• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ತುಂಬ'ದ ಬಗ್ಗೆ ಸ್ವಲ್ಪ ಮಾತಾಡೋಣ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

'ತುಂಬ'ದ ಬಗ್ಗೆ ಸ್ವಲ್ಪ ಮಾತಾಡೋಣ ಅಂದಾಗಲೇ ಅಲ್ಲೊಂದು ಕೊಂಚ ಎಡವಟ್ಟು ಎನಿಸಿರಬಹುದು... ತುಂಬ ಅಥವಾ ತುಂಬಾ ಅಂದ ಮೇಲೆ 'ಸ್ವಲ್ಪ', 'ಕೊಂಚ' ಅಂದಾಗ ವಿರುದ್ಧ ಪದಗಳಾಯ್ತು ಅಲ್ಲವೇ? ತುಂಬದ ಬಗ್ಗೆ ಸ್ವಲ್ಪ ಮಾತು ಅಂದ್ರೇನು? ತುಂಬಾ ಅಂದ್ರೆ ಸಿಕ್ಕಾಪಟ್ಟೆ, ಅತೀ, ಬೇಜಾನ್ ಅಂದೆಲ್ಲಾ ಅರ್ಥಗಳಿವೆ.

ಈಗ ತುಂಬ ಅಂದ್ರೆ ಬರೀ ತುಂಬ ಅಲ್ಲ... ತುಂಬಾ, ತುಂಬಿ, ತುಂಬು ಹೀಗೆ ಎಲ್ಲವೂ ಅಂದುಕೊಳ್ಳಿ... ಈ ಪದಗಳ ಬಳಕೆ ದಿನನಿತ್ಯದಲ್ಲಿ ಎಷ್ಟೋ ಸಾರಿ ಆಗುತ್ತಲೇ ಇರುತ್ತದೆ. ನಾವು ಕನ್ನಡ ಮಾತಾಡೋಲ್ಲ, ನಮಗೆ ಕನ್ನಡ್ ಗೊತ್ತಿಲ್ಲ ಅಂತ ತುಂಬಾ ಅತೀ ಆಡುವಾಡುವವರು ಯಾವ ಭಾಷೆ ಮಾತಾಡ್ತಾರೋ ಆಯಾ ಭಾಷೆಯಲ್ಲೂ ಈ ಪದದ ಸಮಾನಾಂತರ ಪದ ಇರಲೇಬೇಕಲ್ಲವೇ?

ಎಲ್ಲಾ Junk ದೂರವಿರಿಸಿ ಸ್ವಸ್ಥ ಬದುಕನ್ನು ಬಾಳೋಣ

ಬೆಳಿಗ್ಗೆ ಐದಕ್ಕೆ ಎದ್ದಾಗ ಇನ್ನೂ ಕಣ್ಣುಗಳಲ್ಲಿ 'ತುಂಬಾ' ನಿದ್ದೆ ಇದೆ ಅಂತ ಎಷ್ಟೋ ಸಾರಿ ಅನ್ನಿಸುತ್ತದೆ. ತುಂಬು ನಿದಿರೆಯ ಕಣ್ಣುಗಳಿಂದಲೇ ಗೋಡೆಯ ಮೇಲಿನ ಪಟಗಳಿಗೆಲ್ಲಾ ಅರ್ಧಗಣ್ಣುಗಳಿಂದ ನಮಿಸಿ ಅಡುಗೆ ಮನೆಯ ಕೆಲಸ ಆರಂಭಿಸುವಾಗ, ಮಕ್ಕಳಿಗೆ ತಿಂಡಿಗೆ ಏನು, ಮಧ್ಯಾಹ್ನದ ಊಟಕ್ಕೆ ಏನು ಅಂತೆಲ್ಲಾ ಮನದ ತುಂಬಾ ಆಲೋಚನೆಗಳು ಬಂದಾಗ ಕಂಗಳನ್ನು ತುಂಬಿದ್ದ ನಿದ್ದೆ ಹಾಗೆ ಕಣ್ಮರೆಯಾಗಿ 'ತುಂಬಲಾರದ ನಷ್ಟ' ಎಂಬಂತೆ ಶೂನ್ಯ ಮೂಡಿಸೋದು ಸಹಜ.

