ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಇಂದಿನ ನಮ್ಮ ಮಾತುಕತೆ 'ಕೆಟ್ನಾಲಜಿ ವಿಷಯ ಗೊತ್ತೇನೋ ಶಿಷ್ಯ'

By ಶ್ರೀನಾಥ್ ಭಲ್ಲೆ
|
Google Oneindia Kannada News

ಐಟಿ ಅಂದ್ರೆ ಬಹಳ ಹಿಂದಿನಿಂದ ಜನಕ್ಕೆ ಗೊತ್ತಿದ್ದೇ income tax ಅಂತ. ಈಗ ಕಾಲ ಹೇಗೆ ಬದಲಾಗಿದೆ ನೋಡಿ. ಆಧುನಿಕ ತಂತ್ರಜ್ಞಾನದ ಗಂಧಗಾಳಿಯೂ ಗೊತ್ತಿಲ್ಲದ ಒಬ್ಬರು ನೀನೂ ಐಟಿನಾ ಅಂತ ಕೇಳಿದರು. ಹಾಗಂದರೆ ಏನು ಗೊತ್ತಾ ಅಂತ ಮರುಪ್ರಶ್ನೆ ಹಾಕಿದ್ದೆ. ವೃತ್ತಿಯಲ್ಲಿ ಮೇಷ್ಟ್ರು ಅಂತ ಅಲ್ಲದಿದ್ದರೂ ಅದೇನೋ ಹೇಳಿಕೊಡುವ ಚಪಲ ನೋಡಿ, ಅದಕ್ಕೆ. ಅದಕ್ಕವರು ನಗುತ್ತಾ ಅದೇನೋಪ್ಪಾ ಬಗಲ್‌ನಾಗೆ ಚೀಲ ಹಾಕ್ಕೊಳ್ಳೋ ಕೆಟ್ನಾಲಜಿ ಅಲ್ವೇನೋ? ಅಂದಿದ್ರು. ಅಲ್ಲಿಗೆ information technology ಅಂದ್ರೆ "ಬಗಲಿನಾಗೆ ಚೀಲ' ಅಂತಾಯ್ತು. ಟೆಕ್ನಾಲಜಿ ಅನ್ನೋದು ಕೆಟ್ನಾಲಜಿ ಆಗಿತ್ತು.
ಈಗ ನಾನು ಹೇಳ ಹೊರಟಿರುವುದು ಏನಪ್ಪಾ ಅಂದ್ರೆ, ಮಾಹಿತಿ ಜಗತ್ತಿನಲ್ಲಿ ಕಾಣುವ ವಿಷಯಕ್ಕೂ ನಮ್ಮ ಸುತ್ತಲೂ ಇರುವ ಜಗತ್ತಿಗೂ ಅಷ್ಟೇನೂ ವ್ಯತ್ಯಾಸವಿಲ್ಲ ಅಂತ. ಸಿಂಪಲ್ ಆಗಿ ನಾಲ್ಕಾರು ವಿಷಯ ಅರ್ಥಮಾಡಿಕೊಳ್ಳೋಣ ಬನ್ನಿ.

ಜೀವನದ ಅಂಗಡಿ ಬಾಗಿಲು ಹಾಕಿದಂತೆ
ಚಿಕ್ಕದಾದ ಬದಲಿಗೆ ಅತೀ ಮುಖ್ಯವಾದ ವಿಚಾರದಿಂದಲೇ ಆರಂಭಿಸುವಾ. ಒಂದು computer ಎಂದೇ ಉದಾಹರಣೆ ತೆಗೆದುಕೊಂಡರೆ ಅಲ್ಲಿರುವ ನಾಲ್ಕು ವಿಚಾರಗಳು ಎಂದರೆ Power On, Sleep, Restart, Shut Down. ಮೊದಲಿಗೆ computer ಅನ್ನು ಆನ್ ಮಾಡಲೇಬೇಕು ಅಲ್ಲವೇ? ಇದು ಹುಟ್ಟು. ShutDown ಎಂದರೆ ಜೀವನದ ಅಂಗಡಿ ಬಾಗಿಲು ಹಾಕಿದಂತೆ. ಈ ಮಧ್ಯೆ Sleep ಎಂಬುದು ಜೀವನದ ಅನಿವಾರ್ಯ ಅಂಗ. ಬಾಲ್ಯದಲ್ಲಿ ಎದ್ದಿರುವುದೇ ಹಲವು ಗಂಟೆಗಳ ಕಾಲ. ವೃದ್ದಾಪ್ಯದಲ್ಲಿ ಮಲಗುವುದೇ ಹಲವು ಗಂಟೆಗಳ ಕಾಲ. ಇವೆರಡರ ನಡುವೆ ಮಿಕ್ಕ ಜೀವನದ ನಿದ್ದೆಯ mode ಅರ್ಥಾತ್ ಕೆಲವೊಮ್ಮೆ ಒಳ್ಳೆಯ ನಿದ್ದೆ, ಕೆಲವೊಮ್ಮೆ ಬಾರದ ನಿದ್ದೆ, ಕೆಲವೊಮ್ಮೆ ಸಾದಾ ನಿದ್ದೆ, ಹಲವೊಮ್ಮೆ ಸೀದುಹೋಗಿರುವ ನಿದ್ದೆ ಹೀಗೆ.

