ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಕೆಲವಂ ಸುತ್ತಿಡುವ, ಕೆಲವಂ ಕಟ್ಟಿಡುವ, ಸುತ್ತಿ ಕಟ್ಟಿಟ್ಟ ಹಲವಂ ತೆರೆದಿಡುವ

By ಶ್ರೀನಾಥ್ ಭಲ್ಲೆ
|
Google Oneindia Kannada News

ಬಹುಶಃ ಸೈನಿಕರು ಹನುಮಂತನನ್ನು ಬಂಧನ ಮಾಡಿ ರಾವಣನ ಮುಂದೆ ತಂದು ನಿಲ್ಲಿಸಿದಾಗ, ರಾವಣನು ಉದ್ಧಟತನದಿಂದ "ನಾನು ಮಹಾರಾಜ ನನ್ನ ಮುಂದೆ ಈ ಕಪಿ ಏನು ಬಾಲ ಬಿಚ್ಚಬಹುದು' ಎಂಬಂತೆ ನುಡಿದಿರಬಹುದು. ಆಸನವನ್ನೂ ನೀಡದಿದ್ದಾಗ, ಮಹಾಪರಾಕ್ರಮಿ ಹನುಮ ತನ್ನ ಬಾಲವನ್ನೇ ನೀಳವಾಗಿ ಬೆಳೆಸಿ, ಅದನ್ನು ಸುತ್ತಿ ರಾವಣನಿಗಿಂತ ಮೇಲೆ ಕೂತಿದ್ದು ಒಂದು ಸುಂದರವಾದ ಪ್ರಸಂಗ.

ಇದಾದ ನಂತರ ದೂತನಾಗಿ ಬಂದ ಅವನ ಮಾತನ್ನು ಒಪ್ಪದೇ, ಹನುಮಂತನ ಮೇಲೆ ಸಿಟ್ಟಾಗಿ, ಬಾಲಕ್ಕೆ ಬೆಂಕಿ ಹಚ್ಚುವಂತೆ ಭಟರಿಗೆ ಆಜ್ಞಾಪಿಸಿದಾಗ, ಹನುಮನು ಕೀಟಲೆಯಿಂದ ಬಾಲವನ್ನು ಬೆಳೆಸುತ್ತಲೇ ಸಾಗಿದ್ದನಂತೆ. ಕೀಟಲೆ ಎಂದರೆ ಬಾಲ್ಯ, ಬಾಲ ಬಿಚ್ಚುವುದು ಸರಿ ಅನ್ನಿಸುತ್ತದೆ. ಇರಲಿ, ಎಷ್ಟು ಬಟ್ಟೆ ಸುತ್ತಿದರೂ ಸಾಲದಂತಾಗುತ್ತಿದ್ದಂತೆ, ರೋಸಿದ ರಾವಣ ಸುತ್ತಿದ್ದಷ್ಟಕ್ಕೇ ಎಣ್ಣೆ ಸುರಿದು ಬೆಂಕಿ ಹಚ್ಚುವಂತೆ ಆಜ್ಞಾಪಿಸಿದ, ಎನ್ನುತ್ತದೆ ಪುರಾಣ ಕಥೆ. ಅಲ್ಲಿಂದ ಹಾರುವಾಗ ಉದ್ದನೆಯ ಬಾಲವನ್ನು ಸುತ್ತಿ ಗಿಡ್ಡ ಮಾಡಿಕೊಂಡು ಬೆಂಕಿಯನ್ನು ಸಮುದ್ರದಲ್ಲಿ ನಂದಿಸಿದ ಎನ್ನಲಾಗಿದೆ. ವಿಷಯ ಇಷ್ಟೇ, ಯಾವಾಗ ಸುತ್ತಬೇಕು, ಯಾವಾಗ ಸುತ್ತಿದ್ದನ್ನು ಬಿಚ್ಚಿಡಬೇಕು ಎಂಬುದು ಅರಿವಿರಬೇಕು ಅಂತ.

