• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ನಿಮಗೆ ಕೆಲವೊಂದು ವಿಷಯಕ್ಕೆ ಕಿರಿಕಿರಿಯಾಗುತ್ತಾ?

By ಶ್ರೀನಾಥ್ ಭಲ್ಲೆ
|
Google Oneindia Kannada News

ಯಪ್ಪಾ! ಅದೇನದು "ರಿ ರಿ' ಅಂದುಕೊಂಡೆ ಪರಪರ ಅಂತ ತಲೆಕೆರೆದುಕೊಳ್ಳುವಂತೆ ಮಾಡ್ತಿದ್ದೀರಿ ಅಂತ ಕೇಳಬೇಡ್ರೀ. ಇನ್ನೂ ಶುರು ಮಾಡುವುದಕ್ಕೆ ಮುನ್ನವೇ ನಿಮಗೆ ಹೀಗೆ ಕಿರಿಕಿರಿ ನಾನೇನು ಮಾಡಲಿ?

ಮೊದಲಿಗೆ ಈ ಕಿರಿಕಿರಿ ಅನ್ನುವುದು ಭಾವನೆ. ಒಬ್ಬರ ಸಂಗೀತ ಮತ್ತೊಬ್ಬರಿಗೆ ಗಲಭೆ ಎನಿಸಬಹುದು ಎನ್ನುವರಲ್ಲಾ ಹಾಗೆ. ಚಿಕ್ಕ ಉದಾಹರಣೆ ತೆಗೆದುಕೊಂಡರೆ, ಟಿವಿಯಲ್ಲಿ ಯಾವುದೋ ಒಂದು ಸನ್ನಿವೇಶ ನೋಡುವಾಗ, ಕೆಲವರು ಹೊಟ್ಟೆ ಹಿಡ್ಕೊಂಡ್ ನಗಬಹುದು ಆದರೆ ಮತ್ತೊಬ್ಬರ ತುಟಿಗಳು ಅರಳದೆಯೂ ಇರಬಹುದು. ಇವರೇಕೆ ನಗುತ್ತಲೇ ಇಲ್ಲ ಎಂದುಕೊಂಡರೆ, ಒಂದೋ ಅವರಿಗೆ ಭಾಷೆ ಅರ್ಥವಾಗದೇ ಇರಬಹುದು. ದೃಶ್ಯ ಮಾಧ್ಯಮವೇ ಆದರೂ ಹಾಸ್ಯ ಇರೋದು ಡೈಲಾಗ್‌ನಲ್ಲಾದರೂ, ಭಾಷೆ ಅರ್ಥವಾಗದೇ ಇದ್ದರೆ ನಗೋದು ಹೇಗೆ? ಎರಡನೆಯ ಮುಖ್ಯ ಅಂಶವೇ ಈ ಭಾವನೆ. ಒಬ್ಬರಿಗೆ ನಗು ಬಂತು ಅಂತ ಮತ್ತೊಬ್ಬರಿಗೂ ನಗು ಬರಲೇಬೇಕಿಲ್ಲ.

ಅದೇನಿದೆ ಅಲ್ಲಿ ನಗೋದಕ್ಕೆ?

