ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಬುದ್ದಿ ಮರುಬಳಕೆ ಮಾಡಿ ಒಂದಷ್ಟು ಚಿಂತನೆ ಮಾಡುವ

|
Google Oneindia Kannada News

ಇಂದಿನ ಮಾತುಗಳು ಮರುಬಳಕೆಯ ಬಗ್ಗೆ. ನಾವು ನಮ್ಮ ಜೀವನದಲ್ಲಿ ಯಾವ ಯಾವ ಸಂದರ್ಭದಲ್ಲಿ ಮರುಬಳಕೆ ಮಾಡುತ್ತೇವೆ ಎಂಬುದನ್ನು ನೋಡುವುದೇ ಇಂದಿನ ಬರಹದ ಉದ್ದೇಶ. ಕೆಲವೊಮ್ಮೆ ನಾವು ಬಳಸಿ ಬಿಸಾಡಿದ್ದನ್ನು ಬೇರೆಯವರು ಬಳಸಬಹುದು. ಹೀಗಾಗಿ ಅವೂ ಮರುಬಳಕೆಯ ಛಾವಣಿಯ ಕೆಳಗೆ ಜಾಗ ಪಡೆದುಕೊಂಡಿದೆ. ಮೊದಲಿಗೆ ಒಂದು ಪ್ರಶ್ನೆ. ದಿನನಿತ್ಯದಲ್ಲಿ ಬುದ್ದಿ ಬಳಕೆಯಾಗುತ್ತದೋ? ಮರುಬಳಕೆಯಾಗುತ್ತದೋ?

ಆತ್ಮ ಎಂಬುದು ಮರುಬಳಕೆಯಾಗುತ್ತದೆ ಎನ್ನಲಾಗಿದೆ. ಇಲ್ಲಿ ಒಂದು ಸೂಕ್ಷ್ಮ ಅಡಗಿದೆ. Recycle ಬೇರೆ, Reuse ಬೇರೆ. ಎರಡೂ ಪದಗಳಿಗೆ ಮರುಬಳಕೆ ಎಂದೇ ಹೆಸರಿಸಿದರೂ ಬಳಕೆಯ ಸಂದರ್ಭ ಭಿನ್ನ. ಉದಾಹರಣೆಗೆ ಬಳಸಿದ ಪ್ಲಾಸ್ಟಿಕ್, ಅಥವಾ ಟಿನ್‌ನಿಂದ ಮಾಡಿದ ವಸ್ತುಗಳನ್ನು Recycle ಮಾಡಿದಾಗ ಅವನ್ನು ಬಡಿದು ಪುಡಿ ಮಾಡಿ ಬೇರೆ ರೂಪ ಕೊಡುತ್ತಾರೆ. Reuse ಅಥವಾ ಮರುಬಳಕೆಯಲ್ಲಿ ವಸ್ತುವಿನ ಘನರೂಪದಲ್ಲಿ ಮಾರ್ಪಾಡು ಇರುವುದಿಲ್ಲ. ಈ ಯಾವುದೇ ರೀತಿಯ ಮರುಬಳಕೆಯಲ್ಲೂ ಕಂಡುಬರುವುದು ಘನರೂಪ ಎಂದಾಯ್ತು. ಒಂದು ದೇಹದಿಂದ ಹಾರಿ ಹೋದ ಆತ್ಮ ಮತ್ತೊಂದು ಜೀವಿಯಲ್ಲಿ ಮರುಬಳಕೆಯಾದರೆ ಅದನ್ನು Recylce ಎನ್ನುತ್ತೇವೆಯೋ? Reuse ಎನ್ನುತ್ತೇವೆಯೋ?

ಶ್ರೀನಾಥ್ ಭಲ್ಲೆ ಅಂಕಣ: ಕೋಟಿನ ಬಗ್ಗೆ ಕೋಟ್ಸ್ ಹಾಕಿ ಒಂದೆರಡು ವಿಷಯ ಕೋಟ್ ಮಾಡೋಣಶ್ರೀನಾಥ್ ಭಲ್ಲೆ ಅಂಕಣ: ಕೋಟಿನ ಬಗ್ಗೆ ಕೋಟ್ಸ್ ಹಾಕಿ ಒಂದೆರಡು ವಿಷಯ ಕೋಟ್ ಮಾಡೋಣ

