• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ತಪಸ್ಸು ಮಾಡೋಣ ಬರ್ತೀರಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕಾಫಿಗೆ ಕರೀತಾರೆ ಸರಿ, ತಿಂಡಿಗೆ ಕರೀತಾರೆ ಸರಿ, ಊಟಕ್ಕೂ ಕರೆಯಬಹುದು. ಆದರೆ ತಪಸ್ಸಿಗೆ ಕರೆಯೋದಾ? ಅದೇನ್ ಪಿಕ್ನಿಕ್ ಅಂದುಕೊಂಡಿರಾ? ಮಂದಿಗೆ ಮಂದಿ ಸೇರಿದರೆ ತಪಸ್ಸು ಅನ್ನೋದು ಟಪ್ ಅಂತ ಒಡೆದು ಪುಸ್ ಅಂತ ಗಾಳಿ ಹೋದಂತೆ ಆಗೋದಿಲ್ಲವೇ? ಅಂತೆಲ್ಲಾ ಸಿಕ್ಕಾಪಟ್ಟೆ ಆಲೋಚನೆ ಮಾಡಬೇಡಿ. ತಪಸ್ಸಿನ ಬಗ್ಗೆ ಒಂದಷ್ಟು ಮಾತನಾಡೋಣ ಬರ್ತೀರಾ ಅಂದೆ ಅಷ್ಟೇ!

ತಪಸ್ಸು ಅಂದ್ರೆ ಮನೆಮಠ ಬಿಟ್ಟು ಕಾಡಿನಲ್ಲೋ, ಗುಹೆಯಲ್ಲೂ, ಬೆಟ್ಟದ ತಪ್ಪಲಲ್ಲೋ ಮೂಗು ಹಿಡಿದು ವರ್ಷಾನುಗಟ್ಟಲೆ ಕೂತು, ಬಂದ ರೆಂಬೆಕೊಂಬೆ ಅರ್ಥಾತ್ ರಂಭೆ, ಊರ್ವಶಿಯರನ್ನು ಬದಿಗೊತ್ತಿ ಯಾವ ಅಡೆತಡೆಗಳಿಗೂ ಬೆಲೆ ಕೊಡದೆ ದೈವವನ್ನು ಒಲಿಸಿಕೊಳ್ಳೋದು ಅಂತ ನಮ್ಮೆಲ್ಲರ ಸಾಮಾನ್ಯ ಜ್ಞಾನ ಅಲ್ಲವೇ? ಕೆಲವೊಮ್ಮೆ ತಪಸ್ಸು ಮಾಡುವವರ ಸುತ್ತಲೂ ಹುತ್ತ ಬೆಳೆಯುತ್ತೆ, ಕೆಲವರಿಗೆ ಬಳ್ಳಿಗಳು ಬೆಳೆದುಕೊಳ್ಳಬಹುದು, ಏನು ಬೆಳೆಯದಿದ್ದರೂ ಗಡ್ಡ ಮೀಸೆಯಂತೂ ಬೆಳೆದೇ ಬೆಳೆಯುತ್ತದೆ ಬಿಡಿ. ಹೆಂಗಳು ತಪಸ್ಸು ಮಾಡಿದರೆ ಗಡ್ಡಮೀಸೆ ಬರಾಕಿಲ್ಲ ಅಂತ ತಗಾದೆ ಮಾಡದಿರಿ, ಆ ವಿಷಯಕ್ಕೆ ಆಮೇಲೆ ಬರ್ತೀನಿ.

ಶ್ರೀನಾಥ್ ಭಲ್ಲೆ ಅಂಕಣ; ನೀವು ನಾಯಿ ಅನುಯಾಯಿಗಳೇ? ಅಲ್ಲವೇ?

