• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ತಾಳ ಬೇಕು ತಕ್ಕ ಮೇಳ ಬೇಕು

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ನಮ್ಮ ಜೀವನದಲ್ಲಿ ಎಷ್ಟೆಲ್ಲಾ ರೀತಿ ಈ ತಾಳ ಅನ್ನೋದು ತಾಳಬದ್ಧವಾಗಿ ಹಾಸುಹೊಕ್ಕಾಗಿದೆ ಎಂದರೆ, ನನಗೆ ತಾಳ ಎಂದರೆ ಗೊತ್ತಿಲ್ಲ ಅಂತ ಯಾರೂ ಹೇಳುವ ಹಾಗೆಯೇ ಇಲ್ಲ. ಇಷ್ಟಕ್ಕೂ ಈ ತಾಳ ಎಂದರೇನು?

ಚಿಕ್ಕದಾಗಿಯೇ ಆರಂಭಿಸುತ್ತೇನೆ. ತಾಳ ಎಂಬುದನ್ನು ಸಮಾನ ಅಂತರದಲ್ಲಿ ನಡೆಯುವ ಒಂದು ಕ್ರಿಯೆ ಎಂಬಂತೆ ಆಲೋಚಿಸಿ. ತಾಳ ಎಂದರೆ ತೊಡೆಯ ಮೇಲೆ ತಟ್ಟುವುದೇ ಆಗಬೇಕಿಲ್ಲ. ಹಾಗಂತ ಪಕ್ಕದವರ ತೊಡೆಯ ಮೇಲೆ ತಟ್ಟದಿರಿ. ಅವರು ನಿಮಗೆ ತಟ್ಟಿಯಾರು. ವಾದ್ಯ ನುಡಿಸುವವರು ಕೈಯಲ್ಲಿ ತಾಳ ಹಾಕಲಾಗುವುದಿಲ್ಲ ಅಲ್ಲವೇ? ಹಾಡುಗಾರರೂ ಕೆಲವೊಮ್ಮೆ ಗಾಳಿಯಲ್ಲೇ ತಾಳ ಹಾಕುತ್ತಾರೆ. ಮನಸ್ಸಿನಲ್ಲೇ ತಾಳ ಹಾಕುವುದು ಒಂದು ಕಲೆ. ಯಾವುದೇ ಬಗ್ಗೆಯಾಗಲಿ ಏಕಾಗ್ರತೆ ಮುಖ್ಯ.

ಶ್ರೀನಾಥ್ ಭಲ್ಲೆ ಅಂಕಣ; ಅಷ್ಟು ಇಷ್ಟಾಗಿದ್ದು, ಇಷ್ಟು ಅಷ್ಟಾಗಿದ್ದು...

ಪ್ರತೀ ಎರಡು ಬಾರಿ ನಡೆವ ಆ ಕೆಲಸದ ನಡುವಿನ ಅಂತರ ಸಮನಾಗಿರುವುದೇ ತಾಳಬದ್ಧ ಅಥವಾ ಲಯಬದ್ಧ. ಕೊಂಚ ಕ್ಲಿಷ್ಟವಾಯ್ತು ಎಂದೆನಿಸಿದರೆ ಆರಾಮವಾಗಿ ಕೂತು ನಿಮ್ಮ ಹೃದಯ ಬಡಿತವನ್ನೇ ಗಮನಿಸಿ. ಆ ಲಬ್-ಡಬ್ ನಡುವಿನ ಅಂತರ ಸಮನಾಗಿದೆ ತಾನೇ? ನಿಮ್ಮದೇ ಅಂಗೈಯಿಂದ ಪ್ರತೀ ಲಬ್ ಮತ್ತು ಡಬ್ ಗೆ ಕೈಯನ್ನು ತಟ್ಟಿ. ಇದೇ ತಾಳ !

