ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಯ ದಿನಗಳು - ಹನ್ನೆರಡೊಂಬೋತ್ಲಾ ಎಷ್ಟೋ?

ಶಾಲೆಯ ದಿನಗಳು - ಹನ್ನೆರಡೊಂಬೋತ್ಲಾ ಎಷ್ಟೋ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಏನೋ ಮಾಡ್ತಾ ಕೂತಿದ್ದೆ. ಯಾವ ಉಪಯುಕ್ತವಾದ ಕೆಲಸವೂ ಅಲ್ಲ ಅಂತ ವಿಶೇಷವಾಗಿ ಹೇಳೋದೇನಿದೆ? ಅಡುಗೆಮನೆಯಿಂದ ದನಿ ತೂರಿಬಂತು "ಕೆಲ್ಸಕ್ ಬಾರದ್ ಹರಡ್ಕೊಂಡ್ ಕೂತಿದ್ದೀಯಲ್ಲಾ, ನಾಳೆ ಸೈನ್ಸ್ ಎಕ್ಸಾಮ್'ಗೆ ಓದಿದ್ದೀಯಾ? " ಅಂತ!

ಮೊದಲಿಗೆ ಎಕ್ಸಾಮ್ ಇರೋದೇ ಗೊತ್ತಿಲ್ಲ. ಅದರಲ್ಲೂ ಸೈನ್ಸ್ ಅಂತೆ. ವಿಜ್ಞಾನ ವಿಷಯದ ಅಜ್ಞಾನದ ಮೂರ್ತಿ ರೂಪ ನಾನು. ಹರಡಿಟ್ಟಿದ್ದನ್ನು ಬದಿಗೊತ್ತಿ ರೂಮಿಗೆ ಓಡಿದೆ. ಹಲವಾರು ಪುಸ್ತಕಗಳ ರಾಶಿಯಲ್ಲಿ ಸೈನ್ಸ್ ಪುಸ್ತಕ ಕೂಡ ಇತ್ತು. ವರ್ಷದ ಮೊದಲಲ್ಲಿ ಹೇಗೆ ಬ್ರೌನ್ ಕವರ್ ಹಾಕಿ ಇಟ್ಟಿದ್ದೆನೋ, ಅಷ್ಟೇ ಚೊಕ್ಕಟವಾಗಿತ್ತು. ನೋಡೋಕ್ ಎರಡು ಕಣ್ಣು ಸಾಲದು. ಒಮ್ಮೆ ಕೈಗೆತ್ತಿಕೊಂಡು ಪುಟ ತೆರೆದರೆ, ಅಂದಿನ ಹೊಸ ಪುಸ್ತಕದ ಹಾಳೆಗಳ ಸುವಾಸನೆಯೇ ಇಂದಿಗೂ. ಒಂದೊಂದು ಪುಟಗಳನ್ನು ತೆರೆಯುತ್ತಿದ್ದರೇ, ಪ್ರತೀ ಪುಟದ ಭಾವ ನವನವೀನ! ಯಾವ ವಿಷಯವನ್ನೂ ಓದಿದ ನೆನಪಿಲ್ಲ.

ವ್ಯಕ್ತಿತ್ವ ಬೆಳೆಸಿದ ಕನ್ನಡ ಕಲಿಸಿದ ನನ್ನ ಪ್ರೀತಿಯ ಶಾಲೆವ್ಯಕ್ತಿತ್ವ ಬೆಳೆಸಿದ ಕನ್ನಡ ಕಲಿಸಿದ ನನ್ನ ಪ್ರೀತಿಯ ಶಾಲೆ