ನಮ್ಮಲ್ಲಿರುವ ಶಕ್ತಿಯನ್ನು ಪುನರುಜ್ಜೀವನಗೊಳಿಸೋದು
ಜೀವನದಲ್ಲಿ ಇವೆಲ್ಲಕ್ಕಿಂತ ಹೆಚ್ಚು ಬಳಕೆಯಾಗುವುದೇ Restart. ಸೋಲು- ಗೆಲುವು ಜೀವನದ ಅಂಗ ಅನ್ನೋದು ಹೊಸ ವಿಷಯವೇನಲ್ಲ. ಹಿಗ್ಗಿದಾಗ ಜೀವನವೆಲ್ಲಾ ಹೀಗೆ ಅಂದುಕೊಳ್ಳೋದು ಎಷ್ಟು ನಿಜವೋ, ಅಷ್ಟೇ ನಿಜ ಕುಗ್ಗಿದಾಗಲೂ ಆಗುತ್ತದೆ. ಆಗಬೇಕಿರುವುದೇ ಈ Restart. ಈ restart ಅನ್ನೋದು ಮತ್ತೊಮ್ಮೆ ಹುಟ್ಟಿ ಬರುವುದು ಅನ್ನುವುದಲ್ಲ, ಬದಲಿಗೆ ನಮ್ಮಲ್ಲಿರುವ ಶಕ್ತಿಯನ್ನು ಪುನರುಜ್ಜೀವನಗೊಳಿಸೋದು.

ಈ ಪುನರುಜ್ಜೀವನಕ್ಕೆ ನಾನಾ ಮುಖಗಳು ಎನ್ನಬಹುದು. ಕೆಲವೊಮ್ಮೆ ನಾವು ಮಾಡುವ ಕೆಲಸವನ್ನೇ ಸಂಪೂರ್ಣ ಬದಿಗಿರಿಸಿ ಮತ್ತೊಂದು ಕೆಲಸಕ್ಕೆ ಕೈಹಚ್ಚಬೇಕಾಗಬಹುದು. ಕೆಲವೊಮ್ಮೆ ಜೀವನದಲ್ಲಿ ವಿಪರೀತ ಬ್ಯುಸಿ ಅಂತಾಗಿ ನಾಲ್ಕು ದಿನ ರಜೆ ಹಾಕಿ ಎಲ್ಲೋ ಒಂದು ಹೋಗಿ ಬರಬೇಕು ಎನಿಸಿಬಹುದು. ಕೆಲವೊಮ್ಮೆ ಸುಮ್ಮನೆ ಏನೂ ಮಾಡದೆ ಕೂರುವಾ ಎನಿಸಬಹುದು. ನಿಮ್ಮ ಅನುಭವದ Restart ಹೇಳಿ ಆಯ್ತಾ?

