ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನ್ ಕಣೇ, ನಾನು ಏನಾದ್ರೂ ಸ್ವಲ್ಪ ಹೆಲ್ಪ್ ಮಾಡ್ಲಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ನಮ್ಮೂರಿನ ಹಲವು ಅಂಗಡಿಗಳಲ್ಲಿನ ಕೆಲಸಗಾರರ ಸಮವಸ್ತ್ರದ ಅಂದರೆ ಟಿ-ಶರ್ಟ್ ಅಥವಾ ಓವರ್-ಕೋಟ್ ಮೇಲೆ "may i help you" ಅಂತ ಮುದ್ರೆ ಒತ್ತಿರುತ್ತಾರೆ. ಮೊದಲಲ್ಲಿ ಈ ರೀತಿ ಸಮವಸ್ತ್ರ ಬಂದಾಗ ಭಾಳ ಹಿಂಸೆಯಾಗಿತ್ತು. ಶರಟಿನ ಮುಂಭಾಗದಲ್ಲಿ ಮುದ್ರೆ ಇತ್ತು. ಅವರ ಶರ್ಟ್'ನ ದಿಟ್ಟಿಸಿ ನೋಡಿ, ಓದಿ ನಂತರ ಸಹಾಯ ಕೇಳೋಷ್ಟರಲ್ಲಿ ಅವರು ಮುಂದೆ ಸಾಗಿರುತ್ತಾರೆ. ಹೆಣ್ಣು-ಗಂಡು ಮೊದಲಾಗಿ ಎಲ್ಲ ಕೆಲಸಗಾರರೂ ಇದೇ ಸಮವಸ್ತ್ರ ಧರಿಸುತ್ತಾರೆ ನೋಡಿ, ಹಾಗಾಗಿ, ಹಾಗೆ ನೋಡೋದೂ ಮರ್ಯಾದೆ ಮಾತಲ್ಲ.

ಧಾರಾವಾಹಿಗಳೆಂಬ ರಾಯರ ಕುದುರೆ, ರಿಯಾಲಿಟಿ ಶೋ ಎಂಬ ಪೀಡೆಧಾರಾವಾಹಿಗಳೆಂಬ ರಾಯರ ಕುದುರೆ, ರಿಯಾಲಿಟಿ ಶೋ ಎಂಬ ಪೀಡೆ

ಒಮ್ಮೆ ಹೀಗೆ ಆಯ್ತು! ಏನೇನೋ ಅಂದುಕೊಳ್ಳಬೇಡಿ, ಸ್ವಲ್ಪ ಕೇಳಿ. ಒಮ್ಮೆ ನಾನು ಒಂದು ಅಂಗಡಿಗೆ ಹೋಗಿದ್ದೆ. ಆ ಅಂಗಡಿ ಕೆಲಸಗಾರರ ಸಮವಸ್ತ್ರ ಖಾಕಿ ಪ್ಯಾಂಟು - ಕೆಂಪು ಟಿ-ಷರಟು. ಏನನ್ನೋ ಕೇಳಲು ಕೆಲಸಗಾರರೊಬ್ಬರ ಬಳಿ ಹೋಗ್ತಿದ್ದೆ. ಅದೇ ಕ್ಷಣದಲ್ಲಿ ನನ್ನನ್ನೇ ಯಾರೋ ಇಂಥದ್ದು ಎಲ್ಲಿದೆ ಅಂತ ಕೇಳೋದೇ? ನನಗೆ ಗೊತ್ತಿದ್ದರಿಂದ ಜ್ಞಾನ ಪಾಸ್ ಮಾಡಿದೆ. ಇನ್ನೈದು ನಿಮಿಷದಲ್ಲಿ ಮತ್ತಿಬ್ಬರು ನನ್ನನ್ನೇ ಏನೋ ಪ್ರಶ್ನೆ ಕೇಳಲು ನನಗೇನೋ ಅನುಮಾನ ಬಂದು ನನ್ನ ದಿರಿಸು ನೋಡಿಕೊಂಡೆ. ಒಹೋ! ನಾವು ಖಾಕಿ ಪ್ಯಾಂಟ್ - ಕೆಂಪು ಟಿ-ಷರಟು ಧರಿಸಿದ್ದು ಅರಿವಿಗೇ ಬಂದಿರಲಿಲ್ಲ. ಅರಿವಿಲ್ಲದೆ ಅವರ ಸರಿ ಸಮವಸ್ತ್ರ ಧರಿಸಿ ಸುಖಾಸುಮ್ಮನೆ 'may i help you' ಅಂತ ಹೇಳ್ಕೊಂಡಿದ್ದೆ. ನನಗೇನೂ ಬೇಜಾರಿಲ್ಲ ಬಿಡಿ. They also serve who only roam and shop ಅಂದುಕೊಳ್ಳೋಣ.

