• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಕರದ ವಿಷಯ ನಿಮಗೆ ಕರತಲಾಮಲಕ ಆಗಿದೆಯೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಭಾನುವಾರ ಬೆಳ್ ಬೆಳಿಗ್ಗೆ ಸ್ವಲ್ಪ ತಡವಾಗಿಯೇ ಎದ್ದರೂ ಹಸ್ತ ನೋಡ್ಕೊಂಡ್ ಒಂದೂಕಾಲು ಕಣ್ಣಲ್ಲಿ "ಕರಾಗ್ರೇ ವಸತೇ ಲಕ್ಷ್ಮಿ..." ಹೇಳುವಾಗ ಈ ವಾರದ ಬರಹಕ್ಕೆ ಕರವೇ ಸರಿ ಅಂದುಕೊಂಡೆ. ತಡವಾಗಿ ಎದ್ದಾಗ ಶ್ಲೋಕ ಮಿಸ್ ಮಾಡಬೇಕು ಅಂತ ಯಾರಾದರೂ ಹೇಳಿದ್ದಾರಾ? ಹೋಗ್ಲಿ ಬಿಡಿ, ಇಂದಿನ ವಿಷಯವೇ ಬೇರೆ ಅಲ್ಲವೇ?

'ಕರವೇ' ಸರಿಯಾದ ವಿಷಯ ಅಂದಾಗ ಈ ನನ್ನ ಕರವೇ ಅನ್ನುವುದು 'ಕರ್ನಾಟಕ ರಕ್ಷಣಾ ವೇದಿಕೆ'ಯ ಹ್ರಸ್ವರೂಪ ಅಂದುಕೊಳ್ಳದಿರಿ. ಈ ಸಂದರ್ಭದಲ್ಲಿ ಕರ ಎಂದರೆ 'ಕರ್ನಾಟಕ ರಕ್ಷಣಾ' ಸರಿ. ಆದರೆ ನಮ್ಮ ಇಂದಿನ ಮಾತೆಲ್ಲಾ ಕರ ಅಥವಾ ಕರ ಪೂರಕದ ಬಗ್ಗೆ ಮಾತ್ರ. ಈ ಕರ ಅನ್ನುವುದು ಆದಿಯಲ್ಲೋ ಇರಬಹುದು, ಅಂತ್ಯದಲ್ಲೂ ಇರಬಹುದು.

ಶ್ರೀನಾಥ್ ಭಲ್ಲೆ ಅಂಕಣ; ಎಲ್ಲರ ಜೀವನವೂ ಸಿಹಿಕಹಿಗಳ 'ಕಲಸುಮೇಲೋಗರ'

.

"ಕರಾಗ್ರೇ ವಸತೇ ಲಕ್ಷ್ಮಿ, ಕರ ಮಧ್ಯೆ ಸರಸ್ವತಿ, ಕರ ಮೂಲೆ ಸ್ಥಿತೇ ಗೌರಿ, ಪ್ರಭಾತೇ ಕರ ದರ್ಶನಂ" ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಹಸ್ತದ ಮೇಲೆ, ಮಧ್ಯೆ ಆದ ಮೇಲೆ ಕೆಳಗೆ ಅಂತಿರಬೇಕು ಆದರೆ 'ಮೂಲೆ' ಅಂದಿದ್ಯಾಕೆ? ಅರ್ಥೈಸಿಕೊಳ್ಳಬೇಕಾದ್ದು ಇಷ್ಟೇ, ಮೂಲೆ ಅಂದರೆ ಕೊನೆಯಲ್ಲೆಲ್ಲೋ ಅಂತಲ್ಲಾ 'ಮೂಲ'ದಲ್ಲಿ ಅಂತ.

