ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: 'ಸೋಜುಗದ ಸೂಜಿ'ಯ ಬಗ್ಗೆ ಅರಿಯೋಣ ಬನ್ನಿ

By ಶ್ರೀನಾಥ್ ಭಲ್ಲೆ
|
Google Oneindia Kannada News

ಸೂಜಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಇಷ್ಟಕ್ಕೂ ಹೊಸ ವರ್ಷದ ಮೊದಲ ಬರಹಕ್ಕೂ ಈ ಸೂಜಿಗೂ ಏನು ಸಂಬಂಧ? ನೋಡೋಣ ಬನ್ನಿ!

ಚೆಂದದ ಪತ್ನಿಯ ಬಳಿಗೆ ಹೋದೆ ಮುತ್ತನೊಂದ ನೀಡಲ್, ದೂರ ಸರಿದು ಕೂತೆ ಕಂಡು ಅವಳ ಕೈಲಿದ್ದ Needle. ಹೊಲೆಯುವವರ ಬಲಕ್ಕೆ ಕೂಡಬಾರದು, ಆಳುವವರ ಎಡಕ್ಕೆ ಕೂರಬಾರದು ಎಂಬ ನುಡಿಯಿದೆ. ಹೊಲೆಯುವವರು ಎಡಚರಲ್ಲ ಎಂದುಕೊಂಡರೆ, ಬಟ್ಟೆಯನ್ನು ಹೊಲೆಯುವಾಗ ಬಟ್ಟೆಯೊಳಗೆ ಇಳಿಸಿದ ಸೂಜಿಯು ನಲವತ್ತೈದು ಡಿಗ್ರಿಯಲ್ಲಿ ಹೊರಗೆ ಬಂದಾಗ ಬಲಕ್ಕೆ ಕೂತವರ ಕಣ್ಣಿನಲ್ಲಿ ಕೊನೆಗೊಳ್ಳಬಹುದು, ಹಾಗಾಗಿ ಹೊಲೆಯುವವರ ಬಲಕ್ಕೆ ಕೂರಬಾರದು.

ಶ್ರೀನಾಥ್ ಭಲ್ಲೆ ಅಂಕಣ: ಸಂಸಾರದಲ್ಲಿ ಗಣಿತಶ್ರೀನಾಥ್ ಭಲ್ಲೆ ಅಂಕಣ: ಸಂಸಾರದಲ್ಲಿ ಗಣಿತ

ಸೂಜಿ ಕೆಲಸವೇ ಚುಚ್ಚುವುದು ಎಂದ ಮೇಲೆ ಆ ಸೂಜಿ ಯಾವುದರಿಂದ ಮಾಡಿದ್ದರೆ ಏನಂತೆ? ಚಿನ್ನದಿಂದಲೇ ಮಾಡಿದ್ದು ಎಂದುಕೊಂಡರೆ, ಅದು ಚಿನ್ನದಿಂದ ಮಾಡಿದ್ದು ಅಂತ ಕಣ್ಣಿಗೆ ಚುಚ್ಚಿಕೊಳ್ಳಲಾಗುತ್ತದೆ.