ಬಭೃವಾಹನ ಚಿತ್ರದ ಅರ್ಜುನನ ಪರಿಸ್ಥಿತಿ! 'ಬೀರ' ಕಾಳಿದಾಸನಾದ ಮೇಲಿನ ವಿಲಕ್ಷಣ ಸ್ಥಿತಿ! ಶಕುಂತಲೆಯನ್ನು ಮರೆತ ದುಷ್ಯಂತನ ಆವಾಹನೆ! ಮಂತ್ರ ಮರೆತ ಕರ್ಣ ನಾನಾಗಿದ್ದೆ. ಕೊನೆಗೆ ತಡೆಯಲಾರದೆ "ಅಮ್ಮಾ ನಾನ್ಯಾವ ಕ್ಲಾಸು ಅಂತ ಕೂಗಿ ಕೇಳಿದೆ!" ..ಪಕ್ಕದಲ್ಲೇ ಮಲಗಿದ್ದ ಹೆಂಡತಿ ತಿವಿದು ಎಬ್ಬಿಸಿದಳು! ಓದೋ ಕಾಲಕ್ಕೆ ಸರಿಯಾಗಿ ಓದಿದ್ದರೆ ಹೀಗಾಗ್ತಿರಲಿಲ್ಲ. ಪುಸ್ತಕಗಳು, ಸಬ್ಜೆಕ್ಟ್'ಗಳು ಬೆಂಬಿಡದ ಭೂತಗಳ ಹಾಗೆ ಕಾಡುತ್ತಿರಲಿಲ್ಲ!

ಅಬ್ಬಬ್ಬಾ! ಎಂಥಾ ಭಯಂಕರ ಕನಸು! ಈ ಕನಸುಗಳೇ ಹೀಗೆ. ಯಾವುದಾದರೂ ಸುದ್ದಿ ನೋಡಿದ್ದರೆ, ಕೇಳಿದ್ದರೆ, ಓದಿದ್ದರೆ ಅದು ನಿದ್ದೆಯಲ್ಲೂ ಮುಂದುವರೆಯುತ್ತದಂತೆ! ಹಾ! ನೆನಪಾಯ್ತು. . . ಎರಡು ವಾರದ ಹಿಂದೆ, ಮಗನ ಶಾಲೆ ಆರಂಭವಾಯ್ತು ಅಂತ ನಾದಿನಿ ಹೇಳುತ್ತಿದ್ದಳು. ಆಗ ನನ್ನ ಶಾಲಾ ದಿನಗಳು ನೆನಪಾಗಿತ್ತು. ಅದರ ಪ್ರಭಾವವೇ ಇರಬೇಕು! ಆದರೆ ಕನಸು ಬೀಳೋದು ಸ್ವಲ್ಪ ಲೇಟ್ ಆಯ್ತು ಅಷ್ಟೇ!

srinathbhalle

ಈಗ ಬೇಸಿಗೆ ರಜಾ ಮುಗಿದು ಮಕ್ಕಳೆಲ್ಲ ಶಾಲೆಗೆ ಹೊರಟು ಆಗಲೇ ಎರಡು ವಾರಕ್ಕೆ ಬಂತು. ಕನ್ನಡ ನಾಡಿನ ಕಂದಮ್ಮಗಳು ವಿವಿಧ ರೀತಿಯ ಶಾಲಾ ಸಮವಸ್ತ್ರ ತೊಟ್ಟು, ಮನೆ ಮುಂದೆ ಬಣ್ಣ ಬಣ್ಣದ ಬಸ್ ಏರಿ ದು:ಖ ದುಮ್ಮಾನದಿಂದಲೋ ಅಥವಾ ಸಂತಸದಿಂದಲೋ ಶಾಲೆಗೆ ಹೊರಟ ಈ ಸಮಯದಲ್ಲಿ ಅಮೆರಿಕಾದಲ್ಲಿನ ಮಕ್ಕಳು ಈ ಸರ್ತಿಯ ಶಾಲೆ ಮುಗಿಸಿ ಬೇಸಿಗೆ ರಜಾಕ್ಕೆ ಅಣಿಯಾಗುತ್ತಿದ್ದಾರೆ. ಮಿಡ್ಲ್ ಸ್ಕೂಲು ಮತ್ತು ಹೈಸ್ಕೂಲ್ ಮುಗಿಸಿದವರು ಗ್ರಾಜುಯೇಷನ್ ಮುಗಿಸಿ ನೆಮ್ಮದಿಯ ಉಸಿರಾಡುತ್ತಿದ್ದಾರೆ. ಶಾಲೆಯ ರಜೆಯ ವಿಷಯದಲ್ಲಿ ಈ ಎರಡೂ ದೇಶಗಳ ಈ ಬಾಂಧವ್ಯ ಒಂದು ರೀತಿ ಕೊಕ್ಕೋ ಆಟದಂತೆ.

