ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಒಂದೊಂದೂ ಬೆವರ ಹನಿ ಮುತ್ತಾಯ್ತದೋ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಕಳೆದ ವಾರ ಒಂದು ಹಾಡಿನ ಸಾಲನ್ನು ಬರೆದು, ಬೆಳೆಸಿದ್ದೆ... ಈಗ ಹಾಗೆಯೇ ಮತ್ತೊಂದು ಪ್ರಯತ್ನ, ಆದರೆ ಕೊಂಚ ಟ್ವಿಸ್ಟ್ ಇದೆ ಅನ್ನಿ. ಇಂದು ಯಾವ ಹಾಡಿನ ಸಾಲು ಅಂದ್ರಾ? "ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ, ಒಂದೊಂದೂ ಬೆವರ ಹನಿ ಮುತ್ತಾಯ್ತದೋ, ರಾಗಿಯ ಜ್ವಾಳದ ತೆನೆಯಾಯ್ತದೋ, ಎಲ್ಲಾರ ಅನ್ನದ ತುತ್ತಾಯ್ತದೋ..." ಅಂತ.

ಗೀತಪ್ರಿಯ ಅವರ ಸಾಹಿತ್ಯ ಇರುವ ಈ ಸಾಲುಗಳು ಅದ್ಭುತ ಎನ್ನುವುದಕ್ಕಿಂತ ಅರ್ಥಗರ್ಭಿತ ಎನ್ನಬಹುದು. ಈ ಸಾಲುಗಳಲ್ಲಿನ ಯಾವ ವಿಚಾರ ಇಂದಿನ ವಸ್ತು ಅಂತ ಅರಿಯಲು, ಮೊದಲಿಗೆ ಇಲ್ಲಿ ಯಾವ ಯಾವ ಪದಗಳಿಗೆ ಆ ಕಥಾವಸ್ತುವಾಗಬಹುದಾದ ತೂಕ ಇದೆ ಅಂತ ನೋಡೋಣ. "ಮಡಿಲು, ಬೆವರು, ಹನಿ, ಬೀಳು, ಮುತ್ತು, ರಾಗಿ, ಜೋಳ, ತೆನೆ, ಅನ್ನ, ತುತ್ತು"... ಅಬ್ಬಬ್ಬಾ! ಒಂದೊಂದೂ ಪದಗಳದ್ದೂ ಒಂದೊಂದು ಕಾದಂಬರಿಯೇ ಆಗಬಹುದು. ಇದಕ್ಕೆ 'ತೂಕ' ಅಂತ ತೂಕ ಹಾಕೋದು ತಪ್ಪಾಗುತ್ತೆ.

Person Who Work Hard Always Get Good Result In Life

ಇಂದು ನಾನು ಆಯ್ದುಕೊಂಡಿರುವ ವಿಷಯ "ಬೆವರು". "ಒಂದೊಂದೂ ಬೆವರ ಹನಿ ಮುತ್ತಾಯ್ತದೋ!"

ಬೆವರು ಎಂಬ ಪದಕ್ಕೆ ಪರ್ಯಾಯ ಆಂಗ್ಲ ಪದ sweat. ಸಿಹಿ ಎಂಬ ಪದವಾದ 'sweet'ಗೆ, sweat ಎಂಬ ಪದ ಹತ್ತಿರವಾದರೂ, sweat (ಬೆವರು) ಉಪ್ಪುಪ್ಪು ಗೊತ್ತಾ? ಸುಮ್ಮನೆ ಬೆವರು ಉಂಡವಗೆ ಇದು ಉಪ್ಪು, ಆದರೆ ಆ ಬೆವರಿನಿಂದ ಬರುವ ಫಲಿತಾಂಶ ಸಿಹಿಯಾದರೆ ಆ ಬೆವರು ಸಿಹಿ.

ಶ್ರೀನಾಥ್ ಭಲ್ಲೆ ಅಂಕಣ; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ...ಶ್ರೀನಾಥ್ ಭಲ್ಲೆ ಅಂಕಣ; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ...

