ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸುಂದರ ವದನ 'ನವರಸ'ಗಳ ಆಗರ, ಸ್ಮೈಲ್ ಪ್ಲೀಸ್!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ನವರಸಗಳ ಆಗರ ಈ ವದನ. ಈ ಮುಖಾರವಿಂದದಲ್ಲಿ ನಡೆಯೋ ಚಟುವಟಿಕೆಗಳಲ್ಲಿ ಹತ್ತು ಪ್ರತಿಶತ ಕೂಡ ನಮ್ಮ ಅರಿವಿಗೆ ಬರೋದಿಲ್ಲ ಎಂದರೆ ಇನ್ನೆಂಥಾ ಅದ್ಬುತ ಈ ನಮ್ಮ ವದನ ಅಲ್ವೇ? Mark Zuckerberg ಇಟ್ಟಿರೋ ಹೆಸರಿನ ಹಿಂದಿನ ಈ ರಹಸ್ಯವಲ್ಲದ ರಹಸ್ಯ ಈಗ ಬಯಲಾಯಿತು ಎನ್ನಬಹುದೇ?

ಎದುರಿಗಿರುವವರು ಆಡಿದ ಮಾತು ನಿಮಗೆ ಸರಿ ಹೋಗದೆ ಇದ್ದಲ್ಲಿ, ಅಥವಾ ಯಾರೋ ಧರಿಸಿದ್ದ ಶರಟಿನ ಮೇಲೀನಾ ಗೊಜ್ಜಿನ ಕಲೆ, ಅಥವಾ ಯಾರೋ ಧರಿಸಿದ್ದ ದಿರಿಸು ಸ್ವಲ್ಪ ಹೆಚ್ಚೇ ಎನಿಸುವಷ್ಟು ಮಾದಕವಾಗಿದ್ದಲ್ಲಿ ಬಾಯಿಬಿಟ್ಟು ಹೇಳಲೇಬೇಕಾದ ಅವಶ್ಯಕತೆ ಇರುವುದಿಲ್ಲ. ಮಾತೇ ಆಡದೆ ಆ ಮುಖ ನೂರು ಮಾತು ಆಡಿರುತ್ತದೆ.

ನಿಮ್ಮೆಲ್ಲರಿಗೂ ಅರಿವಿರುವ ಈ ಒಂದು ವೈಜ್ಞಾನಿಕ ವಿಚಾರದಿಂದ ಆರಂಭಿಸಿ ವದನದ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.

ಮುಖವನ್ನು ಕಿವುಚಲೋ ಅಥವಾ ಸಿಟ್ಟು ಮಾಡಿಕೊಳ್ಳೋ ಬಳಕೆಯಾಗುವ ನರಗಳು 43. ಆದರೆ ತಿಳಿನಗೆ ಚೆಲ್ಲಲು ಬೇಕಾಗುವುದು ಕೇವಲ 17 ಅಂತ. ಮತ್ತೆ ಕೆಲವರು ಹೇಳುತ್ತಾರೆ ಇದು ತಪ್ಪು. ಅದು 43 ಅಲ್ಲ 62, 17 ಅಲ್ಲ 26. ಹೋಗಲಿ ಬಿಡಿ ವ್ಯಾಜ್ಯ ಯಾಕೆ? ಸಾರಾಂಶ ಇಷ್ಟೇ, ತಿಳಿನಗೆಗೆ ಬೇಕಾಗೋದು ಕೆಲವೇ ನರಗಳು, ಹಾಗಾಗಿ ನಗ್ತಾ ನಗ್ತಾ ಇರಿ ಅಂತ. ಸಿಡುಕು ಮೋರೆ ಸುಬ್ಬಣ್ಣ ಹೇಳ್ತಾನೆ "ಸ್ವಾಮಿ, ಬಳಸದೇ ಬಳಸದೇ ಬಾಲ ಕಳ್ಕೊಂಡ್ವಿ! ನಿಮ್ಮ ಮಾತು ಕೇಳಿ ಸದಾ smile ಮಾಡ್ಕೊಂಡಿದ್ರೆ ಒಂದು ದಿನ ಮುಖದ ಮೇಲಿನ ನರಮಂಡಲ ತೆಳ್ಳಗಾಗಿ ಮುಖಚರ್ಯೆ ಏನೇನೋ ಆದೀತು!" ಇಂಥವರಿಗೆ ಏನು ಹೇಳೋಣ?