ಈ ವಿಚಾರದಲ್ಲಿ ಅದೇನಿದೆ ಕಿರಿಕಿರಿ ಅಂತೀರಾ? ನಗದೇ ಇರುವವರನ್ನು ಯಾಕೆ ನಗುತ್ತಿಲ್ಲ ಅಂತ ಕೇಳಬೇಡಿ. ಅವರು ಮೈ ಚಾಯ್ಸ್ ಎಂದರೆ ಬಹುಶಃ ಅಲ್ಲಿಗೆ ಮಾತು ಮುಗಿಯುತ್ತೆ. ಅದರ ಬದಲಿಗೆ, "ಅದೇನಿದೆ ಅಲ್ಲಿ ನಗೋದಕ್ಕೆ? ಅದರಲ್ಲೂ ಹೊಟ್ಟೆ ಹಿಡ್ಕೊಂಡ್ ನಗೋದಕ್ಕೇನಿದೆ? ಅವನು ಮಂಗನ ಹಾಗೆ ಮುಖ ಮಾಡ್ಕೊಂಡ್ ಆ ಹುಡುಗಿ ಹಿಂದೆ ಹೋಗಿ ಮೋರಿಯ ಒಳಗೆ ಬಿದ್ರೆ ನಗೋದೇ? ಈಗ ನಕ್ಕಿದ್ದು ಅವಳಿರೋ ಚೆಂದಕ್ಕೆ ಇವನು ಫಾಲೋ ಮಾಡಿ ಮೋರಿಗೆ ಬಿದ್ದ ಅಂತಲೇ? ಇವನು ಗೂಬೆ ತರಹ ಇದ್ದಾನೆ ಅಂತ ನಕ್ಕಿದ್ದಾ? ಮೋರಿಗೆ ಬಿದ್ದದ್ದಕ್ಕೆ ನಕ್ಕಿದ್ದಾ? ಒಬ್ಬರು ಅಂದ ಚೆಂದ ಇಲ್ಲಾ ಅಂತ ನಗೋದು ಧರ್ಮವಲ್ಲ. ಅವಹೇಳನ ಮಾಡಿದರೆ ನಿನ್ನ ಮಕ್ಕಳೂ ಹಾಗೆಯೇ ಹುಟ್ಟಬಹುದು ಜಾಗ್ರತೆ. ಒಬ್ಬರು ಬಿದ್ದರೆ ನಗಬಾರದು. ಇದೇನಾ ನೀನು ಬೆಳೆದು ಬಂದ ಸಂಸ್ಕೃತಿ?" ಹೀಗೆಲ್ಲಾ ಪ್ರಶ್ನೆಗಳು ಸುರಿಮಳೆಯಲ್ಲೇ ನಿಮ್ಮನ್ನು ಮುಳುಗಿಸಿದರೆ, "ನಿಮ್ಮ ಪಾದ ಕೊಡಿ, ಅಡ್ಡಬೀಳ್ತೀನಿ' ಎನ್ನಬುದು ನೀವು. ಇವು ಕಿರಿಕಿರಿಯೋ? ಪರಪರವೋ? ನಿಮಗೆ ಬಿಟ್ಟಿದ್ದು.

ದೇವನೊಬ್ಬ ನಾಮ ಹಲವು

ಯಾಕಾದರೂ ಈ ಕಿರಿಕ್ ಪಾರ್ಟಿ ಜೊತೆ ಮಾತನಾಡಿದೆನೋ ಅಂತ ಅನ್ನಿಸಬಹುದು. ಒಂದು ಮಾತಿಗೆ ಹತ್ತು ಮಾತನಾಡುವುದು ಕಿರಿಕಿರಿ. ಒಂದು ಪ್ರಶ್ನೆಗೆ ಹತ್ತು ಪ್ರಶ್ನೆ ಎಸೆಯುವುದು ಪಿರಿಪಿರಿ. ಇಂಥವರೊಂದಿಗೆ ಹತ್ತು ನಿಮಿಷ ಕಳೆದ ನಮಗೆ ಖಂಡಿತ ಪರಪರ. ಈ ಕಿರಿಕಿರಿ ಮತ್ತು ಪಿರಿಪಿರಿ ಪ್ರಾಂತ್ಯಾನುಸಾರದ irritation ಆಗಿರುವುದರಿಂದ ನಿಮಗೆ ಯಾವುದಿಷ್ಟವೋ ಅಥವಾ ಸಹ್ಯವೋ ಹಾಗೆ ಬಳಸಿಕೊಳ್ಳಿ ಆದರೆ ಇವುಗಳ ಹಿಂದಿನ ಭಾವನೆಯ ಅನುಭವ ಮಾತ್ರ ಒಂದೇ. ದೇವನೊಬ್ಬ ನಾಮ ಹಲವು ಎಂಬಂತೆ.