ಭಾನುವಾರದ ಶ್ಲೋಕ ತರಗತಿಗೆ ಒಂದು ಕಥೆ ಬೇಕಿತ್ತು. ಅದನ್ನೇ ಆಲೋಚಿಸುತ್ತಾ fieldಗೆ ಇಳಿದಿದ್ದೆ. ಸಾಹಿತ್ಯ ಕೃಷಿ ಅಲ್ಲ, ಮನೆಯ ಸುತ್ತಲಿನ lawn ಅನ್ನು ಕತ್ತರಿಸುವ ಕೆಲಸ ಅಂತ. ಬಿಸಿಲಿನ ತಾಪ ಬೇರೆ ಏರಿತ್ತು. lawn mower ಓಡಿಸುವಾಗ ಅದರ ಚಕ್ರ ಸಿಕ್ಕಿಕೊಳ್ಳಬೇಕೇ? ಚಕ್ರ ಸಿಲುಕಿದಾಗ ಕರ್ಣನು ನೆನಪಾಗಿದ್ದು ಸುಳ್ಳಲ್ಲ. ಇಷ್ಟಕ್ಕೂ ಏನಾಯ್ತು? ಬಹುಶಃ ನನ್ನ ಬೆವರಿನಿಂದ ನೆಲ ತೋಯ್ದು ನೆಲಕ್ಕೆ ಚಕ್ರ ಸಿಲುಕಿರಬಹುದೇ ಎಂಬ ಭಯಂಕರ ಆಲೋಚನೆ ಬಂತು. ಬೆವರು ಅನ್ನೋದು ನಲ್ಲಿಯಿಂದ ಸುರಿವ ನೀರೇ? ಅಥವಾ ಕುರುಕ್ಷೇತ್ರ ಯುದ್ಧ ಭೂಮಿಯ ಮೇಲಿನ ನೆತ್ತರೇ? ಎರಡೂ ಅಲ್ಲ. ಕಳೆದ ವಾರದಲ್ಲಿ ಕೆಲವು ಬಾರಿ ಮಳೆ ಬಂದು ನೆಲ ತೊಯ್ದಿತ್ತು. ಹಾಗಾಗಿ ಸಿಕ್ಕಿಕೊಂಡಿತು ಅಷ್ಟೇ.

Person Who Work Hard Always Get Good Result In Life

ಈ ಸುಸಂದರ್ಭವೇ, ಮಧ್ಯಾಹ್ನದ ತರಗತಿಗೆ ನನಗೆ ಒಂದು ಕಥೆಯನ್ನು ನೆನಪಿಸಿತು ಅನ್ನೋದೇ ಸೋಜಿಗ. ಒಮ್ಮೆ ಪಾರ್ವತೀದೇವಿ, ವಿಪರೀತ ಆಯಾಸಗೊಂಡಿದ್ದಾಗ ಹಣೆಯ ಮೇಲಿನ ಒಂದು ಬೆವರ ಹನಿ ಭುವಿಗೆ ಬಿದ್ದು ಅಲ್ಲೊಂದು ಮರ ಹುಟ್ಟಿಕೊಂಡಿತಂತೆ. ಆ ಮರವೇ ಬಿಲ್ವ! ಆ ವೃಕ್ಷದ ಎಲೆಗಳ ತ್ರಿದಳವನ್ನು ಈಶನಿಗೆ ಅರ್ಪಿಸಿದರೆ ಶ್ರೇಷ್ಠ. ತ್ರಿದಳದ ಆಕಾರ ತ್ರಿಶೂಲವನ್ನು ಮತ್ತು ಮುಕ್ಕಣ್ಣನ ಮೂರು ಕಣ್ಣುಗಳನ್ನು ಹೋಲುತ್ತದೆ. ಇಷ್ಟೆಲ್ಲಾ ಸರಕನ್ನು ತರಗತಿಯಲ್ಲಿ ಮಕ್ಕಳಿಗೆ ಹೇಳುವಾಗ ಬೆವರು ಎಂಥ ಪವಿತ್ರ ಅಂತ ಅರಿವಾಯ್ತು. ಈ ಬರಹಕ್ಕೆ ನಾಂದಿಯಾಯಿತು.

ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ ಎಲ್ಲೆಲ್ಲೂ ಈ ಹಿಂದು ಮುಂದುಗಳದ್ದೇ ಸಂತೆ ಅಲ್ಲವೇ?ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ ಎಲ್ಲೆಲ್ಲೂ ಈ ಹಿಂದು ಮುಂದುಗಳದ್ದೇ ಸಂತೆ ಅಲ್ಲವೇ?

ಬೆವರು ಉಪ್ಪುಪ್ಪು ಅಂತ ಅಂದೆ. ಬೇಕಿದ್ರೆ ಹೋಟೆಲ್ ಅಡುಗೆಯವರನ್ನೇ ಕೇಳಿ ಎನ್ನಲಾರೆ. ನಿಜಕ್ಕೂ ಹೇಗೆ ಗೊತ್ತು ಎಂದರೆ ಹಣೆಯಿಂದ ಹರಿವ ಬೆವರನ್ನು ತಡೆಯದೇ ಬಿಟ್ಟರೆ ಅದು ಕೆನ್ನೆಯನ್ನು ದಾಟಿ, ಮೀಸೆಯ ಕೂದಲಿನ (ಇದ್ದವರಿಗೆ) ಕಾಡಿನಲ್ಲಿ ಸರಿದು ಸಾಗಿ ತುಟಿಯ ದಾಟಿ ಬಾಯೊಳಗೆ ಇಳಿದಾಗ ಅರಿವಾಗುತ್ತದೆ ಅದು ಉಪ್ಪುಪ್ಪು ಅಂತ. ಇಷ್ಟೆಲ್ಲಾ ಆಗಬಾರದು ಅಂತಲೇ ಹಣೆಗೆ ಪಟ್ಟಿ ಕಟ್ಟಿಕೊಳ್ಳೋದು. ರೈತ ಕಟ್ಟೋದು ಬಟ್ಟೆ. gymನಲ್ಲಿ ಬೆವರ ಇಳಿಸುವವರು ಕಟ್ಟೋದು sweat band.

Person Who Work Hard Always Get Good Result In Life

sweat band ಅನ್ನು ಹಣೆಗೆ ಕಟ್ಟಿಕೊಂಡು ಹರಿವ ಬೆವರು ಬಂದು ಕಣ್ಣೊಳಗೆ ಇಳಿಯದಿರಲಿ ಅಂತ ತಡೆಯುತ್ತಾರೆ. ಟೆನಿಸ್ ಆಡುವ ಕ್ರೀಡಾಪಟುಗಳು ಈ ಹಣೆಯ ಬ್ಯಾಂಡ್ ಕಟ್ಟಿಕೊಳ್ಳುತ್ತಾರೆ. ಹಾಗೆಯೇ ಕೆಲವರು wrist band ಕೂಡ ಬಳಸುತ್ತಾರೆ. ಮುಂಗೈ ಮೇಲಿನ ಈ bandನಿಂದ ಹಣೆಯನ್ನು ಒರೆಸಿಕೊಳ್ಳುತ್ತಾರೆ. ಆಟದ ಮಧ್ಯೆ ದೊಡ್ಡ ಟವೆಲ್ ನಿಂದಲೂ ಮುಖ ಮತ್ತು ಕೈಗಳನ್ನು ಒರೆಸಿಕೊಳ್ಳುತ್ತಾರೆ. ಬೆವರು ಸುರಿಸಿ ಪ್ರಶಸ್ತಿ ಗೆಲ್ಲುವ ದಿಶೆಯಲ್ಲಿ ಬೆವರೇ ಅಡ್ಡಿಯಾಗಬಾರದು ಅಲ್ಲವೇ? ಅಂಗೈನಲ್ಲಿ ಮೂಡುವ ಬೆವರಿನಿಂದ ಹಿಡಿವ racquet ಜಾರಿದರೆ ಗೆಲ್ಲೋದಾದರೂ ಹೇಗೆ?

