ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರಾವಾಹಿಗಳೆಂಬ ರಾಯರ ಕುದುರೆ, ರಿಯಾಲಿಟಿ ಶೋ ಎಂಬ ಪೀಡೆ

By ಶ್ರೀನಾಥ್ ಭಲ್ಲೆ
|
Google Oneindia Kannada News

ಟಿವಿ ಎಂಬ ದೃಶ್ಯ ಮಾಧ್ಯಮ ಕಾಲಿಟ್ಟಾಗ ಇದ್ದುದ್ದು ಕೇವಲ ಒಂದು ಚಾನಲ್. ಅದೂ ದಿನದಲ್ಲಿ ಒಂದಷ್ಟು ಸಮಯ ಮಾತ್ರ. ಎಲ್ಲವೂ ಮೊದಲು ಹಸುಗೂಸಾಗೆ ಹುಟ್ಟೋದು ಆಮೇಲೆ ಬೆಳೆಯೋದು. ಹುಟ್ಟುತ್ತಲೇ ಏಕ್ದಂ ಬೆಳೆದು ನಿಲ್ಲಲು ಅವೇನು ಅಗ್ನಿಕನ್ಯೆ ದ್ರೌಪದಿಯೇ?

ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!

ಹಸುಗೂಸಾಗಿದ್ದಾಗಿನ ಟಿವಿ ಮಾಧ್ಯಮವನ್ನು ಚಿತ್ರರಂಗವು ಕೊಂಚ ಕೀಳಾಗೇ ಕಂಡಿದ್ದು ಸುಳ್ಳಲ್ಲ. ಇಲ್ಲಿ ಸಲ್ಲದವರು ಅಲ್ಲಿ ಹೋಗುತ್ತಾರೆ ಎಂದೇ ಚಿತ್ರರಂಗದವರ ಅಹಂ! ಸೀನಿಯಾರಿಟಿ ಎಲ್ಲೆಡೆ ಇದೆ. ಆದರೆ ಕಿರುತೆರೆಯ ಮೇಲೆ ಮಿಂಚಿ ದೊಡ್ಡತೆರೆಗೆ ಕಾಲಿರಿಸಿದವರು ಬೇಕಾದಷ್ಟು ಮಂದಿ ಇದ್ದಾರೆ.

Senseless Kannada TV serials and reality shows

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬೆಳೆಯುತ್ತ ಹೋದ ಟಿವಿ, ಮೊದಲಲ್ಲಿ ಹಲವರ ಮನೆಗಳಲ್ಲಿ ದಾಳಿಯಿಟ್ಟಿದ್ದು, ಕ್ರಮೇಣ ಎಲ್ಲರ ಮನೆಯ ಅತ್ಯಗತ್ಯ ವಸ್ತುವಾಗಿ ತನ್ನೆಡೆ ಸೆಳೆದಿತ್ತು. ಚಿಕ್ಕಮಕ್ಕಳು, ಸಂಸಾರಸ್ಥರು ಎಂದೆಲ್ಲಾ ಪ್ರೇಕ್ಷಕ ವರ್ಗ ಇದ್ದುದರಿಂದ ಸ್ವಲ್ಪ ಎಚ್ಚರಿಕೆಯಿಂದಲೇ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳು ಮೂಡಿಬರುತ್ತಿತ್ತು.

ಹನಿಮೂನ್ (ಪ್ರೊಬೆಷನ್) ಕಾಲ ಮುಗಿಯುವ ಹೊತ್ತಿಗೆ ವಾಮನನಾಗಿದ್ದ ಟಿವಿ ಲೋಕ ತ್ರಿವಿಕ್ರಮವಾಯ್ತು. ನೂರಾರು ಚಾನಲ್'ಗಳು ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಉರಿದುರಿದು ಮೂಡಲಾರಂಭಿಸಿತು.

ಬೆಳಿಗ್ಗೆ ಮನೆಬಿಟ್ಟು ಹೊರಟ ಜನ, ರಾತ್ರಿ ವಾಪಸ್ ಬಂದು ಗೂಡು ಸೇರುವ ಸಂಸಾರಗಳಲ್ಲಿ, ಮನೆಯಲ್ಲೇ ಇರುವ ಹಿರಿಯರಿಗೆ ಟಿವಿ ಎಂಬುದು ಆಶಾಕಿರಣವಾಯ್ತು. ಮಾಡಲು ಏನೂ ಕೆಲಸವಿರದ ಸಮಯದಲ್ಲಿ ಟಿವಿ ಹಚ್ಚಿ ಕೂತು ಸಮಯ ಕಳೆಯಲಾರಂಭಿಸಿದರು.