May I help you

ದಿನನಿತ್ಯದ ಜೀವನದಲ್ಲಿ ಹಲವಾರು ಜನ 'ಸಹಾಯ ಶೂರರು' ಸಿಗುತ್ತಾರೆ. ಕೆಲವರಿಗೆ ಸಹಾಯ ಮಾಡೋ ಆಸೆ, ಆದರೆ ಅವರುಗಳು ಮಾಡೋ ಸಹಾಯದಿಂದಾಗಿ ಇತರರಿಗೆ ಡಬಲ್ ಕೆಲಸವಾಗುವುದೇ ವಿನಃ ಉಪಯೋಗವಂತೂ ಆಗೋಲ್ಲ.

ಬೆಂಗಳೂರಿಗೆ ಹೋಗಿದ್ದಾಗ ಒಮ್ಮೆ, ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋಗೋ ಕಾರ್ಯಕ್ರಮ ಹಾಕಿಕೊಂಡೆ. ತನಗೆ ಒಬ್ಬರು ನಂಬಿಕಸ್ತ ಗೊತ್ತು. ತಾನು ಸಹಾಯ ಮಾಡುತ್ತೇನೆ ಅಂತಂದು ಒಬ್ಬ ಸ್ನೇಹಿತನೊಬ್ಬ ದಂಬಾಲು ಬಿದ್ದ. ಸರಿ ಗಾಡಿ ಬುಕ್ ಮಾಡಿಕೊಡಪ್ಪಾ ಅಂತ ಹೇಳಿದೆ. ಭಾನುವಾರ ಬೆಳಿಗ್ಗೆ ಆರೂವರೆಗೆ ಮನೆ ಮುಂದೆ ಗಾಡಿ ಇರುತ್ತೆ ಅಂದ. ನಾವು ಆರುಘಂಟೆಗೇ ಸಿದ್ದರಾಗಿ ಕೂತಿದ್ವಿ. ಆರೂವರೆ ಆಯ್ತು, ಏಳಾಯ್ತು, ಎಂಟಾಯ್ತು ಗಾಡಿಯೂ ಇಲ್ಲ ಬಾಡಿಯೂ ಇಲ್ಲ.

ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!

ಪ್ರತಿ ಬಾರಿ ಸ್ನೇಹಿತನಿಗೆ ಕರೆ ಮಾಡಿದರೆ ಇನ್ನೈದು ನಿಮಿಷಕ್ಕೆ ಗಾಡಿ ಇಲ್ಲಿಗೆ ಬರುತ್ತೆ, ತಕ್ಷಣ ಹೊರಟು ಬರ್ತೀವಿ ಅಂತಾನೇ ಹೇಳ್ತಿದ್ದ. ಹನ್ನೊಂದೂವರೆಗೆ ಗಾಡಿ ಬಂದು ನಿಂತಾಗ ಡ್ರೈವರ್'ಗೆ ಹೇಳಿದೆ 'ನನ್ನ ಆಸಕ್ತಿ ಸತ್ತಿದೆ. ಇಲ್ಲೀ ತನಕ ಬಂದಿದ್ದೀಯಾ. ಎಷ್ಟು ಕೊಡಬೇಕೋ ಹೇಳಪ್ಪ ಕೊಡ್ತೀನಿ' ಅಂತ. ನಮಗೆ ಸಹಾಯ ಮಾಡಲು ಕೈಲಾಗದೆ ಇದ್ದಲ್ಲಿ ಬಿಲ್ಡ್-ಅಪ್ ಕೊಡೋ ಅವಶ್ಯಕತೆ ಇಲ್ಲ ಅನ್ನೋದಷ್ಟೇ ನನ್ನ ಮಾತು.