ಹಣ ಎಂಬ ಮಾತು ಬಂದಾಗ ಬೆರಳಿನ ತುದಿಯಲ್ಲಿ ತೋರಿಸುತ್ತೇವೆ ಅಲ್ಲವೇ? ಅರ್ಥಾತ್ ನಾಣ್ಯ ಚಿಮ್ಮುವಂತೆ ಸನ್ನೆ ಮಾಡಿ ತೋರಿಸುತ್ತೇವೆ. ಯಾಕೆ ಅಂತ ಗೊತ್ತಾಯ್ತಲ್ಲ? "ಕರಾಗ್ರೇ ವಸತೇ ಲಕ್ಷ್ಮಿ" ಅಂದಾಗ ಲಕ್ಷ್ಮಿ ಅಲ್ಲವೇ ಬೆರಳ ತುದಿಯಲ್ಲಿ ಇರೋದು! ಇನ್ನು ಕರಮಧ್ಯೆಗೂ ಸರಸ್ವತಮ್ಮನಿಗೂ ಇರುವ ಲಿಂಕ್ ! ಸಿನಿಮಾಗಳಲ್ಲಿ ಕೆಲವೊಮ್ಮೆ ಇಂಥದ್ದೊಂದು ದೃಶ್ಯವಿರುತ್ತದೆ. ಕರ್ಪೂರದಿಂದ ದೀಪ ಬೆಳಗಿಸಿಕೊಂಡು, ಕರ ಮಧ್ಯೆ ಇರಿಸಿಕೊಂಡು ಆರತಿ ಮಾಡುವುದನ್ನು ನೋಡಿರುತ್ತೀರಿ. ಮೆಲೋಡ್ರಾಮಾ ಪಕ್ಕಕ್ಕೆ ಇಟ್ಟು, ದೀಪವನ್ನು ಜ್ಞಾನಕ್ಕೆ ಹೋಲಿಸಿ ನೋಡಿ ಆಗ ಅರಿವಾಗುತ್ತೆ 'ಕರ ಮಧ್ಯೆ ಸರಸ್ವತಿ' ಹೇಗೆ ಅಂತ !

.

ಇದೇ ದಿಶೆಯಲ್ಲಿ ಕರಗಳ ಮಧ್ಯೆ ಜ್ಯೋತಿ ಎಂಬುದನ್ನು ಊಹಿಸಿಕೊಂಡ ಕೂಡಲೇ ನೆನಪಾಗುವುದೇ, ತನ್ನ 64ನೆಯ ಹುಟ್ಟುಹಬ್ಬ ಆಚರಿಸಿಕೊಂಡ 'ಭಾರತೀಯ ಜೀವವಿಮಾ ನಿಗಮ'. ಕರಮಧ್ಯೇ ಸರಸ್ವತಿ ಎನ್ನುತ್ತಿದೆಯೇನೋ ಎನಿಸುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ: ಇಹದ ಓಕೆ, 'ಪರ'ದ ವಿಷಯ ಸುಮ್ನೆ ಯೋಚಿಸದಿರಿ

.

ಶ್ರೀಲಂಕಾದ ಸಿಂಹಳೀಯರ ಒಂದು ಜಾತಿ ಪ್ರಭೇದದಲ್ಲಿ 'ಕರವೇ, ಕರ, ಕೌರವ' ಎಂಬೆಲ್ಲಾ ಜಾತಿಗಳಿವೆಯಂತೆ. ಇವರ ಪ್ರಮುಖ ಕೆಲಸವೇ ಮೀನುಗಾರಿಕೆ. ಇಲ್ಲಿ "ಕರ" ಎಂದರೆ ತೀರ (ಸಮುದ್ರ) ಅಂತ. ಆದರೆ ಇಲ್ಲೂ ಒಂದಷ್ಟು ಜಿಜ್ಞಾಸೆ ಇದೆ. ಒಂದಂತೂ ನಿಜ, ಈ ಕೌರವ ಅಂತ ಬಂದಾಗಲೆಲ್ಲ ಅದೇನೋ ಜಿಜ್ಞಾಸೆಗಳೂ ಒಟ್ಟಾಗಿ ಬರುತ್ತೆ. ಸೀದಾಸಾದಾ ಇಲ್ಲವೇ ಇಲ್ಲ ಬಿಡಿ.

