ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ನೀವು ನಾಯಿ ಅನುಯಾಯಿಗಳೇ? ಅಲ್ಲವೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ನೀವು ನಾಯಿಯ ಅನುಯಾಯಿಗಳೇ? ಅಥವಾ ಅಲ್ಲವೇ? ಮೊದಲಲ್ಲೇ ಹೇಳಿಬಿಡ್ತೀನಿ, ನಾಯಿ ಅನ್ನೋದನ್ನು ಒಂದು ಪ್ರಾಣಿಯ ಹೆಸರಾಗಿಯೇ ಅರ್ಥೈಸಿಕೊಳ್ಳಿ. ಯಾರನ್ನೂ ಬೈಯುತ್ತಿಲ್ಲಾ ಆಯ್ತಾ?

ಕಳೆದ ವಾರದಲ್ಲಿ ಒಂದೆಡೆ ಪ್ರತಿಕ್ರಿಯೆ ಹಾಕುವಾಗ ಹುಟ್ಟಿಕೊಂಡ ಆಲೋಚನೆ ಇಂದು ಬೆಳಿಗ್ಗೆ ವಾಕಿಂಗ್ ಹೋಗಿದ್ದಾಗ ಗಟ್ಟಿಯಾಗಿತ್ತು. ಇಂದೇನಾಯ್ತು ಅಂದಿರಾ? ಅಲ್ಲೊಂದು ಕಾರು ಮತ್ತು ಆ ಕಾರಿನ ಹಿಂದಿನ ಸೀಟಿನಲ್ಲಿ ಒಂದು ನಾಯಿ. ಬೀದಿಯಲ್ಲಿ ಒಬ್ಬಾಕೆ ತನ್ನ ಜರ್ಮನ್ ಶೆಪರ್ಡ್ ನೊಂದಿಗೆ ಬರುತ್ತಿದ್ದಳು. ಅದನ್ನು ಕಂಡು ಈ ಕಾರಿನ ನಾಯಿ ಬೊಗಳಿತು. ಅದಕ್ಕೆ ಪ್ರತ್ಯುತ್ತರವಾಗಿ ಈ ನಾಯಿಯ ಮರುಬೊಗಳುವಿಕೆ, ಬಹುಶಃ 'ಹೊರಗೆ ಬಾ' ನೋಡ್ಕೋತೀನಿ ಅಂತ ಇರಬಹುದೇನೋ. ಇವೆರಡೂ ಹೀಗೆ ಬೊಗಳುವಾಗ ಮತ್ಯಾವುದೋ ಮನೆಯ ಮತ್ತೊಂದು ನಾಯಿ ಬೊಗಳಿತು. ಒಂದು ನಾಯಿ ಬೊಗಳಿತು ಅಂತ ಮತ್ತೊಂದು, ಮಗದೊಂದು ಬೊಗಳೋದು ಯಾಕೆ?

 ಶ್ರೀನಾಥ್ ಭಲ್ಲೆ ಅಂಕಣ; ಕರದ ವಿಷಯ ನಿಮಗೆ ಕರತಲಾಮಲಕ ಆಗಿದೆಯೇ? ಶ್ರೀನಾಥ್ ಭಲ್ಲೆ ಅಂಕಣ; ಕರದ ವಿಷಯ ನಿಮಗೆ ಕರತಲಾಮಲಕ ಆಗಿದೆಯೇ?

