ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲ್ಲಿನ ಎತ್ತರಕ್ಕೂ ನಿಲ್ಲದ ನಾವ್ ಹುಲು ಮಾನವರು

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ತೇನ ವಿನಾ ತೃಣಮಪಿ ನ ಚಲತಿ
ಅವನ ಆಣತಿ ಇಲ್ಲದೆ ಒಂದು ಹುಲುಕಡ್ಡಿಯೂ ಅಲ್ಲಾಡದು ಅನ್ನೋದು ಮೇಲಿನ ಮಾತಿನ ಅರ್ಥ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.

"ರವಿಗಿಲ್ಲದ ಭಯ, ಶಶಿಗಿಲ್ಲದ ಭಯ, ನಿನಗೇಕೆ ಬಿಡು" ಎಂಬ ಮಾತುಗಳನ್ನು ತಮ್ಮ ಕವನದ ಮೂಲಕ ರಾಷ್ಟ್ರಕವಿ ಕುವೆಂಪು ಸಾರಿದ್ದಾರೆ. ಇದೇ ಕವನವನ್ನು ಹಾಡಿನ ರೂಪದಲ್ಲಿ ಕವಿವರ್ಯರ ರಚನೆ 'ಬೆರಳ್ಗೆ ಕೊರಳ್', ಅದೇ ಹೆಸರಿನ ಸಿನಿಮಾದಲ್ಲೂ ಅಳವಡಿಸಲಾಗಿತ್ತು. ಕಳೆದ ವಾರ ಕವಿಶೈಲದ ವಿಷಯ ಕೇಳಿದಾಗ 'ತೇನ ವಿನಾ' ನೆನಪಾಯ್ತು... ಅಷ್ಟೂ ಸಾಹಿತ್ಯದಲ್ಲಿ ಗಮನ ಸೆಳೆದ 'ತೃಣ'ವೇ ಇಂದಿನ ಬರಹದ ಕಥಾನಾಯಕ.

ಈ ಹುಲ್ಲಿಗೂ ದೈವಕ್ಕೂ ವಿಶೇಷ ಸಂಬಂಧ ಇರೋದು ನಿಜ... "ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವೆ ಲಕುಮೀರಮಣ ಇವಗಿಲ್ಲ ಗರುವ..." ಎಂಬ ದಾಸರಪದವೇ ಇದೆ. ಕನ್ನಡ ಗಾದೆಯ ಮಾತನ್ನೇ ನೋಡೋಣ ಬನ್ನಿ "ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುತ್ತಾನೆಯೇ?" ಅನ್ನೋದು ಒಂದು ಬಗೆಯಾದರೆ ಮತ್ತೊಂದು ರೀತಿಯೂ ಹೇಳ್ತಾರೆ "ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ?"...

Small Grass And Life In Nature

"ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುತ್ತಾನೆಯೇ?" ಎಂದಾಗ ಭುವಿಗೆ ತಂದ ಮೇಲೆ ಊಟಕ್ಕೂ ಏನೋ ವ್ಯವಸ್ಥೆ ಮಾಡಿಯೇ ಇರುತ್ತಾನೆ ಆ ದೇವರು, ನಂಬಿಕೆ ಇರಲಿ ಅಷ್ಟೇ ಎಂಬರ್ಥ ಸೂಕ್ತವಾಗಿದೆ ಎನಿಸುತ್ತದೆ. ಇನ್ನು "ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ?" ಎಂದಾಗ ಹುಲ್ಲು ತಿನ್ನದ ಪ್ರಾಣಿ ಪಕ್ಷಿಗಳನ್ನು ಕುರಿತು ಹೇಳಿರಬಹುದು ಅರ್ಥಾತ್ ಭುವಿಗೆ ತಂದಿಟ್ಟ ಆ ಭಗವಂತ ಸರಿಯಾಗಿಯೇ ಪೊರೆಯುತ್ತಾನೆ ಏನೇನೋ ತಂದು ಮುಂದಿಡಲಾರ ಎಂದು ಅರ್ಥೈಸಿಕೊಳ್ಳಬಹುದು. ಒಟ್ಟಾರೆ ಹೇಳೋದಾದ್ರೆ ಎರಡೂ version ಗಳಲ್ಲಿ ದೈವದ ಮೇಲೆ ನಂಬಿಕೆ ಇರಲಿ ಎನ್ನುವುದೇ ಸಾರಲಾಗಿದೆ.