ನಾವೆಲ್ಲರೂ ಒಂದು ಕೊಂಬೆಯ ಬಂಧುಗಳು

ನನ್ನ ಜನುಮದ ಸಂವತ್ಸರ ಅಥವಾ ಆಂಗ್ಲ ವರ್ಷ, ದಿನಾಂಕ, ರಾಶಿ, ನಕ್ಷತ್ರ ಮತ್ತು ಘಳಿಗೆಗೆ allot ಆಗಿದ್ದ ಕಿರಿಕಿರಿಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇರಿಸುತ್ತೇನೆ. ನಿಮ್ಮ ಪ್ರವರ ಹೇಳಿಕೊಂಡು ನಿಮ್ಮ ಅನುಭವ ಹಂಚಿಕೊಳ್ಳಿ. ಇದರಿಂದ ಏನು ಪ್ರಯೋಜನ ಅಂತ ಕೇಳಬಹುದು, ಅದನ್ನೂ ಹೇಳಿಯೇ ಬಿಡುತ್ತೇನೆ. ನಮ್ಮ ದುಃಖವನ್ನು ಇನ್ನೊಬ್ಬರ ಮುಂದೆ ಹೇಳಿಕೊಂಡರೆ ಕಡಿಮೆಯಾಗುತ್ತದೆ ಎನ್ನುತ್ತಾರೆ. ಹಾಗೆಯೇ, ಈ ಕಿರಿಕಿರಿಯನ್ನು ಇನ್ನೊಬ್ಬರ ಮುಂದೆ ಹೇಳಿಕೊಂಡಾಗ, ಆ ಮತ್ತೊಬ್ಬರೂ ಸಹ "ಅಯ್ಯೋ, ಹೌದುರೀ ನನಗೂ ಹೀಗೆ ಅನ್ನಿಸುತ್ತೆ ಅಂದಾಗ' ಆಹಾ! ನಾವೆಲ್ಲರೂ ಒಂದು ಕೊಂಬೆಯ ಬಂಧುಗಳು' ಎನಿಸಬಹುದು. ದಿನನಿತ್ಯದಲ್ಲಿ ಬಂಧುತ್ವ ಬೆಳೆಸಿಕೊಳ್ಳೋಣ ಅಲ್ಲವೇ?

ಈ ಕಿರಿಕಿರಿ ಹೇಗೆ ಎಂದರೆ ಅನ್ನುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ ಎನ್ನುವಂತೆಯೂ ಇರಬಹುದು. ಇನ್ಯಾರಾದರೂ ಹೇಳಲಿ ಅಂತ ಅನ್ನಿಸಿದರೆ ಅದನ್ನು ನಾನೇ ಹೇಳುತ್ತೇನೆ, ಅಂಥವರಿಗೆ ಈ ಬರಹವನ್ನು ನೀಡಿ. ತಾವು ಮಾಡುತ್ತಿರುವುದು ಮತ್ತೊಬ್ಬರಿಗೆ ಕಿರಿಕಿರಿಯಾಗುತ್ತಿದೆ ಅಂತ ಅನ್ನಿಸಿದರೆ ಬಹುಶಃ ತಿದ್ದಿಕೊಂಡಾರು.

ನಂತರ ನಡುವಳಿಕೆ ತಿದ್ದಿಕೊಂಡಿದ್ದ

ಬಹಳ ವರ್ಷಗಳ ಹಿಂದೆ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಚೇರಿಯ ಸಮಯ ಒಂಬತ್ತಕ್ಕೆ ಆರಂಭವಾಗುತ್ತಿದ್ದರೂ ಒಬ್ಬ ಹೊಸ ಕೆಲಸಗಾರ ಬರುತ್ತಿದ್ದುದು ಒಂಬತ್ತೂವರೆಗೆ. ಕಂಪನಿಯ ಯಾವ ಹಿರಿಯರ ಆಶೀರ್ವಾದದಿಂದ ಬಂದು ಸೇರಿದ್ದನೋ ಗೊತ್ತಿಲ್ಲ, ಅವನಿಗೆ ಯಾರೂ ಏನೂ ಹೇಳುತ್ತಿರಲಿಲ್ಲ. ನಾವು ಬ್ಯುಸಿಯಾಗಿ ಕೆಲಸ ಮಾಡುವಾಗ ಅಥವಾ ಮೀಟಿಂಗ್‌ನಲ್ಲಿರುವಾಗ, ತಂಪು ಕನ್ನಡಕ ಧರಿಸಿಕೊಂಡೇ ಬಂದು ತನ್ನ ಕುರ್ಚಿಯನ್ನು ಅಲಂಕರಿಸುತ್ತಿದ್ದ. ತಡವಾಗಿ ಬರುತ್ತಿದ್ದುದು ಮತ್ತು ಅವನು ಮಾಡುತ್ತಿದ್ದ ಆ ಚಿಕ್ಕಪುಟ್ಟ ಗಲಭೆಗಳು, ನನಗೆ ಮಹಾ ಕಿರಿಕಿರಿಯಾಗುತ್ತಿತ್ತು. ಏನಾದರೂ ಮಾಡಬೇಕು ಅಂತ ಆಲೋಚಿಸಿದೆ. ಮರುದಿನ ನಮ್ಮ ಮೀಟಿಂಗ್ ಸಮಯದಲ್ಲಿ ಅವನು ಬಂದಾಗ "ಹಲೋ ಕಿರಣ್, ಗುಡ್ Afternoon!' ಅಂತ ನುಡಿದು ಕೆಲಸದ ಸಂಬಂಧವಾಗಿ ಅದೇನೋ ಪ್ರಶ್ನೆ ಎಸೆದೆ. ಎಸೆದ ಬಾಣ ಚುಚ್ಚಿತ್ತು. ಆ ನಂತರ ನಡುವಳಿಕೆ ತಿದ್ದಿಕೊಂಡಿದ್ದ.