ಶ್ರೀನಾಥ್ ಭಲ್ಲೆ ಅಂಕಣ; ಹಳೆ, ಹೊಸ ವಿಚಾರಗಳ ಬೆಸೆದು ನೋಡೋಣ...ಶ್ರೀನಾಥ್ ಭಲ್ಲೆ ಅಂಕಣ; ಹಳೆ, ಹೊಸ ವಿಚಾರಗಳ ಬೆಸೆದು ನೋಡೋಣ...

ಬೆವರನ್ನು ತಡೆಗಟ್ಟುವ ಹಣೆಯ ಪಟ್ಟಿಗಳನ್ನು ಟೆನಿಸ್ ಆಟಗಾರರು ಮಾತ್ರ ಬಳಸುತ್ತಾರಾ? ಖಂಡಿತ ಇಲ್ಲ. ಟೆನಿಸ್ ಆಟಗಾರರೂ ಬಳಸುತ್ತಾರೆ. ಯೋಗಿಗಳು (ಯೋಗ ಮಾಡುವವರು), Football Basketball Baseball ಆಟಗಾರರು, ಓಟಗಾರರು, ಜಿಮ್ ಮಾಡುವವರು, cycling ಮಾಡುವವರು ಹೀಗೆ ಬೆವರು ಹರಿಸುವವರೆಲ್ಲಾ ಬಳಸಬಹುದಾದ ಸಾಧನ ಈ head band. ಖಾರ ತಿಂದರೆ ಬೆವರು ಮೂಡುತ್ತದೆ ಅನ್ನುವುದು ನಿಮ್ಮ ಸಮಸ್ಯೆಯಾದರೆ ಊಟಕ್ಕೆ ಕೂರುವ ಮುನ್ನವೂ ಈ head band ಬಳಸಬಹುದು. ಖಾರ ತಿಂದರೆ ನನಗೆ ಬೆವರು ಸುರಿಯೋಲ್ಲ ಆದರೆ ಮೂಗು ಸೋರುತ್ತೆ ಅಂತಂದರೆ ಆ ಸಮಸ್ಯೆಗೆ ಮೂಗು band ಇದೆಯೋ ಇಲ್ಲವೋ ಇಲ್ಲಿ ಅಪ್ರಸ್ತುತ.

Person Who Work Hard Always Get Good Result In Life

ಬೆವರು, ಹಣೆಯ ಮೇಲೆ ಮಾತ್ರ ಮೂಡುತ್ತದೆಯೇ? ಇಲ್ಲ. ಕೈ, ಕಾಲು, ಮುಖ, ತುಟಿಯ ಮೇಲ್ಭಾಗ ಹೀಗೆ ದೇಹಾದ್ಯಂತ ಬೆವರಿನ ಗ್ರಂಥಿಗಳು ಇದ್ದು ಬೆವರು ಎಲ್ಲೆಲ್ಲೂ ಮೂಡಬಹುದು. ಕಳ್ಳರಿಗೆ ಪೊಲೀಸರನ್ನು ಕಂಡರೆ ಬೆವರು ಬರುತ್ತದೆ. ಸುಳ್ಳಾಡಿ ಸಿಕ್ಕಿಕೊಂಡರೆ ಬೆವರು ಮೂಡುತ್ತದೆ. lawn ಕತ್ತರಿಸುವಿಕೆಯ ಸಮಯದಲ್ಲಿ ಉದರ ಮತ್ತು ಬೆನ್ನ ಮೇಲೂ ಬೆವರು ಮೂಡಿ ತಂಪಾಗಿಸಿ 'ತಣ್ಣಗಿರಲಿ ಬೆನ್ನು ಉದರ ಅಂತ' ನಾಗರಪಂಚಮಿ ನೆನಪಾಗುತ್ತದೆ. ಕೆಲವರಿಗೆ ಅಂಗೈ ಬೆವರುತ್ತದೆ. ಕೆಲವರಿಗೆ ಕಿವಿಯ ಹಿಂದೆ ಬೆವರು. ಕೊಂಕಳ ಕೆಳಗೆ ಬೆವರು ಸರ್ವೇ ಸಾಮಾನ್ಯ. ಈ 'ಸರ್ವೇ ಸಾಮಾನ್ಯವೇ' ಹಲವಾರು deodorant ಕಂಪನಿಗಳನ್ನು ಹುಟ್ಟುಹಾಕಿ ಬೆಳೆಸಿ ದೈತ್ಯರನ್ನಾಗಿಸಿದೆ.

