ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿದ್ದ ಮನೆಯ ಬಗ್ಗೆ ಇಷ್ಟಿಷ್ಟೇ ಮಾತು, ಇದೇ ಇಂದಿನ ನವರಸಾಯನ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಜಗತ್ಪ್ರಸಿದ್ದ ವ್ಯಕ್ತಿಗಳ ಬಗ್ಗೆ ಒಂದು ಕಾರ್ಯಕ್ರಮ ಅಂತ ಇದ್ದಾಗ ಹಿನ್ನೋಟ ಇರಲೇಬೇಕು. ಅಂಥವರ ಬಗ್ಗೆ ಮಾತನಾಡುವಾಗ ಅವರು ಹುಟ್ಟಿ ಬೆಳೆದ ಊರು ಮತ್ತು ಮನೆಯನ್ನು ಕೇಂದ್ರೀಕರಿಸುವುದು ಸರ್ವೇ ಸಾಮಾನ್ಯ. ನಡೆದು ಬಂದ ಹಾದಿ ಅಂತಾರಲ್ಲಾ ಅದು. ಅಲ್ಲಿ ಅರ್ಥೈಸಿಕೊಳ್ಳಬೇಕಾಗಿರುವುದು ಎಂದರೆ ಅವರು ಹುಟ್ಟಿದ ಪರಿಸರ ಅವರ ಮೇಲೆ ಬೀರಿದ ಪರಿಣಾಮ ಏನು ಎಂಬುದು.

ಇಂದಿಗೂ ಕುವೆಂಪು ಅವರು ಹುಟ್ಟಿ ಬೆಳೆದ ಮನೆ ಎಂಬ ಚಿತ್ರ ಅಂತರ್ಜಾಲದಲ್ಲಿ ಕಾಣುತ್ತಲೇ ಇರುತ್ತದೆ. ಸೆಲೆಬ್ರಿಟಿ ಆಗಲಿ ಅಥವಾ ಆಗದಿರಲಿ ಹುಟ್ಟಿದ ಮನೆ ಎಂದ ಮೇಲೆ ಆ ನಂಟು ಅಂಟಿನಂತೆ ಒತ್ತರಿಸಿಕೊಂಡೇ ಇರುತ್ತದೆ.

ಅಂಕಣ: ನೀವು ಯಾವತ್ತಾದರೂ ಎಲ್ಲಿಯಾದರೂ ಕಳೆದುಹೋಗಿದ್ರಾ?ಅಂಕಣ: ನೀವು ಯಾವತ್ತಾದರೂ ಎಲ್ಲಿಯಾದರೂ ಕಳೆದುಹೋಗಿದ್ರಾ?

ಮನೆ . . . ನಾವು ಹುಟ್ಟಿ ಬೆಳೆದ ಮನೆ, ನಾವು ಓಡಾಡಿ ಅಡ್ಡಾಡಿದ ಮನೆ ಎಲ್ಲವೂ ಹೃದಯವನ್ನು ಕೊರೆದುಬಿಟ್ಟಿರುತ್ತದೆ. ನೀವೆಷ್ಟೇ ಪರಪರ ಅಂತ ಕೆರ್ಕೊಂಡ್ರೂ ಆ ನೆನಪು ಕಿತ್ತೊಗೆಯಲಿಕ್ಕೆ ಸಾಧ್ಯವಿಲ್ಲ. ಕಳೆದ ವಾರ 'ಕಳೆದು' ಹೋಗುವ ಪರಿಯ ಬಗ್ಗೆ ಮಾತನಾಡುವಾಗ ಎಚ್ ಎಎಲ್ ಕ್ವಾಟರ್ಸ್ ಮನೆ ಬಗ್ಗೆ ಒಂದೆರಡು ಸಾಲು ಹೇಳಿದ್ದೆ. ಆ ದಿನಗಳ ಮನೆಗಳ ನನ್ನ ಅನುಭವವೇ ಇಲ್ಲಿನ ಕಥಾವಸ್ತು.