May I help you

ಒಂದು ಹಳೆಯ ಜೋಕ್ ಹೀಗಿದೆ. ದಿನಕ್ಕೊಮ್ಮೆ ಒಂದು ಒಳ್ಳೆಯ ಕೆಲಸ ಮಾಡಿ, ಅದನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಂಡು ಮರುದಿನ ಶಾಲೆಯಲ್ಲಿ ತಮಗೆ ಒಪ್ಪಿಸಬೇಕು ಅಂತ ಪಿ.ಟಿ. ಟೀಚರ್ ಒಬ್ಬರು ಹೇಳಿದ್ದರಂತೆ. ಒಂದೇ ತರಗತಿಯಲ್ಲಿದ್ದ ಅಣ್ಣ-ತಮ್ಮ ಇಬ್ಬರ ನೋಟ್ ಹೀಗಿತ್ತು "ನಾನು ನಿನ್ನೆ ಒಬ್ಬ ಅಜ್ಜಿಯನ್ನು ರಸ್ತೆ ದಾಟಿಸಿದೆ" ಅಂತ. ಪಿ.ಟಿ. ಮೇಷ್ಟ್ರು ಸಿಟ್ಟಿನಿಂದ "ಏನ್ರೋ? ಇಬ್ಬರೂ ಒಂದೇ ಕೆಲಸ ಮಾಡಿದ್ರಾ? ಸುಳ್ಳು ಬೊಗಳ್ತಿದ್ದೀರಾ?"

ಅದಕ್ಕೆ ಒಬ್ಬ ಹುಡುಗ ಹೇಳಿದ "ಸುಳ್ಳು ಹೇಳ್ತಿಲ್ಲಾ ಸಾರ್ . . . ಆ ಅಜ್ಜಿಗೆ ರಸ್ತೆ ದಾಟೋದು ಇರಲಿಲ್ಲ. ಆದರೆ ನಾನು ಬಿಡಲಿಲ್ಲ. ಗಟ್ಟಿಯಾಗಿ ಕೈ ಹಿಡಿದು ಬಲವಂತವಾಗಿ ಎಳ್ಕೊಂಡ್ ರಸ್ತೆ ದಾಟಿಸಿದೆ". "ಅಯ್ಯೋ ಪಾಪ . . . ಮತ್ತೆ ವಾಪಸ್ ರಸ್ತೆ ದಾಟಿಸಿದ್ಯೋ ಇಲ್ವೋ ಮುಠ್ಠಾಳ" . . . "ಅದನ್ನೇ ನನ್ನ ತಮ್ಮ ಮಾಡಿದ್ದು ಸಾರ್". ಉತ್ತರ ಕೇಳಿ ಕೆಳಕ್ಕೆ ಬಿದ್ದ ಮೇಷ್ಟ್ರೇ "may i help you"?

ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!

ನಮ್ಮ ನಿಮ್ಮೆಲ್ಲರ ನೆಚ್ಚಿನ ಫೇಸ್ಬುಕ್ ದಿನಂಪ್ರತಿ ನಮ್ಮೆಲ್ಲರ ಸಹಾಯ ಬೇಡೋದು ನಿಮಗೆಲ್ಲಾ ಗೊತ್ತೇ ಇದೆ. ನಿಮ್ಮ ಸ್ನೇಹಿತ / ಸ್ನೇಹಿತೆಯ ಹುಟ್ಟುಹಬ್ಬ ಎಂದಾಗ ಫೇಸ್ಬುಕ್ ಏನು ಮಾಡುತ್ತೆ ಎಂದರೆ ನೋಡ್ರಪ್ಪಾ ಇವತ್ತು ಇಂಥವರ ಹುಟ್ಟಿದ ಹಬ್ಬ "help them have a great day" ಅನ್ನುತ್ತೆ. ಇನ್ನು ಫೇಸ್ಬುಕ್'ಗೆ ಹೊಸದಾಗಿ ಅಡಿಯಿರಿಸಿದವರನ್ನು ನಿಮಗೆ ಕೊಟ್ಟು "help them find friends" ಅನ್ನುತ್ತೆ. ಎಂಥಾ ಜೀವಗಳು ನಮ್ಮದು. ಪರೋಪಕಾರಾರ್ಥಂ ಇದಂ ಶರೀರಂ.