Smile openly and make others also smile

ಹತ್ತು ಜನ, ಹತ್ತು ದಿನ ನಗ್ತಾ ನಗ್ತಾ ಇದ್ರೆ ಮುಖದ ಮೇಲಿನ ನರಮಂಡಲ ಬಿದ್ದು ಹೋಗೋಲ್ಲ. ನಾ ಹೇಳಿದ ಹಾಗೆ ಎಲ್ಲರೂ ಮಾಡಿದಲ್ಲಿ ಸ್ವಲ್ಪ ಶೇಪ್ ಬದಲಾಗಬಹುದು ಅಷ್ಟೇ. ಮುಂದೆಂದೋ ಒಂದು ದಿನ ಅರ್ಥಾತ್ ಇಂದಿನಿಂದ ಸಾವಿರ ವರ್ಷದಲ್ಲಿ ಮನುಜನ ಮಾಡಲ್ ಬದಲಾದಾಗ ಚೇಂಜ್ ಆಗಬಹುದು. ಅಲ್ಲಿಯವರೆಗೆ ಯೋಚನೆ ಮಾಡೋದು ಬಿಟ್ಟು, ಇಂದಿನ ನಿಮ್ಮ ಆರೋಗ್ಯಕ್ಕೆ smile ಮಾಡಿ ಅಂತ.

ವದನದ behavior ಪ್ರಾಮುಖ್ಯತೆ ಹೇಗೆ ಅರಿವಿಗೆ ಬರುತ್ತೆ ಎಂದರೆ ಒಂದು ಉದಾಹರಣೆ ತೆಗೆದುಕೊಳ್ಳಿ. ಒಂದು ಅರಮನೆಯ ದೃಶ್ಯ. ಇಬ್ಬರು ಕತ್ತಿ ಹಿರಿದು ಹಲವಾರು ಸೈನಿಕರೊಂದಿಗೆ ಹೋರಾಡುತ್ತಿದ್ದಾರೆ. ಇಬ್ಬರೂ ಕತ್ತಿಯ ಹಿರಿದಿರುವ ಶೈಲಿ ಒಂದೇ, ದಿರಿಸೂ ಒಂದೇ ರೀತಿ ಅಂದುಕೊಳ್ಳಿ. ಒಬ್ಬಾತ ಅಣ್ಣಾವ್ರು. ಹೆಸರು ಕೇಳಿದ ಕೂಡಲೇ ನಿಮಗೇ ಅರಿವಿಲ್ಲದಂತೆ ವೀರರಸ ನಿಮ್ಮ ಮುಂದೆ ನಿಲ್ಲುತ್ತದೆ. ಮತ್ತೊಬ್ಬರು ನಗೆಸಾಮ್ರಾಟ್ ನರಸಿಂಹರಾಜು ಎಂದ ಕೂಡಲೇ ಹಾಸ್ಯರಸ ಬರುತ್ತದೆ. ಇಬ್ಬರ ಕೈಯಲ್ಲೂ ಇರುವುದು ಆಯುಧವೇ ಆದರೂ ಆ ವದನ ನೆನಪಿಗೆ ಬಂದ ಕೂಡಲೇ expression shift ಆಗುತ್ತದೆ.

ಮಾಡಲಿಂಗ್ ಇಂಡಸ್ಟ್ರಿಯಲ್ಲಿ ಈ ವದನ ಅತೀ ಪ್ರಾಮುಖ್ಯತೆ ವಹಿಸಿದರೂ ಮಿಕ್ಕ ಅಂಗಗಳೂ ಅಷ್ಟೇ ಮುಖ್ಯವಾಗುತ್ತದೆ. ತೀರಾ ಡೀಟೇಲ್ಸ್'ಗೆ ಹೋಗದೆ ಒಂದೆರಡು ಮಾತುಗಳಲ್ಲಿ ಹೇಳ್ತೀನಿ. ಮೂವತ್ತು ದಿನಗಳಲ್ಲಿ ಕೊಬ್ಬು ಇಳಿಸಿರಿ ಎಂಬ ಜಾಹೀರಾತಿನಲ್ಲಿ ಕರೀನಾ ಕಪೂರಿಗೆ ಏನು ಕೆಲಸ? ಸ್ಲಿಮ್ ಆಗಿ ಅನ್ನೋ ಜಾಹೀರಾತಿಗೆ ದೊಡ್ಡ ಹೊಟ್ಟೆ ಇರಬೇಕು.