ಮೊದಲಿಗೆ ತಪಸ್ಸು ಅಂದ್ರೇನು ಅಂತ ನೋಡೋಣ. ಆಂಗ್ಲದಲ್ಲಿ meditation ಎನ್ನುತ್ತಾರೆ. ತಪಸ್ಸಿನಲ್ಲೇ ಹಲವಾರು ಬಗೆಗಳಿವೆ. ಇದು ಇಂಥಾ ಬಗೆ, ಅದು ಅಂಥಾ ಬಗೆ ಅಂತ ವಿವರಿಸುವ ಬದಲು ನಮಗೆ ಅರಿವಿರುವುದನ್ನೇ ಉದಾಹರಣೆಗಳಾಗಿ ನೋಡಿದಾಗ, ಅನುಭವಿಸಿದಂತೆ ಆಗುತ್ತದೆ ಇಲ್ಲವಾದಲ್ಲಿ ಪಠ್ಯ ಪುಸ್ತಕವಾದೀತು. ಹುಚ್ಚೆದ್ದು ಕುಣಿವ ಮನಸ್ಸನ್ನು ತಹಬದಿಗೆ ತರಲು ಮಾಡುವ ಒಂದು ಯತ್ನವೇ ತಪಸ್ಸು. ತಪಸ್ಸು ಮಾಡುವುದಾದರೆ ಏನು ಮಾಡಬೇಕು ಎಂಬುದಕ್ಕೆ ಒಂದೆಡೆ ಹೇಳುತ್ತಾರೆ "ಮೊದಲು ಸುಮ್ಮನೆ ಕುಳಿತುಕೊಳ್ಳಲು ಅಭ್ಯಾಸ ಮಾಡಬೇಕು" ಅಂತ.

"ಸುಮ್ಮನೆ ಕೂರಬೇಕು" ಅಂದಾಗ ನಮ್ಮೂರ ಬಸ್ಯಾ ಪಕಪಕ ನಕ್ಕ. ನಾನು ದಿನಾ ಮಾಡೋದೇ ಅದು. ಸುಮ್ನೆ ಒಂದು ಕಡೆ ಕೂತಿರ್ತೀನಿ ಟಿ.ವಿ ನೋಡ್ಕೊಂಡು. ಮನೆ ಕೆಲಸ ಹೆಂಡ್ರು ಮಾಡ್ತಾಳೆ ಅಂತ. ಇದು ಹೀಗಲ್ಲಾ ಬಿಡಿ. ಏನೂ ಮಾಡದೇ ಅರ್ಥಾತ್ ಯಾವ ರೀತಿಯಲ್ಲೂ ಮನಸ್ಸನ್ನು ಆ ಕಡೆ ಈ ಕಡೆ ಹೋಗದಂತೆ ಒಂದೇ ವಿಷಯಕ್ಕೆ ಕೇಂದ್ರೀಕರಿಸಿ ಅಥವಾ ಯಾವ ವಿಷಯವನ್ನೂ ಮನಸ್ಸಿಗೆ ತಂದುಕೊಳ್ಳದೆ ಸುಮ್ಮನೆ ಕೂತಲ್ಲೇ ಕೂರುವುದು ಅಷ್ಟು ಸುಲಭದ ಮಾತಲ್ಲ. ನಿಮ್ಮದೇ ದೇವರ ಮನೆಯಲ್ಲಿ ದೈವದ ಮುಂದೆ ಅಥವಾ ದೇವಸ್ಥಾನದಲ್ಲಿ ಅಥವಾ ಇನ್ಯಾವುದೇ ಪೂಜಾ ಮಂದಿರದಲ್ಲಿ ಸುಮ್ಮನೆ ಕೂರಬೇಕು ಎಂದರೆ ಕೂತಲ್ಲೇ ಮಿಸುಕಾಡುವಂತೆ ಆಗೋದು ಸಹಜ. ಚಿಕ್ಕ ಉದಾಹರಣೆ ಎಂದರೆ 'ಒಂದು ನಿಮಿಷ ಮೌನಾಚರಣೆ ಮಾಡಿ' ಎಂಬ ಕರೆಗೆ ಓಗೊಟ್ಟು ನಿಲ್ಲುವಿರಿ ಎಂದುಕೊಳ್ಳಿ, ಆಗ ಸಮಯ ನೋಡಿಕೊಳ್ಳುವಂತೆ ಆಗುತ್ತದೆ. ಹಲವರಿಗೆ ನಿಂತಲ್ಲೇ ನಿದ್ದೆ ಬರುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ಎಲ್ಲರ ಜೀವನವೂ ಸಿಹಿಕಹಿಗಳ 'ಕಲಸುಮೇಲೋಗರ'