 ಅಂಕಣ: ನೀವು ಯಾವತ್ತಾದರೂ ಎಲ್ಲಿಯಾದರೂ ಕಳೆದುಹೋಗಿದ್ರಾ? ಅಂಕಣ: ನೀವು ಯಾವತ್ತಾದರೂ ಎಲ್ಲಿಯಾದರೂ ಕಳೆದುಹೋಗಿದ್ರಾ?

ದುಡಿಯುವ ಕೈಗಳು ಇಡೀ ದಿನ ಹೊರಗೆ ಇರುವ ಸನ್ನಿವೇಶದಲ್ಲಿ, ಮೊಮ್ಮಕ್ಕಳಿಗೆ ಅಜ್ಜಿ-ತಾತನ ಜೊತೆ ಸಂಗ ಬೇಡವೋ ಅಥವಾ ಸಮಯವಿಲ್ಲವೋ ಅಥವಾ ಬೇಡದಿರುವಂತೆ ಮಾಡುವ ಈ ದಿನಗಳಲ್ಲಿ, ಹಿರಿಯರನ್ನು ಹೊರೆ ಎಂದೇ ಭಾವಿಸುವ ಸಮಾಜದಲ್ಲಿ, ವಾರಾಂತ್ಯದಲ್ಲೂ ಹಿರಿಯರೊಡನೆ ಸಮಯ ಕಳೆಯದೆ ಹೊರಗೆಲ್ಲೋ ಸುತ್ತಾಡುವ ಪರಿಸ್ಥಿತಿಗಳು ಇರುವ ಸಂಸಾರಗಳಲ್ಲಿ ಮನೆಯಲ್ಲಿರುವವರಿಗೆ ಟಿವಿ ವರದಾನ ತಾನೇ?

Senseless Kannada TV serials and reality shows

ಇಂಥಾ ಮಹತ್ತರ ಜವಾಬ್ದಾರಿ ಹೊತ್ತು, ಹಿರಿಯರ ಮನಕ್ಕೆ ಸಾಂತ್ವನ ನೀಡಿದ್ದ ಟಿವಿ ಬೆಳೀತಾ ಬೆಳೀತಾ ರಾಯರ ಕುದುರೆ ಕತ್ತೆಯಾಗುತ್ತಿರುವುದು ಏಕೆ? ಇದು ಗಾದೆ ಮಾತು ಅಷ್ಟೇ! ಕತ್ತೆಗೆ ಅವಮಾನ ಮಾಡುವುದೂ ತರವಲ್ಲ.

ಇಷ್ಟೆಲ್ಲಾ ಹೇಳೋದಕ್ಕೆ ಕಾರಣ ಏನು? ಜವಾಬ್ದಾರಿಯುಕ್ತ ಕಾರ್ಯಕ್ರಮಗಳು ಇಲ್ಲ ಎಂದೇಕೆ ಅನಿಸಿದೆ?

ರಿಯಾಲಿಟಿ ಶೋ ಎಂಬ ಪೀಡೆ. ಅಸಹಜತೆಯೇ ತಾಂಡವವಾಡುವ ಶೋಗೆ ರಿಯಾಲಿಟಿ ಎಂದೇಕೆ ಕರೆಯುತ್ತಾರೋ ಗೊತ್ತಿಲ್ಲ. ತಮಗೆ ಬರುವ ದುಡ್ಡಿಗೆ ದಾಸರಾಗಿರುವ ಜಡ್ಜ್'ಗಳು ನಿಜಕ್ಕೂ ಜಡ್ಜ್ ಎಂಬ ಪೀಠಕ್ಕೆ ಅವಮಾನ ಮಾಡುತ್ತಿದ್ದಾರೆ. ಆದರೆ ಇದು ಇವರ ತಪ್ಪಲ್ಲ, ನಿರ್ಧಾರವಲ್ಲ ಎಂಬುದೆಲ್ಲಾ ನಾ ಬಲ್ಲೆ. ಕುಣಿಯುವವರೇ ಬೇರೆ ಕುಣಿಸುವವರೇ ಬೇರೆ.

