• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತು ಮಾತಿನ ಬಗ್ಗೆ ಪೀಠಿಕೆ ಸಾಕು, ಇನ್ನು ನೀವು ಶುರುಹಚ್ಚಿಕೊಳ್ಳಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಯಂಡಮೂರಿಯವರ ಮತ್ತು ವಂಶಿ ಆಧಾರಿತ 'ದುಡ್ಡು ದುಡ್ಡು ದುಡ್ಡು'ಗೂ, ಫಣಿ ರಾಮಚಂದ್ರರ 'ದುಡ್ಡು ದುಡ್ಡು ದುಡ್ಡು, ಟ್ರಿಣ್ ಟ್ರಿಣ್ ಟ್ರಿಣ್, ಮದುವೆ ಮದುವೆ ಮದುವೆ' ಇತ್ಯಾದಿಗಳಿಗೂ "ಮಾತು ಮಾತು ಮಾತು" ಬಗೆಗಿನ ನಾಲ್ಕು ಮಾತುಗಳಿಗೂ ಯಾವುದೇ ಸಂಬಂಧ ಕಂಡಲ್ಲಿ ಅದು ಕಾಕತಾಳೀಯ ಮಾತ್ರ. ಜಗತ್ತು ಭಯಂಕರ ಸೂಕ್ಷ್ಮವಾಗಿದೆ. ಏನೇ ಮಾತನಾಡಿದರೂ disclaimer ಹಾಕಲೇಬೇಕು.

ಮಾತು ಎಂಬುದು ಒಬ್ಬರು ತಮ್ಮ ಮನಸ್ಸಿನಲ್ಲಿದ್ದಿದ್ದನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳುವುದಕ್ಕೆ ಬಳಸುವ ಸಾಧನ ಮಾತ್ರವಾಗಿದ್ದರೆ ಇಂದಿಗೆ ಭಾಷೆಯ ಬಗೆಗಿನ ಹೋರಾಟ ಇರುತ್ತಿರಲಿಲ್ಲ. ಒಂದು ಭಾಷೆ ಎಂಬುದು ಆ ನಾಡಿನ ಮಣ್ಣಿನ ವಾಸನೆಯನ್ನು ಪರೋಕ್ಷವಾಗಿ ಹೊತ್ತಿರುತ್ತದೆ ಮತ್ತು ಸೊಗಡನ್ನು ಹೊರಸೂಸುತ್ತಲೇ ಇರುತ್ತದೆ. ಮೂಲ ಹೋರಾಟ ಬರೀ ಭಾಷೆಯನ್ನು ಉಳಿಸಿ ಬೆಳೆಸಿ ಎಂಬ ಮಾತನ್ನೇ ಕೇಳುತ್ತಿದ್ದರೂ ಅದರ ಹಿಂದಿನ ಉದ್ದೇಶ ಭಾಷೆಯ ಮತ್ತು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಎಂದೇ. ಇರಲಿ ಬಿಡಿ, ತುಂಬಾ ಸೀರಿಯಸ್ಸಾಗೋದು ಬೇಡ!

ಗುರು-ಶಿಷ್ಯರು : ಒಂದಷ್ಟು ಆಟ, ಹಲವಷ್ಟು ಪಾಠ!

ಮೊದಲಿಗೆ ವಾತಾವರಣ ತಿಳಿಯಾಗಿಸುವ ಮಾತುಗಳ ಮೋಡಿ, ಮಾತಿನ ವರಸೆ, ಮಾತನಾಡಿ ಗೊಂದಲಕ್ಕೆ ನೂಕುವ ಒಂದಿಷ್ಟು ಸಾಂಪಲ್ ನೋಡೋಣ.

ಆಸ್ಪತ್ರೆ ಬೆಡ್ ಮೇಲೆ ನಮ್ಮ ಚಿಕ್ಕ ತಾತ ಮಲಗಿದ್ದಾರೆ. ಡಾಕ್ಟರ್ ಒಳಗೆ ಬಂದವರು "ತಾತಾ, ನಿಮಗೇನೂ ಆಗಿಲ್ಲ. ನೆಮ್ಮದಿಯಾಗಿರಿ. ನಾನಿದ್ದೀನಲ್ಲಾ, ಸೇಫಾಗಿ ಹೋಗ್ತೀರಾ". ಅದನ್ನು ಕೇಳಿದ ನಮ್ಮ ತಾತ "ನೀನು ಡಾಕ್ಟ್ರು ಅಂತ ಆದ ಮೇಲೆ ಕ್ಷೇಮವಾಗಿ ಹೋಗೋದ್ ಗ್ಯಾರಂಟಿ ಆಯ್ತು ಕಣಪ್ಪಾ. ಆದರೆ ಎಲ್ಲಿಗೆ ಅನ್ನೋದು ಅವನು ನೋಡ್ಕೋತಾನೆ" ಅಂದ್ರು!