ಈಗ ಮತ್ತದೇ ಪ್ರಶ್ನೆಗೆ ವಾಪಸ್ ಹೋದರೆ, 'ತಪಸ್ಸು ಮಾಡುವುದಾದರೆ ಏನು ಮಾಡಬೇಕು', ಎಂದರೆ ನೂರು ದಿನಗಳ ಕಾಲ ಸತತವಾಗಿ ಕೇವಲ ಹದಿನೈದು ನಿಮಿಷಗಳ ಕಾಲ ಏನೂ ಮಾಡದೆ ಒಂದೆಡೆ ಕೂರುವುದನ್ನು ಅಭ್ಯಾಸ ಮಾಡಬೇಕು ಎನ್ನುತ್ತಾರೆ. ಇದು ಆರಂಭವಷ್ಟೇ! ಯಾವುದೇ ವಿಷಯವಿಲ್ಲದೆ ಸುಮ್ಮನೆ ಶೂನ್ಯದತ್ತ ಮನಸ್ಸನ್ನು ಕೇಂದ್ರೀಕರಿಸಿದಾಗ, ಆ ಮನಸ್ಸು ತಹಬದಿಗೆ ಬರೋದು ಸಹಜ. ಆದರೆ ಹಾಗಾದ ಮೊದಲು ಆ ಮನಸ್ಸು ನಿದ್ರಿಸಲು ಯತ್ನಿಸುತ್ತದೆ. ಈ ಕ್ರಿಯೆ ಅಥವಾ ಪ್ರತಿಕ್ರಿಯೆ ಅತ್ಯಂತ ಸಹಜ. ಹೀಗಾಗದಿರಲಿ ಅಂತಲೇ ಮರದ ಅಡಿಯಲ್ಲಿ ತಪಸ್ಸಿಗೆ ಕೂತ ಋಷಿಕುಮಾರರು ತಮ್ಮ ಜುಟ್ಟನ್ನು ಕೊಂಬೆಗೆ ಕಟ್ಟಿಕೊಳ್ಳುತ್ತಿದ್ದರಂತೆ. ತೂಕಡಿಸಿದ ಕೂಡಲೇ ಜುಟ್ಟು ಎಳೆದು ಎಚ್ಚರವಾಗುತ್ತದೆ ಅಂತ.

ತಪಸ್ಸು ಎನ್ನುವುದು ಶ್ರದ್ಧೆಯಿಂದ, ಏಕಾಗ್ರತೆಯಿಂದ, ಒಂದು ವಿಷಯದತ್ತ ಮನಸ್ಸನ್ನು ಕೇಂದ್ರೀಕರಿಸಿಕೊಂಡು ದಿನನಿತ್ಯದಲ್ಲಿ ಮಾಡುವ ಕ್ರಿಯೆ. ಇದರಲ್ಲಿ ಅಡಕವಾಗಿರುವ ವಿಚಾರ ಎಂದರೆ, ಬೇರೆಡೆ ಮನಸ್ಸನ್ನು ಹರಿಯಬಿಡದೇ ಒಂದೇ ವಿಷಯದತ್ತ ಕೇಂದ್ರೀಕರಿಸುವುದು ಎಂಬುದು. ಇದನ್ನು ಒಂದು ಧ್ಯೇಯ ಎಂದೂ ಹೇಳಬಹುದು. ಕೆಲವೊಮ್ಮೆ ಇಂಥ ತಪಸ್ಸು ಮಾಡುವಾಗ ಇಂಥದ್ದೇ ಬೇಕು ಎಂಬ ಬಯಕೆ ಇಲ್ಲದೆಯೂ ಇರಬಹುದು. ಧ್ಯೇಯವಿಲ್ಲದ ತಪಸ್ಸು 'ಸೇವೆ' ಎನಿಸಿಕೊಳ್ಳುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ಕರದ ವಿಷಯ ನಿಮಗೆ ಕರತಲಾಮಲಕ ಆಗಿದೆಯೇ?

