• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮಯದ ಬಗ್ಗೆ ಓದೋಕೆ ನಿಮ್ಮ ಬಳಿ ಸ್ವಲ್ಪ ಟೈಮ್ ಇದೆಯಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇಂದು ಬೆಳಿಗ್ಗೆ ಒಂದು ಪುಟ್ಟ ಘಟನೆ ನಡೆಯಿತು... ಈ ವಾರದ ಬರಹಕ್ಕೆ ನಾಂದಿಯಾಯಿತು ಅನ್ನಿ. ನಮ್ಮಲ್ಲಿ ದೊರೆಯುವ ಹಾಲಿನ ಡಬ್ಬಕ್ಕೆ expiry ಡೇಟ್ ಅಂತ ಇರೋದು ನಿಮಗೂ ಗೊತ್ತು. ಬೆಳ್ ಬೆಳಿಗ್ಗೆ ಒಂದೆರಡು ಗುಟುಕು ಕಾಫಿ ಕುಡಿದಾಗ ಹಾಲು ಢಮಾರ್ ಅಂತ ಅರಿವಾಯ್ತು. ಹಿಂದಿನ ದಿನ ಅದರ expiry ದಿನವಾಗಿತ್ತು. ನಾಲಿಗೆ ಕೆಟ್ಟುಹೋಯ್ತು. ತಂದಿಟ್ಟಿದ್ದ ಬೇರೆ ಹಾಲಿನಿಂದ ಹೊಸ ಕಪ್ ಕಾಫಿ ಮಾಡಿಕೊಳ್ಳಬೇಕೆಂಬ ಆಸಕ್ತಿಯೇ ಸತ್ತು ಹೋಯ್ತು. ಒಂದು ನಿರ್ದಿಷ್ಟ ದಿನದವರೆಗೆ ಮಾತ್ರ ಆ canನಲ್ಲಿರೋ ಹಾಲಿಗೆ ಜೀವ, ಮರುದಿನ ಬೆಳಿಗ್ಗೆ ಅದು ಉಪಯೋಗಿಸಲು ಸಾಧ್ಯವಿಲ್ಲ ಅನ್ನೋದು, ಅದು ಹೇಗೆ ಟೈಮಿಂಗ್ ಮಾಡಿ ಮಾರುಕಟ್ಟೆಗೆ ಬಿಡ್ತಾರೋ ಗೊತ್ತಿಲ್ಲ.

ನನ್ನಲ್ಲಿ ಒಂದು printer ಇತ್ತು. ಲ್ಯಾಪ್ ಟಾಪ್ ತೆಗೆದುಕೊಂಡಾಗ printer free ಅನ್ನೋ ಸೇಲ್ ಇದ್ದಾಗ ಕೊಂಡಿದ್ದು. ಒಂದು ವರ್ಷ ಗ್ಯಾರಂಟಿ ಕೊಟ್ಟಿದ್ದ. ಇಂಥ ದಿನ ಒಂದು ವರ್ಷ ಪೂರೈಸಿತು ಅಂತಂದ ಮರುದಿನವೇ ಗೊಟಕ್ ಅನ್ನಬೇಕೇ! ಟೈಮಿಂಗ್ ಅಂದ್ರೆ ಇದು...

ದೃಷ್ಟಿಕೋನ ಬದಲಿಸಿ ನೋಡುವ ಅವಶ್ಯಕತೆ ಇದೆ!

