ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಹರಿತವಾಗಿರುವುದೆಲ್ಲಾ ರಕ್ತ ಹರಿಸೋದಿಲ್ಲ

|
Google Oneindia Kannada News

ಇಂದಿನ ವಿಷಯ ಸಕತ್ ಚೂಪಾಗಿದೆ, ಆದರೆ ರಕ್ತ ಹರಿಸೋದು ಬೇಡ ಅಷ್ಟೇ. ಯಪ್ಪಾ ಅದೇನು ಬ್ಲೇಡ್ ಹಾಕ್ತೀಯಾ ತಂದೆ ಅಂತ ಅಂದರೂ ಖಂಡಿತ ಒಂದು ಡ್ರಾಪ್ ಬ್ಲಡ್ ಕೂಡಾ ತೆಗೆಯೋದಿಲ್ಲ ಈ ಬ್ಲೇಡ್. ಈ ವಿಷಯ ಬ್ಲೇಡ್ ಅಲ್ಲಾ ಗರಗಸ ಅಂತ ಅಂದ್ರೂನೂವೇ ಇದೂ ಬರೀ ಲಾಜಿಕಲ್ ಗರಗಸ ಅಷ್ಟೇ ನಿಮಗೇನೂ ಗಾಯ ಆಗಲ್ಲ ಬಿಡಿ.

ನಮ್ಮ ದಿನಗಳಲ್ಲಿ ಪೆನ್ಸಿಲ್ ಅನ್ನು ಜೀವಲು (ಹೆರೆಯಲು) ಬ್ಲೇಡ್ ಬಳಸುತ್ತಿದ್ದೆವು. ಎಷ್ಟೋ ಸಾರಿ ಬ್ಲೇಡ್ ಅನ್ನು ಪೆನ್ಸಿಲ್ ಡಬ್ಬಿಯಲ್ಲಿ ಇಟ್ಟುಕೊಳ್ಳಲು ಮರೆಯುತ್ತಿದ್ದುದು ಸಹಜ. ಹಾಗಾಗಿ ಬೇರೆಯವರ ಬಳಿ ಎರವಲು ಪಡೆಯುತ್ತಿದ್ದುದು ಉಂಟು. ಒಬ್ಬರಿಂದ ಬ್ಲೇಡ್ ಪಡೆದು, ಬಳಸಿ ವಾಪಸ್ ಕೊಟ್ಟರೂ, ಯಾರಿಂದ ಪಡೆದಿರುತ್ತೇವೆಯೋ ಅವರಿಗೆ ಏನೂ ಕಡಿಮೆಯಾಗಲಿಲ್ಲ ಅಲ್ಲವೇ? ನಮಗೂ ಉಪಯೋಗವಾಯ್ತು, ಅವರಿಗೂ ಏನೂ ಖರ್ಚಾಗಲಿಲ್ಲ. ಈ ಬ್ಲೇಡ್ ಕೂಡಾ ಜ್ಞಾನ ಇದ್ದಂತೆಯೇ ಅಲ್ಲವೇ? ನೀವು ಮತ್ತೊಬ್ಬರಿಗೆ ಕೊಟ್ಟರೆ ನಿಮಗೇನೂ ಕಡಿಮೆಯಾಗಲಿಲ್ಲ ಆದರೆ ಮತ್ತೋರ್ವರಿಗಂತೂ ಉಪಯೋಗವೇ ಆಯ್ತು. ಬಹುಶಃ ಬ್ಲೇಡ್ ಹಾಕಿಲ್ಲ, ನಿಮಗೆ ಬ್ಲಡ್ ಬರಲಿಲ್ಲ ತಾನೇ?

