ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ದು ಇರಬೇಕಾದೆಡೆ ಸದ್ದಿರಲಿ, ಮೌನ ಇರಬೇಕಾದೆಡೆ ಮೌನ ಇರಲಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ನಮ್ಮ ದಿನನಿತ್ಯದ ಜೀವನದಲ್ಲಿ ಸದ್ದು ಅಂಬೋದು ಎಲ್ಲೆಲ್ಲಿದೆ ಅಂತ ಕೇಳುವುದು ಒಳಿತೋ? ಎಲ್ಲಿಲ್ಲ ಅಂತ ಕೇಳುವುದು ಸರಿಯೋ? ಹೌದು, ಎಲ್ಲಿಲ್ಲ ಅನ್ನೋ ಪಟ್ಟಿಯ ಉದ್ದಳತೆ ಬಹಳ ಕಡಿಮೆ. ನಮ್ಮ ಜೀವನದಲ್ಲಿ ಎಲ್ಲೆಲ್ಲೂ ಸದ್ದು ಅನ್ನೋದಿದೆ. ಈ ಸದ್ದು ಅಥವಾ ಶಬ್ದ ಹೇಗೆಲ್ಲಾ ಇದೆ ಅಂತ ನೋಡೋಣ ಬನ್ನಿ.

ಒಂದು ಸಾಮಾನ್ಯವಾದ ಸನ್ನಿವೇಶದಲ್ಲಿ ಅಲಾರಾಂ ಸದ್ದಿನೊಂದಿಗೆ ದಿನದ ಆರಂಭ. ಈ ಸದ್ದು ಆಲಾಪನೆಯಂತೂ ಅಲ್ಲ ಅನ್ನೋದನ್ನು ಎಷ್ಟೋ ಮಂದಿ ಒಪ್ಪುವ ಮಾತು. ಆ ನಂತರ ಶುರು ನೋಡಿ ಹಲ್ಲುಜ್ಜುವ ಶಬ್ದ, ಬಚ್ಚಲಮನೆಯ ಶಬ್ದ, ಅಡುಗೆಯ ಮನೆಯಲ್ಲಿ ಪಾತ್ರೆಗಳ ಶಬ್ದ, ಅಡುಗೆ ಆಗುವಾಗಿನ ಕುಕ್ಕರಿನ ಶಬ್ದ, ಎಷ್ಟು ವಿಷಲ್ ಆಯ್ತು ಎಂಬ ಅಮ್ಮನ ಕೂಗಿನ ಸದ್ದು, ಒಗ್ಗರಣೆಯ ಚಿಟಪಟ ಶಬ್ದ, ಲೇಟ್ ಆಯ್ತು ಎಂದು ಕಿರುಚಾಡುವ ಶಬ್ದ, ಅದೇ ಸಮಯದಲ್ಲಿ ಪೊಂಪೊಂ ಎಂಬ ಕಸದ ಲಾರಿಯವರ ಶಬ್ದ, ಶಾಲಾ ಮಕ್ಕಳ ವ್ಯಾನ್ ಶಬ್ದ... ಹೀಗೆ ಪಟ್ಟಿ ಬರೆಯುತ್ತಾ ಹೋದರೆ ಮುಗಿಯೋದೇ ಇಲ್ಲ.

ಧನಾತ್ಮಕ ವಿಚಾರಗಳ ಚಿಂತನೆಗಳ ದೂತರಾಗೋಣಧನಾತ್ಮಕ ವಿಚಾರಗಳ ಚಿಂತನೆಗಳ ದೂತರಾಗೋಣ

ಒಟ್ಟಾರೆ ಹೇಳೋದಾದ್ರೆ ಬೆಳಿಗ್ಗೆ ಅಲಾರಾಂನಿಂದ ಹಿಡಿದು ರಾತ್ರಿ ಮಲಗಿದಾಗ ಆರಂಭವಾಗುವ ಗೊರಕೆ ಸದ್ದಿನವರೆಗೂ ಇಡೀ ಜೀವನವೇ ಸದ್ದುಗದ್ದಲಮಯ...

