ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಮಕರಣ, ಮರುನಾಮಕರಣ - ಅಂದು ಇಂದು ಎಂದೆಂದೂ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮರುನಾಮಕರಣ ಮಾಡುವ ಕ್ರಿಯೆಯನ್ನು ಆಂಗ್ಲದಲ್ಲಿ rename ಎನ್ನುತ್ತಾರೆ. ಒಂದು ಹೆಸರನ್ನು ಮತ್ತೊಂದು ಹೆಸರಿನಿಂದ ಕರೆಯುವುದಕ್ಕೆ ಮರುನಾಮಕರಣ ಎನ್ನಬಹುದು.

ಐಟಿ ಭಾಷೆಯಲ್ಲಿ ಸಿಂಪಲ್ಲಾಗಿ ಹೇಳಬೇಕು ಎಂದರೆ Rename ಎಂದರೆ Computer'ನಲ್ಲಿ ಶೇಖರಣೆ ಆಗಿರುವ ಒಂದು ಫೈಲ್ ಅನ್ನು ಮತ್ತೊಂದು ಹೆಸರಲ್ಲಿ save ಮಾಡುವುದು. ಆ ಫೈಲ್ ಎಂಬೋದು ಇದ್ದ ಜಾಗದಲ್ಲೇ ಇರುತ್ತೆ ಆದರೆ ಹೆಸರು ಮಾತ್ರ ಬೇರೆ. ಇಷ್ಟಕ್ಕೂ ಈ ಮರುನಾಮಕರಣ ಮಾಡಿದ್ದೇಕೆ ಎಂಬುದರ ಹಿಂದೆ ಕಾರಣಗಳು ಹಲವಾರು. ಒಂದು ಫೈಲ್ ಅನ್ನು ಹಾಗೇ ಉಳಿಸಿಕೊಂಡು ಇನ್ನೊಂದು ಪ್ರತಿ ತೆಗೆದರೆ ಅದು copy. ಇರೋ ಹಳೆಯ ಹೆಸರನ್ನು ಕಿತ್ತೊಗೆದು ಮತ್ತೊಂದು ಹೆಸರಿನಿಂದ ಕರೆದರೆ rename ಆಗುತ್ತೆ. copy ಮಾಡಿದಾಗ ಪ್ರತಿಗಳು ಎರಡು. rename ಮಾಡಿದಾಗ ಅದೊಂದೇ ಪ್ರತಿ ಇದ್ದು ಹೆಸರು ಬೇರೆ ಇರುತ್ತದೆ ಅಷ್ಟೇ.

ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ? ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?

ಈ ವಿಷಯ ಯಾಕೆ ಸ್ವಲ್ಪ ವಿಸ್ತಾರವಾಗಿ ಹೇಳಿದೆ ಎಂದರೆ ಮುಂದಿನ ವಿಷಯಕ್ಕೆ ರಂಗ ಸಿದ್ದ ಮಾಡೋಕ್ಕೆ. ಅಷ್ಟೇ ಅಲ್ಲದೇ, computer ವಿಷಯದ ಮಾತುಗಳೆಲ್ಲಾ ನಮ್ಮ ದಿನನಿತ್ಯದ ಜೀವನದಲ್ಲಿ ಇರುವ ವಿಚಾರಗಳೇ ಅಂತ ತಿಳಿ ಹೇಳಲಿಕ್ಕೆ.