ಹೃದಯದ ಬಡಿತದ ವೇಗಕ್ಕೆ ತಾಳ ಹಾಕಿದಾಗ ಕೊಂಚ ವೇಗವಾಯ್ತು ಅಂತ ಅನ್ನಿಸಿದರೆ ಪ್ರತೀ ಒಂದು ಲಬ್-ಡಬ್ ಜೋಡಿಗೆ ಒಮ್ಮೆ ತಟ್ಟಿ ಸಾಕು. ಬೇಡಾ ಬಿಡಿ, ಗಡಿಯಾರದ ಟಿಕ್ ಟಿಕ್ ಸದ್ದು ಗೊತ್ತಲ್ಲವೇ? ಪ್ರತೀ ಒಂದು ಟಿಕ್ ಅಥವಾ ಎರಡು ಟಿಕ್ ಸದ್ದಿಗೆ ಒಮ್ಮೆ ತಟ್ಟಿದಾಗಲೂ ಅದೇ ತಾಳ. ಹೇಗೆ ಈ ಗಡಿಯಾರದಲ್ಲಿನ ಎರಡು ಟಿಕ್ ನಡುವಿನ ಅಂತರ ಎಂದಿಗೂ ಏರುಪೇರಾಗುವುದಿಲ್ಲವೋ ಹಾಗೆಯೇ ಹಾಕುವ ತಾಳ ಕೂಡ ಏರುಪೇರಾಗುವ ಹಾಗಿಲ್ಲ. ಹಾಗಾದರೆ ಅದು ತಪ್ಪಿದ ತಾಳವಾಗುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ಮನೋಭಾವವೇ ಎಲ್ಲಾ, ಮನೋಭಾವದಿಂದಲೇ ಎಲ್ಲಾ

ಒಂದು ಫ್ಯಾಕ್ಟರಿಯ ವಾತಾವರಣವನ್ನು ನೀವು ವಿಡಿಯೋಗಳಲ್ಲೋ ಅಥವಾ ಪ್ರತ್ಯಕ್ಷವಾಗಿಯೋ ಕಂಡಿರುತ್ತೀರಿ. ಇಂಥ ಒಂದು ಸನ್ನಿವೇಶದ ಉದಾಹರಣೆ ತೆಗೆದುಕೊಳ್ಳೋಣ. ಸಾಲಾಗಿ ಖಾಲಿ ಬಾಟಲಿಗಳು ಜೋಡಣೆಯಾಗಿದ್ದು, ಒಂದು ಬೆಲ್ಟ್ ಮೇಲೆ ಸಾಗುತ್ತಿರುತ್ತದೆ. ಸಮಾನ ಅಂತರದಲ್ಲೇ ಸಾಗುವ ಒಂದರ ನಂತರ ಒಂದು ಬಾಟ್ಲಿ ಒಂದೆಡೆ ನಿಲ್ಲುತ್ತಾ ಸಾಗುತ್ತದೆ. ಅದರೊಳಗೆ ಪಾನೀಯ ಭರ್ತಿಯಾಗುತ್ತದೆ. ಆ ನಂತರ ಆ ಬಾಟ್ಲಿ ಮುಂದೆ ಸಾಗುತ್ತದೆ. ಅಷ್ಟರಲ್ಲಿ ಮತ್ತೊಂದು ಬಾಟ್ಲಿ ಅದೇ ಜಾಗಕ್ಕೆ ಬಂದು ನಿಲ್ಲುತ್ತದೆ. ಅದು ಭರ್ತಿಗೊಂಡು ಮುಂದೆ ಸಾಗುತ್ತದೆ. ಇದು ಲಯಬದ್ಧವಾದ ಕಾರ್ಯ. ಎಲ್ಲೋ ಒಂದು ಕಡೆ ಎಡವಟ್ಟಾದರೆ ಅಲ್ಲಿಂದಾಚೆ ಎಲ್ಲವೂ ಎಡವಟ್ಟೇ.

ತಾಳಗಳ ಹಿಂದಿನ ಮುಖ್ಯ ಸೂತ್ರ ಟೈಮಿಂಗ್ ಅನ್ನೋದು ಖಾತ್ರಿಯಾಯ್ತು. ಒಂದು ನೃತ್ಯ ಕಾರ್ಯಕ್ರಮವನ್ನು ಊಹಿಸಿಕೊಳ್ಳಿ. ಒಬ್ಬ ನೃತ್ಯಗಾರ್ತಿ, ಹಾಡುವ ಸಂಗೀತದ ಗುರುಗಳು, ಖಂಜರ, ಮೃದಂಗ, ತಬಲಗಳೇ ಮೊದಲಾದ ಪಕ್ಕವಾದ್ಯಗಳೆಲ್ಲರ ಸಾಮಾನ್ಯ ಭಾಷೆಯೇ ತಾಳ ಎಂದರೆ ತಪ್ಪಲ್ಲ. ಸುಮ್ಮನೆ ಊಹಿಸಿಕೊಳ್ಳಿ, ತಾಳ ಲಯಬದ್ಧವಾಗಿಲ್ಲದೇ ಆಗಾಗ ಹೆಚ್ಚುಕಮ್ಮಿಯಾಗುತ್ತಲೇ ಇದ್ದರೆ ಆ ನೃತ್ಯಗಾತಿಯ ಗತಿ ಏನು?

