• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

"ಓ! ಸಾರಿ !! ತಪ್ಪಾಗಿ ಮಿಸ್ಟೇಕ್ ಆಯ್ತು !!! don't worry ಮಾಡ್ಕೋಬೇಡಿ"

"ತಪ್ಪೆಲ್ಲಾ ಜನದ್ದೇ . . . ಸಿಟ್ಟು ಬರೋ ವಿಷಯಕ್ಕೆಲ್ಲಾ ಕೋಪ ಮಾಡ್ಕೋತಾರೆ!"

"ಆಯ್ತಪ್ಪ! ನನ್ನದೇನಾದ್ರೂ ತಪ್ಪಿದ್ರೆ ಕ್ಷಮಿಸಿ . . ."

"ನನ್ನಿಂದ ನಿಮ್ಮ ಮನಸ್ಸಿಗೆ ಏನಾದರೂ ನೋವಾಗಿದ್ರೆ ಕ್ಷಮಿಸಿ."

"ಮಗು ತೊಡೆಯ ಮೇಲೆ ಸೂಸು ಮಾಡಿತು ಅಂತ ತೊಡೆ ಕತ್ತರಿಸಲು ಆಗುತ್ಯೇ?"

ಅಂಕಣ: ನೀವು ಯಾವತ್ತಾದರೂ ಎಲ್ಲಿಯಾದರೂ ಕಳೆದುಹೋಗಿದ್ರಾ?

ಇತ್ತೀಚಿನ ದಿನಗಳ ನ್ಯೂಸ್ ಚಾನಲ್'ಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಮೇಲೆ ಹೇಳಿದ ರೀತಿಯ ಮಾತುಗಳೇ ಸೆಲೆಬ್ರಿಟಿ ಅನ್ನಿಸಿಕೊಂಡವರಿಂದ ಹೊರಬರುತ್ತಿರುವ ನುಡಿಮುತ್ತುಗಳು! ಅಂದರೆ ಸೆಲೆಬ್ರಿಟಿ ಅಲ್ಲದವರು ಇಂಥಾ ಮಾತು ಆಡೋಲ್ವೇ ಎನ್ನಬೇಡಿ. ಮಾತಾಡ್ತಾರೆ ಆದರೆ ಕೇಳೋವ್ರ್ಯಾರು?

ತಪ್ಪಿತಸ್ಥರನ್ನು ಒಪ್ಪಿಟ್ಟುಕೊಂಡು ಬರುವ ಪರಿ, ನಾನು ಇರೋದೇ ಹೀಗೆ ನಿಮಗಿಷ್ಟ ಬಂದ ಹಾಗೆ ಬರ್ಕೊಳಿ / ಬಡ್ಕೊಳಿ ಎಂಬ ಧೋರಣೆ!

ಸಾರಿ ಸಾರಿ ನುಡಿವ 'ಸಾರಿ (Sorry)' ಪದ ಎಂಥಾ ಸವಕಲಾಗಿದೆ ಎಂದರೆ ಯಾರೂ ಆ ಪದವನ್ನು ಹೃದಯದಿಂದ ನುಡಿಯುತ್ತಲೇ ಇಲ್ಲ. ತುಟಿಯ ಮೇಲಿನ ಮಾತು ಅಷ್ಟೇ. ಕರೆದ ಕಡೆ ಹೇಳಿದ್ದಕ್ಕಿಂತಾ ಕೇವಲ ಎರಡು ಘಂಟೆ ತಡವಾಗಿ ತಲುಪಿ 'ಸಾರಿ ಲೇಟಾಯ್ತು' ಅನ್ನೋ ಹಾಗೆ!