Srinath Bhalle Column: Come On, Know About Needle

ಸಂಸಾರದ ವಿಷಯವನ್ನೇ ಹೇಳುವಾಗ, ಆಂಗ್ಲದಲ್ಲಿ A stich in time saves nine ಎಂಬ ನುಡಿಯಿದೆ. ಒಂದೆಡೆ ಹರಕಲಾಗಿದ್ದರೆ ಅದನ್ನು ಅಲ್ಲಿಯೇ ಹೊಲೆದು ಬಿಡಬೇಕೇ ವಿನಃ ಒಂಬತ್ತು ಹೊಲಿಗೆಗಳ ತನಕ ಕಾಯಬಾರದು ಎಂಬುದು ನೇರವಾದ ಅರ್ಥ. ಸಮಸ್ಯೆಗಳು ಎಲ್ಲೆಲ್ಲೂ ಇವೆ. ಇಲ್ಲಿ ಈ ಸಮಸ್ಯೆಯನ್ನು ಭಿನ್ನಾಭಿಪ್ರಾಯ ಎಂದೇ ಪರಿಗಣಿಸಿದರೆ, ಅದನ್ನು ಆರಂಭದಲ್ಲೇ ಗುರುತಿಸಿ ಪರಿಹರಿಸಿಬಿಡಬೇಕು. ಭಿನ್ನಾಭಿಪ್ರಾಯ ಬೆಳೆಯುತ್ತಾ ಸಾಗಿದರೆ ಒಂಬತ್ತು ಬಿಡಿ, ತೊಂಬತ್ತು ಬೇಕಾದೀತು. ಕೆಲವೊಮ್ಮೆ ಸಂಬಂಧವೆಂಬ ಈ ಬಟ್ಟೆ ಚಿಂದಿಚಿತ್ರಾನ್ನವೂ ಆಗಿ ಹೊಲೆಯಲೂ ಆಗದಂತೆ ಹಾಳಾಗಬಹುದು.

ಕಾಲವೊಂದಿತ್ತು, ಗಾಂಧೀ ಬಜಾರಿನಲ್ಲಿ ರಾಮರಾಯರ ಮನೆ ಹುಡುಕಿದಂತೆ ಅಂತ. ಏನಿದರರ್ಥ ಎಂದರೆ ಬ್ರಾಹ್ಮಣ ಕುಟುಂಬಗಳೇ ಹೆಚ್ಚಾಗಿದ್ದ ಪ್ರದೇಶದಲ್ಲಿ, ಬೀದಿಗೆ ನಾಲ್ಕು ಮಂದಿ ರಾಮರಾಯರು ಇರುವ ಗಾಂಧೀ ಬಜಾರ್ ಪ್ರದೇಶದಲ್ಲಿ, "ಇಲ್ಲಿ ರಾಮರಾಯರ ಮನೆ' ಎಲ್ಲಿದೆ ಎಂದು ಕೇಳಿದರೆ ಯಾರ ಮನೆ ಅಂತ ತೋರಿಸಿಯಾರು? ಬೆಟ್ಟದಷ್ಟು ವಿಚಾರಗಳು ಎಲ್ಲೆಲ್ಲೂ ಇರುವಾಗ ಅದರ ಮಧ್ಯೆ ಒಂದು ಸಣ್ಣ ವಿಚಾರ ಹುಡುಕಿ ತೆಗೆಯುವ ಅಸ೦ಭವನೀಯತೆ ಎಂಬುದನ್ನು "ಹುಲ್ಲಿನ ಮೆದೆಯಲ್ಲಿ ಸೂಜಿಯನ್ನು ಹುಡುಕಿದಂತೆ' ಎಂದು ಹೇಳುತ್ತಾರೆ. ಆಂಗ್ಲದಲ್ಲಿ ಇದನ್ನು "needle in the hay' ಎನ್ನುತ್ತಾರೆ.

ನಿಮಗೆ ರವೆ ಗೊತ್ತಲ್ಲವೇ? ಅದೇ ಕಣ್ರೀ, ಗೋಧಿಯನ್ನು ಅತೀ ಸಣ್ಣದಾಗಿ ಪುಡಿ ಮಾಡಿದಾಗ ಹೊರಬರುವ ಪದಾರ್ಥವೇ ಈ ರವೆ. ಸ್ಥೂಲ ದೇಹಿಗಳು ಸಣ್ಣಗಾಗಲು ರವೆ ಬಳಸುತ್ತಾರೆ ಎಂದು ಕೇಳಿದ್ದೇನೆ. ಆದರೆ ರವೆ ಬಳಸಿ ತರಕಾರಿ ಹಾಕಿ ಉಪ್ಪಿಟ್ಟು ಮಾಡಿದರೆ ಬಹುಶ: ಸಣ್ಣವಾಗಬಹುದು. ಆದರೆ ಅದೇ ಉಪ್ಪಿಟ್ಟಿಗೆ ಅರ್ಧ ಕೆಜಿ ತುರಿದು ಕೊಬ್ಬರಿಯನ್ನು ಅಲಂಕರಿಸಿದರೆ ಬಹುಶ: ಕೊಬ್ಬು ಹೆಚ್ಚಾಗಬಹುದು. ಅಥವಾ ಇದೇ ರವೆಯಿಂದ ಉಪ್ಪಿಟ್ಟಿಗೆ ಬದಲು ತುಪ್ಪ ಸುರಿದ ಕೇಸರೀ ಬಾತ್ ಅಥವಾ ಸಜ್ಜಿಗೆ ಮಾಡಿ ತಿಂದರಂತೂ ತೂಕ ಕಡಿಮೆಯಾಗೋದಿಲ್ಲ. ಇಷ್ಟಕ್ಕೂ ಈ ರವೆಯ ಬಗ್ಗೆ ಮಾತೇಕೆ ಬಂತು ಅಂದ್ರಾ? ರವೆಯನ್ನು "ಸೂಜಿ' (sooji) ಎಂದೂ ಕರೆಯುತ್ತಾರೆ.