ಚಿಕ್ಕಂದಿನಲ್ಲಿ ನಡೆದ ಒಂದು ಘಟನೆ. ಹೀಗೆ ಅಲ್ಲಿನ ಸಂಘದವರು ಒಂದು ಸಮಾರಂಭಕ್ಕೆ ವೀಣೆ ನುಡಿಸುವ ಕಲಾವಿದೆಯನ್ನು ಕರೆಸಿದ್ದರು. ಕಾರ್ಯಕ್ರಮದ organizer ಎಷ್ಟರ ಮಟ್ಟಿಗೆ ಉತ್ಸುಕರಾಗಿದ್ದರು ಎಂದರೆ "ಇಂದು ನಮ್ಮ ಶ್ರೀಮತಿ ವಾಣಿಯವರು ವೀಣೆಯನ್ನು ನುಡಿಸಲು ಬಹಳ ಕಷ್ಟಪಟ್ಟು ಬಂದಿದ್ದಾರೆ. ಅವರಿಗೆ ನಮ್ಮ ಸ್ವಾಗತ. ಈಗ ಹೆಚ್ಚು ಸಮಯ ನಾನು ತೆಗೆದುಕೊಳ್ಳುವುದಿಲ್ಲ. ನಮ್ಮ ಶ್ರೀಮತಿಯವರು ನಿಮ್ಮ ಮುಂದೆ" ಎಂದರು. ಇಡೀ ಹಾಲ್'ನಲ್ಲಿ ಸಿಕ್ಕಾಪಟ್ಟೆ ಗೊಂದಲ. ಆಗ ವಾಣಿಯವರು ಮೈಕ್ ತೆಗೆದುಕೊಂಡು "ಎಲ್ಲರಿಗೂ ನಮಸ್ಕಾರ. ಮೊದಲಿಗೆ ನಾನು ಇವರ ಶ್ರೀಮತಿ ಅಲ್ಲ! ವೀಣೆಯನ್ನು ಆಟೋದಲ್ಲಿ ತಂದಿದ್ದರಿಂದ ಕಷ್ಟಪಟ್ಟು ಬರಲಿಲ್ಲ ಆದರೆ ನಾನು ಇಷ್ಟಪಟ್ಟು ಬಂದೆ!" ಎಂದರು.

ಸುಂದರ ಸ್ವಪ್ನದಲ್ಲಿ ಮುಳುಗಿದ್ದ ಸುಬ್ಬನ ದಂತ ಭಗ್ನ!

ಮಾತನಾಡುವಾಗ ಸಿಕ್ಕಾಪಟ್ಟೆ ದೊಡ್ಡ ಪದಗಳನ್ನು ಬಳಸಬೇಕಿಲ್ಲ. ಸರಳತೆ ಕಾಪಾಡಿಕೊಂಡರೆ ಸಾಕು. ಅದು ಬರವಣಿಗೆಗೂ ಸಲ್ಲುತ್ತದೆ.