srinath bhalle column our talk today is about technology

ಕಸಕ್ಕೆ ಹೋದರೆ ಅದು ಕಸದಬುಟ್ಟಿ ಅಷ್ಟೇ
ಮುಂದಿನ ಮಾತು ಕಸದಬುಟ್ಟಿಯ ಬಗ್ಗೆ. ಬೇಡದ್ದನ್ನು ಕಿತ್ತಿ ಒಗೆಯುವುದನ್ನು ಡಿಲೀಟ್ ಅಂತಾರೆ. ಹೀಗೆ ಡಿಲೀಟ್ ಆಗಿದ್ದು Recycle Binನಲ್ಲಿ ಕೂತಿರುತ್ತದೆ. ಕಾಗದದಲ್ಲಿ ಏನೋ ಕಥೆ ಬರೀಬೇಕು ಅಂತ ಕೂರುತ್ತೀರಾ. ಪ್ರತೀ ನಾಲ್ಕು ಸಾಲು ಬರೆದಾಗಲೂ ಯಾಕೋ ಸರಿ ಹೋಗುತ್ತಿಲ್ಲ ಅಂತ ಅದನ್ನು ಕಸದಬುಟ್ಟಿಗೆ ಹಾಕುತ್ತೀರಾ. ಅದು ಕಸಕ್ಕೆ ಹೋದರೆ ಅದು ಕಸದಬುಟ್ಟಿ ಅಷ್ಟೇ. ಆದರೆ ಕಸದಬುಟ್ಟಿ ಸೇರಿದ್ದನ್ನು ಹೆಕ್ಕಿ ಅದನ್ನು ಬಳಸಿದರೆ ಆಗ ಅದು Recycle Bin ಎನಿಸಿಕೊಳ್ಳುತ್ತದೆ. Computer ನಲ್ಲಿರುವ ರಿಸೈಕಲ್ ಹೇಗಪ್ಪಾ ಅಂದ್ರೆ ಡಿಲೀಟ್ ಮಾಡಿದ್ದು ಅಲ್ಲಿ ಕೂತಿರುತ್ತದೆ. ನಿಮಗೆ ಅದನ್ನು ತ್ಯಜಿಸುವುದು ಬೇಡ ಅನ್ನಿಸಿದರೆ ಮತ್ತೆ ಹೆಕ್ಕಿ ವಾಪಸ್ ತರಬಹುದು. ಬೇರೊಂದು ರೂಪ ಹೇಗೆ ಅನ್ನೋದು ಸದ್ಯಕ್ಕೆ ಬೇಡಾ ಏಕೆಂದರೆ, ಇದೊಂದು ರೀತಿ ಆತ್ಮದಂತೆ.

ಪಾತ್ರೆ ಸರಿಯಾಗಿ ತೊಳೆಯದ ದ್ರೌಪದಿಯ ಸನ್ನಿವೇಶ
ನಿಮಗೆ ಏಳು ಜನ್ಮ ಅಂತ ಅಲಾಟ್ ಆಗಿದ್ದು, ಇದೇ ಮೊದಲ ಜನ್ಮ ಎಂದರೆ ಡಿಲೀಟ್ ಆದ ನಿಮ್ಮ ದೇಹದಿಂದ ಆತ್ಮವನ್ನು ಹೆಕ್ಕಿ ಮರುಬಳಕೆ ಮಾಡ್ತಾನಂತೆ ಆ ದೇವಾ. ನೀವು ಬಿನ್‌ಗೆ ಹಾಕಿದ ಪದಾರ್ಥಗಳೂ ಸ್ವಚ್ಛವಾದ ಮೇಲೆಯೇ ರಸವಾದಂತೆ, ಆತ್ಮ ಕೂಡ. ಮೊದಲ ಸ್ವಚ್ಛವಾಗಿ ಆಮೇಲೆ ಇನ್ನೊಂದು ಜೀವಕ್ಕೆ ಎಂಟ್ರಿ ಕೊಡುವುದು. ಪಾತ್ರೆ ಸರಿಯಾಗಿ ತೊಳೆಯದ ದ್ರೌಪದಿಯ ಸನ್ನಿವೇಶ ಮರುಕಳಿಸಿದರೆ, ಆ ಮರುಬಳಕೆಯಾದ ಆತ್ಮಕ್ಕೆ ಹಿಂದಿನ ವಿಷಯ ಕೊಂಚ ನೆನಪಿರುತ್ತದೆ. ಇಂಥಾ ಕೇಸುಗಳಲ್ಲೇ, ಐದು ವರ್ಷದ ಬಾಲಕ ನಲವತ್ತರ ಮಹಿಳೆಯನ್ನು ಹುಡುಕಿಕೊಂಡು ಹೋಗಿ ನಾನೇ ನಿನ್ನ ಗಂಡ ಅನ್ನೋದು. ಇಂತಿಪ್ಪಾ ರಿಸೈಕಲ್ ಬಿನ್ ವಿಷಯ.