Srinath Bhalle Column: Come On, Know About Needle

ಕೆಲವೊಮ್ಮೆ get-together ಪಾರ್ಟಿಗಳಲ್ಲಿ ಸೂಜಿಗೆ ದಾರ ಹಾಕುವ ಆಟವನ್ನೂ ಆಡಿಸಲಾಗುತ್ತದೆ. ಕಣ್ಣುಗಳು ಎಷ್ಟು ಚುರುಕಾಗಿದೆ ಎಂಬುದೇ ಈ ಆಟ. ಯಾರು, ಎಷ್ಟು ವೇಗದಲ್ಲಿ ದಾರವನ್ನು ಸೂಜಿಗೆ ಹಾಕುತ್ತಾರೋ ಅವರು ಗೆದ್ದಂತೆ. ಸೂಜಿಗಳಲ್ಲೇ ಹಲವಾರು ಸೈಜುಗಳಲ್ಲಿ ದೊರೆಯುತ್ತದೆ ಅಂತ ನಿಮಗೂ ಗೊತ್ತು.

ಅತೀ ಸಣ್ಣ ಕಣ್ಣಿರುವ ಸೂಜಿಯನ್ನೇ ಈ ಆಟಕ್ಕೆ ಬಳಸೋದು. ಈ ಕಣ್ಣಿನ ಸೈಜು ಹಿರಿದಾದೆಂತೆಲ್ಲಾ ಸೂಜಿಯೂ ದಪ್ಪವಾಗುತ್ತದೆ. ಕಣ್ಣು ಮತ್ತು ದೇಹ ದೊಡ್ಡದಾದಾಗ ಇದನ್ನು ಡಬ್ಬಳ ಎನ್ನುತ್ತಾರೆ. ಸೂಜಿ ಮತ್ತು ಡಬ್ಬಳ ಸೈಜಿನಲ್ಲಿ ಒಂದು ರೀತಿ ಇಲಿ ಮತ್ತು ಹೆಗ್ಗಣದ ಸಂಬಂಧದಂತೆ. ಸಣ್ಣ ಸೂಜಿಗೆ ದಾರವೂ ತೆಳ್ಳಗೇ ಇರುತ್ತದೆ. ಡಬ್ಬಳಕ್ಕೆ ಸಣ್ಣ ದಾರವನ್ನು ಹಾಕದೇ ಗೋಣಿಯಹುರಿಯನ್ನು ಹಾಕಿ, ಗೋಣೀಚೇಲದ ಬಾಯಿಯನ್ನು ಹೊಲೆಯಲು ಬಳಸಲಾಗುತ್ತದೆ.

ಹೊಲಿಗೆಯ ವಿಚಾರ ಬಂದಾಗ ಒಂದು ಅದ್ಭುತವಾದ ವಿಚಾರದ ಬಗ್ಗೆ ಹೇಳಲೇಬೇಕು. ಮೂರು ಸಾವಿರ ದೇವದಾಸಿಯರನ್ನು ಕೂಪದಿಂದ ಕಾಪಾಡಿದ್ದೇ ಅಲ್ಲದೆ ಅವರಿಗೊಂದು ಜೀವನದ ಹಾದಿಯನ್ನು ಹಾಕಿಕೊಟ್ಟು ಅನುಭವದ ಕಥಾ ಸಂಕಲನವೇ "three thousand stitches'ಎಂಬ ನಮ್ಮ ಸುಧಾಮೂರ್ತಿಯವರ ಅನುಭವಗಳ ಪುಸ್ತಕದ ಹೆಸರು.

