• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊನೆ ಮೊದಲಿಲ್ಲದ ಮೊದಲುಗಳು ಕೊನೆಗಳು...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಈ ಜಗತ್ತಿನಲ್ಲಿ ಅರ್ಥಾತ್ ನಮ್ಮ ದಿನನಿತ್ಯದ ಜೀವನದಲ್ಲಿ ಆರಂಭಗಳು ಮತ್ತು ಕೊನೆಗಳು ಆಗುತ್ತಲೇ ಇರುತ್ತವೆ... ಹಾಗಾದ ಎಲ್ಲಾ ಆರಂಭ ಅಂತ್ಯಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಆರಂಭಗಳೆಲ್ಲಾ ಸಂತಸವನ್ನೇ ತರೋದಿಲ್ಲ, ಹಾಗೆಯೇ ಅಂತ್ಯಗಳೆಲ್ಲಾ ದುಃಖವನ್ನೇ ತರೋದಿಲ್ಲ.

ಮೊದಲಿಗೆ ಆರಂಭದ ವಿಷಯವನ್ನೇ ತೆಗೆದುಕೊಂಡರೆ, ಈ ಆರಂಭ ಅನ್ನೋದು ಕೆಲವೊಮ್ಮೆ Discovery ಆಗಬಹುದು ಅಥವಾ ಕೆಲವೊಮ್ಮೆ Invention ಆಗಬಹುದು. discover ಎಂದರೆ ಅನ್ವೇಷಣೆ, Invention ಎಂದರೆ ಆವಿಷ್ಕಾರ.

Discover ಎಂದರೆ ಈ ಮುಂಚೆ ನಮ್ಮ ಸುತ್ತಲೂ ಇರುವುದನ್ನೇ ಪ್ರಕಟಗೊಳ್ಳುವಂತೆ ಮಾಡೋದು. ಉದಾಹರಣೆಗೆ, ಒಬ್ಬ ಭಾರತವನ್ನು ಕಂಡು ಹಿಡಿದ ಎಂದರೆ ಅವನು ಅದನ್ನು ಸೃಷ್ಟಿಸಲಿಲ್ಲ ಬದಲಿಗೆ ಅಲ್ಲಿದ್ದುದನ್ನು ಇಲ್ಲಿದೆ ಎಂದು ತೋರಿಸಿದ. ಹಾಗಂತ Discovery ಸುಲಭ ಅಂತಲ್ಲ. ಆವಿಷ್ಕಾರಕ್ಕಿಂತ ಕಷ್ಟಕರವಾದುದು Discovery. ನಮ್ಮೊಳಗಿರುವ ನಮ್ಮನ್ನೇ ಕಂಡುಹಿಡಿಯಲು ಅಸಮರ್ಥರಾಗುವ ನಾವು, ಎಲ್ಲೋ ಹುದುಗಿರುವ ಕಾಣದ್ದನ್ನು ಹುಡುಕಿ ತೆಗೆಯೋದು ಹೇಗೆ.

ನಾವು ಹಿಂದಿರುಗಿ ನೋಡಬೇಕೆ, ಬೇಡವೇ?

ಇನ್ನು invention ಅರ್ಥಾತ್ ಆವಿಷ್ಕಾರ ಇನ್ನೊಂದು level. ಹಲವಾರು ಆವಿಷ್ಕಾರಗಳು ಸಂಶೋಧನೆಯಲ್ಲೇ ಸಾಯುತ್ತವೆ, ರೂಪ ಪಡೆದುಕೊಳ್ಳೋದಿಲ್ಲ. ಆವಿಷ್ಕಾರ, ನಿರ್ಮಾಣ ಮತ್ತು ಸಂಶೋಧನೆ ಎಲ್ಲವೂ ಬೇರೆ ಬೇರೆ. ಆವಿಷ್ಕಾರ ಅನ್ನೋದು end product ಎನಿಸಿದರೆ ಸಂಶೋಧನೆ ಮತ್ತು ನಿರ್ಮಾಣ ಅನ್ನೋದು ಹಂತಗಳು. ಸಂಶೋಧನೆ ಮತ್ತು ನಿರ್ಮಾಣ ಅಂದ್ರೆ 'Research and Development (R&D)'.