Nostalgia about childhood house and Bengaluru by Srinath Bhalle

ಮಾರತ್ ಹಳ್ಳಿ . . . ಹೆಸರಲ್ಲಿ ಹಳ್ಳಿ ಇದೆ ಅಷ್ಟೇ, ಆದರೆ ಹಳ್ಳಿ ಅಲ್ಲಿ. ವಿಜಯನಗರಕ್ಕೆ 'ಹೊಸಹಳ್ಳಿ' ಅಂತ ಹೆಸರಿತ್ತು ಒಮ್ಮೆ. RT Nagar ಒಮ್ಮೆ ಮಠದಹಳ್ಳಿ ಆಗಿತ್ತು. ಅಲ್ಲಿನ ಶಾಲೆಯಲ್ಲಿ ಬಹುಶಃ ಒಂದೆರಡು ವರ್ಷ ಓದಿದ್ದೆ. ದಿನಾ ಬೆಳಗ್ಗೆ ಶಾಲೆಗೇ ಹೋಗಲು ಒಂದೇ ಗಲಾಟೆ. ಅದೇಕೋ ಗೊತ್ತಿಲ್ಲ, ಅಳು ಅಳು ಅಳು.

ಎಲ್ಲಿಯವರೆಗೆ ಎಂದರೆ ಪಕ್ಕದ ಮನೆಯ ತಮಿಳು ಆಂಟಿ ಬೇಲಿಯ ಕಡ್ಡಿ ಮುರಿದುಕೊಂಡು ಬಾಗಿಲಲ್ಲಿ ನಿಲ್ಲೋ ತನಕ. ಮಾಮಿ ಬಂದರು ಅಂದರೆ ಅಲ್ಲಿಗೆ ಅಳು ಸ್ಟಾಪ್! ಕಾನ್ವೆಂಟ್ ಮಾದರಿಯ ಸ್ಕೂಲು. ಒಬ್ಬರಿಗಿಂತ ಇನ್ನೊಬ್ಬರು ಸ್ಟ್ರಿಕ್ಟು . . . sort of ಪೈಪೋಟಿ ಮೇಲೆ you know ! ಅಳು ಅಲ್ಲದೆ ಇನ್ನೇನು ನಗು ಬರುತ್ಯೆ?

ನಂತರದ ವಾಸ ಹಿರಿದಾದ ಕ್ವಾರ್ಟರ್ಸ್ ನಲ್ಲಿ. ಆ ಬೀದಿಯ ಮೊದಲ ಮನೆಯೇ ನಮ್ಮದು (S1). ಮನೆಯ ಕಾಂಪೌಂಡ್ ನಿಂದ ಹೊರಗೆ ಬಂದರೆ ಪೊಲೀಸ್ ಸ್ಟೇಷನ್ ನ ಹಿಂಭಾಗ. ಅಪರಾಧಿಗಳನ್ನು ಬಡಿಯೋದು, ಅವರು ಕುಯ್ಯೋಮುರ್ರೋ ಎಂದು ಅಳೋದು ಎಲ್ಲಾ ಸ್ಫಟಿಕದಷ್ಟೇ ಸ್ಪಷ್ಟ.

ಭೈರಪ್ಪಜ್ಜನ ಆ 'ಒಂದು ರುಪಾಯಿ'ಯ ಮೌಲ್ಯ ಗೂಗಲ್ ಗೂ ಸಿಗಲ್ ವೇನೋ?ಭೈರಪ್ಪಜ್ಜನ ಆ 'ಒಂದು ರುಪಾಯಿ'ಯ ಮೌಲ್ಯ ಗೂಗಲ್ ಗೂ ಸಿಗಲ್ ವೇನೋ?