ಸ್ವಂತ ಮಕ್ಕಳಿಗೇ ಏನಾದರೂ ಹೇಳಲು ಹಿಂದುಮುಂದು ನೋಡುವ ಕಾಲ ಇದು. ಅರ್ಥಾತ್ ಎಲ್ಲವೂ ಭಯಂಕರ ಸೂಕ್ಷ್ಮ. ಕತ್ತಿಯ ಅಲುಗಿನ ಮೇಲಿನ ಜೀವನ. ಇದೇ ವಾದ 'help' ವಿಷಯಕ್ಕೂ ಅನ್ವಯವಾಗುತ್ತದೆ. ನಾನು ನಿಮಗೆ help ಮಾಡ್ಲಾ ಎಂದರೆ ಆ ಬದಿಯ ವ್ಯಕ್ತಿ ನಿಶಕ್ತ ಎಂದು ಅರ್ಥಬರುತ್ತದೆ ಎಂಬುದು ಈಗಿನ ವಾದ. ಹಾಗಾಗಿ 'may i help you' ಎಂದು ಕೇಳುವ ಬದಲಿಗೆ "may i assist you" ಅಥವಾ "how may i assist you" ಎನ್ನಬೇಕಂತೆ!

May I help you

help ಎಂದರೆ ಸಹಾಯ, assist ಎಂದರೆ ಸಹಕಾರ. ಅರ್ಥಾತ್ ನೀವೂ ಕೆಲಸ ಮಾಡಿ ನಾನೂ ಕೈಗೂಡಿಸುತ್ತೇನೆ ಎಂದರ್ಥ. ಆಗ ನೀವು ನಿಶಕ್ತ ಅಲ್ಲ ಎಂದರ್ಥ ಬರುತ್ತದೆ. ಅಳಿಯ ಅಲ್ಲ ಮಗಳ ಗಂಡ ಎಂತಾದರೂ ಅದರ ಹಿಂದಿನ ಭಾವ ಮತ್ತು ನಾಜೂಕತೆ ಬೇರೆಯೇ ಆಗುತ್ತದೆ.

ಒಂದು ದೊಡ್ಡ ಸಂಸ್ಥೆಯ ಒಂದು ಡಿಪಾರ್ಟ್ಮೆಂಟ್'ನಲ್ಲಿ ಒಂದು ಕೆಲಸ ಅರ್ಜೆಂಟ್ ಆಗಿ ಮುಗಿಸಬೇಕಿತ್ತು. ಸಾಮಾನ್ಯವಾಗಿ ಒಬ್ಬಾಕೆ ದಿನವೂ ಮಾಡುತ್ತಿದ್ದ ಕೆಲಸವೇ ಆದರೂ, ಆ ದಿನಕ್ಕೆ ಅದರಿಂದಾಗಿ ಮಾಹಿತಿ ಬೇಕಿತ್ತು. ದೊಡ್ಡ ಸಂಸ್ಥೆಗಳಲ್ಲಿ ಇದು ಸರ್ವೇಸಾಮಾನ್ಯ. ಅದೇ ಡಿಪಾರ್ಟ್ಮೆಂಟ್'ನ ಮಿಕ್ಕ ಮೂರು ಜನ, ತಮ್ಮ ಕೆಲಸವನ್ನು ಪಕ್ಕಕ್ಕೆ ಇಟ್ಟು, ಆಕೆಯನ್ನು 'may i help you' ಅಂತಂದು ಆಕೆಯ ಕೆಲಸವನ್ನು ತಾವೂ ತೆಗೆದುಕೊಂಡು ಎದ್ದುಬಿದ್ದು ಮಾಡುತ್ತಿದ್ದರು. ತಮಗೆ ತಿಳಿದಷ್ಟು ಜ್ಞಾನದಲ್ಲಿ ಆಕೆಯ ಕೆಲಸವನ್ನು ಇವರು ಮಾಡುವಾಗ, ಆ ಸುಂದರಿ ತನ್ನ ಭಾಗದ ಕೆಲಸ ಮುಗಿಸಿ, ಇಂದು ಮನೆಗೆ ಬೇಗ ಹೋಗೋದಿದೆ ಎಂದು ಮೂರು ಘಂಟೆಗೆ ಎದ್ದು ನಡೆದಳು. ಆ ಮಿಕ್ಕ ಮೂರು ಎಲ್ಲಾ ಇವಳ ಮನೆ ಕಾಯೋಗ ಅನ್ನುತ್ತಾ ಹಾಗೆ ನೋಡುತ್ತಾ ಕೂತರು. 'may I help' ಅನ್ನೋ ಬದಲು 'may I assist' ಎಂದಿದ್ದರೆ ಚೆನ್ನಿತ್ತು!