ದಿನನಿತ್ಯದಲ್ಲಿ ಶುಚಿರ್ಭೂತಳಾಗಿ, ಪೂಜೆ ಪುನಸ್ಕಾರಗಳನ್ನು ಮುಗಿಸಿ ರಾಮನು ಬರುವನೆಂದು ಶ್ರದ್ಧೆಯಿಂದ, ನಿಷ್ಠೆಯಿಂದ ಹಾದಿ ಕಾಯುತ್ತಿದ್ದ ಶಬರಿಯು ಮೂಗು ಹಿಡಿದು ತಪಸ್ಸು ಮಾಡಲಿಲ್ಲ. ಅವಳ ಶ್ರದ್ಧೆಯೇ ತಪಸ್ಸು. ಕಾರ್ಯದಲ್ಲಿ ತೋರುವ ನಿಷ್ಠೆಯೂ ತಪಸ್ಸು. ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿರಿಸಿ ರಾಮನ ಆಗಮನವಷ್ಟೇ ತನ್ನ ಧ್ಯೇಯ, ಅಲ್ಲಿಯವರೆಗು ಮಾತ್ರ ತಾನು ಆಡಳಿತ ಮಾಡುವುದು ಎಂದು ನಿರಂತರವಾಗಿ ಆ ದಿನಗಳನ್ನೇ ಕಾಯುತ್ತಿದ್ದ ಭರತನದ್ದೂ ಒಂದು ತಪಸ್ಸು.

ತಪಸ್ಸು ಅಂತ ಅಂದ ಕೂಡಲೇ ಪುರಾಣ-ಪುಣ್ಯ ಕಥೆಗಳತ್ತಲೇ ಮನಸ್ಸು ಓಡುತ್ತದೆ. ಕೃತಯುಗ, ತ್ರೇತಾಯುಗ ಮತ್ತು ದ್ವಾಪರಯುಗಗಳಲ್ಲಿ ಯಾರ್ಯಾರು ತಪಸ್ಸನ್ನು ಆಚರಿಸಿದರು ಅಂತ ನೋಡುವಾಗ ಹೇರಳವಾದ ಉದಾಹರಣೆಗಳು ಸಿಗುತ್ತವೆ. ಒಬ್ಬೊಬ್ಬರದ್ದೂ ಒಂದೊಂದು ರೀತಿಯ ತಪಸ್ಸು. ದೇವನನ್ನು ಒಲಿಸಿಕೊಳ್ಳುವುದು, ಒಮ್ಮೆ ದೈವ ಪ್ರತ್ಯಕ್ಷನಾದರೆ ತಾನು ಅಮರನಾಗಬೇಕು ಎಂದು ಬೇಡಿಕೊಳ್ಳುವುದು ಎಂಬ ಧ್ಯೇಯವೇ ಹೆಚ್ಚುವರಿ ರಕ್ಕಸರ ತಪಸ್ಸಿನ ಉದ್ದೇಶ. ಹಿರಣ್ಯಕಶಿಪು ತಪಸ್ಸು ಮಾಡಿದ್ದು ಅಮರನಾಗಬೇಕು ಎಂದೇ! ವಿಶ್ವಾಮಿತ್ರರ ತಪಸ್ಸಿನ ಉದ್ದೇಶ ಹಟ ಸಾಧನೆ. ಮನಸ್ಸನ್ನು ಕೇಂದ್ರೀಕರಿಸಲು, ಕೆಲವರು ಮೌನವಾಗಿ ತಪಸ್ಸನ್ನಾಚರಿಸಿದರೆ, ಕೆಲವರು "ಓಂ"ಕಾರ ಬಳಸಿದರು. ಕೆಲವರು "ಓಂ ನಮೋ ನಾರಾಯಣಾಯ" ಎಂದರೆ, ಕೆಲವರು "ಓಂ ನಮಃ ಶಿವಾಯ" ಎನುತ್ತಾ ತಪಸ್ಸು ಆಚರಿಸಿದರು. ಧ್ರುವ "ಓಂ ನಮೋ ಭಗವತೇ ವಾಸುದೇವಾಯ" ಅಂತಂದ.