ಮೊದಲಿಗೆ ಬೆಂಗಳೂರಿನ ಒಂದೆರಡು ವಿಷಯಗಳನ್ನು ಹೇಳುತ್ತೇನೆ. ಒಂದು ಕಾಲಕ್ಕೆ 'ಮಠದಹಳ್ಳಿ' ಅಂತ ಒಂದು ಪ್ರದೇಶ ಇತ್ತು. ರಾಜಕೀಯ ರಂಗದ ಹಲವಾರು ಗಣ್ಯವ್ಯಕ್ತಿಗಳು ಅಲ್ಲಿದ್ದರು. ಅವರ ಪ್ರಭಾವವೋ ಏನೋ ಹೆಸರನ್ನು ಬದಲಿಸಬೇಕು ಅಂತಾಗಿ "ರವೀಂದ್ರನಾಥ ಟಾಗೋರ್ ನಗರ" ಅಂತಾಯ್ತು. ಈಟುದ್ದ ಹೆಂಗ್ಲಾ ಹೇಳೋದು ಅಂತ ಕೊನೆಗೆ "RT Nagar" ಅಂತಾಗಿ ಖ್ಯಾತಿವೆತ್ತಿದೆ. ಸೊಗಸು ಏನೆಂದರೆ ಈ ಆರ್ ಟಿ ನಗರವನ್ನು 'ಮಠದಹಳ್ಳಿ' ಎಂದಿತ್ತು ಎಂದಾಗಲೀ ಅಥವಾ "ರವೀಂದ್ರನಾಥ ಟಾಗೋರ್ ನಗರ" ಎಂಬುದು ಪೂರ್ಣ ಹೆಸರು ಎಂದಾಗಲಿ ಎಷ್ಟೋ ಜನರಿಗೆ ಗೊತ್ತೇ ಇರೋದಿಲ್ಲ.

Renaming saga : Then, now and forever

ಇಂಥದ್ದೇ ಒಂದು ಉದಾಹರಣೆ ಎಂದರೆ 'ಹೊಸಹಳ್ಳಿ'. ಈ ಪ್ರದೇಶ ಊರಾಚೆಗೆ ಇದ್ದ ಕಾಲ ಒಂದಿತ್ತು. ಕ್ರಮೇಣ ಬೆಳವಣಿಗೆ ಆಗುವುದರೊಂದಿಗೆ "ವಿಜಯನಗರ" ಎಂದು ಮರುನಾಮಕರಣಗೊಂಡು ಇಂದು ಬೆಂಗಳೂರಿನ ಒಂದು ಪ್ರತಿಷ್ಠಿತ ಪ್ರದೇಶಗಳಲ್ಲೊಂದು.

ಇಂಥಾ ಉದಾಹರಣೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. Mercara ಮಡಿಕೇರಿಯಾಯ್ತು. Calcutta ಕೋಲ್ಕತ್ತಾ ಆಯ್ತು. ಬಾಂಬೆ ಮುಂಬೈ ಆಯ್ತು, ಮದ್ರಾಸ್ Chennai ಆಯ್ತು, Bangalore ಬೆಂಗಳೂರು ಆಯ್ತು ಹೀಗೆ.

'ಅಂತ'ಕನ ದೂತರಿಗೆ ಕಿಂಚಿತ್ತೂ ದಯವಿಲ್ಲ, ನಮ್ಮದೂ ಅಂತ ಸ್ಟೇಷನ್ ಬಂದಾಗ ಇಳಿಯಲೇಬೇಕು 'ಅಂತ'ಕನ ದೂತರಿಗೆ ಕಿಂಚಿತ್ತೂ ದಯವಿಲ್ಲ, ನಮ್ಮದೂ ಅಂತ ಸ್ಟೇಷನ್ ಬಂದಾಗ ಇಳಿಯಲೇಬೇಕು

