• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಮಾತು ಮುತ್ತೂ ಆಗಬಹುದು, ಮೃತ್ಯುವೂ ಆಗಬಹುದು. ಹಾಗೆಯೇ ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು. ಇಂದು ಈ ಮೌನದ ಬಗ್ಗೆ ಮೌನವಾಗಿ ಮಾತನಾಡೋಣ. ಒಂದೋ ಅದು ಮಾತಾಗಬೇಕು ಇಲ್ಲಾ ಅದು ಮೌನವಾಗಬೇಕು, ಎರಡೂ ಒಟ್ಟಾಗಿ ಆಗಲು ಸಾಧ್ಯವಿಲ್ಲ ಅಂತಾದರೆ 'ಮೌನದ ಮಾತು' ಅನ್ನೋದು Oxymoron.

'ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ' ಅಂತ ಕವಿಯ ಮಾತಿದೆ. ಪ್ರೇಮಿಗಳ ನಡುವೆ ಮೌನವೇ ಇದ್ದರೂ ಅವರ ಅಂತರಂಗದಲ್ಲಿ ಅದೆಷ್ಟೋ ಮಾತುಗಳ ವಿನಿಮಯ ನಡೆದಿರುತ್ತದೆ. ಆ ಮೌನದ ಮಾತಿನಲ್ಲಿ ಸಿಂಚನವಿರುತ್ತದೆ. ಕೆಲವೊಮ್ಮೆ ಮಾತಿಗಿಂತ ಮೌನದಲ್ಲೇ ಭಾವನೆಗಳು ಹರಿಯುತ್ತವೆ. ಮಾತುಗಳನ್ನು ಆಡುವುದೇ ಬೇಕಿರೋದಿಲ್ಲ. ಅಂಥಾ ಕಡೆ ಮೌನ ಇದ್ದಷ್ಟೂ ಚೆನ್ನವೇ. 'ಈ ನಿನ್ನ ಮೌನದ ಮಾತುಗಳು ನನ್ನೆದೆಯಲ್ಲಿ ತರಂಗವನ್ನೆಬ್ಬಿಸಿದೆ' ಅಂತ ಹೆಣ್ಣಿನ ಮನ ನುಡಿಯಬಹುದು. 'ಕಣ್ಣೋಟದಲ್ಲಿ ಇರಿದವಳಂತೆ ಮೌನದಲ್ಲೂ ಇರಿಯುವ ನೀ ಎಂಥಾ ಜಾಣೆ' ಎಂದು ಗಂಡಿನ ಮನ ಹೊಗಳಬಹುದು.

ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?

ಇದೇ ಪ್ರೇಮಿಗಳ ನಡುವೆ ಕಲಹವಾಯ್ತು ಎಂದುಕೊಳ್ಳಿ, ಆಗ ಇಬ್ಬರ ನಡುವಿನ ಮೌನವು ಶೃಂಗಾರದಿಂದ ಭೀಕರಕ್ಕೆ ತಿರುಗುತ್ತದೆ. ಇಂಥಾ ಮೌನಗಳು ಕೆಲವೊಮ್ಮೆ "ಈ ಮೌನವಾ ತಾಳೆನು.." ಎಂಬಂತೆ ರಾಜಿಯಾಗಿ ಹಾಡಾಗಿ ಶಾಂತವಾಗಬಹುದು ಅಥವಾ ಅರ್ಧಬೆಂದ ಮಡಿಕೆ ಪ್ರೇಮವಾದರೆ ಅಲ್ಲೇ ಒಣಗಿ ಮೊಟಕೂಗೊಳ್ಳಬಹುದು. 'ಪ್ರೇಮಿಗಳ ದಿನ' ಆರಂಭವಾಗುವ ಪ್ರೇಮಗಳೆಷ್ಟೋ ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆ ಮೌನ ತಾಳಿ ಮರುಟಿಹೋಗುತ್ತೆ. ಇಂದಿನ ಯುವ ಜನಾಂಗದ ಮಹನೀಯರು ಇದಕ್ಕೆ ಬ್ರೇಕ್-ಅಪ್ ಎನ್ನುತ್ತಾರೆ. ಇಂಥಾ ಮೌನಗಳು ಮೂಡಿದ ಸಮಯದಲ್ಲಿ ಮನಬಿಚ್ಚಿ ಮಾತನಾಡಿದಾಗ ಆ ಮುಂದಿನ ಮೌನಗಳಲ್ಲೂ ಮಾತುಗಳು ಅಧಿಕವಾಗಿರುತ್ತದೆ. ಮೌನದ ಕಂದಕ ದೊಡ್ಡದಾದರೆ ಕಂಟಕವಾಗುತ್ತದೆ.