Silence And Sound As Per Situation

ಗೊರಕೆ ಹೊಡೆಯುವ ತನಕ ಅಂತ ಹೇಳಿದ್ದು ಕೂಡ ಅರ್ಧಸತ್ಯ. ನಿದ್ದೆಯಲ್ಲೇ ಬಡಬಡಿಸೋದು, ಮಲಗಿರುವಾಗ ಫೋನ್ ಬಂದಾಗ ಬೈಕೊಂಡ್ ಏಳೋದು, ಮಲಗಿರುವಾಗ ಟೆಕ್ಕಿ ಮಗ ಮನೆಗೆ ಬಂದಾಗ ಆಗುವ ಶಬ್ದಗಳು, ಮಲಗಿರುವಾಗ ಬೀದಿಯಲ್ಲಿ ಸಾಗುವ ಕೀಟಲೆ ಮಾಡುವ ಮಂದಿ ಬಾಗಿಲು ಬಡಿದು ಓಡಿ ಹೋಗೋದು, ಬೆಳ್ಳಂ ಬೆಳಿಗ್ಗೆ ಏರ್ಪೋರ್ಟ್ ನಿಂದ ಬಂದಿಳಿವ ಮಂದಿಯ ಗಲಭೆ, ಆಟೋದವರೊಂದಿಗೆ ಆಡುವ ಜಗಳದ ಸದ್ದು ಇತ್ಯಾದಿಗಳೂ ನಮ್ಮ ಲಿಸ್ಟ್ ನಲ್ಲಿ ಸೇರುತ್ತವೆ. ಇವೆಲ್ಲಕ್ಕಿಂತ ಮುಕುಟಪ್ರಾಯವಾದ ಸದ್ದು ಏನು ಗೊತ್ತೇ? ಬೀದಿನಾಯಿಗಳ ಲೊಳ್ ಗಳು... ಒಂದು ನಾಯಿ ಬೊಗಳಿದರೆ ಮತ್ತೊಂದು ಉತ್ತರ ನೀಡಿ ಬೊಗಳುತ್ತವೆ ಹೀಗೆ ಸರಣಿ ಲೊಳ್ ಗಳು.

ಪ್ರಶ್ನೆಗಳನ್ನು ಯಾವಾಗ ಕೇಳಬೇಕು ಯಾವಾಗ ಕೇಳಬಾರದು?ಪ್ರಶ್ನೆಗಳನ್ನು ಯಾವಾಗ ಕೇಳಬೇಕು ಯಾವಾಗ ಕೇಳಬಾರದು?

ಸದ್ದು ಎಂದರೇನು? ಕಿವಿಯು ಗುರುತಿಸಬಲ್ಲ ಒಂದು ಸಂವೇದನೆ. ಅದು ಅತೀ ಚಿಕ್ಕದೂ ಆಗಿರಬಹುದು ಅಥವಾ ಅತೀ ದೊಡ್ಡ ಸದ್ದೂ ಆಗಿರಬಹುದು. ಸದ್ದನ್ನು 'ಡೆಸಿಬೆಲ್' ನಲ್ಲಿ ಅಳೆಯುತ್ತಾರೆ. ಮಾಮೂಲಾಗಿ ಆಡುವ ಮಾತುಕತೆ 60 ಡೆಸಿಬೆಲ್ಸ್ ಇರುತ್ತದೆ. 85ಕ್ಕೂ ಹೆಚ್ಚಿರುವ ಸದ್ದು ಎಂದೂ ಹಿತಕರವಲ್ಲ. ಅತೀ ಹೆಚ್ಚು ಕಾಲ ಇದೇ ವಾತಾವರಣದಲ್ಲಿರುವುದೇ ಆದರೆ ಕಿವಿಯನ್ನು ಮುಚ್ಚಿಕೊಳ್ಳುವ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಕಿವುಡಾಗುವುದು ನಿಶ್ಚಿತ.

