• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಂತ'ಕನ ದೂತರಿಗೆ ಕಿಂಚಿತ್ತೂ ದಯವಿಲ್ಲ, ನಮ್ಮದೂ ಅಂತ ಸ್ಟೇಷನ್ ಬಂದಾಗ ಇಳಿಯಲೇಬೇಕು

|

ಜೀವನ ಎಂಬುವುದು ಒಂದು ರೈಲುಬಂಡಿ ಇದ್ದ ಹಾಗೆ. ನಾವು ಹತ್ತುವ ಮುಂಚೆಯೇ ಹಲವರು ಇರುತ್ತಾರೆ. ನಾವು ಸಾಗುತ್ತಾ ಹೋದಂತೆ ಕೆಲವರು ಇಳಿದು ಹೋಗುತ್ತಾರೆ ಮತ್ತೆ ಕೆಲವರು ಬಂದು ಸೇರುತ್ತಾರೆ. ನಾವಿಳಿದ ಮೇಲೂ ಹಲವರ ಯಾನ ಮುಂದೆ ಹೋಗುತ್ತಿರುತ್ತದೆ.

ನಮ್ಮದೂ ಅಂತ ಒಂದು ಸ್ಟೇಷನ್ ಇದೆ. ಅದು ಬಂದಾಗ ನಾವು ಇಳಿಯಲೇಬೇಕು. ಈ ರೈಲುಬಂಡಿ ಹತ್ತೋ ಮುನ್ನವೇ ಟಿಕೆಟ್ ತೆಗೆದುಕೊಂಡು ಬಂದಿರ್ತೀವಿ. ಪಯಣಕ್ಕೆ ಆರಂಭವಿದ್ದಂತೆ 'ಅಂತ'ವೂ ಇದೆ. ಕೆಲವರು ಹತ್ತುವಾಗಲೇ ಇಳಿಯಬಹುದು, ಹತ್ತಿದ ಕೂಡಲೇ ಇಳಿಯಬಹುದು, ಹಲವು ಸ್ಟೇಷನ್ ಆದ ಮೇಲೆ ಇಳಿಯಬಹುದು ಅಥವಾ ಪೂರ್ಣ ಪಯಣ ಮುಗಿದ ಮೇಲೂ ಇಳಿಯಬಹುದು. ಈ 'ರೈಲುಬಂಡಿಗೂ' 'ಅಂತ'ಕ್ಕೂ ಏನು ಬಾಂಧವ್ಯ ಅಲ್ಲವೇ?

ತಲೆಯ ಮೇಲೂ ಹೊರಲು ಯೋಗ್ಯತೆ ಪಡೆಯುವ 'ಪಾದರಕ್ಷೆ'!

ದಿನನಿತ್ಯದಲ್ಲಿ ಸಾವು-ನೋವುಗಳನ್ನು ಕಾಣುತ್ತಲೇ ಇರುತ್ತೇವೆ. ನಮ್ಮದೇ ಮನೆಗಳಲ್ಲಿ ಇರಬಹುದು ಅಥವಾ ಹೊರಗೆಲ್ಲೋ ಇರಬಹುದು. ನಮ್ಮ ಮನೆಗಳಲ್ಲೇ ಆದರೆ ಮನಸ್ಸಿಗೆ ಹೆಚ್ಚು ಘಾಸಿಯಾಗುತ್ತದೆ. ಅವರೊಂದಿಗಿನ ನಮ್ಮ ದಿನನಿತ್ಯದ ಒಡನಾಟವು ನಿಂತಾಗ, ಕುಂತಾಗ ಎದುರಿಗೆ ಬರುವುದರಿಂದ ಆ ನೋವು ಉಪಶಮನವಾಗಲು ಸಾಕಷ್ಟು ಸಮಯ ಬೇಕು. ಹೊರಗಿನ ಜಗತ್ತಿನ ಸಾವುಗಳನ್ನು ನೋಡಿದಾಗ, ಕೇಳಿದಾಗ, ಓದಿದಾಗ ಆ ಕ್ಷಣದಲ್ಲಿ ಹಿಂಸೆಯಾಗಿ ಆಮೇಲೆ ಬಹುಶ: ಒಂದು ದಿನ ಬಾಧಿಸಿ ನೆನಪಿನ ಅಂಗಳದಿಂದ ಮರೆಯಾಗಲೂಬಹುದು.

