• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಶ್ನೆಗಳನ್ನು ಯಾವಾಗ ಕೇಳಬೇಕು ಯಾವಾಗ ಕೇಳಬಾರದು?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಪ್ರಶ್ನೆಗಳನ್ನು ಯಾವಾಗ ಕೇಳಬೇಕು ಅನ್ನುವುದರ ಜೊತೆಗೆ ಯಾವಾಗ ಕೇಳಬಾರದು ಅನ್ನೋದೂ ಮುಖ್ಯ...

ಪ್ರಶ್ನೆಗಳನ್ನು ಕೇಳೋದು ಮುಖ್ಯ. ಅದರಲ್ಲೂ ಕಿರಿಯರಿಗೆ ಇದು ಅತೀ ಮುಖ್ಯ. ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳುವ ಗುಣ ಅತ್ಯವಶ್ಯಕ. ಮೊದಲಿಗೆ ಕಿರಿಯರು ಅಂತಂದು ಆಮೇಲೆ ವಿದ್ಯಾರ್ಥಿಗಳು ಅಂತಂದದ್ದೇಕೆ? ಕಿರಿಯರು ಅಂದ್ರೆ ಹಿರಿಯರಲ್ಲದವರು ಅಂತ ಸಿಂಪಲ್ ಆಗಿ ಹೇಳಿದರೆ ವಿದ್ಯಾರ್ಥಿಗಳು ಅನ್ನೋದು ಸಿಂಪಲ್ ಅಲ್ಲ. ಕಲಿಯುವವರೆಲ್ಲರೂ ವಿದ್ಯಾರ್ಥಿಗಳೇ ಅಲ್ಲವೇ? ಅರ್ಥಾತ್ ನಾವು ನೀವು ಎಲ್ಲರೂ... ಯಾವುದೋ ಒಂದು ಬರಹ ಓದಿದಾಗ ಖಂಡಿತ ಅಲ್ಲೊಂದು ಪ್ರಶ್ನೆ ಏಳಲೇಬೇಕು, ಪ್ರಶ್ನೆ ಎದ್ದಾಗ ಕೇಳಲೇಬೇಕು ಅನ್ನೋದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರಶ್ನೆ ಕೇಳುವಿಕೆಯೂ ಒಂದು ಕಲೆ, ನೆನಪಿರಲಿ.

ವಿದ್ಯಾರ್ಥಿಗಳ ಲೋಕದಲ್ಲಿ ಅರ್ಥಾತ್ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರು ಪಾಠ ಮಾಡುವಾಗ ಪ್ರಶ್ನೆಗಳು ಏಳಬಹುದು. ಶಾಲೆಯೇ ಆದರೆ ಪ್ರಶ್ನೆ ಕೇಳಲು ಭಯ. ಕೆಲವು ಉಪನ್ಯಾಸಕರು ಪ್ರಶ್ನೆ ಕೇಳಿಸಿಕೊಳ್ಳಲು ಇಷ್ಟಪಡೋದಿಲ್ಲ. ಮತ್ತೆ ಕೆಲವರು ಬಹಳ ಶಿಸ್ತಿನ ಸಿಪಾಯಿಗಳು ಆಗಿದ್ದು, ವಿದ್ಯಾರ್ಥಿಗಳೇ ಪ್ರಶ್ನೆ ಕೇಳಲು ಹೆದರಿ ಹಿಂಜರಿಯಬಹುದು. ಪ್ರಶ್ನೆಗಳನ್ನು ಕೇಳಲು ಉತ್ತೇಜಿಸುವ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳೂ ವಿಶೇಷ ಆಸಕ್ತಿ ವಹಿಸಿ ಕಲಿಯುತ್ತಾರೆ. ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಇದ್ದಾಗ, ಏನೋ ಒಂದು ಉತ್ತರ ಹೇಳುವ ಬದಲು ನಾಳೆ ತಿಳಿಸುತ್ತೇನೆ ಎಂದು ಹೇಳಿ ಅಧ್ಯಯನ ಮಾಡಿ ಉತ್ತರ ಹೇಳೋದು ಕ್ಷೇಮ.