ಯಾರನ್ನೋ ಯಾವುದೋ ಕೆಲಸಕ್ಕೆ ಬಹಳ ನೆಚ್ಚಿಕೊಂಡಿರುತ್ತೇವೆ ಎಂದುಕೊಳ್ಳಿ. ಉದಾಹರಣೆಗೆ ಒಂದು ಮದುವೆ ಮನೆಯ ಸನ್ನಿವೇಶ. ಇಂಥವರಿಗೆ ಅಂತ ಒಂದು ಕೆಲಸ ಒಪ್ಪಿಸಿ ಆ ವಿಷಯ ತಲೆಯಿಂದ ತೆಗೆದುಹಾಕಿರುತ್ತೇವೆ, ಏಕೆಂದರೆ ಅವರಿಗೆ ವಹಿಸಿದ ಮೇಲೆ ಅವರು ಜವಾಬ್ದಾರಿ ತೆಗೆದುಕೊಂಡು ಮಾಡುತ್ತಾರೆ ಅಂತ. ಸಮಯಕ್ಕೆ ಸರಿಯಾಗಿ ಕೈ ಎತ್ತುತ್ತಾರೆ. ಅವರ ಬೆಲೆ ತಿಳಿಯಲಿ ಅಂತ ಮಾಡ್ತಾರೋ ಅಥವಾ ತಾನು ಮಾಡದೇ ಹೋದರೆ ಜಗತ್ತೇನು ಮುಳುಗಿ ಹೋದೀತೇ ಎಂಬ ಉಡಾಫೆಯೋ ಅಥವಾ ತಾನೇಕೆ ಮಾಡಬೇಕು, ಅವರ ಮನೆಯಲ್ಲೇ ಇದ್ದಾರಲ್ಲ ಮಂದಿ ಅವರೇ ಮಾಡಲಿ ಎಂಬ ಧೋರಣೆಯೋ ಒಂದೂ ಗೊತ್ತಾಗೊಲ್ಲ. ಮತ್ತೇನೋ ಕೆಲಸ ಬಂತು ಹಾಗಾಗಿ ನಾನು ಈ ಕೆಲಸ ಮಾಡಲಾರೆ ಎಂಬ ಸಬೂಬು ನೀಡಿದಾಗ, ಕೆಲಸ ವಹಿಸಿದವರ ಬಿಪಿ ಏರಿರುತ್ತದೆ. ಕೈಕೊಡುವವರಿಗೆ ಸಮಯಾಸಮಯವಿರುತ್ತದೆಯೇ?

ಚಿಕ್ಕ ಪುಟ್ಟ ಕಾರ್ಯಕ್ರಮಗಳಲ್ಲೂ ಅಷ್ಟೇ, ಎಷ್ಟೋ ಸಾರಿ ತಾವು ಸಹಾಯವೂ ಮಾಡುತ್ತೇವೆ ಎಂದು ಮುಂದೆ ಬಂದು, ಆ ದಿನವೂ ಕಾಣಿಸಿಕೊಂಡು ನಂತರ ಮಂಗಮಾಯವಾಗೋದು ಅಥವಾ ತೋರಿಕೆಗೆ ಜೋಲುಮೋರೆ ಹಾಕಿಕೊಂಡು s"orry" ಅನ್ನೋದು ಸರ್ವೇಸಾಮಾನ್ಯ.

'ಕಾಲವನ್ನು ತಡೆಯೋರು ಯಾರೂ ಇಲ್ಲ" ಎಂಬಂತೆ ಆಂಗ್ಲದಲ್ಲಿ ಒಂದು ಮಾತಿದೆ "time and tide wait for none" ಅಂತ. ತಾನಿನ್ನೂ ಸಿದ್ಧವಿಲ್ಲ ಅಂತ ಸಮಯವನ್ನು ತಡೆ ಹಿಡಿಯೋಕೆ ಆಗುತ್ತದೆಯೇ? ದೊಡ್ಡ ಅಲೆ ಬರ್ತಿದೆ, ಆದರೆ ನನ್ನ ಕ್ಯಾಮೆರಾ ಸಿದ್ಧವಿಲ್ಲ ಅಂತ ಅಲೆಯನ್ನು ಅಲ್ಲೇ ತಡೆ ಹಿಡಿಯಲು ಸಾಧ್ಯವೇ? ಹೀಗೆಯೇ ಜೀವನದಲ್ಲಿ ಎಷ್ಟೋ ಘಟನೆಗಳು ನಮಗೆ ಆಲೋಚಿಸಲೂ ಸಮಯ ನೀಡದಂತೆ, ನಮ್ಮ ಕೈಮೀರಿ ಸಾಗಿಯೇಬಿಡುತ್ತವೆ.