ಹೇಗೆ ಅಮೇರಿಕ ಜೀವನ?

ನನ್ನ ಬಂಧು ಒಬ್ಬರಿದ್ದಾರೆ. ಬಹಳ ವಿಶೇಷವಾದ ಕಿರಿಕಿರಿ. ಇಂದಿನ ಸನ್ನಿವೇಶಕ್ಕೆ ಬದಲಿಸಿ ಹೇಳ್ತೀನಿ ಆಗ ಬೇಗ ಅರ್ಥವಾಗುತ್ತದೆ. ಮನೆಗೆ ಬಂದವರೇ ಧಡಭಡ ಮಾತನಾಡುತ್ತಾ ಏನೋ ಪ್ರಶ್ನೆ ಕೇಳುತ್ತಾರೆ. ಅದೆಂಥಾ ಪ್ರಶ್ನೆ ಆಗಿರುತ್ತೆ ಅಂದರೆ ಉತ್ತರಿಸಲು ಮನವನ್ನು ಸಿದ್ಧಪಡಿಸಿಕೊಳ್ಳಬೇಕು ಅರ್ಥಾತ್ ಎಲ್ಲಿಂದ ಉತ್ತರ ಆರಂಭಿಸಬೇಕು ಅಂತ ಆಲೋಚಿಸಬೇಕು. ಉದಾಹರಣೆಗೆ "ಹೇಗೆ ಅಮೇರಿಕ ಜೀವನ?'. ಇದು ಕಿರಿಕಿರಿಯ ಆರಂಭ. ಪ್ರಶ್ನೆ ಕೇಳಿದ ಮೇಲೆ ತಮ್ಮ ಮೊಬೈಲ್ ತೆರೆದು ನೋಡ್ತಾ ಕೂರೋದು. ಈ ಸಂಪತ್ತಿಗೆ ಪ್ರಶ್ನೆ ಕೇಳಿದ್ಯಾಕ ಅಂತ ಅದೆಷ್ಟು ಬಾರಿ ಅನ್ನಿಸಿದೆಯೋ ಗೊತ್ತಿಲ್ಲ. ಕಿರಿಕಿರಿ ಹೇಗೆ ಮುಂದುವರೆಯುತ್ತದೆ ಅಂದ್ರೆ, ಫೋನ್ ನೋಡುವಾಗ ಮಧ್ಯೆ ಮಧ್ಯೆ ತಲೆ ಎತ್ತಿ "ಆಮೇಲೆ?' ಅಂತ ಪ್ರಶ್ನೆ ಹಾಕೋದು. ಅವರಿಗೆ ಪ್ರಶ್ನೆ ಕೇಳುವ ಖಯಾಲಿ ಅಷ್ಟೆಯೇ ಹೊರತು, ಉತ್ತರ ಕಟ್ಟಿಕೊಂಡು ಅವರಿಗೇನೂ ಆಗಬೇಕಿಲ್ಲ.