ಯಾವುದೋ ಚಾನಲ್'ನ ಮಕ್ಕಳ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿರುವವರು ಸಪೂರ ಸುಂದರಿ ಶಿಲ್ಪ ಶೆಟ್ಟಿ. ಚಿಕ್ಕ ಮಕ್ಕಳ ಕಾರ್ಯಕ್ರಮಕ್ಕೆ ಆಕೆ ಧರಿಸುವ ಬಟ್ಟೆ ಕಂಡರೆ ಮುಂದಿನ ಜನಾಂಗವನ್ನು ಹಾಳುಗೆಡವುತ್ತಿರುವವರು ರಿಯಾಲಿಟಿ ಶೋ ಜನ ಎಂದರೆ ತಪ್ಪಾಗಲಾರದು. ಇನ್ನು ಆ ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ಇನ್ನೊಂದು ಅವತಾರ. ಅರಿವಿಲ್ಲದ ಕಾಡು ಜನ ಅರಿವೆ ಧರಿಸುತ್ತಿರಲಿಲ್ಲ. ಅರಿವಿರುವ ನಾಡಿನ ಜನಕ್ಕೆ ಅರಿವೆಯೇ ಬೇಕಿಲ್ಲ.

ಕಾಡು ಜನ ಎಂದಾಗ ಮತ್ತೊಂದು ಪೂರಕ ಅಂಶ ನೆನಪಾಯಿತು ನೋಡಿ. ಯಾವುದೋ ಚಿಕ್ಕ ಹುಡುಗನನ್ನೋ ಹುಡುಗಿಯನ್ನೋ ಬಲಿಪಶುವಾಗಿ ಅಲ್ಲಿ ನಿಲ್ಲಿಸಿ, 'ಊ ಊ' ಎಂಬ ಹರ್ಷೋದ್ಗಾರದಿಂದ 'ದೀರ್ಘದಂಡ' ನಮಸ್ಕಾರ ಮಾಡಿ ಆಶೀರ್ವಾದ ಪಡೆಯೋದು. ಆ ಚಿಕ್ಕ ವ್ಯಕ್ತಿಯನ್ನು 'ದೇವರು' ಎಂದು ಕರೆಯುವುದು. ಅರವತ್ತೈದರ 'ದಾ' ಈ ಚಿಕ್ಕಹುಡುಗನ ಕಾಲು ಮುಟ್ಟಿ ನಮಸ್ಕರಿಸೋದು ನೋಡಿದರೆ ಸಿಟ್ಟು ಬರುತ್ತೆ. ಚಿಕ್ಕವರಿಗೆ ನಮಸ್ಕರಿಸಿದರೆ ಶ್ರೇಯಸ್ಸಲ್ಲ ಎಂದೇನೋ ನಮ್ಮ ಹಿರಿಯರು ಹೇಳುತ್ತಿದ್ದುದು ಗಾಳಿಗೆ ತೂರಿಹೋಗಿದೆ ಬಿಡಿ.

ಈ ರಿಯಾಲಿಟಿ ಶೋಗಳ ಅಪ್ರಬುದ್ಧ ವರ್ತನೆ ಇಷ್ಟಕ್ಕೇ ನಿಲ್ಲೋಲ್ಲ. ಅವರುಗಳು ಬಳಸುವ ಭಾಷೆ ಕೆಲವೊಮ್ಮೆ ಅತಿಭಯಂಕರ. 'ಮಚ್ಚು ತೊಗೊಳ್ರೋ' (ಅಯ್ಯಯ್ಯಪ್ಪ)! ಸ್ಟೇಜಿನ ಮೇಲೆ ಪಿಸ್ತೂಲು ಬಳಕೆ! ಗಂಡನ್ನು ಹೆಣ್ಣಾಗಿ ಅಲಂಕರಿಸಿ ಏನೇನೋ ಮಾಡೋದು! ಇಂಥಾ ವಿಕೃತ ಆಟಗಳನ್ನು ನೋಡುತ್ತಾ ಚಪ್ಪಾಳೆ ತಟ್ಟಿಕೊಂಡು ಕೇಕೆ ಹಾಕಿಕೊಂಡು ನಗುವ ಬಫೂನುಗಳು... ದುಡ್ಡು ಕೊಟ್ಟು ಬಂದು ಕೂತ ತಪ್ಪಿಗೆ, ವಿಧಿಯಿಲ್ಲದೆ (ಅಂತ ಅಂದುಕೊಂಡಿದ್ದೀನಿ) ನಗುವ ಪ್ರೇಕ್ಷಕರು. ನನಗಂತೂ ನಗು ಬರೋಲ್ಲ! ಹಾಗೆ ನಗದೇ ಇದ್ದುದಕ್ಕೆ ನನಗೆ ಯಾರೋ ಹೇಳಿದ್ದು "ನಿಮಗೆ ಹಾಸ್ಯಪ್ರಜ್ಞೆ ಅನ್ನೋದೇ ಇಲ್ಲ ಬಿಡಿ"!