ಕೊಡುವುದನ್ನು ಒಳ್ಳೆಯ ಸ್ಥಿಯಲ್ಲಿರುವಂತೆ ನೀಡಬೇಕು
ಉಟ್ಟಬಟ್ಟೆ ಅಥವಾ ಬಳಸಿದ ವಸ್ತುಗಳು ಬೇರೆ ಯಾರಿಗಾದರೂ ಕೊಟ್ಟಾಗ ಅವರು ಅದನ್ನು ಬಳಕೆ ಮಾಡಲು ಆರಂಭಿಸಿದಾಗ ಅದು ಮರುಬಳಕೆ ಅಂತಾಗುತ್ತದೆ. ಹೀಗಾಗಿ ಕೊಡುವುದನ್ನು ಒಳ್ಳೆಯ ಸ್ಥಿಯಲ್ಲಿರುವಂತೆ ನೀಡಬೇಕು, ಹರಕಲು ಬಟ್ಟೆಯನ್ನು ದಾನ ಮಾಡಬಾರದು. ಉದಾಹರಣೆಗೆ, ಈಗ ಒಂದು ಚಳಿಗಾಲದ ಜಾಕೆಟ್ ಎಂದುಕೊಳ್ಳಿ. ಹರಿದಿಲ್ಲ, ಹಾಳಾಗಿಲ್ಲ ಆದರೆ ದೇಹವು ಅಸಾಧಾರಣವಾಗಿ ವಿಶಾಲವಾಗಿ ಅಗಲವಾಗಿರುವುದರಿಂದ ಅದೇ ಜಾಕೆಟ್ ಧರಿಸಲು ಯೋಗ್ಯವಾಗುವುದಿಲ್ಲ. ಯಾರಿಗಾದರೂ ಬಳಸಲು ಕೊಟ್ಟಾಗ, ಅವರು ಆ ಜಾಕೆಟ್‌ಗಿಂತ ಮೀರಿ ಬೆಳೆಯುವ ತನಕ ಅವರೂ ಬಳಸಬಹುದು.

Srinath Bhalle Column: Reuse the Brain And Do Some Thinking

ಇನ್ನೂ ಹಾಳಾಗಿಲ್ಲ ಎಂದರೆ ಅದು ಮರು ಮರುಬಳಕೆಗೂ ಯೋಗ್ಯವಾಗಬಲ್ಲದು. ಹಿರಿಯರ ಜ್ಯಾಕೆಟ್‌ಗಿಂತ ಮಕ್ಕಳ ಜಾಕೆಟ್ ಈ ಸಾಲಿಗೆ ಬರುತ್ತದೆ. ಜಾಕೆಟ್ ಬದಲಿಗೆ ಒಂದು ಪ್ಯಾಂಟು, ಷರಟು, ಲಂಗ, ಫ್ರಾಕು ಎಂಬುದೆಲ್ಲಾ ಹಿರಿಯ ಅಣ್ಣ ಅಥವಾ ಅಕ್ಕಳಿಂದ ಕಿರಿಯರಿಗೆ ವರ್ಗಾವಣೆ ಸಹಜವಾಗಿಯೇ ಆಗುತ್ತಿತ್ತು. ಒಟ್ಟು ಕುಟುಂಬ ಅಥವಾ ದೊಡ್ಡ ಕುಟುಂಬ ಅಂದಿನ ದಿನಗಳಲ್ಲಿ ಇದು ಸರ್ವೇ ಸಾಧಾರಣ. ಕೋಳಿಯನ್ನು ಕೇಳಿ ಮೆಣಸು ಅರಿಯುವುದಿಲ್ಲ ಎಂಬಂತೆ ಕಿರಿಯರನ್ನು ಕೇಳುವುದೆಲ್ಲಾ ಪ್ರಶ್ನೆಯೇ ಆಗುತ್ತಿರಲಿಲ್ಲ. ನಿಮ್ಮ ಮನೆಗಳಲ್ಲಿ ಹೇಗಿತ್ತು ಈ ಮರುಬಳಕೆ?

