ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: Short form ಎಂದರೆ ಹ್ರಸ್ವರೂಪ

|
Google Oneindia Kannada News

ಈ ಬರಹದ ಮೂಲ ಭಾದ್ರಪದ ಮಾಸದ ಶುಕ್ಲ ಚತುರ್ದಶಿಯಂದು ಹುಟ್ಟಿದ್ದು. ಈ ಹಿಂದೆ ಒಬ್ಬರು ನನಗೆ GG ಹಬ್ಬದ ಶುಭಾಶಯಗಳು ಅಂತ ಕಳಿಸಿದ್ದರು. ಎಲ್ಲೆಡೆಯಿಂದ ಬರುತ್ತಿದ್ದ ಶುಭಾಶಯಗಳಿಂದಾಗಿ ಬಲು ಬೇಗ GG ಎಂದರೆ ಗೌರಿ- ಗಣೇಶ ಅಂತ ಅರ್ಥವಾಗಿತ್ತು. ಇಂಥದ್ದೇ ಶುಭಾಶಯಗಳು ಕಾರ್ತೀಕ ಮಾಸದಲ್ಲಿ ಬಂದಿದ್ದರೆ ಬಹುಶಃ ನನಗೆ ಬೇಗ ಗೊತ್ತಾಗುತ್ತಿರಲಿಲ್ಲ. ಸಂದೇಶ ಬಂದ ಹತ್ತೇ ದಿನಗಳಲ್ಲಿ ಅನಂತ ಚತುರ್ದಶಿ ಹಬ್ಬ ಬಂದಿದ್ದರಿಂದ 'ಎಲ್ಲರನ್ನೂ AP ಹರಸಲಿ' ಅಂತ ಹತ್ತಿರದ ಸಂಬಂಧಿಗಳ ಗುಂಪಿನಲ್ಲಿ ತರಲೆ ಮಾಡಿದ್ದೆ. 'AP ಬದಲು ಅನಂತ ಪದ್ಮನಾಭ ಅಂತ ಕರೀಬಾರದೇ' ಅಂತ. ನಾನು ವಾಟ್ಸಾಪ್‌ನಲ್ಲಿ ಬರೆದಿದ್ದು ಹಾಗಾಗಿ ನನ್ನ ತರಲೆಗೆ ಬಂದ ಪ್ರತಿಕ್ರಿಯೆಯಲ್ಲಿ ವ್ಯಾಕರಣ ದೋಷವಿತ್ತು. ನಾನು ಅನಂತ ಪದ್ಮನಾಭ ಅಂತಲೇ ಕರೆದಿದ್ದೇ ಆದರೆ ಬರೆದಾಗ AP ಅಂತ ಬರೆದಿದ್ದೆ. ಅರ್ಥಾತ್ ಕರೆಯೋದು ಬೇರೆ, ಬರೆಯೋದು ಬೇರೆ.

GG ಎಂದರೆ ಗೌರಿ- ಗಣೇಶ ಅಂತ
ಇರಲಿ, ಈಗ ಓಂ SVNDTAP ಅಂತ ಬರೆದಿದ್ರೆ ಬಹುರ್ಶ decode ಮಾಡೋದು ತ್ರಾಸವಾಗಿರೋದು. ಆದರೆ, ದಿನದ ಸಂದರ್ಭದ ಏನು ಅಂತ ಕೊಂಚ ಅವಲೋಕಿಸಿದಾಗ ಬಹುಶಃ GG ಎಂದರೆ ಗೌರಿ- ಗಣೇಶ ಅಂತ ಬೇಗ ಅರ್ಥವಾದಂತೆ, SVNDTAP ಕೂಡಾ ಹೀಗಿರಬಹುದೇ ಅಂತ ಅನುಮಾನ ಮೂಡಿಸಬಹುದು. ಭಾದ್ರಪದ ಮಾಸದ ಶುಕ್ಲ ಚತುರ್ದಶಿ ಎಂದರೆ ಅನಂತ ಚತುರ್ದಶಿ ಹಬ್ಬ ಹಾಗಾಗಿ SVNDTAP ಎಂದರೆ 'ಸರ್ಪರಾಜಾಯ ವಿದ್ಮಹೇ ನಾಗರಾಜಾಯ ಧೀಮಹಿ ತನ್ನೋ ಅನಂತ ಪ್ರಚೋದಯಾತ್' ಅಂತ. ತುಂಬಾ ಸರಳ ಆಯ್ತಾ?