ಇವೆರಡರ ಮಧ್ಯೆ ಇರುವ ಒಂದು ವರ್ಗ ಒಂದಿದೆ. ದೇವನಲ್ಲಿ ಐಕ್ಯರಾದವರು ನಮ್ಮ ಮನೆಯ ಜನ ಅಲ್ಲದೇ ಹೋದರೂ ನಮ್ಮೆಲ್ಲರ ಮನೆ-ಮನಗಳ ಒಂದು ಭಾಗ. ಕೈಹಿಡಿದು ಆಡಿ ಬೆಳೆಯದೆ ಇದ್ದರೂ, ಅವರುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಒಂದು ದಿನಕ್ಕೂ ಎದುರಿಗೆ ಕಂಡಿಲ್ಲದೆ ಹೋದರೂ, ಅವರೊಂದಿಗೆ ದಿನನಿತ್ಯದ ಒಡನಾಟ ಇದ್ದೇ ಇದೆ.

ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ?

ಒಂದು ಉದಾಹರಣೆ ನೋಡೋಣ. ಅದೊಂದು ಪಿಕ್ನಿಕ್. ನಾಲ್ಕಾರು ಫ್ಯಾಮಿಲಿ ಸೇರಿ ಆನಂದವಾಗಿ ಆಡಿ - ಹಾಡಿ ನಲಿಯುವಾಗ, ಆಚೆಗೆಲ್ಲೋ ಹೋಗಿದ್ದ ಅವರದ್ದೇ ಮನೆಯವರು ಏದುಸಿರು ಬಿಡುತ್ತ ಅಲ್ಲಿಗೆ ಬಂದು "ವಿಷಯ ಗೊತ್ತಾಯ್ತಾ?" ಅಂದರು. ಆಗಿನ್ನೂ ಸ್ಮಾರ್ಟ್ ಫೋನ್ ಯುಗ ಅಲ್ಲ. ಆಟ, ಓಟ ಎಲ್ಲಾ ಒಂದು ನಿಮಿಷ ಬಂದ್ ಆಗಿ ಏನು ಅಂತ ಅವರತ್ತ ನೋಡಿದರು. ಅವರೆಂದದ್ದು "ಶಂಕರನಾಗ್ ಆಕ್ಸಿಡೆಂಟ್'ನಲ್ಲಿ ತೀರಿಕೊಂಡರಂತೆ". ಅಲ್ಲಿದ್ದವರಿಗೂ ಶಂಕರರಿಗೂ ರಕ್ತಸಂಬಂಧವಿರಲಿಲ್ಲ. ಆದರೆ ಬಾಂಧವ್ಯ ಅದಕ್ಕಿಂತಾ ಹೆಚ್ಚು. ಅಲ್ಲಿ ಸೂತಕದ ಛಾಯೆ ಆವರಿಸಿತ್ತು. ದಿಗ್ಭ್ರಮೆಯಿಂದ ಎಲ್ಲರೂ ಕೂತಲ್ಲೇ ಕೂತಿದ್ದು ಮನದಲ್ಲೇ ರೋಧಿಸುತ್ತಿದ್ದರು. ಆ ಸುದ್ದಿ ಇನ್ನೆಷ್ಟು ಭೀಕರವಾಗಿ ಅಪ್ಪಳಿಸಿತ್ತು ಎಂದರೆ ಎಲ್ಲರೂ ಪ್ಯಾಕ್ ಅಪ್ ಮಾಡಿ ಮನೆಗೆ ತೆರೆಳಿದರು.

ಆಡುವ ಮಾತಿನಲ್ಲಿ "ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ" ಅಂತ ಹೇಳುತ್ತಾರೆ ಏಕೆ? ಈ ಮಾತುಗಳು ಅವರು ಕೂತಿದ್ದ ಸ್ಥಾನದ ವಿಷಯವಾಗಿ ಆಡಿರದೆ ಅವರು ಬಾಳಿದ್ದ ರೀತಿಯ ಬಗ್ಗೆ ಮಾತ್ರ ಎಂದು ಅರ್ಥೈಸಿಕೊಳ್ಳಬೇಕು.

ಆಂಗ್ಲದಲ್ಲಿ ಒಂದು ಮಾತಿದೆ "king is dead, long live the king" ಅಂತ. ರಾಜನಾದವನು ಸತ್ತಿದ್ದಾನೆ, ಮುಂದಿನ ರಾಜನಿಗೆ ಜಯವಾಗಲಿ. ಅರ್ಥಾತ್ ರಾಜಸಿಂಹಾಸನ ಖಾಲಿಬಿಡುವ ಹಾಗಿಲ್ಲ. ಒಬ್ಬರು ಜಾಗ ಖಾಲಿ ಮಾಡುತ್ತಿದ್ದಂತೆ ಆ ಮುಂದಿನವನು ರಾಜನಾಗಿ ಅಲಂಕರಿಸಲೇಬೇಕು. ಇದೇ ರೀತಿಯ ಪರಿಸ್ಥಿತಿ ಇಂದಿಗೂ ರಾಜಕೀಯದಲ್ಲಿದೆ.