Recommended Video

Dewald Brevisಗೆ Kohli ತಮಾಷೆಯಾಗಿ ಹೇಳಿದ್ದೇನು | Oneindia Kannada

ರೆಫ್ರಿಜಿರೇಟರ್ ಎಂದರೆ ತಂಗಳ ಪೆಟ್ಟಿಗೆ
ಇಂದಿನ ಸೂಕ್ಷ್ಮ ಜಗತ್ತಿನಲ್ಲಿ ಒಬ್ಬರ ಬಟ್ಟೆ ಮತ್ತೊಬ್ಬರು ಮರುಬಳಕೆಯ ಅರ್ಥದಲ್ಲಿ ಬಳಸುವ ಪ್ರಶ್ನೆಯೇ ಇಲ್ಲ. ಕೆಲವೊಮ್ಮೆ ಇವರ ಬಟ್ಟೆ ಅವರು ಹಾಕಿಕೊಳ್ಳುವುದು ಅಥವಾ ಅವರ ಬಟ್ಟೆ ಇವರು ಧರಿಸುವುದು ಉಂಟು ಆದರೆ ನಾನು ಧರಿಸಿದ್ದಾಯ್ತು ಇನ್ನು ಮುಂದೆ ಈ ಬಟ್ಟೆ ನಿನ್ನದು ಎಂಬ ವರ್ಗಾವಣೆ ಇಲ್ಲ ಎಂದೇ ಹೇಳಬಹುದು. ನಾನು ಪಟ್ಟಣವಾಸಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳುತ್ತಿದ್ದೇನೆ ಅಷ್ಟೇ. ಇಂದಿನ ದಿನಗಳಲ್ಲಿ, ಒಂದು ವರ್ಷ ಬಳಸಿದ ಸ್ಕೂಲ್ ಬ್ಯಾಗ್ ಮರುವರ್ಷ ಬಳಸದಷ್ಟು ಬೇಕುಬೇಡಗಳು ಬದಲಾಗಿವೆ.

ರೆಫ್ರಿಜಿರೇಟರ್ ಎಂದರೆ ತಂಗಳ ಪೆಟ್ಟಿಗೆ. ಒಬ್ಬೊಬ್ಬರೂ ಈ ತಂಗಳ ಪೆಟ್ಟಿಗೆಯನ್ನು ಬಳಸುವ ವಿಧಾನ ಬೇರೆ. ಅದನ್ನು ನೋಡುವ ರೀತಿ ಬೇರೆ. ಸಂಪ್ರದಾಯಸ್ಥರ ಮನೆಯಲ್ಲಿ ಈ ತಂಗಳ ಪೆಟ್ಟಿಗೆಯೊಳಗೆ ಅನ್ನ, ಸಾರು, ಹುಳಿ ಎಂಬುದೆಲ್ಲ ನಿಷೇಧ. ಇದು ಸರಿಯೇ? ತಪ್ಪೇ? ಎಂಬುದು ವಿಚಾರವಲ್ಲ ಬದಲಿಗೆ ಬಳಸುವ ವಿಚಾರವಾಗಿ ಹೇಳುತ್ತಿರುವುದು ಅಷ್ಟೇ. ಈ ಪೆಟ್ಟಿಗೆಯಲ್ಲಿ ಹಾಲು, ಹಣ್ಣು, ತರಕಾರಿ, ಹೂವು ಇತ್ಯಾದಿಗಳಷ್ಟೇ ಇರಿಸುವುದು. ಬಳಸಿ ಮಿಕ್ಕ ಹಾಲು ಉಳಿದರೆ ಅದನ್ನು ಮರುದಿನದ ಬಳಕೆಗೆ ಅಂತ ಇರಿಸಿದರೆ ಅದು ಮರುಬಳಕೆ ಎನಿಸಿಕೊಳ್ಳುವುದೋ? ಇಲ್ಲವೋ? ಹೌದು, ಇದು ಮರುಬಳಕೆ ಅಲ್ಲ.