ಒಂದು ರಿಯಾಲಿಟಿ ಶೋನಲ್ಲಿ ಒಬ್ಬ ಮೈಕ್ ಹಿಡಿದು ಮಾತನಾಡುತ್ತಿದ್ದ. 'ಕಾಲೇಜಿಗೆ ಬಂದಾಗ ನಾನು ಸಿಗರೇಟು ಸೇದೋದು ಮತ್ತು ಕುಡಿಯೋದು ಕಲಿತೆ' ಅಂತ. ಎಲ್ಲರಿಂದ ಹರ್ಷೋದ್ಗಾರದ ಚಪ್ಪಾಳೆ. ಮತ್ಯಾವುದೋ ಒಂದು ಕಡೆ ಒಬ್ಬ "ಕಾಲೇಜಿನಲ್ಲಿ ನಾನು ತುಂಬಾ ಶ್ರದ್ದೆಯಿಂದ ಓದುತ್ತಿದ್ದೆ' ಎನ್ನುತ್ತಾನೆ. ಆಗ ಅಲ್ಲಿನವರು 'ಅಯ್ಯೋ ಪಾಪ' ಎಂಬಂತೆ ಲೊಚಗುಟ್ಟುತ್ತಾರೆ. ಇಂಥಾ ಸನ್ನಿವೇಶಗಳಿಗೆ ನನ್ನ ಭಾವನೆಗಳು ಸತ್ತೇ ಹೋಗಿದೆ. ಇಡೀ ಕಾರ್ಯಕ್ರಮದಲ್ಲಿ ಇರಬಹುದುದಾದ ಹತ್ತು ನಿಮಿಷದ ಒಳ್ಳೆಯ ಅಂಶಕ್ಕಾಗಿ ಮಿಕ್ಕ ಐವತ್ತು ನಿಮಿಷ ಇಂಥಾ ಶಿಕ್ಷೆ ಅನುಭವಿಸುವಾಗ ಭಾವನೆಗಳು ಇನ್ನೇನು ನವಿಲಿನಂತೆ ಕುಣಿಯುತ್ತದೆಯೇ?

ಹಾಡುಗಾರಿಕೆ ಎಂಬ ರಿಯಾಲಿಟಿ ಶೋಗಳಲ್ಲಿ ಈವರೆಗೆ ನನಗೆ ಮೆಚ್ಚುಗೆ ಆಗಿರುವುದು "ಎದೆ ತುಂಬಿ ಹಾಡುವೆನು" ಮಾತ್ರ. ಚಿಕ್ಕ ಮಕ್ಕಳು ಯಾವುದಾದರೂ ಕೆಟ್ಟ ಸಾಹಿತ್ಯದ ಹಾಡನ್ನು ಹಾಡಿದರೆ ಅಪ್ಪ-ಅಮ್ಮನಿಗೆ ಬೈಗುಳ ಗ್ಯಾರಂಟಿ. ಯಾರಾದರೂ ಸ್ಪರ್ಧೆಯಿಂದ ನಿರ್ಗಮನವಾದಾಗ ಅವರುಗಳ "ಅಳು" ಎಂಬುದನ್ನೇ ದೊಡ್ಡದಾಗಿ ತೋರಿಸುವುದಿಲ್ಲ. ಜಡ್ಜ್'ಗಳು ಹೊಗಳುವುದು ಒಂದು ಕಡೆಯಾದರೆ, ಅವರುಗಳ ತಿದ್ದುಪಡಿಯ minute details ಬಹಳ ಇಷ್ಟವಾಗುತ್ತದೆ. ಅವರುಗಳು ತೋರಿಸಿಕೊಡುವ ತಪ್ಪುಗಳನ್ನು ಅರ್ಥ ಮಾಡಿಕೊಂಡರೆ 'ಹೀಗೂ ಉಂಟೇ' ಎನಿಸುತ್ತದೆ. ಇದಿಷ್ಟೂ ನನ್ನ ಅಭಿಪ್ರಾಯವಷ್ಟೇ.