ಕರ್ಮಯೋಗಿಗಳ ಬಗ್ಗೆ ಹೇಳುವಾಗ ಈ ಪ್ರಸಂಗ ಹೇಳಲೇಬೇಕು. ಒಮ್ಮೆ ಸುಡುಬಿಸಿಲಲ್ಲಿ ಛತ್ರಿ ಹಿಡಿದು ನಡೆಯುವಾಗ ಬೇಂದ್ರೆ ಅಜ್ಜರ ಚಪ್ಪಲಿಯ ಉಂಗುಷ್ಟ ಕಿತ್ತಿತಂತೆ. ಚಪ್ಪಲಿ ಹೊಲೆಯುವವ ಬಳಿ ಹೋಗಿ ನಿಂತಾಗ ಅವರ ಕಾಲು ಸುಡದಿರಲೆಂದು ತನ್ನಲ್ಲಿದ್ದ ಚಪ್ಪಲಿಗಳನ್ನು ನೀಡಿದನಂತೆ. ಇದಕ್ಕೆ ಪ್ರತಿಯಾಗಿ ಬೇಂದ್ರೆ ಅಜ್ಜ ತಮ್ಮ ಛತ್ರಿಯನ್ನು ಅವನಿಗೆ ಹಿಡಿದರಂತೆ.

ಸೂಜಿಯನ್ನು ಚುಚ್ಚಿಕೊಳ್ಳಲೂಬಹುದು, ಚುಚ್ಚಿಸಿಕೊಳ್ಳಲೂಬಹುದು. ಡ್ರಗ್ಸ್ ತೆಗೆದುಕೊಳ್ಳುವ ಮಹನೀಯರು ಸೂಜಿ ಚುಚ್ಚಿಕೊಳ್ಳುತ್ತಾರೆ. ದೇಹದಲ್ಲಿ ಸಕ್ಕರೆ ಕಾರ್ಖಾನೆ ಹೊಂದಿರುವವರು ಇನ್ಸುಲಿನ್ ತೆಗೆದುಕೊಳ್ಳುವ ಕ್ರಿಯೆಯಲ್ಲಿ ಸೂಜಿ ಚುಚ್ಚಿಕೊಳ್ಳುತ್ತಾರೆ. ದಿನನಿತ್ಯದಲ್ಲಿ ದೇಹದಲ್ಲಿರುವ ಸಕ್ಕರೆಯ ಅಂಶವನ್ನು ಪರೀಕ್ಷೆ ಮಾಡಿಕೊಳ್ಳುವವರು ಸೂಜಿ ಚುಚ್ಚಿಕೊಳ್ಳುತ್ತಾರೆ. ಕೆಲವರು ವಾರದಲ್ಲಿ ಕೆಲವು ಸಾರಿ ಅಂತಾದರೆ, ಕೆಲವರು ದಿನಕ್ಕೊಮ್ಮೆ. ಕೆಲವರು ದಿನದಲ್ಲೇ ಕೆಲವು ಬಾರಿಯೂ ಚುಚ್ಚಿಕೊಳ್ಳುತ್ತಾರೆ. ಇಂಥಾ ಸನ್ನಿವೇಶಗಳ ಅರ್ಥಾತ್ ನಾವೇ ಸೂಜಿ ಚುಚ್ಚಿಕೊಳ್ಳುವ ಸನ್ನಿವೇಶಗಳು ಬೇಡ ಬಿಡಿ ಎನ್ನುತ್ತೇನೆ.