ಸಹಿ ಹಾಕಲಾದರೂ ಕಡತದ ಕಟ್ಟನ್ನು ಬಿಚ್ಚಿಡಬೇಕು
ಸರಕಾರಿ ಕಚೇರಿಗಳಲ್ಲಿ ಒಂದು ಕಾಲಕ್ಕೆ ಕಡತಗಳ ಹೊಟ್ಟೆಯನ್ನು ಕಟ್ಟುತ್ತಿದ್ದುದು ಉಂಟು. ಇಂದು ಬಹುಶಃ ಎಲ್ಲವೂ ಕಂಪ್ಯೂಟರ್ ಫೈಲುಗಳು ಅಂದುಕೊಳ್ಳುತ್ತೇನೆ. ಒಂದು ಟೇಬಲ್ ಮೇಲಿಂದ ಮತ್ತೊಂದು ಟೇಬಲ್‌ಗೆ ಒಂದು ಫೈಲ್ ರವಾನೆ ಆಗಬೇಕು ಎಂದರೆ, ಈ ಟೇಬಲ್‌ನವರು ಕನಿಷ್ಠ ಪಕ್ಷ ಸಹಿ ಹಾಕಲಾದರೂ ಕಡತದ ಕಟ್ಟನ್ನು ಬಿಚ್ಚಿಡಬೇಕು. ಆಮೇಲೆ ಸುತ್ತಿಡಲು ಮತ್ತೆ ಅದರ ಹೊಟ್ಟೆ ಕಟ್ಟಿಡಬೇಕು. ಒಮ್ಮೆ ಆ ಕಡತದ ಕೆಲಸ ಮುಗೀತು ಎಂದಾಗ ರೆಕಾರ್ಡ್ಸ್ ರೂಮಿಗೆ ರವಾನೆಯಾದ ಮೇಲೆ, ಬೇರಾವ ತನಿಖೆಗೂ ಒಳಪಡದೇ ಹೋದರೆ, ಬಹುಶಃ ಅವು ಎಂದೆಂದಿಗೂ ಕಟ್ಟಿಕೊಂಡೇ ಕೂತಿರುತ್ತದೆ ಎಂದುಕೊಳ್ಳುತ್ತೇನೆ.

srinath bhalle column; opening of wrapped items

ಬಳಸಿದ ನಂತರದ ಕಟ್ಟುವಿಕೆಯಲ್ಲಿ ಸಾವಧಾನ ಅತೀ ಮುಖ್ಯ
ಇದೇ ತತ್ವ ಗ್ರಂಥಗಳಿಗೂ ಸಲ್ಲುತ್ತದೆ. ಇದು ಅಂದಿನ ದಿನಗಳು ಅನ್ನಿ. ಬಳಕೆಯಾಗದೇ ಇರುವಾಗ ಒಂದರ ನಂತರದ ಗ್ರಂಥದ ಹಾಳೆಗಳನ್ನು ಕಟ್ಟಿಟ್ಟು, ಬಳಕೆಯಾಗುವಾಗ ಕಟ್ಟನ್ನು ಬಿಚ್ಚಿಡಬೇಕು. ಬಳಸುವಾಗ ಬಿಡಿಸುವಿಕೆ, ಬಳಸಿದ ನಂತರದ ಕಟ್ಟುವಿಕೆಯಲ್ಲಿ ಸಾವಧಾನ ಅತೀ ಮುಖ್ಯ. ಇಲ್ಲವಾದರೆ ಗೊಂದಲವೇ ಸರಿ.

ಈ ಸುತ್ತುವಿಕೆ, ಬಿಡಿಸುವಿಕೆ ಎಂಬ ತೊಂದರೆ ಕಂಪ್ಯೂಟರ್ ಬಂದ ಮೇಲೆ ಇಲ್ಲವಾಯಿತು ಎನ್ನುವ ಹಾಗೂ ಇಲ್ಲ. ಆರಂಭದ ದಿನಗಳಲ್ಲಿ Punched Cards ಬಳಕೆ ಇತ್ತು. ಕಂಪ್ಯೂಟರ್ ಓದಬಲ್ಲ ಕಾರ್ಡುಗಳ ಮೇಲೆ ಒತ್ತುಗಳು ಇರುತ್ತಿದ್ದವು. ಇವನ್ನು ಬ್ರೈಲಿ ಲಿಪಿಗೂ ಹೋಲಿಸಬಹುದು. ಇವನ್ನು ಒಂದರ ನಂತರ ಮತ್ತೊಂದು ಎಂಬಂತೆ, ಗ್ರಂಥದ ಹಾಳೆಗಳಂತೆ ಜೋಡಿಸಿ ಬಿಗಿಯಲಾಗುತ್ತಿತ್ತಂತೆ. ಜೋಡಿಸುವಾಗ ಆ ಕಡೆ ಈ ಕಡೆ ಅಂತಾದರೆ ಅಥವಾ ಕೆಳಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾದರೆ ಗೊಂದಲವೋ ಗೊಂದಲ ಎಂಬಂಥ ದಿನಗಳು.