ಹೀಗೊಂದು ಪ್ರಸಂಗ... ನನ್ನದೊಂದು ಡೆಬಿಟ್ ಕಾರ್ಡ್ ಬ್ಯಾಂಕಿನಿಂದ ಬರೋದಿತ್ತು. ಯಾಕೋ ಬರಲಿಲ್ಲ. ನಮ್ಮಲ್ಲೇ ಬಂದು ತೆಗೆದುಕೊಳ್ಳಿ ಎಂದರು ಅಂತ HSR ಲೇಔಟ್'ಗೆ ಹೋಗಿದ್ದೆ. ಅಲ್ಲಿನ ಸಿಬ್ಬಂದಿಯೊಂದಿಗೆ ನಾ ಬಂದ ಕಾರಣ ಹೇಳಿದ ಮೇಲೆ ಆಕೆ ಕಂಪ್ಯೂಟರಿನಲ್ಲಿ ನೋಡಿ ಹೇಳಿದಳು "ನಿಮ್ಮ ಕಾರ್ಡ್ ನಮ್ಮ ಬಳಿ ಇಲ್ಲ. ಇಲ್ಲಿ BOM ಅಂತ ತೋರಿಸ್ತಿದೆ. ಬಾಂಬೆಯಲ್ಲಿ ಇದೆ" ಅನ್ನೋದೇ! ನನಗೆ ಮಾತೇ ಹೊರಡಲಿಲ್ಲ. ನಾನು ಕೇಳಿಯೇಬಿಟ್ಟೆ "ಬಾಂಬೆ ಹೆಸರು ಹೋಗಿ ಮುಂಬೈ ಅಂತಾಗಿ ಎಷ್ಟೋ ವರ್ಷಗಳು ಆಗಿದೆ. ಇನ್ನೂ ನಿಮ್ಮ ಸಿಸ್ಟಮ್'ನಲ್ಲಿ bombay ಅಂತಲೇ ಇದೆಯಾ?" ಆಕೆಗೆ ಏನೋ ಅನ್ನಿಸಿತು. ಅಲ್ಲಿನ ಒಬ್ಬ ಮ್ಯಾನೇಜರನ್ನು ಕರೆದು ನಾ ಬಂದ ಕಾರಣ ಹೇಳಿದಾಗ, ಆತ ಸಿಸ್ಟಮ್'ನಲ್ಲಿ (ಮತ್ತೆ) ಚೆಕ್ ಮಾಡಿ "ಓ! BOM ಅಂತ ಇದೆ. ಬೊಮ್ಮನಹಳ್ಳಿ ಬ್ರಾಂಚ್'ನಲ್ಲಿದೆ ನಿಮ್ಮ ಕಾರ್ಡ್" ಅಂದ. ಎಲ್ಲೀ ಬಾಂಬೆ, ಎಲ್ಲಿ ಬೊಮ್ಮನಹಳ್ಳಿ. ಹೆಸರು ಬದಲಾವಣೆಗಳಾಗುತ್ತವೆ, ಆದರೆ ಅದರ ಬಗ್ಗೆ ಕೊಂಚ ಜ್ಞಾನವೂ ಇರೋದು ಒಳ್ಳೇದು.

ಈ ಎಲ್ಲಾ ಪ್ರದೇಶಗಳ, ನಗರಗಳ, ರಾಜ್ಯಗಳ ಹೆಸರುಗಳು ಮರುನಾಮಕರಣಗೊಂಡವು ಆದರೆ copy ಆಗಲಿಲ್ಲ. ಬೆಂಗಳೂರನ್ನು Singapore ಮಾಡಿದರೆ ಅದು ಕಾಪಿ. ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಯಂತೆ ಮಾಡಿದರೆ ಅದು copy.

ಉಳುವ ಭೂಮಿಯನ್ನು ಕಾಪಾಡುವ ದೈವಕ್ಕೆ ವಂದನೆ, ಧನ್ಯವಾದಗಳು ಉಳುವ ಭೂಮಿಯನ್ನು ಕಾಪಾಡುವ ದೈವಕ್ಕೆ ವಂದನೆ, ಧನ್ಯವಾದಗಳು

ಈಗ ಸಿನಿಮಾದತ್ತ ಒಂದು ಕಿರುನೋಟ. ಹಲವಾರು ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾದ ಹೆಸರನ್ನು ಕನ್ನಡದಲ್ಲಿ "ನನ್ನ ಗಂಡನ ಹೆಂಡತಿ" ಅಂತ ಇಟ್ಟಿದ್ದರು. ಈ ಹೆಸರು ಕೇಳಿದ ಕೂಡಲೇ ಯಾವುದೋ ಹಾಸ್ಯ ಚಿತ್ರದ ಹೆಸರು ಅಂತಲೇ ಅನ್ನಿಸುತ್ತೆ. ಭೂಮಿಕೆಯಲ್ಲಿ ಇದ್ದುದು ಶ್ರೀನಾಥ್, ಸರಿತಾ, ಗೀತಾ ಮತ್ತು ಅಶ್ವಥ್. ಈಗಂತೂ ಹೇಳೋದೇ ಬೇಡ ಸಿನಿಮಾದ ಹೆಸರು. ಮರುನಾಮಕರಣಗೊಂಡಾಗ ಅದ್ಬುತ ಹೆಸರು ಅಂತ ಹೇಳಲೇಬೇಕು ಎನಿಸುವ "ಎರಡು ರೇಖೆಗಳು". ಅದೇ ಕಥೆ, ಅದೇ ನಟರು ಇತ್ಯಾದಿ ಇತ್ಯಾದಿ. ಒಂದು ಹೆಸರಿನಿಂದ ನಮ್ಮ ಅನಿಸಿಕೆ ಎಷ್ಟು ಬದಲಾಗುತ್ತದೆ ನೋಡಿ.