ಈಗ ಮಾತಿನಲ್ಲಿ ಎಷ್ಟು ವಿಧ ಅಂತೇನಾದ್ರೂ ಒಂದು ಪ್ರಶ್ನೆಯು, ಪ್ರಶ್ನೆಪತ್ರಿಕೆಯನ್ನು ಅಲಂಕರಿಸಿದರೆ ಅದಕ್ಕೆ ಉತ್ತರ ನನಗಂತೂ ಗೊತ್ತಿಲ್ಲ. ನನಗೆ ಗೊತ್ತಿರೋ ವಿಧಗಳು ಅಥವಾ ವೈವಿಧ್ಯಗಳು ಎಂದರೆ ಪಿಸುಮಾತು, ವಟಗುಟ್ಟುವ ಮಾತು, ಕಣ್ಣಂಚಿನ ಮಾತು, ಅರ್ಥಗರ್ಭಿತ ಮಾತು, ಅರ್ಥಹೀನ ಮಾತು ಇತ್ಯಾದಿ ಇತ್ಯಾದಿ. ನಾನು ಈ ಯಾವ ಪಂಗಡಕ್ಕೆ ಸೇರಿದವನು ಎಂದು ಗೊತ್ತಿಲ್ಲ! ಈ ನಡುವೆ ನಮ್ಮ ಬುದ್ದಿ ಓಡೋದೇ ಹೀಗೆ. ಗ್ಲೋಬಲ್ ಆಗಿ ನಾವು ಯೋಚಿಸದೆ, ಪಂಗಡ ಮಾಡಿ ಯೋಚಿಸೋದು. ಈ ವಿಷಯ ಇನ್ನೊಂದು ಬಾರಿ ತೆಗೆದುಕೊಳ್ಳೋಣ.

ಕೆಲವರ ಮಾತು healing. ಅಂಥವರು ಮಾತನಾಡ್ತಾ ಇದ್ರೆ ಕೇಳೋಣ ಎನ್ನಿಸುತ್ತೆ. ಕೆಲವರ ಮಾತು soothing. ಮಧ್ಯಾಹ್ನ ಊಟವಾದ ಮೇಲೆ ಮೀಟಿಂಗ್ ಇಟ್ಟುಕೊಂಡು ಇಂಥವರು ಮಾತನಾಡ್ತಾ ಇದ್ರೆ... ಅಯ್ಯೋ ಮಲಗೇಬಿಟ್ರಾ? ಏಳಿ ಏಳಿ.. ಕೆಲವರು ಮಾತನಾಡ್ತಾ ಇದ್ರೆ ಕೇಳುಗನ ದೇಹದ ಪ್ರತಿ ಅಂಗಾಂಗವೂ 'ಯೋ ನಿಲ್ಸಯ್ಯಾ' ಅಂತ ಚೀರಿಡುತ್ತಾ ಇರುತ್ತದೆ. ನಮ್ಮದೇ ಟೀಮಿನ ಮಹಾನ್ ಮಹಿಳೆಯ ಮಾತು ಹೇಗಪ್ಪಾ ಎಂದರೆ ಆಕೆಗೆ ಶುರು ಮಾಡೋದು ಗೊತ್ತು. ಆಕೆಯ ಮಾತು, ನಿಮ್ಮ ಮಾತು ಎಲ್ಲವನ್ನೂ ಆಕೆಯೇ ಆಡುತ್ತಾಳೆ. ಆಕೆ ಹೇಳೋ ಪ್ರಕಾರ, ನಿದ್ದೆಯಲ್ಲೂ ಆಕೆಗೆ ಮಾತನಾಡುವ ಚಟವಿದೆಯಂತೆ. ಚಟ ಅನ್ನೋ ಪದ ಸರಿ ಇಲ್ಲ ಹಾಗಾಗಿ ಹವ್ಯಾಸ ಎಂದರೆ ಹೇಗೆ?

ಇವರು ಆಡುವ ಕ್ರಿಕೆಟ್ಟಿಗೆ ನಾವೇಕೆ ಟೆನ್ಷನ್ ಮಾಡ್ಕೊಬೇಕು?