ಈ ಸಂಶೋಧನೆ ಮತ್ತು ನಿರ್ಮಾಣ ಅನ್ನೋದು ಪ್ರತೀ ರಂಗದಲ್ಲೂ ಇದೆ. ಇತ್ತೀಚಿನ ಉದಾಹರಣೆ ಎಂದರೆ, ಜಗತ್ತಿನಾದ್ಯಂತ ಹರಡಿರುವ ಕೊರೊನಾ (COVID-19). ಇದು ಆರಂಭ. ಕಣ್ಣಿಗೆ ಕಾಣದ ಕೊರೊನಾ ಎಂಥ ಆರಡಿ ಅಜಾನುಬಾಹುವನ್ನೂ ಅಟ್ಟಾಡಿಸಿಕೊಂಡು ಉರುಳಿಸುತ್ತದೆ. ಇಂಥ ಕೊರೊನಾ ವೈರಸ್ ಗೆ ರಾಮಬಾಣವನ್ನು ಕಂಡು ಹಿಡಿಯಲೇ ದಿನನಿತ್ಯದಲ್ಲಿ ಹಗಲೂ ಇರುಳು ಜಗತ್ತಿನಾದ್ಯಂತ ಸಂಶೋಧನೆ ನಡೆಯುತ್ತಿದೆ. ಇಂಥದ್ದೇ ಪಿಡುಗುಗಳು ಈ ಹಿಂದೆಯೂ ಇತ್ತು, ಅವನ್ನು ದಮನ ಮಾಡಿದ್ದೂ ಆಗಿದೆ. ಜಗತ್ತಿನಾದ್ಯಂತ ಇರುವ ವಿಜ್ಞಾನಿಗಳಿಗೆ ಅಕ್ಷರ ನಮನ ಸಲ್ಲಿಸಲೇಬೇಕು.

ಮಹಾಮಾರಿ ಪಿಡುಗುಗಳು ಸಂಭವಿಸಿದಾಗಲೆಲ್ಲ ಅನ್ನಿಸೋದು 'ಅಂತ್ಯದ ಆರಂಭವಾಯಿತೇ?'... ಪ್ರಳಯ ಅಂದ್ರೆ ನೀರುಕ್ಕಿ ಹರಿದು ಎಲ್ಲವನ್ನೂ ನುಂಗಿ ನೀರು ಕುಡಿಯುತ್ತದೆ ಅಂತಲ್ಲಾ. ಮಲೇರಿಯಾ, ಕಾಲರಾ ಇತ್ಯಾದಿಗಳೆಲ್ಲಾ ಆಯಾ ಕಾಲದಲ್ಲಿ ತಮ್ಮ ಸಾಮ್ರಾಜ್ಯ ನಡೆಸಿ ನಂತರ ಲಸಿಕೆಗಳು ಬಂದ ಮೇಲೆ ಹೇಳಹೆಸರಿಲ್ಲದೇ ತೆರೆಗೆ ಸರಿಹೋದವು.

ಒಟ್ಟಾರೆ ಹೇಳೋದಾದ್ರೆ ಈ ಆರಂಭ ಮತ್ತು ಅಂತ್ಯವನ್ನು ಹೀಗೂ ಹೇಳಬಹುದು. "ಪ್ರತಿಯೊಂದಕ್ಕೂ ಅಂತ್ಯ ಅನ್ನೋದು ಇದೆ. ಹಾಗೆ ಅಂತ್ಯ ಆಯ್ತು ಅಂದ ಮಾತ್ರಕ್ಕೆ ನಮ್ಮ ಜೀವನ ಮುಗಿದುಹೋಯ್ತು ಅಂತ ಆಡಬಾರದು. ಒಂದರ ಅಂತ್ಯ ಮತ್ತೊಂದರ ಆರಂಭ ಆಗಬೇಕು. ಒಂದರ ಅಂತ್ಯವೇ ನಮ್ಮದೂ ಅಂತ್ಯವಾಯ್ತು ಅಂದುಕೊಂಡರೆ ಆರಂಭವೇ ಅಂತ್ಯವಾಗಿಬಿಡುತ್ತದೆ. ಆರಂಭಗಳು ಅರಿವಿಗೆ ಬರೋದಿಲ್ಲ, ಆದರೆ ಆ ನಂತರ ಜೀವನ ಹೇಗಿತ್ತು ಅನ್ನೋದು ಅಂತ್ಯ ಹೇಳುತ್ತೆ".

ಸದ್ದು ಇರಬೇಕಾದೆಡೆ ಸದ್ದಿರಲಿ, ಮೌನ ಇರಬೇಕಾದೆಡೆ ಮೌನ ಇರಲಿ

ಮೇಲೆ ಹೇಳಿದ ವಿಷಯಗಳನ್ನು ಉದಾಹರಣೆಯ ಸಹಿತ ಕೊಂಚ ಒಳಹೊಕ್ಕು ನೋಡೋಣ.