ನಾಯಿ ಒಂದು ವಿಶಿಷ್ಟ ಪ್ರಾಣಿ. ಈ ನಾಲ್ಕು ಕಾಲಿನ ಪ್ರಾಣಿಗೆ 'ನಾಯಿ' ಅಂಬೋದನ್ನು ಬಿಟ್ಟರೆ 'ಶ್ವಾನ, ಕುನ್ನಿ, ಸೊಣಗ' ಎಂಬ ಹೆಸರುಗಳೂ ಇವೆ. ಸೊಣಗ ಅಂತ ಗೂಗಲ್ ಹೇಳಿತು, ನನಗೂ ಗೊತ್ತಿರಲಿಲ್ಲ. ಹಲವೊಮ್ಮೆ ಈ ನಾಯಿಗೆ ನಾರಾಯಣ ಎನ್ನುವುದೂ ಇದೆ. ಸೊಣಗ ಅಂತ ಯಾವ ಪ್ರದೇಶದವರು ಬಳಸುತ್ತಾರೆ? ನಾರಾಯಣ ಎಂದೇಕೆ ಹೆಸರು ಅಂತ ನೀವೇ ಹೇಳಿ ಆಯ್ತಾ? ನಾಯಿಯ ಬಗ್ಗೆ ಒಂದಷ್ಟು ವಿಷಯಗಳನ್ನು ನೋಡೋಣ ಬನ್ನಿ.

People Use Dog Name As A Medium To Many Things

ಭಕ್ತ ಕುಂಬಾರ ಚಿತ್ರದ ಒಂದು ಸನ್ನಿವೇಶದಲ್ಲಿ ಕುಂಬಾರನ ಬುತ್ತಿಯನ್ನು ಒಂದು ನಾಯಿ ಎತ್ತಿಕೊಂಡು ಹೋಗುತ್ತದೆ. ಕುಂಬಾರ ಆ ನಾಯಿಯನ್ನು ಹಿಂಬಾಲಿಸಿಕೊಂಡು ಓಡಿ, ಆ ಬುತ್ತಿಯನ್ನು ಅದರಿಂದ ತೆಗೆದುಕೊಂಡು, ಬುತ್ತಿಯನ್ನು ಬಿಚ್ಚಿ ಕೊಡುತ್ತಾನೆ. "ಮನುಷ್ಯನ ಸ್ವಭಾವವನ್ನು ವಾಸನೆಯಿಂದ ಅರಿಯೋ ಪ್ರಾಣಿ" ಎಂದು ಹೊಗಳುತ್ತಾ "ಪ್ರತೀ ಮೂಕಪ್ರಾಣಿಯಲ್ಲಿ ಪಾಂಡುರಂಗ ಇರುತ್ತಾನೆ" ಎನ್ನುತ್ತಾನೆ. ಕುಂಬಾರನ ಗುಣವನ್ನು ಎತ್ತಿಹಿಡಿಯುವುದರಲ್ಲಿ ಈ ನಾಯಿಯ ಪಾತ್ರವೂ ಹಿರಿದು.

ಪುರಂದರದಾಸರು "ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ?" ಎಂದು ಕೇಳುತ್ತಾರೆ. ಸೂಚ್ಯವಾಗಿ, ತಮ್ಮ ಕೆಲಸವಲ್ಲದ ಕೆಲಸದಲ್ಲಿ ತಲೆತೂರಿಸಿ ಬೈಸಿಕೊಂಡು ಹೊರಬರುವವರ ಕುರಿತು ಲೇವಡಿ ಮಾಡುವುದು ಈ ಪದದ ಉದ್ದೇಶ ಎಂದು ನನಗನ್ನಿಸುತ್ತದೆ. ಮನುಷ್ಯ ಗುಣವನ್ನೇ ಮೂಲವಾಗಿ ಇಟ್ಟುಕೊಂಡು ಈ ಪದವನ್ನು ಓದಿಕೊಂಡಾಗ/ಹಾಡಿಕೊಂಡಾಗ ನಾಯಿ ಅನ್ನೋದು ಒಂದು ಮಾಧ್ಯಮ ಅಷ್ಟೇ . . .

 ಶ್ರೀನಾಥ್ ಭಲ್ಲೆ ಅಂಕಣ; ಎಲ್ಲರ ಜೀವನವೂ ಸಿಹಿಕಹಿಗಳ 'ಕಲಸುಮೇಲೋಗರ' ಶ್ರೀನಾಥ್ ಭಲ್ಲೆ ಅಂಕಣ; ಎಲ್ಲರ ಜೀವನವೂ ಸಿಹಿಕಹಿಗಳ 'ಕಲಸುಮೇಲೋಗರ'