ಕಾಲು ತುಳಿದಿದ್ದೀಯಾ, ಕ್ಷಮೆ ಕೇಳುವೆಯಾ?
ಎಷ್ಟೋ ಸಾರಿ ನೀವು ಏನೋ ಟೈಪ್ ಮಾಡುತ್ತಾ ಇರುತ್ತೀರಾ ಅಂದುಕೊಳ್ಳಿ. ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ ಅಂತ save ಬಟನ್ ಒತ್ತದೇ ಹೋದರೆ ಏನೂ ಆಗಬಹುದು. ಏನೂ save ಆಗದೇ ಹೋಗಬಹುದು ಅಥವಾ ಎಲ್ಲಿಯವರೆಗೆ save ಮಾಡಿರುತ್ತೀರೋ ಅಲ್ಲಿಯವರೆಗೆ ಮಾತ್ರ ಉಳಿಯುತ್ತದೆ. ಮತ್ತೊಂದು ಸನ್ನಿವೇಶದಲ್ಲಿ ಹೇಗೆ ಅಂದ್ರೆ, file ಅನ್ನು ಕ್ಲೋಸ್ ಮಾಡಲು ಹೋದಾಗ ಇನ್ನೂ save ಮಾಡಿಲ್ಲ, ಹಾಗೂ ಎಕ್ಸಿಟ್ ಆಗಲು ಇಚ್ಛಿಸುವಿರಾ? ಅಂತ ನೆನಪು ಮಾಡುತ್ತದೆ. ಸಿನಿಮಾ ಮಂದಿರದಲ್ಲಿ ಕತ್ತಲಲ್ಲಿ ನಡೆಯುವಾಗ ಯಾರದ್ದೋ ಕಾಲು ತುಳಿದಾಗ ನಿಮ್ಮ ಅಂತರಾತ್ಮ ಕೇಳುತ್ತೆ "ಕಾಲು ತುಳಿದಿದ್ದೀಯಾ, ಕ್ಷಮೆ ಕೇಳುವೆಯಾ? ಹಾಗೇ ಹೋಗುವೆಯಾ?' ಅಂತ. ನಿಮಗೊಂದು ಅವಕಾಶ ನೀಡುತ್ತದೆ ಸನ್ನಿವೇಶ.

ತಪಸ್ಸು ಮಾಡುವಾಗ ಮೇನಕೆ ಬಂದಳು ಅಂದುಕೊಳ್ಳಿ
ಈ ರೀತಿ ಎಕ್ಸಿಟ್ ವಿಷಯ ಬಂದಾಗ ನಾನು ಹೇಳಿದ್ದು ಸಮರ್ಪಕವಾಗಲಿಲ್ಲ ಅನ್ನಿಸಿದರೆ ಹೀಗೂ ಕೇಳಬಹುದು. ನಿಮ್ಮ ಪಾಡಿಗೆ ನೀವು ತಪಸ್ಸು ಮಾಡುವಾಗ ಮೇನಕೆ ಬಂದಳು ಅಂದುಕೊಳ್ಳಿ. ಮೋಹ ಉಂಟಾಯಿತು, ಭೋಗ ಮನದಲ್ಲಿ ಮನೆ ಮಾಡಿತು, ಮಗುವೂ ಆಯ್ತು ಅಂದ ಮೇಲೆ, ಜವಾಬ್ದಾರಿ ನಿರ್ವಹಿಸುತ್ತೀರಾ? ಬೈ ಎನ್ನುವಿರಾ? ಎಂಬುದು. ಹೊರಡುವ ಮುನ್ನ ಪೂರ್ಣಗೊಳ್ಳದ ಜವಾಬ್ದಾರಿಯ ಬಗ್ಗೆ ಒಂದು ಎಚ್ಚರಿಕೆ ನೀಡುವ ಸನ್ನಿವೇಶವೇ ಇದೂ ಸಹ.