ಕೊನೆಗೆ ಏನೋ ಒಂದು ತಿಂಡಿ, ಊಟ ಸಿದ್ಧ ಮಾಡಿದ ಮೇಲೆ ಡಬ್ಬಿಗಳನ್ನು 'ತುಂಬಿ'ದ ಮೇಲೆ ಗಂಡ 'client ಮೀಟಿಂಗ್ ಇದೆ, ಮಧ್ಯಾಹ್ನ ಹೊರಗೆ ಊಟಕ್ಕೆ ಹೋಗ್ತಿದ್ದೀವಿ' ಎನ್ನಬಹುದು ಅಥವಾ ನಿಮ್ಮ ಆಫೀಸಿನಲ್ಲಿ ಮಧ್ಯಾಹ್ನ ಊಟ ತರಿಸುತ್ತಿದ್ದಾರೆ ಎಂದು ನೆನಪಿಗೆ ಬರಬಹುದು. ಒಟ್ಟಿನಲ್ಲಿ ಕಷ್ಟಪಟ್ಟಿದ್ದೆಲ್ಲ ವ್ಯರ್ಥವಾಯ್ತು ಎಂದು ಮನಸ್ಸಿಗೆ ಬಂದಾಗ ಕಂಗಳು ತುಂಬಿ ಬರುತ್ತದೆ ಅಲ್ಲವೇ? ಬೆಳಿಗ್ಗೆ ಕಣ್ ಬಿಟ್ಟಾಗಲೇ ಈ ಮಾತುಗಳು ಬಂದಿದ್ರೆ ಹೃದಯ ತುಂಬಿ ಬಂದಿರೋದು!!

ಚಿಂತೆ ಬೇಡ ಚಿಂತನೆ ಇರಲಿ ಅನ್ನೋ ಮಾತು ಬುರುಡೆ ಅಲ್ಲ

ಹೋಗ್ಲಿ ಬಿಡಿ ಕೆಲಸಕ್ಕೆ ಹೋಗೋ ಹಾದ್ಯಾಗೆ ಬೀದಿ ತುಂಬಾ ವಾಹನಗಳು, ಬಸ್ ಸ್ಟಾಪ್ ತುಂಬಾ ಜನಗಳು, ಇನ್ನು ಬಸ್ಸುಗಳೋ ತುಂಬು ಗರ್ಭಿಣಿಗಳು, ಇನ್ನು ಆಫೀಸಿಗೆ ಕಾಲಿಟ್ಟರೆ ಅಲ್ಲಿ ದುಗುಡವೇ ಮೈತಾಳಿದಂಥ ಮುಖಗಳು ಆಫೀಸಿನ ತುಂಬಾ ಓಡಾಡಿಕೊಂಡಿರುತ್ತವೆ. ಇಂತಿಪ್ಪ ಮಧ್ಯಮ ವರ್ಗದವರ ದಿನಚರಿ. ಎಲ್ಲವೂ ತುಂಬಾಗಳೇ!