ಕಳೆದ ಬಾರಿ ಹಾರ್ವಿ ವೇಯ್ನ್ ಸ್ಟೀನ್ ಬಗ್ಗೆ ಒಂದು ನಾಲ್ಕು ಮಾತು ಹೇಳಿದ್ದೆ. ಅದಾದ ಮೇಲೆ ಕೆವಿನ್ ಸ್ಪೇಸಿ ಎಂಬಾತನ ರಂಗು ರಂಗಾದ ವಿಷಯ ಎಲ್ಲರ ಬಾಯಲ್ಲೂ ಓಡಾಡಿತ್ತು. ಆ ನಂತರ ಒಂದಷ್ಟು ರಾಜಕಾರಣಿಗಳು. 'ಅನುಚಿತ ವರ್ತನೆ' ಎಂಬ ತಲೆಬರಹದ ಅಡಿಯಲ್ಲೇ, ಹೆಚ್ಚು ಜನದ್ದು ಒಂದೇ ರೀತಿಯ ತಪ್ಪೊಪ್ಪಿಗೆ. ಬಾಯಿಗೆ ತುರುಕಿದಂತಿರುವ ಮೈಕುಗಳಿಗೆ "ನನ್ನಿಂದ ಅರಿತೋ ಅರಿಯದೆಯೋ ತಪ್ಪಾಗಿದ್ರೆ ಕ್ಷಮಿಸಿ" ಎಂಬ ಇವರ ನುಡಿಮುತ್ತುಗಳ ಆಹಾರ.

ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!

ಇವರೆಲ್ಲರ ಅನರ್ಥ ಕ್ಷಮೆ ನುಂಗಿ ನುಂಗಿ ಆ ಮೈಕುಗಳಿಗೇ ಹೊಟ್ಟೆ ಕೆಟ್ಟುಹೋಗಿದೆ. ಮುಕುಟಪ್ರಾಯವಾದ ಹೇಳಿಕೆಯ ರೂಪ ಎಂದರೆ "ಅರಿತೋ ಅರಿಯದೆಯೋ ತಪ್ಪಾಗಿದ್ರೆ ಕ್ಷಮಿಸಿ" ಎಂಬುದು. ಅತ್ಯಂತ ಬೇಜವಾಬ್ದಾರಿಯ ತಪ್ಪೊಪ್ಪಿಗೆ ಇದು. ಜನರ ಕಣ್ಣೊರೆಸಲು ಆಡುವ ಮಾತಿದು ಅಷ್ಟೇ!

"ಅರಿತೋ ಅರಿಯದೆಯೋ" ಎಂದಾಗ ಅನಿಸೋದು "ಅರಿತು" ಮಾಡಿದ್ದಲ್ಲಿ ನೀವು ಶಿಕ್ಷಾರ್ಹರು! "ಅರಿಯದೇ" ಮಾಡಿದ್ದರೆ ಎಂಬುದರಲ್ಲಿ ನನಗೆ ನಂಬಿಕೆಯೇ ಇಲ್ಲ. ಇನ್ನು "ತಪ್ಪಾಗಿದ್ರೆ" ಎಂಬುದಂತೂ ಬೇಜವಾಬ್ದಾರಿಯ ಪರಾಕಾಷ್ಠೆ! ತಾವು ಮಾಡಿದ್ದು ತಪ್ಪು ಅಂತ ಇವರಿಗೆ ಅನ್ನಿಸಿಯೇ ಇಲ್ಲ.

ಇತ್ತೀಚಿನ ಬಿಸಿ ಬಿಸಿ ಸುದ್ದಿ ಎಂದರೆ ಅಮೇರಿಕಾದ ಪ್ರಖ್ಯಾತ ಚಾನಲ್'ನ ಪ್ರಮುಖ ವರದಿಗಾರ 'Matt Lauer' ಎಂಬಾತನ ರಾಸಲೀಲೆ. ಅಧಿಕಾರದಲ್ಲಿದ್ದ ಮೇಲೆ ತನ್ನಿಚ್ಛೆಯಂತೆ ನಡೆದುಕೊಳ್ಳಬಹುದು ಎಂಬುದು ಒಂದು ರೀತಿಯ ಧೋರಣೆ. ಅದರೊಟ್ಟಿಗೆ ಮತ್ತೊಬ್ಬರನ್ನು ಮೇಲೆ ಬರದಂತೆ ಅಡ್ಡಗಾಲು ಹಾಕುವುದು. ಎರಡೂ ಅಪರಾಧವೇ! ಅಂಥಾ ದೊಡ್ಡ ಪದವಿಯಲ್ಲಿರುವವನ ನೀಚ ಕೆಲಸಗಳು ಈಗ ಒಂದೊಂದೇ ಹೊರಬರುತ್ತಿವೆ. ಅವನು ಹಾಗಂತೆ ಹೀಗಂತೆ ಎಂಬೆಲ್ಲಾ ಸುದ್ದಿಗಳ ನಡುವೆ 'ಸ್ವಲ್ಪ ಸುಳ್ಳು ಹೆಚ್ಚು ನಿಜ' ಎಂಬಲ್ಲಿಗೆ ಬಂದು ನಿಂತಿದೆ ಈಗ.

