪ್ಪಾಳೆಯ ಇನ್ನೊಂದು ರೂಪ ನೋಡೋಣ. ಒಂದು ಮೆಚ್ಚುಗೆಯ ಕ್ರಿಯಾರೂಪ ಮಾತ್ರವೇ ಚಪ್ಪಾಳೆ ಆಗಿರುತ್ತದೆಯೇ? ಕೆಲವೊಮ್ಮೆ ಹೀಯಾಳಿಕೆಯ ರೂಪವೂ ಚಪ್ಪಾಳೆ ಆಗಿರುತ್ತದೆ. ಒಬ್ಬ ವಿದ್ಯಾರ್ಥಿ ತನ್ನ ಆರೂ ವಿಷಯಗಳಲ್ಲಿ ಅನುತ್ತೀರ್ಣನಾದ ಎಂದುಕೊಳ್ಳಿ. ತಂದೆಯಾದವ ನಿಧಾನ ಗತಿಯಲ್ಲಿ ಚಪ್ಪಾಳೆ ತಟ್ಟುತ್ತ "ವಾಹ್, ಏನು ಘನಂಧಾರಿ ಕೆಲಸ ಮಾಡಿದ್ದೀಯಾ?' ಎಂಬ ಅರ್ಥದಲ್ಲೂ ಚಪ್ಪಾಳೆ ತಟ್ಟಬಹುದು. ಕೆಲವೊಮ್ಮೆ ಭಾಷಣ ನಡೆಯುವಾಗ, ಅದು ಮುಗಿಯುವ ಸೂಚನೆಯೇ ಕಾಣದೆ ಇದ್ದಾಗ, ಭಾಷಣ ನಿಲ್ಲಿಸಿ ಎಂದು ಹೇಳುವ ರೂಪಕವಾಗಿಯೂ ಚಪ್ಪಾಳೆ ತಟ್ಟುವುದಿದೆ.

ಜೀವನದುದ್ದಕ್ಕೂ ಅವಹೇಳನವನ್ನೇ ಉಂಡವರಿಗೆ ಈ ಚಪ್ಪಾಳೆ ಅನ್ನೋದು ಒಂದು ಸದ್ದು ಮತ್ತು ಗಲಭೆಯಾಗಿರುತ್ತದೆಯೇ ವಿನಃ ಪ್ರೋತ್ಸಾಹದಾಯಕವಾಗಿ ಇರುವುದಿಲ್ಲ. ಅಮೀರ್ ಖಾನ್'ರ "ತಾರೆ ಝಮೀನ್ ಪರ್' ಚಿತ್ರದ ದೃಶ್ಯವೊಂದರಲ್ಲಿ ಪ್ರಥಮ ಬಹುಮಾನ ಗಳಿಸಿದ ಹುಡುಗನ ಹೆಸರು ಕೂಗಿ ಚಪ್ಪಾಳೆ ತಟ್ಟಿದಾಗ, ಆ ಕಿವಿಗಚ್ಚಿಡುವ ಚಪ್ಪಾಳೆಯೂ ಅವನ ಕಿವಿಗಳಿಗೆ ಕಿವಿಗಳನ್ನೇ ಒಡೆದು ಹೋಗುವ ಸದ್ದು ಎಂಬಂತೆ, ಅದನ್ನು ತಡೆಯಲಾಗದೆ ಕಿವಿ ಮುಚ್ಚಿಕೊಳ್ಳುತ್ತಾನೆ. ಆ ಒಂದು ಸಂಭ್ರಮವನ್ನು ಆನಂದಿಸಲಾಗದೆ ಮರೆಮಾಚಿಕೊಳ್ಳುತ್ತಾನೆ.

ಚಪ್ಪಾಳೆ ತಟ್ಟಿದಾಗ ಇರುಸುಮುರುಸು ಆಗುವ ಇನ್ನೊಂದು ಸನ್ನಿವೇಶವೂ ಇದೆ. ಕೆಲವರಿಗೆ ಯಾರಾದರೂ ಅವರನ್ನು ಚಪ್ಪಾಳೆ ತಟ್ಟಿ ಕೂಗಿದಾಗ ಸಿಕ್ಕಾಪಟ್ಟೆ ಸಿಟ್ಟು ಬರುತ್ತೆ. ಒಮ್ಮೆ ನನ್ನ ಸಹೋದ್ಯೋಗಿಯೊಬ್ಬರು ದೂರದಲ್ಲಿ ಹೋಗುತ್ತಿದ್ದ ತಮ್ಮ ಸ್ನೇಹಿತರನ್ನು ಕೂಗಿ ಕರೆದರೂ ಅವರಿಗದು ಕೇಳಿಸಲಿಲ್ಲ ಅಂತ ಒಂದೆರಡು ಬಾರಿ ಚಪ್ಪಾಳೆ ತಟ್ಟಿ ಕೂಗಿ ಕರೆದರು. ಬಹುಶ: ಅವರು ಕರೆದದ್ದು ಚಪ್ಪಾಳೆಯ ಸದ್ದಿನ ಮೇಲೆ ಸವಾರಿ ಮಾಡಿತು ಅಂತ ಕಾಣುತ್ತೆ, ಇವರು ಕರೆದದ್ದು ಅವರಿಗೆ ಕೇಳಿಸಿತು. ಅವರು ಥಟ್ಟನೆ ತಿರುಗಿ ಉರಿಗಣ್ಣಿನಿಂದ ನೋಡುತ್ತಾ, ಏನ್ರೀ ಚಪ್ಪಾಳೆ ತಟ್ಟಿ ಕರೀತೀರಾ? ನಾನೇನು ನಿಮ್ಮ ಮನೆ ಆಳು ಅಂದುಕೊಂಡಿರಾ? ಅಥವಾ ಆಟೋರಿಕ್ಷಾ ಅಂದುಕೊಂಡಿರಾ? ಹಂಗೆ ಹಿಂಗೇ ಅಂತ ಕೂಗಾಡಿದರು. ಹೆಂಗಳನ್ನು ಹಾಗೆಲ್ಲಾ ಚಪ್ಪಾಳೆ ತಟ್ಟಿ ಕೂಗದಿರಿ ಆಯ್ತಾ?

ಚಪ್ಪಾಳೆಯು ಒಂದು ಕ್ರಿಯೆಯಾಗಿ ಎರಡು ಹಸ್ತಗಳಿಂದಲೇ ಮೂಡಿದ್ದಾದರೂ ಹಲವು ಅರ್ಥಗಳನ್ನು ಬಿಂಬಿಸಬಲ್ಲದು. ಚಪ್ಪಾಳೆ ಎಂದರೆ ಆಂಗ್ಲದಲ್ಲಿ clap ಎನ್ನುತ್ತಾರೆ. If you are happy and you know it, clap your hands ಅಂತ ಮಕ್ಕಳ ಆಂಗ್ಲ ಗೀತೆಯೊಂದಿದೆ. ನಿಮಗೆ ಈ ಬರಹ ಇಷ್ಟವಾಯ್ತು ಅಂದ್ರೆ, ನಿಮಗೆ ಸಂತೋಷವಾಗಿದೆ ಎಂದರೆ ಚಪ್ಪಾಳೆ ತಟ್ಟಿ. ಬೇಡಾ ಬಿಡಿ, ಆರು ಅಡಿ ದೂರ ಇರಬೇಕು ಅಲ್ಲವೇ? ಸದ್ಯಕ್ಕೆ ಎಮೋಜಿಯ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಆಯ್ತಾ?

English summary
Column: Clap is an activity that ranges from Child to elderly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X