ಆರಿಂಚು ಇದ್ದ ಪೆನ್ಸಿಲ್ ಸಂಜೆಯ ವೇಳೆಗೆ ಮೂರಿಂಚು
ಒಂದು ಹಂತವಾದ ಮೇಲೆ ಜಾಮಿಟ್ರಿ ಡಬ್ಬಿ ಕೈಗೆ ಬಂದಾಗ ಅದರಲ್ಲೊಂದು ಪುಟ್ಟ mender ಇರುತ್ತಿತ್ತು. ಈ mender ಬಳಸಲು ಅದೇನೋ ಆನಂದ. ಅದಕ್ಕೂ ಒಂದು ಪುಟ್ಟ ಬ್ಲೇಡ್ ಇದ್ದು, ಪೆನ್ಸಿಲ್ ಅನ್ನು ಅದರಲ್ಲಿ ಇಟ್ಟು ತಿರುಗಿಸಿದರೆ ಪುಂಖಾನುಪುಂಖವಾಗಿ ಹೊರಗೆ ಬರುವ ಆ ಮರದ ಪದರ ನೋಡಲೇ ಮಜಾ. ಅದೇ ಖುಷಿಯಲ್ಲಿ ತಿರುವುವಾಗ ಹಲವೊಮ್ಮೆ ಮುಂದೆ ಬಂದಿದ್ದ ಲೆಡ್ ಪಟಕ್ ಅಂತ ಮುರಿದು ಮತ್ತೆ ತಿರುವೋದು ನಡೆಯುತ್ತಿತ್ತು. ಎಷ್ಟೋ ಸಾರಿ ಬೆಳಿಗ್ಗೆ ಆರಿಂಚು ಇದ್ದ ಪೆನ್ಸಿಲ್ ಸಂಜೆಯ ವೇಳೆಗೆ ಮೂರಿಂಚು ಆಗುತ್ತಿದ್ದುದು ಸಾಮಾನ್ಯ. ಇಂಥಾ mender ಬಳಸಿ ಪೆನ್ಸಿಲ್ ತಿರುವುದು ಎಂದರೆ ಸಮುದ್ರ ಮಂಥನ ನೆನಪಾಗುವುದಿಲ್ಲವೇ? ಹಾಗೆ ತಿರುವಿದಾಗ ಹೊರಬರುವ ಮರದ ಪದರವೇ ಮಂಥನದ ವೇಳೆಯಲ್ಲಿ ಹೊರಬಂದ ಹಲವಾರು ಅದ್ಭುತಗಳು. ಮುರಿದ ಲೆಡ್ ಅನ್ನು ಬೇಕಿದ್ದರೆ ಹಾಲಾಹಲ ಎನ್ನಿ, ಏಕೆಂದರೆ ಮಾಡುವ ಕೆಲಸದಲ್ಲಿ ಕೊಂಚ ಎಚ್ಚರಿಕೆ ತಪ್ಪಿದರೆ ಹಾಲಾಹಲವೆ ತಾನೇ ಆಗೋದು?