ಹೀಗೊಂದು ಕನ್ನಡ ಸಿನಿಮಾ . . . ಬಹುಶ: 'ಗಣೇಶ ಐ ಲವ್ ಯು' ಇರಬೇಕು. ಹುಡುಗ - ಹುಡುಗಿ ಒಬ್ಬರನ್ನೊಬ್ಬರು ನೋಡಿರುವುದಿಲ್ಲ. ಇಲ್ಲಾ, ಆಗಿನ್ನೂ ಸಾಮಾಜಿಕ ತಾಣ ಅಂತ ಇರಲಿಲ್ಲ. ಪತ್ರ ಮುಖೇನ ಪರಿಚಯವೋ ಏನೋ, ಅದು ಇಲ್ಲಿ ಮುಖ್ಯವಲ್ಲ ಬಿಡಿ. ಹೀಗೇ ಪರಿಚಯ ಬಲಿತು ಒಬ್ಬರನ್ನೊಬ್ಬರು ಪ್ರೇಮಿಸುತ್ತಿದ್ದೇವೆ ಎಂಬ ನಂಬಿಕೆ ಮೂಡಿ ಭೇಟಿಯಾಗಲು ಬಯಸುತ್ತಾರೆ. ಆದರೇನು ಮಾಡೋದು, ಇಬ್ಬರೂ ಅವರೆಂದುಕೊಂಡಂತೆ ಕುರೂಪಿಗಳು. ಹಾಗಾಗಿ ಭೇಟಿಯಾಗುವ ದಿನ ಹತ್ತಿರ ಬಂದಾಗ ಒಬ್ಬ ಸುಂದರ/ಸುಂದರಿಯನ್ನು ಹುಡುಕಿ ತಮ್ಮ ವೇದನೆ ಹೇಳಿಕೊಂಡು ಅವರನ್ನು ಒಪ್ಪಿಸುತ್ತಾರೆ. ಸಿನಿಮಾ ಬಿಡಿ . . . ದೈಹಿಕವಾಗಿ ಇಬ್ಬರೂ ತಕ್ಕಮಟ್ಟಿಗೆ ಇದ್ದರೂ ಹಲ್ಲುಬ್ಬು, ಮಂದಗಣ್ಣು ಹಾಗಾಗಿ ದಪ್ಪ ಕನ್ನಡಕವೇ ಕುರೂಪ ಎಂದುಕೊಂಡಿದ್ದು ತಪ್ಪು ಎನಿಸುತ್ತದೆ. ಇಡೀ ಒಂದು ಸಿನಿಮಾ ಇದರ ಬಗ್ಗೆಯೇ... ಇಂಥಾ ಸನ್ನಿವೇಶಗಳ, ಸಿನಿಮಾಗಳು ಬೇಕಾದಷ್ಟು ಇದೆ.

Smile openly and make others also smile

ಮುಖಚರ್ಯೆ ಅಥವಾ ಭಾವ ಕುರಿತು ಒಂದು ನೈಜಘಟನೆ ಹೀಗಿದೆ. ಬಹಳ ವರ್ಷಗಳ ಹಿಂದೆ ನಮ್ಮದೇ ಊರಿನಲ್ಲಿ ಒಬ್ಬಾತ ಇದ್ದ. ಒಮ್ಮೆ ಪಾರ್ಕ್'ನಲ್ಲಿ ಮಗನೊಡನೆ ಇದ್ದಾಗ ಅವನೂ ತನ್ನ ಮಗನೊಡನೆ ಅಲ್ಲಿದ್ದ. ಅವನೊಂದಿಗೆ ಮಾತನಾಡುತ್ತಿರುವಾಗ ಆತನ ಮಗ ಅಳುತ್ತಿದ್ದಂತೆ ಕಂಡಿತು ಅಂತ "ನಿನ್ನ ಮಗ ಅಳ್ತಿದ್ದಾನೆ ಹೋಗಿ ನೋಡು ಎಂದೆ". ಅದಕ್ಕವನು ಸಿಡುಕಿ 'hey dude, he is smiling!" ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿದ. ನಾನಂತೂ ಕಾಲೆಳೆವ ಉದ್ದೇಶದಿಂದ ಹೇಳಿದ್ದಲ್ಲ, ಬದಲಿಗೆ ಆ ಮುಖಚರ್ಯೆ ನನ್ನನ್ನು deceive ಮಾಡಿಟ್ಟಿತು ಎನ್ನಬಹುದು.