ಅದ್ಯಾವ ಪ್ರೇರಣೆಯೋ ಗೊತ್ತಿಲ್ಲ ಒಂದು ಚಿತ್ರದ ಹೆಸರು "ಮಾಸ್ತಿ" ಅಂತ ಇಟ್ಟಿದ್ದರು. "ಮಾಸ್ತಿ" ಹೆಸರಿಗೆ ಕನ್ನಡ ಸಾಹಿತ್ಯಲೋಕದಲ್ಲಿ ಒಂದು ಉನ್ನತ ಸ್ಥಾನವಿದೆ. ಒಂದಷ್ಟು ನಕಾರಗಳು ಎದ್ದಮೇಲೆ ದೀರ್ಘವನ್ನು ಹ್ರಸ್ವ ಮಾಡಿ "ಮಸ್ತಿ" ಅಂತ ಮರುನಾಮಕರಣವಾಯ್ತು. ಸಿನಿಮಾ ದುಡ್ಡು ಮಾಡಿತೋ ಇಲ್ಲವೋ ಗೊತ್ತಿಲ್ಲ ಆದರೆ ಗಲಾಟೆ ಅಂತೂ ಮಾಡಿಸಿತು.

ತಲೆಯ ಮೇಲೂ ಹೊರಲು ಯೋಗ್ಯತೆ ಪಡೆಯುವ 'ಪಾದರಕ್ಷೆ'! ತಲೆಯ ಮೇಲೂ ಹೊರಲು ಯೋಗ್ಯತೆ ಪಡೆಯುವ 'ಪಾದರಕ್ಷೆ'!

ಜಗತ್ತಿಗೆ ರಾಜಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಅಂಬರೀಶ್ ಮೊದಲಾದವರುಗಳ ಮನೆಗಳಲ್ಲಿ ಅವರದ್ದೇ ಮೂಲ ಹೆಸರಾದ ಮುತ್ತುರಾಜ್, ಕುಮಾರ, ನಾರಾಯಣಸ್ವಾಮಿ, ಅಮರನಾಥ ಎಂದೇ ಕರೆಯುತ್ತಿದ್ದಿರಬಹುದು. ವ್ಯಕ್ತಿ ಒಬ್ಬರೇ ಆದರೆ ಹೆಸರುಗಳು ಎರಡು ಆಗಿರೋದ್ರಿಂದ ಇದು ಒಂದರ್ಥದಲ್ಲಿ ಮರುನಾಮಕರಣ ಇನ್ನೊಂದರ್ಥದಲ್ಲಿ ಕಾಪಿ ಅಲ್ಲವೇ? ಒಬ್ಬನೇ ವ್ಯಕ್ತಿ ಬೇರೆ ಬೇರೆ ಹೆಸರಿನಲ್ಲಿ ಕಾಣಿಸಿಕೊಂಡಾಗ ಅವತಾರ ಎನ್ನಬಹುದೇ? ಇಲ್ಲ, ಒಬ್ಬ ವ್ಯಕ್ತಿಯು ಕಾಣಿಸಿಕೊಳ್ಳುವ ರೀತಿಯಲ್ಲಿ (appearance) ಭಿನ್ನವಿದ್ದು, ಗುಣದಲ್ಲೂ ಭಿನ್ನವಿದ್ದಾಗ ಅದು ಅವತಾರ. ಇದೆಲ್ಲಾ ಮನುಷ್ಯರ ವ್ಯವಹಾರವಲ್ಲಾ ಹಾಗಾಗಿ ದೈವಕ್ಕೆ ಬಿಟ್ಟು ಸುಮ್ಮನಾಗೋಣ.