ಗುಂಪಿನಲ್ಲಿ ಗೋವಿಂದ ಎನ್ನುವ ಹರಟೆಯ ಮಾತಿನ ಲಹರಿಯಲ್ಲಿ ಬೋಂಡಾ-ಕಾಫಿಯ ಮಧ್ಯೆ ಏನೇನೋ ಮಾತುಗಳು ಹರಿದಾಡುತ್ತಿದ್ದರೂ ಅಡ್ಡಿಯಿಲ್ಲ. ಒಬ್ಬರು ನುಡಿಯುವಾಗ ಅವರ ಮಾತಿನ ಮೇಲೆಯೇ ಮತ್ತೊಬ್ಬರು ನುಡಿದರೂ ಅಡ್ಡಿಯಿಲ್ಲ. ಆದರೆ ಒಂದು ಮೀಟಿಂಗ್ ಆಗಲಿ ಅಥವಾ ಒಬ್ಬರು ನಿಮ್ಮಲ್ಲಿ ಏನೋ ಸಮಸ್ಯೆ ಹೇಳಿಕೊಳ್ಳುತ್ತಿರುವಾಗಲಿ 'ಮಾತು' ಬಹಳ ಪ್ರಾಮುಖ್ಯತೆ ಪಡೆಯುತ್ತದೆ. Listen, Understand, Speak ಎಂಬುದು ಅಲ್ಲಿ ಮೂಲಮಂತ್ರವಾಗುತ್ತದೆ. ಕೇಳಿಸಿಕೊಳ್ಳೋದು ಬೇರೆ, ಕೇಳಿಸಿಕೊಂಡು ಅರ್ಥೈಸಿಕೊಂಡು ನಂತರ ಸಲಹೆ ನೀಡುವುದಕ್ಕೆ ತರಬೇತಿ ಬೇಕು. ಅದನ್ನೇ Counselling ಅನ್ನೋದು, ಅಲ್ಲವೇ? ಕೇಳಿಸಿಕೊಂಡು, ಅರ್ಥೈಸಿಕೊಂಡು, ಬರೆದು ನಿಮ್ಮ ಮುಂದೆ ಇಟ್ಟ 'ಮಹಾಕಾವ್ಯ' ಯಾವುದು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಹಾಗಾಗಿಯೇ ಮಹಾಭಾರತ ಇಂದಿಗೂ ಪೂಜನೀಯ.

ನನ್ನ ಮಾತು ಹೇಗೋ ಏನೋ ಗೊತ್ತಿಲ್ಲ. ನನ್ನ ಯತ್ನ ಹೇಗಪ್ಪಾ ಎಂದರೆ ಬರವಣಿಗೆಯಲ್ಲಿ ಮಾತನಾಡೋ ಪರಿ. ಬರೆದಿದ್ದನ್ನು ಓದುವಾಗ ಅದು ಎದುರಿಗೆ ನಿಂತು ಮಾತನಾಡಿದಂತೆ ಭಾಸವಾಗಬೇಕು. ಓದುಗನು ಆ ಒಂದು ಯಾನದಲ್ಲಿ ಪಯಣಿಗನಾಗಿ ಸಾಗಬೇಕು. ತನ್ನ ಅನುಭವವನ್ನು ಓದುವಿಕೆಯಲ್ಲಿ ಸೇರಿಸಿಕೊಂಡು ಅನುಭವಿಸಬೇಕು. ಇದರ ಪ್ರಯತ್ನದಲ್ಲೇ ಇನ್ನೂ ಇದ್ದೇನೆ.

ಮಾತುಗಳ ಪಂಗಡವನ್ನೇ ಮುಂದುವರೆಸಿದರೆ, ಹೃದಯದಿಂದ ಬಂದ ಮಾತು, ನಾಲಿಗೆ ತುದಿಯ ಮಾತು, ಬೆರಳ ತುದಿಯ ಮಾತು. ಇಂಥಾ ಎಲ್ಲಾ ವೈಖರಿಗಳನ್ನೂ ಸಾಮಾಜಿಕ ತಾಣದಲ್ಲಿ ಕಾಣಬಹುದು. ಕೆಲವೊಮ್ಮೆ ಯಾವುದೋ ಒಂದು ಎಳೆ ಎಲ್ಲೋ / ಹೇಗೋ ಶುರುವಾಗಿ, ವಾಕ್-ಸಮರಕ್ಕೆ ತಿರುಗಿ, ನಂತರ ಅಲ್ಲಿಯವರೆಗೂ ಸ್ನೇಹಿತರಾಗಿದ್ದವರು ವೈರಿಗಳಾಗಿ ವಾಕ್-ಔಟ್ ಆಗುವ ಪರಿ ಸರ್ವೇ ಸಾಮಾನ್ಯ. ನಾನೇನೂ survey ಮಾಡಿಲ್ಲ. ಕಾಮನ್ ಎನ್ನುವ ಪದ ಸರ್ವೇಸಾಮಾನ್ಯ ಎಂದೇಕೆ ತರ್ಜುಮೆಯಾಗಿದೆ ಎಂಬೋದು ಬೇರೆ ವಾಗ್ವಾದ. ಥತ್! ವಾಕ್ ಇರಲಿ ವಾದ ಬೇಡ!