ಸತ್ಯಾಗ್ರಹದ ನಿಜವಾದ ಅರ್ಥ ಏನೆಂದು ನಿಮಗೆ ಗೊತ್ತಾ?

ಹೀಗೆ ಕೈಕೊಡೋದೇ ಸಮಯದ speciality ಅಂತಂದ್ರೆ ಅದು ತಪ್ಪು. ನಾವು ಸಮಯ ಪರಿಪಾಲನೆ ಮಾಡದೆ ಹೋದಾಗ ಮತ್ತು ಮುಂದೊಮ್ಮೆ ಬರುವ ಆ ಸಮಯಕ್ಕೆ ತಕ್ಕ ಸಿದ್ಧತೆ ನಡೆಸಿಕೊಳ್ಳದೇ ಹೋದಾಗ ಸಮಯದ್ದೇ ತಪ್ಪು ಅಂತ ಸಮಯದ ಮೇಲೆ ಗೂಬೆ ಕೂರಿಸ್ತೀವಿ. ನಾವು ಸಮಯದ ಮೇಲೆ ಗೂಬೆಯನ್ನೇ ಕೂರಿಸಲಿ, ಕತ್ತೆಯನ್ನೇ ಕೂರಿಸಲಿ ಅದು ತನ್ನ ಕೆಲಸವನ್ನು ತಾನು ಮಾಡಿಕೊಂಡು ಸಾಗುತ್ತದೆಯೇ ವಿನಃ ನಮ್ಮನ್ನು ಕ್ಯಾರೇ ಅನ್ನೋಲ್ಲ.

ಸಮಯ ಪರಿಪಾಲನೆ ಮಾಡದೇ ಇದ್ದಾಗ ಅದರಿಂದ ಸಾಕಷ್ಟು ಎಡವಟ್ಟುಗಳು ಆಗೋದು ಎಲ್ಲರಿಗೂ ಗೊತ್ತಿದೆ. ಬಸ್, ಟ್ರೇನು, ಫ್ಲೈಟ್ ತಪ್ಪಿ ಹೋಗಬಹುದು. ಹೊರಡುವುದು ತಡವಾಗಿ peak hour ಟ್ರಾಫಿಕ್ ನಲ್ಲಿ ಸಿಕ್ಕಿಕೊಳ್ಳಬಹುದು. ಆಫೀಸಿನ ಮೀಟಿಂಗ್ ಗೆ ತಡವಾಗಬಹುದು, ಬಾಸ್ ಮುಖ ಕೆಂಪಾಗಬಹುದು, ಮನಸ್ಸಿಗೆ ಕಿರಿಕಿರಿಯಾಗಬಹುದು. "ಕಾಯಿಸುವ ಹುಡುಗಿಯರ ಯಾರೂ ಪ್ರೀತಿಸಬಾರದು" ಅಂತ ಹುಡುಗ ಹಾಡು ಹೇಳಬಹುದು. ಆದರೆ ಸಮಯಕ್ಕೆ ತಕ್ಕಂತೆ ಕೆಲಸ ಕಾರ್ಯಗಳು ನಡೆದರೆ ಎಲ್ಲೆಲ್ಲೂ ಒಂಥರಾ ಆನಂದವೇ ಇರುತ್ತದೆ "ಈ ಸಮಯ ಆನಂದಮಯ..." ಎಂದು ಹಾಡಬೇಕು ಎನಿಸುತ್ತದೆ. ನಮಗೆ ತಕ್ಕಂತೆ ಸಮಯ ಸಾಗೋಲ್ಲ, ಬದಲಿಗೆ ಅದಕ್ಕೆ ತಕ್ಕಂತೆ ನಾವು ಸಾಗಬೇಕು ಅಷ್ಟೇ.

