ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಇಂದಿನ ಮಾತು ಇಂಥದ್ದೇ ಅಂತ ಅಲ್ಲ ಪೂರಾ ಮಸಾಲೆ

|
Google Oneindia Kannada News

ಕಳೆದ ವಾರ ಒಂದಷ್ಟು ಲೆಕ್ಕದ ಬಗ್ಗೆ ಹೇಳಿದ್ದೆ. ನಿಮ್ಮದೇ ಮಾತಿನಂತೆ ತಲೆಗೂದಲು ಕಿತ್ತುಕೊಂಡಿರಿ ಅಂದ್ರಿ, ಬಹಳ ಸಂತೋಷ. ಛೇ! ಛೇ! ನಾನು ಹೇಳಿದ್ದು ಹಾಗಲ್ಲಾ, ತಲೆಕಿತ್ತುಕೊಂಡಿರಿ ಅಂದ್ರೆ ಬರಹ ಓದಿದಿರಿ ಅಂತಾಯ್ತು ಅಲ್ಲವೇ, ಅದಕ್ಕೆ ಸಂತೋಷ ಅಂದಿದ್ದು. 9 ಎಂಬ ಸಂಖ್ಯೆಯೊಂದಿಗೆ ಒಂದಷ್ಟು ಆಡುವ ಬನ್ನಿ.

'ಒಂಬತ್ತು ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು' ಅಂತ ಒಂದು ಹಾಡಿದೆ ಕೇಳಿದ್ದೀರಾ? ಚಲನಚಿತ್ರ ನಾನು ನೋಡಿಲ್ಲ ಆದರೆ ಹಾಡನ್ನು ನೋಡಿದ್ದೇನೆ. ಒಂದು briefcaseನ ಲಾಕ್ ಅನ್ನು ತೆರೆಯಲು 999 ಎಂಬ ಸಂಖ್ಯೆಯನ್ನು ಪಾಸ್ವರ್ಡ್ ಆಗಿ ನೀಡಿದಾಗ ಪೆಟ್ಟಿಗೆ ತೆರೆದುಕೊಳ್ಳುತ್ತದೆ. ಅಲ್ಲೇನೋ ಮಾಹಿತಿ ಇರುತ್ತದೆ. ಅದನ್ನು ನಂಬಿ ತೀರ್ಥಹಳ್ಳಿ ಕಡೆ ಹೋಗುತ್ತಾರೆ. ಬಹುಶಃ ಅಲ್ಲಿ ಮೋಸ ಹೋಗುತ್ತಾರೆ ಅಂತ ಅನ್ನಿಸುತ್ತೆ.

ಸೆಪ್ಟೆಂಬರ್ ತಿಂಗಳು ಅರ್ಥಾತ್ ತಿಂಗಳು ಒಂಬತ್ತು
ಇರಲಿ, ಒಂಬತ್ತು ಒಂಬತ್ತು ಒಂಬತ್ತು ಎಂದು ಮೂರು ಬಾರಿ ಹೇಳುವ ಹಾಡಿನ ಈ ಚಿತ್ರ ಬಿಡುಗಡೆ ಆಗಿದ್ದು 1991ರಲ್ಲಿ. ಆಹಾ! 1991 ಎಡದಿಂದ ಓದಿದರೂ ಅದೇ ಸಂಖ್ಯೆ, ಬಲಗಡೆಯಿಂದ ಓದಿದರೂ ಅದೇ ಸಂಖ್ಯೆ. ಆಂಗ್ಲದಲ್ಲಿ ಇದನ್ನು palindrome ಎನ್ನುತ್ತಾರೆ. 1991 ಸಂಖ್ಯೆಯಲ್ಲಿ ಎರಡು ಒಂಬತ್ತುಗಳಿವೆ. ಈಗ ಸೆಪ್ಟೆಂಬರ್ ತಿಂಗಳು ಅರ್ಥಾತ್ ತಿಂಗಳು ಒಂಬತ್ತು. ಈ ಬಗ್ಗೆ ಈಗ ಹೇಳುತ್ತಿದ್ದೇವೆ ಎಂದ ಮೇಲೆ ಮೂರು ಒಂಬತ್ತುಗಳು ಸಿಕ್ಕವು. ಹೀಗೆ ಸಂಖ್ಯೆಗಳೊಂದಿಗೆ ಆಟ ಆಡುವುದು ಒಂಥರಾ ಮಜಾ ಕೊಡುತ್ತೆ ಅಲ್ವ? ಅಂದ ಹಾಗೆ September ಎಂಬ ಪದದಲ್ಲಿ ಒಂಬತ್ತು ಅಕ್ಷರಗಳಿವೆ. ತಿಂಗಳಿನ ಹೆಸರಿನಲ್ಲಿ ಇರುವಷ್ಟೇ ಅಕ್ಷರಗಳು, ತಿಂಗಳ ಸಂಖ್ಯೆಯೂ ಆಗುವುದು ಈ ಒಂದೇ ತಿಂಗಳಲ್ಲಿ ಮಾತ್ರ ಎಂದೂ ಈಗಾಗಲೇ ಹೇಳಿದ್ದೇನೆ. ನೆನಪಿದೆ ಅಲ್ಲವೇ? ಮಕ್ಕಳೊಂದಿಗೆ ಆಡಲು ಇಂಥಾ ಜ್ಞಾನಗಳು ಸಹಾಯಕ್ಕೆ ಬರುತ್ತದೆ.