ಇದೇ ರೀತಿಯ ಇನ್ನೊಂದು ದಿನನಿತ್ಯದ ಸನ್ನಿವೇಶ. ಅಡುಗೆಮನೆಯಲ್ಲಿ ಅವರ ಹೆಂಡತಿಗೆ help ಮಾಡುವ ಗಂಡಸರ ಬಗ್ಗೆ ನಿಮಗೆ ಗೊತ್ತೇ?

"ಏನ್ ಕಣೇ . . . ಏನಾದ್ರೂ ಹೆಲ್ಪ್ ಮಾಡ್ಲಾ" ಅಂತ ಅಂದನಂತೆ ಗಂಡನೊಬ್ಬ. ಅಚ್ಚರಿಯಿಂದ ಆ ಹೆಂಡತಿ "ಓಹೋ! ಹಾಗಿದ್ರೆ ಆ ಬ್ಯಾಗ್'ನಲ್ಲಿರೋ ಆಲೂಗಡ್ಡೆಗಳನ್ನ ತೊಗೊಂಡು ಅದರಲ್ಲಿ ಅರ್ಧ ಸಿಪ್ಪೆ ತೆಗೆದು ಬೇಯಕ್ಕೆ ಇಡಿ" ಅಂದಳಂತೆ. ಆಲೂಗಡ್ಡೆ ಪಲ್ಯಕ್ಕೆ ಅಣಿಮಾಡುವಲ್ಲಿ ಸಹಾಯಕ್ಕೆ ನಿಂತ ಗಂಡ ಹತ್ತು ಕಿಲೋ ಚೀಲದ ಆಲೂಗಡ್ಡೆ ತೆಗೆದುಕೊಂಡು, ಒಂದೊಂದೂ ಆಲೂಗಡ್ಡೆಯ ಅರ್ಧ ಸಿಪ್ಪೆ ತೆಗೆದು, ಮಿಕ್ಕ ಅರ್ಧ ಸಿಪ್ಪೆಯೊಂದಿಗೆ ಬಿಟ್ಟು ಪಾತ್ರೆಯಲ್ಲಿ ಹಾಕಿ ಕುಕ್ಕರನ್ನು ಕೂಗಿಸಿಯೇಬಿಟ್ಟ. ಮೊದಲಿಗೆ ಪ್ರತೀ ಆಲೂಗಡೆಯದು ಅರ್ಧ ಮಾತ್ರ ತೆಗೆದ ಸಿಪ್ಪೆ, ಕುಕ್ಕರಿನ ಪಾತ್ರೆಗೆ ನೀರೇ ಹಾಕಿರಲಿಲ್ಲ, ಮತ್ತು ಪಾತ್ರೆಯಲ್ಲಿ ನೀರೇ ಹಾಕದೆ ಆಲೂಗಡ್ಡೆ ತುಂಬಿ ಕುಕ್ಕರಿನಲ್ಲಿ ಇಟ್ಟಿರೋದು. ಇವೆಲ್ಲದರ ಸಮ್ಮಿಲನದೊಂದಿಗೆ ಅರ್ಧ ಘಂಟೆ ಕುಕ್ಕರನ್ನು ಕೂಗಿಸಿದ. ನಂತರ ನಡೆದ 'ಸಣ್ಣ' ಗಲಾಟೆಯ ಪ್ರಯುಕ್ತ ಅಂದೇ ಕೊನೆ ಆ ಹೆಂಡತಿಗೆ ಈ ಗಂಡ 'ಸಹಾಯ' ಮಾಡಿದ್ದು. ಈ ನಡುವೆ ಆತ 'assist' ಮಾತ್ರ ಮಾಡೋದು.