ಅವತ್ತೇ decide ಅಪರಾಧಿ ಆಗಲಾರೆ ಅಂತ. ಮುಖ್ಯ ಬೀದಿ ದಾಟಿದರೆ ಪ್ರವೇಶವಿಲ್ಲದ ದೊಡ್ಡ ಕಾಂಪೌಂಡ್. ಕಾರಣ ಇಷ್ಟೇ ಅಲ್ಲಿಂದ ಒಂದರ್ಧ ಕಿಲೋಮೀಟರ್ (ಅನ್ನಿಸುತ್ತೆ) ದಾಟಿದರೆ ವಿಮಾನದ ರನ್-ವೇ. ನಮ್ಮ ಮನೆಯ ಮಹಡಿ ಹತ್ತಿದರೆ ವಿಮಾನ ಅದ್ಭುತವಾಗಿ ಕಾಣಿಸುತ್ತಿತ್ತು. ನಮ್ಮ ಮನೆಗೆ ಬರುವ ನೆಂಟರು Airbusನ take-off ನೋಡದೆ ಹೋಗುತ್ತಿರಲಿಲ್ಲ. ವಿಮಾನ ಹತ್ತಬೇಕು ಎಂಬ ಆಸೆ ಮೂಡಿದ್ದೂ ಇಲ್ಲೇ.

Nostalgia about childhood house and Bengaluru by Srinath Bhalle

ಮನೆಯಿಂದ ಬಲಬದಿಗೆ ಐದು ನಿಮಿಷ ನಡೆದು ಹೋದರೆ ಸಿನಿಮಾ ಮಂದಿರ. ಎಷ್ಟು ಸಿನಿಮಾಗಳನ್ನು ನೋಡಿದ್ದೇವೋ ನೆನಪಿಲ್ಲ. ಸಿಟಿಯಲ್ಲಿ ಬರೋ ಸಿನಿಮಾ ರಿಲೀಸ್ ಆಗಿ ಹಳತಾದ ಮೇಲೆ ಇಲ್ಲಿ ಬರುತ್ತಿದ್ದುದು. ಹೆಚ್ಚು ಎಂದರೆ ಒಂದು ಸಿನಿಮಾ ಒಂದು ವಾರ ಓಡುತ್ತಿತ್ತು. 'ಭಕ್ತ ಸಿರಿಯಾಳ' ಸತತ ಮೂರು ವಾರಗಳ ಕಾಲ ಓಡಿತ್ತು!

ಮಾರತ್ ಹಳ್ಳಿಯಿಂದ ನಮ್ಮ ಸ್ನೇಹಿತರ ವರ್ಗ ಸಿನಿಮಾ ನೋಡಲು ಅಲ್ಲಿಂದ ನಡೆದು ಬರುವಾಗ ನಮ್ಮ ಮನೆ ಮುಂದೆಯೇ ಹಾದು ಹೋಗುತ್ತಿದ್ದರು. ಅವರು ಬಂದರು, ಕರೆದರೂ ಅಂತ ಸಿನಿಮಾಕ್ಕೆ ಹೋದ ಸಂದರ್ಭಗಳೂ ಇವೆ ಅನ್ನಿ.

ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!

ಈಗ ಮನೆಯ ಮತ್ತು ಮನೆ ಸುತ್ತುಮುತ್ತಲ ಬಗ್ಗೆ ಮಾತಾಡೋಣ. ಬೀದಿಯಿಂದ ಮನೆಗೆ ಬರುವಾಗ ಗೇಟ್ ಎಂಬುದು ಇರಲಿಲ್ಲ. ಮನೆಯ ಸುತ್ತಲೂ ಗಿಡವೆಂಬ ಬೇಲಿಯ ಕಾಂಪೌಂಡ್ ದಾಟಿ ಒಳಗೆ ಬರುತ್ತಿದ್ದಂತೆಯೇ ಎಡ ಭಾಗದಲ್ಲಿ ದೊಡ್ಡ 'ಬಿಳೀ ನಂದಿಬಟ್ಟಲು' ಗಿಡ. ಅದ್ಭುತವಾಗಿ ಬೆಳೆದಿದ್ದ ಹೂಗಿಡವನ್ನು ನೋಡಲೇ ಚೆಂದ. ಅದರ ಪಕ್ಕದಲ್ಲೇ ಅದೇನೋ ಸಣ್ಣ ಗೋಡೆ ಇತ್ತು. ಅದೇನು ಅಂತ ನೆನಪಿಲ್ಲ. ಆದರೆ ಚೆನ್ನಾಗಿ ನೆನಪಿರುವುದು ಎಂದರೆ ನಮ್ಮ ಕ್ರಿಕೆಟ್ ಆಟಕ್ಕೆ ಅದೇ ವಿಕೆಟ್ ಎಂದು!