Srinath Bhalle Column: Come Lets Talk About All Those Things

ಎಲ್ಲೋ ಹುಡುಕಿದೆ ಇಲ್ಲದ ದೇವರ
ಈಗ ಎರಡು ಸಂಖ್ಯೆಗಳ ಬಗ್ಗೆ ನಿಮಗೊಂದು ಪ್ರಶ್ನೆ. ಈಗಲೇ ಹೇಳಿಬಿಡುತ್ತೇನೆ, ಇದರಲ್ಲಿ ಯಾವ ಕುಹಕವೂ ಇಲ್ಲ. ನಾಗರಹೊಳೆ ಚಿತ್ರದ "ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು, ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು' ಎಂಬ ಹಾಡು ಕೇಳಿಯೇ ಇರುತ್ತೀರಾ. ನಮ್ಮ ಜಿ.ಎಸ್. ಶಿವರುದ್ರಪ್ಪನವರ 'ಎಲ್ಲೋ ಹುಡುಕಿದೆ ಇಲ್ಲದ ದೇವರ' ಕವನ ಕೇಳಿದ್ದೀರಲ್ಲವೇ? ಒಂದೆಡೆ ಹೇಳಿದ್ದಾರೆ 'ಎಷ್ಟು ಕಷ್ಟವೋ ಹೊಂದಿಕೆಯೆ೦ಬುದು ನಾಲ್ಕು ದಿನದ ಈ ಬದುಕಿನಲಿ' ಅಂತ. ಬಹುಶಃ ಈಗಾಗಲೇ ನಿಮಗೆ ಅರ್ಥವಾಗಿರಬಹುದು ನನ್ನ ಪ್ರಶ್ನೆ ಏನೆಂದು. ನಮ್ಮ ಬಾಳು ಮೂರು ದಿನದ್ದೋ? ನಾಲ್ಕು ದಿನದ್ದೋ? ಈ ಇಬ್ಬರು ಕವಿಗಳ ಪ್ರಕಾರ ಮೂರು ದಿನಗಳು ಎಂದರೆ ಯಾವುವು? ನಾಲ್ಕು ದಿನಗಳು ಎಂದರೆ ಯಾವುವು? ಅನುಮಾನಗಳು ಬಂದಾಗ ಪರಿಹಾರ ಮಾಡಿಕೊಳ್ಳಬೇಕಾದುದು ಧರ್ಮ.

ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು
ವೈದ್ಯ ಮಿತ್ರರೊಬ್ಬರೊಡನೆ ಮಾತನಾಡುವಾಗ ಅವರು ಜೀವನದ ಮೂರು ನೆಮ್ಮದಿಗಳ ಬಗ್ಗೆ ಮಾತನಾಡುತ್ತಿದ್ದರು. ಅವು ಏನು? ಮೊದಲಿಗೆ ಮೂರು ಹೊತ್ತು ಊಟ ಅರ್ಥಾತ್ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ. ಎರಡನೆಯದಾಗಿ ನಿದ್ದೆ ಅರ್ಥಾತ್ ನೆಮ್ಮದಿಯಾದ ನಿದ್ರೆ. ಮೂರನೆಯದಾಗಿ Giving Back ಅಥವಾ ಕೊಡುವುದು ಅಂತ. ಯಾರಿಗಾದರೂ ಏನಾದರೂ ನೀಡಿದಾಗ ಅವರ ಮುಖದಲ್ಲಿ ಮೂಡುವ ಸಂತೃಪ್ತಿ ಅಥವಾ ಕೊಡುವುದರಿಂದ ಅವರಿಗೋ ಅಥವಾ ಅವರನ್ನು ನಂಬಿದವರಿಗೋ ಒಳಿತಾದರೆ ಆಗ ಸಿಗುವ ಸಂತೃಪ್ತಿ 'ಇಷ್ಟು' ಎಂದು ಹೇಳುವ ಯಾವ ಸಂಖ್ಯೆಯನ್ನೂ ನಾನು ಕಂಡಿಲ್ಲ. ನಿಶ್ಚಿಂತರಾಗಿ ಊಟ ಮಾಡಿ, ನೆಮ್ಮದಿಯಾಗಿ ನಿದ್ರಿಸಿ, ಕೈಲಾದಷ್ಟು ಅರ್ಹರಿಗೆ ಕೈ ಎತ್ತಿ ನೀಡುವುದು ಇದ್ದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು ನೋಡಿ.

ಇಚ್ಚೆಯನರಿವ ಸತಿಯಿರಲು
ಅಂದ ಹಾಗೆ ಸ್ವರ್ಗ ಎಂದಾಗ ಸರ್ವಜ್ಞನ ವಚನ ನೆನಪು ಮಾಡಿಕೊಳ್ಳದಿದ್ದರೆ ಹೇಗೆ? 'ಬೆಚ್ಚನೆ ಮನೆ ಇರಲು, ವೆಚ್ಚಕೆ ಹೊನ್ನಿರಲು, ಇಚ್ಚೆಯನರಿವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ'. ಎಂಥಾ ಅದ್ಭುತವಾದ ನುಡಿಗಳು. ಆದರೆ ಅರ್ಥೈಸಿಕೊಳ್ಳುವವರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂದರೆ ಒಂದೊಳ್ಳೆ ಮನೆ, ಉಡಾಯಿಸಲು ಜೇಬಿನಲ್ಲಿ ಬೇಜಾನ್ ದುಡ್ಡು, ಹೇಳಿದ ಹಾಗೆ ಕೇಳುವ ಹೆಂಡತಿ ಎಲ್ಲಾ ಇದ್ದಾಗ ಸ್ವರ್ಗಕ್ಕೆ ಬೆಂಕಿ ಹಚ್ಚಿಬಿಡಿ ಅಂತ. ಖಂಡಿತವಾಗಿಯೂ ಸರ್ವಜ್ಞ ಮೂರ್ತಿಯು ಮತ್ತೊಬ್ಬರ ಮನೆಗೆ ಬೆಂಕಿ ಹಾಕಲು ಹೇಳಿಲ್ಲ.