ಮುಖಚರ್ಯೆಯ ಬಗ್ಗೆ ನಮ್ಮ ಹಾಸ್ಯ ಮಹಾಶಯರು ಹೇಳುವಂತೆ ಕೆಲವರ ಮುಖ manufacturing defectಉ ಅಂತ. ಅವರು ನಗುತ್ತಿರಲಿ ಅಥವಾ ಹಗರಣದಲ್ಲಿ ಸಿಲುಕಿಕೊಳ್ಳಲಿ ಮುಖದ ಭಾವ ಮಾತ್ರ ಹಾಗೆಯೇ! ಮತ್ತೇ ಆಗಲೇ ಈ ವದನ 'ನವರಸ'ಗಳ ಆಗರ ಅಂದ್ರೀ ? ಹೌದು, ಈ ಡಿಫೆಕ್ಟ್ ಕೂಡ ನವರಸವೇ ಆದರೆ ಸ್ವಲ್ಪ ವ್ಯತ್ಯಾಸ ಅಷ್ಟೇ. ಇದಕ್ಕೆ 'ನೀರಸ' ಅಂತಾರೆ!

ಮುಖದ ಭಾವ ಎಂದಾಗ ರಿದಿಮಾ ನೆನಪಾದಳು. ರೋಬೋ ಸೀರಿಯಲ್ ಒಂದರಲ್ಲಿ ಈಕೆಯೇ ಪ್ರಮುಖ ಪಾತ್ರವಹಿಸಿದ್ದು, ಆ ಸೀರಿಯಲ್ ಮುಗಿಯಿತು. ಈಗ ಆಕೆ ಯಾವುದೋ ಕಾರ್ಯಕ್ರಮದ ಸೂತ್ರಧಾರಿ. ಎಂಥಾ ವದನ ಎಂದರೆ ನೀಟಾಗಿ ಇಸ್ತ್ರಿ ಮಾಡಿದ ಮುಖ. ಸುಕ್ಕಿಲ್ಲದ ಮುಖ ಅಂತ ಅಲ್ಲಾ, ಭಾವನೆಯೇ ಇಲ್ಲದ ಮುಖ. ರೋಬೋ ಆಗಿ ಎಷ್ಟು ನೈಜವಾಗಿ ಅಭಿನಯಿಸಿದ್ದಳು ಎಂದುಕೊಂಡರೆ ಆಕೆಯೇ ಮುಖಭಾವವೇ ಹಾಗೆ! ಇನ್ನೂ ಕೆಲವು ಮುಖಭಾವಗಳು ಇವೆ, ಆದರೆ ಅವು ಈಪಾಟಿ ಇಸ್ತ್ರಿ ಮಾಡಿದ ಮುಖವೇ ಅಲ್ಲ... ಸುಂಕದ ಕಟ್ಟೆ ಮುಖಗಳು, immigration ಮುಖಗಳು ಮುಂತಾದವು ಈ ಸಾಲಿಗೆ ಸೇರುತ್ತವೆ. 'ಹಾಯ್' ಎಂದರೂ 'ಬಾಯ್' ಎಂದರೂ ಒಂದೇ ರೀತಿಯ ಭಾವನೆ.