ದಿನವೊಂದರಲ್ಲಿ ನಾವು ಏನೇನೆಲ್ಲಾ ಕಟ್ಟುತ್ತೇವೆ ಅಲ್ಲವಾ?

ಎಷ್ಟೋ ಸಾರಿ ನಮ್ಮ ಜೀವನದಲ್ಲಿ 'ಟೈಮಿಂಗ್' ಬಹಳ ಚೆನ್ನಾಗಿ ಕೆಲಸಕ್ಕೆ ಬಂದಿರುತ್ತದೆ. ಆದರೆ ಅದರಲ್ಲಿ ನಮ್ಮ ಪಾತ್ರವೇ ಇರೋದಿಲ್ಲ. ನಾವು ಆ ಸಮಯದ ಗ್ರಾಹಕರು ಅಷ್ಟೇ... ಕೂದಲೆಳೆಯ ಅಂತರದಲ್ಲಿ ಅನಾಹುತಗಳು ಆಗೋದು ತಪ್ಪುವುದರಲ್ಲಿ 'ಸಮಯ'ದ ಪಾತ್ರ ದೊಡ್ಡದು. ಏನೋ ವ್ಯತ್ಯಾಸವಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಎದುರಾದಾಗ, 'ಸಮಯಕ್ಕೆ ಸರಿಯಾಗಿ ಕರೆದುಕೊಂಡು ಬಂದಿರಿ, ಹಾಗಾಗಿ ಜೀವ ಉಳೀತು' ಅನ್ನೋದನ್ನ ಹಲವಾರು ಬಾರಿ ಎಲ್ಲೆಲ್ಲೋ ಕೇಳಿಯೇ ಇರ್ತೀವಿ. ಕಾಲದಲ್ಲಿ ಎಲ್ಲೂ ಏನೂ ವ್ಯತ್ಯಾಸವಿಲ್ಲ, ಆದರೆ ಆ ಸಮಯಕ್ಕೆ ಒಂದೊಳ್ಳೆಯ ಕೆಲಸವಾಗೋದು ಟೈಮಿಂಗ್ ಅಷ್ಟೇ.

ಕೆಲವರಿಗೆ ಗ್ರಹಗತಿಗಳು ಕೈಕೊಟ್ಟಾಗ ಅವರಾಡೋ ಮಾತು "time ಸರಿಯಿಲ್ಲ, ಏನು ಕೆಲಸಕ್ಕೆ ಕೈಹಚ್ಚಿದರೂ ಅದೇಕೋ ಎಡವಟ್ಟಾಗುತ್ತಿದೆ" ಅಂತ. ಕೆಲವೊಮ್ಮೆ ಖಿನ್ನರಾಗಿ ಪರಿಹಾರಕ್ಕಾಗಿ ಅಲೆಯುತ್ತಾರೆ. ಹಾಗಾದಾಗ ಕೆಲವೊಮ್ಮೆ ಪರಿಹಾರ ದೊರೆಯಬಹುದು ಆದರೆ ಹಲವು ಬಾರಿ 'ಸಮಯ'ಸಾಧಕರಿಂದ ಇವರುಗಳು ಬಲಿಯಾಗೋದೇ ಹೆಚ್ಚು.