ಈಗ ಮಿಕ್ಕ ವಿಷಯಗಳತ್ತ ಕೊಂಚ ನೋಡೋಣ... ಗಣ್ಯರು ಸ್ವರ್ಗಸ್ತರಾದಾಗ ಪತ್ರಿಕಾ ಮಾಧ್ಯಮ ಹೇಳುವ ಮಾತು "ತುಂಬಲಾರದ ನಷ್ಟ". ಎಲ್ಲರೂ ತಮ್ಮ ಜೀವಿತ ಕಾಲದಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಅಲಂಕರಿಸಿರುತ್ತಾರೆ. ದುಷ್ಟರ ಸ್ಥಾನ ಖಾಲಿಯಾದರೆ ಆ ಸ್ಥಾನವನ್ನು ಅಲಂಕರಿಸಲು, ಅಲ್ಲಲ್ಲ ಆಕ್ರಮಿಸಲು ಹಲವಾರು ಮಂದಿ ಕ್ಯೂ ನಿಂತಿರುತ್ತಾರೆ. ಆದರೆ ಒಬ್ಬ ಉತ್ತಮ ಜೀವಿ ದೈವಾಧೀನರಾದಾಗ ಆ ಸ್ಥಾನ ಖಂಡಿತವಾಗಿಯೂ ತುಂಬಲಾರದ್ದೇ ಆಗಿರುತ್ತದೆ. ಕಳೆದ ವರ್ಷದಲ್ಲಿ ನಮ್ಮನ್ನಗಲಿದ ಇಬ್ಬರು ಮಹಾಗುರುಗಳು ಈ ಪಂಕ್ತಿಗೆ ಸೇರುತ್ತಾರೆ.

ಅಂದಿನ ದಿನಗಳಲ್ಲಿ ದಿನಸಿ ಅಂಗಡಿಗೆ ಉದ್ದನೆಯ ಲಿಸ್ಟ್ ತೆಗೆದುಕೊಂಡು ಹೋಗಿ, ಸಾಮಾನುಗಳನ್ನು ತರೋದು ಒಂದು ದೊಡ್ಡ ಕೆಲಸವೇ ಆಗಿತ್ತು. ಚೀಟಿ ಕೊಟ್ಟು ಬಂದು ಆತ ತಂದುಕೊಡೋದು ಅಂತಿಲ್ಲದೇ ನಾವೇ ತರುತ್ತಿದ್ದೆವು. ಅಂಗಡಿಯಿಂದ ಸಾಮಾನುಗಳು ಮನೆಗೆ ಬಂದ ಮೇಲೆ ಅವುಗಳನ್ನು ಆಯಾ ಡಬ್ಬಿಗಳಿಗೆ ತುಂಬಿಡೋದು ನನಗಂತೂ ಒಂಥರ ಖುಷಿಕೊಡೋ ಕೆಲಸ. ಈ ಕೆಲಸ ಇಂದಿಗೂ ಮುಂದುವರಿಸಿದ್ದೇನೆ ಬಿಡಿ.

ನಗುವೆಂಬ ಈ ವಕ್ರರೇಖೆಯಲ್ಲಿ ಏನೆಲ್ಲಾ ಅಡಗಿದೆಯಲ್ಲ...

ಅಡುಗೆ ಮನೆಯ ದಿನಸಿ ಸಾಮಾನುಗಳು ಎಂದ ಮೇಲೆ ಮುಂದಿನ ಹಂತವೇ ಅಡುಗೆ ಊಟ ಅಲ್ಲವೇ? ಮದುವೆ ಅಥವಾ ಸಮಾರಂಭಗಳಲ್ಲಿ ಬಫೆ ಇರುತ್ತದೆ ಅಂದುಕೊಳ್ಳಿ. ಅದೇನೋ ಹಪಾಹಪಿತನದಿಂದ ತಟ್ಟೆಗಳಲ್ಲಿ ಚಮಚೆ ಊರಲೂ ಸ್ಥಳವಿಲ್ಲದಂತೆ ತುಂಬಿಕೊಳ್ಳುವವರೇ ಅನೇಕ. ಹಾಗೆ ತುಂಬಿಕೊಂಡವರು ಊಟ ಮಾಡೋದೇ ಇಲ್ಲ, ಚೆಲ್ಲುತ್ತಾರೆ. ಹೊಟ್ಟೆ ತುಂಬುವಷ್ಟು ತೆಗೆದುಕೊಂಡರೆ ಸಾಕು ಇಡೀ ದೇಹ ತುಂಬುವಂತೆ ಊಟ ಬಡಿಸಿಕೊಂಡು ಚೆಲ್ಲುವುದು ತಪ್ಪಲ್ಲವೇ? ಮೈತುಂಬಾ ಒಡವೆ ಧರಿಸಬಹುದು ಆದರೆ ಮೈತುಂಬಾ ಉಣ್ಣೋಕೆ ಸಾಧ್ಯವಿಲ್ಲ.