Silence And Sound As Per Situation

ಸದ್ದು ಜೋರಾದರೆ ಮಾತ್ರ ಅಸಹನೀಯ ಅನ್ನಿಸಿಕೊಳ್ಳೋದಿಲ್ಲ. ಬದಲಿಗೆ ಸಣ್ಣದಾಗಿನ ಸದ್ದೇ ಒಂದೇ ಸಮನೆ ಆಗ್ತಾ ಇದ್ರೆ ಅದೂ ಹಿಂಸಾತ್ಮಕವೇ. ಚಂಡಿ ಹಿಡಿದು ಕೂರುವ ಮಕ್ಕಳ ಕೊಸಕೊಸ ಅಳು. ಅಬ್ಬಬ್ಬಾ ಅಂದ್ರೆ ಒಂದು ಇಪ್ಪತ್ತು ಡೆಸಿಬೆಲ್ಸ್ (ಅಂದುಕೊಳ್ಳಿ ಅಷ್ಟೇ) ಆದರೆ ಒಂದೇ ಸಮನೆ ನಿಲ್ಲದ ಮಳೆಯಂತೆ ಕುಯ್ಯೋ ಅಂತಾ ಇದ್ರೆ ಕೇಳಲು ಸಾಧ್ಯವೇ? "ಸಾಕು ನಿಲ್ಲಿಸು ನನ್ನ ಕಿವಿ ತೂತಾಯ್ತು" ಎಂದು ನೀವು ರೇಗಾಡಲೂಬಹುದು ಬಿಡಿ.

'ತುಂಬ'ದ ಬಗ್ಗೆ ಸ್ವಲ್ಪ ಮಾತಾಡೋಣ'ತುಂಬ'ದ ಬಗ್ಗೆ ಸ್ವಲ್ಪ ಮಾತಾಡೋಣ

ಕಿವಿ ತೂತು ಎಂದಾಗ ent ವಿಷಯ ಹೇಳದೆ ಹೋದ್ರೆ ಹೇಗೆ? ಕಿವಿ ಕೇಳಿಸುವಿಕೆಯಲ್ಲಿ ತೊಂದರೆಯಾಗಿದೆ ಎಂದಾಗ ent ವೈದ್ಯರ ಬಳಿ ಹೋಗುತ್ತೇವೆ. ಕಿವಿಯು ಎಷ್ಟರ ಮಟ್ಟಿಗೆ ಸೂಕ್ಷ್ಮವಾದ ಸದ್ದನ್ನು ಕೇಳಿಸಿಕೊಳ್ಳಬಹುದು ಎಂಬುದನ್ನು ಪರೀಕ್ಷಿಸುತ್ತಾರೆ. ಅತೀ ಸೂಕ್ಷ್ಮ ಕೇಳಿಸದೇ ಹೋಗೋದು ಕೆಲವೊಮ್ಮೆ ಕಿವಿಯೊಳಗೆ ಕಸ ಸೇರಿದ್ದರಿಂದ ಆಗಿರಬಹುದು, ಅಥವಾ ಪಿನ್ ಹಿಂಬದಿಯಿಂದ ಗೊಗ್ಗೇ ತೆಗೆಯುವ ಕ್ರಿಯೆಯಲ್ಲಿ ಚುಚ್ಚಿಕೊಂಡು ಗಾಯವಾಗಿರಬಹುದು, ತೂತು ಆಗಿರಬಹುದು ಅಥವಾ ದಿನನಿತ್ಯದಲ್ಲಿ ಸದ್ದು ಹೆಚ್ಚಿರುವ ಜಾಗದಲ್ಲಿ ಕೆಲಸ ಮಾಡುತ್ತಾ ಕಿವಿ ಕೇಳಿಸದಂತೆಯೂ ಆಗಿರಬಹುದು. ವೈದ್ಯರೋ, ಮೊದಲಲ್ಲಿ ಕಿವಿಗೆ ಡ್ರಾಪ್ಸ್ ಕೊಟ್ಟು ಹಾಕಿಕೊಳ್ಳಲು ಹೇಳಿ ಸರಿಪಡಿಸಲಾಗುತ್ತದೆಯೇ ನೋಡುತ್ತಾರೆ. ಇಲ್ಲವಾದರೆ ಕಿವಿ ಮಷೀನ್ ತೆಗೆದುಕೊಳ್ಳಿ ಎಂದೂ ಹೇಳಬಹುದು.