ಸಿನಿಮಾ ಹೆಸರು ಗೊತ್ತಿಲ್ಲ, ಆದರೆ ಜೇಸುದಾಸ್ ಅವರ ಕಂಠದಲ್ಲಿ "ಶ್ರೀಕರ ಶುಭಕರ ಶಿವಶಂಕರ" ಎಂಬ ಹಾಡಿದೆ. ಒಂದು ಭಕ್ತಿಗೀತೆಯ ರೂಪ ಅನ್ನಿ. ಈ ಹಾಡಿನಲ್ಲಿ ಸಾಕಷ್ಟು ಕರಗಳಿವೆ. ಶ್ರೀಕರ ಅನ್ನೋದು ಶ್ರೀ ಮತ್ತು ಕರ ಎಂಬೆರಡು ಪದಗಳ ಸಮ್ಮಿಲನ. ಶ್ರೀ ಎಂದರೆ ಶ್ರೇಯಸ್ಸು ಅಂತ, ಕರ ಎಂದರೆ ಕೊಡುವವನು ಅಂತ. ಮಹಾವಿಷ್ಣುವಿನ ಒಂದು ಹೆಸರು. ಇದರಂತೆಯೇ ಶುಭಕರ ಎಂದರೆ ಶುಭವನ್ನು ನೀಡುವವನು ಅಂತ. ವಿಷ್ಣುವೂ ಆಗಬಹುದು ನಿಮ್ಮಿಷ್ಟ ದೈವ ಯಾರೂ ಆಗಬಹುದು. ಈಗ ಶಿವಶಂಕರ... ಒಂದು ಅರ್ಥದಲ್ಲಿ 'ಸಂ' ಎಂದರೆ ಒಳಿತು, ಕರ ಎಂದರೆ ಮಾಡುವವನು ಅಂತಲೇ! ಅದು ಸಂಕರ!

ಆದರೆ ಶಂಕರನನ್ನು ನಾವು ಸಂಕರ ಅಂತ ಕರೆಯೋದಿಲ್ಲವೇ? ತಮಿಳುನಾಡಿನವರು ಸಂಕರ ಎಂದು ಕರೆಯುತ್ತಾರೆ ಬಿಡಿ. ಆದರೆ ಶಂಕರ ಎಂದರೆ ಬೇರೊಂದು ಅರ್ಥವಿದೆ. ಶಂಕರ ಎಂದರೆ ಶಂಕ ಹರ ಎಂದು. ಅರ್ಥಾತ್ ಶಂಕೆ/ಅನುಮಾನಗಳನ್ನು ದೂರವಾಗಿಸುವವನು ಎಂದರ್ಥ.

ಶ್ರೀನಾಥ್ ಭಲ್ಲೆ ಅಂಕಣ; ಹೆಸರಿನಲ್ಲೇನಿದೆ ಬಿಡಿ...

.

ಕರ ಎಂದರೆ ಹಸ್ತ ಎಂದೂ ಹೇಳುತ್ತಾರೆ. ಹಾಗಾಗಿ ಹಸ್ತಸಾಮುದ್ರಿಕೆಯನ್ನು ಕರಸಾಮುದ್ರಿಕೆ ಎಂದೂ ಹೇಳುವವರು ಇದ್ದಾರೆ. ಗಂಡಸರ ಭವಿಷ್ಯ ನೋಡಲು ಬಲಹಸ್ತ ನೋಡುತ್ತಾರೆ ಮತ್ತು ಹೆಂಗಳ ಭವಿಷ್ಯ ನೋಡಲು ಎಡಹಸ್ತ ನೋಡಬೇಕು ಎನ್ನುತ್ತಾರೆ. ಹೀಗೇಕೆ ಅಂತ ಗೊತ್ತೇ? ಕೆಲವು ಹಸ್ತಸಾಮುದ್ರಿಕೆಯವರ ಪ್ರಕಾರ ಎರಡೂ ಹಸ್ತಗಳನ್ನು ನೋಡಬೇಕಂತೆ. ಎಡಹಸ್ತವು ಭಗವಂತ ಕೊಟ್ಟಿದ್ದು, ಅದರಿಂದ ನೀನೇನು ಮಾಡುವೆ ಎಂಬುದು ಬಲಹಸ್ತದ ರೇಖೆಗಳು ತಿಳಿಸುತ್ತದೆ ಎನ್ನುತ್ತಾರೆ. ಮತ್ತೂ ಕೆಲವರು ಹೇಳುವ ಪ್ರಕಾರ ಬಲಹಸ್ತವು ಶೇಖಡಾ 80ರಷ್ಟು ವಿಷಯ ಅರುಹಿದರೆ, ಮಿಕ್ಕ ಶೇಕಡಾ 20 ಎಡಹಸ್ತದಲ್ಲಿ ತಿಳಿಯುತ್ತದಂತೆ.

.