ಒಂದು ಡಬ್ಬಿಯಲ್ಲಿ ಅಕ್ಕಿಯನ್ನೂ ಬೇಳೆಯನ್ನೂ ತುಂಬಿದಾಗ ಆ ಡಬ್ಬಿ ತುಂಬಿದಂತೆ ಅನ್ನಿಸುತ್ತದೆ, ಆದರೆ ಡಬ್ಬಿಯನ್ನು ಮೆಲ್ಲಗೆ ಕುಟ್ಟಿದಾಗ ಅಕ್ಕಿ ಬೇಳೆಗಳು ಒಳಗೆ ಜಾಗ ಮಾಡಿಕೊಂಡು settle ಆದ ಮೇಲೆ ಕೊಂಚ ಜಾಗ ಏರ್ಪಾಡಾಗುತ್ತದೆ. ಕೆಲವರು ಊಟ ಮಾಡುವ ಬಗ್ಗೆಯೂ ಹೀಗೆಯೇ... ನಿಧಾನವಾಗಿ ಊಟ ಮಾಡುತ್ತಾ, ಮಧ್ಯೆ ಮಧ್ಯೆ ಬ್ರೇಕ್ ನೀಡಿ ಉಂಡ ಊಟ ಖಾಲಿಯಿರುವ ಜಾಗವನ್ನೆಲ್ಲಾ ತುಂಬಿದಾಗ ಮತ್ತೆ ಮುಂದುವರೆಸುತ್ತಾ ಸಾಗುತ್ತಾರೆ.

ಡಬ್ಬಿಯೊಳಗೆ ಹಾಕಿದ ಘನ ಪದಾರ್ಥಗಳನ್ನು ಕುಟ್ಟಿದಾಗ ಅವು ಕೊಂಚ settle ಆಗಿ ಜಾಗ ಮಾಡಿಕೊಡಬಹುದು. ಆದರೆ ದ್ರವವನ್ನು ಹಾಕಿದಾಗ ಏನು ಕುಟ್ಟಿದರೂ ಬಿಟ್ಟರೂ ಅಷ್ಟೇ. ಎಷ್ಟು ಪ್ರಮಾಣ ಇರೋ ಅಷ್ಟೇ ಇರುತ್ತೆ. ಹಾಗೆಯೇ ಅನಿಲ ರೂಪ ಕೂಡ. ಒಂದು ಗ್ಯಾಸ್ ಸಿಲಿಂಡರ್ ನಲ್ಲಿ ಎಷ್ಟು ಹಿಡಿಸಲು ಸಾಧ್ಯವೋ ಅಷ್ಟೇ ಹಿಡಿಸೋದು. ಕುಟ್ಟಿದರೆ ತಟ್ಟಿದರೆ ಜಾಗ ಆಗೋಲ್ಲ.

ದ್ರವ ಅಂದಾಗ ನೆನಪಾಯ್ತು ನೋಡಿ ಈ ಶ್ರೇಷ್ಠ ಗಾದೆ "ತುಂಬಿದ ಕೊಡ ತುಳುಕೋದಿಲ್ಲ" ಅಂತ. ಗಾದೆಯ ಒಳಮರ್ಮ ಏನು? ಜ್ಞಾನಿಯು ತಾನು ಜ್ಞಾನಿ ಅಂತ ಬೀಗೋದಿಲ್ಲ. ವಿದ್ಯಾ ದದಾತಿ ವಿನಯಂ ಎಂಬಂತೆ ತನಗೆಲ್ಲಾ ತಿಳಿದಿದೆ ಎಂದು ಅಹಂ ತೋರದೆ ವಿನಯಪೂರ್ವಕನಾಗಿಯೇ ಇರುತ್ತಾನೆ/ಇರುತ್ತಾಳೆ ಅಂತ.