Silence And Sound As Per Situation

ಚಿಕ್ಕ ವಯಸ್ಸಿನಲ್ಲಿ ಅಥವಾ ಹದಿಹರೆಯದಲ್ಲಿ ಕಿವಿಗೆ ಸದ್ದು ಜೋರಾಗಿ ಬಿದ್ದರೂ ಅದು ಹಿತವಾಗಿಯೇ ಇರುತ್ತದೆ. ಟಿ.ವಿ ವಾಲ್ಯೂಮ್ ಜಾಸ್ತಿ ಇಡೋದು, ಕಾರಿನಲ್ಲಿ ಹೋಗುವಾಗ ಮ್ಯೂಸಿಕ್ ಸಿಸ್ಟಮ್ ವಾಲ್ಯೂಮ್ ಜೋರಾಗಿಡೋದು, ವಿಡಿಯೋ ಗೇಮ್ಸ್, ಸಿನಿಮಾದಲ್ಲಿ ಕೇಳಿಬರುವ ಅಬ್ಬರದ ಸಂಗೀತ ಅಥವಾ ಡಿಶುo ಡಿಶುo ಸದ್ದು ಎಲ್ಲವೂ ಹಿತವೇ. ಅದರಂತೆಯೇ ನೈಟ್ ಕ್ಲಬ್ ಸಂಗೀತ, ಡಿಜೆ ಇತ್ಯಾದಿಗಳೂ ಕಿವಿಗೆ ಇಂಪು. ವಯಸ್ಸು ಹೆಚ್ಚಾದಂತೆ ಇಂಥ ಸದ್ದುಗಳು ಅಸಹನೀಯವಾಗ ತೊಡಗುತ್ತದೆ. ಅಂದು ನಾವೇ ಎಂಜಾಯ್ ಮಾಡಿದ್ದ ಸಂಗೀತ ಇಂದು ಗದ್ದಲ ಎನಿಸಬಹುದು.

ಇದರಂತೆಯೇ, ವಯೋಮಿತಿಯನ್ನೇ ಬದಿಗಿರಿಸಿ ನೋಡುವಾಗಲೂ ಅಷ್ಟೇ, ಒಬ್ಬರ ಸಂಗೀತ ಮತ್ತೊಬ್ಬರಿಗೆ ಗದ್ದಲ ಎನಿಸಬಹುದು. ಕೆಲವರು ರಾಪ್ ಮ್ಯೂಸಿಕ್ ಅನ್ನು ತಕತಕ ಕುಣಿಯುತ್ತಾ ಅನುಭವಿಸಿದರೆ, ಮತ್ತೊಬ್ಬರಿಗೆ ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ವಾದನ ಪ್ರಿಯವಾಗಬಹುದು. ಯಾವುದೂ ಇಲ್ಲಿ ತಪ್ಪಿಲ್ಲ. ಆದರೆ ಯಾವುದು ಸಂಗೀತ, ಯಾವುದು ಗದ್ದಲ ಅನ್ನೋದು ನಮ್ಮ ಅನಿಸಿಕೆಗೆ ಬಿಟ್ಟಿದ್ದು ಅಷ್ಟೇ.

ಈಗ ಗದ್ದಲದ ವಿಷಯಕ್ಕೆ ಬಂದರೆ, ಆಸ್ಪತ್ರೆಯ ಸುತ್ತಮುತ್ತಲೂ, ಆಸ್ಪತ್ರೆಯ ಒಳಗೆ, ಅದರಲ್ಲೂ ಪೇಷಂಟ್ ಇರುವ ಕೊನೆಯಲ್ಲಿ ಸಾಮಾನ್ಯವಾಗಿ ಗದ್ದಲ ಕಡಿಮೆ ಇರುತ್ತದೆ. ಆಸ್ಪತ್ರೆಯ ಸುತ್ತಮುತ್ತ ಅಂತ ಹೇಳಿದ್ದು ಬಹುಶಃ ಅಂದಿನ ಕಾಲಕ್ಕೆ ಸರಿ ಹೊಂದೋ ಮಾತು ಎಂದುಕೊಳ್ಳೋಣ. ಇಂದು ಬೀದಿಗೊಂದೊಂದು ಆಸ್ಪತ್ರೆ ಇದ್ದು ಅದೂ ರಾಜಬೀದಿಗಳಲ್ಲೇ ಆಸ್ಪತ್ರೆಗಳು ತಲೆ ಎತ್ತಿರೋದ್ರಿಂದ ಎಷ್ಟರ ಮಟ್ಟಿಗೆ 'hospital zone' ಎಂಬ ಫಲಕ ಓದಿ ಗಾಡಿಗಳು ಹಾರ್ನ್ ಮಾಡದೆ ಸಾಗುತ್ತದೆ ಅನ್ನೋದಕ್ಕೆ ಏನೇನೂ ಗ್ಯಾರಂಟಿ ಇಲ್ಲ.