ನಿಮ್ಮ ಕೀಬೋರ್ಡ್ ಯಾವ ಭಾಷೆಯನ್ನು ಬೆಂಬಲಿಸುತ್ತದೆ
ಇಮೇಲ್ ಎಂದರೆ ಅಂದಿನ postcard ನಂತೆ. ಕಾರ್ಡು ತಂದು, ಅಕ್ಷರ ಮೂಡಿಸಿ ಡಬ್ಬಕ್ಕೆ ಹಾಕಿದ ಮೇಲೆ, ಅದು ತಲುಪುವವರಿಗೆ ತಲುಪುವ ತನಕ, ತಲುಪಿದಾಗ, ತಲುಪಿದ ಮೇಲೆಯೂ ಯಾರು ಬೇಕಾದರೂ ಓದಬಹುದು. ಮೊದಲಿಗೆ ಓದುವುದು ಯಾರು? ಪೋಸ್ಟ್ ಡಬ್ಬ ಅನ್ನೋದು ಕೆಟ್ಟ ಜೋಕ್. ಮೊದಲಿಗೆ ಕಾಗದ ತೆರೆಯಿರಿ ಅರ್ಥಾತ್ "New' ಅಂತ ಬಹುಶಃ ಇರುವ ಬಟನ್ ಅಥವಾ ಐಕಾನ್ ಮೇಲೆ ಒತ್ತಿ. ನಿಮ್ಮ ಕೀಬೋರ್ಡ್ ಯಾವ ಭಾಷೆಯನ್ನೂ ಬೆಂಬಲಿಸುತ್ತದೋ ಅದನ್ನೇ ಬಳಸಿ ಬರೆಯಿರಿ, ಆಮೇಲೆ Send ಅರ್ಥಾತ್ ಡಬ್ಬಕ್ಕೆ ಹಾಕಿ. ಬೇರಾರೂ ಓದಬಾರದು ಎಂದರೆ Inland letter ನಂತೆ ಲಾಕ್ ಮಾಡಬಹುದು. ಇದೊಂದು ರೀತಿ encryption ಅಂದುಕೊಳ್ಳಿ. ಆದರೆ ಒಂದು ಲೆವೆಲ್ ತನಕ ಮಾತ್ರ. ತಂತಿಯನ್ನು ಯಾರೂ tamper ಮಾಡಬಹುದು.

ಹಲವು ಬಾಣಗಳ ಶಕ್ತಿಯು ಹುದುಗಿರುತ್ತದೆ
Encryption ಅಂದರೆ ಏನು? ಟಿವಿಯಲ್ಲಿ ಮಹಾಭಾರತ ನೋಡಿರುತ್ತೀರಿ. ಒಂದೆಡೆ ಅರ್ಜುನ, ಮತ್ತೊಂದೆಡೆ ಕರ್ಣ ಅಂದುಕೊಳ್ಳಿ. Warmup ಎನ್ನುವ ಹಾಗೆ ಒಂದಷ್ಟು ಬಾಣಗಳನ್ನು ಓಡಾಡಿಸುತ್ತಾರೆ. ಇವನ ಬಾಣ ಅವನು ಚಿತ್ ಮಾಡಿದರೆ, ಅವನ ಬಾಣ ಇವನು ಚಿತ್ ಮಾಡುತ್ತಾನೆ. ಹಲವು ಬಾಣಗಳ ಶಕ್ತಿಯು ಹುದುಗಿರುತ್ತದೆ. ಅದನ್ನು ಮಂತ್ರೋಚ್ಚಾರಣೆ ಮಾಡಿದರೆ ಮಾತ್ರ ಅದು ವಿಶೇಷ ಅಸ್ತ್ರವಾಗುತ್ತದೆ. ಇಲ್ಲವಾದರೆ ಅದು ಸಾಧಾರಣ ಬಾಣವಷ್ಟೇ. ಮಂತ್ರೋಚ್ಚಾರಣೆ ಎಂಬುದು ಪಾಸ್ವರ್ಡ್. ಬಾಣದ ಶಕ್ತಿಯನ್ನು unlock ಮಾಡಬೇಕು ಎಂದರೆ ಅದನ್ನು ಮಂತ್ರೋಚ್ಚಾರಣೆ ಮಾಡಿ ಪ್ರಯೋಗ ಮಾಡಬೇಕು. ಇದು ಅತೀ ಅನ್ನಿಸಿದರೆ ಆಲಿಬಾಬ ಕಥೆಯಲ್ಲಿನ ಗುಹೆಯ ಬಾಗಿಲು password protected ಅಂತ ನಿಮಗೆ ಗೊತ್ತು ಅಲ್ಲವೇ? ನಿಮಗೆ ಅದರ ಪಾಸ್ವರ್ಡ್ ಗೊತ್ತು ಅಲ್ಲವೇ?