ಇದು ಫೇಸ್ಬುಕ್ / ವಾಟ್ಸಾಪ್ ಯುಗ. ಎಲ್ಲೋ ಏನೋ ಅವಘಡವಾದಲ್ಲಿ ಸಹಾಯ ಮಾಡುವ ಮನಸ್ಸು ಮೂಡುತ್ತದೆ. ಯಾವುದೋ ಮಗು ಕಳೆದಿದೆ ಎಂದರೆ ಎಲ್ಲೆಡೆ ಸುದ್ದಿ ಓಡಾಡಿಸುತ್ತೇವೆ. ಯಾರಿಗೋ ರಕ್ತ ಬೇಕೆಂದರೆ ತಾವು ಅಲ್ಲಿದ್ದರೆ ಕೊಡಬಹುದಿತ್ತು ಎನಿಸುತ್ತದೆ. ಆದರೇನು ರೋಡಿನಲ್ಲಿ ಬಿದ್ದು ವಿಲವಿಲ ಒದ್ದಾಡುವವರನ್ನು ವಿಡಿಯೋ ಮಾಡೋ ಜನ ಇದ್ದಾರೆ. ಒಬ್ಬ ಹುಡುಗಿಯನ್ನು ಯಾರೋ ಛೇಡಿಸುವಾಗ ಎದುರಾಡಲು ನಾಲಿಗೆ ಎತ್ತದಂಥಾ ಪರಿಸ್ಥಿತಿ ಉಂಟಾಗುತ್ತಿದೆ. ಅನ್ಯಾಯ ಎಸಗಿದವರು ನಮ್ಮ ಸುತ್ತಲೇ ಇದ್ದರೂ ಏನೂ ಮಾಡಲಾಗದೆ ಒಳಒಳಗೆ ಕುಸಿಯುತ್ತಿದ್ದೇವೆ.

ಅನ್ಯಾಯಕ್ಕೆ, ದಬ್ಬಾಳಿಕೆಗೆ ಸಿಲುಕಿರುವವರು ನಮ್ಮೆದುರಿಗೆ ಇದ್ದರೂ "may i help you" ಎಂದು ಮುಂದೆ ಬಾರದೆ 'ಇದು ಅನ್ಯಾಯ' ಅಂತ ಸಾಮಾಜಿಕ ತಾಣದಲ್ಲಿ ಕೂಗಾಡುತ್ತಿದ್ದೇವೆ. ಇಂಥಾ ವಾತಾವರಣ ಸೃಷ್ಟಿಯಾಗಲು ಕಾರಣ ಇಷ್ಟೇ. ನಮ್ಮೊಂದಿಗೆ ಇದ್ದು ಇಂಥಾ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿದವರು ಇಂದು ವೀರ ಮರಣ ಹೊಂದಿದ್ದಾರೆ. ನಮಗೂ ಇದೆ ಗತಿಯಾದರೆ ಎನ್ನುವ ಭೀತಿಗಿಂತ ಇಂಥದ್ದೇ ಗತಿಯಾಗುತ್ತದೆ ಎಂಬುದು ಗ್ಯಾರಂಟಿ ಆಗಿಹೋಗಿದೆ. ದುಷ್ಟ ಶಕ್ತಿ ತಗ್ಗಿ, ಶಿಷ್ಟ ಶಕ್ತಿ ಹೆಚ್ಚುವ ದಿನಗಳು ಬರುವುದೇ? ಪ್ರತಿ ಹೊಸವರ್ಷದಂತೆ ಈ ಹೊಸವರ್ಷಕ್ಕೂ ಹೀಗೆ ಆಶಿಸುವುದರಲ್ಲಿ ತಪ್ಪೇನಿಲ್ಲ ಅಲ್ಲವೇ?

English summary
There is nothing more beautiful than someone who goes out of their way to make life beautiful for others by helping. But, sometimes intension to help others may put you in trouble. It is better to assist someone than help others. A beautiful article by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X