Srinath Bhalle Column: Not All Blades Shed Blood

ಹಿಂಭಾಗದಲ್ಲಿ ಕೆರೆಯುವಾಗ ಒಂಥರಾ ಮುಳಮುಳ
ಅಂದು mender ಎಂದು ಕರೆಯುತ್ತಿದ್ದು, ಇಲ್ಲಿಗೆ ಬಂದಾಗ sharpener ಎಂಬ ಪದಬಳಕೆ ಅಭ್ಯಾಸವಾಯ್ತು. ಪುಟಾಣಿ sharpener ಇಂದ ಹಿಡಿದು ಹಲವಾರು sharpenerಗಳ ಬಳಕೆಯೂ ಅಭ್ಯಾಸವಾಯ್ತು. ಅಂದು ನಾವು ಶಾಲೆಗೆ ನಮ್ಮದೇ ಬ್ಲೇಡ್ ಅಥವಾ mender ಅನ್ನು ಕೊಂಡೊಯ್ಯುತ್ತಿದ್ದೆವು. ಆದರೆ ಇಲ್ಲಿನ ಶಾಲೆಗಳಲ್ಲಿ ಪ್ರತೀ ಕ್ಲಾಸ್ ರೂಮಿನಲ್ಲಿ ಗೋಡೆಗೆ ಮೊಳೆ ಹೊಡೆದು ಒಂದು ದೊಡ್ಡ sharpener ಅನ್ನು ಹಾಕಿರುತ್ತಾರೆ. ಇದರ ಬಳಕೆಯೂ ಬಲು ಸುಲಭ.
ಮುಂದಿನ ಮಾತು ಶೇವಿಂಗ್ ಬ್ಲೇಡ್. ಈ ಶೇವಿಂಗ್ ವಿಷಯದ ಬಗ್ಗೆ ಹೇಳುವಾಗ ಬ್ಲೇಡ್ ಎಂಬುದು razorನಲ್ಲಿ ಇರುತ್ತದೆ. ನೇರವಾಗಿ ಕೈಲಿ ಬ್ಲೇಡ್ ಹಿಡಿದು ಪರಪರ ಅಂತ ಗಡ್ಡ ಯಾರೂ ಕೆರೆದುಕೊಳ್ಳುವುದಿಲ್ಲ. ಈಗ ರೇಜರ್ ಮಾತಿಗೆ ಬಂದರೆ ಗಂಡು- ಹೆಣ್ಣು ಆದಿಯಾಗಿ ಈ ರೇಜರ್ ಅನ್ನು ಬಳಕೆ ಮಾಡುತ್ತಾರೆ. ಸಲೂನಿನಲ್ಲಿ ಕ್ಷೌರಿಕ ತನ್ನ ಕತ್ತಿಯಿಂದ ಕೆರೆಯುವಾಗ ಅದರಲ್ಲೂ ತಲೆಯ ಹಿಂಭಾಗದಲ್ಲಿ ಕೆರೆಯುವಾಗ ಒಂಥರಾ ಮುಳಮುಳ ಎಂಬ ಫೀಲಿಂಗು. ಹಾಗಂತ ಕುತ್ತಿಗೆ ಅಲ್ಲಾಡಿಸಿದರೆ ಅವನಿಂದ ಬೈಸಿಕೊಳ್ಳುತ್ತಿದ್ದೆವು ಅಥವಾ ಕೆಲವೊಮ್ಮೆ ಆ ಚೂಪಾದ ಕತ್ತಿ ತಾಕಿ ರಕ್ತವೂ ಬರುತ್ತಿತ್ತು. ಇಂಥಾ accidentಗಳು ತಿರುಪತಿ ಕ್ಷೌರದಲ್ಲಿ ಹೆಚ್ಚು ನೋಡಿದ್ದೇನೆ. ನಮ್ಮ ಮನೆಯಲ್ಲಿ ಈ ಪದ್ಧತಿ ಇಲ್ಲ, ಆದರೆ ಸ್ನೇಹಿತರನ್ನು ಕಂಡಿದ್ದೇನೆ. ಇಲ್ಲೇನಿದೆ ಕಲಿಕೆ? ವಿಧೇಯತೆ. ತಲೆಬಾಗಿರುವಾಗ ಸರಿಯಾಗಿ ಬಾಗಬೇಕು. ನ್ಯಾಯಕ್ಕೆ ತಲೆಬಾಗಬೇಕು. ಹಿರಿಯರಿಗೆ ತಲೆಬಾಗಬೇಕು. ತಲೆಬಾಗಿರುವ ಸಮಯದಲ್ಲಿ ಉದ್ಧಟತನದಿಂದ ತಲೆ ಎತ್ತಿದಾಗ ಜಯದ್ರಥನ ಕಥೆಯೇ ಆಗೋದು.