ಗ್ರಂಥವನ್ನು ಇಟ್ಟುಕೊಂಡು ಒಂದೂ ಪುಟವನ್ನು ತೆರೆಯದಿರುವುದು
ಹಲವು ವಿಷಯಗಳನ್ನು ಚಿಕ್ಕದಾಗಿ ಹೇಳಿಬಿಡುವಾ. Install ಎಂದರೆ ಪ್ರತಿಷ್ಠಾಪನೆ, Uninstall ಎಂದರೆ ವಿಸರ್ಜನೆ ಅಷ್ಟೇ. ಬರೀ ಇನ್‌ಸ್ಟಾಲ್ ಮಾಡಿ ಬಳಸದೇ ಇರುವುದು ಎಂದರೆ ಮನೆಯಲ್ಲಿ ಗ್ರಂಥವನ್ನು ಇಟ್ಟುಕೊಂಡು ಒಂದೂ ಪುಟವನ್ನು ತೆರೆಯದೆ ಇರುವುದು. ಆವಾಹನೆ ಎಂದರೆ ಅಕೌಂಟ್ ತೆರೆಯುವುದು. ಅಂದ ಮಾತ್ರಕ್ಕೆ ಬಳಸಿದಂತೆ ಆಗುವುದಿಲ್ಲ. ಅಕೌಂಟ್ ತೆರೆದು ಸುಮ್ಮನಿರುವುದು ಎಂದರೆ ಗ್ರಂಥವನ್ನು ಇಟ್ಟ ಜಾಗದಿಂದ ಕೈಗೆತ್ತಿಕೊಂಡು, ಧೂಳು ಹೊಡೆದು, ಮತ್ತೆ ಅಲ್ಲೇ ಇರಿಸುವುದು ಅಂತ.

firewall ಅನ್ನು ಲಕ್ಷ್ಮಣನೂ ಸೀತೆಗೆ ಹಾಕಿದ್ದ
Firewall ಅಂದ್ರೇನು? ನಮ್ಮ privacy ನಮಗೆ, ಸರಹದ್ದನ್ನು ದಾಟಿ ಬರಬಾರದು ಎಂದು ನಿರ್ಮಿಸಿಕೊಂಡ ಗೋಡೆ ಎಂದುಕೊಳ್ಳಿ. ಲಂಕೆಗೆ firewall ಎಂದರೆ ಲಂಕಿಣಿ. ಇಂಥದ್ದೇ ಒಂದು firewall ಅನ್ನು ಲಕ್ಷ್ಮಣನೂ ಸೀತೆಗೆ ಹಾಕಿದ್ದ. ವಿಷಯ ಇಷ್ಟೇ, ಗಂಡಾಗಲಿ, ಹೆಣ್ಣಾಗಲಿ, ಅವರವರ ಕ್ಷೇಮಕ್ಕಾಗಿ, ಸಾಮಾಜಿಕ ತಾಣದಲ್ಲಿ ತಮ್ಮದೇ ಒಂದು firewall ಕಟ್ಟಿಕೊಳ್ಳಬೇಕು. ಮಾಹಿತಿ ಕಳ್ಳರಿದ್ದಾರೆ ಎಚ್ಚರಿಕೆ. ಸದ್ಯಕ್ಕೆ ಇಲ್ಲಿಗೆ ನಿಲ್ಲಿಸೋಣ. ನೀವೂ ಒಂದಿಷ್ಟು ಹೇಳುವಿರಾ ಅಲ್ಲವೇ?

English summary
Srinath Bhalle Column: Let's learn about Information Technology and life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X