ಅಂಕ ಎಷ್ಟು ಬಂತೆಂದು ಬೀಗದೆ, ಬಾಗದೆ ಮುನ್ನಡೆಯಿರಿಅಂಕ ಎಷ್ಟು ಬಂತೆಂದು ಬೀಗದೆ, ಬಾಗದೆ ಮುನ್ನಡೆಯಿರಿ

ಈ ಆಟದಲ್ಲಿ ವೈಪರೀತ್ಯವೂ ಇದೆ. ಹೇಗಪ್ಪಾ ಅಂದ್ರೆ, ನಮ್ಮಲ್ಲಿ ಒಬ್ಬರು ವೀಸಾ ಅವಧಿ ಮುಗಿದು ಭಾರತಕ್ಕೆ ತೆರಳಿದರು. ಇಲ್ಲಿ ಶಾಲೆ ಮುಗಿದ ನಂತರ ಭಾರತಕ್ಕೆ ಹಿಂದಿರುಗಿದ ಎರಡೇ ದಿನಕ್ಕೆ ಮುಂದಿನ ತರಗತಿಗೆ ಕಾಲಿಟ್ಟಿದ್ದರು ಅವರ ಮಕ್ಕಳು. ಇಲ್ಲಿ ಕಲಿತ ವಿಷಯಗಳಿಗೂ ಅಲ್ಲಿ ಕಲಿವ ವಿಷಯಗಳಿಗೂ ವ್ಯತ್ಯಾಸ ಇದ್ದೆ ಇರುತ್ತದೆ. ಟ್ಯೂಷನ್'ಗಳು, ಹೋಮ್-ವರ್ಕ್, ಹೊಸ ವಾತಾವರಣ ಇತ್ಯಾದಿ ಸವಾಲುಗಳನ್ನು ಜಯಿಸಲೇಬೇಕಾದ ಪರಿಸ್ಥಿತಿ.

ಮತ್ತೊಂದು ಸಂಸಾರದ ಕಥೆ ಇದಕ್ಕೆ ಸ್ವಲ್ಪ ವಿರುದ್ಧವಾದದ್ದು. ಮಕ್ಕಳಿಗೆ ಬೇಸಿಗೆ ರಜಾ ಮುಗಿಯುವ ಹಂತದಲ್ಲಿ ಇವರ ವೀಸಾ ದೊರಕಿ ಅಮೆರಿಕಕ್ಕೆ ಬರುವಂತಾಯ್ತು. ಅಲ್ಲಿಂದ ಗಂಟುಮೂಟೆ ಕಟ್ಟಿಕೊಂಡು ಇಲ್ಲಿಗೆ ಬಂದ ಮಕ್ಕಳಿಗೆ ಬೇಸಿಗೆ ರಜಾ ಮುಂದುವರೆಯಿತು. ಒಟ್ಟಾರೆ ನಾಲ್ಕರಿಂದ ಐದು ತಿಂಗಳು ರಜಾ ಅನುಭವಿಸಿದ ಅವರುಗಳಿಗೆ 'ರಜಾ' ಎಂದರೆ ವಾಕರಿಕೆ ಬರುವಂತಾಗಿತ್ತು. ಅಪ್ಪ-ಅಮ್ಮಂದಿರ ಬಗ್ಗೆ ಈಗ ನಾನು ಮಾತನಾಡುವುದಿಲ್ಲ!

ಅನ್ನಿಸುತಿದೆ ಯಾಕೋ ಇಂದು, ಶಾಲೆ ಅಂದ್ರೆ ಗುಮ್ಮ ಎಂದು..!ಅನ್ನಿಸುತಿದೆ ಯಾಕೋ ಇಂದು, ಶಾಲೆ ಅಂದ್ರೆ ಗುಮ್ಮ ಎಂದು..!