'ತುಂಬ'ದ ಬಗ್ಗೆ ಸ್ವಲ್ಪ ಮಾತಾಡೋಣ

ಕಾಲೇಜಿನ ವಿಷಯವನ್ನೇ ತೆಗೆದುಕೊಂಡರೆ ಅದೊಂದು ಬೇರೆಯೇ ಲೋಕ. ಕ್ಲಾಸಿನಲ್ಲಿ ಪ್ರಶ್ನೆ ಕೇಳಲು ಭಯಕ್ಕಿಂತ ಹಿಂಜರಿಕೆ. ಇತರೆ ವಿದ್ಯಾರ್ಥಿಗಳು ಕಾಲೆಳೆಯಬಹುದು, ರೇಗಿಸಬಹುದು, ಅಡ್ಡ ಹೆಸರಿಡಬಹುದು ಎಂಬೆಲ್ಲಾ ವಿಭಿನ್ನ ಭೀತಿ ಮನಸ್ಸನ್ನು ಜಾಗೃತಗೊಳಿಸಿ ಸುಮ್ಮನಿರುವಂತೆ ಮಾಡುತ್ತದೆ. ಪ್ರಶ್ನೆಗಳು ಇದ್ದವರು ಕ್ಲಾಸಿನ ಹೊರಗೆ ಆಯಾ lecturers ಅನ್ನು ಭೇಟಿ ಮಾಡಿ ಬಗೆಹರಿಸಿಕೊಳ್ಳುವ ಯತ್ನ ಮಾಡುತ್ತಾರೆ. ಕೆಲವೊಮ್ಮೆ ಅದೂ ಸಾಧ್ಯವಾಗಲಾರದು. "ಕ್ಲಾಸಿನಲ್ಲಿ ಕತ್ತೆ ಕಾಯ್ತಾ ಇದ್ರಾ?" ಅಂತ ಅವರೇನಾದಾರೂ ಹೆಣ್ಣು ಮಕ್ಕಳ ಮುಂದೆ ಅಂದುಬಿಟ್ಟರೆ ಮರ್ಯಾದೆ ಪ್ರಶ್ನೆ ನೋಡಿ... ಇಷ್ಟೆಲ್ಲಾ ಸಾಮಾಜಿಕ ಭೀತಿಗಳಿಂದಾಗಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತದೆ ಮತ್ತು ಅಲ್ಲೇ ಸಾಯುತ್ತವೆ.

ಹಿರಿಯರೇ ಆಗಲಿ ಕಿರಿಯರೇ ಆಗಲಿ, ಇಂದಿನ ದಿನಗಳಲ್ಲಿ ಒಂದು ಅಭ್ಯಾಸವನ್ನಂತೂ ಮಾಡಿಕೊಳ್ಳಬಹುದು. ಯಾವುದೇ ಮೂಲದಿಂದ ಪ್ರಶ್ನೆಗಳು ಎದ್ದಾಗ, ಸುಮ್ಮನಾಗದೆ ಅಂತರ್ಜಾಲದಲ್ಲಿ ಹೆಕ್ಕಿ ತೆಗೆಯಬಹುದು. ಸಾಮಾಜಿಕ ತಾಣದ forum ಗಳಲ್ಲಿ ಉತ್ತರ ಪಡೆಯಬಹುದು. ಆಯಾ ಸಂಬಂಧಿ ಗುಂಪುಗಳಲ್ಲಿ ಪ್ರಶ್ನೆಗಳನ್ನು ಕೇಳಬಹುದು ಕೂಡ. ಮಾಹಿತಿ ಸಿಕ್ಕರೂ ಪರಾಂಬರಿಸಿ ಅರ್ಥೈಸಿಕೊಳ್ಳಬೇಕಾದ್ದು ಅವರವರ ಜವಾಬ್ದಾರಿ.

ಒಟ್ಟಾರೆ ಹೇಳೋದಾದ್ರೆ ಪ್ರಶ್ನೆಗಳು ನಮ್ಮಲ್ಲಿ ಪ್ರಶ್ನೆಗಳಾಗಿಯೇ ಉಳಿಯದಿರಲಿ.