ಆದರೆ SVNDTAP ಅಂತ ಹೇಳಿ ಯಾರೂ ತಲೆ ಕೆಡಿಸಲಾರರು ಬಿಡಿ, ಸುಮ್ಮನೆ ಒಂದು ಉದಾಹರಣೆ ನೀಡಿದೆ ಅಷ್ಟೇ. ನಮ್ಮ ದೈನಂದಿನ ಜೀವನದಲ್ಲಿ ಹ್ರಸ್ವರೂಪ ಎಂಬುದು ಹಾಸುಹೊಕ್ಕಾಗಿದೆ. ಅತೀ ಚಿಕ್ಕ ಉದಾಹರಣೆ ಎಂದರೆ ಜನವರಿ, ಫೆಬ್ರವರಿ, ಮಾರ್ಚ್ ಎಂಬುದನ್ನು ಆಂಗ್ಲದಲ್ಲಿ January, February, March ಇತ್ಯಾದಿ ಬರೆಯುವಂತೆ Jan, Feb, Mar ಎಂದು ಬರೆಯುವುದು ಸರ್ವೇಸಾಮಾನ್ಯ. ಮತ್ತೊಂದು ಉದಾಹರಣೆ ನೀಡುವುದಾದರೆ, ನನಗೆ ಹದಿನೆಂಟರಲ್ಲಿ ಆ ಆಪರೇಷನ್ ಆಗಿತ್ತು ಅಂತ ಒಬ್ಬರು ಹೇಳಿದರು. ಅಲ್ಲಾ, ಬಹಳ ಹತ್ತಿರದವರು, ಹದಿನೆಂಟಕ್ಕೆ ಆಪರೇಷನ್ ಆಯಿತೇ, ನನಗೇಕೆ ಗೊತ್ತೇ ಆಗಲಿಲ್ಲ ಅಂತ. ಆಮೇಲೆ ಅವರು ಹೇಳಿದ್ದು ಹದಿನೆಂಟು ಅಂದ್ರೆ 2018 ಅಂತ. ಹ್ರಸ್ವರೂಪ ಕೆಲವೊಮ್ಮೆ ತಬ್ಬಿಬ್ಬು ಮಾಡೋದು ಸಹಜ.

short form eplanation in srinath bhalle column

ತಾನು ಒಂದು ಕಂಪನಿಯ JD
ಹೆಣ್ಣನ್ನು ನೋಡಲು ಒಬ್ಬ ಹೋದನಂತೆ. ಏನು ಕೆಲಸ ಮಾಡೋದು ಅಂತ ವಿಚಾರಿಸಿದಾಗ, ತಾನು ಒಂದು ಕಂಪನಿಯ JD ಎಂದಿದ್ದಾನೆ. ಒಂದು ಕಂಪನಿಯ Joint Director ಆಗಿರುವಾತ ಎಷ್ಟು ಸಿಂಪಲ್ ಆಗಿ ದಿರಿಸು ಧರಿಸಿದ್ದಾನೆ ಅಂತ ಅಚ್ಚರಿಯೇ ಆಗಿ, ಹೆಮ್ಮೆಯೂ ಆಯಿತಂತೆ. ಪುಣ್ಯಕ್ಕೆ, ಮದುವೆ ಮಾಡುವ ಮುನ್ನ ಗೊತ್ತಾಯಿತಂತೆ JD ಎಂದರೆ Jeep Driver ಅಂತ. ಮದುವೆ ನಡೆಯಿತೋ, ಕ್ಯಾನ್ಸಲ್ ಆಯಿತೋ ಅದು ಬೇರೆ ವಿಷಯ. ಅವನು ಹೇಳಿದ್ದು JD ಅಂತ ಅಷ್ಟೇ, ಮತ್ತು ಅದು ಸುಳ್ಳಲ್ಲ. JD ಎಂದಾಗ ಜಾಯಿಂಟ್ ಡೈರೆಕ್ಟರ್ ಅಂತ ಅಂದುಕೊಂಡಿದ್ದು ಯಾರದ್ದೋ ತಪ್ಪು. ಅಂದುಕೊಳ್ಳುವ ಬದಲು ವಿಚಾರಿಸಬಹುದಿತ್ತು. ಜೊತೆಗೆ Jeep Driver ಎಂಬುದು ಕೀಳಾದ ಕೆಲಸವಂತೂ ಅಲ್ಲ, ಅಲ್ಲವೇ? ಕೊಲೆ, ದರೋಡೆ ಮಾಡಿದ್ದರೆ, ಅದು ತಪ್ಪು. ಹ್ರಸ್ವರೂಪ ಕೇಳಿದಾಗ ಗೊತ್ತಿಲ್ಲದಿದ್ದರೆ ಕೇಳಿಬಿಡಬೇಕು ಎಂಬುದು ಇಲ್ಲಿನ ಕಲಿಕೆ.