ತನ್ನ ಪೂರ್ವಜರಿಗೆ ಸದ್ಗತಿ ಕಾಣಿಸಬೇಕು ಎಂಬುದೊಂದೇ ಧ್ಯೇಯ ಹೊತ್ತು 'ದೇವಗಂಗೆಯನ್ನು ಭುವಿಗೆ ತರಲು' ತಪಸ್ಸಿನ ಮೇಲೆ ತಪಸ್ಸು ಆಚರಿಸಿದ ಭಗೀರಥ, ತಪವನ್ನು ಆಚರಿಸಿದವರಲ್ಲಿ ಮೇಲ್ಪಂಕ್ತಿಯಲ್ಲಿ ಕಾಣುತ್ತಾನೆ. ಮೊದಲಿಗೆ ತಪಸ್ಸಾಚರಿಸಿ ಬ್ರಹ್ಮನನ್ನು ಒಲಿಸಿಕೊಳ್ಳುತ್ತಾನೆ. ಆದರೆ ಬ್ರಹ್ಮನಿಂದ ಅವನ ಕೆಲಸವಾಗದೆ ಶಿವನನ್ನು ಒಲಿಸಿಕೊಳ್ಳುತ್ತಾನೆ. ಈಶನೇನೋ ಸ್ವರ್ಗದಿಂದ ಧುಮುಕಿದ ಗಂಗೆಯನ್ನು ಭರಿಸಲು ಸಿದ್ಧನಾದ. ಆದರೆ ಗಂಗೆಯ ಅಹಂಕಾರವನ್ನು ಮುರಿಯಲು ತನ್ನ ಜಟೆಯಲ್ಲೇ ಬಂಧಿಸಿದ. ಜಟೆಯಿಂದ ಗಂಗೆಯನ್ನು ಬಿಡಿಸಿ ಧರೆಗೆ ತರಲು ಮತ್ತೊಮ್ಮೆ ಶಿವನನ್ನು ಕುರಿತು ತಪಸ್ಸು. ಕೊನೆಗೂ ಧರೆಗಿಳಿದ ಗಂಗೆಯಿಂದ ಅವನ ಪೂರ್ವಜರಿಗೆ ಸದ್ಗತಿ ಕಾಣಿಸಿದ. ಇಷ್ಟೆಲ್ಲಾ ನಿಷ್ಠೆಯಿಂದ ಪಾಲಿಸಿದ್ದಕ್ಕೆ ಅಲ್ಲವೇ ಇಂದಿಗೂ ನಿರಂತರ ಯತ್ನಕ್ಕೆ 'ಭಗೀರಥ ಯತ್ನ' ಎನ್ನುವುದು !