Silence is sometimes the best answer

ಸಂಸಾರಗಳಲ್ಲಿ ಮೌನ ಹಿಂಸಾತ್ಮಕ. ಕೆಲವು ಸಂಸಾರಗಳಲ್ಲಿ ಗಂಡ ಹೆಂಡತಿ ಇಬ್ಬರೂ ಅರಚಾಡಿ ಕೂಗಾಡಿ ಗಲಭೆ ಎಬ್ಬಿಸಿ ಮನೆಯನ್ನೂ ಮನಸ್ಸನ್ನೂ ಕ್ಷೋಭೆಗೊಳಿಸುತ್ತಾರೆ. ಇದಕ್ಕೆ ವಿರುದ್ಧ ಎಂದರೆ ಭೀಕರ ಮೌನ. ಮನೆಯ ಯಜಮಾನನಿಗೆ ಸಿಟ್ಟು ಬಂತು ಆದಾಗ ಮಾತನ್ನೇ ಆಡದಿರುವುದು. ಕೂಗಾಡುವ ಪರಿ ಎಷ್ಟು ಅಸಹನೀಯವೋ ಅಷ್ಟೇ ಘೋರ ಈ ಮೌನ.

ಮೌನ ಎಂಬೋದು ಒಂದು ಗುಟ್ಟಿನ ಗೂಡು. ಅಲ್ಲೇನಿದೆಯೋ ಗೂಡಿನ ಯಜಮಾನರಿಗೇ ಅರಿವಿರೋದಿಲ್ಲ. ಮೌನ ಒಂದು ಕುದಿವ ಲಾವಾರಸ. ಯಾವಾಗ ಭುಗಿಲೆದ್ದು ಕುಣಿವುದೋ, ಯಾವಾಗ ಮುಗಿಲಿಗೆ ಚಿಮ್ಮಿ ಯಾರನ್ನು ಆಹುತಿ ತೆಗೆದುಕೊಳ್ಳುವುದೋ ಅರಿವಿರುವುದಿಲ್ಲ.

ತಲೆಯ ಮೇಲೂ ಹೊರಲು ಯೋಗ್ಯತೆ ಪಡೆಯುವ 'ಪಾದರಕ್ಷೆ'!

"ಆಖ್ರೀ ರಾಸ್ತಾ" ಸಿನಿಮಾದಲ್ಲಿ ಜೈಲುವಾಸಿಯಾದ ಅಮಿತಾಬ್ ಮೌನಕ್ಕೆ ಶರಣಾಗುತ್ತಾರೆ. ಮಾತಾನಾಡಿದರೆ ಎಲ್ಲಿ ತಮ್ಮಲ್ಲಿರುವ ಆಕೋಶ ಕಡಿಮೆಯಾಗುತ್ತದೋ ಎಂಬ ವಿಚಿತ್ರ ನಂಬಿಕೆಯಿಂದ ಮೌನಕ್ಕೆ ಶರಣಾಗಿ ಅದನ್ನು ಹುದುಗಿಸಿಕೊಂಡು ಸೇಡು ತೀರಿಸಿಕೊಳ್ಳುತ್ತಾನೆ ಆ ನಾಯಕ. ಮಿಕ್ಕೆಲ್ಲವನ್ನೂ ಪಕ್ಕಕ್ಕೆ ಇಟ್ಟು, ಮಾತು ಮತ್ತು ಮೌನಗಳತ್ತ ಗಮನ ಹರಿಸಿದರೆ ಇಲ್ಲಿನ ಸೂಕ್ಷ್ಮ ಇಷ್ಟೇ. ಮನಬಿಚ್ಚಿ ಮಾತನಾಡಿದರೆ ಅಡಗಿ ಕುಳಿತ ಆಕ್ರೋಶ ತಮಣೆಯಾಗುತ್ತದೆ. ಮೌನವು ಹೊರನೋಟಕ್ಕೆ ಶಾಂತವಾಗಿ ಕಂಡರೂ ಮನುಷ್ಯನನ್ನು ಸುಡುವ ಕೆಂಡವಾಗಿರುತ್ತದೆ.

Silence is sometimes the best answer

ಮನದಾಳದ ನೋವನ್ನು ಮೌನವಾಗಿ ನುಂಗುವವರೇ ಹೃದಯಾಘಾತಕ್ಕೆ ತುತ್ತಾಗಿ ಶಿವನ ಪಾದ ಸೇರೋದು. ಮನದಲ್ಲಿರುವುದನ್ನು ಕಕ್ಕಿ, ಮನಸ್ಸು ಹೃದಯ ಹಗುರ ಮಾಡಿಕೊಳ್ಳುವವರು ಹೆಚ್ಚು ದಿನ ಬದುಕುತ್ತಾರೆ.