SRK ಎಂದರೆ ಸರ್ವಪಲ್ಲಿ ರಾಧಾಕೃಷ್ಣನ್
ಇತ್ತೀಚೆಗೆ ಆದ ಮತ್ತೊಂದು ತಪ್ಪು ತಿಳುವಳಿಕೆ ಹೇಳುತ್ತೇನೆ. ಸೆಪ್ಟೆಂಬರ್ ಐದನೆಯ ತಾರೀಖೀನಂದು ಒಬ್ಬರು Happy Birthday SRK ಅಂತ ಸಂದೇಶ ಹಾಕಿದ್ದರು. ಗುಂಪಿನಲ್ಲಿ ಮತ್ತೊಬ್ಬರು 'ಶಾರುಖ್ ಖಾನ್ ಹುಟ್ಟಿದ ಹಬ್ಬ ನವೆಂಬರ್ ಎರಡು' ಅಂದರು. ವಿಷಯ ಬಹಳ ಸಿಂಪಲ್ ಆಗಿದೆ ಅಲ್ಲವೇ? SRK ಎಂದರೆ ಸರ್ವಪಲ್ಲಿ ರಾಧಾಕೃಷ್ಣನ್ ಅಂತ ಹೇಳುವ ಬದಲು SRK ಅಂತಂದರು. SRK ಎಂದರೆ ಶಾರುಖ್ ಖಾನ್ ಅಂತ ಹೇಳಿದವರು ಮತ್ತೊಬ್ಬರು. ಅದು ಕನ್ನಡಿಗರ ಗುಂಪು ಆಗಿದ್ದರೆ SRK ಎಂದರೆ ಶಿವರಾಜ್ ಕುಮಾರ್ ಎಂದಿರುತ್ತಿದ್ದರೇನೋ?

ಹೆಸರಿನ ವಿಷಯವನ್ನೇ ಮುಂದುವರೆಸಿದರೆ, ಇತ್ತೀಚೆಗೆ ಮಾರ್ಕಂಡೇಯ ಎಂಬುವವ ಮಾರ್ಕ್ ಎಂದು ಕರೆಸಿಕೊಳ್ಳುತ್ತಿದ್ದ ಎಂದು ಹೇಳಿದ್ದೆ. ಇದು ಅತೀ ಸಾಮಾನ್ಯ. ಆದರೆ ಅಮೆರಿಕದಲ್ಲಿ ಇದರ ಸ್ವರೂಪ ಕೊಂಚ ಭಿನ್ನ ಅಷ್ಟೇ. ಯಾರದ್ದಾದರೂ ಬಿಸಿನೆಸ್ ಇದೆ ಅಂತಾದರೆ ಅನಿವಾರ್ಯ ಎಂಬಂತೆ ಹಲವರು ಹೆಸರನ್ನು ಬದಲಿಸಿಕೊಳ್ಳುವುದೂ ಸಾಮಾನ್ಯ. ಮಾರ್ಕಂಡೇಯ ಮಾರ್ಕ್ ಆದಂತೆ, ಧನ್ವಂತ್ರಿ ಡ್ಯಾನ್ ಆಗಬಹುದು, ಜಯಸಿಂಹ ಬರೀ ಜೆ ಆಗಬಹುದು ಕೂಡಾ. ನಮ್ಮಲ್ಲೊಬ್ಬ ಜಗನ್ನಾಥ ಜಗನ್ ಎಂದು ನಮ್ಮಿಂದ ಕರೆಸಿಕೊಳ್ಳುತ್ತಿದ್ದ ಮಾನವ, ಅಮೆರಿಕದವರು ಏನಪ್ಪಾ ನಿನ್ನ ಹೆಸರು ಅಂತ ಕೇಳಿದಾಗ ಜೇಗನ್ ಎನ್ನುತ್ತಿದ್ದ. ಯಾಕೆ ಏನು ಅಂತ ನನಗೆ ಗೊತ್ತಿಲ್ಲ ಬಿಡಿ.