ಈ ರಜಾ-ಸಜಾ ವಿಷಯ ಆ ಕಡೆ ಇಟ್ಟು ವಿದ್ಯಾಭ್ಯಾಸದ ಬಗ್ಗೆ ಕೊಂಚ ನೋಡೋಣ. ನನ್ನ ವಿದ್ಯಾಭ್ಯಾಸಗಳೂ (ತಕ್ಕಮಟ್ಟಿಗೆ) ಉದ್ಯಾನ ನಗರಿಯಲ್ಲೇ ಆಗಿರೋದು. ನನ್ನ ಮಗನ ಈವರೆಗಿನ ವಿದ್ಯಾಭ್ಯಾಸ ಅಮೆರಿಕದಲ್ಲೇ ಆಗಿರುವುದು. ಈ ಎರಡೂ ದೇಶಗಳ ಶಾಲಾಪದ್ದತಿಗಳನ್ನು ಗಮನಿಸಿದರೆ ಅಜ ಅಂಡ್ ಗಜದಷ್ಟು ವ್ಯಾತ್ಯಾಸ. ಯಾವುದು ಅಜ ಯಾವುದು ಗಜ ಎಂದು ಹೇಳೋದು ಕಷ್ಟ. ಪದ್ದತಿಯೇ ಬೇರೆ. ಆರಂಭದ ದಿನಗಳಲ್ಲಿ ಮಗನ A ಇಂದ Z ವರೆಗಿನ ಕಲಿಕೆಯಲ್ಲೇ ಈ ವ್ಯತ್ಯಾಸದ ಅರಿವು ಮುಟ್ಟಿತ್ತು. ನಮ್ಮಲ್ಲಿ A ಇಂದ Z ಎಂಬುದನ್ನು ಒಂದರ ನಂತರ ಕಲಿತ ನಮಗೆ, ಇಲ್ಲಿನ ಶಾಲೆಯಲ್ಲಿ ಇಂದು 'ಬಿ' ಅಭ್ಯಾಸ ಮಾಡಿಸಿದರೆ ಮುಂದೆ 'ಎಮ್' ಅಭ್ಯಾಸ ನಡೆಯುತ್ತಿತ್ತು. ಎಲ್ಲ ಅಕ್ಷರ ಕಲಿತ ನಂತರ ಹೇಗೋ ಗೊತ್ತಿಲ್ಲ A ಇಂದ Z 'ವರೆಗೆ ಹೇಗೋ ಗೊತ್ತಿಲ್ಲ ತಡಬಡಾಯಿಸದೆ ಹೇಳ್ತಿದ್ರು.

ಆಗ ನನಗೆ ನೆನಪಾಗಿದ್ದು ನಾವು ಮಗ್ಗಿ ಕಲಿತ ಶೈಲಿ. ಹನ್ನೆರಡು ಮೂರ್ಲ ಎಷ್ಟೋ ಎಂದರೆ ಹನ್ನೆರಡು ಒಂದ್ಲಾ ಹನ್ನೆರಡು ಅಂತ ಆರಂಭ. ಸರಿ, ಮೂವತ್ತಾರು ಅಂತ ಉತ್ತರ ಬರುತ್ತೆ. ಸಂತೋಷ, ನಂತರ ಹನ್ನೆರಡು ನಾಲಕ್ಲಾ ಎಷ್ಟು ಎಂದರೆ ಮತ್ತೆ ಹನ್ನೆರಡು ಒಂದ್ಲಾ ಹನ್ನೆರಡು ಅಂತಲೇ ಆರಂಭ. ಇಂಥಾ ಪೀಕಲಾಟಕ್ಕೆ ಸಿಲುಕದೆ ಇರಲಿ ಎಂದು ಅಮೆರಿಕಾದ ಪದ್ಧತಿ ಹಾಗೂ ಏನೋ?