ಪ್ರತೀ ವರ್ಷವೂ ಬಾಲ್ಯ, ಹರೆಯ, ಮುದಿತನ ಕಾಣುವ ಸೌಭಾಗ್ಯ
ಬಳಸಿದ್ದು ಇಲ್ಲಿ ಉಳಿದಿಲ್ಲ ಎಂಬುದೇ ಸೂಕ್ಷ್ಮ ಅರ್ಥಾತ್ ಬಳಸಿದ್ದರ ಬಳಕೆ ಮುಗಿದು ಉಳಿದಿದ್ದರ ಬಳಕೆಯು, ಬಳಸಲು ಯೋಗ್ಯವಾಗಿ ತಂಗಳ ಪೆಟ್ಟಿಗೆಗೆ ಸೇರಿದೆ. ಮರುದಿನದ ಸಮಾರಂಭಕ್ಕೆ ಹಿಂದಿನ ರಾತ್ರಿ ತರಕಾರಿ ಹೆಚ್ಚಿಟ್ಟಿದೆ ಎಂದುಕೊಳ್ಳೋಣ. ಅದು ಈ ತಂಗಳ ಪೆಟ್ಟಿಗೆಗೆ ಸೇರುತ್ತದೆ. ತರಕಾರಿಯು ಹೆಚ್ಚುವ ಮುನ್ನ ಪೂರ್ಣರೂಪದಲ್ಲಿದ್ದು, ಈಗ ಮಗದೊಂದು ರೂಪ ತಾಳಿದೆ ಅಷ್ಟೇ. ಇದು ತಂಗಳೂ ಅಲ್ಲ. ಬಳಸಿದ್ದೂ ಅಲ್ಲ, ಉಳಿದಿದ್ದೂ ಅಲ್ಲ. ಬಳಸಿದ್ದು ಈಗ ಉಳಿದಿದೆ, ಹಾಗಾಗಿ ಇದಿನ್ನೂ ಬಳಕೆಯ ಸ್ವರೂಪ ಮರುಬಳಕೆ ಅಲ್ಲ.

ತನ್ನೆಲ್ಲಾ ಎಲೆಗಳನ್ನೂ ಉದುರಿಸಿಕೊಂಡು ಬೋಳಾಗಿ ನಿಂತ ಒಂದು ಮರ. ಚೈತ್ರ ಮಾಸದಲ್ಲಿ ಚಿಗುರಲು ತೊಡಗಿ ಪುಂಖಾನುಪುಂಖವಾಗಿ ಎಲೆ, ಹೂವು, ಕಾಯಿ, ಹಣ್ಣುಗಳನ್ನು ಸುರಿಸಿ ನಂತರ ಮತ್ತೆ ಬೋಳಾಗುತ್ತದೆ. ಚಿಗುರು, ತಾ ಚಿಗುರಲು ಮರವನ್ನು ಬಳಸಿಕೊಂಡಿದೆ ಎಂಬ ವಾದ ನಿಮ್ಮದಾದರೆ ಅದಕ್ಕಾಗಿ ಮರ ಎಂಬುದು ಮರುಬಳಕೆಯಾಯ್ತು. ಈ ವಾದವು ಅರ್ಥಪೂರ್ಣವಾದರೆ, ಮಾವಿನ ಚಿಗುರು, ಬೇವಿನ ಮರದಲ್ಲೂ ಕಾಣಬಲ್ಲದು. ಆದರೆ ಈ ವಾದ ಅರ್ಥಹೀನ. ಚಿಗುರಿನ ತಾಣ ಮರವಲ್ಲ ಆದರೆ ಮರದ ಮರುಹುಟ್ಟು ಈ ಚಿಗುರು. ಚಿಗುರನ್ನು ಕಾಣಿಸದ ಮರ ಸೌದೆಗೆ ಯೋಗ್ಯವಷ್ಟೇ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತದೆ ಎಂಬುದರ ಅರ್ಥ ಇಲ್ಲಿ ಕಾಣುತ್ತದೆ. ಪ್ರತೀ ವರ್ಷವೂ ಬಾಲ್ಯ, ಹರೆಯ, ಮುದಿತನ ಕಾಣುವ ಸೌಭಾಗ್ಯ ಈ ಗಿಡಮರಗಳಿಗೆ ಇವೆ. ನಮಗೇಕೆ ಹೀಗಿಲ್ಲ ಎಂಬುದೇ ಕವಿಗಳ ಪ್ರಶ್ನೆ. ನಿಮ್ಮಲ್ಲಿ ಉತ್ತರವಿದೆಯೇ?