ಪ್ರೀತಿಯಿಂದ ಬಾಲು ಸರ್ ಅಥವಾ SPB
ಯಾವುದೋ ಅತಿ ಮುಖ್ಯ ಕಾಗದ ಪತ್ರ ಸಹಿ ಮಾಡುವಾಗ ಕೆಲವು ಕಡೆ ಸಹಿ ಕೇಳುತ್ತಾರೆ ಮತ್ತೆ ಕೆಲವು ಕಡೆ initials ಮಾತ್ರ ಕೇಳುತ್ತಾರೆ. ಒಬ್ಬರ ಪೂರ್ಣ ಹೆಸರಿನ ಹ್ರಸ್ವಭಾಗವೇ ಈ initials. ಉದಾಹರಣೆಗೆ 'ಸಂತಾನಗೋಪಾಲ ಬಾಲಕೃಷ್ಣ' ಎಂಬ ಹೆಸರುಳ್ಳವರು ತಮ್ಮ ಇನಿಷಿಯಲ್ಸ್ ಅನ್ನು SB ಅಂತ ಮಾತ್ರ ಹಾಕುತ್ತಾರೆ. ಇಂಥವರು ಸಹಿ ಹಾಕುವಾಗ ಹೇಗೆ ಅಂತ ಕೆಳದಿರಿ, ಸಹಿ ಎಂಬುದು ಒಬ್ಬರ personal ವಿಷಯ. ಅವರು ಬೇಕಿದ್ದರೆ ಸಾಂತಾ ಅಂತಾನೂ ಹಾಕಲಿ, ಬಾಲಗೋಪಾಲ ಅಂತ ಬೇಕಿದ್ರೂ ಹಾಕಲಿ ಬಿಡಿ. ಇಂಥವರನ್ನು ಭೇಟಿಯಾದ ಸಂದರ್ಭದಲ್ಲಿ, ಅವರು ತಮ್ಮ ಪೂರ್ಣ ಹೆಸರನ್ನು ಹೇಳಿ 'ಸಾಂಬಾ' ಕರೆಯಿರಿ ಸಾಕು ಎಂದಾಗ ಮನಸ್ಸಿನಲ್ಲೇ ಧನ್ಯವಾದಗಳನ್ನು ಹೇಳುವ ಹಾಗೆ ಆಗುತ್ತದೆ ಅಲ್ಲವೇ?
ನಮ್ಮ ನೆಚ್ಚಿನ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ ಅವರನ್ನು ಪ್ರೀತಿಯಿಂದ ಬಾಲು ಸರ್ ಅಥವಾ SPB ಎಂದು ಕರೆಯುವುದಿಲ್ಲವೇ? ಬಹುಶಃ ಇವರು ನನ್ನ ಪೂರ್ತಿ ಹೆಸರನ್ನೇ ಕರೆಯಬೇಕು ಅಂತ ಹಠ ಹಿಡಿದಿದ್ದರೆ? ಯಾಕೆ ಹೇಳಿದೆ ಅಂದರೆ, ಕೆಲವರಿಗೆ ತಮ್ಮ ಹೆಸರನ್ನು ತುಂಡು ಹಾಕಿದರೆ ಕೋಪ ಬರುತ್ತದೆ. ಲಕ್ಷ್ಮೀನಾರಾಯಣ ಎಂಬ ಹೆಸರುಳ್ಳವರನ್ನು ಲಕ್ಷ್ಮಿ ಅಂತ ಕರೆದರೆ ಖಂಡಿತ ಸಿಟ್ಟು ಬರುತ್ತದೆ ಅಲ್ಲವೇ?