ಅಮೆರಿಕಾದ ಕ್ರಿಮಿನಲ್ ಕೇಸ್ ಜಗತ್ತಿನಲ್ಲಿ ಪೊಲೀಸರು ಅಪರಾಧಿಗಳಿಗೆ "ಯು ಹ್ಯಾವ್ ದಿ ರೈಟ್ ಟು ರಿಮೇನ್ ಸೈಲೆಂಟ್" ಎಂದು ಹೇಳುತ್ತಾರೆ. ಅರ್ಥಾತ್ ಅವರೇನು ಹೇಳೋದಿದ್ದರೂ ಲಾಯರ್ ಮುಖಾಂತರ ತಿಳಿಸತಕ್ಕದ್ದು. ಆ ಸಮಯದಲ್ಲಿ ತೆಪ್ಪಗಿರದೆ ಏನಾದರೂ ಬಡಬಡಿಸಿದ್ದೇ ಆದರೆ ಕೋರ್ಟ್ 'ನಲ್ಲಿ ಈ ಹೇಳಿಕೆಗಳು ಅವರ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿರುತ್ತದೆ. ತೆಪ್ಪಗಿರು ಎಂದಾಗಲೂ ಬಾಯಿಬಿಟ್ಟರೆ ಆಪತ್ತು ಖಂಡಿತ. ಇದನ್ನು miranda warning ಎನ್ನುತ್ತಾರೆ.

ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ!

ಸ್ಮಶಾನ ಎಂದರೆ ಮೌನ ಅಂತಾದರೆ, ಸ್ಮಶಾನ ಮೌನ ಎನ್ನುವುದನ್ನು Tautology ಎನ್ನಬಹುದು. ಸತ್ತ ಹೆಣ, ಗೇಟ್ ಬಾಗಿಲು ಇತ್ಯಾದಿಯ ಹಾಗೆ. ಸ್ಮಶಾನದ ಸನ್ನಿವೇಶದಲ್ಲಿ ಪ್ರಮುಖವಾಗಿ ಎದ್ದು ನಿಲ್ಲುವುದೇ ನಿಶಬ್ದ. ಮೌನದಿಂದ ನಿಶಬ್ದ. ಅಲ್ಲಿನ ಸನ್ನಿವೇಶ ಮಾತುಗಾರನ ಬಾಯಿ ಕೂಡ ಕಟ್ಟಿಸುತ್ತದೆ. ಎಷ್ಟು ಬೇಗ ಅಲ್ಲಿನ ಕೆಲಸ ಮುಗಿಸಿ ಹೊರಬೀಳುತ್ತೇವೋ ಎಂಬ ಆತುರ ಇರುತ್ತದೆಯೇ ವಿನಃ ಅಲ್ಲಿ ಮಾತನಾಡುತ್ತಾ ಕೂಡಬೇಕು ಎನಿಸುವುದಿಲ್ಲ. ಬಹುಶ: ಆ ಮೌನದ ಭೀತಿಯಿಂದ ಹೀಗಾಡುತ್ತೇವೋ ಏನೋ? ಕೆಲವರು ನಿಶಬ್ದವಾಗಿರುವ ಮನೆಯಲ್ಲಿ ಇರಲು ಹೆದರುತ್ತಾರೆ. ಮೌನದಿಂದ ಭೀತಿ ಹುಟ್ಟುತ್ತದೋ ಅಥವಾ ಭೀತಿಯಿಂದ ಮೌನಕ್ಕೆ ಶರಣಾಗುತ್ತೇವೋ ಗೊತ್ತಿಲ್ಲ.

ದೇವನಿದ್ದಾನೆ ರಕ್ಷಣೆಗೆ ಎಂಬ ನಿರ್ಭೀತಿ ಇರುವುದರಿಂದಲೇ ಇರಬೇಕು ನಾವು ದೇವಸ್ಥಾನದಲ್ಲಿ ಪೂಜೆ ನಡೆಯುವಾಗಲೂ ಬಡಬಡಾ ಅಂತ ಮಾತನಾಡೋದು.

ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ

ಸ್ನೇಹಿತರ ನಡುವಿನ ಮೌನ ಎಂದರೆ ಅದು ಹಲವು ರೀತಿಯಾಗಿದ್ದಾಗಿರಬಹುದು. ಒಮ್ಮೆ ಹೇಗಾಯ್ತು ಎಂದರೆ ನಾವೊಂದಷ್ಟು ಮಂದಿ ಒಂದು ವಾರದಲ್ಲಿ ಹಲವಾರು ಬಾರಿ ಭೇಟಿಯಾಗಿದ್ದೆವು. ಎಷ್ಟರ ಮಟ್ಟಿಗೆ ಎಂದರೆ ಕೊನೆಕೊನೆಗೆ ಏನೂ ವಿಷಯವೇ ಇಲ್ಲದೆ ಹೋಯ್ತು. 'ಎಲ್ಲಾ ಆರಾಮಾನಾ?' ಅಂತ ಕೇಳಿದ ಮೇಲೆ ಅಲ್ಲಿ ಸಂಪೂರ್ಣ ಮೌನ. ಇಂಥಾ ಮೌನ ಸಹನೀಯ. ಒಬ್ಬರಿಂದ ಏನಾದರೂ ಹೊಸವಿಷಯ ಎದ್ದರೆ ಮತ್ತೆಲ್ಲರೂ ಎಚ್ಚರವಾಗುತ್ತಾರೆ. ಇಬ್ಬರ ಮಧ್ಯೆ ಏನೇನೋ ವಿಷಯಗಳಾಗಿ ಉಂಟಾಗುವ ಮನಸ್ತಾಪದ ಮೌನ ಅಸಹನೀಯ. ಮಾತನಾಡಿ ಮನಸ್ತಾಪ ಬಗೆಹರಿಸಿಕೊಳ್ಳುವ ಮೂಲಕ ಮೌನ ಮುರಿಯಬೇಕು.

ಕೆಲವೊಮ್ಮೆ ಇವೆರಡೂ ಅಲ್ಲದ ಮೌನ. ಅದೇಕೆ ಅಂತ ಕೇಳಲೇಬೇಡಿ. ಈಮೈಲ್ ಹಾಕಿದರೂ ಉತ್ತರವಿರೋದಿಲ್ಲ. ಫೋನ್ ಮಾಡಿದರೆ ಪಿಕ್ ಮಾಡೋದಿಲ್ಲ. ಮೆಸೇಜ್ ಹಾಕಿದರೆ ನೋಡೋಲ್ಲ. ಇನ್ನು ಫೇಸ್ಬುಕ್, ವಾಟ್ಸಾಪ್ ಎಲ್ಲವೂ ದೂರವೋ ದೂರ. ಯಾಕೆ ಏನು ಅಂತ ಅರ್ಥವಾಗದೆ ಒಮ್ಮೊಮ್ಮೆ ಇವರಿಗೆ ಏನಾದರೂ ಆಗಿದೆಯೇ ಎಂಬ ಸಂಶಯ ಮನದ ಮೂಲೆಯಲ್ಲಿ ಕೂತು ಕಾಡತೊಡಗುತ್ತದೆ. just drop a few lines once in a while ಅಂತ ಕೇಳಿಕೊಳ್ಳೋದಷ್ಟೇ ನಮ್ಮ ಕೆಲಸ.

ಆಫೀಸಿನ conference call ಮೀಟಿಂಗ್'ಗಳಲ್ಲಿ ಕೆಲವೊಮ್ಮೆ ಹೀಗೆ ಆಗುತ್ತೆ. ಏನೋ ಹೇಳುತ್ತಿರುವಾಗ ಮಂದಿ ಉಸಿರಾಡುವುದೇ ಮರೆತಂತೆ ಇರುತ್ತಾರೆ. ಕಮಕ್ ಕಿಮಕ್ ಅನ್ನದೆ ಕಾಲ್'ನಲ್ಲಿ ಇರುತ್ತಾರೆ. ಆಮೇಲೆ ಯಾವುದೋ ವಿಷಯ ಹೇಳಿ 'ಈ ವಿಷಯಕ್ಕೆ ಯಾರದ್ದಾದರೂ ಭಿನ್ನಾಭಿಪ್ರಾಯ ಇದೆಯೇ?' ಎಂದಾಗಲೂ ಉಸಿರೇ ಇರೋದಿಲ್ಲ. ಆಗ ನಾವು ಹೇಳೋದು "silence is golden, ಎಲ್ಲರಿಗೂ ಒಪ್ಪಿಗೆ ಅಂತ ಮುಂದಿನ ಹೆಜ್ಜೆ ಇಡ್ತೀವಿ" ಅಂತ ಮುಂದೆ ಸಾಗುತ್ತೇವೆ.