ಎಲ್ಲಾ Junk ದೂರವಿರಿಸಿ ಸ್ವಸ್ಥ ಬದುಕನ್ನು ಬಾಳೋಣ

ಪ್ರಶ್ನೆಗಳು ಹುಟ್ಟಿದಾಗ ಉತ್ತರ ಕಂಡುಕೊಳ್ಳುವುದು ಒಳ್ಳೆಯದು ಸರಿ. ತಮಗೆ ತಿಳಿದ ಉತ್ತರವನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳೋದು ಉತ್ತಮ. ಆದರೆ ಇಲ್ಲೊಂದು ಸಮಸ್ಯೆ ಇದೆ. ನಮಗೆ ಗೊತ್ತಿದೆ ಅಂತ ಮತ್ತೊಬ್ಬರಲ್ಲಿ ಹೇಳಿದಾಗ "ಓಹೋ! ತಮಗೆ ಗೊತ್ತಿದೆ ಅಂತ ತೋರಿಸಿಕೊಳ್ತಿದ್ದಾರೆ !", "ನಾವೇನಾದ್ರೂ ಕೇಳಿದ್ವಾ?" ಅಂತೆಲ್ಲಾ ಬೆನ್ನ ಹಿಂದೆ ಆಡಿಕೊಳ್ಳುವ ಮಂದಿ ಇರ್ತಾರೆ. ಹಾಗಿದ್ರೆ ಹಂಚಿಕೊಳ್ಳಬೇಕೇ? ಬೇಡವೇ? ಮಾಡಬೇಕಿರೋದೇನು?

ಹಂಚಿಕೊಳ್ಳಬೇಕು ಎಂಬ ಇರಾದೆ ಇದ್ದರೆ ಇದನ್ನು ಒಂದು ಚಟುವಟಿಕೆಯಂತೆ ಮಾಡಿಕೊಳ್ಳಬಹುದು. ಸುಲಭದಲ್ಲಿ ಅರ್ಥವಾಗುವಂತೆ ಪ್ರಶ್ನೆಗಳನ್ನು ಹಾಕಿ, ಅವರು ಉತ್ತರ ಕಂಡುಕೊಳ್ಳುವಂತೆ ಪ್ರೇರೇಪಿಸಿ ಆನಂತರ ಉತ್ತರವನ್ನು ಕೊಡೋದು ಕ್ಷೇಮ. ಹೀಗೇಕೆ ಅಂದರೆ ಉತ್ತರಗಳನ್ನು ಕಂಡುಹಿಡಿದುಕೊಳ್ಳಲು ಮತ್ತೊಬ್ಬರಿಗೆ ಅವಕಾಶ ನೀಡೋದು, ಅವರಿಗೀಗಾಗಲೇ ಉತ್ತರ ಗೊತ್ತಿದ್ದಲ್ಲಿ ಹಂಚಿಕೊಳ್ಳುವಂತೆ ಉತ್ತೇಜಿಸೋದು ಮತ್ತು ಅದರಿಂದ ನಾವೂ ಕಲಿಯೋದು. ಉತ್ತರ ಗೊತ್ತಿಲ್ಲದವರಿಗೆ ತಿಳಿಸೋದು. ಎಷ್ಟೆಲ್ಲಾ ಅತ್ಯುತ್ತಮ ವಿಚಾರಗಳು ಅಡಗಿವೆ ಅಲ್ಲವೇ?

ಚಿಂತೆ ಬೇಡ ಚಿಂತನೆ ಇರಲಿ ಅನ್ನೋ ಮಾತು ಬುರುಡೆ ಅಲ್ಲ

ಕಲಿಯೋಣ, ಕಲಿಸೋಣ ಅನ್ನೋದು ಮೂಲ ಮಂತ್ರವಾಗಿರಲಿ.