'ಸಮಯ' ಪ್ರಜ್ಞೆ ಒಂದು ಅದ್ಬುತ ಕಲೆ. ಇದು ಒಬ್ಬರು ಹೇಳಿಕೊಟ್ಟು ಬರುವಂಥದ್ದಲ್ಲ. ಕೆಲವೊಮ್ಮೆ ಬಾಯಿಬಿಟ್ಟು ಹೇಳಲಾಗದಂಥ ಪರಿಸ್ಥಿತಿಗಳಲ್ಲಿ 'ಸಮಯ' ಸಂದರ್ಭ ನೋಡಿಕೊಂಡು ಅರಿತುಕೊಳ್ಳೋದು ಅಥವಾ ಮಾತನಾಡುವುದು ಅನಿವಾರ್ಯವಾಗುತ್ತದೆ. ಸಮಯಪ್ರಜ್ಞೆಯಿಂದ ಜಗಳಗಳು ಆರಂಭದಲ್ಲೇ ನಂದಿ ಹೋಗುತ್ತವೆ. ಸಮಯಪ್ರಜ್ಞೆಯಿಂದ ಮತ್ತೊಬ್ಬರಿಗೆ ಸೂಚ್ಯವಾಗಿ ಸಂದೇಶ ತಲುಪುವುದು ಅಧಿಕ. 'ಸಮಯಪ್ರಜ್ಞೆ'ಯ ಬಗ್ಗೆ ಪಂಚತಂತ್ರವೇ ಮೊದಲಾದ ಕಥಾನಕಗಳಲ್ಲಿ ಹಲವಾರು ಬಾರಿ ಕಂಡುಬರುತ್ತದೆ.

ಸಮಯ ಸರ್ವಾಂತರ್ಯಾಮಿ... ಎಲ್ಲೆಲ್ಲೂ, ಎಲ್ಲ ಕಾಲಕ್ಕೂ ನಾವಿದ್ದರೂ ಇಲ್ಲದಿದ್ದರೂ ಇರುವ ಪ್ರತ್ಯಕ್ಷ ದೈವ ಎಂದರೆ 'ಸಮಯ'. ಸಮಯದಲ್ಲಿ ಏರಿಳಿತಗಳಿಲ್ಲ, ಸಮಯ ಎಂಬ ಪದದಲ್ಲಿ ಒತ್ತುದೀರ್ಘಗಳಿಲ್ಲ... ಅರ್ಥಾತ್ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಎಂಬ ತಾರತಮ್ಯವೇ ಇಲ್ಲ ಈ 'ಸಮಯ'ಕ್ಕೆ.

ನೆನ್ನೆ ಮೊನ್ನೆ ಮಗುವಂತಿದ್ದ ಮಕ್ಕಳು ಬೆಳೆದು ದೊಡ್ಡವರಾಗಿ ಕಾಲೇಜಿನ ಮೆಟ್ಟಿಲು ಹತ್ತುವಂತಾದಾಗ ಸಾಮಾನ್ಯವಾಗಿ ಎಲ್ಲರೂ ಹೇಳೋ ಮಾತು "time flies". ಸಮಯಕ್ಕೆ ರೆಕ್ಕೆಪುಕ್ಕ ಇಲ್ಲ, ಕಾಲಕ್ಕೆ ಕಾಲಿಲ್ಲ. ಹದಿನಾರು ವರ್ಷದವರಾಗಲು ಮಕ್ಕಳು ತೆಗೆದುಕೊಂಡ ಸಮಯ ಸರಿಯಾಗಿ ಹದಿನಾರೇ ವರುಷಗಳು, ಅಲ್ಲೇನೂ ಚೌಕಾಸಿ ಆಗಿರೋದಿಲ್ಲ. ಆದರೆ ನಮ್ಮ ಅನಿಸಿಕೆ ಭಿನ್ನ ಅಷ್ಟೇ. ಕಾಲ ಕಾಲ ಕೆಳಗಿಂದ ಸರಿದು ಹೋಗಿದ್ದು ಅರಿವಿಗೆ ಬಾರದೆ 'time flies' ಅನ್ನೋದಷ್ಟೇ. ಮಕ್ಕಳೊಂದಿಗೆ ನಮಗೂ ಅಷ್ಟೇ ವರುಷಗಳು ನಮ್ಮ ಖಾತೆಗೆ ಜಮಾ ಆಗಿರುತ್ತವೆ ಎಂಬ ಅರಿವು ನಮಗೆ ಬಂದಿರುವುದಿಲ್ಲ.