ಯಾರೇ ಆದರೂ ಕಾನೂನುಬದ್ಧವಾಗಿ ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕಾದರೆ affidavit ಸಲ್ಲಿಸಬೇಕು. ಪೇಪರ್'ನಲ್ಲಿ ಹೆಸರನ್ನು ಬದಲಿಸಿಕೊಂಡಿದ್ದೇನೆ ಎಂದು ಪ್ರಚಾರ ನೀಡಬೇಕು. ಆ ನಂತರ ತಮ್ಮ ಬ್ಯಾಂಕ್ ಅಕೌಂಟ್, ಮನೆ ಪತ್ರಗಳು ಇತ್ಯಾದಿಗಳಿಗೆ ಹೆಸರು ಬದಲಾವಣೆಯ ಸಮ್ಮತಿ ಇರುವ copy ನೀಡಬೇಕು. ಹೀಗೆ ಹೆಸರು ಬದಲಿಸಿಕೊಳ್ಳುವುದಕ್ಕಿಂತ ಹೆಚ್ಚು ಪ್ರಚಲಿತ ಇರುವುದು ಎಂದರೆ ಮದುವೆಯಾದ ಮೇಲೆ ಹೆಸರು ಬದಲಿಸಿಕೊಳ್ಳುವುದು ಅಥವಾ ಮದುವೆಯಿಂದ ಹೊರಬಂದಾಗ ಹೆಸರು ಬದಲಿಸಿಕೊಳ್ಳುವುದು. ಇವೆಲ್ಲವನ್ನೂ ಸ್ಥೂಲವಾಗಿ ಹೇಳುವ ಇರಾದೆ ಈ ಲೇಖನಕ್ಕಿಲ್ಲ.

ಬಾಲ್ಯದ ವಿಶೇಷ ದೀಪಾವಳಿ, ಅಮೆರಿಕದಲ್ಲಿಲ್ಲ ಪಟಾಕಿಯ ಹಾವಳಿ! ಬಾಲ್ಯದ ವಿಶೇಷ ದೀಪಾವಳಿ, ಅಮೆರಿಕದಲ್ಲಿಲ್ಲ ಪಟಾಕಿಯ ಹಾವಳಿ!

ಅಮೇರಿಕದಲ್ಲಿ citizenship (ಪೌರತ್ವ) ಪಡೆಯುವ ಸಮಯದಲ್ಲಿ ಹೆಸರು ಬದಲಿಸಿಕೊಳ್ಳಬೇಕು ಎಂದರೆ ಹೆಚ್ಚು ತ್ರಾಸದಾಯಕವಿಲ್ಲದೆ ಮಾಡಿಕೊಳ್ಳಬಹುದು. ಹೇಗಿದ್ದರೂ ಪೌರತ್ವ ಸ್ವೀಕರಿಸಲು ಕೋರ್ಟ್'ಗೆ ಹೋಗಲೇಬೇಕು. ಪೌರತ್ವ ಪಡೆದ ಮೇಲೆ ಒಂದು ಬೇರೆ ಐಡೆಂಟಿಟಿ ಬರುವುದರಿಂದ ಹೆಸರನ್ನು ಬದಲಿಸಿಕೊಳ್ಳಬೇಕಾದರೆ ಮಾಡಿಕೊಳ್ಳಿ ಎಂಬ ಅವಕಾಶ ಇರುತ್ತದೆ.

ಈ ಮರುನಾಮಕರಣವನ್ನು ಲೆಕ್ಕದಲ್ಲೂ ಕಾಣಬಹುದು. ಒಂದು mixed fraction ತೆಗೆದುಕೊಳ್ಳಿ. ಉದಾಹರಣೆಗೆ 5 1/6 ಅಂದುಕೊಳ್ಳಿ. ಇದನ್ನು 31/6 ಎಂದು ಪರಿವರ್ತಿಸಿ improper fraction ಆಗಿ ಮರುನಾಮಕರಣ ಮಾಡಬಹುದು. ಇದೇ ರೀತಿ 100/3 ಎಂಬ improer fraction ಅನ್ನು 33 1/3 ಎಂದು ಪರಿವರ್ತಿಸಿದಾಗ ಅದು mixed fraction ಆಗುತ್ತೆ. ಅರ್ಥಾತ್ ಮರುನಾಮಕರಣವಾಗುತ್ತದೆ.