ಸಿನಿಮಾ ರಂಗದಲ್ಲಿ ಇದರ ಬಳಕೆ ಹೇಗೆ? "ತುಂಬಿದ ಗೃಹಗಳಿಂದ ಪ್ರದರ್ಶಗೊಳ್ಳುತ್ತಿದೆ" ಎಂಬ ಸಿನಿಮಾದ ಜಾಹೀರಾತನ್ನು ಶುಕ್ರವಾರದ ಸಿನಿಮಾ ರಂಜನೆ ಪುಟಗಳಲ್ಲಿ ನೋಡಿರುತ್ತೇವೆ. ಇನ್ನು ಚಿತ್ರಮಂದಿರದ ಮುಂದೆ ಅಥವಾ ಕೌಂಟರ್ ಬಳಿ ಇರುವ ಫಲಕ ಎಂದರೆ "ಚಿತ್ರ ಮಂದಿರ ತುಂಬಿದೆ" ಎಂಬುದು ಅಂದಿನ ಮಾತು ಇಂದು ಎಲ್ಲ ಭಾಷೆಗಳ ಸಾಮಾನ್ಯ ಬಳಕೆ 'housefull". "ಮೈಕೈ ತುಂಬ್ಕೊಂಡು ಒಳ್ಳೇ ರಸಪುರಿ ಮಾವಿನಹಣ್ಣು..." ಇತ್ಯಾದಿ ಮಾತುಗಳು ಸಿನಿಮಾದಲ್ಲಿ ವಿಲನ್ ಬಾಯಲ್ಲಿ ಕೇಳಿರ್ತೀವಿ. ತುಂಬುಗೆನ್ನೆಯ ನಟಿಯರಿಗೆ ಒಂದು ಕಾಲದಲ್ಲಿ ಬೆಲೆ ಇತ್ತು. ಇವತ್ತು ಚೂರು ಮೈ ತುಂಬಿದರೂ ಮೂರು ತಿಂಗಳು ಡಯಟ್ ಮಾಡುತ್ತಾರೆ.

"ಆನಂದವೇ ಮೈ ತುಂಬಿದೆ", "ಕಣ್ ತುಂಬಿತು ಮನ ತುಂಬಿತು", "ತುಂಬು ಹರಯದ ಹೆಣ್ಣು" ಇತ್ಯಾದಿಗಳು ಕವಿ ಭಾಷೆ...

ಮದುವೆಯ ಕಲಾಪದ ನಂತರ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಅಂತಿದೆ. ಮತ್ತೊಂದು ಸಂದರ್ಭದ ಆಚರಣೆಯಲ್ಲಿ ಉಡಿ/ಮಡಿಲು ತುಂಬುವ ಶಾಸ್ತ್ರ ಅಂತಿದೆ. ಶಾಸ್ತ್ರ ಪದ್ಧತಿಗಳು ಏನೇ ಇರಲಿ ಆ ದಿನದಿಂದಾಚೆ ಬಂದದ್ದನ್ನು ಎದುರಿಸುವ ಶಕ್ತಿ ಮೈತುಂಬಿರಲಿ, ಮುಖದ ತುಂಬಾ ನಗೆ ಹರಡಿರಲಿ ಎಂದು ಹಿರಿಯರ ಹಾರೈಕೆ ಇರುತ್ತಿತ್ತು.

ಹಬ್ಬಹಾಡಿಗಳಲ್ಲಿ ಮಾತ್ರ ಕಾಣ್ವ ಸೊಬಗು ಎಂದರೆ ಮುಡಿ ತುಂಬಾ ಹೂವು ಮುಡಿದ ಹೆಣ್ಣು. ದಿನನಿತ್ಯದಲ್ಲಿ ಏಕಿರೋದಿಲ್ಲ ಅಂದ್ರೆ ಜೀವನದ ಜಂಜಾಟಗಳನ್ನು ತಲೆ ತುಂಬಾ ತುಂಬಿಕೊಂಡು ಓಡಾಡ್ತಾ ಇರ್ತಾಳೆ, ಅದಕ್ಕೆ.