ಮಹಾಭಾರತದ ಯುದ್ಧದ ನಂತರ ಕೃಷ್ಣ - ಬಲರಾಮರ ಯಾದವ ವಂಶ ಪರಾಕ್ರಮಿಗಳಾಗಿ ಬೆಳೆದರು. ಅದರೊಂದಿಗೆ ದುಷ್ಕೃತ್ಯಗಳೂ ಅಗಾಧವಾಗಿಯೇ ನಡೆದಿತ್ತು. ಕೃಷ್ಣನ ಮಾತಿಗೆ ಬೆಲೆ ಇಲ್ಲದಷ್ಟು ದುರಾಚಾರಗಳು ನಡೆದಿತ್ತು. ಸಾಂಬ ಗರ್ಭಿಣಿ ಹೆಣ್ಣಿನ ವೇಷ ಧರಿಸಿ ಋಷಿಗಳನ್ನು ಪರೀಕ್ಷೆ ಮಾಡಿದ್ದೇ ಯದುವಂಶದ ಅವನತಿಗೆ ಕಾರಣವಾಯ್ತು ಎನ್ನಬಹುದು. ಸಾಂಬ ಹೆತ್ತ ಕಬ್ಬಿಣದ ಒನಕೆಯನ್ನು ಪುಡಿಪುಡಿ ಮಾಡಿ ಸಮುದ್ರಕ್ಕೆ ಎಸೆದಾಗಿಯೂ ಅವು ತೀರಕ್ಕೆ ಸರಿದು ಜೊಂಡು ಹುಲ್ಲಾಗಿ ಬೆಳೆದು ನಿಂತಿತ್ತು. ಪರಾಕ್ರಮಿ ಯದುವಂಶ ಒಂದು ಹುಲ್ಲಿನಿಂದ ಸತ್ತು ಸುಣ್ಣವಾದರೂ ಎಂದರೆ ಹುಲ್ಲಿನ ಮಹತ್ವ ಎಷ್ಟು ಅಂತ ಅರ್ಥೈಸಿಕೊಳ್ಳಬಹುದು.

Small Grass And Life In Nature

ನಮ್ಮಲ್ಲಿ ವಸಂತ ಕಾಲದಲ್ಲಿ ಆರಂಭವಾಗಿ ಬೇಸಿಗೆ ಮುಗಿದ ಮೇಲೂ ಸ್ವಲ್ಪ ಕಾಲ ಹುಲ್ಲು ಬೆಳೆಸೋದು ಒಂದು ದೊಡ್ಡ ಕಾರ್ಯ. ಹುಲ್ಲು ಬೆಳೆಸೋದು ಅಂದ್ರೆ ತಪ್ಪಾಗುತ್ತೆ. ಹುಲ್ಲು ಬೆಳೆಸೋದು ಆದರೆ ಅತೀ ಹೆಚ್ಚು ಉದ್ದ ಬೆಳೆಯದಂತೆ ನೋಡಿಕೊಳ್ಳೋದು, ಅವು ಬೆಳೆದಾಗ ಕತ್ತರಿಸೋದು (lawn mowing) ಒಂದು ನಿರಂತರ ಚಟುವಟಿಕೆ. ಆ ಸಮಯದಲ್ಲಿ ವಾರ ಅಥವಾ ಹತ್ತು ದಿನ ಹೊರಗೆಲ್ಲಾದರೂ ಹೋಗಬೇಕು ಎಂದಾಗ ಆ ಹುಲ್ಲು ಕತ್ತರಿಸುವಿಕೆಯ ಕೆಲಸವನ್ನು ಯಾರಿಗಾದರೂ ಒಪ್ಪಿಸಬೇಕು. ಅಂಥ ಆತ್ಮೀಯರು ಯಾರೂ ಸಿಗಲಿಲ್ಲವೆಂದರೆ lawn ಕತ್ತರಿಸಲೇ ಇರುವ ಮಂದಿಗೆ ಕೆಲಸ ಒಪ್ಪಿಸಬೇಕು. ಈ ಸಮಯದಲ್ಲಿ ಅರ್ಥಾತ್ ಬೇಸಿಗೆಯ ಸಮಯದಲ್ಲಿ ಒಂದಷ್ಟು ಹಣ ಸಂಪಾದಿಸಲು ಕಾಲೇಜು ಹುಡುಗರೂ ಇಂಥ ಕೆಲಸಕ್ಕೆ ದೊರೆಯುತ್ತಾರೆ.