ಒಂದು ಪ್ರಾಂತ್ಯದ ಹೆಸರಿನ ಮರುನಾಮಕರಣ ಹಿಂದೆ 'ಸಾಮಾನ್ಯವಾಗಿ' ರಾಜಕೀಯದ ವಿಷಯ ಇರುತ್ತೆ ಎಂದೇ ಇತಿಹಾಸ ಹೇಳುತ್ತೆ. ಯಾವುದೋ ಪ್ರಾಂತ್ಯ ಒಂದು ಹೆಸರಿನಲ್ಲಿ ಪ್ರಚಲಿತವಾಗಿರುತ್ತದೆ. ಅಲ್ಲಿಗೆ ಒಬ್ಬ ಹೊಸ ರಾಜ ಪಟ್ಟಕ್ಕೆ ಬರುತ್ತಾನೆ. ತನ್ನ ಆಳ್ವಿಕೆಯಲ್ಲಿ ತನಗೆ ಬೇಕಾದ್ದು ಮಾಡಿಕೊಳ್ಳೋದು ಅಂದಿನಿಂದ ಇಂದಿನವರೆಗೂ ಬಂದಿರುವ ವಾಡಿಕೆ. ತನ್ನ ಹೆಸರು ಅಜರಾಮರವಾಗಿರಬೇಕು ಎಂಬ ಆಶಯದಿಂದ ಆ ಪಟ್ಟಣದ ಹೆಸರನ್ನು ತನ್ನ ಹೆಸರಿನಿಂದ ಕರೆಯಬೇಕು ಎಂದ ತಾಕೀತು ಮಾಡುತ್ತಾನೆ. ಸ್ಟಾಲಿನ್ ಇದ್ದ ಕಾಲಕ್ಕೆ ಹೀಗಾಗುತ್ತಿದ್ದುದು ಸಾಮಾನ್ಯವಂತೆ. ಆ ವ್ಯಕ್ತಿ ಆಳಿದ ಮೇಲೆ ಹಲವಾರು ಸಂದರ್ಭದಲ್ಲಿ ಅದೇ ಹೆಸರು ಮುಂದುವರೆದರೂ ಕೆಲವೊಮ್ಮೆ ಬದಲಾಗೋದು ಉಂಟು. ಇದಕ್ಕೆ 'de-Stalinization' ಎಂಬ ಹೆಸರೂ ಇತ್ತು.

ಪ್ರತೀ ಮರುನಾಮಕರಣದ ಹಿಂದೆ ಸಮಾಧಾನಗಳು, ಅಸಮಾಧಾನಗಳು, ಸಂತೃಪ್ತಿ, ಅಸಂತೃಪ್ತಿ ಹೀಗೆ ನಾನಾ ಭಾವನೆಗಳು ಅಡಕವಾಗಿರುತ್ತದೆ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂಥದ್ದು ಆಗಿರಬಹುದು. ಸಮಾಜಕ್ಕೆ ಅಹಿತ ಎನಿಸಿದರೆ ಪ್ರತಿಭಟನೆ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಪ್ರತಿಭಟನೆ ಎಂದ ಮಾತ್ರಕ್ಕೆ ಅದು ಹಿಂಸಾತ್ಮಕ, ಧ್ವಂಸಾತ್ಮಕ ಆಗಿರಬೇಕೆಂದೇನಿಲ್ಲ.

ನಾಮಕರಣವಾಗಲಿ, ಮರುನಾಮಕರಣವಾಗಲಿ ಅಂದೂ ಇತ್ತು, ಇಂದಿಗೆ ಇದೆ, ಮುಂದೆಯೂ ಇರುತ್ತದೆ. ಬದಲಾವಣೆ ಜಗದ ನಿಯಮ. ನಿಮ್ಮ ಊರು, ಕೇರಿ, ಮನೆಗಳಲ್ಲಿನ ಮರುನಾಮಕರಣದ ಕಥೆಗಳಿದ್ದರೆ ಹೇಳ್ರಿ!

English summary
Renaming the city has become political game in India. Renaming localities, renaming wife after marriage, renaming for luck are quite common too. An essay on this topic by Srinath Bhalle, Richmond, USA. Share your stories too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X