ಭುವಿಯಲ್ಲೇ ಇಷ್ಟೆಲ್ಲಾ ಸುಖ ಇದೆ
ಬೆಚ್ಚನೆಯ ಮನೆ ಎಂದರೆ ನೆಮ್ಮದಿ ತುಂಬಿರುವ ಗೃಹ, ವೆಚ್ಚಕ್ಕೆ ಹಣ ಎಂದರೆ ಊಟ ತಿಂಡಿಯಂತಹ ಖರ್ಚಿಗೆ ಹಣ ಅರ್ಥಾತ್ ಮತ್ತೊಬ್ಬರ ಮುಂದೆ ಕೈ ಒಡ್ಡದಂತಹ ಉತ್ತಮ ಸ್ಥಿತಿ, ಇಚ್ಛೆಯನರಿವ ಸತಿ ಎಂದರೆ ಅಷ್ಟರ ಮಟ್ಟಿಗೆ ಇಬ್ಬರಲ್ಲಿ ಇರಬೇಕಾದ ಹೊಂದಾಣಿಕೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಸತಿಯು ಪತಿಯನ್ನು ಅರಿತು ನಡೆಯಬೇಕು ಆ ಪತಿಗೂ ಸನ್ನಡತೆ ಇರಬೇಕಾದುದು ಮುಖ್ಯ. ಇಷ್ಟೆಲ್ಲಾ ಇದ್ದ ಮೇಲೆ ಸ್ವರ್ಗ ಯಾಕೆ ಬೇಕು ಅಂತ ಬೆಂಕಿ ಹಚ್ಚಬೇಕು ಅಂತಲ್ಲಾ. ಸ್ವರ್ಗದಲ್ಲೇ ಸುಖ ಇರುವುದು ಎಂಬುದು ಎಲ್ಲರ ನಂಬಿಕೆ. ಆದರೆ ಭುವಿಯಲ್ಲೇ ಇಷ್ಟೆಲ್ಲಾ ಸುಖ ಇದೆ ಎಂದರೆ ಸ್ವರ್ಗದಲ್ಲಿರುವವರಿಗೂ ಹೊಟ್ಟೆಯ ಕಿಚ್ಚು ಬರುವಂತೆ ಬಾಳಿ ಎಂಬುದು ಸರ್ವಜ್ಞರ ಮಾತು. ಹೂ ಅಂತೀರಾ? ಊಹೂ ಅಂತೀರಾ?

ತ್ರಿಪದಿ ಎಂಬುದೂ ಮೂರರ ಸಂಕೇತ
ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಎಲ್ಲರ ಮನೆಮಾತು. ಸರ್ವಜ್ಞ ಎಂಬ ಹೆಸರಲ್ಲೂ ಮೂರು ಅಕ್ಷರಗಳು. ತ್ರಿಪದಿ ಎಂಬುದೂ ಮೂರರ ಸಂಕೇತ. ಸರ್ವಜ್ಞ ಎಂಬುದು ಕಾವ್ಯನಾಮ ಹೊಂದಿರುವ ಈತನ ಮೂಲ ಹೆಸರು ಪುಷ್ಪದತ್ತ. ಮೂಲಹೆಸರಲ್ಲಿ ನಾಲ್ಕು ಅಕ್ಷರಗಳು. ಈ ಹಿಂದೆ ಮೂರು- ನಾಲ್ಕು ದಿನಗಳ ಜಿಜ್ಞಾಸೆಯ ಬಗ್ಗೆ ಮಾತನಾಡಿದೆವು. ಸರ್ವಜ್ಞ ಎಂಬ ಕಾವ್ಯನಾಮ ಹೊಂದಿರುವ ಪುಷ್ಪದತ್ತನ ವಚನಗಳು ಸಹ ಹೆಚ್ಚಿನ ವೇಳೆ ಈ ಮೂರು- ನಾಲ್ಕು ದಿನದ ಬಾಳಿನ ಬಗ್ಗೆಯೇ ಅಲ್ಲವೇ?