ಟ್ವಿಟ್ಟರ್ ಲೋಗೋ ಕಂಡಾಗ ಅದು ಚಿಲಿಪಿಲಿ ಎಂದುಕೊಂಡಿದ್ದೆ. ಈಗೀಗ ಅದನ್ನು 'ಟ್ವಿಟ್ಟರ್ ಸಮರ' ಎಂದೇ ಕರೆಯುತ್ತಾರೆ. ಟ್ವಿಟ್ಟರ್'ನಲ್ಲಿ ಹೋದ ಮಾನ ಫೇಸ್ಬುಕ್'ನಲ್ ಬಡ್ಕೊಂಡ್ರೂ ಬರೋಲ್ವಂತೆ ಅಂತ ಯಾರೋ ಅಂದ್ರು. ನನಗೇನೋ ಮಾನ ಹೋದರೆ ಮಾನ್ಯ'ತೆ ಹೋಯ್ತು ಅಂತಲೇ! ಎಲ್ಲಿ ಹೋದರೇನು?

ಹಿಂದೊಮ್ಮೆ ನನ್ನನ್ನ ಹಿರಿಯರೊಬ್ಬರು ಕೇಳಿದರು 'ಈ ಫೇಸ್ಭುಕ್' ಅಂದ್ರೇನು ಅಂತ. ನಾನಂದಿದ್ದು "ಅಂತರಂಗದ ಅಂತ:ಪುರದಲ್ಲಿ ಅಡಗಿರುವ ಅಳಲನ್ನು ಅನುದಿನವೂ ಅನುಕ್ಷಣವೂ ಅಂದದ ಅಕ್ಷರಗಳಲ್ಲಿ ಅಲವತ್ತುಕೊಳ್ಳುವ ಅಡ್ಡಾ" ಎಂದೆ. "ಅಬ್ಬಬ್ಬಾ ಏನು ಮಾತು?" ಅಂತಾರೆ ಅಂದುಕೊಂಡು ಕಾಲರ್ ಸರಿಪಡಿಸಿಕೊಂಡು ನಿಂತೇ. "ಮುಂಚೆ ಬ್ಲೇಡ್ ಹಾಕ್ತಿದ್ದೀ, ಈಗ ಗರಗಸ ಆಗಿದ್ದೀ. ರಕ್ತ ಹರಿಸಿಬಿಟ್ಯಲ್ಲೋ!" ಅಂತಂದು ಮುಂದೆ ಹೋದರು. ಬಿಡಿ, ಬೈಗುಳವೂ ಮಾತೇ ತಾನೇ?

ಬೈಗುಳ ಎಂದ ಮೇಲೆ ಒಂದು ಘಟನೆ ನೆನಪಾಯ್ತು. ಕೆಲವು ವರುಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದೆ. ರೈಲ್ವೆ ಸ್ಟೇಷನ್ ಬಳಿ ಆಟೋಗೆ ನಿಂತಿದ್ದಾಗ ಅಲ್ಲೇನೋ ಜಗಳ ಶುರುವಾಯ್ತು. ಪುಂಖಾನುಪುಂಖವಾಗಿ ಜನ್ಮಜಾಲಾಡೋ ಪದಗಳು ಎರಡೂ ಕಡೆಯವರ ಬಾಯಿಂದ ಹರಿದಾಡುತ್ತಿತ್ತು. ನನ್ನ ದೌರ್ಭಾಗ್ಯವೋ ಏನೋ ಇಂಥಾ ಮಾತುಗಳನ್ನು ದಿನನಿತ್ಯದಲ್ಲಿ (ಮನೆಯಲ್ಲಿ ಅಲ್ಲ) ಹೊರಜಗತ್ತಿನಲ್ಲಿ ಕೇಳಿ ಬೆಳೆದಿದ್ದುದರಿಂದ ತೀರಾ ಏನೇನೋ ಅನ್ನಿಸಲಿಲ್ಲ, ಆದರೆ ತುಂಬಾ ದಿನವಾಗಿತ್ತು ಅಂತ ಅನ್ನಿಸಿದ್ದು ನಿಜ. ಆದರೆ ಕನ್ನಡ ಬಲ್ಲ ನನ್ನ ಮಗ ಜೊತೆಗಿದ್ದ ಎಂಬುದು ನನ್ನ ಯೋಚನೆಯಾಗಿತ್ತು. ಆಟೋ ಹತ್ತಿದ ಮೇಲೆ ಅವನು ಕೇಳಿದ್ದು ಒಂದೇ ಪ್ರಶ್ನೆ "which language was that ಅಪ್ಪಾ?" ಸದ್ಯ ಬಚಾವಾದೆ!

