• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕನಸುಗಳನ್ನು ಕಾಣದವರು ಯಾರು? ಬಹುಶ: ಯಾರೂ ಇಲ್ಲ ಎಂದೇ ನನ್ನ ಅನಿಸಿಕೆ. ಕನಸನ್ನು ಕಾಣಲು ನಿದ್ರಿಸಲೇ ಬೇಕಿಲ್ಲ. ಕೂತಲ್ಲಿ ನಿಂತಲ್ಲಿ ಹಗಲುಗನಸನ್ನೂ ಕಾಣಬಹುದು. ಕನಸು ಕಾಣಲು ದುಡ್ದು ಕಾಸು ಕೊಡಬೇಕಿಲ್ಲ, ಎಂಥದ್ದೇ ಕನಸು ಕಾಣಲು ಯಾರ ಅನುಮತಿ ಪಡೆಯಬೇಕಿಲ್ಲ. ಈ ಕನಸುಗಳ ಸೊಬಗೇ ಹಾಗೆ, ಕನ್ನಡಿಯೊಳಗಿನ ಗಂಟು. ಕಾಣಲು ಸೊಗಸು ಆದರೆ ಕೈಗೆ ಎಟುಕುವುದಿಲ್ಲ.

ಬಡವಬಲ್ಲಿದ ಎಂಬ ಭೇದವಿಲ್ಲದೆ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ದೇಶ ಭಾಷೆಗಳ ತಾಪತ್ರಯವಿಲ್ಲದೆ ಎಲ್ಲರಿಗೂ ಇರುವ ದೈವ ಕೊಟ್ಟ ವರ ಈ ಕನಸು. ಹಗಲು ಕನಸಿನಲ್ಲಿ ನಾವು ಹಾಕಿಕೊಂಡಿದ್ದೇ limit... ಅರ್ಥಾತ್ sky is my limit ಎನ್ನುವುದಾದರೆ ನಮಗೆ ಬೇಕಾದ್ದು ಕನಸು ಕಾಣಲು ಯಾರದ್ದೇ ಅಪ್ಪಣೆ ಬೇಕಿಲ್ಲ ಅಂತ.

ನಮ್ಮ ನಿಮ್ಮೊಳಗೊಬ್ಬ ಇದ್ದೇ ಇದ್ದಾನೆ 'ಲೇಟ್ ಲತೀಫ್'!

ಆದರೆ ಈ ಇರುಳು ಕನಸು ನಮ್ಮ ಹತೋಟಿಯಲ್ಲಿ ಇರೋದಿಲ್ಲ. ನಿದ್ದೆಯ ವಿವಿಧ ಹಂತಗಳಲ್ಲಿ rapid eye movement (REM) ಎಂಬ ಹಂತದಲ್ಲಿ ಕನಸುಗಳು ಮೂಡುತ್ತವೆ. ನಿದ್ದೆಯ ಎಂಟು ಘಂಟೆಯ ಅವಧಿಯಲ್ಲಿ ಈ REM ಅವಧಿ ಎರಡು ಘಂಟೆಗಳು. ಈ ಅವಧಿಯಲ್ಲಿ 'ಅಂತರಂಗದಲ್ಲಿ ಅಡಗಿರುವ ಆಸೆಗಳು, ಆಶಯಗಳು, ಈಡೇರದ ಬಯಕೆಗಳು, ಕೆಟ್ಟ ಅನುಭವಗಳು, ಮುರುಟಿಕೊಂಡ ಭಾವನೆಗಳು, ಮುದಗೊಂಡ ಭಾವನೆಗಳು ಎಂಬೆಲ್ಲದರ ಚಿತ್ರ ಮತ್ತು ಚಿತ್ರಣಗಳು' ಮನಸ್ಸಿನಲ್ಲಿ ಸಿನಿಮಾದಂತೆ ಮೂಡಿ ಬರುತ್ತವೆ. ಇದನ್ನೇ ಕನಸು ಅನ್ನೋದು. ಇನ್ನು ನಿದ್ರೆ ಬಾರದವರಿಗೆ, ಅಥವಾ ಎರಡೇ ಘಂಟೆ ಮಲಗುವವರಿಗೆ ಕನಸು ಬೀಳುವುದೇ ಇಲ್ಲವೇ? ಬಲ್ಲವರೇ ಹೇಳಬೇಕು!