ಆಗಲೇ ಹೇಳಿದ ಸಿಡುಕು ಸುಬ್ಬರಾಯನ ಮುಖಗಳು ಭಾರತದಲ್ಲಿದ್ದಾಗಿನ ನಮ್ಮೂರಿನ ಬ್ಯಾಂಕ್'ಗಳಲ್ಲಿ ಹೇರಳವಾಗಿ ಕಾಣಿಸುತ್ತಿತ್ತು. ನಮ್ಮಜ್ಜಿಯ ಮಾತಿನಲ್ಲಿ ಹೇಳುವುದಾದರೆ "ಆ ಮುಖದ ಮೇಲೆ ರಾಗಿ ಎಸೆದರೆ ಅರಳಾಗುತ್ತದೆ' ಅಂತ. ನಮ್ಮ ದುಡ್ಡು, ನಮ್ಮ ಕಾಸು, ನೀವು ಇಟ್ಕೊಂಡಿದ್ದೀರಾ, ಸ್ಲಿಪ್ ಬರೆದು ದುಡ್ಡು ಕೇಳ್ತೀವೆ, ಅದನ್ನೇ ಸ್ವಲ್ಪ ನಗುಮುಖದಿಂದ ಕೊಟ್ಟರೆ ನಮಗೂ ಒಂಥರಾ ಸಂತಸವಾಗುತ್ತೆ. ಅದು ಬಿಟ್ಟು, ಹಣೆಯ ಮೇಲಿನ ಎರಡೂ ಬದಿಯ ಹುಬ್ಬುಗಳನ್ನು ಯಾಕೆ ಯಾವಾಗಲೂ ಕಿಸ್ ಕೊಡಿಸುತ್ತೀರಿ? ಕೊಡೋ ಕೊಳಕು ನೋಟುಗಳನ್ನೇ ಎಂಜಲು ಬೇರೆ ಮಾಡಿಕೊಡ್ತೀರಿ, ಮಡಿ ಇಲ್ಲ ಮೈಲಿಗೆ ಇಲ್ಲ! ಬೇಜಾರಾಗುತ್ತಪ್ಪ!

ಕೆಲವೊಮ್ಮೆ ಹಲವರ ಮುಖದ ಮೇಲಿನ ಭಾವ ಅವರು ಮಾಡೋ ಕೆಲಸದ ಮೇಲೆ ಅವಲಂಬಿತವಾಗಿರುತ್ತೆ. ಆರ್ಮಿ, ನೇವಿ ಇತ್ಯಾದಿ ಕೆಲಸಗಳಲ್ಲಿನ ಮುಖಗಳು ಗಡುಸು ಅರ್ಥಾತ್ ವೀರರಸ, ವೈದ್ಯರ ಮತ್ತು ಅಮ್ಮನ ಮುಖ ಹಸನ್ಮುಖಿಯಾಗಿರಬೇಕು ಅರ್ಥಾತ್ ಶಾಂತರಸ, ಪೊಲೀಸರ ವದನ ಅಂದರೆ ಗಂಭೀರ, ಸೀರಿಯಲ್ ಮುಖಗಳು ಭೀಭತ್ಸ ಹೀಗೆ. ಪದ್ಮಾವತ್ ಸಿನಿಮಾದಲ್ಲಿ 'ಶಾಹಿದ್ ಕಪೂರ'ನ ರೋಲ್ ಕೆಲವರಿಗೆ ಸರಿ ಕಾಣದೇ ಹೋಗಿದ್ದೂ ಇದಕ್ಕೇ. ನಾಜೂಕು ಚಾಕೊಲೇಟ್ ಹೀರೋ ಆದ ಶಾಹಿದ್, ರಣವೀರನ ಎದುರಿಗೆ ಮಗುವಂತೆ ಕಂಡಿದ್ದು.