ಪ್ರಶ್ನೆಗಳು ಕೇವಲ ಅಲ್ಲಿ ಇಲ್ಲಿ ಅಂತಲ್ಲ. ಎಷ್ಟೋ ಸಾರಿ ಉತ್ತರಗಳೇ ಸಿಗದ ಪ್ರಶ್ನೆಗಳೂ ಇರುತ್ತವೆ. ಕಚೇರಿಗಳಲ್ಲಿನ ಮೀಟಿಂಗ್ ರೂಮ್ ಎಂದರೆ ಪ್ರಶ್ನೆಗಳ ಅಖಾಡ ಎಂದೇ ತಿಳಿಯಿರಿ. ನಮ್ಮಲ್ಲಿ brainstorm session ಅಂತ ಒಂದಿದೆ. ಅಲ್ಲಿ ಬಂದಾಗ ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚಾಗಿ ಇರುತ್ತದೆ. ಅದರ ಉದ್ದೇಶವೇ ಪ್ರಶ್ನೆಗಳನ್ನು ತನ್ನಿ, ಎಲ್ಲರ ಕೂಡಿ ತಲೆಕೆಡಿಸಿಕೊಂಡು ಉತ್ತರ ಕಂಡುಕೊಳ್ಳೋಣ ಅಂತ. ಇಲ್ಲೂ ಅಷ್ಟೇ. ಪ್ರಶ್ನೆಗಳನ್ನು ಕೇಳೋದಕ್ಕೆ ಒಂದು ರೀತಿ ನೀತಿ ಪಾಲಿಸಬೇಕು. ಅದು ಬುದ್ಧಿ ಪ್ರದರ್ಶನದ ಅಖಾಡ ಎಂದುಕೊಳ್ಳಬಾರದು. ಜೊತೆಗೆ ಪ್ರಶ್ನೆ ಕೇಳಬೇಕು ಅಂತ ಕೇಳಬಾರದು. ಒಂದು ಸತ್ಯ ಎಂದರೆ 'ಯಾವ ಪ್ರಶ್ನೆಯೂ ಮೂರ್ಖತ್ವದಿಂದ ಕೂಡಿರೋದಿಲ್ಲ'. There is no stupid question. ಉದ್ದೇಶಪೂರ್ವಕವಾಗಿ ಕೇಳಿದರೆ ಅದು ಬೇರೆ ವಿಷಯ.

ಇಂದಿನ ಯುಗದಲ್ಲಿ Customer service ಬಗ್ಗೆ ಗೊತ್ತಿಲ್ಲದೇ ಇರುವವರು ಯಾರು? ಅವರಿಗೆ ಕರೆ ಮಾಡಿ ಉಭಯಕುಶಲೋಪರಿ ಯಾರು ಕೇಳ್ತಾರೆ? ಅವರಿಗೆ ಕರೆ ಮಾಡೋದೇ ನಮ್ಮಲ್ಲಿ ಪ್ರಶ್ನೆಗಳು ಇದ್ದಾಗ ಅಲ್ಲವೇ? ನಮ್ಮ ಪ್ರಶ್ನೆಗಳಿಗೆ ಅವರು ಸುಮ್ಮನೆ ಉತ್ತರ ನೀಡೋದಿಲ್ಲ. ಕನಿಷ್ಠ ಎಂದರೂ ಐಡೆಂಟಿಟಿ ಚೆಕ್ ಅಂತೂ ಮಾಡ್ತಾರೆ. ನಾವು ಪ್ರಶ್ನೆ ಕೇಳಿದಾಗ ಅವರು ಮರುಪ್ರಶ್ನೆ ಕೇಳಿ ನಮ್ಮಿಂದ ಉತ್ತರ ತೆಗೆದುಕೊಳ್ಳುತ್ತಾರೆ. ಇಂಥ ಪ್ರಶ್ನೋತ್ತರಗಳಿಂದಲೇ ಸಮಸ್ಯೆ ಬಗೆ ಹರಿಯುತ್ತದೆ.

ಸಂಸಾರಗಳಲ್ಲೂ ಅಷ್ಟೇ, ಪ್ರಶ್ನೆಗಳು ಎದ್ದಾಗ ಮಾತುಕತೆಗಳು ನಡೆಯಬೇಕು, ಪ್ರಶ್ನೋತ್ತರಗಳನ್ನು ನಡೆಸಬೇಕು. ಊಹಾಪೋಹಗಳನ್ನು ಕಡಿಮೆಗೊಳಿಸಬೇಕು. ಆಗ ಸಮಸ್ಯೆಗಳು ತಾನಾಗೇ ಬಗೆಹರಿಯುತ್ತದೆ. ಯಾವಾಗ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತದೋ ಆಗ ಪ್ರಶ್ನೆಗಳು ಅನುಮಾನಗಳಾಗಿ ನಂತರ ಮನಸ್ತಾಪಗಳಲ್ಲಿ ಕೊನೆಗೊಳ್ಳುತ್ತದೆ.