ಸೂಕ್ಷ್ಮಮತಿಯಾದರೆ ಅನುಭವಿಸಲೇಬೇಕು

ಕಿರಿಕಿರಿ ಎಂದರೆ ಚಿಕ್ಕಪ್ರಮಾಣದ irritation. ಕೇಳಿದಾಗ ಅನ್ನಿಸದೇ ಹೋದರೂ ಅನುಭವಿಸೋದು ಕಷ್ಟ. ಇದರಿಂದ ಪಾರಾಗಬೇಕು ಎಂದರೆ ಉಲ್ಲಂಘಿಸಬೇಕು ಅಥವಾ ನೇರವಾಗಿ ಹೇಳಬೇಕು. ಸೂಕ್ಷ್ಮಮತಿಯಾದರೆ ಅನುಭವಿಸಲೇಬೇಕು. ಚಿಕ್ಕಪ್ರಮಾಣ ಎಂದರೆ ಏನು. ಸ್ನೇಹಿತರ ಜೊತೆ ನೀವು ಸೋಫಾ ಮೇಲೆ ಕೂತು ಮಾತನಾಡುತ್ತಾ ಇರುತ್ತೀರಾ ಅಂದುಕೊಳ್ಳಿ. ಪಕ್ಕದಲ್ಲಿರುವ ಪುಣ್ಯಾತ್ಮರು ಸುಮ್ಮನೆ ತಮ್ಮ ಕಾಲು ಅಥವಾ ತೊಡೆಯನ್ನು ಅಲ್ಲಾಡಿಸುತ್ತಾ ಇರುತ್ತಾರೆ. ಇದೊಂದು ರೀತಿ distraction ಅಷ್ಟೇ. ಯಾವುದೇ destruction ಇಲ್ಲದೆ ಹೋದರೂ irritation ಖಂಡಿತ. ಒಂದು Conference Call ಮೀಟಿಂಗ್ ಅಂದುಕೊಳ್ಳಿ. ಫೋನಿನಲ್ಲಿ ಮಾತುಗಳು ಸಾಗುತ್ತಿರುವಾಗ ತಡವಾಗಿ ಸೇರಿದವರು ಅಲ್ಲೇನು ಮಾತು ನಡೆಯುತ್ತಿದೆ ಎಂಬುದನ್ನೂ ಲೆಕ್ಕಿಸದೇ "ಸಾರೀ ತಡವಾಯ್ತು, ಅದೇನಾಯ್ತು ಅಂದ್ರೆ' ಅಂತ ಶುರುಮಾಡಿದಾಗ ಕಿರಿಕಿರಿಯ ಲೆವೆಲ್ ಏರುತ್ತದೆ.

ಸೂಜಿಯ ಸದ್ದು ಕೂಡಾ ದೊಡ್ಡ ಪಟಾಕಿಯ ಸದ್ದಿನಂತೆ

ಒಬ್ಬರಿಂದ ಮತ್ತೊಬ್ಬರಿಗೆ ಕಿರಿಕಿರಿಯಾಗೋದು ಸರ್ವೇಸಾಮಾನ್ಯ. ಇದರಲ್ಲಿ ಎರಡು ವಿಷಯ ಅಡಕವಾಗಿದೆ. ಕಿರಿಕಿರಿ ಮಾಡುತ್ತಿರುವವರಿಗೆ ತಮ್ಮಿಂದ ಹೀಗಾಗುತ್ತಿದೆ ಎಂದು ಗೊತ್ತಿರುವುದಿಲ್ಲ. ಅದು ಅವರ ನಡುವಳಿಕೆ. Table Manners ಅಂತ ಒಂದಿದೆ, ಅದನ್ನು ಪಕ್ಕಕ್ಕೆ ಇರಿಸಿದರೆ, ಸಾಮಾನ್ಯ ಜನರ ನಿತ್ಯಜೀವನದಲ್ಲಿ ನಡುವಳಿಕೆಯು ಹೀಗೆಯೇ ಇರಬೇಕು ಎಂದು ಹೇಳುವ ಕೈಪಿಡಿ ಎಲ್ಲಿಯೂ ಇಲ್ಲ. ರಾಜಮನೆತನದಲ್ಲಿ ಪ್ರತೀ ಅಂಶವೂ ಹೀಗೆಯೇ ಇರಬೇಕು ಎಂಬ ನಿಯಮ ಇದೆಯಂತೆ. ನಮಗೇಕೆ ಆ ಚಿಂತೆ ಬಿಡಿ.

ಇನ್ನು, ಎರಡನೆಯ ವಿಷಯ ಎಂದರೆ ಆ ಕಿರಿಕಿರಿಯನ್ನು ಸ್ವೀಕರಿಸುವವರ ಮನಸ್ಥಿತಿ. ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಯಾವುದೂ ಕಿರಿಕಿರಿಯಾಗುವುದಿಲ್ಲ. ಮನಸ್ಸು ಕೆಟ್ಟರೆ, ನೆಲಕ್ಕೆ ಬಿದ್ದ ಸೂಜಿಯ ಸದ್ದು ಕೂಡಾ ದೊಡ್ಡ ಪಟಾಕಿಯ ಸದ್ದಿನಂತೆ ಕೇಳಿಸಬಹುದು. ಹೀಗಾಗಿ, ಜಗತ್ತಿನ ಕಿರಿಕಿರಿಗಳನ್ನು ಸರಿಪಡಿಸುವ ದುಸ್ಸಾಹಸಕ್ಕೆ ಕೈಹಾಕುವ ಬದಲು, ನಾವು ಸಂತಸದಿಂದ ಇದ್ದರೆ ಕಿರಿಕಿರಿಗಳೂ ಸರಿಸರಿ ಎಂದು ತೇಲಿಹೋಗಬಹುದು. ಏನಂತೀರಾ?

English summary
Srinath Bhalle Column: Some one's music may sound riotous to another.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X