ಯಾವುದೇ ವ್ಯಕ್ತಿ ತೀರಿಕೊಂಡ ನಂತರ ಆ ವ್ಯಕ್ತಿಯ ಬಗೆಗಿನ ಕೆಡುಕುಗಳೆಲ್ಲವೂ ಆವಿಯಾಗಿ, soft corner ಹೊಂದಿ, ಅವರ ಬಗೆಗಿನ ಒಳ್ಳೆಯ ವಿಚಾರಗಳನ್ನೇ ಮಾತನಾಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. "ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು, ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು” ಎಂದು ಅನುರಾಗ ಸಂಗಮ ಚಿತ್ರದಲ್ಲಿ ಒಂದು ಹಾಡಿದೆ.

ಕಳೆದ ವಾರದಲ್ಲಿ ನಾ ಕಂಡ ಪದ ಬಳಕೆ "ಕೊನೆಯುಸಿರೆಳೆದರು" ಎಂಬುದು. ಯಾರಾದರೂ 'ಕೊನೆಯ ಉಸಿರು ಎಳೆದರು" ಎಂದರೆ, ಅದರ ಅರ್ಥ ಅವರು ನಿಧನರಾದರು ಅಂತ.

ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್‌?

ಈಗ ಈ ವಿಷಯ ಆಲೋಚನೆ ಮಾಡಿ... ಉಸಿರು 'ಎಳೆದರು' ಎನ್ನುವುದು ಸರಿಯಾ? ಉಸಿರು 'ಬಿಟ್ಟರು' ಎನ್ನುವುದು ಸರಿಯಾ? ಕೊನೆಯ ಉಸಿರು ಎಂಬೋದು exhale (ಉಸಿರು ಬಿಡುವಿಕೆ)… inhale (ಉಸಿರು ತೆಗೆದುಕೊಳ್ಳುವಿಕೆ) ಅಲ್ಲ. ವೈದ್ಯರಾದ ಮಿತ್ರ ರಾಮಪ್ರಸಾದ್ ಅವರೊಡನೆ ಚರ್ಚೆ ಮಾಡಿದಾಗ ಅವರು ಹೇಳಿದ್ದು, "ಹೌದು ಅದು exhale ಹಾಗಾಗಿ ತೀರಿಕೊಂಡವರನ್ನು expire ಆದರು ಎಂಬೋದು. inspire ಎಂದರೆ ತೆಗೆದುಕೊಳ್ಳುವುದು".

ಈ ಉಸಿರು ತೆಗೆದುಕೊಳ್ಳುವಿಕೆಗೆ muscular ಶಕ್ತಿ ಬೇಕು. ಉಸಿರು ಬಿಡುವಿಕೆ ತಂತಾನೇ ಬೇಕಿದ್ದರೂ ನಡೆಯುತ್ತದೆ. ಒಂದು candle ಊದಬೇಕು ಎಂದಾಗ ಉಸಿರು ತೆಗೆದುಕೊಂಡೇ ಬಿಡಬೇಕು ಎಂದೇನಿಲ್ಲ. ಕೊನೆಯ ಘಳಿಗೆಯಲ್ಲಿ ಜೀವಕ್ಕೆ ಸತ್ವವೇ ಇಲ್ಲದಿರುವಾಗ, ಉಸಿರು ಎಳೆದುಕೊಳ್ಳಲೂ ಚೈತನ್ಯ ಇಲ್ಲದೆ ಹೋದಾಗ, ಉಸಿರು ಆಚೆ ಹಾಕಲಷ್ಟೇ ಸಾಧ್ಯವಾಗೋದು. ಹಾಗಿದ್ದರೆ ಶ್ರೀಯುತರು ಕೊನೆಯುಸಿರು ಬಿಟ್ಟರು ಎನ್ನಬೇಕು ಅಲ್ಲವೇ?