ಮಗ್ಗಿ ಅಂದ ಮೇಲೆ ಮತ್ತೊಂದು ವಿಷಯ ನೆನಪಾಯ್ತು. ನನ್ನ ಆಂಗ್ಲ ಮೀಡಿಯಂ'ನಲ್ಲಿ ಮಗ್ಗಿಯ ಸ್ವರೂಪ ಎಂದರೆ "ಫೈವ್ ಒನ್ಸಾರ್ ಫೈವ್, ಫೈವ್ ಟೂಸಾರ್ ಟೆನ್, ಫೈವ್ ತ್ರೀಸಾರ್ ಫಿಫ್ಟೀನ್ . . ." ಹೀಗೆ. ಅಕ್ಕ-ಪಕ್ಕ ಸಂಖ್ಯೆಗಳನ್ನು ಬಿಟ್ಟರೆ ಈ ಮಧ್ಯದಲ್ಲಿ ಹೇಳುವ ಸಾರ್ ಸಾರ್'ಗಳು ಏನೂ ಅಂತಲೇ ಗೊತ್ತಿರಲಿಲ್ಲ. ನನ್ನ ಮಗ ಶಾಲೆ ಕಲಿಯಲು ಶುರು ಮಾಡಿದ ಮೇಲೆ ಅರ್ಥವಾಗಿದ್ದು ಏನಪ್ಪಾ ಅಂದರೆ 'five ones are five, five twos are ten, five threes are fifteen...' ಎಂದು. ಎಂಥಾ ಕಲಿಕೆ! ಈ 'ಗೊತ್ತಿಲ್ಲ' ಎಂಬುದನ್ನ ಅವತ್ತೇ ಕೇಳಿದ್ರೆ ಹೇಳ್ತಿದ್ರೋ ಏನೋ? ನಮಗೆ ಮೇಷ್ಟ್ರು ಹೇಳಿಕೊಟ್ಟಿದ್ದನ್ನು ಹೆದರಿಕೆಯಿಂದ ಕಲಿಯೋದಷ್ಟೇ ಗೊತ್ತು. ಪ್ರಶ್ನೆ ಮಾಡೋ ಧೈರ್ಯವೇ ಇರಲಿಲ್ಲ.

ನಮ್ಮ ಪದ್ದತಿಯಲ್ಲಿ, ಅಂದಿನ ದಿನಗಳಲ್ಲಿ ಹೇಗಿತ್ತೋ ಬಹುಶ: ಇಂದೂ, ಮಕ್ಕಳ ಮತ್ತು ಟೀಚರ್'ಗಳ ಬಾಂಧವ್ಯ ಹಾಗೇ ಇದೆ ಎನ್ನಿಸುತ್ತದೆ. ಟೀಚರ್ ಆದವರು ಎಷ್ಟು ಕಟ್ಟುನಿಟ್ಟು ಇದ್ದರೆ ಅಷ್ಟು ಟಿ.ಆರ್.ಪಿ ಅವರಿಗೆ! ಹಲವಾರು ಮಂದಿ ಇದಕ್ಕಾಗಿಯೇ ಶ್ರಮಿಸುತ್ತಿದ್ದರು ಎಂಬುದು ಸುಳ್ಳಲ್ಲ. ಸಾಧು ಗುಣದ ಗುರುಗಳು, ಏನಾದ್ರೂ ಮಾಡ್ಕೊಳ್ಳಿ ಎಂಬ ಮನೋಭಾವದ ಗುರುಗಳನ್ನು ಮಕ್ಕಳು ಕೊಂಚ ಹೆಚ್ಚು ಆಟ ಆಡಿಸುತ್ತಾರೆ. ನನ್ನ ಒಂದೆರಡು ಅನುಭವಗಳು ಹೀಗೆ.