ಸಾಮಾನ್ಯ ಜನರು ಈ ನಾಯಿಯನ್ನು ಮಾಧ್ಯಮವಾಗಿ ವಿಭಿನ್ನವಾಗಿ ಬಳಸಿಕೊಂಡಿದ್ದಾರೆ. ಒಂದು ಉದ್ದೇಶವೇ ಇಲ್ಲದೆ ಅರಚಾಡುವವರನ್ನು 'ನಾಯಿಯಂತೆ ಬೊಗಳುತ್ತಾನೆ' ಎನ್ನುತ್ತಾರೆ. ಸುಮ್ ಸುಮ್ಮನೆ ಮೈಮೇಲೆ ಎಗರಿ ಬರುವವರನ್ನು 'ನಾಯಿಯಂತೆ ಕಚ್ಚಲು ಬರುತ್ತಾನೆ' ಎನ್ನುತ್ತಾರೆ. ಹೇಳಿದಂತೆ ಕೇಳ್ಕೊಂಡು ಬಿದ್ದಿರುವವರನ್ನು ಕುರಿತು 'ನಾಯಿಯಂತೆ ಕಾಲ ಬಳಿ ಬಿದ್ದಿರುತ್ತಾನೆ' ಎನ್ನುತ್ತಾರೆ. ಎದುರು ನಿಂತು ಎದುರಿಸಲಾರದೆ ಕಂಬಿ ಕಿತ್ತವರನ್ನು ಕುರಿತು '(ನಾಯಂತೆ) ಬಾಲ ಮುದುರಿಕೊಂಡು ಹೋದ' ಎನ್ನುತ್ತಾರೆ. ಯಾವ ಆಕ್ಷನ್ ಕೂಡ ಇಲ್ಲದೆ ಸುಮ್ಮನೆ ಬಾಯಮಾತಲ್ಲೇ ಕಿತ್ತಲಾಡುವವರನ್ನು 'ಬೀದಿನಾಯಿಗಳ ರೀತಿ ಕಿತ್ಲಾಡ್ತಾ ಇದ್ದಾರೆ' ಎನ್ನುತ್ತಾರೆ.

ಎಲ್ಲಿ ಹೋದರೂ ಒಬ್ಬರ ಹಿಂಬಾಲವಾಗಿ ಇದ್ದಾಗ 'ನಾಯಿಯಂತೆ ಹಿಂದೇನೇ ಇರ್ತಾನೆ' ಎನ್ನುತ್ತಾರೆ. ಹೀಗೆ ನಾಯಿಯನ್ನು ಮಾಧ್ಯಮವನ್ನಾಗಿ ಬಳಸಿಕೊಂಡು decent ಆಗಿ ಬೈಯಬಹುದು. ಕೆಲವೊಮ್ಮೆ ಏನೇನೆಲ್ಲಾ ಲೆವೆಲ್ ನಲ್ಲಿ ಬೈಯಬಹುದು ಅನ್ನುವುದನ್ನು ಅಕ್ಷರದಲ್ಲಿ ಬರೆಯಲಾಗದು ಬಿಡಿ. ಹೀಗೊಂದು ವಿಶೇಷ ಮಾಹಿತಿ, 'ಕಜ್ಜಿ ನಾಯಿ' ಅಂತ ಹೆಸರಿಟ್ಟುಕೊಂಡವರೊಬ್ಬರ ಅಕೌಂಟ್ ಅನ್ನು ಫೇಸ್ಬುಕ್ ನಲ್ಲಿ ನೋಡಿದೆ.