ಕೆಲವೊಂದು ಕನಸು ಹತ್ತಾರು ಕ್ಷಣಗಳು ಇರಬಹುದು. ಮತ್ತೆ ಕೆಲವು ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೂ ಇರಬಹುದು. ಅತೀ ಕಡಿಮೆ ಅವಧಿಯ ಕನಸುಗಳು ಮನಸ್ಸಿನಲ್ಲಿ ಛಾಪು ಮೂಡಿಸಿಕೊಳ್ಳುವ ಮುಂಚೆಯೇ ಕರಗಿ ಹೋಗಿರುತ್ತವೆ. ಇನ್ನು ಕೆಲವು ದೀರ್ಘ ಅವಧಿಯವು ನಿದ್ದೆಯಿಂದ ಎದ್ದ ಮೇಲೂ ಕಾಡುತ್ತವೆ.

ಮಧುರ ಕನಸುಗಳು ಎಂದ ಕೂಡಲೇ ಮನಸ್ಸಿಗೆ ಬರೋದೇ, ಕನಸಿನಲ್ಲಿ ರಾಜಕುಮಾರನೊಬ್ಬ ಕುದುರೆಯ ಮೇಲೆ ಬಂದು ಸುಂದರಿಯಾದ ತನ್ನನ್ನು ಹಾರಿಸಿಕೊಂಡು ಹೋಗುತ್ತಾನೆ ಎಂಬ ಷೋಡಶಿಯರ ಕನಸು. ಇನ್ನು ಯುವಕರದ್ದು ಮತ್ತೊಂದು ವೇದನೆ. ಅಪೂರ್ವ ಸುರಸುಂದರಿಯನ್ನು ಕನಸಿನಲ್ಲಿ ಕಾಣುತ್ತಾರೆ. ತಾವು ಕನಸಿನಲ್ಲಿ ಕಂಡ ಸುಂದರಿಯನ್ನೇ ಹುಡುಕುತ್ತಾ ಸಾಗಿ ಕೊನೆಗೆ ಕೈಗೆ ಸಿಗಲಾರಳು ಎಂದು ಅರಿವಾಗುವ ಹೊತ್ತಿಗೆ ಮುದುಕರಾಗಿರಬಹುದು.

ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ!

ಕೆಲವರು ಕನಸಿನಲ್ಲೇ ಅರಮನೆ ಕಟ್ಟಿ ಬಿಡುತ್ತಾರೆ. ಇದಕ್ಕೆ 'ತಿರುಕನ ಕನಸು'ಗಿಂತಾ ಉತ್ತಮ ಉದಾಹರಣೆ ಇಲ್ಲ ಎನಿಸುತ್ತದೆ. ಪ್ರತೀ ಬಾರಿ ಲಾಟರಿಯನ್ನು ಕೊಳ್ಳುವ ಜನರ ಕನಸುಗಳನ್ನು ಗುಡ್ಡೆ ಹಾಕಿದರೆ ಹಿಮಾಲಯಕ್ಕಿಂತಲೂ ಎತ್ತರವಿರುತ್ತದೇನೋ. ಆದರೆ ಲಾಟರಿ ಫಲಿತಾಂಶ ಬಂದು ತಮಗೇನೂ ದಕ್ಕಲಿಲ್ಲ ಎಂದ ಕೂಡಲೇ ನಿರಾಸೆ ಎಂಬುದು ಈ ಕನಸನ್ನು ನುಂಗಿ ನೀರು ಕುಡಿಯುತ್ತದೆ. ಇದು ಮುಂದಿನ ಲಾಟರಿ ಟಿಕೆಟ್ ತೆಗೆದುಕೊಳ್ಳುವ ತನಕ ಮಾತ್ರ.