ಒಟ್ಟಾರೆ ಹೇಳೋದಾದ್ರೆ ಹುಲ್ಲು ಬೆಳೆಸೋದು ಕತ್ತರಿಸೋಕ್ಕೆ, ಹುಲ್ಲು ಕತ್ತರಿಸೋದು ಬೆಳೆಸೋದಕ್ಕೆ... ಆಯ್ತಾ?

ಬೆಳೆಸೋದು ಮತ್ತು ಬೆಳೆದದ್ದನ್ನು ಕತ್ತರಿಸೋದು ಒಂದು ಕೆಲಸವಾದರೆ, ಅದನ್ನು ಹಸಿರಾಗಿರುವಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಕೆಲಸ. ಲಾನ್ ಗೆ ಅಳವಡಿಸಿರುವ sprinkler system ನಿಂದ ನೀರನ್ನು ಪ್ರತೀ ದಿನ ಅಥವಾ ಎರಡು ದಿನಕ್ಕೊಮ್ಮೆಯಾದರೂ ಹಾಯಿಸಬೇಕು. ಆ ಹುಲ್ಲಿಗೋ ಸರಿಯಾಗಿ ಊಟೋಪಚಾರ ನಡೆಯಬೇಕು. ಔಷಧೋಪಚಾರಗಳು ನಡೆಯಬೇಕು. ಇಷ್ಟೆಲ್ಲಾ ಬೋಳಿಸಿಕೊಂಡರೂ ಹಲವೊಮ್ಮೆ ಅತಿ ಬಿಸಿಲಿನಿಂದಾಗಿ ಆ ಹುಲ್ಲು ಸುಡಬಹುದು. ಸುಟ್ಟಾಗ ಹಸಿರು, ತಿಳಿ ಹಸಿರು ಎಲ್ಲಾ ಬಿಡಿ, ಇಡೀ ಲಾನ್ ಮೇಲೆ ಅಲ್ಲಲ್ಲೇ ಕಂಡು ಬಣ್ಣದ ಪ್ಯಾಚ್ ಗಳು ಕೆಟ್ಟದಾಗಿ ಕಾಣುತ್ತೆ. ಅತೀ ಹೆಚ್ಚು ಕಂದು ಬಣ್ಣ ಒಂದೆರಡು ವರುಷಗಳು ಮುಂದುವರೆದಲ್ಲಿ ಇಡೀ ಲಾನ್ ಅನ್ನು ಕಿತ್ತು ಹೊಸತಾದ green carpet (ಲಾನ್) ಹೊದಿಸಬೇಕಾದೀತು. ಇಲ್ಲವಾದರೆ ಅಸೋಸಿಯೇಷನ್ ನವರು ನೋಟೀಸ್ ಕೊಡ್ತಾರೆ ಬಿಡಿ. ಒಟ್ಟಾರೆ ಖರ್ಚಿನ ಬಾಬತ್ತು ಅನ್ನಿ.

ಮಾಲ್ ಗಳಲ್ಲಿ ಇಂಥ ಹಸಿರು ಹುಲ್ಲುಗಳು ಬಿಸಿಲೇ ಇರಲಿ, ಮಳೆಯೇ ಬರಲಿ ಒಂದೇ ರೀತಿ ಕಾಣುತ್ತೆ... ಅವು ನೈಜವಾದ ಹಸಿರು ಹುಲ್ಲು ಅಲ್ಲ. ಹಾಗಾಗಿ ಯಾವಾಗಲೂ ಒಂದೇ ರೀತಿ ಕಾಣುತ್ತೆ ನೋಡಿ. ಆದರೆ ಈ ಸೌಕರ್ಯ ಮನೆ ಮನೆಗಳ ಲಾನ್ ಗಳಿಗೆ ಮಾಡಲು ಅನುಮತಿ ಇಲ್ಲ. ಎಲ್ಲರೂ ಇದೇ ಹಾದಿ ಅನುಸರಿಸಿದರೆ, ಈ ಲಾನ್ ಅನ್ನು ಅವಲಂಬಿಸಿಯೇ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ದಿವಾಳಿ ಎದ್ದೀತು !!! ಒಟ್ಟಿನಲ್ಲಿ ಹುಲ್ಲುಗಾವಲನ್ನು ಕಾಯ್ದುಕೊಳ್ಳುವ ನಮ್ಮಂಥವರ ಕಥೆ ಇಷ್ಟು.