People Use Dog Name As A Medium To Many Things

ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದರೆ ನೆಟ್ಟಗಾಗುವುದಿಲ್ಲ ಎಂಬ ಉಲ್ಲೇಖ 'ಒಬ್ಬರು ಇನ್ನೇನೇ ಮಾಡಿದರೂ ತಮ್ಮ ತಪ್ಪು ತಿದ್ದಿಕೊಳ್ಳುವುದಿಲ್ಲ' ಎಂಬ ಸಂದರ್ಭದಲ್ಲಿ ಬಳಸುತ್ತೇವೆ. ಒಮ್ಮೆ ತೆನಾಲಿ ರಾಮ, ಒಂದು ಕರಿನಾಯಿಯನ್ನು ತಿಕ್ಕೀ ತಿಕ್ಕೀ ತೊಳೆಯುತ್ತಾ ಇರುತ್ತಾನೆ. ಸಂಗೀತ ಅಭ್ಯಾಸದಲ್ಲಿ ತೊಡಗಿರುವ ಪಕ್ಕದ ಮನೆಯಾತನಿಗೆ 'ನಿನಗೆ ಸಂಗೀತ ಬರೋಲ್ಲ, ಈ ನಾಯಿ ಬೆಳ್ಳಗಾಗೋದಿಲ್ಲ' ಎಂಬ ನೀತಿ ಸಾರುತ್ತಾನೆ. ಬೈಗುಳ ವಿಷಯದಲ್ಲಾಗಲಿ, ನೀತಿಯನ್ನುಣಿಸುವ ವಿಚಾರದಲ್ಲಾಗಲೀ ಅಲ್ಲೊಂದು ನಾಯಿ ಇರುವುದೇ ಇಲ್ಲ ಆದರೆ ನಾಯಿಯ ಪಾತ್ರ ಮಾತ್ರ ದೊಡ್ಡದು.

 ಶ್ರೀನಾಥ್ ಭಲ್ಲೆ ಅಂಕಣ: ಇಹದ ಓಕೆ, 'ಪರ'ದ ವಿಷಯ ಸುಮ್ನೆ ಯೋಚಿಸದಿರಿ ಶ್ರೀನಾಥ್ ಭಲ್ಲೆ ಅಂಕಣ: ಇಹದ ಓಕೆ, 'ಪರ'ದ ವಿಷಯ ಸುಮ್ನೆ ಯೋಚಿಸದಿರಿ

ಈಶ್ವರನ ಒಂದು ರೂಪವಾದ 'ಕಾಲ ಭೈರವ'ನೊಡನೆ ಒಂದು ಕಪ್ಪು ನಾಯಿ ಇರುತ್ತದೆ. ತ್ರಿಮೂರ್ತಿರೂಪ ದತ್ತಾತ್ರೇಯ ಸ್ವಾಮಿಯ ಜೊತೆಯಲ್ಲಿ ನಾಲ್ಕು ನಾಯಿಗಳು ಇರುತ್ತವೆ. ತ್ರಿಮೂರ್ತಿಗಳ ಜೊತೆಯಲ್ಲಿರುವ ನಾಲ್ಕು ವೇದಗಳು ಎಂದು ಬಿಂಬಿಸಲಾಗಿದೆ. ಪಾಂಡವರ ಸ್ವರ್ಗಾರೋಹಣ ಸಮಯದಲ್ಲಿ ಸಾಕ್ಷಾತ್ ಯಮ ಧರ್ಮರಾಜನೇ ಶ್ವಾನರೂಪಿಯಾಗಿ ಧರ್ಮರಾಯನ ಜೊತೆ ನೆರಳಾಗಿ ನಡೆದಿದ್ದ. ಏಷ್ಯಾದ ಕೆಲವು ದೇಶಗಳಲ್ಲಿ ನಾಯಿಗೆ ಒಂದು ಪೂಜನೀಯ ಸ್ಥಾನವಿದೆ. ಮಂಗಳದೋಷಿಗಳ ಅಮಂಗಳವನ್ನು ತೊಲಗಿಸಲು ಹೆಣ್ಣಿಗೆ ಒಂದು ನಾಯಿಯೊಡನೆ ಮದುವೆ ಮಾಡಿಸಲಾಗುತ್ತದೆ.