ಅಲ್ಲೊಂದು ಸಣ್ಣ ಓಣಿಯಂಥ ಜಾಗ. ಅಲ್ಲಿಂದ ಅತ್ಯಂತ ವೇಗಿಗಳು (ಅರ್ಥಾತ್ ನಾವು) ಬೌಲ್ ಮಾಡುತ್ತಿದ್ದುದು. ನಮ್ಮದು ಮೊದಲ ಮನೆಯಾದ್ದರಿಂದ ಒಂದಷ್ಟು ಜಾಗ ನಮ್ಮದಲ್ಲದಿದ್ದರೂ ನಮ್ಮ ಮನೆಗೆ ಸೇರಿದಂತೆ ಇದ್ದುದರಿಂದ ನಮ್ಮದಾಗಿತ್ತು. ಅಲ್ಲೊಂದು ಸೀತಾಫಲದ ಹಣ್ಣಿನ ಗಿಡ. ಅದೋ ಪೊದೆಯ ಮಧ್ಯೆ ಇದ್ದುದರಿಂದ ಹಾವು, ಓತೀಕ್ಯಾತ, ಹಾವುರಾಣಿ ಇತ್ಯಾದಿಗಳ ತಾಣವಾದ್ದರಿಂದ ಆ ದಿಕ್ಕಿಗೆ ಹೋಗುತ್ತಿರಲಿಲ್ಲ.

ಮನೆಯ ಹೊರಗೆ ಬೇಲಿಗಿಡದ ಕಾಂಪೌಂಡ್. ಆದರೆ ಪ್ರತೀ ಮನೆಗೆ ಸೇರಿದಂತೆ ಎತ್ತರದ ಒಂದು ದೊಡ್ಡ ಕಾಂಪೌಂಡ್ ಇತ್ತು. ಅದಕ್ಕೊಂದು ಗೇಟಿತ್ತು. ನಮ್ಮ ಮನೆಯ ಸ್ವಲ್ಪ ಆ ಬದಿಯಲ್ಲಿ ಎಚ್ ಎಎಲ್ ನವರದ್ದೇ ಆದ ಹೈಸ್ಕೂಲ್ ಇತ್ತು. ನಮ್ಮ ತಂದೆಯ ಸ್ನೇಹಿತರ ಮಕ್ಕಳಲ್ಲಿ ಕೆಲವರು ಆ ಶಾಲೆಗೇ ಹೋಗುತ್ತಿದ್ದರು. ಅವರು ತಮ್ಮ ಸೈಕಲ್ ಅನ್ನು ನಮ್ಮ ಕಾಂಪೌಂಡ್ ನಲ್ಲಿ ನಿಲ್ಲಿಸಿ ಹೋಗುತ್ತಿದ್ದರು.

ಆ ಸಣ್ಣ ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆಯೇ ಬಲಬದಿಯಲ್ಲಿ ಚಕೋತ ಹಣ್ಣಿನ ಮರ. ಆ ಮರವೇ ನಮಗೆ ಮಾಡಿ ಹತ್ತಲು ಏಣಿ! ಮಹಡಿ ಏರಲು ಇರಲಿಲ್ಲ. ಎಡಬದಿಯಲ್ಲಿ ಒಂದು ದೊಡ್ಡ ಸಪೋಟ ಮರ. ಬೇಕಾದಷ್ಟು ಕಾಯಿ ಬಿಡುತ್ತಿತ್ತು. ಕಿತ್ತಿಟ್ಟು ಅಕ್ಕಿಯಲ್ಲಿ ಹುದುಗಿಸಿ ಹಣ್ಣು ಮಾಡಿಕೊಂಡು ತಿಂದಿದ್ದು ಬಹಳ ಕಡಿಮೆ.