ಪತ್ರಿಕಾ ಮಾಧ್ಯಮದವರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ
ಇಂದಿನ ಮಾಹಿತಿ ಯುಗದಲ್ಲಿ ಟೆಲಿಗ್ರಾಂ ನಿಂತಿರಬಹುದು ಆದರೆ ಯುವ ಪೀಳಿಗೆಯವರು ಮತ್ತು ಟೆಕ್ಕಿ ಮಂದಿ, ಟೆಲಿಗ್ರಾಂ ಬಳಸುವುದರಲ್ಲಿ ನಿಷ್ಣಾತರು. ಈ ವಿಷಯ ಹೇಳುವಾಗ, ನಮ್ಮ ಪತ್ರಿಕಾ ಮಾಧ್ಯಮದವರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ, ಎಂದು ಆರಂಭಿಸುವ. ಹೇಗೆ ಅಂದ್ರಾ? ಅಪಘಾತ- ಲಕ್ಕಿ ಟೆಕ್ಕಿ ಅಂತ ಶಿರೋನಾಮೆ. ಏನಂದರೆ ರಸ್ತೆಯ ಅಪಘಾತದಲ್ಲಿ ಒಬ್ಬ ಐಟಿ ಕೆಲಸ ಮಾಡುವ ವ್ಯಕ್ತಿ ಅದೃಷ್ಟವಶಾತ್ ಪಾರಾದ ಅಂತ. ಈಟುದ್ದ ಹೇಳಿದರೆ ಜಾಗ ಸಾಲುವುದಿಲ್ಲ ಅಂತ ಮೂರು ಪದದಲ್ಲಿ ಹೇಳಿಬಿಡುತ್ತಾರೆ. ಆದರೆ ದೃಶ್ಯ ಮಾಧ್ಯಮದಲ್ಲಿ ಬೇಕಾದಷ್ಟು ಜಾಗ ಇದೆ. 'ಅಲ್ಲಿಗೆ ಬಂದಿದ್ದಾರೂ ಯಾರು? ಯಾಕೆ? ಕೇವಲ ನಮ್ಮ ಚಾನೆಲ್‌ನಲ್ಲಿ ಮಾತ್ರ ಈ ಮಾಹಿತಿ ಲಭ್ಯ. ಈಗ ತೆಗೆದುಕೊಳ್ಳಿ ಒಂದು ಶಾರ್ಟ್ ಬ್ರೇಕ್' ಅಂತ ಹೇಳಿದ್ದೇ ಹೇಳುವಾಗ, ಒಂದು ಮದುವೆಯನ್ನೇ ಒಂದು ತಿಂಗಳು ತೋರಿಸುವ ಮುಗಿಯದ ಧಾರಾವಾಹಿಗಳಿಗೂ ಈ ಹ್ರಸ್ವಕ್ಕೂ ಬಲು ದೂರ.