ಕಲಿಯುಗದಲ್ಲಿ ಮಾನವನ ಆಯಸ್ಸು ಕಡಿಮೆ. ಹಾಗಾಗಿ ಸೇವೆಯೇ ತಪಸ್ಸು. ಅದು ದೇಶ ಸೇವೆಯೇ ಆಗಿರಬಹುದು, ಈಶ ಸೇವೆಯೇ ಆಗಿರಬಹುದು. ಮನುಕುಲದ ಸೇವೆ ಆಗಿರಬಹುದು, ಪ್ರಾಣಿ ಪಕ್ಷಿ ಸಂಕುಲದ ಸೇವೆ ಆಗಿರಬಹುದು. ತನ್ನ ತಂದೆ ತಾಯಿಯ ಸೇವೆ ಮಾಡಿದ ಶ್ರವಣ ಕುಮಾರನದ್ದೂ ತಪಸ್ಸು. ಕಲಿಯುಗದಲ್ಲಿ ತಮ್ಮ ಮಾತಾ ಪಿತೃಗಳ ಸೇವೆ ಮಾಡಿದವರೂ ತಪಸ್ಸನ್ನಾಚರಿಸುತ್ತಿದ್ದಾರೆ ಎಂದೇ ಅಂದುಕೊಳ್ಳಬೇಕು. ಆರೋಗ್ಯದಿಂದ ಇರುವವರ ಸೇವೆಯನ್ನು ಅವರ ಊಟ, ತಿಂಡಿ ಇತ್ಯಾದಿ ವಿಚಾರದಲ್ಲಿ ದಿನನಿತ್ಯದ ಸೇವೆ ಮಾಡುವುದು ಒಂದು ವಿಷಯವಾದರೆ, ರೋಗಿಗಳನ್ನು ನೋಡಿಕೊಳ್ಳುವುದು ಸುಲಭ ಸಾಧ್ಯವಲ್ಲ. ಸುಲಭವಾಗಿದ್ದರೆ ವೃದ್ಧಾಶ್ರಮ ಇಂದಿಗೆ ಇಷ್ಟು ವೃದ್ಧಭರಿತರಾಗಿ ಇರುತ್ತಿರಲಿಲ್ಲ.

ಲಂಘನಮ್ ಪರಮೌಷಧಮ್ ಎಂಬ ಮಾತನ್ನು ಕೇಳಿಯೇ ಇದ್ದೇವೆ. ಆದರೆ ಉಪವಾಸ ಎಂದರೆ ಏನೂ ತಿನ್ನದೇ ಇರುವುದು ಅಂತಲ್ಲ. ಏನೂ ತಿನ್ನದೇ ಇರುವುದು ಎಂಬುದರ ಜೊತೆಗೆ ಸರಿಯಾಗಿ ತಿನ್ನುವುದೂ ಲಂಘನವೇ. ಸರಿಯಾಗಿ ಉಸಿರಾಡುವುದೂ ಲಂಘನ. ವಾಕ್-ಶಕ್ತಿ ಒಂದು ಲಂಘನ ಕೆಲವರು ಇದಕ್ಕಾಗಿಯೇ ಮೌನವ್ರತ ಆಚರಿಸುತ್ತಾರೆ. ಇನ್ನು ಓಡಾಟವೂ ಒಂದು ಲಂಘನ. ಓಡಾಡದೇ ಒಂದೆಡೆ ಕೂರುವುದು ಲಂಘನವೇ ಸರಿ. ನಿಷ್ಠೆಯಿಂದ ಪಾಲಿಸುವ ಲಂಘನವು ತಪಸ್ಸೇ ಅಲ್ಲವೇ?

ಈಗ ಹೇಳಿ, ನನ್ನೊಂದಿಗೆ ತಪಸ್ಸಿಗೆ ಬರುವಿರಾ? ಅಂದ ಹಾಗೆ ಯಾವ ಬಗೆಯ ತಪಸ್ಸನ್ನು ಮಾಡೋಣ ಅಂತ ಹೇಳಿ ಆಯ್ತಾ?

English summary
Controlling our mind is a basic concept of meditation. If we go through a history, we will get to know the difficulty in meditation and also the changing concept of meditation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X