ಹಲವಾರು ಸಿನಿಮಾಗಳಲ್ಲಿ ನಾಯಿಗಳಿಗೆ ಒಂದು ಒಳ್ಳೆಯ ರೋಲ್ ನೀಡಿರುತ್ತಾರೆ. "ಭೂಲೋಕದಲ್ಲಿ ಯಮರಾಜ" ಚಿತ್ರದಲ್ಲಿ ನಾಯಕ ಲೋಕೇಶ ಅವರ ನಾಯಿಯ ಹೆಸರು 'ಭೈರ'. ವಿಷ್ಣುವರ್ಧನ್ ಚಿತ್ರವಾದ "ನಾಗ ಕಾಳ ಭೈರವ" ದಲ್ಲಿ ಭೈರವ ಎಂದರೆ ನಾಯಿ. ನಾಯಿಯನ್ನು 'ರಕ್ಷಕ' ಅಂತ ಬಿಂಬಿಸುವಾಗ ಅದಕ್ಕೊಂದು ದೈವದ ರೂಪ ನೀಡಿ ತೋರಿಸುತ್ತಾರೆ. ಒಂದು ಸಿನಿಮಾದಲ್ಲಿ ಮನ್ಮಥರೂಪಿಯಾಗಿ ಕಾಶೀನಾಥ್ ಬೀದಿಯಲ್ಲಿ ಸಾಗಿ ಬರುತ್ತಾ ಇರುತ್ತಾರೆ. ಅವರನ್ನು ಕಂಡು ನಾಯಿ ಬೊಗಳಿದಾಗ 'ಛೀ ! ಸುಮ್ಮನಿರು ಶ್ವಾನ' ಎನ್ನುತ್ತಾರೆ. ತುಂಬಾ ಸಿಂಪಲ್ ಆದ ಈ ಒಂದು ಸಾಲು ನಗೆ ಉಕ್ಕಿಸುತ್ತದೆ. ಜಗ್ಗೇಶ್ ಅವರ 'ಬೌ ಬೌ ಬಿರಿಯಾನಿ'ಯನ್ನು ಮರೆಯಲಾದೀತೆ? ಲಕ್ಕಿ ಸಿನಿಮಾದಲ್ಲಿನ ಯಶ್ ಅವರ ನಾಯಿಭೀತಿ ನೋಡಲು ಮಜಾ.

People Use Dog Name As A Medium To Many Things

ಹುಟ್ಟಿದರೆ ಸಿರಿವಂತರ ಮನೆಯ ನಾಯಿಯಾಗಿ ಹುಟ್ಟಬೇಕು ಅಂತಾರೆ. ಅದೇನ್ ರಾಜವೈಭೋಗ ಗೊತ್ತೇ? 'ಶ್ರೀಮಂತನ ಮಗಳು' ಸಿನಿಮಾದಲ್ಲಿ ಆ (pomeranian) ಪೊಮೇರನಿಯನ್ ನಾಯಿ ಮರಿಯದ್ದೇ ದರ್ಬಾರು ಅಂತ ನೆನಪು. ನಾಯಿಮರಿ ಆಲಿಯಾಸ್ ಕುನ್ನಿಯ ವಿಷಯ ಬಂದಾಗ ಈ ಪಾಕೆಟ್ ಸೈಜ್ ನಾಯಿ ಮರಿಗಳಿಗೆ ಬಲು ಡಿಮ್ಯಾಂಡ್ ಎನ್ನಬಹುದು. pomeranian, terrier, ಚುವಾವ, ಪಗ್ ಹೀಗೆ ಹಲವಾರು ಬ್ರೀಡ್ ನಾಯಿಯ ಮರಿಗಳು ಎಲ್ಲೆಲ್ಲೂ ಕಾಣಸಿಗುತ್ತವೆ.