ಹೃದಯ ಮುಟ್ಟಿ ಮನವನು ತಟ್ಟುವ ಅಳಿಸಲಾರದ ನೆನಪು

ಇವೆಲ್ಲಾ ಇಲ್ಲಿ ಅಲವತ್ತುಕೊಳ್ಳೋ ಅವಶ್ಯಕತೆ ಏನಿದೆ? ಇಲ್ಲಿ ಬರೆದ ಮಾತ್ರಕ್ಕೆ ಜಗತ್ತಿನ ಅನ್ಯಾಯ ಸರಿಹೋಗುತ್ತದೆಯೇ? ಹನಿ ಹನಿಗೂಡಿದರೆ ಹಳ್ಳ! ಇಂಥಾ ಅಲವತ್ತುಕೊಳ್ಳೋ ಪ್ರಯತ್ನಗಳು ಸಾಗುತ್ತಲೇ ಇರಬೇಕು, ನಿಲ್ಲಬಾರದು.

ಇಂಥಾ ಅನ್ಯಾಯದ ವಿರುದ್ಧ ಹೋರಾಡಲು ಒಬ್ಬಾಕೆ ಬಾಯಿಬಿಟ್ಟಿದ್ದೇ ತಡ ಮತ್ತೊಬ್ಬರು ಮಗದೊಬ್ಬರು ಅಂತ ಸಾವಿರಾರು ಮಂದಿ ಅದಕ್ಕೆ ದನಿಗೂಡಿಸಿದರು. ಅದೇ 'ಮೀ ಟೂ' ಅಭಿಯಾನ. ಇಂದು ಟೈಮ್ಸ್ 'ವರ್ಷದ ವ್ಯಕ್ತಿ'ಯಾಗಿ "Silent Breakers" ಆಯ್ಕೆಯಾಗಿದೆ ಎಂದರೆ ಹನಿಹನಿಗೂಡಿದರೆ ಹಳ್ಳ ಎಂಬುದು ಸತ್ಯ ಅನ್ನಿಸೋದಿಲ್ವೇ? ಹಾಗಂತ ಪ್ರತಿ ಒಬ್ಬರೂ ಮುಂದೆ ಬರಲಿಲ್ಲ. ಕೆಲವರು ಮರೆಯಲ್ಲಿ ಉಳಿದರು. ಹಲವಾರು ಹೇಳಿಕೊಂಡರೂ ಅನಾಮಧೇಯರಾಗೇ ಉಳಿದರು. ಇವರ ಪ್ರತೀಕವೇ ಟೈಮ್ಸ್'ನ ಮುಖಪುಟದಲ್ಲಿರುವ 'ಬಲಗೈ'ನ ವ್ಯಕ್ತಿ. ಮುಖ ತೋರದ ಕೈ. ಕೈಗೂಡಿಸಿದ್ದರೂ ಮುಖ ತೋರದವರು! ಅದ್ಬುತ ಪರಿಕಲ್ಪನೆ!

ಬರಹದ ಉದ್ದೇಶ 'ಕಳಕಳಿ'! ಸಾಮಾಜಿಕ ಕಳಕಳಿ ಅಷ್ಟೇ! ಇನ್ನೆರಡು ಪೀಳಿಗೆ ದಾಟಿದರೆ ನಮ್ಮ ಪೀಳಿಗೆಯ ಉತ್ತಮ ವ್ಯಕ್ತಿಗಳ ಬಗ್ಗೆ ಹೇಳೋಕ್ಕೆ ಏನೂ ಇರೋದಿಲ್ಲ.