ಸದ್ದು ಇಲ್ಲದ್ದು ಎಂದಾಗ ಮತ್ತೊಂದು ವಿಷಯ ನೆನಪಿಗೆ ಬರೋದು ಅಂದ್ರೆ ಲೈಬ್ರರಿ. ಮಂದಿ ಅಲ್ಲಿಗೆ ಬರೋದೇ ಅಧ್ಯಯನಕ್ಕೆ. ಎಲ್ಲಿ ಅಧ್ಯಯನ ಆಗುತ್ತದೋ ಅಲ್ಲಿ ಗಲಭೆ/ಗದ್ದಲ ಇರಕೂಡದು. ಹಾಗಾಗಿ ಇಂದಿಗೂ ಎಲ್ಲೆಡೆ ಲೈಬ್ರರಿಗಳಲ್ಲಿ ನಿಶಬ್ದ ವಾತಾವರಣ ನೋಡಬಹುದು. ಇಂಥ ಪರಿಯ ವಾತಾವರಣವನ್ನು pindrop silence ಎನ್ನುತ್ತಾರೆ. ಶಾಲೆಯಲ್ಲಿ ಅತೀ ಸ್ಟ್ರಿಕ್ಟ್ ಆಗಿರುವ ಟೀಚರ್ ಪಾಠ ಮಾಡಲು ಬಂದರು ಎಂದರೆ pindrop ಸೈಲೆನ್ಸ್ ವಾತಾವರಣ ಮೂಡುತ್ತದೆ. ಸ್ಟೇಜಿನ ಮೇಲೆ ಬರುವ ಅಧ್ಯಾಪಕರು ಸ್ವಲ್ಪ ಸಡಿಲ ಬಿಡ್ತಾರೆ ಅಂದ್ರೆ ಸಾಕು ವಿದ್ಯಾರ್ಥಿಗಳು ಬಾಲ ಬಿಚ್ಚುತ್ತಾರೆ, ಆಮೇಲೆ ಅದೊಂದು ಸಂತೆಯೇ ಆಗಿರುತ್ತದೆ ಕೆಲವೊಮ್ಮೆ.

ಸದ್ದು ಅನ್ನೋದು ಒಂದು ಸಾಮಾನ್ಯ ಪದವೇ ಆದರೂ ಈ ಸದ್ದು ಒಂದೊಂದೆಡೆ ಒಂದೊಂದು ರೀತಿ. ಸಂತೆಯಲ್ಲಿನ ಸದ್ದೇ ಬೇರೆ, ದೇವಾಲಯದಲ್ಲಿನ ಸದ್ದೇ ಬೇರೆ. ಚರ್ಚ್ ನಲ್ಲಿರುವ ಸದ್ದು ಬೇರೆ, ಲೈಬ್ರರಿಯ ಸದ್ದು ಬೇರೆ, ವಿಮಾನ ನಿಲ್ದಾಣದ ಸದ್ದು ಬೇರೆ, ಫಿಶ್ ಮಾರ್ಕೆಟ್ ಸದ್ದು ಬೇರೆ ಹೀಗೆ...

ಯಾಕೆ ಹೇಳಿದೆ ಎಂದರೆ, ಮಾಪನಕ್ಕೆ ಸಿಗದ ಒಂದು ಸದ್ದು ಕೂಡ ಇದೆ. ಅದೇ 'ಮೌನ'. ಶೀತಲ ಸಮರದಿಂದ ಮನೆಯೊಳಗೆ ಉಂಟಾಗುವ ಭೀಕರ ಮೌನದಂಥ ಸದ್ದು ಇನ್ನೊಂದಿಲ್ಲ. ಎಲ್ಲೆಡೆ ಅತೀವ ನಿಶಬ್ದತೆ ಇದ್ದು ದೇಹದ ultrasound ಮಾಡಿ ಕೇಳಿಸಿಕೊಂಡರೆ ಅಸಹನೆಯ ಭೋರ್ಗರೆತದ ಸದ್ದು ನಿಜಕ್ಕೂ ಭೀಕರ. ಜ್ವಾಲಾಮುಖಿ ಸಿಡಿಯುವ ಮುನ್ನ ಯಾವ ರೀತಿ ಎಲ್ಲೆಡೆ ಶಾಂತತೆ ಇರುವುದೋ ಹಾಗೆ ಇದು ಕೂಡ. ಇಂಥ ಮೌನಗಳು ಅಸಹನೀಯ.