ನಾನು ಲೆಕ್ಕದಲ್ಲಿ ಕೊಂಚ ವೀಕು! ಅಂದ್ರೆ ಮಿಕ್ಕ ವಿಷಯಗಳಲ್ಲಿ ಮಹಾವೀಕು ಅಂತ!! ಇರಲಿ, ನಮ್ಮ ಲೆಕ್ಕದ ಟೀಚರ್ ಒಮ್ಮೆ, "- * -" ಏನು ಅಂದರು? ಇದೊಳ್ಳೇ ಪ್ರಶ್ನೆ . . . ಎರಡೂ ಕಡೆ '-' ಇದ್ ಮೇಲೆ ನನ್ನನ್ನೇನ್ ಕೇಳೋದು ಅಂತ '-' ಅಂದೆ . . . ಇಂದಿನ ಧಾರಾವಾಹಿ ಪಾತ್ರದಂತೆ ಟೀಚರ್ ಕಣ್ಣು ಬಿಟ್ಟರು. ಎದ್ವಾತದ್ವಾ ಭಯ ಆಗಿ "+" ಅಂದೆ, ಅದಕ್ಕವರು "ಗುಡ್" ಅನ್ನೋದೇ? ಯಾಕೆ, ಹೇಗೆ ಅಂತ ನಾನೂ ಕೇಳಲಿಲ್ಲ, ಅವರೂ ಹೇಳಲಿಲ್ಲ.

ಇನ್ನು ವಿಜ್ಞಾನ. ಪರೀಕ್ಷೆಯಲ್ಲಿ 'ಓಡುವ ಬಸ್ಸಿನಿಂದ ಇಳಿದು ವಿರುದ್ಧ ದಿಕ್ಕಿಗೆ ಯಾಕೆ ಓಡಬಾರದು?' ಎಂಬ ಪ್ರಶ್ನೆ ಬಂದಿತ್ತು. ಯೋಚನೆ ಮಾಡಿದೆ ಮಾಡಿದೆ ಮಾಡಿಯೇ ಮಾಡಿದೆ. ಮನೆಯಾಗಲೀ ಅಥವಾ ಶಾಲೆಯಾಗಲಿ ನಾನಿಳಿವ ಸ್ಟಾಪಿನಿಂದ ಕೊಂಚ ಮುಂದೆ ಇರುತ್ತಿತ್ತು. ಹಾಗಾಗಿ ಓಡುವ ಬಸ್ಸಿನಿಂದ ಇಳಿದು ನಾನ್ಯಾಕೆ ಹಿಂದಕ್ಕೆ ಹೋಗಲಿ? ಹಾಗೆ ಉತ್ತರ ಬರೆದೆ. ಟೀಚರ್ ಕರೆಕ್ಷನ್ ಮಾಡಿ ಸೊನ್ನೆ ಕೊಟ್ಟಿದ್ದೇ ಅಲ್ಲದೆ ಕ್ಲಾಸಿನಲ್ಲಿ ಎಲ್ಲರ ಮುಂದೆ ಓದಿದ್ದರು. ಎಲ್ಲರಿಗೂ ಮಜಾ. ನನಗೂ ಮಜಾ ಯಾಕೆ ಅಂದ್ರೆ ಮಿಕ್ಕವರಿಗೂ ಉತ್ತರ ಗೊತ್ತಿರಲಿಲ್ಲ.

ವಿವರಣೆ ನೀಡುವಾಗ ನೈಜ ಉದಾಹರಣೆ ಕೊಟ್ಟು ಪಾಠ ಮಾಡಿದ್ದರೋ ಏನೋ ಆದರೆ ತಲೆಗೆ ಹೋಗಿರಬೇಕಲ್ಲಾ! ಪ್ರಾಕ್ಟಿಕಲ್ ಆಗಿ ಆಲೋಚಿಸದೆ ಕಲಿಯೋ ವಿದ್ಯೆಗಳು ಹೆಚ್ಚು ದಿನ ಮನಸ್ಸಿನಲ್ಲಿ ನಿಲ್ಲೋದಿಲ್ಲ. ಈಚೆಗಿನ ಶಾಲೆಗಳಲ್ಲಿ ಆ ಪ್ರಾಜೆಕ್ಟು ಈ ಪ್ರಾಜೆಕ್ಟು ಅಂತ ಏನೇನೋ ಮಾಡಿಕೊಂಡು ಬರಲು ಹೇಳುತ್ತಾರೆ. ರಿಯಾಲಿಟಿ ಶೋ'ಗಳಿಗೆ ತಯಾರಿಕೆ, ಹೋಮ್-ವರ್ಕ್, ಟ್ಯೂಷನ್ನು ಅಂತ ಮಕ್ಕಳಿಗೆ ಸಮಯವೇ ಇರದೇ ಹೋಗಿ ಕೊನೆಗೆ ಆ ಪ್ರಾಜೆಕ್ಟ್'ಗಳನ್ನು ಅಪ್ಪನೋ ಅಮ್ಮನೋ ಮಾಡಿ ಮುಗಿಸಿ ಕಳಿಸುತ್ತಾರೆ. ಇದು ಸರಿಯಲ್ಲ. ಸ್ವತಂತ್ರವಾಗಿ ಬೆಳೆಯೋ ಮನಕ್ಕೆ ಮುಳ್ಳಾಗಬಾರದು. ಸಹಾಯ ಮಾಡಿ ಆದರೆ ನೀವೇ ಕೆಲಸ ಮಾಡಿ ಮುಗಿಸಬೇಡಿ.