ಒಂದು ಸಮಸ್ಯೆಯ ಮೂಲ ಹುಡುಕಬೇಕು ಎಂದರೆ ಪ್ರಶ್ನೆ ಕೇಳಬೇಕು ಅನ್ನೋದಕ್ಕೆ 5 whys technique ಬಳಸಬಹುದು. ಅಂತಾರೆ. ಮೊದಲಿಗೆ why ಅಂತ ಕೇಳಬೇಕು. ಆ ನಂತರ ಬಂದ ಉತ್ತರಕ್ಕೆ ಮತ್ತೊಂದು why ಹೀಗೆ ಐದು ಬಾರಿಯಾದಾಗ ಎಷ್ಟೋ ಸಮಸ್ಯೆಗಳು ಬಗೆಹರಿದಿರುತ್ತವೆ ಅಥವಾ ಸಮಸ್ಯೆಯ ಸ್ಪಷ್ಟತೆಯ ಅರಿವಾಗುತ್ತದೆ. ಸ್ಪಷ್ಟತೆ ಸಿಕ್ಕರೆ ಪರಿಹಾರ ಕಂಡು ಹಿಡಿಯುವುದು ಕಷ್ಟಕರವಲ್ಲ.

ಪ್ರಶ್ನೆಗಳನ್ನು ಕೇಳೋ ಮನಸ್ಸಿಗೆ ಉತ್ತರ ಅರಿಯುವ ಇಚ್ಛೆ ಮತ್ತು ಶಕ್ತಿ ಇರಬೇಕು. ಯಾವಾಗ ಕೇಳಬೇಕು ಅಂತ ಎಲ್ಲರಿಗೂ ಗೊತ್ತಿದ್ದರೂ ಯಾವಾಗ ಕೇಳಬಾರದು ಅನ್ನೋದರ ಅರಿವು ಇರಬೇಕಾದ್ದು ವಿವೇಕ.

ತುರಿಕೆಯಾದಾಗ ತುರಿಸಿಕೊಳ್ಳಬೇಕು ಅಷ್ಟೇ. ಅದು ವಿವೇಕ. ತುರಿಕೆ ಏಕೆ ಉಂಟಾಯ್ತು ಅಂತ ಗೂಗಲ್ ನೋಡುವುದೋ, ಚರ್ಚೆ ಮಾಡುವುದೋ ಮಾಡಿದರೆ ಅದು ಅವಿವೇಕ. ಅದರಂತೆಯೇ ಪರೀಕ್ಷೆ ಹಾಲ್ ನಲ್ಲಿ ನಮ್ಮ ಕೆಲಸ ಏನಿದ್ದರೂ ಕೊಟ್ಟ ಪ್ರಶ್ನೆಗಳಿಗೆ ಉತ್ತರ ನೀಡೋದು. ಅಲ್ಲಿ ಕೂತು ಪ್ರಶ್ನೆ ಕೇಳಬಾರದು.