ಇರಲಿ, ಸಪೋಟ ಮರದ ಪಕ್ಕದ್ದೇ ಬಲಿಷ್ಠವಾದ ಮತ್ಯಾವುದೋ ಮರ. ಅದೇ ನನ್ನ ಬಸ್ಸು. ನನಗೋ ಬಸ್ ಆಟದ ಹುಚ್ಚು. ಕೂರಲು ಒಂದು ದಿಂಬು ಇಟ್ಟುಕೊಂಡು ಒಂದು ಮೂಲೆಯಲ್ಲಿ ಮುಡಿದು ಎಸೆದ ಹೂವು, ಮತ್ತೊಂದೆಡೆ ದೇವರ ಫೋಟೋ ಇಟ್ಟುಕೊಂಡು ಬಸ್ ಆಟ ಆಡುತ್ತಿದ್ದೆ. ಯಾರೇನು ಅಂದುಕೊಳ್ಳಬಹುದು ಎಂಬ ಚಿಂತೆ ಇಲ್ಲದ ದಿನಗಳು.

ನನ್ನ ಬಸ್ ಮರದ ಆ ಬದಿಯಲ್ಲಿ ಹಲಸಿನಹಣ್ಣಿನ ಮರ. ಒಂದು ದಿನಕ್ಕೂ ಹಣ್ಣು ಕಿತ್ತು ತಿಂದಿದ್ದು ನನಗೆ ನೆನಪಿಲ್ಲ. ಅದರ ಪಕ್ಕದ್ದೇ ನುಗ್ಗೆಕಾಯಿ ಮರ. ಎಲೆಗೊಂದು ಕಾಯಿ ಅಂತಾರಲ್ಲಾ ಹಾಗೆ ಬೇಕಾದಷ್ಟು ಕಾಯಿ ಬಿಡುತ್ತಿತ್ತು. ಸಂಪ್ರದಾಯಸ್ಥ ಮನೆಯ ನಾವು ಒಂದು ದಿನಕ್ಕೂ ಕಿತ್ತು ಹುಳಿ ಮಾಡಿದವರಲ್ಲ !

ಇದೇ ಕಾಂಪೌಂಡ್ ನಲ್ಲಿ ಮೂರು ಕರಿಬೇವು ಮರಗಳಿದ್ದವು. ಸಿಟಿ ಮಾರ್ಕೆಟ್ ನಿಂದ ಬೀದಿ ಬದಿಯ ತರಕಾರಿ ವ್ಯಾಪಾರಸ್ಥರು ನಮ್ಮ ಕಡೆ ಬಂದು ನುಗ್ಗೆಕಾಯಿ ಮತ್ತು ಕರಿಬೇವು ಕಿತ್ತುಕೊಂಡು ಹೋಗುತ್ತಿದ್ದರು. ನಮ್ಮದಲ್ಲದ ಮರಗಳು, ಹಾಗಾಗಿ ನಮ್ಮ ತಂದೆ ಅವರಿಂದ ಹಣ ತೆಗೆದುಕೊಳ್ಳುತ್ತಿರಲಿಲ್ಲ.

ಇವೆಲ್ಲಾ ಪಕ್ಕಕ್ಕೆ ಇಟ್ಟರೆ ಮಜಬೂತಾಗಿ ಇದ್ದುದು ಎಂದರೆ ಎರಡು ಮಾವಿನ ಮರಗಳು. ಗಿಣಿಮೂತಿ ಮಾವಿನಕಾಯಿಯೇ ಇರಬೇಕು. ಅತ್ಯದ್ಭುತ. ಎಷ್ಟು ಉಪ್ಪಿನಕಾಯಿ, ಎಷ್ಟು ಹಣ್ಣುಗಳನ್ನು ತಿಂದಿದ್ದೇವೋ ಲೆಕ್ಕವಿಲ್ಲ. ಎರಡು ಮಾವಿನ ಮರಗಳು ನಡುವೆ ಒಂದು ಬೇವಿನ ಮರವೂ ಇತ್ತು. ಇದೆಲ್ಲಾ ದಾಟಿ ಸ್ವಲ್ಪ ಈಚೆ ಬಂದರೆ ಅಲ್ಲೊಂದು ದೊಡ್ಡ ನೀರಿನ ತೊಟ್ಟಿ, ಬಟ್ಟೆ ಒಗೆಯುವ ಬಂಡೆ, ಮತ್ತು ಪಾತ್ರೆ ತೊಳೆಯುವ ಸ್ಥಳ. ಇದಿಷ್ಟು ಕಾಂಕ್ರೀಟಿನ ಹಿಂದೆಯೇ ಅಂಜೂರದ ಮರ. ಪಕ್ಕದಲ್ಲಿ ಮನೆಯ ಹಿಂದಿನ ಬಾಗಿಲು.