ಮರದ ಕೊಂಬೆಗಳನ್ನು ಕತ್ತರಿಸಲು ಗರಗಸ
ಒಂದು ಬ್ಲೇಡ್‌ನ ಬದಿ ಚೂಪಾಗಿ ಸಮನಾಗಿ ಇರುತ್ತದೆ, ಆದರೆ ಮತ್ತೊಂದು ಬ್ಲೇಡ್ ಆದ hacksaw ಬ್ಲೇಡ್‌ಗೆ ಹಲ್ಲುಗಳು ಇರುತ್ತದೆ. ಲೋಹವನ್ನು ಕತ್ತರಿಸಲು hacksaw ಬ್ಲೇಡ್ ಅನ್ನು ಬಳಸಲಾಗುತ್ತದೆ. ಇದರಲ್ಲೂ ಹಲವು ವಿಧಗಳು ಇರುತ್ತದೆ. ಕೆಲವೊಮ್ಮೆ ಕೇವಲ ಬ್ಲೇಡ್ ಇರಬಹುದು, ಕೆಲವೊಮ್ಮೆ ಅದಕ್ಕೊಂದು ಹಿಡಿಕೆಯೂ ಇರುತ್ತದೆ. ಇಂಥದ್ದೇ ಆದರೆ ದೊಡ್ಡ ಹಲ್ಲುಗಳಿರುವ ಬ್ಲೇಡ್ ಎಂದರೆ ಗರಗಸ. ಮರದ ಕೊಂಬೆಗಳನ್ನು ಕತ್ತರಿಸಲು ಗರಗಸವನ್ನು ಬಳಸಲಾಗುತ್ತದೆ. ಲಾನ್‌ನಲ್ಲಿ ಬಳಸುವ ಬ್ಲೇಡ್ ಅನ್ನು trimmer ಬ್ಲೇಡ್ ಎಂದು ಕರೆಯುತ್ತಾರೆ. ಬ್ಲೇಡ್‌ಗಳು ಉದ್ದಕ್ಕೂ ಇರಬಹುದು, ವೃತ್ತಾಕಾರವಾಗಿಯೂ ಇರಬಹುದು. ಒಟ್ಟಾರೆ ಹೇಳುವುದಾದರೆ ಬದಿಯೊಂದು ಚೂಪಾಗಿರಬೇಕು ಮತ್ತು ಕತ್ತರಿಸುವ ಕೆಲಸ ಮಾಡಬೇಕು. ಅದು ಕೂದಲೇ ಆಗಿರಲಿ, ಕೊಂಬೆಯೇ ಆಗಿರಲಿ, ಹುಲ್ಲೇ ಆಗಿರಲಿ ಅಥವಾ ಲೋಹವೇ ಆಗಿರಲೂಬಹುದು. ಯಾವ ಸಂದರ್ಭಕ್ಕೆ ಯಾವ ಬ್ಲೇಡ್ ಬಳಸಬೇಕು ಎಂಬ ಸಾಮಾನ್ಯ ಜ್ಞಾನ ಬೇಕು ಎಂಬುದು ಕಲಿಕೆಯಾದರೆ, ಇದು ರಣರಂಗದಲ್ಲಿ ಹೇಗೆ ಬಳಕೆಯಾಗುತ್ತದೆ ಎಂಬುದಕ್ಕೂ ತಾಳೆ ಹಾಕಬಹುದು. ಕೊನೆಯಲ್ಲಿ ಹೇಳುವುದಾದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಳಕೆ ಮಾಡಬಾರದು.