ಈ ಕರದಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎನ್ನಬಹುದು. ಯಾರೋ ಹಿರಿಯರು ಒಂದು ಸಭೆಯಲ್ಲಿ ತಮ್ಮ ಹಸ್ತವನ್ನು ಬಿಗಿ ಮಾಡಿ ಇದರಲ್ಲಿ ಏನಿದೆ? ಎಂದು ಕೇಳಿದರಂತೆ. ಕೆಲವರು ಗಾಳಿ ಎಂದರು, ಕೆಲವರು vacuum ಎಂದರು, ಕೆಲವರು ಶೂನ್ಯ ಹೀಗೆ ಏನೇನೋ... ಮತ್ಯಾರೋ ಮಹಾನುಭಾವ 'ತೆಂಗಿನಕಾಯಿ' ಎಂದರಂತೆ. ಉತ್ತರ ಇಷ್ಟೇ, ಸಕಲ ರೀತಿಯ ರೇಖೆಗಳೂ ಅಲ್ಲಿರೋದ್ರಿಂದ, ನಿಮ್ಮ ಇಡೀ ಭವಿಷ್ಯ ನಿಮ್ಮ ಮುಷ್ಟಿಯಲ್ಲಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳುವ ತಾಕತ್ ಕೂಡ ನಿಮ್ಮಲ್ಲೇ ಇದೆ, ಎಂದರಂತೆ. ಇಂಥ ಹಸ್ತದಲ್ಲೇ ಬೆರಳುಗಳು ಇರೋದು ಮತ್ತು ಆ ಬೆರಳಲ್ಲೇ ಬೆರಳಚ್ಚು ಕೂಡಾ ಇರುವುದು. ಬೆರಳಚ್ಚಿನ ವೈಶಿಷ್ಟ್ಯ ನಿಮ್ಮೆಲ್ಲರಿಗೂ ಗೊತ್ತು. ಅದು unique ಅರ್ಥಾತ್ ಅನನ್ಯ.

ಕರತಲಾಮಲಕ ಅಂದ್ರೆ ಗೊತ್ತೇ? ಕರ ಅಂದ್ರೆ ಹಸ್ತ. ಕರತಲ ಅಂದ್ರೆ ಹಸ್ತದ ಮೇಲೆ ಅಂತ. ಅಮಲಕ ಎಂದರೆ ನೆಲ್ಲಿಕಾಯಿ. ಹೇಗೆ ಒಂದು ಅಂಗೈ ಮೇಲೆ ಇರುವ ಒಂದು ನೆಲ್ಲಿಕಾಯಿ ಸ್ಪಷ್ಟವಾಗಿ ಕಾಣುತ್ತದೋ ಅಷ್ಟೇ ಸ್ಪಷ್ಟವಾದ ಮತ್ತು ವಿವಾದಕ್ಕೆ ಎಡೆ ಮಾಡಿಕೊಡದಷ್ಟು ಸ್ಪಷ್ಟ ಅಂತ ಅರ್ಥ. ಇದನ್ನು ಹಸ್ತಾಮಲಕ ಎಂದೂ ಕರೆಯಬಹುದು. ದೈವದ ಬಗ್ಗೆ ಸ್ಪಷ್ಟ ಅರಿವಿರುವ ವ್ಯಕ್ತಿಯ ವಿಷಯದಲ್ಲಿ ಕರತಲಾಮಲಕ ಎಂದು ಹೇಳಲಾಗುತ್ತದೆ. ಇಂಥ ಒಬ್ಬ ಹಸ್ತಾಮಲಕನ ಗುರುಗಳು 'ಆದಿ ಶಂಕರಾಚಾರ್ಯ'.

ಕರ ಎಂದರೆ ತೆರಿಗೆ ಅಂತಲೂ ಅರ್ಥವಿದೆ. ಈ ಕರದಲ್ಲಿ ಎಷ್ಟೋ ವಿಧ ಇದೆ. ಕೆಲೆವೆಡೆ ನಿಂತ್ರೆ ಕೂತ್ರೆ ಕರ ಕಟ್ಟಬೇಕು. ಕೆಲವು ಆದಾಯಗಳಿಗೆ ತೆರಿಗೆ ಇರುವುದಿಲ್ಲ, ಉದಾಹರಣೆಗೆ ಭಿಕ್ಷಾಟನೆ. ತೆರಿಗೆ ವಿನಾಯ್ತಿ ಬಗ್ಗೆ ನಿಮಗೂ ಗೊತ್ತೇ ಇರುತ್ತದೆ. ಕೆಲವು ಸಿನಿಮಾಗಳಿಗೆ ತೆರಿಗೆ ವಿನಾಯ್ತಿ ನೀಡಲಾಗುತ್ತದೆ. ನಮ್ಮಲ್ಲಿ ಶಾಲೆಗೆ ಸಂಬಂಧಿತ ವಸ್ತುಗಳಿಗೆ ತೆರಿಗೆ ವಿನಾಯ್ತಿ ಘೋಷಿಸುವ ವರ್ಷದಲ್ಲಿನ ಒಂದು ವಾರಾಂತ್ಯ ಜಾರಿಯಲ್ಲಿದೆ. ಇಲ್ಲಿರುವ ಮತ್ತು ಇಲ್ಲದಿರುವ ಹಲವಾರು ವಿಧದ ಕರಗಳನ್ನು ಎರಡೇ ವಿಭಾಗವಾಗಿ ವಿಂಗಡಿಸಬಹುದು ಎಂದರೆ ನೀವು ನಂಬಲೇಬೇಕು.