ಮಾತುಗಳನ್ನು ಎಲ್ಲೆಲ್ಲಿ ಆಡುತ್ತಾರೆ? ಸಕತ್ ಪ್ರಶ್ನೆ! ಮಾತುಗಳನ್ನು ಬಾಯಲ್ಲಿ ಆಡುತ್ತಾರೆ! ಇದು ಸಾಮಾನ್ಯ ಉತ್ತರ! ಎಲ್ಲೆಲ್ಲಿಂದ ಬೇಕಾದ್ರೂ ಆಡುತ್ತಾರೆ ಎಂಬುದು ತರಲೆ ಉತ್ತರ! ಕೆಲವರು ಕೈಯಲ್ಲೇ ಮಾತಾಡೋದು! ಕಣ್ಣಲ್ಲಿ, ಕೈಬೆರಳಲ್ಲಿ, ಕಾಲ್ಬೆರಳಲ್ಲಿ, ತುಟಿಯಲ್ಲಿ, ಅಧರದಲ್ಲಿ ಮಾತುಗಳು ಹೊರಹೊಮ್ಮುತ್ತದೆ ಎಂಬುದು ಕವಿವಾಣಿ. "ನೀನಿಲ್ಲದೆ ಮಾತೂ ಮೌನ, ನೀನಿದ್ದೆಡೆ ಮೌನವೂ ಮಾತೇ" ಎಂಬುದು ಪ್ರಿಯಕರ ಪ್ರಿಯತಮೆಗೆ ನುಡಿಯುವ ನುಡಿಮುತ್ತುಗಳು. ಈ ಮುತ್ತಿನ ಬಗೆಗಿನ ಮಾತು ಅಥವಾ ಮುತ್ತಿನಂಥಾ ಮಾತುಗಳ ಬಗ್ಗೆ ಇನ್ನೊಂದೆಡೆ ಹೇಳಿದ್ದೆ. ಈಗ ಬೇಡ.

ಮಾತುಗಳನ್ನು ಎಲ್ಲೆಲ್ಲಿ ಆಡುತ್ತಾರೆ ಎಂಬ ವಿಷಯಕ್ಕೆ ಮತ್ತೆ ಬಂದರೆ, ಎಲ್ಲಿ ಬೇಕೋ ಅಲ್ಲಿ ಆಡದೆ ಎಲ್ಲೆಲ್ಲಿಯೂ ಮಾತನಾಡುತ್ತಾರೆ ಎಂದರೆ ಅದು ಸಮಂಜಸವಾಗಿರುತ್ತದೆ. ನಾಲ್ಕು ಜನರ ಮಧ್ಯೆ ಏನೆಲ್ಲಾ ಮಾತನಾಡುವ ಒಬ್ಬರನ್ನು ಮೈಕ್ ಕೊಟ್ಟು, ಸ್ಟೇಜ್ ಹತ್ತಿಸಿ ಈಗ ಮಾತಾಡು ಅನ್ನಿ, ಕೆಲವೊಮ್ಮೆ ಎರಡು ವಾಕ್ಯ ಹೇಳಿದರೆ ಅದು ಜಾಸ್ತಿ. ಮೊನ್ನೆ ನಡೆದ ಒಂದು ಪುಟ್ಟ ಸಂದರ್ಭ ಹೀಗಿತ್ತು. ಒಬ್ಬರು 'ನೀವು ಮೈಕ್ ಟೆಸ್ಟ್ ಮಾಡಿ ನಾನು ಹಾಲ್ ತುದಿಯಲ್ಲಿ ನಿಂತು ಕೇಳಿಸಿಕೊಳ್ತೀನಿ' ಅಂದರು. ನಾನು "ಒಂದು ಸಾರಿ ಯೋಚನೆ ಮಾಡಿ ಹೇಳಿ, ನನ್ನ ಕೈಗೆ ಮೈಕ್ ಬಂದರೆ ಅತಿಥಿಗಳಿಗೆ ಸಮಯಾವಕಾಶ ಕಡಿಮೆ ಆಗುತ್ತೆ' ಅಂತ. 'ನೀವು ಹಾಲ್'ನ ಕೊನೆಗೆ ಹೋಗಿ ನಾನೇ ಟೆಸ್ಟ್ ಮಾಡ್ತೀನಿ' ಅಂದರು ಅವರು!