ಬೆವರ ಸುರಿಸುವ ಮಂದಿಯಲ್ಲಿ ಮುಂಚೂಣಿಯಲ್ಲಿ ನಿಂತಿರುವವರೆಂದರೆ ರೈತ ಮತ್ತು ಯೋಧ. ಪಾರ್ವತಿದೇವಿಯ ಕಥೆಯ ಬಿಲ್ವ ಮರವನ್ನೇ ಇಲ್ಲಿ ಮತ್ತೆ ನೆನಪಿಸಿಕೊಂಡರೆ, ಒಂದು ಕಥೆಯನ್ನು ಕೇವಲ ಕಥೆಯಾಗಿಸಿಕೊಂಡು ಅರ್ಥೈಸಿಕೊಳ್ಳದೇ ಆಳಕ್ಕೆ ಇಳಿದು ಅರ್ಥೈಸಿಕೊಳ್ಳಬೇಕು. ಪಾರ್ವತೀದೇವಿಯ ಸ್ಥಾನದಲ್ಲಿ ರೈತನನ್ನು ಊಹಿಸಿಕೊಂಡು, ಬಿಲ್ವವನ್ನು ಬೆಳೆಯಾಗಿ ಹೋಲಿಸಿ ನೋಡಿದರೆ ಆ ಕಥೆಗೆ ಒಂದು ಹೊಸ ಅರ್ಥವೇ ಕಾಣುತ್ತದೆ. ರೈತನ ಬೆವರ ಹನಿಯು ಬಿಲ್ವವಾಗದೆ ಅವನಿಗೆ ಬಾಣವಾಗಿ ಇರಿದಾಗಲೇ ಆತ್ಮಹತ್ಯೆಗಳು ಹೆಚ್ಚೋದು! ಹೀಗೆಯೇ ಯೋಧನ ಬೆವರು ಸಹ. ಅವರ ಒಂದೊಂದೂ ಬೆವರ ಹನಿ ಅದೆಷ್ಟು ಸಾಮಾನ್ಯರ ಜೀವನವನ್ನು ಸುರಕ್ಷತೆಯಿಂದ ಇಟ್ಟಿದೆಯೋ ಲೆಕ್ಕ ಇಟ್ಟವರಾರು?