ಧಾರಾವಾಹಿಗಳ ಬಗ್ಗೆ ಹೇಳಲೇ ಬೇಡವೇ? ಸಂಜೆ ದಾಟಿದ ಮೇಲೆ ನಮ್ಮ ಮನೆಗಳಲ್ಲಿ "ಹಾವು" ಎಂಬ ಪದ ಬಳಸಕೂಡದು ಎಂಬ ಪದ್ಧತಿ ಇತ್ತು. ಬಾಯಲ್ಲಿ ಹೇಳೋದು, ಅದರ ಬಗ್ಗೆ ಮಾತಾಡೋದು, ಇತ್ಯಾದಿ ಇಲ್ಲವೇ ಇಲ್ಲ. ಈಗ ರಾತ್ರಿಯಾದರೆ ಸಾಕು ಎಲ್ಲ ಚಾನಲ್'ಗಳಲ್ಲೂ ಹಾವಿನ ಕಾಟ. ನಾಗಕನ್ನಿಕೆ, ನಾಗಿನ್, ನಂದಿನಿ ಒಂದೇ ಎರಡೇ? ಹಾವುಗಳ ಹಾವಭಾವ, ಪಾತ್ರಧಾರಿಗಳ ದಿರಿಸು, ಕ್ರೋಧದ ಉರಿಗಣ್ಣು ಎಲ್ಲ ನೋಡುತ್ತಿದ್ದರೆ ನಾವೇನು 'R' rated ಸಿನಿಮಾ ನೋಡ್ತಿದ್ದೀವಾ ಎನಿಸುತ್ತದೆ. ಯಾವುದೋ ಧಾರಾವಾಹಿಯಲ್ಲಿ ಕುಳಿತಿರುವ ರಾಣಿಯನ್ನು ಹಿಂಭಾಗದಿಂದ ತೋರಿಸುತ್ತಾರೆ... ಖಾಲೀ ಬೆನ್ನು! ವೀಕ್ಷಕರನ್ನು ತಮ್ಮತ್ತ ಸೆಳೆಯಲು ಈ ಮಟ್ಟಕ್ಕೆ ಇಳಿಯುವುದಾ?

ಎರಡು ಮದುವೆಗಳು, ಅನೈತಿಕ ಸಂಬಂಧಗಳು, ಕೊಲೆಯ ಸಂಚು, ಅರ್ಥಹೀನ ಹಾಸ್ಯ, 'ಮೈ ಚಾಯ್ಸ್' ಧೋರಣೆಯ ಮೈ ತೋರಿಸೋ ಬಟ್ಟೆಗಳು ಧಾರಾವಾಹಿಗಳಲ್ಲಿ ಇರಲೇಬೇಕಾದ ಪ್ರಮುಖ ಅಂಶ.

ಧಾರಾವಾಹಿಯಾಗಲಿ, ಜಾಹೀರಾತಾಗಲಿ ಒಂದು ಚಾನಲ್'ನಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಅದಕ್ಕೊಂದು ಅರ್ಹತೆ ಇರಬೇಕು ಎಂದೆನಿಸುತ್ತದೆ. ಅದಕ್ಕೊಂದು ಸೆನ್ಸಾರ್ ಬೋರ್ಡ್ ಕೂಡ ಎಂದೇ ನನ್ನ ಭಯಂಕರ ನಂಬಿಕೆ. ದಯವಿಟ್ಟು ನಗಬೇಡಿ. ದುಡ್ಡು ಕೊಟ್ಟರೆ ಯಾವ ಸಮಿತಿಯೂ ನಿಮ್ಮ ಸರಕಿಗೆ ಅಡ್ಡಗಾಲು ಹಾಕೋದಿಲ್ಲ ಅಂತ ನಾನೂ ಬಲ್ಲೆ.

ಸಂಸಾರಸ್ಥರು ಕೂತು ನೋಡುವ ಟಿವಿ'ಯಲ್ಲಿ ಹೀಗೆಲ್ಲಾ ತೋರಿಸುವಂತಿಲ್ಲ ಎಂಬ ಕಾಲ ಹೆಚ್ಚು ಕಮ್ಮಿ ತೆರೆಮರೆಗೆ ಸೇರುತ್ತಿದೆ. ತಿಳಿದೂ ತಿಳಿದೂ ತಪ್ಪುಗಳು ನಡೆಯುತಿವೆ. ಮುಂದಿನ ಜನಾಂಗ ಅವನತಿಯತ್ತ ಸಾಗುತ್ತಿದೆ. ಬೆಕ್ಕೂ ಇದೆ ಗಂಟೆಯೂ ಇದೆ. ಕಟ್ಟುವವರು ಯಾರು? 'ಕಟ್' ಹೇಳೋದಕ್ಕೆ ಎಲ್ಲರೂ ಇರುವಾಗ ಕಟ್ಟುವವರನ್ನು ಎಲ್ಲಿಂದ ತರೋಣ?

English summary
Do you watch Kannada TV serials and reality shows everyday? What is your honest opinion about them? Are they upholding the Kannada culture, passing any good message? Are they healthy for the society? Srinath Bhalle asks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X