ನಾಯಿಯ ಬಗ್ಗೆ ಹಲವರಿಗೆ ಅತೀ ಪ್ರೀತಿ. ಹಲವಾರು ಶ್ವಾನಪ್ರೇಮಿಗಳ ಸಂಘಗಳೂ ಇವೆ. ವಿಶೇಷ ಬ್ರೀಡ್ ನಾಯಿಯ ಫ್ಯಾನ್ ಬಳಗಗಳೂ ಫೇಸ್ಬುಕ್ ನಲ್ಲಿವೆ ಎಂದು ಕೇಳಿದ್ದೇನೆ. ಜಗತ್ತಿನಾದ್ಯಂತ Dog Show ಗಳು ಬಹಳ ಪ್ರಸಿದ್ಧಿ. ಅತ್ಯಂತ ಸುಂದರ ನಾಯಿಗೆ ಪ್ರಶಸ್ತಿ ಇರುವಂತೆ ಅತ್ಯಂತ ಕೆಟ್ಟದಾಗಿ ಕಾಣುವ ನಾಯಿಗಳಿಗೂ ಬಹುಮಾನ ಇದೆಯಂತೆ. ಕೆಲವರಿಗೆ ನಾಯಿಯನ್ನು ಕಂಡರೆ ಮಹಾಭಯ. ಈ ಅತೀ ಭಯ ಎಂಬುದು ಹಲವರಲ್ಲಿ ಫೋಬಿಯಾ ಆಗಿ ಕಾಡುವುದೂ ಇದೆ. ಇದನ್ನು cynophobia ಎಂದೂ ಕರೆಯುತ್ತಾರೆ. ನಿಮಗೆ ಶ್ವಾನ ಭಯವಿದೆಯೇ? ಅಥವಾ ಪ್ರೀತಿಯೇ? ಅಥವಾ ಹಾಗೂ ಹೀಗೂ?

ನಾವು ಭೀತಿಗೊಂಡಾಗ ನಾಯಿಗಳಿಗೂ ಭೀತಿಯಾಗಿ ಕಚ್ಚುವುದು ಇದೆ. ಒಂದು ಕಾಲಕ್ಕೆ ನಾಯಿ ಕಚ್ಚಿದರೆ ಹದಿನಾಲ್ಕು ಇಂಜೆಕ್ಷನ್ ಕೊಡುತ್ತಿದ್ದರು. ಈಗ ಕೇವಲ ಎರಡೇ ಇಂಜೆಕ್ಷನ್ ಅಂತೆ? ಏನಾದರೇನು ಮೊದಲಿಗೆ ಅದು ಇಂಜೆಕ್ಷನ್ ಅಲ್ಲದೆ ಹೊಕ್ಕಳ ಸುತ್ತ ಬೇರೆ. ಹೀಗಾಗಿ ನಾನು ಎಂದಿಗೂ ನಾಯಿಯ ತಂಟೆಗೆ ಹೋಗಿಲ್ಲ ಅಥವಾ ಯಾವ ನಾಯಿಯೂ ನನ್ನ ತಂಟೆಗೆ ಬಂದಿಲ್ಲವೋ ಗೊತ್ತಿಲ್ಲ. ಹೊಕ್ಕಳ ಸುತ್ತಲೇ ಈ ಇಂಜೆಕ್ಷನ್ ಏಕೆ ಅಂತ ಗೊತ್ತೇ?

ಈ ಬೀದಿ ನಾಯಿಗಳು ಯಾವ ಜಾತಿ ನಾಯಿಗಳು ಅಂತ ಯಾರನ್ನೋ ಕೇಳಿದ್ದೆ. Mixed Breed ಅಂತ ಅಂದರು. ಬಿಡಿ, ಈ ಬೀದಿನಾಯಿಗಳು ಕೆಲವೊಂದು ಬೀದಿಯನ್ನು ತಮ್ಮ ಸ್ವಂತ ಅಂತ ಮಾಡಿಕೊಳ್ಳುವುದರ ಹಿಂದಿನ ವಿಜ್ಞಾನ ಏನು? ಇನ್ನೂ ಹಲವಾರು ಮಾತುಗಳನ್ನು ಆಡಲಿಕ್ಕಿದೆ. ಆದರೆ ಮುಂದೊಮ್ಮೆ ಮತ್ತೆ ಆಡೋಣ. ಹೊರಡುವ ಮುನ್ನ ನಿಮಗೆ ಒಂದು ಪ್ರಶ್ನೆ "ನಾಯಿಯ ಬಾಲ ಡೊಂಕಾಗುವುದು ಯಾಕೆ?'. ಸಂಕೋಚ ಪಡದೇ ಹೇಳಿ!

English summary
People use dog name as a medium to many things. Here is a humor article about dog and how people use its name in many situation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X