ದಿನನಿತ್ಯದಲ್ಲಿ ಬೆವರು ಸುರಿಸುವ ಮಂದಿಯಾದರೂ ಯಾರು? ಸಾಮಾನು ಸರಂಜಾಮನ್ನು ಗಾಡಿಯಲ್ಲಿ ಎಳೆದುಕೊಂಡು ಸಾಗುವ ಕೂಲಿಕಾರರು, ನಮಗಾಗಿ ಬೀದಿಗೆ ರಸ್ತೆ ಹಾಕುವ ಮಂದಿ, ಹೊರಗಿನ ಬಿಸಿಲು ಮಳೆ ಲೆಕ್ಕಿಸದೇ ದುರಸ್ತಿ ಮಾಡುವ ಮಂದಿ, ಮನೆ ಬಾಗಿಲಿಗೆ ಬಂದು ವ್ಯಾಪಾರ ಮಾಡುವ ಮಂದಿ, ಬೀದಿಯಲ್ಲಿ ತರಕಾರಿ ಅಥವಾ ಇತರ ಸಾಮಾನು ಮಾರುವ ಮಂದಿ, ಹೀಗೆ ನ್ಯಾಯವಾಗಿ ದುಡಿಯುತ್ತಾ ತಮ್ಮ ಬೆವರ ಹರಿಸುವ ಇಂಥ ಕೆಲಸಗಾರರು ಎಲ್ಲೆಲ್ಲೂ ಕಾಣ ಸಿಗುತ್ತಾರೆ. ಇಂಥವರ ಸಾಲಿಗೆ ಸೇರುವ ಮತ್ತೊಬ್ಬರು ಎಂದರೆ ಗೃಹಿಣಿ. ಈಕೆಯ ಬೆವರ ಹನಿಯೂ, ಆಕೆಯ ಕಣ್ಣೀರಿನಂತೆ ಎಂದೋ ಬತ್ತಿ ಹೋಗಿದೆ. ಇಂಥ ನಿಷ್ಠಾವಂತರಿಗೆ ಒಂದು ನಮನ ಸಲ್ಲಿಸಲೇಬೇಕು.

ಇಂಥ ಪಂಗಡದಾಚೆ ಒಂದು ಗುಂಪಿದೆ. ಅವರುಗಳೇ white collar ಮಂದಿ. ಹಾಕಿದ ಬಟ್ಟೆಯ iron ಮಾಸದ ಹಾಗೆ ಬೆಳಗಿನಿಂದ ಸಂಜೆಯವರೆಗೂ ಉಟ್ಟ ಬಟ್ಟೆ ಇದ್ದಂತೆಯೇ ಇರುತ್ತದೆ. ಇವರ ಬೆವರ ಗ್ರಂಥಿಗಳು ಏಸಿ ಗಾಳಿಯಿಂದ ಮುಚ್ಚಿಹೋಗಿದೆ ಎಂದೇ ಇತರರು ಹೇಳುವುದು. ಮನುಜಗಿರುವ ಗ್ರಂಥಿಗಳು ಬೇಡದ್ದನ್ನು ಹೊರಕ್ಕೆ ಹಾಕಲು ಎಂಬುದು ನೆನಪಿರಲಿ. ಬೇಡದ್ದು ದೇಹದೊಳಗೇ ಉಳಿಯೋದ್ರಿಂದಲೇ ಬಹುಶಃ ಇಂಥವರ ಒತ್ತಡವೂ ದೇಹದೊಳಗೇ ಕೂತು ಲಾವಾರಸವಾಗೋದು, ಕಾಯಿಲೆಗಳಿಗೆ ಮತ್ತು ಕೆಲವೊಮ್ಮೆ ವಿಪರೀತಕ್ಕೂ ಎಡೆ ಮಾಡಿಕೊಡೋದು.

ಯಾರೊಬ್ಬರ ಕೆಲಸವೂ ಚಿಕ್ಕದಲ್ಲ. ಅವರವರ ವೃತ್ತಿಯಲ್ಲಿ ಆಯಾ ಒತ್ತಡ ಮತ್ತು pain points ಇದ್ದೇ ಇರುತ್ತದೆ. ಆ ಕಾಣದ ಮತ್ತು ಕಾಣುವ ಬೆವರ ಹನಿಯ ಬೆಲೆಯನ್ನು ಅರಿತುಕೊಳ್ಳಲು ನಾವು ಮೊದಲು ಬೆವರಬೇಕು. ಆಗಲೇ ಒಂದೊಂದೂ ಬೆವರ ಹನಿ ಮುತ್ತಾಗೋದೂ, ಅಲ್ಲವೇ? ಏನಂತೀರಾ?

English summary
Today i took the subject of sweating. A person who work hard will always get good result
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X