ಒಬ್ಬ ಮನುಷ್ಯ ಕನಸು ಮೂಡುವ ಅವಧಿಯಲ್ಲಿ ಹಲವೊಮ್ಮೆ ಮೂರರಿಂದ ಐದರವರೆಗೆ ಕನಸು ಕಾಣಬಲ್ಲ. ಕೆಲವೊಮ್ಮೆ ಏಳರಿಂದ ಎಂಟು ಕನಸುಗಳು. ಇರುವುದೇ ಕೊಂಚ ಅವಧಿ. ಹೆಚ್ಚು ಕನಸು ಕಂಡಷ್ಟೂ ನೆನಪಿನಲ್ಲಿ ಉಳಿಯೋದು ಕಡಿಮೆ.

ಕನಸಿನಲ್ಲಿ ನಡೆಯುವ ಸನ್ನಿವೇಶಗಳಿಗೆ ಮಲಗಿರುವ ನಾವು ಹೇಗೆ ಸ್ಪಂದಿಸುತ್ತೇವೆ? ಕನಸಿನಲ್ಲಿ ದುಷ್ಟರ ವಿರುದ್ಧ ಹೋರಾಡುವಾಗ ವೀರಾವೇಶದಿಂದ ಕೂಗಾಡುವಂತೆ ಆಗುತ್ತದೆ ಆದರೆ ಸ್ವರವೇ ಏಳೋದಿಲ್ಲ. ಹಾಗೊಮ್ಮೆ ಸ್ವರ ಎದ್ದೇ ಬಿಟ್ಟಿತು ಎಂದಾಗ ಯಾರೋ ಎಬ್ಬಿಸುತ್ತಾರೆ. "ಏನಾದ್ರೂ ಕೆಟ್ಟ ಕನಸು ಬಿಟ್ಟಾ?' ಅಂತ ಕೇಳಲು. ಎಲ್ಲಿಯ ವೀರಾವೇಶ? ಎಲ್ಲಿಯ ಕೆಟ್ಟ ಸನಿವೇಶ? ಛೇ! ಮತ್ತೆ ಕೆಲವೊಮ್ಮೆ ಕನಸಿನೊಳಗೆ ಬಂದಿರುವ ವ್ಯಕ್ತಿಯನ್ನು ಕಣ್ಣೆತ್ತಿ ನೋಡಲೇ ಆಗದೆ ಒದ್ದಾಡುವಂತೆ ಆಗುತ್ತೆ. ಹಾಗೂ ಹೀಗೂ ಬಲವಂತವಾಗಿ ಕಣ್ತೆರೆದು ನೋಡಿಯೇ ಬಿಡಬೇಕು ಎಂಬ ಹಠ ತೊಟ್ಟು ಕಣ್ತೆರೆದರೇ, ಕನಸು ಹೋಗಿ ನಿಜವಾಗಿ ಕಣ್ತೆರೆದಿರುತ್ತೇವೆ. ಇವೆಲ್ಲವೂ ಸರ್ವೇಸಾಮಾನ್ಯ. ನಿಮ್ಮ ಅನುಭವಕ್ಕೂ ಖಂಡಿತ ಬಂದಿರುತ್ತೆ.