ಹಂಡೆ, ಬಾಯ್ಲರ್, ಬಕೆಟ್, ಕೊಡ ಹೀಗೆ ನೀರನ್ನು ತುಂಬಿಡಬಲ್ಲ ಪಾತ್ರೆಗಳಲ್ಲಿ ನೀರನ್ನು ತುಂಬಿ ಪೂಜಿಸುವ ಹಬ್ಬವೇ ನೀರು ತುಂಬುವ ಹಬ್ಬ. ದೀಪಾವಳಿಯ ಮುನ್ನಾ ದಿನವಾದ ಈ ಹಬ್ಬವು, ಸಮೃದ್ಧಿಯಾಗಿ ಮನೆಗಳಲ್ಲಿ ನೀರು ಸದಾ ತುಂಬಿರಲಿ ಎಂಬ ತುಂಬು ಆಶಯದ ಹಬ್ಬ ಇರಬಹುದು. ಹೊಟ್ಟೆ ತುಂಬಿದವರಿಗೆ ಹಸಿವಿನ ಅಳಲು ಅರ್ಥವಾಗೋದಿಲ್ಲವಂತೆ. 'ಹೊಟ್ಟೆ ತುಂಬಿದವರು' ಎಂದರೆ ಸಿರಿವಂತರು, ಆಗರ್ಭ ಶ್ರೀಮಂತರು ಅಂತರ್ಥ. ಹೊಟ್ಟೆ ತುಂಬಿದವರಿಗೇ ದಾನ ಮಾಡೋದನ್ನ ಅಪಾತ್ರದಾನ ಅಂತಾರೆ.

ಅತಿಥಿ ಸತ್ಕಾರ ಮಾಡಿಸಿಕೊಂಡ ಮೇಲೆ ಅರ್ಥಾತ್ ಸಾಮಾನ್ಯವಾಗಿ ಸಿಕ್ಕಾಪಟ್ಟೆ ತಿಂದ ಮೇಲೆ ಮತ್ತಿನ್ನೇನಾದರೂ ನೀಡಲೇ ಎಂದಾಗ "ಅಯ್ಯೋ, ಇಲ್ಲಪ್ಪ ಒಂದು ಚೂರೂ ಜಾಗವಿಲ್ಲ" ಅಂತ ಹೊಟ್ಟೆ ನೆರವಿರಿಸಿಕೊಳ್ಳೋದು ಸರ್ವೇ ಸಾಮಾನ್ಯ. ಸಿಕ್ಕಾಪಟ್ಟೆ ಜ್ಞಾನಿಗಳು ಕೂಡ "ಅಯ್ಯೋ, ಇಲ್ಲಪ್ಪ ಒಂದು ಚೂರೂ ಜಾಗವಿಲ್ಲ. ಇನ್ನು ನಾನು ಹೊಸತೇನನ್ನೂ ಕಲಿಯಲಾರೆ" ಅಂತ ತಲೆ ನೇವರಿಸಿಕೊಂಡಿರೋದು ಕಂಡಿಲ್ಲ.

ಜಗತ್ತಿನಲ್ಲಿ 'ತುಂಬದ' ಅನ್ನೋದು ಸಿಕ್ಕಾಪಟ್ಟೆ ಇದೆ. ಅದರಲ್ಲಿ ಮುಂಚೂಣಿಯಲ್ಲಿರೋದು ತಲೆ. ಇಂದಿಗೂ ತುಂಬಲು ಸಾಧ್ಯವಿಲ್ಲ.

'ತುಂಬ'ದ ಬಗ್ಗೆ ಹರಟೆಯನ್ನು ತಾಳ್ಮೆಯಿಂದ ಓದಿದ ನಿಮ್ಮೆಲ್ಲರಿಗೂ ತುಂಬು ಹೃದಯ ಧನ್ಯವಾದಗಳು!!!

English summary
Here is a short article on how filling concept differe in life
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X