ಬೋಳಾಗಿ ನಿಂತ ಮರ ಎಂದರೆ ಸತ್ವ ಹೀನ ಅಂತಲ್ಲ
ಈಗ ನಾನು ಹೇಳುವ ಮಾತು ಉತ್ತರ ಹೌದೋ ಅಲ್ಲವೋ ಗೊತ್ತಿಲ್ಲ ಆದರೆ ನನ್ನದೊಂದು ಆಲೋಚನೆ ಅಷ್ಟೆ. ನಮಗೂ ಈ ಸೌಭಾಗ್ಯ ಇದೆ ಆದರೆ ಗುರುತಿಸಿಕೊಳ್ಳಬೇಕು ಅಷ್ಟೇ. ಮತ್ತೆ ಮರದ ಸನ್ನಿವೇಶಕ್ಕೆ ಹೋಗೋಣ. ಮರವಾಗಿ ನಿಂತು ಬೋಳಾಗಿ ಮತ್ತೆ ಚಿಗುರುವ ಮುನ್ನ ಆ ಮರ ಮತ್ತೆ ಬೀಜವಾಗಿ ಭುವಿಯ ಒಳಗೆ ಸೇರುತ್ತದೆಯೇ? ಮತ್ತೆ ಸಸಿಯಾಗಿ, ಗಿಡವಾಗಿ, ಮರವಾಗುತ್ತದೆಯೇ? ಇಲ್ಲ ತಾನೇ? ಬೋಳಾಗಿ ನಿಂತ ಮರ, ಮತ್ತೆ ಅಲ್ಲಿಂದ ಮುಂದಿನ ಹಂತ ಆರಂಭಿಸುತ್ತದೆ. ವರ್ಷಾನುವರ್ಷ ಬೆಳೆಯುತ್ತದೆ. ಈ ಸೂಕ್ಷ್ಮವನ್ನೇ ನಾವು ಗಮನಿಸಬೇಕು. ಇದುವೇ ಕವಿವರ್ಯರ ಇಂಗಿತವೂ ಸಹ.

ಪ್ರತೀ ಯುಗಾದಿಯಿಂದಲೂ ಜೀವನ ಹೊಸತಾಗಿ ಮುಂದುವರೆಯುತ್ತದೆ ಎಂಬುದನ್ನು ಅರ್ಥೈಸಿಕೊಳ್ಳೋಣ. ಆರ್ಥಿಕ ವರ್ಷ ಮುಗಿದು ಹೊಸ ವರ್ಷ ಆರಂಭವಾಯ್ತು ಎಂದಾಗ ಗಳಿಸಿ ಶೇಖರಿಸಿಟ್ಟ ಹಣ ಶೂನ್ಯವಾಗಿ ಮತ್ತೆ ಶೇಖರಣೆ ಮಾಡಲು ಆರಂಭಿಸುತ್ತೇವೆಯೋ? ಅಥವಾ ಆ ಹಣವು ಅಲ್ಲೇ ಕೂತಿದ್ದು ಮುಂದುವರೆಯುತ್ತದೆಯೋ? ಬೋಳಾಗಿ ನಿಂತ ಮರ ಎಂದರೆ ಸತ್ವ ಹೀನ ಅಂತಲ್ಲ. ವರ್ಷಾನುವರ್ಷ ಬೆಳೆದರೂ ತನ್ನಲ್ಲಿ ಬಾಲ್ಯ ಮತ್ತು ಹರಯವನ್ನು ಉಳಿಸಿಕೊಂಡಿದೆ ಎಂದೇ ಅರ್ಥ.