ಖಡ್ಗಕ್ಕಿಂತ ಲೇಖನಿ ಹರಿತ
ಒಂದರ್ಥದಲ್ಲಿ ಕತ್ತಿ ಎಂಬುದೂ ಬ್ಲೇಡ್ ಅಲ್ಲವೇ? ಕತ್ತಿಗಳಿಗೆ ಕೆಲವೊಮ್ಮೆ ಒಂದು ಬದಿ ಮಾತ್ರ ಚೂಪಾಗಿರುತ್ತದೆ ಮತ್ತು ಕೆಲವೊಮ್ಮೆ ಎರಡೂ ಬದಿ ಚೂಪಾಗಿರುತ್ತದೆ. ಮೊದಲನೆಯದನ್ನು ಕೇವಲ sword ಎನ್ನುತ್ತಾರೆ. ಆದರೆ ಎರಡನೆಯದನ್ನು double edged sword ಎನ್ನುತ್ತಾರೆ. ಈ Double Edged Sword ಎಂಬುದು Metaphor ಅಥವಾ ರೂಪಕಾಲಂಕಾರ. ಒಂದು ಸನ್ನಿವೇಶದಲ್ಲಿ ಒಳಿತು ಮತ್ತು ಕೆಡುಕು ಎರಡೂ ಅಡಕವಾಗಿದ್ದರೆ ಅದನ್ನು Double Edged Sword ಎನ್ನುತ್ತಾರೆ.
ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತು ಎಲ್ಲರಿಗೂ ಗೊತ್ತೇ ಇದೆ. ಒಂದು ಖಡ್ಗದಿಂದ ಒಬ್ಬರನ್ನು ಹೆದರಿಸಬಹುದು, ಗಾಯಗೊಳಿಸಬಹುದು ಅಥವಾ ಕೊಲ್ಲಲೂಬಹುದು. ಲೇಖನಿಯನ್ನು ಖಡ್ಗದಂತೆ ಕೈಲಿ ಹಿಡಿದು ಬಳಸಲಾಗದು. ಆದರೆ ಒಂದು ಲೇಖನಿಯಿಂದ ಸಮಾಜದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಬಹುದು. ಯಾರೋ ಒಬ್ಬರ ಬಗ್ಗೆ ಕೇವಲವಾಗಿ ಬರೆದಾಗ, ಯಾವುದೋ ಒಂದು ಧರ್ಮಗುರುವಿನ ಬಗ್ಗೆ ಅಥವಾ ಇಡೀ ಧರ್ಮದ ಬಗ್ಗೆಯೇ ವ್ಯತಿರಿಕ್ತವಾಗಿ ಬರೆದಾಗ ಒಂದು ಪ್ರದೇಶ ಬಿಡಿ, ಇಡೀ ದೇಶದಲ್ಲೇ ದಳ್ಳುರಿ ಎಬ್ಬಿಸಬಹುದು. ಹಾಗಂತ ಲೇಖನಿಯಿಂದ ದಳ್ಳುರಿಯನ್ನೇ ಎಬ್ಬಿಸಬೇಕು ಅಂತಲೂ ಅಲ್ಲ, ಬದಲಿಗೆ ಜನರನ್ನು ಅನ್ಯಾಯದ ವಿರುದ್ಧ ದಂಗೆ ಏಳಲೂ ಲೇಖನಿಯನ್ನು ಬಳಸಿದವರು ಇದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೆ ಬರಲಿಲ್ಲ ಅಲ್ಲವೇ? ಯಾರೂ ಬೆಳ್ಳಿಯ ತಟ್ಟೆಯಲ್ಲಿ ಸ್ವಾತಂತ್ರ್ಯವನ್ನು ಇಟ್ಟು ಕೊಡಲಿಲ್ಲ. ಒಂದು ಲಿಖಿತ ಪತ್ರದ ಮೇಲೆ ಇಂದಿನಿಂದ ನೀವು ಸ್ವತಂತ್ರರು ಎಂದು ಸಹಿ ಹಾಕುವ ಲೇಖನಿಯ ಬಳಕೆ ಮುನ್ನ ಬಹಳಷ್ಟು ಲೇಖನಿಗಳು ದಬ್ಬಾಳಿಕೆಯ ವಿರುದ್ಧ ಹೋರಾಡಲು ಪ್ರೇರೇಪಿಸಿದವರು ಮತ್ತು ಬಳಸಿದವರು ಜೀವವನ್ನು ತೆತ್ತಿದ್ದಾರೆ ಕೂಡ.

ಅಕ್ಷರಗಳು ಮನಸ್ಸನ್ನು ಉಲ್ಲಸಿತವಾಗಿಸಬಹುದು
ಖಡ್ಗಕ್ಕಿಂತ ಲೇಖನಿ ಹರಿತ ನಿಜ. ಆದರೆ ಹಲವೊಮ್ಮೆ ನಾವೇ ಅನುಭವಿಸಿರುವಂತೆ ಲೇಖನಿಗಿಂತಾ ಕಾಗದ ಹರಿತ. ಒಂದು ಲಕೋಟೆಯನ್ನು ತೆರೆಯಲು ಹೋದಾಗ ಕೆಲವೊಮ್ಮೆ ಸರಕ್ಕೆಂದು ಚರ್ಮ ಸೀಳಬಹುದು. ರಟ್ಟಿನ ಡಬ್ಬ ಕಿತ್ತಲು ಹೋದಾಗ ಬೆರಳಿಗೆ ಅಥವಾ ಹಸ್ತಕ್ಕೂ ಏಟಾಗಿ ರಕ್ತ ಬರಬಹುದು. ಒಂದು ಕಾಗದದ ಅಂಚು ಬಲು ಹರಿತ. ಇಂದಿನ ದಿನಗಳಲ್ಲಿ ಲೇಖನಿ ಬಳಸಿ ಬರೆಯುವುದು ಬಹಳ ಕಡಿಮೆ. ಇರಲಿ, ಮೂಲ ಏನಾದರೂ ಇರಲಿ ಕೊನೆಯಲ್ಲಿ ಒಂದು ಕಾಗದದ ಮೇಲೆ ಪ್ರಿಂಟ್ ಆಗುತ್ತದೆ. ಹೀಗೆ ಮುದ್ರಿತವಾದ ಅಕ್ಷರಗಳು ಮನಸ್ಸನ್ನು ಉಲ್ಲಸಿತವಾಗಿಸಬಹುದು, ಪ್ರಶ್ನೆಗಳನ್ನು ಎಬ್ಬಿಸಬಹುದು, ಉತ್ತರಗಳನ್ನು ಕೊಡಬಹುದು, ಮಾಹಿತಿಯನ್ನು ನೀಡಬಹುದು, ಹಸನ್ಮುಖವಾಗಿಸಬಹುದು ಅಥವಾ ರೊಚ್ಚಿಗೆಬ್ಬಿಸಲೂಬಹುದು.