ಮುಖದ ಹಾವಭಾವ ಸಿನಿಮಾರಂಗದಲ್ಲಿ ತುಂಬಾ ಕೆಲಸಕ್ಕೆ ಬರುತ್ತೆ ಅಂತ ಆಗಲೇ ಹೇಳಿದೆ. ಕಳೆದ ವಾರದ ಬಿಸಿ ಬಿಸಿ ವಿಡಿಯೋ ಆದ ಪ್ರಿಯಾ ಪ್ರಕಾಶ್ ಎಂಬ ಹದಿಹರೆಯದ ಹುಡುಗಿ ಹುಬ್ಬುಹಾರಿಸಿದ್ದೇ ಹಲವರ ನಿದ್ದೆ ಕೆಡಿಸಿತಂತೆ. ಅರ್ಥಾತ್, ನಿದ್ದೆ ಬಿಟ್ಟು, ಆ ವಿಡಿಯೋ ಹಿಡ್ಕೊಂಡು ಅದಕ್ಕೆ ಪೂರಕವಾಗಿ ಯಾರೆಲ್ಲರ ಭಾವನೆಗಳನ್ನು ಜೋಡಿಸಿ, ವಾಟ್ಸಾಪ್'ನಲ್ಲಿ ಹಂಚಿದ್ದೇ ಹಂಚಿದ್ದು. ಚಾರ್ಲಿ ಚಾಪ್ಲಿನ್, ಲಾರೆಲ್ - ಹಾರ್ಡಿ ಇತ್ಯಾದಿಯವರು ದಂತೆಕಥೆಗಳಾಗಿರೋದೇ ತಮ್ಮ ಹಾವಭಾವದಿಂದ.

ಹತ್ತೊಂಬತ್ತರ ದಶಕ ಮತ್ತು ಇಪ್ಪತ್ತನೇ ಶತಕದ ಆರಂಭಗಳಲ್ಲಿ ಇದ್ದ ಮೂಕಿ ಸಿನಿಮಾಗಳು ಕ್ರಮೇಣ ತೆರೆಮರೆಗೆ ಸರಿದು ನಂತರ ಎಲ್ಲೆಡೆ ಮಾತು ಮಾತು ಮಾತು. ಕಳೆದ ಹಲವು ವರ್ಷಗಳಿಂದ ಅರ್ಥಾತ್ smartphone ಭರಾಟೆ ಎಲ್ಲೆಲ್ಲೂ ದಾಳಿ ಇಟ್ಟ ಮೇಲೆ ಮೊಬೈಲಿನಿಂದ ರಸ ಸೆಳೆದು ಕಿವಿಗೆ ಬಿಟ್ಟುಕೊಂಡರೆ ಮುಗೀತು ಯಾರೊಂದಿಗೂ ಮಾತು ಬೇಡ ಕಥೆ ಬೇಡ. ಮಾತು ಆಡಲೇಬೇಕು ಎಂದರೆ ಮೆಸೇಜಿಂಗ್ ಇದ್ದೇ ಇದೆ.

ಮುಖಭಾವದಿಂದ ಇದ್ದಕ್ಕಿದ್ದ ಹಾಗೆ ಮೊಬೈಲ್ ಬಗ್ಗೆ ಮಾತೇಕೆ ಎನಿಸಿದ್ದರೆ ವಿಷಯ ಇಷ್ಟೇ. ಅಂದು ಮೊಬೈಲ್ ಇಲ್ಲ ಮಾತು ಇಲ್ಲ ಹಾಗಾಗಿ ಮುಖಭಾವವೇ ಹಿರಿದು. ನಂತರ ಡೈಲಾಗ್ ಸಾಮ್ರಾಜ್ಯದ ಜೊತೆ ಹಾವಭಾವ. ಇಂದಿನ ಯುಗದಲ್ಲಿ ಮಾತೂ ಇಲ್ಲ ಭಾವವೂ ಇಲ್ಲ ಎನಿಸುತ್ತಿದೆ. ನನ್ನ ಮಾತು ತಪ್ಪಾಗಲಿ ಎಂದೇ ಆಶಿಸುವೆ.

ಮಾತುಗಳಾಡಿ ಅಪಾರ್ಥಮಾಡಿಕೊಂಡು ಜಗಳ ಕದನ ಆಡೋ ಬದಲು ಮೌನವೇ ಆಭರಣ ಎಂದುಕೊಳ್ಳಬೇಕೇ? ಮಾತು ಬೆಳ್ಳಿ ನಿಜ ಆದರೆ ಮೌನ... ಬಂಗಾರ!

English summary
Face is the index of our personality. The face can demonstrate various expressions, good bad and ugly. Why unnecessarily make the life miserable by not expressing ourselves, just smile and make others also smile. Wonderful article by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X