ಕೆಲವೊಮ್ಮೆ ಕನಸುಗಳು ಕನಸುಗಾರನ ಮೇಲೆ ಕೊಂಚ ವಿಶಿಷ್ಟವಾಗಿಯೇ ಪರಿಣಾಮ ಬೀರಬಲ್ಲದಾಗಿರುತ್ತದೆ. ಅರ್ಥಾತ್ ಭೀತಗೊಳಿಸಬಹುದು ಅಥವಾ ಆತಂಕಕ್ಕೆ ಒಳಗಾಗುವಂತೆ ಮಾಡಬಹುದು. ಇಂಥಾ ಕನಸಿನ ಅರ್ಥವೇನು ಎಂದು ತಿಳಿಯಲು ಯಾವುದಾದರೂ ಜ್ಯೋತಿಷಿಗಳ ಬಳಿ ಹೋಗಿ ಪರಿಹಾರ ಕೇಳೋದು ಬಹಳ ಹಿಂದಿನಿಂದ ಬಂದಿರುವ ರೂಢಿ. ಇದು ತಪ್ಪೋ ಸರಿಯೋ ನನಗೆ ಗೊತ್ತಿಲ್ಲ. ಇವೆಲ್ಲವೂ ಅವರವರ ನಂಬಿಕೆಯ ಮೇಲೆ ಅವಲಂಬಿತ. ಕನಸಿನಲ್ಲಿ ದೈವ / ದೇವಪುರುಷರು / ನಮ್ಮನ್ನಗಲಿದವರು ಕಾಣೋದು ಮತ್ತು ಆ ವಿಷಯವನ್ನು ನಾವು ಸ್ವೀಕರಿಸುವ ಬಗ್ಗೆಯೂ ಕೂಡ ಅವರವರ ನಂಬಿಕೆಯ ಮೇಲೆ ಅವಲಂಬಿತ.

ನಿದ್ರಿಸುವ ವಿಚಾರವನ್ನು ನಿದ್ರೆಗೆ ಭಂಗವಾದಂತೆ ಅರಿಯೋಣ ಬನ್ನಿ

ಕೆಲವೊಮ್ಮೆ ನಮ್ಮಲ್ಲಿ ಮೂಡಿಬರುವ ಕನಸು ಸಣ್ಣ ಪ್ರಮಾಣದ್ದೇ ಆದರೂ ನಮ್ಮ ಮನಸ್ಸು ಅದನ್ನು process ಮಾಡುವಾಗ ತನ್ನದೇ ಒಂದಷ್ಟು ಮಸಾಲ ಹಾಕಿ ನಮಗೆ ಕೊಡುತ್ತೆ. ಇಂಥಾ ಕನಸುಗಳನ್ನು ನಾವು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವಾಗ, ನಾವು ಕಂಡ 'ವಿಶೇಷ' ಕನಸು ಅವರಲ್ಲಿ ಯಾವುದೇ ಆಸಕ್ತಿ ಹುಟ್ಟಿಸದೇ ಹೋಗಬಹುದು. ಅಜ್ಜಿಯ ಮನೆಗೆ ಹೋದಂತೆ, ಚಿಕ್ಕಂದಿನ ಕನಸು ಕಾಣುತ್ತಿರುತ್ತೀರಿ. ಅಲ್ಲಿ ನೋಡಿದರೆ ನಿಮಗಿಂತಾ ಮುಂಚೆಯೇ ನಿಮ್ಮ ಪತಿಯೋ / ಪತ್ನಿಯೋ ಬಂದು ಕೂತಿರುತ್ತಾರೆ! ಎಂಥಾ ಅಸಂಬದ್ದ ಅನಿಸುತ್ತದೆ ಅಲ್ಲವೇ? ಎಡಿಟ್ ಮಾಡದೇ ಸುತ್ತಿದ ಸಿನಿಮಾ ರೀಲಿನಂತೆ ಕಾಣಬಹುದು.

ಕೆಲವರು ಕನಸುಗಳಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಕನಸುಗಳು ಮುಂದಾಗುವುದನ್ನು ಈಗಲೇ ಸೂಚ್ಯವಾಗಿ ನಮಗೆ ಎಚ್ಚರಿಸಲು ಬಂದಿದೆ ಎಂದೇ ಅವರ ನಂಬಿಕೆ. ಹಲವೊಮ್ಮೆ 'ಕಾಕತಾಳೀಯವೋ' ಎಂಬಂತೆ ಕನಸಿನಲ್ಲಿ ಕಂಡಿದ್ದು ನಿಜವೇ ಆಗಿಬಿಡುತ್ತದೆ. ಕನಸಲ್ಲಿ ಕಾಣೋದು ನಿಜವೇ, ಅಲ್ಲವೇ ಎಂಬುದಕ್ಕೆ ಎಲ್ಲೂ ನಿರ್ದಿಷ್ಟ ಉತ್ತರವಿಲ್ಲ.