ಮೊದಲಿಗೆ "ಪ್ರತಿಯೊಂದಕ್ಕೂ ಅಂತ್ಯ ಅನ್ನೋದು ಇದೆ". ಜೀವಿಗಳು ಜನ್ಮ ತಾಳಿದಾಗಲೇ, ಅಂತ್ಯ ಅನ್ನೋ ಲೇಬಲ್ ಹಚ್ಚಿಕೊಂಡೇ ಭುವಿಗೆ ಬರೋದು. ಹುಟ್ಟಿದ ನಾವು ಬೆಳೆಯುತ್ತಾ ಬೆಳೆಯುತ್ತಾ ಸಾಗೋದು ಆ ಗಮ್ಯದತ್ತ. ಆದರೂ ನಾವು ಇಲ್ಲೇ ಸ್ಥಾಪನೆಯಾಗಲು ಬಂದಿರೋದು ಅಂತ ಆಡ್ತೀವಿ. ಒಂದರ್ಥದಲ್ಲಿ ಇದರಲ್ಲೇನೂ ತಪ್ಪಿಲ್ಲ. ಅಲ್ಲೆಲ್ಲೋ ನದಿ/ಕೆರೆ ಇದೆ ಅಂತ ಇಲ್ಲಿಂದಲೇ ಪಂಚೆ ಎತ್ಕೊಂಡ್ ಹೋಗೋಕ್ಕಾಗುತ್ತಾ? ದಿನನಿತ್ಯವೂ 'ನಾನು ಹೇಗಿದ್ರೂ ಹೋಗೋದಕ್ಕೆ ಬಂದಿರೋದು, ಸಾಧಿಸಿ ಮಾಡೋದೇನಿದೆ?' ಅನ್ನುವ ಮನೋಭಾವ ಇರುವವರು ಒಮ್ಮೆ stephen hawkin ಅವರ ಜೀವನ ಓದಿ ಸಾಕು.

ಇನ್ನು 'ಒಂದರ ಅಂತ್ಯ ಮತ್ತೊಂದರ ಆರಂಭ' ತೆಗೆದುಕೊಳ್ಳೋಣ. ಒಂದು ಮನೆಯ ದಕ್ಷ ಯಜಮಾನ ತೀರಿಕೊಂಡರು ಅನ್ನಿ. ಅದು ಅವರ ಜೀವನದ ಅಂತ್ಯ ನಿಜ, ಆದರೆ ಉಳಿದವರಿಗೆ ಅವರಿಲ್ಲದ ಜೀವನದ ಆರಂಭ. ಅವರುಗಳು ಜೀವನವನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವುದು ಆರಂಭ. ಇದು ಎಲ್ಲರ ಮನೆಯ ಕಥೆ. ಹಲವಾರು ಸನ್ನಿವೇಶದಲ್ಲಿ ಸಂಸಾರಗಳು ಧೃತಿಗೆಡದೆ ಮುಂದೆ ಸಾಗಿವೆ ನಿಜ, ಆದರೆ ಅಲ್ಲಲ್ಲೇ ಕೆಲವು ಸಂಸಾರಗಳು ಆ ಆಘಾತ ತಾಳಲಾರದೆ ಆಧಾರವಿಲ್ಲದೇ ಉರುಳಿಬಿದ್ದು ಒಂದು ರೀತಿ ತಮ್ಮ ಅಂತ್ಯಕ್ಕೂ ಮತ್ತೊಮ್ಮೆ ಆರಂಭ ಹಾಕಿರುತ್ತಾರೆ.

ಇನ್ನು "ಆರಂಭಗಳು ಅರಿವಿಗೆ ಬರೋದಿಲ್ಲ" ಅನ್ನೋದು ನಿಮಗೆಲ್ಲಾ ಗೊತ್ತಿರೋದೇ. ಭುವಿಯ ಒಳಗೆ ಬೀಜವಿದೆ. ಅದು ಭುವಿಯನ್ನು ಸೀಳಿ ಹೊರಬಂದು ಸಸಿಯಾಗಿ ಕಾಣಿಸಿಕೊಳ್ಳುವ ತನಕ ಆ ಭುವಿಯೊಳಗೆ ಏನು ನಡೆಯುತ್ತದೆ ಅಂತ ನಾವು ಕಂಡಿದ್ದೀವಾ? ಹೀಗೆಯೇ startup ಕಂಪನಿಗಳು. ಇನ್ಫೋಸಿಸ್ ನಂತಹ ಕಂಪನಿ ಒಂದು ಗ್ಯಾರೇಜಿನಲ್ಲಿ ಆರಂಭವಾಗಿ ಇಂದು ಯಾವ ಮಟ್ಟದಲ್ಲಿದೆ ಎಂದು ನೋಡಿದಾಗ ಅಂದಿನ ಆ 'ಆರಂಭ' ಯಾರ ಅರಿವಿಗೂ ಬಂದಿರಲಿಲ್ಲ. ಇಂಥ ಉದಾಹರಣೆಗಳು ಅನೇಕಾನೇಕ. ಎಲ್ಲೋ ಅಲ್ಲೊಂದು ಇಲ್ಲೊಂದು ಉದಾಹರಣೆಗಲ್ಲಿ 'ಬೆಳೆಯುವ ಕುಡಿ ಮೊಳಕೆಯಲ್ಲೇ' ಎಂಬ ಭಾವನೆ ಮೂಡಿಸಿ ನಿಜವಾದದ್ದೂ ಇದೆ. ಪವಾಡ ಪುರುಷರ ಜೀವನವನ್ನು ಒಮ್ಮೆ ನೋಡಿ ಬಂದಾಗ ಇದರ ಅರಿವು ಮೂಡಿಬರುತ್ತದೆ.