EOY ಎಂದರೆ End Of Year ಎಂಬುದು ಸಾಮಾನ್ಯ
ಚಾಟ್ ಮಾಡುವಾಗ, ಮೆಸೇಜ್ ಮಾಡುವಾಗ, ಕೆಲವೊಮ್ಮೆ ಫೋನಿನಲ್ಲಿ ಮಾತನಾಡುವಾಗಲೂ ನಮ್ಮ ಯುವ ಪೀಳಿಗೆಯವರು ಹ್ರಸ್ವರೂಪದ ಪ್ರಾವೀಣ್ಯತೆ ಮೆರೆಯುತ್ತಾರೆ. ಶೈಕ್ಷಣಿಕ ಅಥವಾ ಲೆಕ್ಕದ ವಿಷಯಕ್ಕೆ ಬಂದಾಗ EOY ಎಂದರೆ End Of Year ಎಂಬುದು ಸಾಮಾನ್ಯ. ನನಗೆ ಒಮ್ಮೆ ಒಬ್ಬರು EOM ಅಂತ ಕಳಿಸಿದರು. ಹೀಗೆ ಬರೆದಿದ್ದು subject lineನ ಕೊನೆಯಲ್ಲಿ. ಈ EOM ಅಂದ್ರೇನು? End Of Month ಇರಬಹುದಾ? ಹಾಗಿರಬಹುದಾ? ಹೀಗರಬಹುದಾ? ಅಂತೆಲ್ಲಾ ಆಲೋಚಿಸಿ ಕೊನೆಗೆ ನನ್ನ ತಲೆ ಖಾಲಿಯಾಗಿ End Of Memory ಆಯ್ತು. ಕೊನೆಗೆ ಗೂಗಲಿಸಿದಾಗ End Of Mail ಅಂತೆ. ಅರ್ಥಾತ್ ಈ ಒಂದು ಸಾಲನ್ನು ಓದಿಕೊಳ್ಳಿ ಸಾಕು, ವಿಷಯ ಇಷ್ಟೇ ಅಂತ. ಗೂಗಲ್‌ನಲ್ಲಿ ಹುಡುಕುವುದು ಎಂಬುದನ್ನು ಗೂಗಲಿಸುವುದು ಅನ್ನೋದೂ ಹ್ರಸ್ವರೂಪವೇ ಎನ್ನಬಹುದು.

ಚಿ|| ಸೌ|| ಎಂದಾಗ 'ಚಿರಂಜೀವಿ ಸೌಭಾಗ್ಯವತಿ'
ಒಂದಾನೊಂದು ಕಾಲದಲ್ಲಿ ಪತ್ರ ಬರೆದು ಅಡ್ರೆಸ್ ಹಾಕುವಾಗ D/O ಅಥವಾ S/O ಎಂದು ಹಾಕಿ ಅಪ್ಪನ ಹೆಸರನ್ನು ನಮೂದಿಸುತ್ತಿದ್ದುದು ನೆನಪಿದೆಯೇ? ಇರಲಿ, ಮದುವೆಯ ಆಹ್ವಾನ ಪತ್ರಿಕೆ ತೆರೆದು ನೋಡಿದಾಗ ಚಿ|| ಸೌ|| ನೋಡಿಯೇ ಇರುತ್ತೀರಿ. ಮೇಲೆ ಹೇಳಿದ D/O ಅಥವಾ S/O ಕೂಡ ಅಲ್ಲಿರುತ್ತದೆ. PTO ಅರಿಯದವರು? ವ್ಯಕ್ತಿಗೆ ಎರಡು ಮೊಬೈಲ್ ಇರುವ ಇಂದಿನ ದಿನಗಳಲ್ಲಿ PP ಅಂದ್ರೆ ಬಹುಶಃ ನಗು ಬರುತ್ತದೆ. ಅಂದ ಹಾಗೆ ಈ PP ಅಂದ್ರೇನು?

ಇಷ್ಟೆಲ್ಲಾ ಹೇಳಿದ ಮೇಲೆ ಈ short form ಅಥವಾ ಹ್ರಸ್ವರೂಪ ಒಳಿತೋ ಅಥವಾ ಅಲ್ಲವೋ? ಅಲ್ಲಾ, ಈಗ ನಾನು ಕೇಳುತ್ತಾ ಇರೋದು ಏನಪ್ಪಾ ಅಂದ್ರೆ, ಈ ಹ್ರಸ್ವರೂಪದಿಂದ ಬಾಧಕವಾಗಿದೆಯೇ? ಚಿ|| ಸೌ|| ಎಂದಾಗ 'ಚಿರಂಜೀವಿ ಸೌಭಾಗ್ಯವತಿ' ಅಂತಲೇ ಕರೆಯಬೇಕು ಅಂತೇನಾದರೂ ಟೌನ್‌ಹಾಲ್ ಮುಂದೆ ಧರಣಿ ಕೂತಿದ್ದಾರೆಯೇ? ಇಲ್ಲಾ ತಾನೇ? ಮತ್ಯಾಕೆ ಎಲ್ಲಕ್ಕೂ ತಲೆಕೆಡಿಸಿಕೊಳ್ಳೋದು ಅಂತೀನಿ? ಏನಂತೀರಾ?.

English summary
A use of short form Explanation can be found in the Srinath Bhalle column.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X