ಶ್ರೀನಾಥ್ ಭಲ್ಲೆ ಅಂಕಣ; ಪೋಪು ಹೋಗೋಣ ಬಾರೋ ರಂಗ

ಬಹುಶಃ ಎಲ್ಲರೂ ರೈಲಿನಲ್ಲಿ ಪಯಣ ಮಾಡಿರುತ್ತೀರಿ. ಸಾಗುವ ರೈಲಿನ ಸದ್ದು ಅದೆಷ್ಟು ಲಯಬದ್ದವಾಗಿರುತ್ತದೆ ಅಲ್ಲವೇ? ಅದಕ್ಕೆ ಅಲ್ಲವೇ ಅದನ್ನು ಚುಕುಬುಕು ರೈಲು ಅನ್ನೋದು? ರೈಲಿನ ಹಳಿಗಳು ಮಲಗಿರುವ ಆ ಮರದ ಪಟ್ಟಿಗಳು, ಸಮನಾದ ಅಂತರವುಳ್ಳದ್ದೇ ಆಗಿರುತ್ತದೆ. ರೈಲಿನಿಂದ ಹೊರಡುವ ಸದ್ದು ಪಟ್ಟಿಗಳಿಗೆ ಬಡಿದು ಪ್ರತಿಧ್ವನಿಸುವುದೇ ನಮಗೆ ನಿರಂತರವಾಗಿ ಲಯಬದ್ಧವಾಗಿ ಕೇಳಿಸೋದು ಅಂತ ಅಂದುಕೊಂಡಿದ್ದೇನೆ. ಈ ಪಟ್ಟಿಗಳ ಜೋಡಣೆ ಸಮಾನ ಅಂತರದಲ್ಲಿ ಇಲ್ಲದಿದ್ದರೆ?

ಅಂದ ಹಾಗೆ, ಉದ್ದ ಅಗಲ ಎಂಬ ವಿಷಯ ನಿಮಗೆಲ್ಲಾ ಚೆನ್ನಾಗಿ ಗೊತ್ತೇ ಇದೆ. ನಾವೆಷ್ಟು ಉದ್ದ, ಅಗಲ ಇದ್ದೇವೆ ಎಂಬುದು ನಮ್ಮ BMI ಅನ್ನು ತಿಳಿಸುತ್ತದೆ. ಹೆಚ್ಚು BMI ಇದ್ದರೆ ಸ್ಥೂಲ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಅದೆಲ್ಲಾ ಸರಿ ಆದರೆ ಈ BMIಗೂ ತಾಳಕ್ಕೂ ಏನು ಸಂಬಂಧ?

ಉದ್ದ ಎಂದರೆ ಏರಿಳಿತ ಅರ್ಥಾತ್ ಪಿಚ್ ಅಥವಾ ಶೃತಿ. ಹಾಡುವಾಗ ಶೃತಿಯನ್ನು ಹಿಡಿಯುವುದು ಬಹಳ ಮುಖ್ಯ. ಅತೀ ಕಡಿಮೆ ಶೃತಿಯಲ್ಲಿ ಹಾಡುವಾಗ ಸಾಹಿತ್ಯ ಕೇಳಿಸದಂತಾಗಬಹುದು. ಉಸಿರು ಹಿಡಿಯೋದು ಕಷ್ಟ. ಹೆಚ್ಚಿನ ಶೃತಿಯಲ್ಲಿ ಹಾಡುವಾಗ ಕೆಲವೊಮ್ಮೆ ಕಿರುಚಿದಂತೆ ಆಗಬಹುದು, ಗಂಟಲಿಗೂ ತೊಂದರೆ ಮತ್ತು ಆಯಾಸ ಹೆಚ್ಚು. ನಮಗೆ ಅನುಕೂಲವಾಗುವ ಶೃತಿಯಲ್ಲಿ ಹಾಡುವುದು ಬಹಳ ಮುಖ್ಯ. ಇದೇ ಉದ್ದ.