ಕೊನೆಯುಸಿರು ಬಿಟ್ಟವರ ಜೊತೆ ಇದ್ದು, ಅವರು ತೆರಳುವುದನ್ನು ನೋಡೋದು ಕಷ್ಟ ಸಾಧ್ಯ. ತನ್ನ ಹೆಂಡತಿಯ ತೊಡೆಯ ಮೇಲೆ ತಲೆ ಇಟ್ಟು ಮಲಗಿದ್ದ ಸತ್ಯವಾನನ ಪ್ರಾಣ ಹೋಯಿತು. ಆ ನಂತರ ಯಮನನ್ನು, ಸಾವಿತ್ರಿಯು ತಾ ಹಿಂಬಾಲಿಸಿ ಸಾವನ್ನು ಗೆದ್ದು ಬಂದ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಕಥೆ ಕೇಳುವಾಗ ಚೆನ್ನ ಆದರೆ ಊಹಿಸಿಕೊಳ್ಳಲಾಗದು.

ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ!

Bucket list ಎಂಬ ವಿಚಾರ ನೀವು ಕೇಳಿರಬಹುದು. ನನ್ನ ಜೀವನದಲ್ಲಿ ಇಂಥಿಂಥಾ ಕೆಲಸಗಳನ್ನು ನಾನು ಮಾಡಿ ಮುಗಿಸುತ್ತೇನೆ ಎಂದು ನಿರ್ಧರಿಸಿ, ಒಂದು ಬಕೆಟ್ ತುಂಬಿಸಿ, ಅರ್ಥಾತ್ ಪಟ್ಟಿ ಮಾಡಿ, ಒಂದೊಂದೇ ಕೆಲಸವಾಗುತ್ತಿದ್ದಂತೆ ಟಿಕ್ ಮಾಡುತ್ತಾ ಸಾಗೋದು. ಒಂದಲ್ಲಾ ಒಂದು ದಿನ ಹೋಗೋದು ನಿಶ್ಚಯ ಎಂದ ಮೇಲೆ, ಅರ್ಥಾತ್ before kicking the bucket ಅಂದುಕೊಂಡ ಕೆಲಸ ಮುಗಿಸಿ ಸಮಾಧಾನ ತಂದುಕೊಳ್ಳುವುದು ಉದ್ದೇಶ. ಕೈಲಾಗದೇ ಕೂತ / ಮಲಗಿದ ಮೇಲೆ ಕೊರಗುವುದು ಕಡಿಮೆಯಾಗುತ್ತೆ ಅಲ್ಲವೇ?

ಪಾಂಡು ಮಹಾರಾಜ ಹೃದಯ ನಿಂತು ಸಾವನ್ನಪ್ಪಲು ಆ ಹೊತ್ತಿನ ಮಾದ್ರಿಯ ಸೌಂದರ್ಯ ಕಾರಣವಾಯ್ತು. ಭೀಷ್ಮರು ತಮ್ಮ ಕೊನೆ ಘಳಿಗೆಯನ್ನು ತಾವೇ ಬರಮಾಡಿಕೊಂಡರು. ಇನ್ನು ದುರ್ಯೋಧನ ಅಂತ್ಯ ಕಾಣಲು ಬೇಕಿದ್ದುದು ತೊಡೆಗೆ ಒಂದು ಪೆಟ್ಟು. ನಮ್ಮ ಮನೆಗಳಲ್ಲಿನ ವಿಷಯವೇ ತೆಗೆದುಕೊಳ್ಳಿ. ಎಷ್ಟೋ ದಿನ ಬೆಡ್'ನಿಂದ ಪಕ್ಕದ ಬಚ್ಚಲ ಮನೆಗೆ ನಡೆದು ಹೋಗುತ್ತಿದ್ದ ತಾತ ಅಂದೇಕೋ ಕಾಲು ಜಾರಿದ್ದರು. ಇವೆಲ್ಲಾ ಯಾಕೆ ಹೇಳಿದೆ ಎಂದರೆ ಕೊನೆಗಾಲ ಸಮೀಪಿಸುತ್ತಿದ್ದಂತೆ ಒಂದು ಸಣ್ಣ ಕಾರಣ ಸಾಕು, ಇಹಲೋಕದ ವ್ಯಾಪಾರ ಮುಗಿಸಲು ಅಂತ.