ವರ್ಷಾನುವರ್ಷ ಗಮ್ಯದತ್ತ ಸಾಗುವುದು ಜೀವನ ಸತ್ಯ
ಇದು ನಮಗೇಕೆ ಸಾಧ್ಯವಿಲ್ಲ? ವರ್ಷಾನುವರ್ಷ ಗಮ್ಯದತ್ತ ಸಾಗುವುದು ಜೀವನ ಸತ್ಯ. ಹುಟ್ಟಿದ ಕೂಸಿನಿಂದ ಹಿಡಿದು ಬಾಗಿಲು ತಟ್ಟುತ್ತಿರುವ ವಯಸ್ಸಿನವರೆಲ್ಲರದ್ದೂ ಗಮ್ಯದತ್ತಲೇ ಪಯಣ. ಯಾವುದೇ ಜೀವಿಯ ವಯಸ್ಸು ಇಂದು ಇಪ್ಪತ್ತು ಎಂದಾಗಿ ಮುಂದಿನ ವರ್ಷ ಹತ್ತೊಂಬತ್ತು ಆಗಲಾರದು. ಪ್ರತೀ ವರ್ಷದಲ್ಲೂ ಹೊಸ ಹರುಷ ಎಂದು ಆಚರಿಸಿದಾಗ, ಪ್ರತೀ ವರ್ಷವೂ ಬಾಲ್ಯ, ಹರೆಯ, ಮುದಿತನ ಕಾಣಬಹುದು. ಮುದಿತನ ಎಂದರೆ ಕೋಲು ಹಿಡಿದು ಓಡಾಡುವುದು ಎಂದುಕೊಳ್ಳಬಾರದು. ಕೂದಲ ನೆರೆಯದೇ ವೃದ್ಧರಾಗಬಹುದು ಆದರೆ ಅದರ ಹೆಸರು ಜ್ಞಾನವೃದ್ಧತೆ ಅಂತಷ್ಟೇ! ಜೀವನದಲ್ಲಿ ಹುರುಪು ಕಾಯ್ದುಕೊಳ್ಳುವುದು ಹರೆಯ. ತಾರತಮ್ಯವಿಲ್ಲದೆ ಬೆರೆಯುವುದು ಬಾಲ್ಯ.

"ಬಾಲಸ್ತಾವತಿ ಕ್ರೀಡಾಸಕ್ತಸ್ತರುಣಸ್ತಾವತ್ ತರುಣೀಸಕ್ತಃ
ವೃದ್ಧಸ್ತಾವತ್ ಚಿಂತಾಮಗ್ನಃ ಪರೇ ಬ್ರಹ್ಮಣಿ ಕೋಪಿನ ಸಕ್ತಃ"

ಬಾಲ್ಯದ ಆಟದಲ್ಲಿ ಆಸಕ್ತಿ, ಹರಯದ ತರುಣಿಯರಲ್ಲಿ ಸಹಜಾಸಕ್ತಿ, ವೃದ್ಧರಾದವರು ಚಿಂತೆಯಲ್ಲೇ ಮಗ್ನ. ಪರಬ್ರಹ್ಮದ ವಿಷಯದಲ್ಲಿ ಯಾರಿಗೂ ಆಸಕ್ತಿ ಇಲ್ಲ. ಇಲ್ಲಿ ಆಸಕ್ತಿ ಎಂಬುದಕ್ಕಿಂತ, ಇದಕ್ಕೆ ಇಂಥಾ ಕಾಲವೆಂಬುದು ತೆಗೆದಿರಿಸಿಲ್ಲ. ಕಾರಣ ಇಷ್ಟೇ, ಪರಬ್ರಹ್ಮ ಚಿಂತನೆಗೆ ಇಂಥಾ ಕಾಲ ಎಂಬುದೇ ಇಲ್ಲ. ಜೀವನದುದ್ದಕ್ಕೂ ಸಮಾನಾಂತರವಾಗಿ ಸಾಗಬೇಕು ಈ ಚಿಂತನೆ.

ಕೊನೆಯ ಹನಿ: ಇದು ನನ್ನ ಅಂಕಣದ 250ನೇ ಭಾರವಾಗಿದೆ. ಈ ವಿಭಿನ್ನ ಬರಹದ ಮೂಲಕ ಒನ್ಇಂಡಿಯಾ ಸಂಪಾದಕರಿಗೆ ವಂದನೆಗಳನ್ನು ಅರ್ಪಿಸುತ್ತಿದ್ದೇನೆ. ನಿಮ್ಮ ನಿರಂತರ ಪ್ರೋತ್ಸಾಹ ಸದಾ ಹೀಗೆಯೇ ಇರಲಿ. ಕೆಲವೊಮ್ಮೆ ಚಿಂತನೆಗಳ ಮರುಬಳಕೆ ಆಗಿರುತ್ತದೆ ಆದರೆ ಹಿಂದಿನ ವಿಚಾರಗಳಿಗಿಂತ ಸತ್ವಪೂರ್ಣವಾಗಿ ಬರೆಯಲು ಯತ್ನವಂತೂ ನಡೆದಿರುತ್ತದೆ.

English summary
The purpose of today's writing is to look at what we Reuse and recycle in our lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X