ಇನ್ನು ಅಗಲ ಎಂಬುದೇ ತಾಳ. ವೇಗವಾಗಿ ತಾಳ ಹಾಕುವುದು ಅಥವಾ ತೀರಾ ನಿಧಾನವಾಗಿ ಹಾಕುವ ತಾಳಗಳು ಪ್ರೇಕ್ಷಕರಿಗೂ ಹಿಂಸೆ. ಶೃತಿ ಮತ್ತು ತಾಳಗಳು ಸಮ ತೂಕದಲ್ಲೇ ಸಾಗಿದರೆ ಎಲ್ಲವೂ ಲಯಬದ್ಧ. ಅಂದರೆ BMI ಚೆನ್ನಾಗಿರುತ್ತದೆ ಅಂತ. ಈಗ ಗೊತ್ತಾಯ್ತಲ್ಲ BMI ಅಂದರೆ ಏನು ಅಂತ? ಲಯಬದ್ಧವಾಗಿದ್ದರೆ ಬಹು ಮಂದಿಗೆ ಇಷ್ಟವಾಗುತ್ತದೆ ಅಂತ.

ನಮ್ಮ ದೇಹವನ್ನೇ ತೆಗೆದುಕೊಂಡರೆ, ಹೃದಯ ತಾಳ ಹಾಕುತ್ತೆ. ಹೊಟ್ಟೆಯೂ ತಾಳ ಹಾಕುತ್ತೆ. ಕಣ್ಣು ರೆಪ್ಪೆ ಒಂದನೊಂದು ಮರೆವುದೇ ಎಂದು ಕೇಳಿಯೇ ಇದ್ದೀರಿ. ರೆಪ್ಪೆಗಳು ಆಗಾಗ ಮಿಟುಕುತ್ತಲೇ ಇರುತ್ತೆ ಅನ್ನುವುದು ನಿಮಗೂ ಗೊತ್ತು. ಆದರೆ ಇದು ಲಯಬದ್ಧವಾದ ಮಿಟುಕಿಸುವಿಕೆಯೇ? ಇಲ್ಲ ಎಂದರೆ ಏಕೆ? ಅಂದ ಹಾಗೆ, ಇಲ್ಲೊಂದು ವಿಷಯ ಹೇಳಬಯಸುತ್ತೇನೆ. ಆಮೆಗಳ ಜಗತ್ತಿನಲ್ಲಿ ಕಣ್ಣು ರೆಪ್ಪೆ ಒಂದನೊಂದು ಮರೆವುದೇ ಅಂಬೋದು ಕೆಲಸಕ್ಕೆ ಬರೋದಿಲ್ಲ. ಆಮೆಗಳು ತಮ್ಮ ರೆಪ್ಪೆಗಳನ್ನು ಬೇರೆ ಬೇರೆಯಾಗಿ ಮುಚ್ಚಿ-ತೆರೆಯಬಲ್ಲದಂತೆ. ಏನ್ ಮಾತು ಅಂತ ಆಡ್ತೀರಾ? ಹೆಣ್ ಮಕ್ಕಳನ್ನು ಕಂಡಾಗ ನಾವೂ ಆಮೆಗಳೇ, ಅಂದ್ರಾ? ಆಮೆಯು ಕೆನ್ನೆಗೆ ಹೊಡೆಸಿಕೊಂಡ ಪ್ರಸಂಗ ನಾನಂತೂ ಕೇಳಿಲ್ಲ ಬಿಡಿ.

ಈವರೆಗೆ ತಾಳದ ಬಗ್ಗೆ ಒಂದಷ್ಟು ವಿಚಾರಗಳನ್ನು ಕೇಳಿದಿರಿ. ಈಗ ಅದನ್ನು ಅಭ್ಯಾಸ ಮಾಡುವ ಬಗೆ ಹೇಗೆ? ಮನೆಯಲ್ಲಿ ಮಕ್ಕಳಿದ್ದರೆ ಅವರನ್ನು ತಟ್ಟಿ ಮಲಗಿಸುವಾಗ ತಾಳ ಹಾಕಿ. ಹಾಗೇನಿಲ್ಲ ಎಂದರೆ ನಿಮಗೆ ನಿದ್ರೆ ಬಾರದಿದ್ದಾಗ ತಾಳ ಹಾಕಿಕೊಳ್ಳಿ, ನಿದ್ದೆ ಬರುತ್ತದೆ. ಸೆಲ್ಫಿ ರೀತಿ ಇದು ಸೆಲ್ಫ್ ತಾಳ. ಗಾಡಿಯಲ್ಲಿ ಸಾಗುವಾಗ ಎಡ ಅಥವಾ ಬಲಕ್ಕೆ ತಿರುಗುವಾಗ ಇಂಡಿಕೇಟರ್ ಬಳಸುತ್ತೀರಲ್ಲವೇ? ಅದೂ ಲಯಬದ್ಧ. ಹಾಗಂತ ಗಾಡಿ ತಿರುಗಿಸುವಾಗ ತಾಳ ಹಾಕಬೇಡಿ. ಸಿಗ್ನಲ್ ಬಳಿ ನಿಂತಿರುವಾಗ ಆ ಕಡೆ ಈ ಕಡೆ ಹೋಗಬೇಕು ಎಂದಾಗ ಇಂಡಿಕೇಟರ್ ಅಂತ ಹಾಕಿದ್ದರೆ ಆಗ ತಾಳ ಹಾಕಬಹುದು.