ವಾಜಶ್ರವಸ್ ಎಂಬ ಮುನಿ ತನ್ನಲ್ಲಿರುವುದನ್ನೆಲ್ಲಾ ದಾನ ಮಾಡುವುದರ ಮೂಲಕ ದೇವತೆಗಳನ್ನು ಪ್ರೀತಗೊಳಿಸುವ 'ಸರ್ವದಾನ'ದ ಯತ್ನದಲ್ಲಿದ್ದ. ಆ ಸಮಯದಲ್ಲಿ 'ನಾನೂ ನಿನಗೆ ಸೇರಿದವನು ಹಾಗಿದ್ರೆ ನನ್ನನ್ನು ಯಾರಿಗೆ ದಾನ ಮಾಡುವೆ?' ಎಂದು ಪ್ರಶ್ನೆ ಮಾಡುತ್ತಾನೆ ನಚಿಕೇತ. ಒಮ್ಮೆ ಕೇಳಿದಾಗ ಉತ್ತರ ಬಾರದೇ ಹೋದಾಗ ಪದೇ ಪದೇ ಅದೇ ಪ್ರಶ್ನೆ ಕೇಳಿ ಪೀಡಿಸುತ್ತಾನೆ. ಆ ಸಮಯದಲ್ಲಿ ಮುನಿಗೆ ಅವನ ಪ್ರಶ್ನೆ ಅವಿವೇಕದಿಂದ ಕೂಡಿದ್ದು ಎಂದು ಮುನಿದು 'ಯಮನಿಗೆ ದಾನ ಮಾಡಿದ್ದೀನಿ' ಎಂದು ನುಡಿಯುತ್ತಾನೆ. ನಿಜಕ್ಕೂ ಅವಿವೇಕ ಯಾರದ್ದು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ.

ಬಾಯಾರಿದ ಪಾಂಡವರು ನೀರನ್ನು ಅರಸಿ ಸಾಗುತ್ತಾರೆ. ಆನಂತರ ನೀರು ಎಲ್ಲಿದೆ ಅಂತಲೂ ತಿಳಿಯುತ್ತದೆ. ನೀರು ತರಲು ಹೊರಟವರಿಗೆ ಆ ನೀರಿನಲ್ಲಿದ್ದ 'ಯಕ್ಷ' ಪ್ರಶ್ನೆ ಕೇಳುತ್ತಾನೆ. ಆದರೆ ಆ ಸಮಯ ಮರುಪ್ರಶ್ನೆ ಕೇಳುವುದೋ ಅಥವಾ ತಮ್ಮ ಪರಾಕ್ರಮ ತೋರಿಸಿಕೊಳ್ಳುವುದೂ ಆಗಿರಲಿಲ್ಲ, ಅವಿವೇಕತನ ತೋರಿ ನಾಲ್ವರು ಪಾಂಡವರು ಅಸುನೀಗಿದರು. ವಿವೇಕಿ ಧರ್ಮರಾಯ ಪ್ರಶ್ನೆಗಳಿಗೆ ಉತ್ತರ ನೀಡಿ ಎಲ್ಲರನ್ನೂ ಬದುಕಿಸಿದ.

ಪ್ರಶ್ನೆ ಕೇಳಬಾರದ ಮತ್ತೊಂದು ಸ್ಥಳ ಎಂದರೆ ರಣಭೂಮಿ. ಅದು ಮಾಡು ಇಲ್ಲವೇ ಮಡಿ ಅಷ್ಟೇ. ಹಾಗೆಯೇ ಮತ್ತೊಂದು ಸ್ಥಳ ಎಂದರೆ ಮರುಭೂಮಿ. ನೀವು ಕೇಳಿದರೂ ಉತ್ತರ ನೀಡಲು ಯಾರೂ ಇರುವುದಿಲ್ಲ. ಕೆಲವೊಮ್ಮೆ ಸಿಗಬಹುದು, ಆದರೆ ಖಂಡಿತವಾಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಾರದ ಮತ್ತೊಂದು ಭೂಮಿ ಎಂದರೆ ರುದ್ರಭೂಮಿ. ಅಲ್ಲಿಗೆ ಪ್ರಶ್ನೆಗಳೆಲ್ಲಾ ಹೂತು ಹೋಗಿರುತ್ತದೆ ಅಥವಾ ಸುಟ್ಟೇ ಹೋಗಿರುತ್ತದೆ.

ಸಾಧ್ಯವಾದರೆ ಪ್ರಶ್ನೆಗಳಿಗೆ ಉತ್ತರ ನೀಡುವ ಬದುಕು ಬಾಳೋಣ. ಮತ್ತೊಬ್ಬರಿಗೆ ಪ್ರಶ್ನೆಯಾಗಿ ಜೀವಿಸುವುದು ಬೇಡ. ಏನಂತೀರಿ?

English summary
Questioning is an art. But It is also important to note when and at what situation the question should be asked
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X