ಮೊದಲನೆಯದ್ದು ಎಂದರೆ ನೀವು ಕೈಯಾರೆ, ಅರ್ಥಾತ್ ನಿಮ್ಮ ಕರದಲ್ಲಿ ನೀಡುವ ಕರ. ಎರಡನೆಯದ್ದು ಎಂದರೆ ನಿಮ್ಮ ಕರದಿಂದ ಕಸಿದುಕೊಳ್ಳುವ ಕರ. ಒಂದು ಪಿಜ್ಜಾ ಕೊಂಡಾಗ ಅದಕ್ಕೆ ತೆರಿಗೆ ಹಾಕುತ್ತಾರೆ. ಪಿಜ್ಜಾ ಮತ್ತು ತೆರಿಗೆ ಎರಡೂ ಹಣವನ್ನು ನೀವು ಕೈಯಾರೆ ಕೊಟ್ಟರೆ ಮಾತ್ರ ನಿಮ್ಮ ಕೈಗೆ ಪಿಜ್ಜಾ ಬರೋದು. ಇದು ನೀವು ಕೈಯಾರೆ ನೀಡುವ ಕರ. ನಿಮ್ಮಿಂದ ಕಸಿದುಕೊಳ್ಳುವ ಕರ ಎಂದರೆ ಆದಾಯ ತೆರಿಗೆ. ಪ್ರತೀ payslip ನಲ್ಲಿ ಕಟ್ಟುವ ತೆರಿಗೆ ನೀವು ಖಂಡಿತ ಕೈಯಾರೆ ನೀಡಿರುವುದಿಲ್ಲ ಅಲ್ಲವೇ? ಕರ ನಿರಾಕರಣೆ ಮಾಡುವ ಹಾಗಿಲ್ಲ ಅನ್ನೋದು ಗೊತ್ತೇ ಇದೆಯಲ್ಲವೇ? ಬಿಡಿ, ಈ ವಿಷಯದ ಬಗ್ಗೆ ಅರಿವು ಇರುವ ಕರಣಿಕ ನಾನಲ್ಲ.

ವರ್ಷಾಂತ್ಯಕ್ಕೆ tax return ಅಂತೂ ಫೈಲ್ ಮಾಡಲೇಬೇಕು ಅಲ್ಲವೇ? ನಮಗೆ returns ನಿಂದ ಹಣ ಬರುವ ಹಾಗಿದ್ರೆ ಅಡ್ಡಿಯಿಲ್ಲ ಬಿಡಿ ಆದರೆ returns ಫೈಲ್ ಮಾಡಿದಾಗ ನಾವೇ ದುಡ್ಡುಕೊಡಬೇಕಾಗಿ ಬಂದಾಗ 'ಕರ'ವಸ್ತ್ರ ಬೇಕಾಗುತ್ತದೆ. ಕರ್ತೃವಿನ ಕ್ರಿಯೆಯಲ್ಲಿ ಏನೋ ಮಿಸ್ ಹೊಡೆದಾಗ ಕರ್ಮ ಅನುಭವಿಸಲೇಬೇಕು. ಅಂದ ಹಾಗೆ ಇಲ್ಲಿ ಹೇಳಿರುವ ಫೈಲ್ ಎಂಬುದು ಒಂದು ಕ್ರಿಯಾಪದ. ಅದು ನಾಮಪದವಾದರೆ ಕರಡು ಅಂತ ಅರ್ಥ.

ನಿಮಗೆ ಲೇಖನ ಇಷ್ಟವಾದಲ್ಲಿ ಕರಮುಕ್ತರಾಗಿ ಸುಮ್ಮನಾಗಿರದೇ ಕರಭರಿತರಾಗಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಎಂದು ಕರಮುಗಿದು ಕೇಳಲೇ?

English summary
Today's column topic is hands and spiritual aspects of it...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X