ಬೆಳಿಗ್ಗೆ ಎಂಟರಿಂದ ಬಹಳ ಬ್ಯುಸಿ
ಕಳೆದ ವಾರದಲ್ಲಿ ವೈದ್ಯರ ಬಳಿ ಜನರಲ್ checkupಗೆ ಹೋಗಿದ್ದೆ. ರಕ್ತ ಪರೀಕ್ಷೆ ಮಾಡಿಸಬೇಕು ಅಂದ್ರು. ಆಯ್ತು ತೊಗೊಳ್ಳಿ ಆದರೆ ನನಗೂ ಸ್ವಲ್ಪ ಉಳಿಸಿ ಅಂತ ಹೇಳಬೇಕು ಅಂದುಕೊಂಡೆ ಆದರೆ ಹೇಳಲಿಲ್ಲ. ವೈದ್ಯರಿಂದ ಬೀಳ್ಕೊಂಡು ರಕ್ತ ತೆಗೆದುಕೊಳ್ಳುವ ನರ್ಸ್ ಬಳಿ ಹೋದೆ. ಆಕೆ ಸಿದ್ಧ ಮಾಡಿಕೊಳ್ಳುವಾಗ ನಾನು ಸುಮ್ಮನೆ ಕೂತರೆ ಹೇಗೆ ಅಂತ ಮಾತು ಶುರು ಮಾಡಿದೆ. 'ಈ ದಿನ ಬಹಳ ಬ್ಯುಸಿ ಇದ್ರಾ?' ಅಂತ. ಆಕೆ "ಬೆಳಿಗ್ಗೆ ಎಂಟರಿಂದ ಬಹಳ ಬ್ಯುಸಿ, ನೀನೇ ನನ್ನ ಲಾಸ್ಟ್ ಪೇಷಂಟ್. ಆಮೇಲೆ ಮನೆಗೆ ಹೋಗಿ ಊಟ ಮಾಡಿ ಮಲಗೋದೇ ಕೆಲಸ' ಅಂದ್ರು.

ಸರಿ ಅಂತ ನನ್ನ ಮುಂದಿನ ಪ್ರಶ್ನೆ ಕೇಳಿದೆ 'ಬೆಳಿಗ್ಗೆ ಎಂಟರಿಂದ, ನನ್ನ blood work ಕೂಡ ಸೇರಿಸಿದರೆ ಒಟ್ಟು ಎಷ್ಟು ಲೀಟರ್ ರಕ್ತ ತೆಗೆದುಕೊಂಡಿದ್ದೀರಿ?'. ಆಕೆ ಮಾಡುತ್ತಿದ್ದ ಕೆಲಸ ನಿಲ್ಲಿಸಿ 'you know what? I dont know... ನನ್ನ ಮ್ಯಾನೇಜ್ಮೆಂಟ್ ಕೂಡ ಈ ಪ್ರಶ್ನೆ ಕೇಳಿಲ್ಲ!' ಅಂತ ನಕ್ಕುಬಿಡೋದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ "ಯಾರಿಗೆ ಬೇಕು ಈ ಲೆಕ್ಕ?' ಅಂತ ಆಕೆ ಹೇಳಿದ್ದು. ನೀವು ಈ ರೀತಿ ಪ್ರಶ್ನೆ ಯಾರನ್ನಾದರೂ ಕೇಳಿದ್ದೀರಾ? ನಿಮ್ಮ ಅನುಭವ?