ಇಂಥಾ ಕಲಿಕೆ ಹೇಗೆ ಎಂದರೆ, ಆಯಾ ವರ್ಷದ ಓದನ್ನು ಅರೆದು ಕುಡಿದು ಫೈನಲ್ ಎಕ್ಸಾಮ್'ನಲ್ಲಿ ಕಕ್ಕಿದ ಮೇಲೆ ಮುಗೀತು. ರಜಾ ಮುಗಿದು ಹೊಸ ವರ್ಷ ಆರಂಭವಾದ ಮೇಲೆ ಹಿಂದಿನ ವರ್ಷ ಕಲಿತಿದ್ದೇನು ಎಂಬುದರ ನೆನಪೇ ಇರುವುದಿಲ್ಲ. ನಾವು ಕಲಿತಿದ್ದು ಅಂಕಗಳಿಸಲು ಮಾತ್ರವೇ ಹೊರತು ಅರಿವು ಮೂಡಿಸಿಕೊಳ್ಳಲು ಅಲ್ಲ! ಅರೆದುಕುಡಿದ ವಿಷಯಗಳೆಲ್ಲ ವಾತಾಪಿಯಂತೆ. ಎಕ್ಸಾಮ್ ಪೇಪರ್ ಎಂಬ ಇಲ್ವಾಲ 'ವಾತಾಪೀ' ಎಂದು ಕರೆದೊಡನೆ ಎದ್ದು ಬರುವ ಉತ್ತರವೇ ವಾತಾಪಿ. ಕೊನೆಯಲ್ಲಿ ನಮ್ಮಲ್ಲಿ ಉಳಿದಿದ್ದೇನೋ ಇಲ್ಲ. ಹರಿದು ಹೋದ ದೇಹ ಅಷ್ಟೇ! ಅರಿತು ಕಲಿತು ಜೀರ್ಣಿಸಿಕೊಳ್ಳುವ ಅಗಸ್ತ್ಯರು ಎಷ್ಟು ಮಂದಿ ಇದ್ದೇವೆ?

ಹೊಸ ವರುಷದ ಹೊಸ ಕಲಿಕೆಗಳತ್ತ ಸಾಗುತ್ತಿರುವ ವಿದ್ಯಾರ್ಥಿಗಳಿಗೆ ಒಂದೆರಡು ಕಿವಿಮಾತು. ರಜೆಯಲ್ಲಿ ಆಟ ಬಿಟ್ಟು ಟ್ಯೂಷನ್ ಇತ್ಯಾದಿ ಎನ್ನುತ್ತಾ ಕಳೆದು ಶಾಲೆಯ ಮೊದಲ ದಿನವೇ ತಾವು ಎಲ್ಲರಿಗಿಂತ ಮುಂದಿದ್ದೇವೆ ಎಂದು ತೋರಿಸಿಕೊಳ್ಳುವ ನಿಮ್ಮ ಕ್ಲಾಸ್-ಮೇಟ್'ಗಳ ಬಗ್ಗೆ ಚಿಂತೆ ಮಾಡದಿರಿ. ಓದಿನಷ್ಟೇ ಆಟವೂ ಮುಖ್ಯ. ಆದರೆ ಸೋಫಾದ ಮೇಲೆ ಕೂತು ಚಿಪ್ಸ್ ತಿನ್ನುತ್ತಾ ಆಟ ಆಡುವವರನ್ನು ನೋಡುತ್ತಾ ಕಾಲಕಳೆಯದಿರಿ. ಇದರಿಂದ ನಿಮಗೆ ಬೊಜ್ಜು ಬರಬಹುದು ಅಷ್ಟೇ! ಧೃತಿಗೆಡದೆ ಶಾಲಾದಿನಗಳಲ್ಲಿ ಓದಿನತ್ತ ಗಮನಕೊಡಿ.