ಆದರೆ ಮೌನಕ್ಕೆ ಬೇರೆಡೆ ತುಂಬಾ ಬೆಲೆ ಇದೆ. ಮೌನದ ಬಳಕೆಗೆ ಸಿನಿಮಾದಲ್ಲಿ ಬಹಳ ಬೆಲೆ ಇದೆ. ಒಂದು ಆರ್ಟ್ ಸಿನಿಮಾ ಆಗಬಹುದು, ಪತ್ತೇದಾರಿ ಸಿನಿಮಾ ಆಗಬಹುದು ಅಥವಾ ದೆವ್ವ ಭೂತದ ಸಿನಿಮಾ ಆಗಿರಬಹುದು. ಯಾವುದೋ ಒಂದು ದೃಶ್ಯದಲ್ಲಿ ಭೀಕರ ಮೌನ ಇದೆ ಅಂದಾಗ ನಮ್ಮ ಹೃದಯದ ಬಡಿತವೂ ನಮಗೆ ಕೇಳಿಸಲು ಆರಂಭಿಸಿರುತ್ತದೆ. ಕಾರಣ ಇಷ್ಟೇ... ಈಗಲೋ ಆಗಲೋ ಏನೋ ಆಗುತ್ತದೆ ಅನ್ನೋ ವಿಷಯ ನಮಗೆ ಗೊತ್ತಿರುತ್ತದೆ. ಮಬ್ಬುಗತ್ತಲಲ್ಲಿ ಒಬ್ಬಾಕೆ ತನ್ನ ಕಾರಿನತ್ತ ನಡೆಯುತ್ತಾ ಸಾಗಿದ್ದಾಳೆ. ಸಂಪೂರ್ಣ ಮೌನ ಎಂದಾಗಲೇ ಮನಸ್ಸು 'ಯಾರೋ ಅಟ್ಯಾಕ್' ಮಾಡ್ತಾರೆ ಅಂತಾನೇ ನುಡಿಯೊಂದು. ಇಂಥ ಮೌನಗಳು ಭಯಾನಕ.

ಹೆಚ್ಚು ಮಾತಿಲ್ಲದ ಲಾರೆಲ್ ಹಾರ್ಡಿ, ಟಾಮ್ ಅಂಡ್ ಜೆರ್ರಿ, ಪುಷ್ಪಕ ವಿಮಾನ ಸಿನಿಮಾದಲ್ಲಿನ ಮೌನ ನಗೆ ಉಕ್ಕೇರಿಸುತ್ತದೆ.

ಮನಸ್ಸಿನಲ್ಲಿ ಪ್ರೀತಿ ಪ್ರೇಮವಿರಲಿ. ಅಲ್ಲಿ ಮಾತೂ ಇದೆ, ಮೌನವೂ ಇದೆ. ಏಕೆಂದರೆ "ಮನಸು ಮನಸು ಸೇರಿದ ಮೇಲೆ, ಮೌನವೂ ಮಾತೇ... ಇದೇ ಪ್ರೀತಿ"

ಎಲ್ಲೆಡೆ ಮಾತಿನ ಸದ್ದಿರಲಿ, ವಾಗ್ವಾದದ ಗಲಭೆ ಬೇಡ. ಮೌನದ ನಿಶಬ್ದತೆ ಬೇಕಿಲ್ಲ. ಸರ್ಜಿಕಲ್ ಸ್ಟ್ರೈಕ್ ಇರುವಾಗ ನಿಶಬ್ದತೆ ಮುಖ್ಯ. ಆದರೆ ಒಬ್ಬರ ಮೌನ ಮತ್ತೊಬ್ಬರ ಮನಸ್ಸಿನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡದಿರಲಿ. ಎಲ್ಲಿ ಸದ್ದಿರಬೇಕೋ, ಅಲ್ಲಿರಲಿ ಸದ್ದು. ಮೌನವಿರಬೇಕಾದೆಡೆ ಮೌನ ಇರಬೇಕು.

English summary
There is noise everywhere in our lives. Let us see where should be noise and where should remain silent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X