ಧನಾತ್ಮಕ ವಿಚಾರಗಳ ಚಿಂತನೆಗಳ ದೂತರಾಗೋಣ

ಇನ್ನು "ಆ ನಂತರ ಜೀವನ ಹೇಗಿತ್ತು ಅನೋದನ್ನ ಅಂತ್ಯ ಹೇಳುತ್ತೆ" ಈ ವಿಚಾರ ಕೆಲವಕ್ಕೆ ಹೊಂದುತ್ತೆ, ಕೆಲವಕ್ಕೆ ಹೊಂದೋದಿಲ್ಲ. ಭೂತಯ್ಯ ಗೊತ್ತಾ? ಹೌದು. ಆತ ಬದುಕಿದ್ದಾಗ ಹೇಗೆ ಬಾಳಿದ್ದ ಅನ್ನೋದನ್ನ ಅವನ ಸಾವಿನಲ್ಲಿ ಕಾಣಬಹುದಿತ್ತು ಅನ್ನೋದು ಇನ್ನಷ್ಟೇ ವರ್ಷಗಳಾದರೂ ಮಾಸದ ನೆನಪು. ಆದರೆ ಉನ್ನತ ಮಟ್ಟದಲ್ಲಿ ಇದ್ದ ಒಬ್ಬ ವ್ಯಕ್ತಿಯು ಮತ್ಯಾರದ್ದೋ ಮೋಸದಿಂದಾಗಿ ಬೀದಿಗೆ ಬಂದರು ಅಂದುಕೊಳ್ಳಿ, ಆ ಸನ್ನಿವೇಶದಲ್ಲಿ ಮೇಲಿನ ವಾಕ್ಯ ಸರಿಹೊಂದೋದಿಲ್ಲ.

ಜೀವನ ಒಂದು ಸಮರ ಅನ್ನೋದು ಎಲ್ಲರೂ ಹೇಳೋ ಮಾತು. ಇದು ಹಲವರ ಜೀವನದಲ್ಲಿ ನಿಜ ರಣರಂಗದ ಯುದ್ಧ ಕೂಡ. 'ಯುದ್ಧ' ಅನ್ನೋದು ಎಷ್ಟೋ ಜನರ ಜೀವನದಲ್ಲಿ ಅಂತ್ಯದ ಆರಂಭ. ಅದರೊಂದಿಗೆ ಆರಂಭದ ಅಂತ್ಯ ಕೂಡ. ಸೈನ್ಯ ಎಂದ ಮೇಲೆ ಚಿಕ್ಕವಯಸ್ಸಿನ ಜೀವಿಗಳೇ ತುಂಬಿರುತ್ತಾರೆ ಅನ್ನೋದು ಸಾಮಾನ್ಯ ಅಂಶ. ಇಂಥ ಯೋಧರ ಅಂತ್ಯ ಸಂಭವಿಸಿತು ಎಂದರೆ ಅವರ ಜೀವನದ ಆರಂಭದ ಅಂತ್ಯವೇ ಆಗುತ್ತೆ ಅಲ್ಲವೇ? ಯಾರೋ ಗೆದ್ದಾಗ ಮತ್ತೊಬ್ಬರ ಅಟ್ಟಹಾಸ ಕಡಿಮೆಯಾಯ್ತು ಅಥವಾ ಕೊನೆಯೇ ಆಯ್ತು ಎನ್ನುವ ಸನ್ನಿವೇಶ ತೆಗೆದುಕೊಂಡರೆ ಯುದ್ಧವು ಅವರ ಅಂತ್ಯದ ಆರಂಭವಾಗಿತ್ತು. ಎರಡೂ ವಿಷಯಕ್ಕೆ ಉದಾಹರಣೆ ಕುರುಕ್ಷೇತ್ರ ಯುದ್ಧ. ಒಂದೆಡೆ ಅಭಿಮನ್ಯು ಮತ್ತೊಂದೆಡೆ ದುರ್ಯೋಧನ.