ಆಂಗ್ಲದಲ್ಲಿ ತಾಳಕ್ಕೆ rhythm ಎನ್ನುತ್ತಾರೆ. ಶಿಸ್ತುಬದ್ಧವಾದ ಜೀವನವನ್ನು ತಾಳಕ್ಕೆ ಹೋಲಿಸಿಕೊಳ್ಳಿ. ವೈರಾಣು ತಾಂಡವವಾಡುತ್ತಿರುವ ಈ ದಿನಗಳಲ್ಲಿ, ವೈದ್ಯಕೀಯವಾಗಿ ಇಬ್ಬರ ನಡುವೆ ಆರು ಅಡಿ ಅಂತರ ಇರಬೇಕು ಎಂದು ಹೇಳಲಾಗಿದೆ. ಪಾಲಿಸದೇ ಹೋದಲ್ಲಿ ಹತ್ತು ಅಡಿ ಕೆಳಗೆ ಇಳಿಯುವಿರಿ ಎಂದು ಎಚ್ಚರಿಕೆ ಕೊಟ್ಟಾಗಲೂ ಕೇಳದೇ ತಪ್ಪಿದ ತಾಳವಾಗುತ್ತಿದ್ದಾರೆ ಜನತೆ. ತಾಳಬದ್ಧವಾಗಿ ಆರು ಅಡಿ ಅಂತರ ಕಾಪಾಡಿಕೊಂಡರೆ ವೈರಾಣು ದೂರವಾಗಬಹುದು.

ನಮ್ಮ ಜೀವನದುದ್ದಕ್ಕೂ ಈ ತಾಳ ಎಂಬುದು ನಮ್ಮಲ್ಲೇ ಒಂದಾಗಿದೆ. ಆದರೆ ಈ ತಾಳದಂತೆ ನಮ್ಮ ಜೀವನ ಲಯಬದ್ಧವಲ್ಲ ಎಂಬುದು ಕಹಿಸತ್ಯ. ಎಲ್ಲವೂ ಕಾಲಕಾಲಕ್ಕೆ ಸರಿದೂಗುವಂತೆ ಆಗಿದ್ದರೆ ಅದು ಲಯಬದ್ಧ. ಆದರೆ ಹಾಗಾಗುವುದಿಲ್ಲ ಅಲ್ಲವೇ? ನಿಜ, ತಾಳ ತಪ್ಪಿದಂತಾದಾಗ ಎಚ್ಚರವಹಿಸಿ ಮತ್ತೆ ಹಳಿ ತಪ್ಪದಂತೆ ಹಾದಿಗೆ ಬರಬೇಕು. ಹಳಿ ತಪ್ಪುವುದು ಸ್ವಾಭಾವಿಕ. ಆದರೆ ಮತ್ತೆ ಹಾದಿಗೆ ಬರುವುದು ಆಗಿರಬೇಕು ನಮ್ಮ ಕಾಯಕ. ಅದಕ್ಕಾಗಿ ಸಹನೆಯಿಂದ ತಾಳಬೇಕು.

ಮುಖ್ಯವಾಗಿ, ದಾಸರೇ ಹೇಳಿರುವಂತೆ, ತಾಳ ಬೇಕು ತಕ್ಕ ಮೇಳ ಬೇಕು ಶಾಂತ ವೇಳೆ ಬೇಕು ಗಾನವನ್ನು ಕೇಳಬೇಕೆಂಬುವರಿಗೆ. ಇನ್ನಾದರೂ ತಾಳಬದ್ದ ಜೀವನ ನಡೆಸೋಣವೇ?

English summary
The life is full of so many rhythms. Life is also about balancing everything and maintaining those rhythms around us,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X