ಆದರೆ 'ಮೌನಂ ಸಮ್ಮತಿ ಲಕ್ಷಣಂ' ಅಲ್ಲ ಅಂತ ಯಾವಾಗ ಅರ್ಥವಾಗುತ್ತೆ ಅಂದರೆ, ಒಂದರ್ಧ ಘಂಟೆ ಬಿಟ್ಟು ಯಾರಿಂದಲೋ ಇಮೇಲ್ ಬಂದಾಗ. "ನೀನು ಒಪ್ಪಿಗೆ ಕೇಳಿದ ವಿಷಯದಲ್ಲಿ ನನಗೆ ಕೆಲವು ಪ್ರಶ್ನೆಗಳಿವೆ. ಎಲ್ಲರ ಮುಂದೆ ಯಾಕೆ ಕೇಳೋದು ಅಂತ ಕೇಳಲಿಲ್ಲ" ಅಂದಾಗ. ಹೇಳಿ ಕೇಳಿ conference call. ಹೆಚ್ಚೂ ಕಮ್ಮಿ ಒಬ್ಬೊಬ್ಬರೂ ಒಂದೊಂದು ಊರಿನಲ್ಲಿ ಇರುತ್ತಾರೆ. ಎದುರಿಗೆ ಸಿಕ್ತಾರಪ್ಪ ಕೇಳಿದರಾಯ್ತು ಅನ್ನೋ ಸನ್ನಿವೇಶವೇ ಅಲ್ಲ. ಆಗಲೇ ಅನ್ನಿಸೋದು "ನೀನೊಂದು ಮುಗಿಯದ ಮೌನ, ನಾ ಹೇಗೆ ತಲುಪಲಿ ನಿನ್ನ?" ಅಂತ.

ಇಂದಿನ ಎಳೆಯರಲ್ಲಿ ಮಾತಿಗಿಂತ ಮೌನ ಹೆಚ್ಚು. ಮುಂಚೆ get together ಅಂತ ಸೇರಿದರೆ ಮಕ್ಕಳ ಗಲಭೆ ಹತ್ತಿಕ್ಕೋದೇ ಕಷ್ಟವಾಗುತ್ತಿತ್ತು. ಇಂದು ಮಕ್ಕಳಿಗೆ 'ಫೋನ್ ಪಕ್ಕಕ್ಕೆ ಇಟ್ಟು ನಮ್ಮ ಜೊತೆ ಮಾತಾಡ್ರಪ್ಪ(ಮ್ಮಾ)' ಅಂತ ಕೇಳಿಕೊಳ್ಳುವ ಪರಿಸ್ಥಿತಿ ಒದಗಿದೆ. ಮಕ್ಕಳು ಕೆಲಸದಲ್ಲೇ ಮುಳುಗಿರಲು, ಮೊಮ್ಮಕ್ಕಳು ಮೊಬೈಲಿನಲ್ಲೇ ಮುಳುಗಿರಲು, ಮೌನ ಮುರಿಯುವವರೇ ಇಲ್ಲದ ಮನೆಗಳಲ್ಲಿ ಹಿರಿಯರಿಗೆ ತಲೆಕೆಡುವಂತಾಗಿದೆ. ಅವರುಗಳೂ ಸಾಮಾಜಿಕ ತಾಣಕ್ಕೆ ಲಗ್ಗೆ ಹಾಕಿ ಬೇಸರ ಕಳೆಯಲು ಆರಂಭಿಸುವಂತಾಗಿದೆ. ಮಾತು ಕಡಿಮೆಯಾಗಿ ಮೌನ ಹೆಚ್ಚಾಗಿದೆ. ಮಾತುಗಳನ್ನು ಮೌನವು ಮೌನವಾಗಿ ಆಕ್ರಮಿಸಿದೆ.

ಮಾನವನಾಗಿ ಬೆಳೆದು ನಿಂತ ಮೇಲೆ, ಅವಶ್ಯಕತೆ ಇಲ್ಲದಂತಾಗಿ ಬಾಲ ಕಳ್ಕೊಂಡ್ವಿ. ಮಾತು ಅನ್ನೋದು ಮನುಷ್ಯನಿಗೆ ದೊರೆತ ವರ. ನಾನಾ ಕಾರಣಗಳಿಗೆ ಮೌನದತ್ತ ಮುಖ ಮಾಡಿರುವ ನಾವು ಮುಂದೊಂದು ದಿನ ಮಾತನ್ನೇ ಕಳೆದುಕೊಳ್ಳುತ್ತೇವೋ ಏನೋ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Real silence is silence without words, silence that speak words in silence and silence that talks better than words.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more