ಕೆಲಸದಲ್ಲಿ ಒಮ್ಮೊಮ್ಮೆ ಹಾಗೆಯೇ ಆಗುತ್ತೆ. ಬೆಳಿಗ್ಗೆ ಆರಂಭಿಸಿದ ಕೆಲಸ ಒಂದಾದ ಮೇಲೊಂದರಂತೆ ಸಾಗಿ ಸಾಗಿ ಅದ್ಯಾವ ಮಾಯದಲ್ಲೋ ಸಂಜೆ ಐದು ಗಂಟೆಯಾಗಿರುತ್ತದೆ. ಆ ಎಂಟು ಅಥವಾ ಒಂಬತ್ತು ಗಂಟೆಗಳು ಅದೆಲ್ಲಿ ಓಡಿದವು ಅಂತಲೇ ಅರ್ಥವಾಗೋದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಸಮಯ ಕೈಕೊಡೋದೇ 'ಇನ್ನೈದು ನಿಮಿಷ' ಮಲಗೋಣ ಅನ್ನುವಾಗ. ಬೆಳಿಗ್ಗೆ ಐದಕ್ಕೆ ಎಚ್ಚರವಾಗಿ, ಐದು ನಿಮಿಷ ಮಲಗುವೆ ಎಂದುಕೊಂಡು ಕಣ್ಣು ಬಿಟ್ಟಾಗ ಆರು ಗಂಟೆಯಾಗಿರುತ್ತದೆ.

ಸಮಯವನ್ನು ಹಾಗೆಯೇ ಇರಿಸಿಕೊಳ್ಳೋದು ಅಥವಾ ಹಿಂದೆ ಮುಂದೆ ಮಾಡೋದು ಏನೇ ಇದ್ದರೂ ಆಯಾಕಾಲಕ್ಕೆ ಆಗಬೇಕಾದ ಕೆಲಸಗಳ ಟೈಮಿಂಗ್ ಸರಿಯಾಗಿದ್ದು ಅದನ್ನು ಅನುಭವಿಸಲು ನಮ್ಮ ಟೈಮ್ ಸರಿಯಾಗಿದ್ದರೆ ಸಾಕು.

ಸಮಯಾಸಮಯವಿಲ್ಲದೆ ಪೊರೆವ ಭಕ್ತವತ್ಸಲನ ಹಾಗೆಯೇ ಕಾಲದ ಹಂಗಿಲ್ಲದವ ಎಂದರೆ ಕಾಲಯಮ...

ಅಂದಿನ ಇಂದಿನ ಸಾಧಕರೆಲ್ಲರಿಗೂ ದಿನವೊಂದರಲ್ಲಿ ಇಪ್ಪತ್ತನಾಲ್ಕು ಗಂಟೆಗಳೇ ಇರೋದು...

ಹೆಂಡತಿ-ಮಕ್ಕಳೊಂದಿಗೆ ಸಮಯ ಕಳೆಯಲು ಟೈಮ್ ಇಲ್ಲ, ಜೀವನ ಅನುಭವಿಸಲು ಟೈಮ್ ಇಲ್ಲ ಎಂದೆಲ್ಲಾ ಸಬೂಬು ಹೇಳಿಕೊಂಡು ಬರೀ ಕೆಲಸ ಕೆಲಸ ಅಂತಲೇ ಒದ್ದಾಡುವ ಮಂದಿಯು ಶಸ್ತ್ರಾಸ್ತ್ರ ಕೆಳಗಿಟ್ಟು ವಿಶ್ರಮಿಸಿಕೊಳ್ಳುವ ಕಾಲಕ್ಕೆ ಟೈಮಿಂಗ್ ಸರಿಯಾಗಿ ಇರದಿದ್ದರೆ ಇಷ್ಟೆಲ್ಲಾ ದುಡಿದಿದ್ದು ಯಾಕೆ ಅಂತ ಆಲೋಚಿಸುವುದಕ್ಕೂ ಸಮಯ ಇರೋದಿಲ್ಲ. ಏನಂತೀರಿ?

English summary
There is a saying "time and tide wait for none". Here is a small article which will explain how time is precious and its applicability in life
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X