ಆಟೋದಲ್ಲಿ, ಓಲಾದಲ್ಲಿ ಕೂತು ಮಾತು. ಕೆಲವೊಮ್ಮೆ ಎಂಥಾ ಮಾತುಗಳೂ ಎಂದರೆ ಗಾಡಿ ಓಡಿಸುವವನೇ ಸಲಹೆ ಬೇಕಾದರೂ ಕೊಡುತ್ತಾನೆ. Safety, security ಎಂದೆಲ್ಲಾ ಬಾಯಿಬಡ್ಕೊಳ್ಳೋ ನಮ್ಮ ಜನ ಏನೇನೋ ಮಾತುಗಳನ್ನು ಆಟೋಗಳಲ್ಲಿ ಮಾತನಾಡುತ್ತಾರೆ, ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಾರೆ ಎಂದರೆ ಖೇದವಾಗುತ್ತದೆ. Performance ಸಮಯದಲ್ಲಿ ಮಾತು. ಇದು ಬಾಲಿವುಡ್ ಹಾಡೇ ಆಗಿರಬಹುದು ಆದರೆ ಸೂಕ್ಷ್ಮವಾಗಿ "ರಿಮ್ ಜಿಮ್ ಗಿರೆ ಸಾವನ್' ಹಾಡನ್ನು ಗಮನಿಸಿ. ಹಾಡುಗಾರನ ಹಾಡಿನ ಮಧ್ಯೆ ಆ ಸೈಡ್ ನಟಿ ಮತ್ತು ಹೀರೋಯಿನ್'ದು ಅದೇನು ವಟಗುಟ್ಟಿಂಗ್? ನಾನು ಈ ಹಾಡನ್ನು ನೋಡೋದಕ್ಕಿಂತ ಕೇಳೋದೇ ಹೆಚ್ಚು. ನಾನೇ ಆ ಹಾಡುಗಾರನಾಗಿದ್ರೆ ಹಾರ್ಮೋನಿಯಂ ತೊಗೊಂಡ್ ಅವರಿಬ್ಬರ ತಲೆಯ ಮೇಲೆ ಕುಟ್ಟಿಬಿಡ್ತಿದ್ದೆ.

ಸಂಗೀತ ಕಚೇರಿಯ ಮಧ್ಯೆ ಮಾತು - ಶಂಕರಾಭರಣಂ ಸಿನಿಮಾ ದೃಶ್ಯವೇ ಕಣ್ಣೆದುರಿಗೆ ಮೂಡಿ ಬರುತ್ತದೆ. ಅದು ಸಿನಿಮಾ ಬಿಡಿ ಅಂತ ನೀವೆಂದರೆ ನೀವು ಯಾವುದೇ ಕಛೇರಿ ಹೋದರು ಇದೇ ಕಥೆ. ಏಸುದಾಸ್ ಹಾಡ್ತಿರ್ತಾರೆ ಆಗ ನಿಮ್ಮ ಪಕ್ಕದವರು 'ಮನೆಯಲ್ಲಿ ಎಲ್ರೂ ಆರಾಮಾನಾ?' ಅಂತಾರೆ.

ಬಹುಶ: ನನ್ನ ಮಾತು ಜಾಸ್ತಿ ಆಯ್ತು ಅನ್ನಿಸುತ್ತಿದೆ. ಸದ್ಯಕ್ಕೆ 'ಮಾತು ಮಾತು ಮಾತು' ಬಗ್ಗೆ ಇದಿಷ್ಟು ಪೀಠಿಕೆ ಸಾಕು. ಈಗ ಈ ಮಾತುಗಳನ್ನು ಮುಂದುವರೆಸುವ ಸರದಿ ನಿಮ್ಮದು.

English summary
Speak only when you feel your words are better than your silence. There is thin line between silence and speaking. A beautiful write up in Kannada by Srinath Bhalle from Richmond, USA on the art of speaking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more