ವೈದ್ಯರಲ್ಲಿ ಹೋಗಿ ಸೂಜಿ ಚುಚ್ಚಿಸಿಕೊಳ್ಳುವುದು ಎಂದರೆ ಅಲ್ಲೂ ಹಲವಾರು ಕಾರಣಗಳಿವೆ. ಬಿದ್ದು ಗಾಯವಾಗಿ ಚರ್ಮ ಹರಿದಾಗ ಹಾಕುವ ಹೊಲಿಗೆ. ಈ ಸಂದರ್ಭದಲ್ಲಿ ಚರ್ಮಕ್ಕೆ ಹೊಲಿಗೆ ಹಾಕಲಾಗುತ್ತದೆ. ಆಗಲೂ ಚುಚ್ಚಿಸಿಕೊಳ್ಳಬೇಕು. ಅನಾರೋಗ್ಯವಾದಾಗ ವೈದ್ಯರು ಸೂಜಿ ಚುಚ್ಚೋದು ಇದೆ.

ಮಾತ್ರೆಯಲ್ಲಿ ಗುಣವಾಗುವುದಕ್ಕಿಂತಾ ಹೆಚ್ಚು ವೇಗವಾಗಿ ಸೂಜಿ ಚುಚ್ಚಿಸಿಕೊಂಡಾಗ ಬೇಗ ವಾಸಿಯಾಗುತ್ತದೆ. ಆದರೆ ಎಷ್ಟೋ ಜನಕ್ಕೆ ಈ ಸೂಜಿ ಎಂದರೇ ಭಯ. ಮಕ್ಕಳು ವೈದ್ಯರ ಕೈಲಿ ಸೂಜಿಯನ್ನು ನೋಡುತ್ತಿರುವಂತೆಯೇ ಅಳಲು ಆರಂಭಿಸುತ್ತಾರೆ. ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಾಗಲೂ ಸೂಜಿ ಚುಚ್ಚಿಸಿಕೊಂಡು ರಕ್ತ ನೀಡಬೇಕು. ಮತ್ತೋರ್ವರಿಗೆ ರಕ್ತದಾನ ಮಾಡಬೇಕಾದರೂ ಸೂಜಿ ಚುಚ್ಚಿಸಿಕೊಳ್ಳಲೇಬೇಕು.

ಸೂಜಿ ಎಂದರೆ ತೆಳ್ಳಗೆ ಉದ್ದಕ್ಕೆ ಇರುತ್ತದೆ. ಹಲವಾರು ಜಾತಿ ಮಲ್ಲಿಗೆಯ ಹೂವುಗಳಲ್ಲಿ "ಸೂಜಿ ಮಲ್ಲಿಗೆ'ಯೂ ಒಂದು. ಇಂಥಾ ಸೋಜುಗದ ಸೂಜು ಮಲ್ಲಿಗೆಯನ್ನು ಮಹಾದೇವನಿಗೆ ಮುಡಿಸಿ, ಆದಷ್ಟು ಬೇಗ ಕೊರೊನಾ ವೈರಾಣುವಿನಿಂದ ರಕ್ಷಣೆಯ ರೂಪಿಯಾಗಿ ಬರುವ Vaccination ಎಂಬ ಸೂಜಿಯನ್ನು ಚುಚ್ಚಿಸಿಕೊಳ್ಳುವ ದಿನಗಳು ಬೇಗ ಬರಲಿ ಎಂದು ಧ್ಯಾನಿಸೋಣ.

Vaccination ಎಂಬ ಸೂಜಿಯಿಂದಾಗಿ ಏಕ್ದಂ ರೋಗಾಣು ದೂರವಾಗಿ ಬಿಡುತ್ತದೆ ಎಂಬ ಭ್ರಮೆ ಬೇಡ. ಈ ಸೂಜಿ ಸಫಲವಾಗಲಿ, ರೋಗಾಣುವಿನಿಂದ ನಮಗೆ ರಕ್ಷಣೆ ಸಿಗಲಿ, ನೆಮ್ಮದಿಯ ಜೀವನ ಹತ್ತಿರವಾಗಲಿ ಎಂದು ಪ್ರಾರ್ಥಿಸೋಣ.

English summary
Who does not know about the needle. And what does this needle have to do with the first writing of the New Year? Come on, Know it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X