ಮೋಸವಾದ ಮೇಲೆ ದಕ್ಕಿದ್ದು 12 ವರುಷಗಳ ವನವಾಸ
ದುರ್ಯೋಧನ ಮತ್ತು ಶಕುನಿಯರ ಜೋಡಿ ದುರ್ಬುದ್ಧಿಯಿಂದಾಗಿ ಪಾಂಡವರಿಗೆ ಮೋಸವಾದ ಕಥೆ ನಿಮ್ಮೆಲ್ಲರಿಗೂ ಗೊತ್ತು. ಮೋಸವಾದ ಮೇಲೆ ದಕ್ಕಿದ್ದು 12 ವರುಷಗಳ ವನವಾಸ, ಒಂದು ವರ್ಷ ಅಜ್ಞಾತವಾಸ. ಹನ್ನೆರಡು ವರುಷಗಳಾದ ಮೇಲೆ ಅಜ್ಞಾತವಾಸಕ್ಕೆ ಹೊರಡುವ ಮುನ್ನ ತಮ್ಮ ಆಯುಧಗಳನ್ನು ಬಿಗಿದು ಕಟ್ಟಿಟ್ಟು, ಬನ್ನಿ ವೃಕ್ಷದ ಮೇಲೆ ಇಟ್ಟರು. ಒಂದು ವರ್ಷವಾದ ಮೇಲೆ, ಆರಾಮವಾಗಿ ಹೋಗಿ ತರಲಿಲ್ಲ ಬದಲಿಗೆ ಉತ್ತರಕುಮಾರ ರಣರಂಗದಿಂದ ಪಲಾಯನ ಮಾಡಲು, ಬೃಹನ್ನಳೆಯು ಅವನನ್ನು ಬನ್ನಿ ವೃಕ್ಷಕ್ಕೆ ಕರೆದೊಯ್ದು ಅಲ್ಲಿಂದ ಆಯುಧಗಳನ್ನು ಕೆಳಕ್ಕೆ ಇಳಿಸಿ, ಕಟ್ಟಿದ್ದ ಕಟ್ಟನ್ನು ಬಿಡಿಸಿ, ಕೌರವರನ್ನು ಎದುರಿಸಿದ್ದು ಮುಂದಿನ ಕಥೆ.

ಈ ಬನ್ನಿ ವೃಕ್ಷದ ವಿಷಯ ಬಂದ ಮೇಲೆ ವಿಜಯದಶಮಿ ಮನಸ್ಸಿಗೆ ಬಾರದೇ ಇದ್ದರೆ ಹೇಗೆ? ಅರ್ಜುನ ಧನುರ್ಧಾರಿಯಾಗಿ ಗೋಗ್ರಹಣ ಮಾಡಿದವರನ್ನು ಎದುರಿಸಿದ್ದು ವಿಜಯದಶಮಿಯ ದಿನವೇ ತಾನೇ?. ನವರಾತ್ರಿಯ ಕಡೆಯ ದಿನವೇ ವಿಜಯದಶಮಿ. ಈ ಕಟ್ಟುವಿಕೆ ಮತ್ತು ಬಿಡಿಸುವಿಕೆ ಎಂಬುದು ನವರಾತ್ರಿಯ ವಿಷಯದಲ್ಲಿ ಬಹಳಷ್ಟು ಹೊಂದುತ್ತದೆ. ಈ ಬರಹ ಬರೆಯಲು ಪ್ರೇರಣೆ ನವರಾತ್ರಿ ಎಂದರೂ ತಪ್ಪೇನಲ್ಲ.