ನಾಲ್ಕು ಜನ ತಲೆ ಎತ್ತಿ ನೋಡುವ ಒಂದು ಪದವಿಯಲ್ಲಿ ಇದ್ದ ಮೇಲೆ ಹಲವು ಬಾರಿ 'ನೋಡಿ ಸ್ವಾಮಿ ನಾವಿರೋದೇ ಹೀಗೆ' ಎಂಬ ಧೋರಣೆ ಪಕ್ಕಕ್ಕೆ ಇಟ್ಟು ಸಮಾಜಕ್ಕೆ ಬೇಕಾದಂತೆ ಬದುಕಬೇಕಾಗುತ್ತೆ. ಆ ಸಮಯದಲ್ಲಿ ನಾವು ಬರೀ ನಾವಾಗಿರದೆ ಸಮಾಜದ ಆಸ್ತಿಯಾಗಿರುತ್ತೇವೆ.

ಅವರನ್ನು ಕಂಡು ಅನುಕರಿಸುವವರು ಬಹಳಷ್ಟು ಜನರಿರುತ್ತಾರೆ. ಚಿತ್ರರಂಗದಲ್ಲೋ, ಕ್ರೀಡಾರಂಗದಲ್ಲೋ ಇದ್ದರಂತೂ ಆ ಲೆವೆಲ್ ಬೇರೆಯೇ ಆಗಿರುತ್ತದೆ. ಅವರ ಒಂದೊಂದು ನಡೆಯೂ ಅವರದಾಗಿರೋದಿಲ್ಲ. ಇದು ಅವಶ್ಯಕವೋ, ಅನಿವಾರ್ಯವೋ ಏನೂ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ಅದು ಹಾಗೆಯೇ. ಪಾಲಿಶ್ ಆಗಿಯೇ ಬದುಕಬೇಕು. ಅಂದ ಹಾಗೆ, ಹಾಗಿರೋದಿಲ್ಲ ಎಂದರೆ ತಾವು ಸಮಾಜದ ಪ್ರತೀಕವಾಗಲು ಲಾಯಕ್ಕಿಲ್ಲ.

ರಾಜಕುಮಾರನ ಮದುವೆಯಾಗುವ ಮುನ್ನ ರಾಜಕುಮಾರಿಗೆ ತಾಲೀಮು ನೀಡಲಾಗುತ್ತದೆ. ಆಕೆ ಆ ಸ್ಥಾನದಲ್ಲಿ ಇರೋ ತನಕ ಚಾಚೂ ತಪ್ಪದೆ ಆ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಬೇರೆ ದಾರಿ ಇಲ್ಲ. ಏಕೆಂದರೆ ಆಕೆ ಕೇವಲ ಆಕೆಯಾಗಿರದೆ ರಾಜವಂಶದ ಪ್ರತಿನಿಧಿಯಾಗಿರುತ್ತಾಳೆ.

ರಾಷ್ಟ್ರೀಯವಾಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಾಗಲೀ ಎಲ್ಲೆಲ್ಲೂ ತುಂಬಿರೋದು ಬರೀ ಹಗರಣಗಳೇ! 'ಹಗರಣ'ದಲ್ಲಿ ಪ್ರಮುಖವಾಗಿ 'ಹಣ' ಇದೆ. ಪದದಲ್ಲೇ ನೋಡಿ! ಮೊದಲಲ್ಲಿ ಶುರುವಾಗಿ ಕೊನೆಯವರೆಗೂ ಇದೆ. ಈ 'ಹಣ' ಎಂಬುದು ಎಷ್ಟು ಓಡಾಡುತ್ತವೆ ಎಂದು ಊಹಿಸಿದರೆ 'ಗರ' ಬಡಿದಂತಾಗುವ ನಮ್ಮನ್ನು 'ಹರ'ನೇ ಕಾಪಾಡಬೇಕು.

English summary
Many people have the bad habit of asking apology for no reason. Apology word should not be taken for granted. An apology is a lovely perfume; it can transform the clumsiest moment into a gracious gift. Use it suitably. A write up by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more