ಕೊನೆ ಎಂಬುದು ಒಂದೇ. ಭಗವಂತನಲ್ಲಿ ಐಕ್ಯವಾಗೋದು ಅಂದುಕೊಳ್ಳಿ. ಆದರೂ, ಸೋಜಿಗ ಎಂದರೆ ಇದನ್ನು ಬಣ್ಣಿಸಲು ಪದಗಳೆಷ್ಟಿವೆ ಗೊತ್ತೇ? ಅವಸಾನವಾದರು, ನಿಧನರಾದರು, ಹರಿಯಪಾದ ಸೇರಿಕೊಂಡರು, ವೈಕುಂಠವಾಸಿಯಾದರು, ಲಿಂಗೈಕ್ಯರಾದರು, ಕೈಲಾಸವಾಸಿಯಾದರು, ಕೊನೆ ಉಸಿರೆಳೆದರು, ಮರಣ ಹೊಂದಿದರು, ಅಸ್ತಮಿಸಿದರು, ಇಹಲೋಕ ವ್ಯಾಪಾರ ಮುಗಿಸಿದರು, ಸ್ವರ್ಗಸ್ತರಾದರು, ಪರಂಧಾಮಗೈದರು, ಇನ್ನಿಲ್ಲವಾದರು, ಸಾವನ್ನಪ್ಪಿದರು ಹೀಗೆ ಹತ್ತು ಹಲವು ರೀತಿ ಹೇಳಬಹುದು. ಇಷ್ಟೇ ಅಲ್ಲದೆ ಬೇರೆ ಹಲವನ್ನು ಈವರೆಗೆ ಓದಿದ್ದರಲ್ಲಿ ಬಳಸಿದ್ದೇನೆ.

ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ ಎಂದಿರುವ ದಾಸರು ಆ ದೂತರ ಕರ್ತವ್ಯನಿಷ್ಠೆಯನ್ನು ಹೊಗಳಿದ್ದಾರೆ. ದೂತರು ತಮ್ಮೊಡಯ ಹೇಳಿದ ಕೆಲಸವನ್ನು ಮಾಡುವಾಗ ತಾವು ಹೊತ್ತೊಯ್ವ ಪ್ರಾಣ ಯಾರದ್ದು? ಅವನ / ಅವಳ ಜವಾಬ್ದಾರಿಗಳೇನು ಎಂದೆಲ್ಲಾ ಯೋಚನೆಯೇ ಮಾಡುವುದಿಲ್ಲ. ಆದರೆ ನಾವು 'ಸಾಮಾನ್ಯ, ಹುಲು ಮಾನವರು' ನಮ್ಮ ಹತ್ತಿರದವರು ತೀರಿಕೊಂಡಾಗ ಇದೇ ಅಂತಕನ ದೂತರನ್ನು 'ಛೀ ಕಿಂಚಿತ್ತೂ ದಯವಿಲ್ಲ ಇವರಿಗೆ' ಎಂದು ದೂರುತ್ತೇವೆ. ಇದೇ ಮರ್ಯಾದೆಯನ್ನೇ ನಮ್ಮ ಆರಕ್ಷಕರಿಗೂ ಕೊಡುವರು 'ಅ-ಸಾಮಾನ್ಯ' ಮಂದಿ. ಒಟ್ಟಾರೆ ಹೇಳೋದಾದ್ರೆ 'ದೊಡ್ಡಮನುಷ್ಯರು' ತೀರಿಕೊಂಡಾಗ ಅಂತಕನದೂತರಿಗೂ, ಆರಕ್ಷಕರಿಗೂ ನಿಂದನೆ ತಪ್ಪಿದ್ದಲ್ಲ.

ಜೀವನದಲ್ಲಿ ಏನೆಲ್ಲಾ ಏರಿಳಿತ ಇರುತ್ತದೆ. ಏರಿದಾಗ ನಾವೇ ಉತ್ತಮರು ಎಂದು ಹಿಗ್ಗೋದ್ ಬೇಡ. ಇಳಿದಾಗ ನಾನಿರೋದೇ ದಂಡ ಅಂತ ಕುಗ್ಗೋದೂ ಬೇಡ. ಎದೆ ತಣ್ಣಗಾದಾಗ ಆ ಏರಿಳಿತದ ಗೆರೆ ನೇರ. ಆದರೆ ನೇರ ಅನ್ನೋದು ನಿಂತ ನೇರ (verticle) ಅಲ್ಲ! ಮಲಗಿದ ನೇರ (horizontal). ಜೀವಮಾನದಲ್ಲಿ ಏನೆಲ್ಲಾ ಅಬ್ಬರದಲ್ಲಿ ನಿಂತು ಎಗರಾಡಿದರೂ, ಕೊನೆಗೆ ಮಲಗಲೇಬೇಕು ಎಂಬುದರ ಸಂಕೇತವಿದು. ಈಗ ಯೋಚಿಸಿ ಏರಿಳಿತ ಬೇಕೋ, ಅಡ್ಡ ಬೇಕೋ ಎಂಬುದನ್ನು.

English summary
Our life is also like a train journey. One has to get down from train when ultimate destination comes. Death is the ultimate truth of life. Writes Srinath Bhalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more