ಸಂಭ್ರಮಾಚರಣೆಯ ನಂತರ ಪುನಃ ಅಟ್ಟಕ್ಕೆ ಸೇರುತ್ತದೆ
ನವರಾತ್ರಿಯನ್ನು ಆಚರಿಸುವ ಸಂಪ್ರದಾಯದಲ್ಲಿ, ಸಾಮಾನ್ಯವಾಗಿ ಪಕ್ಷಮಾಸದ ಕೊನೆಯಲ್ಲಿ ಅಟ್ಟದ ಮೇಲಿನಿಂದ ಗೊಂಬೆಗಳು ಕೆಳಕ್ಕೆ ಇಳಿಯುತ್ತದೆ. ಹತ್ತು ದಿನಗಳ ಸಂಭ್ರಮಾಚರಣೆಯ ನಂತರ ಪುನಃ ಅಟ್ಟಕ್ಕೆ ಸೇರುತ್ತದೆ. ಇಳಿದ ಮೇಲೆ ಗೊಂಬೆಗಳಿಗೆ ಸುತ್ತಿರುವ ಕಾಗದ ಅಥವಾ bubble wrap ಎಂಬ ಪ್ಲಾಸ್ಟಿಕ್ ಬಿಡಿಸಿಕೊಳ್ಳುತ್ತದೆ. ಹತ್ತು ದಿನಗಳಾದ ಮೇಲೆ ಒಂದು ದಿನ ಮತ್ತೆ ಹೊಸ ಕಾಗದವೋ ಅಥವಾ ಪ್ಲಾಸ್ಟಿಕ್ ಅನ್ನು ಕಟ್ಟಿಕೊಂಡು ಮುಂದಿನ ಮುನ್ನೂರ ಐವತ್ತು ದಿನಗಳು ಮಲಗುತ್ತವೆ. ಇದರಂತೆಯೇ ಪಾಂಡವರ ಆಯುಧಗಳು ಒಂದು ವರ್ಷಗಳ ಕಾಲ ಅರ್ಥಾತ್ ಏಕಾದಶಿಯಿಂದ ದಶಮಿಯವರೆಗೆ ಒಂದು ವರ್ಷ ಸುತ್ತಿಕೊಂಡು ಕೂತು, ವಿಜಯದಶಮಿಯಂದು ತನ್ನ ಕಟ್ಟನ್ನು ಕಳಚಿಕೊಂಡು ಮುಂದೆ ಅವರವರ ಶಕ್ತಿ ಕುಂದಿದಂತೆ ಮತ್ತೆ ಪ್ಯಾಕ್ ಮಾಡಿಕೊಂಡು ಸ್ವಸ್ಥಾನಕ್ಕೆ ಸೇರಿತು ಎನ್ನಬಹುದು.

ಭೀಮ- ದ್ರೌಪದಿಯರಿಂದ ಶುರುವಾಗಿ ಅವರಿಂದಲೇ ಮುಗಿಯಿತು
ಪಾಂಡವರ ಮಾತು ಬಂದಾಗ ದ್ರೌಪದಿಯ ಬಗ್ಗೆ ಹೇಳದೇ ಇದ್ದರೆ ಹೇಗೆ? ಮೊದಲಿಗೆ ಗೋಗ್ರಹಣವಾಗಲೂ ದ್ರೌಪದಿಯೇ ಕಾರಣ ಅಲ್ಲವೇ? ಕೀಚಕ ವಧೆಯ ವಿಷಯ ಸೀದಾ ಹಸ್ತಿನಾಪುರಕ್ಕೆ ತಲುಪಿದಾಗ, ಈ ಕೆಲಸ ಬಲಭೀಮನದ್ದೇ ಎಂದು ತಿಳಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಇರಲಿ, ದುಶ್ಶಾಸನನು ದ್ರೌಪದಿ ಸುತ್ತಿದ್ದ ಮುಡಿಯನ್ನು ಹಿಡಿದು ಎಳೆದಾಗ ಅದು ಬಿಚ್ಚಿಕೊಂಡಿತು. ಅವನದ್ದೇ ಎದೆಯ ರಕ್ತವನ್ನು ತಲೆಗೆ ಸವರಿಕೊಳ್ಳುವ ತನಕ ಆ ಬಿಚ್ಚಿದ ಮುಡಿಯನ್ನು ಸುತ್ತಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದನ್ನು ಪೂರೈಸಿದ್ದು ಬಲಭೀಮ. ಹೆಚ್ಚುಕಮ್ಮಿ ಕಟ್ಟಿಕೊಳ್ಳುವುದು ಮತ್ತು ಬಿಡಿಸಿಕೊಳ್ಳುವುದು ಭೀಮ- ದ್ರೌಪದಿಯರಿಂದ ಶುರುವಾಗಿ ಅವರಿಂದಲೇ ಮುಗಿಯಿತೇ?