ಸೊಂಪಾಗಿ ಬೆಳೆದ ಹುಲ್ಲು 'ಗರಿಕೆಯ' ಹೆಸರಲ್ಲಿ ಗಣೇಶನ ಪೂಜೆಯ ಸಮಯದಲ್ಲಿ ಉಪಯುಕ್ತ. ದೈವಕ್ಕೆ ಮಾನ್ಯವೀ ಹುಲ್ಲು. ಎಲ್ಲೆಡೆ ಅವುಗಳ ಪಂಗಡಗಳಲ್ಲಿ ಕೆಲವು ಉತ್ಕೃಷ್ಟ ಅಂತ ಇದ್ದೆ ಇರುವಂತೆ, ಇಂಥ ಹುಲ್ಲುಗಳಲ್ಲೇ ಮಾನ್ಯತೆ ಪಡೆದ ಹುಲ್ಲು ಯಾವುದು ಅಂತ ಗೊತ್ತೇ? ಅದೇ ದರ್ಬೆ !!

ದರ್ಬೆಗೆ ಮತ್ತೊಂದು ಹೆಸರು ಕುಶ ಎಂದು. ವಾಲ್ಮೀಕಿ ಮಹರ್ಷಿ ಆಶ್ರಮದಲ್ಲಿ ಅವಳಿಜವಳಿ ಜನನವಾಯ್ತು. ಹುಟ್ಟಿದ ಹಿರಿಯನಿಗೆ ಮಹರ್ಷಿಗಳು ದರ್ಬೆಯನ್ನು ಬಳಸಿ ಋಣಾತ್ಮಕ ಶಕ್ತಿಗಳು ದೂರವಾಗಲಿ ಎಂದು ಹಾರೈಸಿದರಂತೆ. ಹಾಗಾಗಿ ಅವನ ಹೆಸರು ಕುಶ ಎಂದಾಯ್ತು. ದರ್ಬೆಯ ಚೂರುಗಳಿಂದ ಎರಡನೆಯ ಕೂಸನ್ನು ಹಾರೈಸಿದ್ದರಿಂದ ಎರಡನೆಯ ಕೂಸಿಗೆ 'ಲವ' (ಚೂರು/ಪುಡಿ) ಎಂದೇ ಹೆಸರಾಯ್ತು ಅಂತಾರೆ...

ದರ್ಬೆಯ ತುದಿಯಂತೆ ಮೊನಚಾಗಿರುವ ಬುದ್ಧಿಯುಳ್ಳವರನ್ನು ಕುಶಾಗ್ರಮತಿ ಎನ್ನುತ್ತಾರೆ.

ದರ್ಬೆಗೆ ಸಸ್ಯಶಾಸ್ತ್ರದಲ್ಲಿ Desmotachya bipinnata ಎನ್ನುತ್ತಾರೆ. ದರ್ಬೆಯನ್ನು ಋಣಾತ್ಮಕ ಶಕ್ತಿಗಳಿಂದ ದೂರವಿರಿಸಲು ಮದುವೆಗಳಲ್ಲಿ ಬಳಸಲಾಗುತ್ತದೆ. ಅದರಂತೆಯೇ ವಾರ್ಷಿಕ ತಿಥಿಗಳಲ್ಲೂ ದರ್ಬೆಯಿಂದ ಮಾಡಿದ ಉಂಗುರವನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಮತ್ತು ಹಿರಿಯರ ಅಪಾರಕರ್ಮಗಳಲ್ಲೂ ಬಳಸಲಾಗುತ್ತದೆ ಎಂದಾಗ ದರ್ಬೆಯ ಮಹತ್ವ ಅರಿವಾಗುತ್ತದೆ. ದರ್ಬೆಯ ಮತ್ತೊಂದು ಸಾಮಾನ್ಯ ಬಳಕೆ ಗ್ರಹಣದ ಸಮಯದಲ್ಲಿ ಎಂದು ನಿಮಗೆ ಗೊತ್ತಿದೆ. ಬಹುಶಃ ಇಂದು ಬೆಳಿಗ್ಗೆ ಸೂರ್ಯ ಗ್ರಹಣ ಸಮಯದಲ್ಲಿ ಬಳಸಿರುತ್ತೀರಿ ಎಂದುಕೊಳ್ಳುತ್ತೇನೆ.