Winston Churchill ಎರಡನೆಯ ಮಹಾಯುದ್ಧ ಸಮಯದಲ್ಲಿ ಆಡಿದ ಈ ಮಾತುಗಳು ಇಂದಿಗೂ ಜೀವಂತ "ಇದು ಅಂತ್ಯವಲ್ಲ... ಇದು ಅಂತ್ಯದ ಆರಂಭವೂ ಅಲ್ಲ, ಬದಲಿಗೆ ಆರಂಭದ ಅಂತ್ಯ"

ಪ್ರೀತಿ ಅನ್ನೋದು ಇಬ್ಬರ ಮನವನ್ನು ಒಂದು ಮಾಡುವ ಶಕ್ತಿ. ಮದುವೆ ಆದ ಮೇಲೆ ಕೆಲವೊಮ್ಮೆ ಉಜ್ವಲಿಸುವ ಬದಲಿಗೆ ಕೆಲವೇ ದಿನಗಳಲ್ಲಿ ಅದು ಕಮರಿಹೋಗುವ ಸನ್ನಿವೇಶಗಳು ಎದುರಾಗುತ್ತದೆ. ಆ ಗಾಯವನ್ನು ಅಲ್ಲಿಯೇ ಒಣಗಿಸುವ ಬದಲು ಉರಿವ ಬೆಂಕಿಗೆ ತುಪ್ಪ ಹಾಕಿದಂತೆ ಆದರೆ ಸಂಬಂಧದ ಅಂತ್ಯದ ಆರಂಭವಾಗುತ್ತದೆ.

ಮದುವೆಯ ಜೀವನದಲ್ಲಿ ಮಕ್ಕಳ ಆಗಮನ ಒಂದು ಮುಖ್ಯವಾದ ಅಂಗ. ಇದು ಆಗಲೇಬೇಕು ಅಂತೇನಿಲ್ಲ, ಆದರೆ ಹಿರಿಯರಿಗೆ ಒಂದು ನಿರೀಕ್ಷೆ ಇರುತ್ತದೆ. ಅಂತೆಯೇ ಮದುವೆಯಾದ ದಂಪತಿಗೂ ಮಗು/ಮಕ್ಕಳ ಆಗಮನ ಆಗದೆ ಹೋದಾಗ ಅಲ್ಲೊಂದು ಮೌನ ಏರ್ಪಡಬಹುದು. ದೇವರು ಕಣ್ಣುಬಿಟ್ಟ ಅನ್ನೋ ಹಾಗೆ ಒಂದು ಶುಭದಿನ ಕೂಸು ಬಂದಿತು ಎಂದಾಗ ಆ ಮೌನದ ಅಂತ್ಯವಾಗಿ ಸಡಗರದ ಜೀವನ ಆರಂಭವಾಗುತ್ತದೆ. ಆದರೆ ಹೆಣ್ಣು ಕೂಸಿನ ಜನ್ಮ ಅನ್ನೋದು ಇಂದಿಗೂ ಎಷ್ಟೋ ಕಡೆ ಅಂತ್ಯದ ಆರಂಭವೇ ಆಗಿರೋದು ಖೇದನೀಯ.

ಮೌಢ್ಯಗಳ ಅಂತ್ಯದ ಆರಂಭವಾಗಲಿ. ದ್ವೇಷ, ವೈಷಮ್ಯಗಳ ಅಂತ್ಯದ ಆರಂಭವಾಗಲಿ. ಅರ್ಥೈಸಿಕೊಳ್ಳದೆ ಸಂಪ್ರದಾಯಗಳನ್ನು ಅಂತ್ಯಗೊಳಿಸದೇ ಪುನರಾರಂಭಿಸಿ. ಎಲ್ಲಕ್ಕೂ ಅಂತ್ಯವಿದೆ. ಚಿಂತೆಗಳ ಅಂತ್ಯವಾಗಲಿ, ಚಿಂತನೆಗಳ ಆರಂಭವಾಗಲಿ. ಅಂತ್ಯಗಳು ಮುಂದಿನ ಜೀವನದ ಮುನ್ನುಡಿಯ ಆರಂಭವಾಗಲಿ.

English summary
Not every ending is an end in life. At the same time not every starting is a start. The thing which seems to be end may be a start for other thing,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more