ದ್ರೌಪದಿಯ ಮುಡಿಯ ವಿಚಾರದ ಬಗ್ಗೆ ಹೇಳುವಾಗಲೆಲ್ಲಾ ಚಾಣಕ್ಯರ ವಿಷಯ ನೆನಪಾಗದೇ ಇರಲು ಸಾಧ್ಯವಿಲ್ಲ. ಧನಾನಂದನ ಅಹಂಕಾರ ಮುರಿಯುವಾ ತನಕ, ಧನಾನಂದನ ಸಾಮ್ರಾಜ್ಯವನ್ನು ನಿರ್ನಾಮವಾಗುವ ತನಕ ಬಿಚ್ಚಿದ ಶಿಖೆಯನ್ನು ಕಟ್ಟುವುದಿಲ್ಲ ಎಂದು ಶಪಥ ಮಾಡಿದ ಚಾಣಕ್ಯರ ಕಥೆ ಕಲಿಯುಗದ ಅದ್ಭುತ.

ರಂಗೋಲಿ ಹಾಕುವ ಮುನ್ನ ಬಿಚ್ಚಿದ್ದ ಹಾಸಿಗೆಗಳು ಸುತ್ತಿಕೊಳ್ಳಬೇಕು
ದ್ವಾಪರದಿಂದ ಸೀದಾ ಕಲಿಯುಗದ ಶ್ರೇಷ್ಠ ಮಧ್ಯಮವರ್ಗಕ್ಕೆ ಬರೋಣ. ಇಂದಿನ ಮಧ್ಯಮ ವರ್ಗವಲ್ಲ ಬದಲಿಗೆ ಅಂದಿನ ಮಧ್ಯಮವರ್ಗ. ರಾತ್ರಿ ಊಟವಾದ ಮೇಲೆ ನೆಲ ಸಾರಿಸಿ, ಒಣಗಿದ ಬಟ್ಟೆಯಿಂದ ಒರೆಸಿ ಅದು ಆರಿದ ಮೇಲೆ ಸುತ್ತಿಟ್ಟ ಹಾಸಿಗೆಗಳು ಮಲಗುತ್ತವೆ. ಇದಾದ ಮೇಲೆ ಹಗಲಿನಲ್ಲಿ ಮುಂಬಾಗಿಲು ತೆರೆದು ಬಾಗಿಲಿಗೆ ನೀರು ಹಾಕಿ, ರಂಗೋಲಿ ಹಾಕುವ ಮುನ್ನ ಬಿಚ್ಚಿದ್ದ ಹಾಸಿಗೆಗಳು ಸುತ್ತಿಕೊಳ್ಳಬೇಕು. ಒಂದೋ ಎದ್ದೇಳಬೇಕು ಅಥವಾ ಒಳಗಿನ ರೂಮಿನಲ್ಲಿ ಹೋಗಿ ಮಲಗಿಕೊಳ್ಳಬೇಕು. ಈ ಸುತ್ತಿಕೊಳ್ಳೋದು ಮತ್ತು ಬಿಡಿಸಿಕೊಳ್ಳುವುದು ಒಂದು ರೀತಿ ನಿತ್ಯ ಬೊಂಬೆ ಹಬ್ಬದಂತೆ.

ಮದುವೆ ಸಂದರ್ಭದಲ್ಲಿ ಹೊಸ ಹಾಸಿಗೆಯನ್ನು ಕೊಡುವ ಪದ್ಧತಿ ಇರುತ್ತದೆ. ಆ ಹಾಸಿಗೆಗಳು ಸುತ್ತಿಕೊಂಡೂ ಇರುತ್ತದೆ ಜೊತೆಗೆ ಹಗ್ಗದಿಂದ ಬಿಗಿದುಕೊಂಡೂ ಇರುತ್ತದೆ. ತನ್ನ ಒಳಪದರವನ್ನು ಕೆಂಪು ಚಟ್ನಿಯಿಂದ ಸವರಿಸಿಕೊಂಡು, ಆಲೂಗಡ್ಡೆ ಪಲ್ಯವನ್ನು ಒಡಲಲ್ಲಿ ತುಂಬಿಕೊಂಡ ಮಸಾಲೆದೋಸೆ ಸುತ್ತಿಕೊಂಡಿರುತ್ತದೆ. ಸೊಂಟಕ್ಕೆ ಬಿಗಿವ ಬೆಲ್ಟು ಸುತ್ತಿಕೊಂಡು, ಕಟ್ಟಿ ಹಾಕುತ್ತದೆ. ಪಂಜಾಬಿಗಳ ಟರ್ಬನ್ ಕೂಡಾ ಹೀಗೆಯೇ. ಬಿಚ್ಚಿಕೊಂಡ ಶೂಲೇಸ್ ಅನ್ನು ಕಟ್ಟುವುದೇ ಅರಿಯದ ಸನ್ನಿವೇಶವೇ ಒಂದು ಸಿನಿಮಾದ ಪ್ರಮುಖ ದೃಶ್ಯಗಳಲ್ಲಿ ಒಂದಾಗಿತ್ತು.