ಕೆಲವರು ಹಲವೊಮ್ಮೆ ಯಾವುದೋ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ದಿಶೆಯಲ್ಲೇ ಕೆಲಸ ಮಾಡುವುದಲ್ಲದೇ ಕನಸು ಕಾಣುವುದೂ ಕೂಡ ಅದರ ಬಗ್ಗೆಯೇ ಎನ್ನುವಷ್ಟು ಮುಳುಗಿರುತ್ತಾರೆ. ಇಂಥಾ ಮಂದಿಗೆ ಹಾರೈಸುವಾಗಲೇ ಬಹುಶ: "may your dreams come true" ಅಥವಾ "ನಿಮ್ಮ ಕನಸು ಈಡೇರಲಿ" ಎಂಬುದು ಹುಟ್ಟಿಕೊಂಡಿರಬೇಕು.

ಕನಸುಗಳ ಬಗ್ಗೆ ಇರುವ ವೈಜ್ಞಾನಿಕ ಅಧ್ಯಯನಕ್ಕೆ Oneirology ಎನ್ನುತ್ತಾರೆ. ಯಾರೋ ನಮ್ಮನ್ನು ಅಟ್ಟಿಸಿಕೊಂಡು ಬಂದಂತೆ, ಮತ್ತು ನಾವು ಅದರಿಂದ ತಪ್ಪಿಸಿಕೊಂಡು ಓಡಿದಂತೆ ಬೀಳುವ ಕನಸಿನ ಬಗ್ಗೆ ಹೇಳುವಾಗ 'ಯಾವುದೋ ಒಂದು ಜವಾಬ್ದಾರಿಯಿಂದ ತಪ್ಪಿಸಿಕೊಂಡು ಹೋಗುವುದಕ್ಕೆ' ಹೋಲಿಸುತ್ತಾರೆ. ಅದು ಏನು ಎಂದು ತಿಳಿಯುವ ಯತ್ನ ಮಾಡಬೇಕು.

ಕೆಲವರಿಗೆ ಕೆಲವೊಂದು ಕನಸುಗಳು ಪದೇ ಪದೇ ಮೂಡಿಬಂದು ಕಾಡುತ್ತವೆ. ಒಂದು ಉದಾಹರಣೆ ಕೊಡುತ್ತೇನೆ. ಕನಸು ಏನಪ್ಪಾ ಅಂದ್ರೆ, ಮರುದಿನ ಯಾವುದೋ subject'ನ ಪರೀಕ್ಷೆ. ಬುದ್ದಿ ಹೇಗಿದೆ ಎಂದರೆ ಸಣ್ಣ ಚುಕ್ಕೆಯೂ ಇರದ ಬಿಳೀ ಹಾಳೆಯಂತೆ ಖಾಲಿ ಇದೆ! ಆ ಸಬ್ಜೆಕ್ಟ್'ನ ಪಠ್ಯಪುಸ್ತಕ ತೆರೆದರೆ ಘಮ್ಮನೆ ಸುವಾಸನೆ. ಒಂದು ದಿನಕ್ಕೂ ತೆರೆಯದ ಪುಸ್ತಕದ ಸುವಾಸನೆಯು ಗಂಧದ ಕಡ್ಡಿಗಿಂತಲೂ ಸೊಗಸು. ಹಾಳೆಗಳನ್ನು ತಿರುವುತ್ತಿದ್ದರೆ ಇದೇನು ನನ್ನ ತರಗತಿಯ ಪಠ್ಯವೋ ಅಥವಾ ಪಿ.ಎಚ್.ಡಿ ಸಂಬಂಧಿತ ಪಠ್ಯವೋ ಎನಿಸುವಷ್ಟು ಅಪರಿಚಿತ. ಯಾವುದೋ ಒಂದು ಅರಿಯದೇ ಬಿಟ್ಟ ವಿಷಯ ಸಾಮಾನ್ಯವಾಗಿ ಹೀಗೆ ಕಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ.

ವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನ

ಕನಸುಗಳನ್ನು ಕಾಣೋದು ತಪ್ಪೇ ಎಂಬ ಪ್ರಶ್ನೆ ಹಲವಾರು ಬಾರಿ ಕೇಳಿಯೇ ಇದ್ದೇವೆ? 'ಕನಸು' ಎಂಬುದನ್ನು ನೇರವಾಗಿ ಅರ್ಥೈಸಿಕೊಂಡರೆ, ಕನಸನ್ನು ಕಾಣಬೇಕೋ ಬೇಡವೋ ಎಂಬುದೇ ನಮ್ಮ ಕೈಯಲ್ಲಿ ಇಲ್ಲದಿರುವಾಗ ಅದು ತಪ್ಪೇ ಒಪ್ಪೇ ಎಂದು ಆಲೋಚಿಸುವುದೇ ಮೊದಲ ತಪ್ಪು! ಜೀವನದಲ್ಲಿ ಏನನ್ನೂ ಸಾಧಿಸುವ ಕನಸನ್ನು ಕಾಣುವುದು ತಪ್ಪೇ? ಎಂದು ಯೋಚಿಸಿದರೆ ಅದು ಖಂಡಿತ ತಪ್ಪಲ್ಲ. 'ಕನಸುಗಳನ್ನು ಕಾಣೋದು' ಎಂದರೆ ಜೀವನವನ್ನು ಆಶಾದಾಯಕವಾಗಿ ಕಾಣೋದು ಅಂತ ಅರ್ಥ. ಮುಂದಿನ ಜೀವನದ ಬಗ್ಗೆ ಕನಸೇ ಇಲ್ಲದವನು ಬೈರಾಗಿ.

ರಾಮನನ್ನು ವರಿಸಿದಾಗ ಸೀತೆ ಕಂಡಿದ್ದ ಕನಸು ಏನೋ? ಕೃಷ್ಣನ ಬಗ್ಗೆ ರಾಧೆಗಿದ್ದ ಕನಸುಗಳು ಏನೋ? ಮಕ್ಕಳ ಬಗ್ಗೆ ಕನಸು ಕಟ್ಟಿಕೊಂಡು ಕೊನೆಗೆ ವೃದ್ದಾಶ್ರಮ ಸೇರುವವರ ಕನಸಿನ ಗತಿ?

ಕನಸು ಕಾಣೋದು ಜೀವನ. ಆದರೆ ಬರೀ ಕನಸನ್ನೇ ಕಾಣೋದು ಜೀವನವಲ್ಲ. ಕಾಣುವ ಕನಸನ್ನು ನನಸು ಮಾಡಿಕೊಳ್ಳಲು ಪರಿಶ್ರಮ ಬೇಕು. ಕನಸಿನಾಗೆ ಕಂಡಿದ್ದೆಲ್ಲಾ ಕನಸೇ ಅಲ್ಲ, ಹಾಗಂತ ಕನಸಿನಲ್ಲಿ ಕಂಡದ್ದನ್ನೆಲ್ಲಾ ನನಸು ಮಾಡಿಕೊಳ್ಳಲು ಸಾಧ್ಯವೂ ಇಲ್ಲ. ಎಲ್ಲಕ್ಕೂ ಮಿತಿ ಇದೆ ಅದನ್ನು ನಾವು ಅರ್ಥೈಸಿಕೊಳ್ಳಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A dream doesn't become reality through magic; it takes sweat, determination and hard work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more