ಕೆಲವೊಮ್ಮೆ ಇವೆಲ್ಲವನ್ನೂ ಮೆಲುಕು ಹಾಕುತ್ತಿದ್ದರೆ 'ಇದು ನಿಜವೇ?' ಎನಿಸುತ್ತದೆ. ಆ ನಾಡು ಬಿಟ್ಟು ಬಹಳ ವರ್ಷಗಳ ಮೇಲೆ ಮತ್ತೊಮ್ಮೆ ಆ ದಿಕ್ಕಿಗೆ ಹೋಗಿದ್ದೆ. ನಮ್ಮದೇ ಮನೆ ಅರ್ಥಾತ್ ನಾವಿದ್ದ ಮನೆ ಇನ್ನೂ ಹಿರಿದಾಗಿ ಕಾಣುತ್ತಿತ್ತು. ಎಡಬದಿಯಲ್ಲಿ ಗಿಡವೇನೋ ಇತ್ತು ಆದರೆ ಬಲಬದಿಯ ಖಾಲಿ ಜಾಗದಲ್ಲಿ ಎರಡು ಕಾರುಗಳು ನಿಂತಿತ್ತು. ಇಷ್ಟು ಜಾಗ ಇತ್ತೇ? ಯಾಕೆ ಬಳಸಲಿಲ್ಲ ಎಂದೇ ಗೊತ್ತಿಲ್ಲ.

ಎಡಗಡೆಯ ಮನೆಯಲ್ಲಿ ಮಲಯಾಳಿ ಅಂಕಲ್ ಇರಲಿಲ್ಲ. ಹಿಂದಿನ ಮನೆಯ ತೆಲುಗು ಮಂದಿ ಇರಲಿಲ್ಲ. ಹಿಂದಿನ ಮನೆಯ ಪಕ್ಕದಲ್ಲಿ ಡಾಕ್ಟರ್ ದಂಪತಿ ಕಾಣಿಸಲಿಲ್ಲ. ಎಲ್ಲರೂ ಎಲ್ಲಿ ಹೋದರೋ ಗೊತ್ತಿಲ್ಲ. ಒಂದು ಸ್ಥಳದಿಂದ ದೂರ ಬಂದು, ಎಷ್ಟೋ ವರ್ಷಗಳ ನಂತರ ಆ ದಿಕ್ಕಿಗೆ ಹೋದಾಗ ಅಲ್ಲಿ ಇದ್ದವರು ಈಗಿಲ್ಲ ಎಂಬ ಪರಿ, ದೇಶ ಬಿಟ್ಟು ಬಂದು ಭೇಟಿಗೆಂದು ಹೋದಾಗ ಎದ್ದು ಕಾಣುತ್ತದೆ. ಇಂದಿನ ಬಿಜಿ ಯುಗದಲ್ಲಿ, ಯಾವುದಕ್ಕೂ ಸಮಯವಿರದ ಕಾಲದಲ್ಲಿ ಈ ರೀತಿ ಅನುಭವ ದೇಶ ಬಿಟ್ಟು ಬಂದವರಿಗೇ ಆಗಬೇಕಿಲ್ಲ.

ಎದೆಯಾಳದಲಿ ಬಚ್ಚಿಕೊಂಡಿರುವ ಹುಟ್ಟಿ-ಬೆಳೆದ ಮನೆಯ ನೆನಪು ಮಾತ್ರ ಅಳಿದಿಲ್ಲ. ಅಳಿಯುವುದೂ ಇಲ್ಲ.

English summary
Oneindia columnist Srinath Bhalle remembers his childhood days, house and how was the Bengaluru? It was a beautiful memories which will take you to your childhood days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X