ಸುರುಳಿ ಸುತ್ತಿಕೊಂಡು ಮಲಗಿದ್ದ ನೆನಪುಗಳ ರೀಲು ಬಿಚ್ಚಿಕೊಂಡಾಗ
ಮೆದುಳಿನ ಪದರಗಳಲ್ಲಿ ಸಾಕಷ್ಟು ವಿಚಾರಗಳು ಒತ್ತೊತ್ತಾಗಿ ಕೂತಿರುತ್ತದೆ ಎಂಬುದು ನೀವೂ ಬಲ್ಲಿರಿ. ಪದರಗಳು ಹೆಚ್ಚು ಇದ್ದಷ್ಟೂ ಬುದ್ದಿವಂತಿಕೆ ಹೆಚ್ಚು ಅಂತಲ್ಲ ಬದಲಿಗೆ ಬುದ್ದಿವಂತಿಕೆ ಹೆಚ್ಚಿದ್ದರೆ ಪದರಗಳು ಹೆಚ್ಚು. ಕಲಿಕೆಗಳು ಹೆಚ್ಚಿದಂತೆ ಅರ್ಥಾತ್ ಸೂಕ್ತವಾಗಿ ಮೆದುಳನ್ನು ಬಳಸಿದಷ್ಟೂ ಈ ಪದರಗಳು ಹೆಚ್ಚುತ್ತದೆ. ಅಲ್ಲಿರುವ ಎಲ್ಲಾ ವಿಷಯಗಳೂ ಸದಾ ಮೆದುಳಿನ ಮೇಲ್ಭಾಗದಲ್ಲೇ ಕೂತಿರುವುದಿಲ್ಲ ಬದಲಿಗೆ ಯಾವುದೋ ಒಂದು ವಿಷಯ ಬಂದಾಗ ಅದು ಇನ್ನೊಂದು ಕಿಕ್ ಕೊಟ್ಟು ಮತ್ತೊಂದನ್ನು ನೆನಪಿಸುತ್ತದೆ. ಆದರೆ ಸುರುಳಿ ಸುತ್ತಿಕೊಂಡು ಮಲಗಿದ್ದ ನೆನಪುಗಳ ರೀಲು ಬಿಚ್ಚಿಕೊಂಡಾಗ ಸಂತಸವೂ ಆಗಬಹುದು, ದುಃಖವೂ ಉಮ್ಮಳಿಸಬಹುದು. ಆದರೆ ವಿಷಯ ಅದಲ್ಲ, ಎಲ್ಲವೂ ನಮ್ಮ ಜ್ಞಾನ ತೋರಿಸಿಕೊಳ್ಳುವ ಅಖಾಡವಲ್ಲ. ಯಾವ ಸಂದರ್ಭದಲ್ಲಿ ನಮ್ಮ ಜ್ಞಾನ ಕಟ್ಟಿಟ್ಟುಕೊಳ್ಳಬೇಕು, ಯಾವ ಸಮಯದಲ್ಲಿ ಅದನ್ನು ಎಷ್ಟು ಬೇಕೋ ಅಷ್ಟು ತೆರೆದಿಡಬೇಕೋ ಎಂಬ ಜ್ಞಾನ ನಾವು ಬೆಳೆಸಿಕೊಳ್ಳೋಣ. ಏನಂತೀರಿ?

English summary
Srinath Bhalle Column: Once upon a time in government offices files were wrapped. Today, perhaps everything is a computer file.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X