ಯಾವುದೇ ವಿಷಯವನ್ನು ಅದರ ಆಳದವರೆಗೂ ಇಳಿದು (basic ಲೆವೆಲ್) ಅದರ ವಿಚಾರ ಸಂಪೂರ್ಣವಾಗಿ ತಿಳಿಯುವ ಯತ್ನ ನಡೆಸುವುದನ್ನ grassroot ಲೆವೆಲ್ ಗೆ ಇಳಿದು ಅರ್ಥೈಸಿಕೊಳ್ಳುವುದು ಎನ್ನುತ್ತಾರೆ. ಒಣಹುಲ್ಲಿನ ಮೆದೆಯಲ್ಲಿ ಕಳೆದು ಹೋದ ಸೂಜಿಯನ್ನು ಹುಡುಕಿದಂತೆ ಎಂಬ ಪ್ರಯೋಗವು ಅರ್ಥಹೀನ ಅಥವಾ ಸಮಯ ವ್ಯರ್ಥವಾಗುವ ಅಥವಾ ಫಲವೀಯದ ಕೆಲಸದ ಬಗ್ಗೆ ಹೇಳುತ್ತಾರೆ. ಹಸಿವಾಯ್ತು ಅಂತ ಹುಲಿ ಹುಲ್ಲು ಮೇಯೋದಿಲ್ಲ ಎಂದಾಗ ಕೆಲವರು ಏನೇ ಸಂದರ್ಭ ಬಂದರೂ ತಮ್ಮ ಲೆವೆಲ್ ಬಿಟ್ಟು ಕೆಳಕ್ಕೆ ಇಳಿಯೋದಿಲ್ಲ ಎನ್ನುವುದಕ್ಕೆ ಹೇಳ್ತಾರೆ.

ಮಳೆಯ ನೀರಿನಿಂದ ಭುವಿಯ ಮೇಲಿನ ಮಣ್ಣು ಕೊಚ್ಚಿ ಹೋಗದಂತೆ ತಡೆಯಲು ಹುಲ್ಲು ಸಹಾಯಕಾರಿ. ಬಿಸಿಲಿಗೆ ಭುವಿ ಒಣಗದಂತೆ ತಡೆಯಲು ಮತ್ತು ದೂಳನ್ನು ಹೀರುವ ಸಾಧನ ಈ ಹಸಿರು ಹುಲ್ಲು. ಹುಲ್ಲುಗಾವಲಿನ ಹಸಿರು ಹುಲ್ಲು ದನಕರುಗಳ ಆಹಾರ.

ಹುಲ್ಲನ್ನು ಕೇವಲ ಹುಲ್ಲು ಎಂಬಂತೆ ನಿಕೃಷ್ಟವಾಗಿ ಕಾಣುವವರೇ ಬಹಳ. ಮುಂಜಾನೆ ಮಂಜನ್ನು ಹೊತ್ತು ನಿಂತ ಒಂದು ಹುಲ್ಲು ನನ್ನ ಕಣ್ಣಿಗೆ ಗೋವರ್ಧನಗಿರಿಧಾರಿಯಂತೆಯೇ ಕಾಣುತ್ತದೆ. ನೆಲದಲ್ಲಿ ಬೆಳೆವ ಹುಲ್ಲಿಗೆ ತಾ ಬೆಳೆವ ನೆಲದೊಡೆಯ ಯಾವ ಜಾತಿ, ಮತ, ಬಣ್ಣ, ಯಾವ ದೇಶನಿವಾಸಿ ಎಂಬೆಲ್ಲ ತಾರತಮ್ಯವಿಲ್ಲದೇ ಬೆಳೆಯುತ್ತದೆ.

ಹುಲ್ಲಿಗೂ ಇರದ ಈ ಭಾವನೆ ಮನುಜರಿಗೆ ಇರೋದ್ರಿಂದಲೇ ಹುಲ್ಲಿನ ಎತ್ತರಕ್ಕೂ ನಿಲ್ಲದ ನಾವ್ ಹುಲು ಮಾನವರು...

English summary
The small grass has so many uses. This article try to explain the importance of grass and its concepts used
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X