ಅಂಕ ಗಳಿಸಲು ಮಾತ್ರ ಕಲಿತ ವಿದ್ಯೆ, ಸಮಯಕ್ಕೆ ಸರಿಯಾಗಿ ನೆನಪಿಗೆ ಬಾರದ ಕರ್ಣನ ವಿದ್ಯೆಯಂತೆ. ಎಕ್ಸಾಮ್ ಪೇಪರ್ ನೋಡಿದ ಕೂಡಲೇ ಎಲ್ಲ ಮರೆತು ಅನುತ್ತೀರ್ಣರಾದ ಹಲವಾರು ವಿದ್ಯಾರ್ಥಿಗಳಿದ್ದಾರೆ. ಬ್ರಹ್ಮಾಂಡ ವಿದ್ಯೆ ಕಲಿತೂ ಅದನ್ನು ಉಪಯೋಗಿಸಲು ಅರ್ಹನಲ್ಲದ ಅಶ್ವತ್ತಾಮನಾಗದಿರಿ. ಅಭಿಮನ್ಯುವಿನಂತೆ ಅರ್ಧಂಬರ್ಧ ವಿದ್ಯೆ ಕಲಿತು ರಣರಂಗಕ್ಕೆ ಇಳಿಯದಿರಿ, ಕೊಚ್ಚಿ ಕೊಲ್ಲೋ ಜನ ಬಹಳಾ ಇದ್ದಾರೆ. ಋತುಪರ್ಣ-ನಳರಂತೆ ದೊಡ್ಡವರು-ಚಿಕ್ಕವರು ಎಂಬ ತಾರತಮ್ಯ ತೋರದೆ ಒಬ್ಬರು ಮತ್ತೊಬ್ಬರಿಂದ ವಿದ್ಯೆ ಕಲಿಯಲು ಮನ ಸಿದ್ಧವಾಗಿರಲಿ.

ಹೊರಡುವ ಮುನ್ನ ಮತ್ತೊಂದು ಮಾತು. ಬರೀ ಪುಸ್ತಕದ ಕಲಿಕೆಯೇ ಜೀವನವಲ್ಲ. ನಿಮ್ಮಿಂದ ಸಮಾಜಕ್ಕೆ ಏನಾದರೂ ಕೊಡಲು ಸಾಧ್ಯವೇ ಎಂದು ಯೋಚಿಸಿ, ಅದನ್ನೂ ನಿಮ್ಮ ಜೀವನದ ಒಂದು ಅಂಗವಾಗಿ ಬೆಳೆಸಿಕೊಳ್ಳಿ. ಆ ಕೆಲಸ ಮಾಡಿ, ಈ ಕೆಲಸ ಮಾಡಿ ಎಂದೆಲ್ಲಾ ಉಪದೇಶ ಕೊಡುವಿರಲ್ಲಾ? ಎಲ್ಲಕ್ಕೂ ಸಮಯ ಎಲ್ಲಿದೆ ಎನ್ನಬೇಡಿ! ಎಲ್ಲ ಸಾಧಕರಿಗೂ ಇದ್ದಿದ್ದೇ / ಇರುವುದೇ ಇಪ್ಪತ್ತನಾಲ್ಕು ಘಂಟೆ. ಶ್ರಮಪಡುವ ಕಾಲಕ್ಕೆ ಶ್ರಮ ಪಡಲೇಬೇಕು. ನನ್ನ ಮಾತು ಒಪ್ಪುವಿರಾ?

English summary
Only learning in the school or college is not important. One should think about what can he or she give back to the society after learning and unlearning. Srinath Bhalle, our new columnist talks about the education system in India and America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X