ಜ್ಞಾನದ ಬಗ್ಗೆಯೂ ಒಂದಿಷ್ಟು ಅರಿವು ಮೂಡಿಸಿಕೊಳ್ಳಿ
ಅದೆಲ್ಲಾ ಬಿಡಿ, ಈ ಬರಹದಿಂದ ನಿಮ್ಮ ಮನವನ್ನು ನಾನು ಹಾಳು ಮಾಡುವ ಆಶಯ ಇಲ್ಲಾ. ನಾವು ಮುದ್ರಿತ ಅಕ್ಷರಗಳನ್ನೇ ಓದಿದ್ದಾಗಲಿ ಅಥವಾ ಯಾವುದೇ ಮುದ್ರಿತವಲ್ಲದ ಅರ್ಥಾತ್ ಡಿಜಿಟಲ್ ರೂಪದಲ್ಲೇ ಓದಿದ್ದಾಗಲಿ ಮಾಡಿದಾಗಲೂ ನಮ್ಮ ಚಿಂತನೆಯನ್ನು ಹೆಚ್ಚಿಸುವ ಉತ್ತಮ ಸಾಮಾಗ್ರಿಯನ್ನು ಓದಬೇಕು. ಆದರೆ ಪರಿಶುದ್ಧ ಚಿನ್ನವು ಗಟ್ಟಿಯಲ್ಲ ಅದಕ್ಕೆ impurity ಸೇರಿಸಬೇಕಂತೆ.

ಇದೇ ತತ್ವವನ್ನು ಜ್ಞಾನಕ್ಕೂ ಬಳಸಿದರೆ, ಶುದ್ಧ ಜ್ಞಾನದ ಜೊತೆ ಒಂದಿಷ್ಟು ಜ್ಞಾನ ಆ ಕಡೆ ಈ ಕಡೆಯೂ ತಿಳಿದುಕೊಂಡಿರಬೇಕು. ನಿಮಗೆ ಒಳಿತು ಅಲ್ಲ ಅಂಬೋದು ಕೆಟ್ಟದ್ದು ಇರಬಹುದು ಹಾಗಂತ ಅದು ಕೆಟ್ಟದ್ದೇ ಆಗಿರಬೇಕಿಲ್ಲ. ಅನುಕೂಲಕ್ಕಾಗಿ ಕೆಟ್ಟದ್ದು ಎನ್ನುವ ಬದಲು ಸಲ್ಲದ್ದು ಎಂದುಕೊಂಡು ನಿಮಗೆ ಸಲ್ಲದ ಜ್ಞಾನದ ಬಗ್ಗೆಯೂ ಒಂದಿಷ್ಟು ಅರಿವು ಮೂಡಿಸಿಕೊಳ್ಳಿ. ಹೀಗಿದ್ದಾಗಲೇ ಯಾರಿಂದ ನಾವು ದೂರ ಇರಬೇಕು, ಯಾವುದು ನಮಗೆ ಅಪಾಯ ಮಾಡಬಹುದು ಅಥವಾ ಯಾವುದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಅರಿವು ಮೂಡುತ್ತದೆ. ಇಲ್ಲದಿದ್ದರೆ ಬೋಳೆ ಸ್ವಭಾವ ಆವರಿಸಿ ಜನರಿಂದ ವಂಚಿತರಾಗುತ್ತೇವೆ. ಬುದ್ಧಿಯನ್ನು ಹರಿತವಾಗಿ ಇಟ್ಟುಕೊಳ್ಳಲು ಸಕಲ ಯತ್ನ ಮಾಡುವಾ, ಏನಂತೀರಿ?

English summary
When the geometry canister came in hand, there was a little mender. Something fun to use this mender.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X