ಮುಂದಿನ ಜನ್ಮದಲ್ಲಿ ಒಗೆಯಲಾಗದ ಬಟ್ಟೆಯಾಗು
ಬಹಳ ಹಿಂದೆ ಒಬ್ಬ ಮಹಾ ಭಕ್ತನಿದ್ದ. ಶುದ್ಧತೆಯ ವಿಷಯದಲ್ಲಿ ಕೊಂಚ ಅತೀ ಎನಿಸಬಹುದಾದ ರೀತಿ- ನೀತಿ. ಒಮ್ಮೆ ಮನೆಗೆ ಋಷಿವರ್ಯರೊಬ್ಬರು ಶಿಷ್ಯರೊಡನೆ ಬಂದಿದ್ದರಂತೆ. ಊಟೋಪಚಾರಗಳು ಮುಗಿದು ವಾಪಸ್ ತೆರಳಿದ ಮೇಲೆ ಇವನು ಮನೆಯನ್ನು ಶುದ್ಧಿ ಮಾಡುತ್ತಿದ್ದನಂತೆ. ತಮ್ಮನ್ನು ಚೆನ್ನಾಗಿ ನೋಡಿಕೊಂಡ ಭಕ್ತನಿಗೆ ಏನಾದರೂ ನೀಡಬೇಕು ಎನ್ನಿಸಿ ಋಷಿವರ್ಯರು ವಾಪಸ್ ಬಂದಾಗ ಈ ದೃಶ್ಯ ಕಂಡು ಕುಪಿತರಾಗಿ 'ನಾವು ಕೂತು ನಿಂತ ಸ್ಥಳವನ್ನೇ ಅಪವಿತ್ರ ಎಂಬಂತೆ ಶುದ್ಧಿ ಮಾಡುತ್ತಿರುವೆಯೆಲ್ಲಾ, ನೀನು ಮುಂದಿನ ಜನ್ಮದಲ್ಲಿ ಒಗೆಯಲಾಗದ ಬಟ್ಟೆಯಾಗು' ಎಂದು ಶಪಿಸಿದರಂತೆ. ಅದೇ ಈ ಯುಗದ ಜೀನ್ಸ್ ಬಟ್ಟೆ. ಚೆನ್ನಾಗಿದೆಯೇ ಕಟ್ಟುಕಥೆ? ಹೊಲಗದ್ದೆಗಳಲ್ಲಿ ದುಡಿಯುವ, ಬೀದಿಬದಿಯ ಕೆಲಸ, ಪೈಂಟರುಗಳು ಇತ್ಯಾದಿ ಮಂದಿಗೆ ಈ ಬಟ್ಟೆಯ ದಿರಿಸು ವರದಾನ. ಹೊಲದಲ್ಲಿ ದುಡಿಯುವಾಗ ಎದ್ದುಕೂತು ಮಾಡುವುದು ಸಾಮಾನ್ಯ. ಹೀಗೆ ಮಾಡುವಾಗ ಮಂಡಿಯ ಚಿಪ್ಪಿನ ಮೇಲಿನ ಈ ಜೀನ್ಸ್ ಬಟ್ಟೆ ತುಂಬಾ ತ್ರಾಸ ಕೊಡುತ್ತಿತ್ತು ಅಂತ ಯಾರೋ ಒಬ್ಬರು ಅದನ್ನು ಸೀಳಿದರಂತೆ. ಹೀಗೆ ಕತ್ತರಿಸಿದ್ದು ಅವರ ಅನುಕೂಲಕ್ಕೆ. ಈಗ ಇದು ಎಲ್ಲಿಗೆ ತಲುಪಿದೆ ಅಂತ ಗೊತ್ತಲ್ಲಾ? ಇದು ಕಥೆಯಲ್ಲ ಜ್ಞಾನ.

ಕೋಗಿಲೆಯ ಕಂಠದೊಳು ಗಾಯನವ ತುಂಬಿದವರಾರು
ವಿಷಯಗಳು ಎಲ್ಲೆಲ್ಲೂ ಅಡಗಿರುತ್ತದೆ. ಅದೆಲ್ಲಿ ಮತ್ತು ಹೇಗೆ ಅಡಗಿರುತ್ತದೋ ಬಲ್ಲವರಾರು? 'ಇಂಗಿನೊಳು ನಾತವನು, ತೆಂಗಿನೊಳಗಳನೀರು, ಭೃಂಗ ಕೋಗಿಲೆಯ ಕಂಠದೊಳು ಗಾಯನವ ತುಂಬಿದವರಾರು ಸರ್ವಜ್ಞ'. ಅಡಗಿರುವ ವಿಷಯಗಳನ್ನು ಕೊಂಚ ಆಳವಾಗಿ ನೋಡಿ ಅದನ್ನು ಹೊರಕ್ಕೆಳೆಯುವ ಯತ್ನ ಮಾಡುವ ಬನ್ನಿ. ತೆರೆದಿಡುವಾಗ ಚಿಂತನೆ ಮಾಡುವ. ವಿವಾದಕ್ಕೆ ಎಡೆಯಾಗುವುದಾದರೆ ಅಲ್ಲೇ ಚೆಲ್ಲಿಬಿಡಿ. ಚಿಂತನೆ ಮಾಡಿದ್ದನ್ನು ಒಳಿತಾದರೆ ಜನತೆಯ ಮುಂದೆ ಇಡುವ. ಎಲ್ಲಕ್ಕಿಂತ ಮಿಗಿಲಾಗಿ, ತಪ್ಪಿದ್ದರೆ ತಿದ್ದಿಕೊಳ್ಳುವ ಉದಾರ ಹೃದಯದವರೂ ಆಗುವ.

English summary
Srinath Bhalle Column: Come let's talk about all Those masala things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X